ಅಲೆಮಾರಿಯ ಡೈರಿ
ಸಂತೋಷಕುಮಾರ ಮೆಹೆಂದಳೆ
mehandale100@gmail.com
ಇದು ಎಲ್ಲ ಕಾಲಕ್ಕೂ ಸಲ್ಲುವ ಆಪ್ತವಾಗಬಹುದಾದ ತಾಣ. ತೀರ ಅಪಾಯಕಾರಿ ಕಣಿವೆ ಪ್ರದೇಶದಷ್ಟು ಇಂಟೀರಿಯರ್ ಕೂಡಾ ಇಲ್ಲ. ಸಹಜವಾಗಿ ವಾಹನಗಳೂ ತಲುಪಬಹುದಾದ, ಸಣ್ಣ ಕಾಲ್ನಡಿಗೆಯ ಅಂತರದ ದೂರವನ್ನು ಸುಲಭಕ್ಕೆ ಕ್ರಮಿಸಬಹುದಾದ ಹಿತವಾದ ಎತ್ತರದ ಪ್ರದೇಶ. ಎತ್ತರದ ಗಾಳಿ ಮರಗಳ ತೋಪು, ಸೂಚಿ ಪರ್ಣದ ಕಾಡಿನ ಭಾಗ ಮೇಲಕ್ಕೇರಿದಂತೆ ಗಾಢ ಹಸಿರಿನ ವರ್ಣಗಾವಲು ಹೀಗೆ ಲೆಕ್ಕ ತಪ್ಪಿ ಕಣಿವೆಯ ಅಂದ ಚೆಂದ ವನ್ನೆಲ್ಲ ತೆಕ್ಕೆಗೆಳೆದುಕೊಂಡಿರುವ ನೆಲಕ್ಕೆ ಕಾಲಿಡುವ ಜನರೇ ಇಲ್ಲದ ಅನಾಥತೆ ಸ್ಥಳೀಯರಿಂದಾಗಿ ಎನ್ನದೇ ಬೇರೆ ದಾರಿ ಇಲ್ಲ.
ಇಲ್ಲಿಯ ರಸ್ತೆಯ ಪಕ್ಕದಲ್ಲೂ ಹಿಮ ಬಿದ್ದಿರುತ್ತದೆ. ಅಷ್ಟೇ ವೇಗದಲ್ಲಿ ಶೀತವೂ ಸುರಿಯುತ್ತಿರುತ್ತದೆ. ಸಮುದ್ರ ಮಟ್ಟದಿಂದ ಸುಮಾರು 9000 ಅಡಿ ಎತ್ತರದಲ್ಲಿರುವ ಈ ಪ್ರದೇಶ ಕಾಶ್ಮಿರಕೊಳ್ಳದಲ್ಲಿ ಹೊಸ ಜನಾಕರ್ಷಕ ತಾಣವಾಗಿ ಬೆಳೆಯಬಹುದಿತ್ತು. ಆದರೆ ಪ್ರವಾಸಿಗರನ್ನು, ಹೊರ ರಾಜ್ಯದ ಇತರೆ ಜನಗಳನ್ನು ಕೇವಲ ಶ್ರೀನಗರ ಆಸುಪಾಸಿನ ಆರೆಂಟು ಸ್ಥಳಗಳಿಗೆ ಮಾತ್ರ ಸೀಮಿತ ಮಾಡಿ ಪ್ರವಾಸೋದ್ಯಮವನ್ನು ಕಾಯ್ದುಕೊಳ್ಳುತ್ತಿರುವ ಮತ್ತು ಇತರ ಪ್ರದೇಶಗಳನ್ನು ಹೈಡ್ ಆಗಿ ಉಳಿಸುತ್ತಿರುವ ಪ್ರವೃತ್ತಿಯಿಂದಾಗಿ ಶ್ರೀನಗರ ಸುತ್ತ ಮುತ್ತ ಮತ್ತು ಇತರೆ ಪ್ರದೇಶಗಳು ಯಶಸ್ವಿಯಾಗಿ ಕತ್ತಲ ಉಳಿಯುತ್ತಿವೆ.
ಯಾರೇ ಇವತ್ತು ಶ್ರೀನಗರ ಹೋಗಲಿ ಸೀದಾ ದಾಕ್, ಆಮೇಲೆ ಶಂಕರಾಚಾರ್ಯ ಪೀಠ, ಅಲ್ಲಿಂದ ಅವೇ ಒಂದೆರಡು ಮೊಘಲ್ ಗಾರ್ಡನ್‌ಗಳು, ಅದರಾಚೆಗೆ ಸೋನ್ಮಾರ್ಗ, ಗುಲ್ಮಾರ್ಗ್ ಸುತ್ತಲಿನ ಪ್ರದೇಶ, ಇನ್ನೂ ಮುಂದಕ್ಕೆ ಹೋದರೆ ಜಿಜೋಲಿ ಪಾಸ್ ಎನ್ನುವ ಡೆತ್ವ್ಯಾಲಿ, ಅಲ್ಲಿಂದಲೇ ಕಾಣುವ ಜಂಸ್ಕಾರ್ ತಿರುವು, ಅದರಾ ಚೆಗೆ ಮೇಲಕ್ಕೇರಿದರೆ ಲಢಾಕ್ ದಾರಿ ಹಿಡಿದು ಬಿಡುತ್ತೀರಿ. ಇಷ್ಟು ಬಿಟ್ಟರೆ ಮೂರನೆಯದಕ್ಕೆ ನಿಮ್ಮನ್ನು ಪರಿಚಯಿಸಿದರೆ ಕೇಳಿ. ಹಾಗಾದರೆ ಅದರ ಹೊರತಾಗಿ ಸಾವಿರಾರು ಕಿ.ಮೀ. ಉದ್ದಗಲದ ಕಣಿವೆ ರಾಜ್ಯದಲ್ಲಿ ಬೇರೆ ಜಾಗಗಳೇ ಇಲ್ಲವೇ.
ತೀರ ದುಡ್ಡು ದುಗ್ಗಾಣಿ ಖರ್ಚು ಮಾಡಿ ಬರುವ ವಿದೇಶಿಯರಿಗೆ ಮಾತ್ರ ಸಂದುಗೊಂದಿನಲ್ಲ ಒಯ್ದು ಕೂರಿಸೆಬ್ಬಿಸಿಕೊಂಡು ಬರುವ ಸ್ಥಳೀಯ ಟೂರ್ ಆಪರೇಟರ್‌ಗಳಿಗೆ ಭಾರತೀಯ ಪ್ರವಾಸಿಗರೆಂದರೆ ಯಾಕೆ ರಿಸರ್ವೇಶನ್ನು? ಹಾಗಾಗಿ ನಮಗೂ ಅಪರೂಪಕ್ಕೆ ಸಿಕ್ಕ ಪ್ರದೇಶ, ತೀರ ಹೆದ್ದಾರಿಗೆ ಆತು ಕೊಂಡಿ ರುವ ಆದರೆ ಯಾವ ಪ್ರವಾಸಿಗನ ಚಿತ್ತವನ್ನೂ ಅತ್ತ ಸೆಳೆಯದೆ ಬಿದ್ದುಕೊಂಡಿರುವ ಹಿಮ ಕಣಿವೆ ನಾಡಿನ ಕಣಿವೆ ಪ್ರದೇಶ ಥಾಮ್ಸೆವಾಜ್ ಕೂಡಾ ಒಂದು.
ಶ್ರೀನಗರದಿಂದ ಗಾಂಧಾರ ಬಾಲ ಮಾರ್ಗವಾಗಿ ಪಾರಿಂ ಪೋರಾ ಪ್ರದೇಶವನ್ನು ದಾಟಿ ಸುಮಾರು 60 ಕಿ.ಮೀ. ದೂರಕ್ಕೆ ಚಲಿಸಿದರೆ ಪರ್ವತ ಪ್ರದೇಶದ ಸೆರಗಿನಲ್ಲಿ ಹುದುಗಿರುವ ಈ ಪುಟ್ಟ ಹಳ್ಳಿ ಗೋಚರಿಸುತ್ತದೆ. ಸಾಕಷ್ಟು ವಿಶಾಲವಾದ ಮೈದಾನ ಪ್ರದೇಶ ಇದರ ಪ್ರಮುಖ ಆಕರ್ಷಣೆ. ಸಾಮಾನ್ಯವಾಗಿ ಹಿಮದಲ್ಲಿ ಆಡಲು ಯತ್ನಿಸುವ ಪ್ರವಾಸಿಗರಿಗೆ ಕೊಂಚವಾದರೂ ಎತ್ತರ ಏರಿ ಹೋಗಬೇಕಾದ ಅಗತ್ಯತೆ ಇದ್ದೇ ಇರುತ್ತದೆ.
ಆದರೆ ಥಾಮ್ಸೆವಾಜ್ ಎಂಬ ಈ ವಿಹಾರ ತಾಣದಲ್ಲಿ ಸುತ್ತಲೂ ಬೆಟ್ಟವನ್ನು ಆವರಿಸಿಕೊಂಡು ಮಧ್ಯದಲ್ಲಿ ಗುಳಿಯಂತೆ ಉಳಿದುಹೋದ ಜಾಗದಲ್ಲಿ ಆರಂಭದ ಹೇರಳವಾಗಿ ಹಿಮ ಬೀಳಲಾರಂಭಿಸುತ್ತದೆ. ಸಾಮಾನ್ಯವಾಗಿ ಎತ್ತರದ ಪರ್ವತದ ನೆತ್ತಿಗೆ ಆರಂಭಿಕ ದಿನಗಳಲ್ಲಿ ಹಿಮ ಸುರಿಯುತ್ತದೆ. ಕ್ರಮೇಣ ಅದರ ಒತ್ತಡ ಹೆಚ್ಚಿದಂತೆ ಕೆಳಗಿನ ಭಾಗಗಳಿಗೂ ತಲುಪುತ್ತದೆ. ಆದರೆ ಥಾಮ್ಸೆವಾಜ್ ಒಳ್ಳೆ ಬೋಗುಣಿಯಾಕಾರದ ವ್ಯಾಲಿ ಪ್ರದೇಶವಾಗಿದ್ದರಿಂದ ಆವರಿಸಿದ ಪರ್ವತಗಳ ಮಧ್ಯದಲ್ಲಿನ ಕಣವೆಗೆ ಆರಂಭದಿಂದಲೇ ಹಿಮ ಮತ್ತು ಮಂಜಿನ ಸುರಿತ ಲೆಕ್ಕದ ಹೊರಗಿರುತ್ತದೆ.
ಹಾಗಾಗಿ ಮಧ್ದ ಹಿಮದ ಮಡುಗಟ್ಟುವಿಕೆ ಜತೆಗೆ ಹೊರಭಾಗಕ್ಕೆ ರಸ್ತೆಯವರೆಗೂ ಅದರ ಹರಿವು ಕ್ರಮೇಣ ಆವರಿಸಿಕೊಳ್ಳುತ್ತದೆ. ಕೊಳ್ಳದ ಕಣಿವೆ ಮಂಜಿನ ಮಡುವಾಗಿ ಗೋಚರಿಸುತ್ತದೆ. ಥಾಮ್ಸೆವಾಜ್‌ನಲ್ಲಿ ಬಯಲು ಪ್ರದೇಶದವರೆಗೂ ಹಿಮ ಹರಿದು ಬರುತ್ತದೆ. ನವೆಂಬರ್ ಆರಂಭಕ್ಕೆ ಮೊದಲೇ ಅಕಸ್ಮಾತ ಮಳೆ ಏನಾದರೂ ಬಿದ್ದು ಬಿಟ್ಟರೆ ಮುಂದಿನ ಸಿಜನ್ ಪೂರ್ತಿ ಉಳಿದು ಹೋಗುವಂತೆ ಹಿಮದ ಗಾದಿ ಹಾಸಿಕೊಂಡು ಬಿಡುತ್ತದೆ. ಅಸಲಿಗೆ ಇಲ್ಲಿ ಯಾವಾ ಗಲೂ ಪರ್ವ ಕಾಲದಲ್ಲಿ ಹಿಮ ಬಿದ್ದೇ ಬೀಳುತ್ತದಾದರೂ ಕೂಡಾ ತುಂಬಾ ಕೆಳ ಮಟ್ಟಕ್ಕೆ ಆರಂಭದ ಹಿಮ ಬಂದು ತಲುಪುವುದು ಇಲ್ಲಿನ ವೈಶಿಷ್ಟ್ಯ. ಸ್ಥಳೀಯವಾಗಿ ಜನರ ಓಡಾಟ ಇಲ್ಲದಿರುವ ಮತ್ತು ಸಾಕಷ್ಟು ಪ್ರವಾಸಿಗರಿಗೆ ತೆರೆದುಕೊಳ್ಳದಿರುವ ಇಲ್ಲಿಗೆ ವಿದೇಶಿಗರನ್ನು ಕರೆ ತಂದು, ಅವರವರ ಖಾಸಗಿ ಆಸಕ್ತಿಗನುಗುಣವಾಗಿ ನಡುಗಡ್ಡೆಯ ಮೇಲೆ ಲಂಗರು ಹಾಕಿಕೊಡುತ್ತಾರೆ.
ಅಲ್ಲದೆ ಹೆಚ್ಚಿನ ಹಣಕ್ಕಾಗಿ ಸ್ಥಳೀಯ ಕೆಲವು ಟೂರ್ ಆಪರೇಟರ್‌ಗಳು ಆಫ್ಬೀಟ್ ಟ್ರಾವೆಲ್ ಮಾಡುವವರ ಒತ್ತಾಯಕ್ಕೂ, ಹಣದ ಆಸೆಗೂ ಇಲ್ಲಿಗೆ ಈಗೀಗ ಕರೆದೊಯ್ಯುತ್ತಿದ್ದಾರೆ. ಈಗೀಗ ಅಂದು ಇಂದು ಚಿತ್ರಗಳೂ ಕಾಣಿಸಿಕೊಳ್ಳತೊಡಗಿದೆ. ಸರಿ ಸುಮಾರು ಒಂದೂವರೆ ದಶಕದ ಹಿಂದೆ ಇಲ್ಲಿಗೆ ಕಾಲಿಟ್ಟಾಗ ಇನ್ನೂ ಮೊಬೈಲ್ ಹಾವಳಿ ಇರಲಿಲ್ಲ. ಡಿಜಿಟಲ್ ಕ್ಯಾಮೆರಾ ನಿಧಾನಕ್ಕೆ ಅಚ್ಚರಿಯ ಆಯ್ಕೆಯಾಗಿ ಕಣ್ಣು ಬಿಡುತ್ತಿದ್ದವು. ಕೊಡಾಕ್, ಕೊನಿಕಾ ಎಂದು
ಪುಳಕಗೊಂಡು ಉಚ್ಚರಿಸುತ್ತಿದ್ದ ರೋಲ್ ಕ್ಯಾಮೆರಾಗಳದ್ದೇ ಧೀಮಾಕಿನ ಕಾಲ ಅದು. ಲೆಕ್ಕ ಹಾಕಿ ಚಿತ್ರಿಸುವ ದರ್ದು ಬೇರೆ. ರೋಲ್ ಹಾಕುವ ಕ್ಯಾಮೆರಾದ್ದೇ ಸಾಮ್ರಾಜ್ಯ ನೆಲೆಗೊಂಡ ಕಾಲಾವಧಿಯಲ್ಲಿ ಅವಕಾಶ ಸಿಕ್ಕಿದ್ದರಿಂದ, ಗುರುತು ಹೇಳಿ ದಾರಿಯ ಮೇಲೆ ಇಳಿಸಿ ಹೋದವನಿಗೆ ಥ್ಯಾಂಕ್ಸು ಹೇಳುತ್ತಲೆ ಆರೆಂಟು ಕಿ.ಮೀ. ನಡೆದೇ ತಲುಪಿದ್ದೆ.
ಆಗ ಒಂದು ಸುತ್ತು ಕಾಲಿಕ್ಕಿದ್ದು ಬಿಟ್ಟರೆ ನಂತರದ ಯಾವ ಭೇಟಿಯಲ್ಲೂ ನನಗೂ ಆಚೆಗೆ ಹೋಗುವುದಾಗಲಿಲ್ಲ. ಥಾಮ್ಸೆವಾಜ್ ಇವತ್ತಿಗೂ ಬೇರೆ ರೂಪದಲ್ಲೂ ಹೆಸರಿನಲ್ಲೂ ಪ್ರವಾಸಿಗರಿಗೆ ತೆರೆದುಕೊಂಡಿರಬಹುದು. ಹಾಗಾಗೇ ಶ್ರೀನಗರ ದರ್ಶಿಸುವ ಪ್ರಯಾಣಿಕರು ಈಗೀಗ ಈ ಪ್ರದೇಶಕ್ಕೂ ಭೇಟಿ ಕೊಡುತ್ತಿದ್ದಾರೆ. ತುಂಬಾ ಎತ್ತರಕ್ಕೆ ಹೋಗಬೇಕಿಲ್ಲದ ಅಷ್ಟೆ ಸೇ-ದ ಸ್ಥಳವಾಗಿರುವ ಥಾಮ್ಸೆವಾಜ್ ಮೂಲಭೂತ ಸೌಲಭ್ಯವನ್ನು ಹೊಂದ ಬೇಕಾಗಿರು ವುದೂ ಅಷ್ಟೆ ಅವಶ್ಯಕವಾಗಿದೆ. ಕಾರಣ ಶ್ರೀನಗರದಿಂದ ಹೊರಡುವ ಪ್ರವಾಸಿಗರಿಗೆ ಬೆಳಗಿನ ಜಾವ ಎಲ್ಲೂ ತಿಂಡಿ ತಿನಿಸುಗಳು ಲಭ್ಯ ವಾಗುವುದಿಲ್ಲ.
ಸಾಮಾನ್ಯವಾಗಿ ಶ್ರೀನಗರದಲ್ಲಿ (ಜನರಿಗೆ) ಬೆಳಗಾಗುವುದೇ ಏಳೆಂಟು ಗಂಟೆ ನಂತರ. ಅದರಲ್ಲೂ ಅಕಸ್ಮಾತ ಕೊಂಚ ರಾಜಕೀಯ ಚಟುವಟಿಕೆ ಗಳೆನಾದರೂ ನಡೆದು ಬಿಟ್ಟರೆ ಅಷ್ಟೆ. ಆವತ್ತು ಮಾರ್ಕೆಟ್ ಸೇರಿದಂತೆ ಜನಜೀವನ ಪೂರ್ತಿ ಸಂಜೆ ೬ ಗಂಟೆಯ ಹೊತ್ತಿಗೆ ಅಕ್ಷರಶಃ ಮುಚ್ಚಿಬಿಡುತ್ತವೆ. ಮರುದಿನ ಬೆಳಿಗ್ಗೆ ಪರಿಸ್ಥಿತಿಯನ್ನು ಗಮನಿಸಿ ಅಂಗಡಿ ಮುಂಗಟ್ಟುಗಳು ತೆರೆಯಲಾರಂಭಿಸುತ್ತವೆ. ಅಂಗಡಿಗಳಿಗಾದರೆ ಯಾವುದೇ ತಯಾರಿ ಬೇಕಿಲ್ಲ. ಅದೇ ಹೋಟೆಲ್ ಇತ್ಯಾದಿಗಳಿಗೆ ಪೂರ್ವ ತಯಾರಿಯ ಅಗತ್ಯ ಇರುವುದರಿಂದಾಗಿ ಅವರುಗಳು ಪರಿಸ್ಥಿತಿಗೆ ಸಜ್ಜಾಗಿಲ್ಲದಿದ್ದರೆ ಬೆಳಗಾಗುವುದು ಎಂಟು ಗಂಟೆಯಾಗುತ್ತದೆ.
ಇದು ಮುಖ್ಯ ಶ್ರೀನಗರದ ಕಥೆಯಾದರೆ ಅದೇ ಕೊಂಚ ನಗರದಿಂದ ಹೊರಗಿನ ಪ್ರದೇಶಗಳದ್ದಂತೂ ಕೇಳುವುದೇ ಬೇಡ. ಅವರಿಗೆಲ್ಲಾ ಕನಿಷ್ಠ ಗಂಟೆ ಹತ್ತಾದರೂ ಆಗಬೇಕು. ಅದರಲ್ಲೂ ಇಂಥಾ ಹೊರಭಾಗಗಳಿಗೆ ದೇವರೂ ಕಾಲಿಡುವುದಿಲ್ಲ. ಬಾಕಿ ವ್ಯವಸ್ಥೆ ಎಲ್ಲಿಂದ ಬರಬೇಕು? ಇಂಥದ್ದನ್ನು ನಿರೀಕ್ಷಿಸದ ಪ್ರವಾಸಿಗ ಬಂದು ಶ್ರೀನಗರದಲ್ಲಿ ಸೇರಿಕೊಂಡರೆ ರಾತ್ರಿ ಊಟವಿಲ್ಲದೆ ಕಳೆಯಬೇಕಾಗುತ್ತದೆ. ನಾವಿದ್ದ ಹೋಟೆಲಿನವ ಕೊನೆಗೆ ತನ್ನದೇ ಮನೆಯಿಂದ ರೋಟಿ ಮತ್ತು ದಾಲ್ ಮಾಡಿ ತಂದು ಬಡಿಸಿದ್ದ. (ದಿ.10.11.2004. ಸ್ಥಳಿಯ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಶ್ರೀನಗರ ಬಂಗ್‌ಗೆ ಕರೆ ಕೊಟ್ಟ ದಿನ ಅದು.
ಆವತ್ತು ಹಿಂದಿರುಗುವ ಹೊತ್ತಿಗೆ ಮುಖ್ಯ ರಸ್ತೆಗೆ ಬೆಂಕಿ ಬಿದ್ದಿತ್ತು.) ಆದ್ದರಿಂದಾಗಿ ಈ ರೀತಿಯ ಇನ್ನು ಅಷ್ಟಾಗಿ ಅಭಿವೃದ್ಧಿ ಹೊಂದಿರದ ಥಾಮ್ಸೆವಾಜ್ ನಂಥ ಪ್ರದೇಶದಲ್ಲಿ ಹೋಟೆಲ್‌ಗಳು ಸಿಗುವುದು ಅಪರೂಪ. ಈಗ ಹೇಗಿದೆ ಗೊತ್ತಿಲ್ಲ. ಅಷ್ಟಕ್ಕೂ ಆ ಪ್ರದೇಶ ಪ್ರವಾಸಿಗಳಿಗೆ ಸಾಕಷ್ಟು ಆಕರ್ಷಣಿಯವಾಗಿ ಕಂಡರೂ ಅದು ಬೆಳೆಯುವುದು ಅಷ್ಟರ ಇದೆ ಅನ್ನಿಸುತ್ತದೆ. ಯಾಕೆಂದರೆ ಪಕ್ಕದ ಎಲ್ಲಿ ನೋಡಿದರೂ ಬೇಲಿಗಳನ್ನು ಹುಗಿದು ಕೋಟೆಯಂತೆ ಚೌಕ ಗಳನ್ನು ಕಟ್ಟಿಕೊಂಡು ಕೂತ ಭಾರತೀಯ ಮಿಲಿಟರಿ ಒಂದು ಕಡೆಗೆ ಪೂರ್ತಿ ಆವರಿಸಿಕೊಂಡು ಬೀಡು ಬಿಟ್ಟಿದೆ.
ಥಾಮ್ಸೆವಾಜ್‌ನ ಪ್ರದೇಶದಲ್ಲಿ ನಿಸರ್ಗ ನೋಡಲು ನಿಂತಾಗ ಬರಿ ಮಿಲಿಟರಿ ಪೊಷಾಕೇ ಕಂಡು ಬರುತ್ತದೆ. ಹೋಗಲಿ ಅಷ್ಟು ದೂರದ ಹಿಮದಲ್ಲಿ ಆಡುತ್ತಾ ಅತ್ತ ಸಾಗೋಣ ಎಂದರೆ ಕೊಂಚ ದೂರದಲ್ಲಿ ಅಲ್ಲೂ ಶಸಾಸಗಳು ಕಣ್ಣಿಗೆ ರಾಚುತ್ತವೆ. ಹಾಗಾಗಿ ತುಂಬಾ ಕಡಿಮೆ ಜನವಸತಿಯ ಈ ಪ್ರದೇಶ ದಲ್ಲಿ ಎಲ್ಲವೂ ವಿರಳವೇ. ಅದ್ಯಾಕೆ ಹೀಗೆ ಅಂದರೆ ಅತ್ತ ಕಡೆಯ ಬೆಟ್ಟ ದಾಟಿದರೆ ಪಾಕಿಸ್ತಾನ್ ಬಾರ್ಡರು, ಪಕ್ಕದ ಹರಿದು ಬರುತ್ತಿರುವ ಸಿಂಧೂ ನದಿ ಇ ಪಕ್ಕದಲ್ಲಿ ಹಾದು ಹೋಗುತ್ತಿದೆ. ಆಗೀಗೊಮ್ಮೆ ರಾತ್ರಿಯ ಹೊತ್ತು ಶೆಲ್ಲು ಸಿಡಿಯುವುದು ಕೇಳಿಸುತ್ತಲೇ ಇರುತ್ತದೆ. ಅದೆಲ್ಲಕ್ಕೂ ಮಿಗಿಲಾಗಿ ಪಾಕಿ ಪ್ರೇರಿತ ಪಾತಕಿಗಳು ಇಂಥ ಕೊರಕಲಿನಿಂದಲೇ ಎದ್ದು ಬರೋದು.
ಹೀಗಿದ್ದಾಗ ಎಲ್ಲೂ ಪ್ರವಾಸಿಗರ ಮಧ್ಯದಲ್ಲೂ ಮಿಲಿಟರಿ ನೆಲೆ ನಿಲ್ಲದೇ ಏನು ಮಾಡೀತು. ಶ್ರೀನಗರ ಸುತ್ತ ಮುತ್ತಲ ಪ್ರದೇಶಗಳಾದ ಗುಲ್ಮಾರ್ಗ್ ಮತ್ತು ಸೋನ್ಮಾರ್ಗ್‌ಗಳಂಥ ಪ್ರದೇಶಗಳಿಗೆ ಸಾಮಾನ್ಯವಾಗಿ ಭೇಟಿ ನೀಡುತ್ತಾರಾದರೂ ಉಳಿದು ಹೋಗುವ ಇಂಥ ಪ್ರದೇಶಗಳು ಪ್ರವಾಸಿಗರ ಹಾಗೂ ಟೂರ್ ಆಪರೇಟರ್ಸ್‌ಗಳ ಪಟ್ಟಿಯಲ್ಲೂ ಜಾಗ ಪಡೆಯದೇ ಉಳಿಯುವುರಿಂದ ಹೊರ ಜಗತ್ತಿಗೆ ಪರಿಚಯವಾಗದೆ ಉಳಿದು ಬಿಡುತ್ತವೆ.