Friday, 20th September 2024

ಹೆಣ ಸುಡುವುದರ‍ಲ್ಲೂ ಮೀಸಲು ಜಾರಿಗೊಳ್ಳಬಾರದೇಕೆ ?

ಸುಪ್ತ ಸಾಗರ

rkbhadti@gmail.com

ಮೊನ್ನೆ ಸುವರ್ಣ ನ್ಯೂಸ್‌ನಲ್ಲಿ ಗೆಳೆಯ ಅಜಿತ್ ಹನುಮಕ್ಕನವರ್ ನಡೆಸಿ ಕೊಡುವ ಸಂವಾದ ಕಾರ್ಯಕ್ರಮದಲ್ಲಿ ಚೇತನ್ ಅಹಿಂಸ ಎಂಬ ಅಬ್ಬೇಪಾರಿಯೊಂದಿಗಿನ ಚರ್ಚೆಯಲ್ಲಿ ಭಾಗವಹಿಸಿದ್ದವರೊಬ್ಬರು ಭಾರತಕ್ಕೆ ಎರಡೂ ವಿಶ್ವಕಪ್ ಗಳಿಸಿಕೊಟ್ಟ ಕ್ರಿಕೆಟ್ ನಾಯಕರಿಬ್ಬರೂ ದಲಿತರು ಎಂಬ ನುಡಿಮುತ್ತನ್ನು ಉದುರಿಸಿದ್ದರು.

ಅಬ್ಬಾ! ಹೀಗೂ ಯೋಚಿಸಬಹುದೇ ಎನಿಸಿತು. ಈವರೆಗೆ ಕಲ್ಪನೆಯನ್ನೂ ಮಾಡಿಕೊಳ್ಳದ ಸಂಗತಿಯೊಂದರ ಬಗ್ಗೆ ಅವರು ನಾನು ನನ್ನಂಥವರಲ್ಲಿ, ‘ಜ್ಞಾನೋದಯ’ ಉಂಟು ಮಾಡಿದ್ದರು. ನಿಜಕ್ಕೂ ಗೊತ್ತಿರಲಿಲ್ಲ, ಕಪಿಲ್‌ದೇವ್ ಅವರಾಗಲೀ, ಮಹೇಂದ್ರ ಸಿಂಗ್ ದೋನಿಯಾಗಲೀ ಹಾಗೊಂದು ಜಾತಿಯನ್ನು ಪ್ರತಿನಿಧಿಸಿದ್ದಾರೆಂಬುದು ಸ್ವತಃ ಅವರ ಕಲ್ಪನೆಯಲ್ಲೂ ಇರಲಿಕ್ಕಿಲ್ಲ. ಅವರು ಪ್ರತಿನಿಧಿಸಿದ್ದು ಕ್ರಿಕೆಟ್ ಅನ್ನು, ಭಾರತೀಯ ತಂಡವನ್ನು.

ನಾವುಗಳು ಅವರಿಬ್ಬರಲ್ಲಿ ಕಂಡದ್ದು ‘ಶುದ್ಧ ಆಟ’ವನ್ನು. ಆದರೆ ಕ್ರಿಕೆಟ್‌ನ ಬಗ್ಗೆ ಹೀಗೂ ಎಲ್ಲ ಯೋಚಿಸಿ ‘ಆಟ’ಕಟ್ಟಬಹುದು ಎಂಬುದು ಗೊತ್ತಾಗಿದ್ದೇ ಚೇತನ್ ಅಹಿಂಸನಿಂದ. ಆರು ವರ್ಷದ ಹಿಂದೆ, ೨೦೨೬ರಲ್ಲಿ ಒಂದು ಕೂಗೆದ್ದಿತ್ತು. ಖಾಸಗಿ ರಂಗದಲ್ಲೂ ಮೀಸಲಾತಿ ಜಾರಿಗೊಳಿಸಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಆಗಲೂ ಬರೆದಿದ್ದೆ-ಈ ಮೀಸಲೆಂಬ ಕಳ್ಳಾಟದ ಬಗ್ಗೆ. ಈಗ ಮತ್ತೆ ಬರೆಯಲೇಬೇಕಾಗಿದೆ. ಬಹಳಷ್ಟು ಬಾರಿ ಅನ್ನಿಸಿದ್ದಿದೆ; ಇಂಥವರ ಬಗ್ಗೆಯಲ್ಲ ಬರೆದು ಸಮಯ, ಶ್ರಮ ವ್ಯರ್ಥ ಮಾಡಿಕೊಳ್ಳ
ಬಾರದು ಎಂದು.

ಆದರೆ ಪ್ರಚಾರಕ್ಕಾಗಿಯೇ ಈ ಖಾಲಿಬರಡುಗಳು ಇಂಥ ಖಯಾಲಿಗೆ ಬಿದ್ದಿರುತ್ತವೆ ಎಂದು ಗೊತ್ತಿದ್ದೂ ಬರೆಯಬಾರದು ಎಂದು ಕೊಂಡಿದ್ದು ನಿಜ. ಆದರೆ ಅಂಥವರ ಮಾತನ್ನೇ ಸತ್ಯ ಎಂದು ನಂಬುವವರೂ ಇರುತ್ತಾರೆ ಎಂಬುದು ಆ ಚರ್ಚೆಯಿಂದ ಗೊತ್ತಾದ ಮೇಲೆ ಸತ್ಯ ಏನೆಂಬುದನ್ನು ಚರ್ಚಿಸಲೇಬೇಕೆನಿಸಿತು.

***
ಇತಿಹಾಸದಲ್ಲಿ ಮೀಸಲು ಚರ್ಚೆ ನಡೆದದ್ದು ಇದೇ ಮೊದಲಲ್ಲ. ಅವತ್ತು ರಾಜಮನೆತನದ ಕುರುವಂಶದ ಕುಡಿಗಳಿಗೆ ಆಚಾರ್ಯ ದ್ರೋಣರು ವಿದ್ಯೆಯನ್ನು ಧಾರೆಯೆರೆಯುತ್ತಿದ್ದರು. ಅಲ್ಲಿಗೆ ಆಗಮಿಸಿದ ಬೇಟೆಗಾರ ಏಕಲವ್ಯ ತನಗೂ ವಿದ್ಯೆಯನ್ನ ಧಾರೆಯೆರೆಯ ಬೇಕೆಂಬ ಬೇಡಿಕೆಯನ್ನ  ಮುಂದಿಟ್ಟಿದ್ದ. ಅರ್ಹತೆ ಆಕಾಂಕ್ಷೆ ಎಲ್ಲವೂ ಅವನಲ್ಲಿತ್ತು. ಆಗಿನ ವ್ಯವಸ್ಥೆಯಡಿಯಲ್ಲಿ ರಾಜಕುಮಾರರ ವಿನಹ ಬೇರೆಯವರಿಗೆ ಆಚಾರ್ಯ ದ್ರೋಣರು ಬಿಲ್ವಿದ್ಯೆಯನ್ನು ಬೋಧಿಸುವಂತಿರಲಿಲ್ಲ.

ಸಹಜವಾದ ನಿರಾಕರಣೆ ಏಕಲವ್ಯನನ್ನು ಧೃತಿಗೆಡಿಸಿದ್ದು ಸತ್ಯ. ಕೊನೆಗೆ ಅನಿವಾರ್ಯ ಸನ್ನಿವೇಶದಲ್ಲಿ ದ್ರೋಣರ ಮೃಣ್ವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಛಲಬಿಡದ ಆತ ಸ್ವಯಂ ಗುರುವಾಗಿ ಬಿಲ್ವಿದ್ಯೆ ಕರಗತಗೊಳಿಸಿಕೊಂಡಿದ್ದ. ವ್ಯವಸ್ಥೆ ಆಗ ರಾಜ ಕುಟುಂಬದ ವಿರುದ್ಧ ಭಿನ್ನ ಧ್ವನಿ ಎತ್ತಿತ್ತು. ಗುರುಕುಲದಲ್ಲಿ ಸಾಮಾನ್ಯರಿಗೂ ವಿದ್ಯಾವಕಾಶ ಅಗತ್ಯವೆಂಬ ಪ್ರತಿಪಾದನೆ ವ್ಯಾಪಕ ವಾಗಿತ್ತು. ಏಕಲವ್ಯನಿಗೆ ಆಗುತ್ತಿರುವ, ಆಗಬಹುದಾದ ಅನ್ಯಾಯ ತಡೆಯುವ ಮನಃ ಸ್ಥಿತಿ ಖಂಡಿತ ಮೇಲ್ವರ್ಗದ ಮಂದಿಯಲ್ಲಿ ಉಳಿದಿರಲಿಲ್ಲ.

ರಾಜವಂಶಸ್ಥರನ್ನೂ ಮೀರಿಸಿದ ಬಿಲ್ಲುಗಾರ ಏಕಲವ್ಯನೆಂಬು ದನ್ನ ಒಪ್ಪಿಕೊಳ್ಳಲು ಗುರುಪೀಠವೂ ಸಿದ್ಧವಿರಲಿಲ್ಲ. ಅದರಲ್ಲೂ
ಗುರುವಿನ ಪಟ್ಟಶಿಷ್ಯ ಅರ್ಜುನನಿಗೆ ಸಮಬಲನೆನಿಸುವ ಮತ್ತೊಬ್ಬನನ್ನು ಸ್ವೀಕರಿಸುವ ಔದಾರ್ಯಕ್ಕೆ ಸಮ್ಮತಿ ಇರಲಿಲ್ಲ. ಪರಿಣಾಮ ಗುರುಕಾಣಿಕೆಯಾಗಿ ಏಕಲವ್ಯನ ಹೆಬ್ಬೆರಳು, ಆ ಮೂಲಕ ಬಿಲ್ವಿದ್ಯಾ ನೈಪುಣ್ಯವೇ ಬಲಿಯಾಯಿತು. ಪರಶುರಾಮರ ಆಶ್ರಮದಲ್ಲಿ ಇಂತಹದೇ ಮತ್ತೊಂದು ಪ್ರಕರಣ. ಭೀಮ ಧುರ್ಯೋಧನನಿಗೆ ಸಾಟಿಯಾಗಬಲ್ಲಂತಹ, ಅರ್ಜುನನ ಹೆದೆಗೆ ಎದೆಗೊಟ್ಟು ನಿಲ್ಲಬಲ್ಲಂತಹ ಸೂತಪುತ್ರ ಕರ್ಣ ವಿದ್ಯಾಕಾಂಕ್ಷಿಯಾಗಿ ಬಂದುನಿಂತಿದ್ದ.

ತಾನು ಕೆಳವರ್ಗದವನೆಂಬ ಸತ್ಯವನ್ನು ಪ್ರಕಾಶಿತಗೊಳಿಸಿಕೊಂಡರೆ ಖಂಡಿತಾ ಆಶ್ರಮದಲ್ಲಿ ಚಣಕಾಲವೂ ನಿಲ ಗೊಡುವುದಿಲ್ಲ ಎಂಬುದರ ಸ್ಪಷ್ಟ ಅರಿವು ಕರ್ಣನೊಳಗಿತ್ತು. ಬಂಧುಗಳೆಂಬೊ ಭಾವ ಕರುಳಿಗರಿವಿತ್ತೇ ವಿನಹ ಅರಿವಿಗೆ ದಕ್ಕದ ಸನ್ನಿವೇಶದಲ್ಲಿ, ಸಾಕಿದ ಸಾರಥಿಯ ಪತ್ನಿ ರಾಧೆಯೇ ಹೆತ್ತಮ್ಮನೆಂದುಕೊಂಡು ತನ್ನನ್ನು ತಾನು ಸೂತವಂಶಕ್ಕೆ ‘ಮೀಸಲು’ಗೊಳಿಸಿಕೊಂಡಿದ್ದ ರಾಧೇಯ ಜಾತಿಯನ್ನ ಮುಚ್ಚಿಟ್ಟು ಬ್ರಾಹ್ಮಣರ ಸೋಗಿನಲ್ಲೇ ಪರಶುರಾಮರಲ್ಲಿ ವಿದ್ಯೆಗೆ ನಿಂತಿದ್ದ.

ಅದೊಂದು ಹಗಲು, ಗುರುವಿಗೆ ಜಾಣ ನಿದ್ರೆ. ಪಟ್ಟಶಿಷ್ಯ ಕರ್ಣನ ತೊಡೆಯ ಮೇಲೆ ಮೈ ಮರವಿನಲ್ಲಿ ಮಲಗಿದ್ದರು. ಅದೆಲ್ಲಿತ್ತೋ ವಿಘ್ನಸಂತೋಷಿ ದುಂಬಿ. ಶಿಷ್ಯನ ತೊಡೆಯನ್ನೇ ಕೊರೆಯಲಾರಂಭಿಸಿತು. ಬಿಸಿರಕ್ತದ ಯುವಕನ ನೆತ್ತರು ಕಾವಿನೊಂದಿಗೆ ಗುರುವಿನ ತಲೆಯ ತೋಯಿಸಹತ್ತಿತ್ತು. ವಿಧಿ ಅಲ್ಲೂ ಆಡಿದ್ದು ಆಟವನ್ನೇ. ಎಚ್ಚರಾದ ಪರಶುರಾಮರಿಗೆ ಸನ್ನಿವೇಶ ಕಂಡು ಮೆಚ್ಚುಗೆಯ ಬದಲು ಕೋಪ ಉಕ್ಕಿತ್ತು.

ಕ್ಷತ್ರಿಯರ ವಿನಹ ಬ್ರಾಹ್ಮಣ ವಟುವಿನೊಬ್ಬನಿಂದ ಇಂಥಾ ಸೈರಣೆ ಸಾಧ್ಯವೇ ಇಲ್ಲ ಎಂಬ ಖಚಿತ ನಿರ್ಧಾರಕ್ಕೆ ಬಂದು ಶಾಪ ವಿತ್ತಿದ್ದರು. ಪರಿಣಾಮ ಆಪತ್ಕಾಲದಲ್ಲಿ ಕರ್ಣನಿಗೆ ಕಲಿತ ವಿದ್ಯೆ ನೆನಪಿಗೆ ಬಾರದೇ ಹೋಗಿತ್ತು. ಮಗದೊಮ್ಮೆ ಮೀಸಲಿನ ಚರ್ಚೆ ಬಂದದ್ದು ಕುರುವಂಶಜ ರಾಜಕುಮಾರರ ವಿದ್ಯಾ ಪ್ರದರ್ಶನದ ವೇದಿಕೆಯಲ್ಲಿ. ಭೀಮ ಪಾರ್ಥರಾದಿಯಾಗಿ ಎಲ್ಲರ ಪ್ರತಿಭೆಗೆ ಮಹಾಸಭೆ ತಲೆದೂಗುತ್ತಿದ್ದಾಗಲೇ ಕರ್ಣನ ಪ್ರವೇಶ.

ಕುರುಕುವರರನ್ನೂ ಮೀರಿಸಬಲ್ಲೆನೆಂಬ ಕರ್ಣನ ಆತ್ಮವಿಶ್ವಾಸಕ್ಕೆ ಆಘಾತ ನೀಡಿದ್ದು ಮತ್ತದೇ ಜಾತಿ ಅಂತಸ್ತುಗಳ ಪ್ರಶ್ನೆ. ರಾಜ ವಂಶಸ್ಥರಲ್ಲದವರಿಗೆ ವೇದಿಕೆ ನಿರಾಕರಿಸಲ್ಪಟ್ಟಾಗ ‘ರಾಜಕಾರಣ ನಡೆ’ಯನ್ನು ಮೆರೆದಿದ್ದ ಸುಯೋಧನ. ದಾಯಾದಿಗಳ ಅವಮಾನಿಸುತ್ತಿ ದ್ದವನಿಗೆ ಅಸವಾಗಿ ಸಿಕ್ಕವನು ಕರ್ಣ. ಅಲ್ಲೇ ಅಂಗದೇಶದ ಪಟ್ಟ ನೀಡಿ ಪರೋಕ್ಷವಾಗಿ ಮೀಸಲನ್ನ  ಜಾರಿ ಗೊಳಿಸಿದ್ದ.
***

ಆಧುನಿಕ ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ, ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದ ಕಾಲದಲ್ಲೂ ಮೀಸಲು ಚರ್ಚೆ ದೇಶಾದ್ಯಂತ ಆಂದೋಲನದ ಸ್ವರೂಪ ಪಡೆದಿತ್ತು. ಇದಕ್ಕೂ ಮುನ್ನ 1979ರಲ್ಲಿ ಪ್ರಧಾನಿ ಮೊರಾರ್ಜಿ ದೇಸಾಯಿಯವರ ನೇತೃತ್ವದ ಜನತಾ ಪಕ್ಷದ ಕೇಂದ್ರಸರಕಾರ ಮೊಟ್ಟಮೊದಲ ಬಾರಿಗೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗಾಗಿ ಶಿಕ್ಷಣದಲ್ಲಿ ಮೀಸಲು ನೀಡುವ ವಿಚಾರಕ್ಕೆ ಮಂಡಲ್ ಆಯೋಗವನ್ನು ರಚಿಸಿತ್ತು.

ಸಂಸದ ಬಿ.ಪಿ. ಮಂಡಲ್ ಅವರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಸಮಾನತೆಯ ನಿವಾರಣೆಗಾಗಿ, ಜಾತಿ ತಾರತಮ್ಯವನ್ನ ಬಗೆಹರಿಸಲು ಹಿಂದುಳಿದವರೂ ಹಾಗೂ ಪರಿಶಿಷ್ಟ ಜಾತಿ ವರ್ಗದವರಿಗೆ ಮೀಸಲು ಜಾರಿಗೊಳಿಸುವಂತೆ ಶಿಫಾರಸು ಮಾಡಿದ್ದರು. ಶಿಕ್ಷಣದ ವಿಚಾರದಲ್ಲಿ ಅವಕಾಶ ವಂಚಿತರಾಗುವುದು ಯಾವುದೇ ನಾಗರಿಕ ಸಮಾಜಕ್ಕೆ ಸಮ್ಮತವಲ್ಲವೆಂಬ ಉದಾv ಭಾವನೆಯ ಫಲವಾಗಿ ದೇಶದಲ್ಲಿ ಶೈಕ್ಷಣಿಕ ಮೀಸಲು ಕೊನೆಗೂ ಜಾರಿಗೊಂಡಿತು.

ಮತ್ತೊಮ್ಮೆ ದೇಶದಲ್ಲಿ ಮೀಸಲು ವ್ಯವಸ್ಥೆಯ ಚರ್ಚೆ ಆರಂಭವಾಗಿದ್ದು, ೨೦೧೬ರಲ್ಲಿ ಖಾಸಗಿ ಉದ್ಯೋಗ ಕ್ಷೇತ್ರದಲ್ಲೂ ಹಿಂದುಳಿದ ವರ್ಗದವರಿಗೆ ಶೇಕಡಾ ೨೭ರಷ್ಟು ಮೀಸಲು ನೀಡಬೇಕೆಂದು ರಾಷ್ಟ್ರೀಯ ಹಿಂದುಳಿದ ವರ್ಗ ಶಿಫಾರಸು ಮಾಡಿ ದ್ದಾಗ. ಮಂಡಲ್ ಆಯೋಗದ ಶಿಫಾರಸಿಗೆ ಪರವಾಗಿದ್ದವರೇ ಅವತ್ತೂ ಮತ್ತೆ ಮೀಸಲಿನ ಪರವಾಗಿ ಬೆಂಬಲದ ಧ್ವನಿ ಮೊಳಗಿಸಿದ್ದರು.

ಸಮಾಜದಲ್ಲಿನ ತಾರತಮ್ಯಕ್ಕೆ ಮೀಸಲು ಮಾತ್ರವೇ ಪರಿಹಾರ ಎಂಬುದಾಗಿದ್ದರೆ ದೇಶ ಒಕ್ಕೊರಲಿನಿಂದ ಈ ಶಿಫಾರಸ್ಸನ್ನು ಒಪ್ಪಲೇಬೇಕಿತ್ತು. ಅಲ್ಲಿಂದ ಮುಂದೆ ಇಂಥ ಹಲವು ವಿಷಯಗಳು ಚರ್ಚೆಗೆ ‘ಮೀಸಲಾದವು’. ಕೆಲವು ಜಾರಿಗೊಂಡವು. ತೀರಾ ಇತ್ತೀಚೆಗೆ ಸುದ್ದಿಯಾಗುತ್ತಿರುವುದು ಕರ್ನಾಟಕದಲ್ಲಿ ಪರಿಶಿಷ್ಟರ ಮೀಸಲು ಹೆಚ್ಚಳ ಹಾಗೂ ಪಂಚಮಸಾಲಿ ಮೀಸಲು ಬೇಡಿಕೆಗಳು. ಅದನ್ನು ಹೊರತುಪಡಿಸಿ ದೇಶಾದ್ಯಂತ ಚರ್ಚೆಯಲ್ಲಿರುವುದು ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಮೀಸಲು ನೀಡುವ ವಿಚಾರ.

ಇಂಥವನ್ನೆಲ್ಲ ಒಪ್ಪುವ ಬಿಡುವ ವಿಚಾರದಲ್ಲಿ ಅದರ ಸಾಧ್ಯಾಸಾಧ್ಯತೆ ಧನ- ಋಣಾತ್ಮಕ ಅಂಶಗಳಿಗಿಂತ ಹೆಚ್ಚು ಕಂಡುಬರು ತ್ತಿರುವುದು ರಾಜಕೀಯವೇ. ಈ ದೇಶಕ್ಕೆ ಮೀಸಲಿನ ಅಗತ್ಯ ಇದೆಯೋ ಇಲ್ಲವೋ ಎಂಬುದರ ಚರ್ಚೆಗೆ ಮುನ್ನ ಮೀಸಲಿನ ಹೆಸರಿನ ರಾಜಕೀಯದ ಅಗತ್ಯದ ಬಗ್ಗೆ ಚರ್ಚೆ ನಡೆಯಬೇಕಿದೆ. ಕರ್ಣ, ಏಕಲವ್ಯನ ವಿಚಾರದಲ್ಲೂ ಆದ ಅನ್ಯಾಯಕ್ಕೆ ಕಾರಣ ರಾಜಕಾರಣವೇ ಹೊರತು ಅಲ್ಲಿ ಸಾಮಾಜಿಕ, ನ್ಯಾಯದ ಪುನರ್ ಸ್ಥಾಪನೆಗೆ ಎಡೆಗೊಡಲಿಲ್ಲ.

ಹಾಗೊಮ್ಮೆ ಆಗಿದ್ದರೆ ಹಿಂದುಳಿದ ಕೆಳವರ್ಗದ ಪ್ರತಿನಿಧಿಗಳಾಗಿದ್ದ ಅವರಿಬ್ಬರಿಗೂ ವಿದ್ಯೆಯ ಮೂಲಕ ಅಧಿಕಾರದ ಲಾಭ ಧಕ್ಕಲೇ ಬೇಕಿತ್ತು. ಇವತ್ತಿಗೂ ಮೀಸಲು ಯಾವುದೇ ಸಮಾಜ ವರ್ಗದ ತಾರತಮ್ಯವನ್ನು ತೊರೆದುಹಾಕುತ್ತಿಲ್ಲ. ಕಳೆದೆರಡು ದಶಕಗಳ ಶೈಕ್ಷಣಿಕ ಮೀಸಲಿನ ಬಳಿಕ ಔದ್ಯೋಗಿಕ ಮೀಸಲಿನ ಪ್ರಮೇಯವೇ ಬರುತ್ತಿರಲಿಲ್ಲ. ಅಂದುಕೊಂಡಂತೆ ನಡೆದಿದ್ದರೆ ಮೀಸಲು ಫಲಾನುಭವಿಗಳು ಪ್ರತಿನಿಧಿಸುವ ಸಮುದಾಯ ಇವತ್ತಿಗೂ ‘ಹಿಂದುಳಿದ’ ಹಣೆಪಟ್ಟಿಯಡಿಯಲ್ಲೇ ಮುಂದುವರಿಯುವ
ಪ್ರಸಂಗವೂ ಇರುತ್ತಿರಲಿಲ್ಲ. ಅಂದರೆ ಮೀಸಲು ರಾಜಕೀಯ ಲಾಭಕ್ಕಷ್ಟೇ ಈ ದೇಶದಲ್ಲಿ ಪ್ರತಿಪಾದನೆಯಾಗುತ್ತಿದೆ ಎಂಬುದನ್ನು ಸಮಾಜ ಅರಿಯಲೇಬೇಕು.
***

ಇಷ್ಟೆಲ್ಲದರ ನಡುವೆ ಕ್ರಿಕೆಟ್‌ನಂಥ ಕ್ರೀಡೆಯಲ್ಲೂ ಮೀಸಲು ಜಾರಿಗೊಳ್ಳಬೇಕೆಂಬುದನ್ನು ‘ಬ್ಯಾಹ್ಮಣ್ಯ ಹಾಗೂ ಶ್ರೇಣೀಕೃತ
ವ್ಯವಸ್ಥೆ’ಯ ವಿರುದ್ಧದ ಹೋರಾಟವನ್ನು ಗುತ್ತಿಗೆ ತೆಗೆದುಕೊಂಡಿರುವ ಚೇತನ್ ಅಹಿಂಸ ತೇಲಿಬಿಟ್ಟಿದ್ದಾನೆ. ಯಾರೋ ತಲೆತಿರುಕನೊಬ್ಬ ಏನೋ ಬಡಬಡಿಸಿದ್ದಾನೆ ಎಂದ ಮಾತ್ರಕ್ಕೆ ಇಡೀ ದೇಶದ ಕ್ರೀಡಾಂಗಣದ ಸನ್ನಿವೇಶ ಬದಲಾಗಿಬಿಡುವುದಿಲ್ಲ. ಆದರೂ, ಇಂಥ ನಾಯಿಗಳನ್ನು ಹೀಗೆಯೇ ಎಷ್ಟು ದಿನ ಅಂತ ಬೊಗಳಲುಬಿಟ್ಟು, ಅದರ ಕರ್ಕಶವನ್ನು ಸಹಿಸಿಕೊಂಡಿರುವುದು?
ರಾಜಕೀಯ ಆಯಿತು. ಸಿನೆಮಾ ಆಯಿತು.

ಸಾಹಿತ್ಯ ಆಯಿತು. ಇದೀಗ ಕ್ರೀಡೆಗೂ ಜಾತಿ ಎಳೆದು ತಂದಿದ್ದಾನೆ ಈ ಬಾಯಿ ಬಡುಕ. ವಿವಾದಗಳನ್ನೇ ಟಿಆರ್‌ಪಿ ಅಸ ಮಾಡಿಕೊಂಡು ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳುವ ತೆವಲಿನ ಈ ವ್ಯಕ್ತಿ ಭಾರತಕ್ಕೆ ಕಾಲಿಟ್ಟೇ ಕೇವಲ ೧೭ ವರ್ಷ ಆಗಿದೆ. ಹಾಗೆ
ನೋಡಿದರೆ ಆತನಿಗೆ ಭಾರತವೆಂಬುದೇನೆಂಬುದೇ ಗೊತ್ತಿಲ್ಲ. ಆತನಿಗೆ ಈ ನೆಲದಲ್ಲಿ ಗೊತ್ತಿರುವುದೇ ಜಾತ್ಯತೀತತೆ, ಮೀಸಲು, ವೈದಿಕಶಾಹಿ. ಬ್ರಾಹ್ಮಣ್ಯ, ಶ್ರೇಣಿಕೃತ ವ್ಯವಸ್ಥೆ ಯಂಥ ಮೂರ‍್ನಾಲ್ಕು ಪದಗಳು. ಇವೇ ಭಾರತವಲ್ಲವಲ್ಲ? ಹಾಗಿದ್ದರೂ ಭಾರೀ ಸಮಾಜ ಸುಧಾರಕನಂತೆ ಪೋಸು ಕೊಡುತ್ತಾನೆ.

‘ಆ ದಿನಗಳಲ್ಲಿ’ ಮಾಡಿದ್ದೇ ಮೂರ‍್ನಾಲ್ಕು ಸಿನೆಮಾಗಳು. ಅದರಲ್ಲೂ ಎರಡು ತೋಪು, ಒಂದು ಓಡಲಿಲ್ಲ. ಇಡೀ ಕನ್ನಡ ಸಿನೆಮಾ ಇಂಡಸ್ಟ್ರೀ ನಡೆಯುತ್ತಿರುವುದೇ ತನ್ನಿಂದ ಎಂಬಂತೆ ಖದರು ಹಾರಿಸುತ್ತಾನೆ. ನೆಟ್ಟಗೆ ಮೂರಕ್ಷರವನ್ನೂ ಬರೆದಿಲ್ಲ. ಇಡೀ ಸಾರಸ್ವತ ಲೋಕವನ್ನೇ ಅರೆದು ಕುಡಿದವನ ರೀತಿಯಲ್ಲಿ ಬೊಗಳೆ ಬಿಡುತ್ತಾನೆ. ಮಾತೆತ್ತಿದರೆ ಸಂವಿಧಾನ ಎನ್ನುತ್ತಾನೆ. ಭಾರತದ ಸಂವಿಧಾನದ ಬಗೆಗಾಗಲೀ, ಬಾಬಾ ಸಾಹೇಬರ ಬಗೆಗಾಗಲೀ ಸ್ಪೆಲ್ಲಿಂಗ್ ಸಹ ಗೊತ್ತಿಲ್ಲ.

ಇಂಥ ಪರದೇಶಿ, ಪಡಪೋಶಿಯೊಬ್ಬ ಹೀಗೆ ಮೇಲಿಂದಮೇಲೆ ‘ಭಾರತದ ವ್ಯವಸ್ಥೆಯಲ್ಲಿ ಏನೂ ಸರಿ ಇಲ್ಲ’ ಎಂಬಂತೆ ಹಗುರವಾಗಿ ಮಾತನಾಡಿ, ದಿಕ್ಕು ತಪ್ಪಿಸುವುದನ್ನೇ ಕೆಲ ಮಾಧ್ಯಮಗಳು ಅತಿರಂಜಿತಗೊಳಿಸಿ, ವಿಶ್ವನಾಯಕನ ರೇಂಜಿಗೆ ಪ್ರಚಾರ ಕೊಡುತ್ತಿವೆ. ರಾಜಕೀಯ, ಸಿನೆಮಾ, ಸಾಹಿತ್ಯ, ಸಮಾಜ-ಸಮುದಾಯ ಹೀಗೆ ಎಲ್ಲದರಲ್ಲಿ ಎಲ್ಲರನ್ನು ಜಾತಿ ಹುಡುಕುವ ಈ ‘ಹಿಂಸಾ’ ಕ್ರೀಡೆಯಲ್ಲಿಯೂ ಈಗ ಜಾತಿ ಆಟ ಕಟ್ಟುತ್ತಿದ್ದಾನೆ.

ಒಂದೊಮ್ಮೆ ದಲಿನೆಂಬ ಕಾರಣಕ್ಕೆ ಕಪಿಲ್‌ದೇವ್‌ನನ್ನು ‘ಶ್ರೇಣೀಕೃತ ವ್ಯವಸ್ಥೆ’ ದೂರ ಇಟ್ಟಿದ್ದರೆ ಭಾರತಕ್ಕೆ ಮೊದಲ ವಿಶ್ವಕಪ್ ದಕ್ಕುತ್ತಿರಲಿಲ್ಲ ಎಂಬುದಕ್ಕಿಂತ ಕಲಾತ್ಮಕ ಆಲ್ ರೌಂಡರ್‌ನನ್ನು ಈ ನೆಲ ಕಳೆದುಕೊಳ್ಳುತ್ತಿತ್ತು. ರಾಂಚಿಯ ಯುವ -ಟ್ಬಾಲ್ ಆಟಗಾರನ ಕ್ರಿಕೆಟ್ ಹುಚ್ಚನ್ನು ಗುರುತಿ ಸದೇ ಉಳಿದಿದ್ದರೆ, ಐಸಿಸಿಯ ಎಲ್ಲ ಟ್ರೋಫಿ ಗೆದ್ದ ಏಕೈಕ ಹೆಮ್ಮೆಯ ನಾಯಕನನ್ನು ಭಾರತ ಕ್ರಿಕೆಟ್ ಕಳೆದುಕೊಳ್ಳುತ್ತಿತ್ತು.

‘ಕ್ರಿಕೆಟ್ ದೇವರು’ ಸಚಿನ್ ತೆಂಡೂಲ್ಕರ್‌ಗೆ ‘ಬ್ರಾಹ್ಮಣ್ಯ’ದ ನಿರ್ಮೂಲನೆ ಹೆಸರಲ್ಲಿ ಹೆಸರಲ್ಲಿ, ಮೀಸಲು ಅನ್ವಯಿಸಿ ಅವಕಾಶ ನಿರಾಕರಿಸಿದ್ದರೆ ೧೦೦ ಸೆಂಚೂರಿ ಹೊಡೆಯಬಲ್ಲ ಆಟಗಾರ ಭಾರತಕ್ಕೆ ಸಿಗುತ್ತಿರಲಿಲ್ಲ. ಯಾರೋ ತಲೆತಿರುಕನೊಬ್ಬ ಏನೋ ಹೇಳಿಕೆನೀಡಿದರೆ, ಆಟದಂಗಳ ಬದಲಾಗಿಬಿಡೋದಿಲ್ಲ ಎಂದು ನಿರ್ಲಕ್ಷಿಸಲಾಗದು. ಇಂಥ ಕ್ರಿಮಿಗಳೆಲ್ಲ ಹೀಗೆಯೇ ಹುಟ್ಟಿಕೊಂಡು ಕೊನೆಗೆ ರಕ್ಕಸರೂಪ ಪಡೆದು ಇಡೀ ವ್ಯವಸ್ಥೆಗೆ ಮಾರಕವಾದ ಎಷ್ಟೋ ಇತಿಹಾಸವಿದೆ.

ಇನ್ ಫ್ಯಾಕ್ಟ್ ಅಹಿಂಸನ ಹೇಳಿಕೆಯ ಮೊದಲು ಯಾರಿಗೂ ಕೂಡ ಇಂತಹ ವಿಚಾರ ಬಂದಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಹೇಳಿಕೆ ನಂತರ ಕೈಯಲ್ಲಾಗದೇ ಮೈಪರಚಿಕೊಳ್ಳುತ್ತ ಕುಳಿತ ಅದೆಷ್ಟೋ ಸ್ವಘೋಷಿತ ಪ್ರತಿಭೆಗಳು ಆಟದಲ್ಲೂ ಜಾತಿ ಹುಡುಕ ಬಾರದೇಕೆ ಎಂದು ಯೋಚಿಸಲಾರಂಭಿಸಿದ್ದರೂ ಇದ್ದಾರು. ಇದೇ ಮುಂದುವರಿದು, ಸಿನೆಮಾದಲ್ಲಿ, ನೃತ್ಯ- ನಾಟಕಗಳಲ್ಲಿ,
ಸಾಹಿತ್ಯದಲ್ಲಿ ಕೊನೆಗೆ ಹೆಣ ಸುಡುವುದರಲ್ಲೂ ಮೀಸಲನ್ನು ಜಾರಿಗೊಳಿಸಬೇಕೆಂದು ಪ್ರತಿಪಾದಿಸಿದರೂ ಅಚ್ಚರಿಯೇನಿಲ್ಲ!
***

ಸರಕಾರಿ ವ್ಯವಸ್ಥೆಯಲ್ಲಿ ಸಬ್ಸಿಡಿ, ಸಾಲಸೌಲಭ್ಯಗಳು ಹೇಗೆ ಸಮಾಜದ ಒಂದು ವರ್ಗವನ್ನು ಉದ್ದೇಶಪೂರ್ವಕವಾಗಿ ಅಭಿವೃದ್ಧಿಯ ಸಾಲಿಗೆ ಬಾರದಂತೆ ಹತ್ತಿಕ್ಕುತ್ತಿವೆಯೋ ಮೀಸಲೂ ಸಹ ಅಂಥದೇ ಮುಳ್ಳಾಗಿ ಮೊಳೆತು ಸಮಾಜದ ಅಭಿವೃದ್ಧಿ ಯನ್ನ ಚಿವುಟುತ್ತಿದೆ, ಪರೋಕ್ಷವಾಗಿ ಸಮಾನತೆಯ ಮಟ್ಟಕ್ಕೆ ನೀವು ಅರ್ಹರಲ್ಲ ಎಂಬ ಸಂದೇಶ ಸರಕಾರದಿಂದಲೇ ಹಿಂದುಳಿದ ಹಾಗೂ ಕೆಳವರ್ಗದ ಮಂದಿಗೆ ರವಾನೆ ಆಗುತ್ತಿದೆ ಎಂಬುದನ್ನ ಗ್ರಹಿಸಬೇಕು. ಅದಿಲ್ಲದಿದ್ದರೆ ಸಮಾನತೆಯ ಪ್ರತಿಪಾದನೆಯಲ್ಲಿ ಮೀಸಲಿನ ಪ್ರಶ್ನೆ ಬರುವುದಾದರೂ ಹೇಗೆ? ಇಷ್ಟಕ್ಕೂ ಶೈಕ್ಷಣಿಕ ಮೀಸಲಿನ ಬಳಿಕ ಮತ್ತೆ ಉದ್ಯೋಗ ಮೀಸಲಿನ ಪ್ರಶ್ನೆ ಉದ್ಭವಿಸಿತಾದರೂ ಹೇಗೆ? ಅಮೆರಿಕದಂತಹ ದೇಶದಲ್ಲೂ ಇಂದಿಗೂ ಅಲ್ಲಿನ ಮೂಲನಿವಾಸಿಗಳಿಗೆ ಸರಕಾರಿ ಮೀಸಲು ವ್ಯವಸ್ಥೆ ಜಾರಿಯಲ್ಲಿದೆ ಎಂಬುದು ವಾದಕ್ಕೆ ಸಮರ್ಥನೆ ಆಗಲು ಸಾಧ್ಯವಿಲ್ಲ.

ಅದನ್ನೇ ಪ್ರತಿಪಾದನೆಗೆ ಇಳಿದರೆ ಜಾತಿವರ್ಗ ವ್ಯವಸ್ಥೆಯ ನಿರ್ಮೂಲನೆ ನಮ್ಮ ಆದ್ಯತೆಯಾಗಬೇಕು. ಆದರೆ ನಮ್ಮ ರಾಜಕೀಯ ಪಕ್ಷಗಳಿಗೆ ಈ ನೆಲದಲ್ಲಿ ಜಾತಿ ವ್ಯವಸ್ಥೆಯ ನಿರ್ಮೂಲನೆ ಎಂದಿಗೂ ರುಚಿಸದು. ಜಾತಿ ಲೆಕ್ಕಾಚಾರಗಳಿಲ್ಲದ ನಮ್ಮ ಚುನಾವಣೆ ಗಳನ್ನಾಗಲೀ ರಾಜಕೀಯ ಪ್ರಕ್ರಿಯೆಗಳನ್ನಾಗಲೀ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಸರಕಾರೀ ವಲಯದ ಉದ್ಯೋಗ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಸಾಮಾಜಿಕ ನ್ಯಾಯ ಪರಿಪಾಲನೆಯ ದೃಷ್ಟಿಯಿಂದ ಮೀಸಲು ಅಗತ್ಯ ಎಂಬ ವಾದ ಬಹಳಷ್ಟು ದಿನಗಳಿಂದ ಕೇಳಿಬರುತ್ತಲೇ ಇದೆ.

ಇದೇ ದೃಷ್ಟಿಕೋನದಲ್ಲಿ ಹಿಂದುಳಿದ ಆಯೋಗವೂ ಖಾಸಗಿಯಲ್ಲಿ ಶೇ.೨೭ ಮೀಸಲು ವ್ಯವಸ್ಥೆಗೆ ಶಿಪಾರಸ್ಸು ಮಾಡಿತ್ತು. ನಮ್ಮ ಸಂವಿಧಾನದಲ್ಲಿ ಮೀಸಲು ಅವಕಾಶವನ್ನು ಕಲ್ಪಿಸುವ ಸಂದರ್ಭದಲ್ಲಿ ಸ್ಪಷ್ಟ ವ್ಯಾಖ್ಯಾನ ನೀಡಲಾಗಿದೆ. ರಾಷ್ಟ್ರದಲ್ಲಿ ಜಾತಿ ವ್ಯವಸ್ಥೆ ಹೋಗುವವರೆಗೂ ಮೀಸಲು ಅಗತ್ಯ ಎಂದು ಪ್ರತಿಪಾದಿಸಲಾಗಿದೆ. ಇಲ್ಲಿ ಉದ್ಭವಿಸುವ ಪ್ರಶ್ನೆ ಎಂದರೆ, ಹಾಗಿದ್ದರೆ ಶೈಕ್ಷಣಿಕ ಮೀಸಲು ಜಾರಿಗೊಂಡು ಇಷ್ಟು ವರ್ಷಗಳ ಬಳಿಕವೂ ಜಾತಿ ನಿರ್ಮೂಲನೆ ಅಸಾಧ್ಯವಾದದ್ದಾದರೂ ಹೇಗೆ? ಸಾಮಾಜಿಕ
ತಾರತಮ್ಯ ಮುಂದುವರಿದುಕೊಂಡು ಬಂದದ್ದು ಏಕೆ? ಮೀಸಲೊಂದೇ ಪರಿಹಾರ ವೆಂಬುದಾದರೆ ಇಷ್ಟರಲ್ಲಾಗಲೇ ಭಾರತ ಜಾತಿಮುಕ್ತ ವಾಗಿರಬೇಕಲ್ಲವೇ? ಬದಲಾಗಿ ದಿನದಿಂದ ದಿನಕ್ಕೆ ಜಾತಿ ಉಪಜಾತಿಗಳ ಸಂಖ್ಯೆ ವೃದ್ಧಿಸುತ್ತಲೇ ಇದೆ.

ಗಮನಾರ್ಹ ಸಂಗತಿಯೆಂದರೆ ದೇಶದಲ್ಲಿ ಮೀಸಲು ಸಹ ತನ್ನ ಪಾವಿತ್ರ್ಯ ಮತ್ತು ಮಹತ್ತ್ವವನ್ನು ಕಳೆದುಕೊಂಡು ಬಿಟ್ಟಿದೆ.
ಮೀಸಲು ಕೋಟಾದಲ್ಲಿ ಬರುವ ವಿದ್ಯಾರ್ಥಿಗಳು ಅಥವಾ ಅಭ್ಯರ್ಥಿಗಳು ದಡ್ಡರು, ಅಸಮರ್ಥರು, ಅಯೋಗ್ಯರು ಎಂಬ ಭಾವ ಈ ಸಮಾಜದಲ್ಲಿ ಜಾತಿವ್ಯವಸ್ಥೆಯಷ್ಟೇ ಬೇರೂರಿದೆ. ಹೀಗಾಗಿ ಮೀಸಲಿನಂತಾ ವ್ಯವಸ್ಥೆಯಿಂದ ಸಾಮಾಜಿಕ ವರ್ಗೀಕರಣ ಮತ್ತು ಅಸಮಾನತೆ ಹೆಚ್ಚುತ್ತದೆ ಎಂಬುದನ್ನು ಸ್ವತಃ ಸರಕಾರಗಳೇ ಸಾಬೀತು ಗೊಳಿಸಿದಂತಾಗುತ್ತದೆ.

ಸರಕಾರಿ ಕೆಲಸಕ್ಕಿಂತ ಖಾಸಗಿ ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚಿದೆ ಎಂಬ ಮಾತ್ರಕ್ಕೆ ಹಿಂದುಳಿದ ಸಮುದಾಯದವರು ಸ್ಪರ್ಧೆಗಿಳಿಯದೇ ಉದ್ಯೋಗ ಗಿಟ್ಟಿಸುವ ಒಳರಸ್ತೆಯಲ್ಲಿ ಸಾಗುವ ಸೌಲಭ್ಯ ಪಡೆಯಬೇಕೆಂಬುದು ಎಷ್ಟು ಮಾತ್ರಕ್ಕೆ ಸರಿ?

***

ಅರ್ಹತೆಯ ಮಾನದಂಡದ ಬದಲು ಹೀಗೊಂದು ವಿತಂಡವಾದಕ್ಕಿಳಿಯುವುದು ಭಾರತ ಕ್ರಿಕೆಟ್ ತಂಡದಲ್ಲಿ ಎಲ್ಲ ಜಾತಿವರ್ಗದ ಜನರೂ ಇರಬೇಕೆಂದು ಪ್ರತಿಪಾದಿಸಿದಂತಲ್ಲವೆ? ಕ್ರಿಕೆಟ್ ತಂಡದ ಆಯ್ಕೆಗೆ ಕ್ರೀಡಾಳುವೊಬ್ಬನ ದೈಹಿಕ ಸಾಮರ್ಥ್ಯ, ಮಾನಸಿಕ ಚಾಕಚಕ್ಯತೆ, ಸಂದರ್ಭಕ್ಕನುಗುಣವಾದ ನಿರ್ಧಾರ ಕೈಗೊಂಡು ತಂಡವನ್ನು ಗೆಲುವಿನ ದಡ ಮುಟ್ಟಿಸುವ ಜವಾಬ್ದಾರಿಯುತ ಮನೋಭಾವ ಮಾನದಂಡವಾಗಬೇಕೇ ವಿನಹ ಜಾತಿ ಸಮುದಾಯಗಳು ಆಗಿರಕೂಡದು. ಒಂದೊಮ್ಮೆ ಕ್ರಿಕೆಟ್‌ನಲ್ಲೂ ಮೀಸಲು
ಜಾರಿಗೊಳಿಸಬೇಕೆಂದಾದರೆ, ಹಿಂದುಳಿದವರಿಗೆ ಆಟದ ನಿಯಮದಲ್ಲೂ ವಿನಾಯಿತಿ ನೀಡಬೇಕಾಗುತ್ತದೆ.

ಅವರಾಡುವಾಗ ಕ್ರಿಕೆಟ್ ಬೌಂಡರಿ ಚಿಕ್ಕದಾಗಬೇಕು, ೬೦ ರನ್ ಗಳಿಗೆ ಶತಕವೆಂದು ಪರಿಗಣಿತವಾಗಬೇಕು, ಅವರಾಡುವಾಗ
ಮಾತ್ರ ಓವರಿಗೆ ೮ ಬೌಲ್ ಹಾಕಬೇಕು ಎಂಬಿತ್ಯಾದಿಗಳು ಜಾರಿಗೊಂಡರೆ ಎಷ್ಟು ಹಾಸ್ಯಾಸ್ಪದವಾದೀತು? ಮೀಸಲು ರಾಜಕೀಯ ವನ್ನ ಬಿಟ್ಟು ದೇಶಕ್ಕಾಗಿ ಅಭಿವೃದ್ಧಿಗಾಗಿ ಇರುವ ಅದೆಷ್ಟೋ ಅಗತ್ಯ ಚರ್ಚೆಗಳತ್ತ ಹೋರಾಟ ಚಳವಳಿಗಳನ್ನ ನಾವು ರೂಪಿಸುವುದು ಅಗತ್ಯವಿದೆ. ಅದಿಲ್ಲದಿದ್ದರೆ ಈ ದೇಶದಲ್ಲಿ ಪ್ರತೀ ಜಾತಿ ಪ್ರತೀ ವರ್ಗ ಪ್ರತೀ ಸಮುದಾಯ ಪ್ರತೀ ಪಂಗಡಕ್ಕೊಂದು ಕಾನೂನುಗಳು ಮಾರ್ಪಟ್ಟು ರಾಷ್ಟ್ರವ್ಯವಸ್ಥೆ ನುಚ್ಚುನೂರಾಗಲಿದೆ ಎಂಬುದು ಅತಿಶಯವಲ್ಲ.

Read E-Paper click here