Wednesday, 13th November 2024

ಗ್ರಾಹಕನೇ, ಸಬಲನಾಗು ಅಥವಾ ತಬರನಾಗು

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್

ನಮ್ಮ ಜತೆ ವಾಸವಿದ್ದ ನನ್ನ ಅತ್ತೆ ಮತ್ತು ದಿವ್ಯಾಂಗೀ ಭಾವಮೈದ ಹಲವು ವರ್ಷಗಳ ಹಿಂದೆ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಲುಫಾನ್ಸಾ ಏರ್‌ಲೈನ್ಸ್ ನಲ್ಲಿ ಅವರಿಗೆ ಶುದ್ಧ ಸಸ್ಯಾಹಾರದ ಊಟ ಒದಗಿಸದೆ ಅರೆಹೊಟ್ಟೆಯ ಅವರಿಬ್ಬರೂ ಪ್ರಯಾಣಿಸಿದ್ದರು.
ಹಿಂದೂ ಸಸ್ಯಾಹಾರಿ ಊಟವೆಂದರೆ ಅದರಲ್ಲಿ ಮೊಟ್ಟೆ ಮತ್ತು ಮೊಟ್ಟೆಯಿಂದ ತಯಾರಿಸಿದ ತಿನಿಸುಗಳೂ ಇದ್ದು ಅವರ ಊಟದ ಪದ್ಧತಿಗೆ ವಿರುದ್ಧವಾಗಿತ್ತು. ಈ ಕುರಿತು ಮೈಸೂರು ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ನೀಡಲಾದ ದೂರನ್ನು ನ್ಯಾಯವ್ಯಾಪ್ತಿಯ ಕಾರಣ ನೀಡಿ ತಿರಸ್ಕರಿಸಲಾಯಿತು.

ಪ್ರಯಾಣಿಕರ ಟಿಕೆಟ್ ದೆಹಲಿಯಲ್ಲಿ ಬುಕ್ ಆಗಿತ್ತು. ಪ್ರಕರಣಕ್ಕೆ ತೆರೆ ಬಿದ್ದಿತು. ಎಷ್ಟೋ ಪ್ರಕರಣಗಳಲ್ಲಿ ಗ್ರಾಹಕರಿಗೆ ವ್ಯಾಪ್ತಿಯ ಕಾರಣ ಒಡ್ಡಿ ಪರಿಹಾರ ವಂಚಿತರನ್ನಾಗಿಸುತ್ತಿತ್ತು. ಆದರೆ ಇತ್ತೀಚೆಗೆ ಪರಿಷ್ಕೃತವಾದ ಗ್ರಾಹಕ ಸಂರಕ್ಷಣಾ ಕಾಯಿದೆಯನ್ವಯ
ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವ ಅನೇಕ ಮಾರ್ಪಾಡುಗಳನ್ನು ತರಲಾಗಿದ್ದು, ವ್ಯಾಪ್ತಿ ಕಾರಣದಿಂದ ದೂರನ್ನು ನಿರಾಕರಿಸುವಂತಿಲ್ಲ.

ಇನ್ನೊಂದು ಪ್ರಕರಣದಲ್ಲಿ, ನಮ್ಮ ಅಪಾರ್ಟ್‌ಮೆಂಟಿನ ಟೆರೇಸ್ ಮೇಲೆ ಅನಧಿಕೃತವಾಗಿ ಕಟ್ಟಲಾದ ಟಾಯ್ಲೆಟ್ ಅನ್ನು ನಗರ ಪಾಲಿಕೆ ಕೆಡವಿದ ನಂತರ ಕಟ್ಟಡಕ್ಕೆ ಉಂಟಾದ ಹಾನಿಯ ಕುರಿತು ನೀಡಿದ ದೂರನ್ನು ಗ್ರಾಹಕ ಕಾಯಿದೆಗೆ ಬರುವುದಿಲ್ಲ ಎಂಬ ಕಾರಣ ನೀಡಿ ತಿರಸ್ಕರಿಸಲಾಗಿತ್ತು. ಕಾಯಿದೆಯ ವ್ಯಾಪ್ತಿಯನ್ನು ಬಹಳಷ್ಟು ವಿಸ್ತರಿಸಲಾಗಿದೆ. ಇತ್ತೀಚಿನ ಒಂದು ಪ್ರಕರಣವನ್ನು ಉದ್ಧರಿಸುತ್ತೇನೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ತೆರಿಗೆ ಉಳಿತಾಯ ಠೇವಣಿಯಲ್ಲಿರಿಸಿದ್ದ ನಮ್ಮ ಹಣ ಶೇಕಡಾ 8.35ರಷ್ಟು ಬಡ್ಡಿ
ಗಳಿಸುತ್ತಿತ್ತು. ಅವಧಿ ಮುಗಿದ ನಂತರ ಅದನ್ನು ಗರಿಷ್ಠ ಬಡ್ಡಿ ಗಿಟ್ಟಿಸುವ ಯಾವುದೇ ಅವಧಿಗಾದರೂ ಮತ್ತೊಂದು ಠೇವಣಿಯಲ್ಲಿ ಮುಂದುವರೆಸಲು ಜುಲೈ ತಿಂಗಳಲ್ಲಿ ನೀಡಿದ ನಿರ್ದೇಶನವನ್ನು ಪಾಲಿಸದೇ ಏಕಪಕ್ಷೀಯವಾಗಿ ಅದನ್ನು ಕೇವಲ ಶೇ. 2.7 ಬಡ್ಡಿ ತರುವ ಐದು ವರ್ಷದ ಠೇವಣಿಯಲ್ಲಿ ಹಾಕಿ ಅದನ್ನು ನಮ್ಮ ಗಮನಕ್ಕೆ ಇತ್ತೀಚೆಗಷ್ಟೆ ತಂದ ಬ್ಯಾಂಕ್‌ನ ಕ್ರಮವನ್ನು ಪ್ರಶ್ನಿಸಿ ನೀಡಿದ ದೂರಿಗೆ ಪರಿಹಾರ ಸಿಗಲಿಲ್ಲ.

ಕಳೆದ ಏಳೆಂಟು ವಾರಗಳಲ್ಲಿ, ಇದಕ್ಕೇ ತಲೆಕೊಟ್ಟು ಹಗಲೂ ರಾತ್ರಿ ಬ್ಯಾಂಕಿನ ಗ್ರಾಹಕ ಸೇವಾ ಕೇಂದ್ರಕ್ಕೆ ಪದೇಪದೆ ಪ್ರವರ ಒಪ್ಪಿಸುವುದೇ ಆಗಿತ್ತು. ಗಿಳಿಯಂತೆ ಹೇಳಿಕೊಟ್ಟಿದ್ದನ್ನಷ್ಟೇ ಪುನರುಚ್ಚರಿಸುವ ಕಾಲ್ ಸೆಂಟರ್‌ನ ಎಳಸುಗಳೊಂದಿಗೆ ಸೆಣಸಾಡುವ ಕರ್ಮ ವೈರಿಗೂ ಬೇಡ. ಈ ಬ್ಯಾಂಕಿನ ಕಾಲ್ ಸೆಂಟರ್ 24 ಗಂಟೆಯೂ ಕಾರ್ಯ ನಿರ್ವಹಿಸುತ್ತದೆ. ಬೆಳಗ್ಗೆ ಹೊತ್ತು ನನಗೂ ಕೆಲಸದ ಒತ್ತಡ, ಹೆಚ್ಚು ಒತ್ತಡವಿದೆ ಏನೊ ಕಾಲ್ ಸೆಂಟರ್‌ಗೆ ಮಾಡಿದ ಕರೆಗಳೂ ವ್ಯರ್ಥ. ಹಾಗಾಗಿ ನಡುರಾತ್ರಿಯಲ್ಲೂ, ಬ್ರಾಹ್ಮೀ
ಮುಹೂರ್ತದಲ್ಲೂ ಕರೆ ಮಾಡಿದರೂ ಶುಭವಾಗಲಿಲ್ಲ.

ಕರೆಯನ್ನು ಹೋಲ್ಡ ಮಾಡಿ, ಮಾಡಿದವರನ್ನು ತ್ರಿಶಂಕುವನ್ನಾಗಿಸುವುದೇ ಕಾಲ್ ಸೆಂಟರ್‌ಗಳ ಉದ್ದೇಶವೆಂದು ನಮ್ಮೆಲ್ಲರ ಅನುಭವ. ಕರೆ ಕಟ್ ಆದರೆ, ಮತ್ತೆ ಪ್ರಯತ್ನಿಸಿ, ಉತ್ತರಿಸಿದವನಿ(ಳಿ)ಗೆ ಮತ್ತೊಮ್ಮೆ ಪಾಠ ಒಪ್ಪಿಸುವುದು. ಸಮಸ್ಯೆ ಬಗೆಹರಿಯ ಬೇಕಾದರೆ ಮತ್ತಷ್ಟು ಸಮಸ್ಯೆಗಳನ್ನು ಎದುರು ಹಾಕಿಕೊಳ್ಳದಿದ್ದರೆ ನಾವಿರುವುದು ಭಾರತದಲ್ಲಿ ಎಂದು ನೆನಪಾಗುವುದಾದರೂ ಹೇಗೆ? ಕೊನೆಗೂ, ಹದಿನೈದು ದಿನಗಳಲ್ಲಿ ದೂರನ್ನು ಬಗೆಹರಿಸುವುದಾಗಿ ಭರವಸೆ ದೊರಕಿತು. ಯೆಸ್, ಭರವಸೆಯಷ್ಟೆ.

ಹದಿನೈದನೇ ದಿನ ಮತ್ತೆ ಅ ವೇಳೆಯಲ್ಲಿ ಫೋನ್ ಮಾಡಿದೆ. ಗಡುವು ಮೀರಲು ಇನ್ನೂ ಹನ್ನೊಂದು ಗಂಟೆಗಳಿವೆ ಎಂಬ ಆಶಾ ದಾಯಕ ಉತ್ತರ. ಮತ್ತೊಂದು ಕರೆ. ಮತ್ತೆ ಹತ್ತು ದಿನಗಳ ಅವಧಿ ಬೇಡಿ ಗಡುವಿನ ವಿಸ್ತರಣೆ. ನನ್ನ ತಾಳ್ಮೆಯ ಕಟ್ಟೆ ಕನ್ನಂಬಾಡಿ ಕಟ್ಟೆಯಷ್ಟೇ ಗಟ್ಟಿ, ನಿಜ. ಆದರೆ, ಹಲ ವರ್ಷಗಳ ಹಿಂದೆ ಅದರಲ್ಲೂ ಬಿರುಕು ಮೂಡಿತ್ತು. ದನಿ ಏರಿಸಿದ್ದರಿಂದಲೋ ಏನೋ, ಹತ್ತು ದಿನಗಳ ಬದಲು ಎರಡೇ ದಿನಗಳಲ್ಲಿ ಬೆಂಗಳೂರಿನಿಂದ ಕರೆ.

ಅಪರೂಪಕ್ಕೆ ನಯವಾಗಿ ಮಾತಾಡಿದ ದನಿ. (ಕರೆ ಮಾಡಿದ್ದು ಎಸ್‌ಬಿಐ ಸಿಬ್ಬಂದಿ ಇರಲಾರದೆಂಬಷ್ಟು ಸೌಜನ್ಯ!)  ಅಸಮರ್ಥ ತೆಯ ಜತೆಗೆ ಅಸಡ್ಡೆಯನ್ನೂ ಮೈಗೂಡಿಸಿಕೊಂಡಿರುವ ಶಾಖಾ ಮುಖ್ಯಸ್ಥರ ಬಗ್ಗೆ ಹೇಳಿದೆ. ಶೀಘ್ರದ ದೂರನ್ನು ಕುರಿತು ವಿಚಾರಣೆ ನಡೆಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ ಹೆಣ್ಣು ಮಗಳು. ಮರುದಿನವೇ ನಮ್ಮ ದೂರನ್ನು ಮುಕ್ತಾಯ ಗೊಳಿಸಲಾಗಿದೆ ಎಂಬ ಸಂದೇಶ. ಪರಿಹಾರ ಶೂನ್ಯ. ಒಮ್ಮೆ, ಪ್ರವಾಸದಿಂದ ಹಿಂತಿರುಗಿದ ನಮ್ಮ -ಟ್‌ನಲ್ಲಿ ವಿದ್ಯುತ್ ಸಂಪರ್ಕ ವನ್ನು ಕಡಿತಗೊಳಿಸಲಾಗಿತ್ತು. ನಿತ್ಯದಂತೆ, ಗಡುವಿಗೆ ಮುನ್ನವೇ ಬಿಲ್ ಪಾವತಿಸಲಾಗಿತ್ತು.

ವಿಚಾರಿಸಲಾಗಿ, ನಾವು ನೀಡಿದ ಚೆಕ್ಕನ್ನು ಸಂಬಂಧಿಸಿದ ಪೋಸ್ಟ್ ಆಫೀಸ್ ತಿರಸ್ಕರಿಸಿತ್ತು. ಕಾರಣ, ಬಿಲ್ ಮೊತ್ತದ ಹಣವನ್ನು ಅಂಕಿಗಳಲ್ಲಿ ಮತ್ತು ಪದಗಳಲ್ಲಿ ಬರೆಯುವುದರಲ್ಲಿನ ವ್ಯತ್ಯಾಸ. ಸಾವಿರದ ಎಂಟುನೂರಾ ಐವತ್ತೇಳನ್ನು ಹತ್ತೊಂಭತ್ತು ನೂರಾ ಐವತ್ತೇಳು ಎಂದು ನಮೂದಿಸಿದ್ದು ತಪ್ಪೆಂದು ಪ್ರಭೃತಿಯೊಬ್ಬಳ ವ್ಯಾಖ್ಯೆ. ಹಣೆ ಚಚ್ಚಿಕೊಳ್ಳಬೇಕು, ಆದರೆ, ಅದರಿಂದ ಇವರೊಟ್ಟಿಗೆ ಏಗುವ ಹಣೆಬರಹ ತಪ್ಪುವುದಿಲ್ಲವಲ್ಲ. ಸದರಿ ಅಂಚೆ ಕಚೇರಿಗೆ ಬರುವವರು ಬಹುತೇಕ ಹಿರಿಯ ನಾಗರಿಕರು. ಸಿಬ್ಬಂದಿಗೆ ಸೌಜನ್ಯದ ಗಂಧವಿಲ್ಲ.

ಗ್ರಾಹಕರನ್ನು ಕಂಡರೆ ಅಸಡ್ಡೆ, ವಿನಾಕಾರಣ ಅಲೆಸುವುದು ಮೈಗೂಡಿದೆ. ಅಜ್ಞಾನದಿಂದ ನನಗುಂಟು ಮಾಡಿದ ತೊಂದರೆ ಯನ್ನೇ ಮುಂದಿಟ್ಟುಕೊಂಡು ದೂರು ನೀಡಿ, ಅವರು ತಪ್ಪನ್ನು ಒಪ್ಪಿಕೊಳ್ಳಲು ಮುಂದಾದಾಗ ಸಿಬ್ಬಂದಿಯನ್ನು ಕರೆಸಿ ನಾನೇ
ಉಚಿತವಾಗಿ ಸೌಜನ್ಯದ ಪಾಠ ನೀಡುವುದೆಂದು ನಿರ್ಧರಿಸಿದೆ.

ಪೋ ಮಾಸ್ತರಿಗೆ ಪತ್ರ ಬರೆದೆ. ತಪ್ಪಾಗಿದೆ, ಮನ್ನಿಸಿರೆಂದು ಬೇಡಿ ಉತ್ತರಿಸಿದರು. ಅದರ ಆಧಾರದ ಮೇಲೆ ಗ್ರಾಹಕ ವೇದಿಕೆಗೆ ದೂರು ನೀಡುವುದಿತ್ತು. ಗ್ರಾಹಕ ವೇದಿಕೆಗೆ ಗ್ರಾಹಕರೇ ನೇರವಾಗಿ ದೂರಬಹುದು, ವಕೀಲರ ಜರೂರಿಲ್ಲ. ದಿನ ನಿತ್ಯ ಇಂತಹ ಹತ್ತು ಹಲವು ರಗಳೆಗಳಾದರೆ ಸಮಯ ಹೊಂದಿಸುವುದಾದರೂ ಹೇಗೆ. ಪರಿಚಯದ ವಕೀಲರನ್ನು ಹುಡುಕಿಕೊಂಡು ಜಿಲ್ಲಾ ಕೋರ್ಟ್
ಸಮುಚ್ಚಯಕ್ಕೆ ಹೋದೆ. ಅಲ್ಪ ಪರಿಚಯವಿದ್ದ ವಕೀಲರಾರೊ ಹಠಾತ್ತನೆ ಬಂದು ತಾವೇ ನನ್ನನ್ನು ಪ್ರತಿನಿಧಿಸುವುದಾಗಿ ಹೇಳಿ
ನನ್ನ ಫೈಲ್ ಪಡೆದು ಈಗ ಆರು ವರ್ಷದ ಮೇಲಾಯಿತು. ಫೋನ್ ರಿಸೀವ್ ಮಾಡುವುದನ್ನು ನಿಲ್ಲಿಸಿದರು.

ಅವರ ಕಚೇರಿ ಎಲ್ಲಿದೆಯೊ, ತಿಳಿದಿಲ್ಲ. ನನ್ನ ಫೈಲ್‌ನಲ್ಲಿ ಗ್ರಾಹಕ ವೇದಿಕೆಗೆ ದೂರು ನೀಡಲು ಮತ್ತೆರಡು ಪ್ರಕರಣಗಳ ದಾಖಲೆ
ಇದ್ದವು. ಇತ್ತೀಚೆಗೆ ಮತ್ತೆ ಹಠಾತ್ತಾಗಿ ಕಂಡ ವಕೀಲರ ಕಣ್ಣಿನಿಂದ ನಾನೇ ಮರೆಯಾದೆ. ನಾನು ವೃತ್ತಿಪರ ದೂರುದಾರನಲ್ಲ. ಆದರೆ, ವ್ಯಕ್ತಿಯಾಗಿ ಅನ್ಯಾಯವನ್ನು ಸಹಿಸುವುವನಲ್ಲ. ನಾನು ಪತ್ರಿಕೋದ್ಯಮಕ್ಕೆ ಕಾಲಿಟ್ಟಿದ್ದೇ ಸೀಮಿತವಾಗಿಯಾದರೂ ವ್ಯವಸ್ಥೆಯಲ್ಲಿನ ಅಂಕುಡೊಂಕುಗಳಿಂದ ಬಸವಳಿದ ಜನಸಾಮಾನ್ಯರಿಗೆ ಕಿರುಸೇವೆ ಸಲ್ಲಿಸುವ ಉದ್ದೇಶದಿಂದ.

ನನಗಾಗುವ ಅನ್ಯಾಯಗಳ ವಿರುದ್ಧ ಬಡಿದಾಡಿ ಸಫಲನಾದರೆ ಅದರಿಂದ ಸರಿಪಡಿಸಬಹುದಾದ ಅವ್ಯವಸ್ಥೆಯಿಂದ  ಬೇರೊಬ್ಬ ರಿಗೂ ಅನುಕೂಲವಾಗಬಹುದೆಂಬ ಆಶಾಭಾವನೆ. ಇಲ್ಲಿ ನಾನು ಹಂಚಿಕೊಂಡಿರುವುದು ನನ್ನ ಹೋರಾಟದ ಒಂದು ತುಣು ಕಷ್ಟೆ. ಸಮಯಾಭಾವದಿಂದ ಹೋರಾಡದೇ ಬಿಟ್ಟ ಹೋರಾಟಗಳಿವೆ. ಎಲ್ಲ ಸಂದರ್ಭದಲ್ಲಿ ಗ್ರಾಹಕ ವೇದಿಕೆಗೆ ಹೋಗುತ್ತೇ ನೆಂದಲ್ಲ, ಹೋಗುವುದಕ್ಕೆ ಪುರುಸೊತ್ತೂ ಇಲ್ಲ. (ಆರು ವರ್ಷಗಳ ಕೆಳಗೆ ಪತ್ನಿಯ ಕೈ ಬೆರಳಿಗೆ ನಡೆಸಿದ ಶಸ್ತ್ರ ಚಿಕಿತ್ಸೆ ಎಡವಟ್ಟಾಗಿ ಬೆರಳನ್ನು ಶಾಶ್ವತವಾಗಿ ಊನಗೊಳಿಸಿದ ಸರ್ಜನ್ ಮೇಲೆ ಕ್ರಮ ಜರುಗಿಸಲು ಗುಣಮಟ್ಟದ ಕಾನೂನು ನೆರವು ಸಿಗದೇ ಬಿಟ್ಟು ಬಿಟ್ಟೆ.)

ಇಂಥದ್ದೇ ಜಂಜಾಟಗಳಿಂದ, ನಾನು ಬರೆಯಲೆಣಿಸಿದ ಕಾದಂಬರಿ ಹನ್ನೆರಡು ವರ್ಷಗಳ ನಂತರವೂ ಮೆದುಳಿನ ಪದರಗಳ ಸಿಕ್ಕಿ ಒzಡುತ್ತಿದೆ. ಕಾದಂಬರಿ ರಚನೆಗೆ ಬೇಕಾದ ಮನೋಭೂಮಿಕೆಯನ್ನು ಸಿದ್ಧಪಡಿಸಬೇಕೆಂದರೆ ಸುತ್ತಲಿನ ಅವ್ಯವಸ್ಥೆಗೆ ಹೊಂದಿ ಕೊಂಡು ಗಪ್ ಚಿಪ್ಪಾಗಿರಬೇಕು. ಅದು ಆಗದ ಮಾತು. ಸಣ್ಣ ಕತೆಗಳನ್ನಾದರೂ  ಬರೆಯಬೇಕೆನಿಸುತ್ತದೆ. ಅದೂ ಸಾಧ್ಯ ವಾಗುತ್ತಿಲ್ಲ. ವ್ಯವಧಾನ ಬೇಕಲ್ಲ. ಹಾಗಾಗಿ, ಬರೆಯುವ ಅಂಕಣವನ್ನೇ ರಸವತ್ತಾಗಿ ಬರೆಯುವ ಮನಸ್ಸಾಗುತ್ತದೆ. ಲೇಖನಕ್ಕೆ ಆಯ್ಕೆ ಮಾಡಿಕೊಳ್ಳುವ ವಿಷಯಗಳೆಲ್ಲವೂ ದುಗುಡ ಮೂಡಿಸುವಂತಹದ್ದೇ.

ಖಾಸಗಿಯಾದ ವಿಚಾರಗಳನ್ನು ಅಂಕಣದಲ್ಲಿ ಪ್ರಸ್ತಾಪಿಸುವುದಕ್ಕೆ ನನಗೆ ಸರಿ ಕಾಣುವುದಿಲ್ಲ. ಇಂದು, ತೀರಾ ಖಾಸಗಿ ಯಾಯಿತೇನೊ. ರಾಷ್ಟ್ರೀಯ ಗ್ರಾಹಕ ದಿನ (ಡಿಸೆಂಬರ್ 24) ಮತ್ತು ವಿಶ್ವ ಗ್ರಾಹಕ ದಿನ (ಮಾರ್ಚ್ 15)ದ ನಡುವಿನಲ್ಲಿರುವು ದರಿಂದ ಈ ವಿಷಯದ ಬಗ್ಗೆ ಬರೆಯಬೇಕಾಯಿತು. ಎಂದಿನಂತೆ, ಈ ಲೇಖನವೂ ಅಪೂರ್ಣ.

ಸುಮಾರು ಹತ್ತು ದಿನ ಪರದಾಡಿ ಸ್ಥಳೀಯ ಪ್ರಾದೇಶಿಕ ಮುಖಸ್ಥರನ್ನು ಫೋನ್ ಮೂಲಕ ಸಂಪರ್ಕಿಸಲು ಪಟ್ಟ ಎಲ್ಲ ಪ್ರಯತ್ನ ಗಳು ವಿಫಲವಾಗಿ ಪುರುಸೊತ್ತು ಮಾಡಿಕೊಂಡು ಮುಖಾಮುಖಿ ಮಾತನಾಡಿದೆ. ಸೌಜನ್ಯದಿಂದ ಮಾತನಾಡಿ ಮತ್ತೊಮ್ಮೆ ಆಶ್ಚರ್ಯ ಹುಟ್ಟಿಸಿದ ಮುಖ್ಯಸ್ಥರು. ಸಮಸ್ಯೆ ಬಗೆಹರಿಯಿತೇ? ಉಹೂಂ. ಮೊನ್ನೆ ಪ್ರತಿಭಟನೆಯ ರೂಪದಲ್ಲಿ ಡಿಪಾಸಿಟ್ಟನ್ನು ಕ್ಲೋಸ್ ಮಾಡಿ ಬೇರೊಂದು ಬ್ಯಾಂಕಿಗೆ ಹಣ ರವಾನಿಸಿದೆ. ಬಿಸಿ ಮುಟ್ಟಿಸುವ ಮೇಲ್ ಕಳಿಸಿದೆ.

ಬ್ಯಾಂಕಿನಿಂದ ದೂರ ಉಳಿದು ನನ್ನ ಪ್ರತಿನಿಧಿಯೊಬ್ಬರನ್ನು ಕಳಿಸಿz. ಗ್ರಾಹಕನಿಗೆ ಚೈತನ್ಯ ತುಂಬಿರುವ ಹೊಸ ಕಾನೂನಿನಿಂದ ಹುರುಪುಗೊಂಡು ಗ್ರಾಹಕ ವೇದಿಕೆಯ ಮೆಟ್ಟಿಲು ಹತ್ತಿ ಆಗಿರುವ ನಷ್ಟಕ್ಕೆ ಪರಿಹಾರ ಪಡೆಯಬೇಕು.