ಸಂಗತ
ಡಾ.ವಿಜಯ್ ದರಡಾ
ಭೂಕುಸಿತದ ಭೀತಿ ವಯನಾಡಿನಿಂದ ಹಿಡಿದು ಹಿಮಾಲಯದವರೆಗೂ ಇದೆ. ಇದು ಒಂದು ಕಡೆಯಾದರೆ, ಅತ್ತ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧಕ್ಕೆ ಅಮೆರಿಕ ಕೂಡ ಪ್ರವೇಶ ಮಾಡಿದರೆ ಕತೆ ಏನಾಗುತ್ತದೆ ಎಂದು ಭಯವಾಗುತ್ತಿದೆ.
ಈ ಸಾವಿನ ರುದ್ರನರ್ತನ ಮತ್ತು ವಿನಾಶವನ್ನು ನೋಡಿ ತುಂಬಾ ವಿಚಲಿತನಾಗಿದ್ದೇನೆ. ಕೇರಳದ ವಯನಾಡಿನಲ್ಲಿ ಸಂಭವಿಸಿದ ಭಯಾನಕ ಭೂಕುಸಿತವು ೩೦೦ಕ್ಕೂ ಹೆಚ್ಚು ಮುಗ್ಧ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಇದೇ ವೇಳೆ, ಹಿಮಾಚಲ ಪ್ರದೇಶದಿಂದ ಹಿಡಿದು ಉತ್ತರಾಖಂಡದವರೆಗಿನ ಹಿಮಾಲಯದ ಪರ್ವತ ಶ್ರೇಣಿಯಲ್ಲಿ ಉಂಟಾಗುತ್ತಿರುವ ಭೂಕುಸಿತ ಕೂಡ ಭಯಹುಟ್ಟಿಸುವಂತಿದೆ. ಇಂಥ ಎಲ್ಲ ನೈಸರ್ಗಿಕ ದುರಂತಗಳಿಗೆ ಮೂಲಕಾರಣ ಸರಕಾರಗಳ ನಿರ್ಲಕ್ಷ್ಯ ಮತ್ತು ವಿವೇಚನೆರಹಿತ ಯೋಜನೆಗಳು ಎಂದು ಹೇಳುವುದರಲ್ಲಿ ನನಗೆ ಯಾವುದೇ
ಹಿಂಜರಿಕೆಯಿಲ್ಲ. ನಾನಿಲ್ಲಿ ನಿರ್ಲಕ್ಷ್ಯ ಎಂಬ ಪದ ಏಕೆ ಬಳಸುತ್ತಿದ್ದೇನೆ ಅಂದರೆ, ಒಂದಲ್ಲಾ ಒಂದು ದಿನ ಹೀಗಾಗುತ್ತದೆ ಎಂಬುದು ಸರಕಾರಗಳಿಗೆ ಹಿಂದೆಯೇ ಗೊತ್ತಿತ್ತು. ಆದರೂ ಅವು
ಅಪಾಯಕಾರಿ ಪ್ರದೇಶಗಳಲ್ಲಿ ಬದುಕುತ್ತಿರುವ ಜನರಿಗೆ ಇದರ ಬಗ್ಗೆ ಅರಿವು ಮೂಡಿಸಿ, ಎಚ್ಚರಿಕೆ ನೀಡಿ, ಅವರನ್ನು ಅಲ್ಲಿಂದ ಸ್ಥಳಾಂತರ ಮಾಡುವ ಕೆಲಸ ಮಾಡಲಿಲ್ಲ.
ಅದಕ್ಕೆ ಏಕೈಕ ಕಾರಣವೇನೆಂದರೆ, ಅವರು ಬಡವರು! ಈ ಪ್ರದೇಶಗಳಲ್ಲಿ ನೆಲ ಸಮತಟ್ಟು ಮಾಡಿ ಸೋಕಾಲ್ಡ್ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಹಾಗೂ ಕೃಷಿ ಚಟುವಟಿಕೆಯನ್ನು ವಿಸ್ತರಿಸಲು ಮರಗಳನ್ನು ಕಡಿಯಲಾಗುತ್ತಿತ್ತು. ವರ್ಷದಿಂದ ವರ್ಷಕ್ಕೆ ಈ ಸ್ಥಳಗಳು ಅಪಾಯದ ಮುನ್ಸೂಚನೆಯನ್ನು ಹೆಚ್ಚಿಸುತ್ತಾ ಹೋಗಿದ್ದವು. ಹಾಗಿರುವಾಗ ಅಲ್ಲಿ ವಾಸಿಸುವ ಬಡ ಜನರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬೇರೆ ಸ್ಥಳದಲ್ಲಿ ಮನೆಗಳನ್ನು ಕಟ್ಟಿಕೊಡಬಹುದಿತ್ತಲ್ಲವೇ? ಆದರೆ ದುರದೃಷ್ಟವಶಾತ್ ಯಾರೂ ಅದರ ಬಗ್ಗೆ ಯೋಚನೆಯನ್ನೇ ಮಾಡಲಿಲ್ಲ. ಏಕೆಂದರೆ ಯಾರಿಗೂ ಅಲ್ಲಿ ಬದುಕುತ್ತಿರುವ ಬಡ ಜನರ ಬಗ್ಗೆ ಕಳಕಳಿಯಿರಲಿಲ್ಲ!
ಇದು ನಮ್ಮ ದೇಶದ ಕತೆಯಾಯಿತು. ಈಗ ಒಮ್ಮೆ ಮಧ್ಯಪ್ರಾಚ್ಯದ ಕಡೆ ನೋಡೋಣ. ಅಲ್ಲಿ ಹಮಾಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಸಿಲುಕಿ ಜೀವಭಯದಿಂದ ನಡುಗುತ್ತಿರುವ ಸಾಮಾನ್ಯ ಪ್ಯಾಲೆಸ್ತೀನಿ ನಾಗರಿಕರ ಬಗ್ಗೆ ಯಾರೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಹಮಾಸ್‌ನವರು ಇಸ್ರೇಲ್ ಮೇಲೆ ದಾಳಿ ನಡೆಸಿದಾಗ ಅಕ್ಟೋಬರ್ ನಲ್ಲಿ ನಾನೊಂದು ಅಂಕಣ ಬರೆದಿದ್ದೆ. ಈ ಯುದ್ಧದಲ್ಲಿ ಅತಿಹೆಚ್ಚು ನಷ್ಟ ಅನುಭವಿಸುವವರು ಮುಗ್ಧ ಪ್ಯಾಲೆಸ್ತೀನಿ ಜನಸಾಮಾನ್ಯರು ಎಂದು ಅದರಲ್ಲಿ ಹೇಳಿದ್ದೆ. ಈಗ ಆಗುತ್ತಿರುವುದು ಕೂಡ ಅದೇ. ಪಾಪದ ಜನರು, ಏನೂ ತಪ್ಪು ಮಾಡಿಲ್ಲದ ಸಂಸಾರಸ್ಥರು ಕಷ್ಟ ಅನುಭವಿಸುತ್ತಿದ್ದಾರೆ.
ಗಾಜಾಪಟ್ಟಿಯಲ್ಲಿ ಹೆಚ್ಚುಕಮ್ಮಿ ೪೦,೦೦೦ ಪ್ಯಾಲೆಸ್ತೀನಿಯನ್ನರು ಹತ್ಯೆಯಾಗಿದ್ದಾರೆ. ೮೫,೦೦೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ಅತಿಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಯುದ್ಧಕ್ಕೆ ಕೊನೆಯೆಂಬುದೇ ಇರುವಂತೆ ಕಾಣಿಸುತ್ತಿಲ್ಲ. ಸದ್ಯಕ್ಕಂತೂ ಎರಡು ದೇಶಗಳ ನಡುವಿನ ಸಮಸ್ಯೆಗೆ ಪರಿಹಾರವೂ ತೋಚುತ್ತಿಲ್ಲ. ಈಗ ನೋಡಿದರೆ ಹಮಾಸ್‌ನ ಅತ್ಯುಚ್ಚ ರಾಜಕೀಯ ನಾಯಕ ಇಸ್ಮಾಯಿಲ್ ಹನಿಯೆ ಕೂಡ ಹತ್ಯೆಗೀಡಾಗಿದ್ದಾರೆ. ಅವರ ಹತ್ಯೆಯ ಬಳಿಕ ಎದ್ದಿರುವ ಪ್ರಶ್ನೆ: ಮುಂದೇನು? ಹನಿಯೆ ಹತ್ಯೆಯು ಇರಾನ್‌ಗೆ ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿದೆ. ಏಕೆಂದರೆ ಅವರು ಹತ್ಯೆಯಾಗಿದ್ದು ಇರಾನ್‌ನಲ್ಲಿ. ಅವರು ಇರಾನ್‌ಗೆ ಆ ದೇಶದ ಹೊಸ ಅಧ್ಯಕ್ಷ ಮಸೌದ್ ಪೆಜೆಷ್ಕಿಯಾನ್ ಅವರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಅತಿಥಿಯಾಗಿ ತೆರಳಿದ್ದರು. ಅದೇ ಸಮಾರಂಭಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕೂಡ ಭಾರತವನ್ನು ಪ್ರತಿನಿಧಿಸಿ ತೆರಳಿದ್ದರು.
ಸಮಾರಂಭದ ನಂತರ ಹನಿಯೆ ಅವರು ಇರಾನ್‌ನ ನೂತನ ಅಧ್ಯಕ್ಷರನ್ನು ಭೇಟಿಯಾಗಿ ಶುಭ ಕೋರಿದ್ದರು. ಬಳಿಕ ದೇಶದ ಅತಿಥಿಯಾಗಿ ಇರಾನ್ ನ ರಾಜಧಾನಿ ತೆಹರಾನ್‌ನಲ್ಲಿರುವ ಅತ್ಯಂತ ಭದ್ರತೆಯ ಮತ್ತು ದೇಶದ ಉತ್ಕೃಷ್ಟ ರಕ್ಷಣಾ ಪಡೆಯಾದ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕೋರ್‌ನವರ ತೀವ್ರ ಕಣ್ಗಾವಲಿನಲ್ಲಿದ್ದ ಪ್ರದೇಶದಲ್ಲಿ ಅವರು ತಂಗಿದ್ದರು. ಆದರೂ ಅವರನ್ನು ಹತ್ಯೆಗೈಯಲಾಯಿತು. ಇದರ ಜವಾಬ್ದಾರಿಯನ್ನು ಇಸ್ರೇಲ್ ಬಹಿರಂಗವಾಗಿ ಹೊತ್ತುಕೊಂಡಿಲ್ಲ. ಆದರೆ ಎಲ್ಲರೂ ಇದು ಇಸ್ರೇಲ್‌ನದೇ ಕೆಲಸ ಎಂದು ದೋಷಾರೋಪಣೆ ಮಾಡುತ್ತಿದ್ದಾರೆ. ಈ ಹಿಂದೆಯೂ ಹನಿಯೆನನ್ನು ಹತ್ಯೆಗೈಯಲು ನಾಲ್ಕು ಬಾರಿ ವಿಫಲ ಯತ್ನಗಳಾಗಿದ್ದವು. ಅವರ ಕುಟುಂಬದ ೧೦ ಸದಸ್ಯರನ್ನು ಹತ್ಯೆಗೈಯಲಾಗಿತ್ತು. ಆ ಹತ್ಯೆಯ ಹೊಣೆಯನ್ನು ಸ್ವತಃ ಇಸ್ರೇಲ್ ತೆಗೆದುಕೊಂಡಿತ್ತು. ಹನಿಯೆ ಹತ್ಯೆಯ ಬಳಿಕ ಇರಾನ್‌ನ ಪರಮೋಚ್ಚ ನಾಯಕ ಅಯೋತೊಲ್ಲಾ ಅಲಿ ಖೊಮೇನಿ ಹೇಳಿಕೆ ನೀಡಿ, ಹನಿಯೆ ಸಾವಿನ ಸೇಡು ತೀರಿಸಿಕೊಳ್ಳುವುದು ಇರಾನ್‌ನ ಆದ್ಯ ಕರ್ತವ್ಯ ಎಂದು ಹೇಳಿದ್ದರು.
ಇಸ್ರೇಲ್‌ನ ದಿನಪತ್ರಿಕೆಯೊಂದು ಮೂಲಗಳನ್ನು ಉಲ್ಲೇಖಿಸಿ ಮಾಡಿರುವ ವರದಿಯ ಪ್ರಕಾರ ಅಯೋತೊಲ್ಲಾ ಖೊಮೇನಿ ಈಗಾಗಲೇ ಇಸ್ರೇಲ್ ಮೇಲೆ ದಾಳಿ ನಡೆಸುವಂತೆ ಇರಾನ್‌ನ ಮಿಲಿಟರಿಗೆ ಆದೇಶ ನೀಡಿದ್ದಾರೆ. ಒಂದು ವೇಳೆ ಇರಾನ್ ಈ ಹತ್ಯೆಯ ಬಳಿಕ ಏನೂ ಮಾಡದೆ ಸುಮ್ಮನೆ ಕುಳಿತರೆ ಅದು ದುರ್ಬಲ ದೇಶ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್ ಆಗಬೇಕಾಗುತ್ತದೆ. ತಾನು ದುರ್ಬಲ ದೇಶವೆಂದು ಗುರುತಿಸಿಕೊಳ್ಳಲು ಇರಾನ್ ಗೆ ಬಿಲ್‌ಕುಲ್ ಇಷ್ಟವಿಲ್ಲ. ಇಷ್ಟೆಲ್ಲ ಆಗುತ್ತಿರುವಾಗ ಅಮೆರಿಕ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಅದು ಈಗಾಗಲೇ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯುವಂತೆ ಇರಾನ್ ಮೇಲೆ ಪರೋಕ್ಷವಾಗಿ ಒತ್ತಡ ಹೇರಲಾರಂಭಿಸಿದೆ.
ಅದೇ ವೇಳೆ, ಅಮೆರಿಕದ ರಕ್ಷಣಾ ಸಚಿವ ಲಾಯ್ಡ್ ಆಸ್ಟಿನ್ ಅವರು ಇರಾನ್‌ಗೆ ನೇರವಾದ ಎಚ್ಚರಿಕೆ ಕೂಡ ನೀಡಿದ್ದಾರೆ. ಒಂದು ವೇಳೆ ಇಸ್ರೇಲ್ ಮೇಲೇನಾದರೂ ಇರಾನ್ ದಾಳಿ
ಆರಂಭಿಸಿದರೆ ಇಸ್ರೇಲ್‌ನ ನೆರವಿಗೆ ಅಮೆರಿಕ ಧಾವಿಸಲಿದೆ ಎಂದು ಅವರು ಹೇಳಿದ್ದಾರೆ. ಇದರ ಅರ್ಥ, ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ಆರಂಭವಾದರೆ ಅಮೆರಿಕ ನೇರವಾಗಿ
ಮಧ್ಯಪ್ರವೇಶ ಮಾಡುತ್ತದೆ. ಅಂದರೆ ಅದೂ ರಣರಂಗಕ್ಕೆ ಇಳಿಯುತ್ತದೆ. ಈ ಸನ್ನಿವೇಶದಲ್ಲಿ ಚೀನಾದ ಪಾತ್ರವನ್ನೂ ಗಮನಿಸುವುದು ಮುಖ್ಯ. ಗಾಜಾಪಟ್ಟಿಯಲ್ಲಿ ನಡೆಯುತ್ತಿರುವ
ಹತ್ಯಾಕಾಂಡವನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಇತ್ತೀಚೆಗಷ್ಟೇ ಚೀನಾ ಹೇಳಿದೆ. ನನ್ನ ಪ್ರಕಾರ ಚೀನಾ ಇಂಥ ವಾಗ್ಯುದ್ಧದಲ್ಲಿ ತೊಡಗಿಸಿಕೊಳ್ಳಬಹುದೇ ಹೊರತು ಮಧ್ಯಪ್ರಾಚ್ಯದ
ಸಂಘರ್ಷದಲ್ಲಿ ಸ್ವತಃ ಪ್ರವೇಶ ಮಾಡಿ ಮೈಮೇಲೆ ಅಪಾಯ ಎಳೆದುಕೊಳ್ಳುವಂಥ ಕೆಲಸವನ್ನು ಮಾಡುವುದಿಲ್ಲ. ಹಾಗಿದ್ದರೆ ಹಮಾಸ್‌ಗೆ ಚೀನಾ ಆರ್ಥಿಕ ನೆರವು ನೀಡಲಿದೆಯೇ? ಅಂಥ ಸಾಧ್ಯತೆ ಹೆಚ್ಚಿದೆ.
ಈಗ ಮೂಡುವ ಇನ್ನೊಂದು ಪ್ರಶ್ನೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಸೌದಿ ಅರೇಬಿಯಾ ಏನು ಮಾಡುತ್ತದೆ? ಏಕೆಂದರೆ ಅದು ಮಧ್ಯಪ್ರಾಚ್ಯದ ಅತ್ಯಂತ ಪ್ರಬಲ ಮತ್ತು ಶ್ರೀಮಂತ ದೇಶಗಳಲ್ಲಿ
ಒಂದು. ಸೌದಿ ಅರೇಬಿಯಾ ಯಾವಾಗಲೂ ತಾನು ಮುಸ್ಲಿಂ ದೇಶಗಳಿಗೆ ನಾಯಕನಾಗಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದೆ. ಅದರ ಜತೆಗೆ ಅದು ಇಸ್ರೇಲ್ ಮತ್ತು ಅಮೆರಿಕದೊಂದಿಗೆ ಒಳ್ಳೆಯ ಸಂಬಂಧವನ್ನೂ ಇರಿಸಿಕೊಂಡಿದೆ. ಸದ್ಯದಲ್ಲೇ ಇಸ್ರೇಲ್ ಮತ್ತು ಸೌದಿ ಅರೇಬಿಯಾದ ನಡುವೆ ಶಾಂತಿ ಒಪ್ಪಂದವೊಂದು ಏರ್ಪಡುವುದಿದೆ. ವಿಶ್ವಸಂಸ್ಥೆಯಲ್ಲಿ ನಿಂತು ಇಸ್ರೇಲ್‌ನ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಕೂಡ ಇದನ್ನು ಹೇಳಿದ್ದರು. ‘ಇಸ್ರೇಲ್ ಮತ್ತು ಸೌದಿ ಅರೇಬಿಯಾ ನಡುವೆ ಶಾಂತಿ ಒಪ್ಪಂದ ಏರ್ಪಡುವುದು ಅನಿವಾರ್ಯ. ಅದರಿಂದ ಅರಬ್-ಇಸ್ರೇಲಿ ಸಂಘರ್ಷ ಕೊನೆಯಾಗುತ್ತದೆ. ತನ್ಮೂಲಕ ಇಸ್ರೇಲ್ ಮತ್ತು ಇನ್ನಿತರ ಅರಬ್ ದೇಶಗಳ ನಡುವಿನ ಸಂಬಂಧ ಸಹಜ ಸ್ಥಿತಿಗೆ ಬರುತ್ತದೆ. ಇದು ಪ್ಯಾಲೆಸ್ತೀನ್ ಜತೆಗೆ ಶಾಂತಿ ಸ್ಥಾಪನೆಯ
ಪ್ರಕ್ರಿಯೆಯನ್ನು ಮುಂದಕ್ಕೆ ಕೊಂಡೊಯ್ಯುವುದಕ್ಕೂ ನೆರವಾಗುತ್ತದೆ’ ಎಂದು ನೆತನ್ಯಾಹು ಹೇಳಿದ್ದರು. ಆದರೆ ಅಷ್ಟರಲ್ಲೇ ಇಸ್ರೇಲ್ ಮೇಲೆ ಹಮಾಸ್ ಭೀಕರ ದಾಳಿ ನಡೆಸಿ ಸಾವಿರಾರು ನಾಗರಿಕರನ್ನು ಕೊಂದುಹಾಕಿತು.
ಅಲ್ಲಿಗೆ, ಹಮಾಸ್‌ನಿಂದ ಸೌದಿ ಅರೇಬಿಯಾ ಅಂತರ ಕಾಯ್ದುಕೊಂಡಿದ್ದರೂ ಇಸ್ರೇಲ್ ಜತೆಗಿನ ಶಾಂತಿ ಸ್ಥಾಪನೆಯ ಸಾಧ್ಯತೆಗಳು ಧ್ವಂಸಗೊಂಡವು. ಇನ್ನೊಂದು ಕಡೆ, ಟರ್ಕಿಯ ಅಧ್ಯಕ್ಷ ರೀಸೆಪ್ ತಯ್ಯಿಪ್ ಎರ್ಡೋಗನ್ ಕೂಡ ‘ಅಗತ್ಯಬಿದ್ದರೆ ನಾವು ಇಸ್ರೇಲ್ ಮೇಲೆ ದಾಳಿ ನಡೆಸುತ್ತೇವೆ’ ಎಂದು ಹೇಳಿದ್ದಾರೆ. ಅದಕ್ಕೆ ಬಹಳ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಇಸ್ರೇಲ್, ‘ಅಂಥ ಯಾವುದೇ ದುಸ್ಸಾಹಸಕ್ಕೆ ಕೈಹಾಕಿದರೂ ನಿಮಗೆ ಸದ್ದಾಂ ಹುಸೇನ್‌ಗೆ ಆದ ಗತಿಯೇ ಬಂದೆರಗುತ್ತದೆ’ ಎಂದು ಹೇಳಿದೆ. ಇದರರ್ಥ ಇಷ್ಟೆ. ಎಂಥದೇ ಬೆದರಿಕೆಗೂ ಇಸ್ರೇಲ್ ಜಗ್ಗುವುದಿಲ್ಲ. ಅದು ಯಾರ ಮುಂದೆಯೂ ಮಂಡಿಯೂರುವುದಿಲ್ಲ. ಅಯ್ಯೋ ದೇವರೇ, ಈ ಪ್ರದೇಶಕ್ಕೆ ಅದೆಂಥಾ ದುರ್ಗತಿ ಬಂದೆರಗಿದೆಯೋ. ಯಾರೂ ಹೊಂದಾಣಿಕೆಗೆ ಸಿದ್ಧರಿಲ್ಲ. ಯಾರೂ ರಕ್ತಪಾತದ ಬಗ್ಗೆ
ತಲೆಕೆಡಿಸಿಕೊಳ್ಳುವುದಿಲ್ಲ.
ಮಧ್ಯಪ್ರಾಚ್ಯದ ಇತಿಹಾಸವೇ ಹಾಗಿದೆ. ನೀವೊಮ್ಮೆ ಹಿಂತಿರುಗಿ ನೋಡಿದರೆ, ಸದಾಕಾಲ ಈ ಪ್ರದೇಶ ರಕ್ತದ ಕಲೆಗಳನ್ನು ತೊಳೆಯುತ್ತಲೇ ದಿನ ದೂಡುತ್ತಾ ಬಂದಿದೆ. ಇರಾಕ್ ಯುದ್ಧ ನಿಮಗೆ
ನೆನಪಿರಬಹುದು. ಅದರಲ್ಲಿ ಲಕ್ಷಾಂತರ ಮುಗ್ಧ ಜನರು ಹತ್ಯೆಗೀಡಾಗಿದ್ದರು. ಇರಾಕ್‌ನ ಪ್ರಮುಖ ನಗರವಾದ ಮೊಸುಲ್ ಸಂಪೂರ್ಣ ಸ್ಮಶಾನವಾಗಿ ಮಾರ್ಪಟ್ಟಿದ್ದು ಅನೇಕರಿಗೆ ಇನ್ನೂ ಕಣ್ಣಿಗೆ
ಕಟ್ಟಿದಂತಿದೆ. ಈಗ ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಇರಾನ್, ಟರ್ಕಿ, ಲೆಬನಾನ್ ಹಾಗೂ ಅಮೆರಿಕ ಕೂಡ ಕೈಜೋಡಿಸಿದರೆ ಕತೆ ಏನಾಗಬಹುದು ಎಂಬುದನ್ನು
ಊಹಿಸಿ. ಖಂಡಿತ ಅಲ್ಲೊಂದು ಮಾರಣ ಹೋಮವೇ ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಧ್ಯಪ್ರಾಚ್ಯದ ಸಮುದ್ರಕ್ಕೆ ಇನ್ನಷ್ಟು ರಕ್ತ ಹರಿದು ಹೋಗುತ್ತದೆ.
ನನಗೆ ಸಾಹಿರ್ ಲೂಽಯಾನ್ವಿಯ ಸಾಲುಗಳು ನೆನಪಾಗುತ್ತವೆ: ‘ಜಂಗ್ ತೋ ಖುದ್ ಹಿ ಏಕ್ ಮಸ್ಲಾ ಹೈ, ಜಂಗ್ ಕ್ಯಾ ಮಸ್ಲೋಂ ಕಾ ಹಾಲ್ ದೇಗಿ! ಆಗ್ ಔರ್ ಖೂನ್ ಆಜ್ ಬಕ್ಷೇಗಿ, ಭೂಕ್
ಔರ್ ಎತಿಯಾಜ್ ಕಲ್ ದೇಗಿ!’ (ಯುದ್ಧವೇ ಒಂದು ದೊಡ್ಡ ಸಮಸ್ಯೆ, ಅದು ಯಾವ ಸಮಸ್ಯೆಗೆ ಪರಿಹಾರ ನೀಡುತ್ತದೆ! ಇಂದು ಬೆಂಕಿ ಉರಿಯುತ್ತದೆ, ರಕ್ತ ಹರಿಯುತ್ತದೆ, ಹಸಿವು ಹಾಗೂ ದುರ್ಭಿಕ್ಷ ನಾಳೆ ಬರುತ್ತದೆ!). ಇದನ್ನು ನೆನಪಿಸಿಕೊಳ್ಳುತ್ತಲೇ ನನ್ನಲ್ಲಿ ಮೂಡುವ ಭಾವನೆಗಳು ಈ ಸಾಲುಗಳನ್ನು ಇನ್ನಷ್ಟು ಬೆಳೆಸುತ್ತವೆ: ‘ಸಂಭಲ್ ಜಾವೋ ಮೌತ್ ಕೇ ಸೌದಾಗರೋ, ಮೌತ್ ಇನ್ಸಾನಿಯತ್ ಖಾತಿ ಹೈ, ಆಜ್ ಕಿಸಿ ಔರ್ ಕಿ ಬಾರಿ ಹೈ, ಕಲ್ ತುಮ್ಹೇ ಭಿ ನಿಗಲ್ ಲೇಗಿ!’ (ಹುಷಾರಾಗಿರಿ ಸಾವಿನ ವ್ಯಾಪಾರಿಗಳೇ, ಸಾವು ಮಾನವೀಯತೆಯನ್ನು ತಿನ್ನುತ್ತದೆ! ಇಂದು ಬೇರೆಯವರ ಸರದಿಯಿರಬಹುದು, ನಾಳೆ ನಿಮ್ಮ ಸರದಿಯೂ ಬರುತ್ತದೆ!!).
(ಲೇಖಕರು ಹಿರಿಯ ಪತ್ರಿಕೋದ್ಯಮಿ)