Tuesday, 26th November 2024

ಸರಕಾರಿ ಶಾಲೆಗಳಿಗೆ ಈಗ ಡಿಮಾಂಡಪ್ಪೋ ಡಿಮಾಂಡು

ಅಭಿವ್ಯಕ್ತಿ

ಮರಿಲಿಂಗೇಗೌಡ

marilingagowdampatil@gmail.com

ರಾಜ್ಯದಲ್ಲಿ ಪವಾಡ ಸಂಭವಿಸಿದೆ!

ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸಿದರೆ ಮಾತ್ರವೇ ಅವರಿಗೆ ಭವಿಷ್ಯ ಇರುವುದು ಎಂದು ಭಾವಿಸಿದ್ದ ಅನೇಕ ಪೋಷಕರು ಖಾಸಗಿ ಶಾಲೆಗಳನ್ನು ಮರೆತು ಸರಕಾರಿ ಶಾಲೆಗಳತ್ತ ದೌಡಾಯಿಸುತ್ತಿದ್ದಾರೆ. ಬೆಂಗಳೂರಿನ ನೆಲಗದರನಹಳ್ಳಿಯ ಸರಕಾರಿ ಶಾಲೆಯಲ್ಲಿ ಸೀಟ್ ಕೊಡಿಸುವಂತೆ ಒಬ್ಬ ಸಚಿವರು
ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ. ಕಮಲಾ ನಗರದ ಸರಕಾರಿ ಶಾಲೆಗೆ ಇದ್ದಕ್ಕಿದ್ದಂತೆ ಡಿಮಾಂಡ್ ಬಂದಿದೆ.

ಕಳೆದ 15 ದಿನಗಳಲ್ಲಿ 16 ಲಕ್ಷ ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲು ಮಾಡಲಾಗಿದೆ. ಇದು ಪವಾಡವಲ್ಲದೇ ಇನ್ನೇನು? ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸಬೇಕು ಎನ್ನುವ ಮನೋಭಾವ ಪೋಷಕರಿಗೆ ಇದ್ದರೆ ಅದನ್ನು ತಪ್ಪು ಎನ್ನುವಂತಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎನ್ನುವ ಮನೋಭಾವನೆ ಪೋಷಕರಿಗೆ ಇದ್ದರೆ ಅದು ಸ್ವಾಗತಾರ್ಹ.

ಇದನ್ನೇ ಬಂಡವಾಳವಾಗಿಸಿಕೊಂಡು ಖಾಸಗಿ ಶಾಲೆಗಳು ಪೋಷಕರನ್ನು ಸುಲಿಯುತ್ತಿರುವ ಪರಿ ಮಾತ್ರ ಅಕ್ಷಮ್ಯ. ಆದರೂ ಪೋಷಕರು ಕಮಕ್ ಕಿಮಕ್ ಎನ್ನದೆ ಎಲ್ಲವನ್ನೂ ಸಹಿಸಿಕೊಂಡು ಮಕ್ಕಳ ಭವಿಷ್ಯತ್ತು ಎನ್ನುವ ಒಂದೇ ಕಾರಣಕ್ಕೆ ತಾವು ಸಂಪಾದಿಸಿದ್ದರ ಸಿಂಹಪಾಲು ಹಣವನ್ನು ಖಾಸಗಿ ಶಾಲೆಗಳಿಗೆ ಸುರಿಯು ತ್ತಿದ್ದರು. ಆದರೆ ಎಲ್ಲರ ಸಹನೆಗೂ ಒಂದು ಮಿತಿ ಇರುತ್ತದೆ. ಬಹುಶಃ ಈಗ ಪೋಷಕರ ತಾಳ್ಮೆಯ ಕಟ್ಟೆ ಒಡೆದಿರಬೇಕು. ಸರಕಾರದ್ದು ಅಂದರೆ ಕಳಪೆ, ಖಾಸಗಿಯವರದು ಅಂದರೆ ಗುಣಮಟ್ಟ – ಈ ಭಾವನೆ ಜನರ ಮನದಲ್ಲಿ ಅಚ್ಚೊತ್ತಿ ಕುಳಿತಿದೆ. ಕೆಲವು ಸಂದರ್ಭಗಳಲ್ಲಿ ಅದು ಸತ್ಯವೂ ಆಗಿರಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಗಳಲ್ಲಿ ಬದಲಾವಣೆಗಳಾಗಿವೆ.

ಒಳ್ಳೆಯ ಗುಣಮಟ್ಟದ ಶಿಕ್ಷಣ ಅಲ್ಲಿಯೂ ದೊರೆಯುತ್ತಿದೆ. ಆದರೆ ಖಾಸಗಿ ಶಾಲೆಗಳ ಸೆಳೆತಕ್ಕೆ ಒಳಗಾದ ಪೋಷಕರಿಗೆ ಅತ್ತ ನೋಡಲೂ ಮನಸ್ಸಿರಲಿಲ್ಲ. ಹಾಗಿದ್ದೂ ಇತ್ತೀಚಿನ ಕೆಲವು ವರ್ಷಗಳಲ್ಲಿ ಹಲವು ಪೋಷಕರಿಗೆ ಜ್ಞಾನೋದಯವಾಗಿತ್ತು. ‘ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಎನ್ನುವ ನೆಪದಲ್ಲಿ ತಾವು ಕಳೆದುಕೊಳ್ಳುತ್ತಿರುವುದು ಏನು ಎನ್ನುವುದರ ಅರಿವಾಗತೊಡಗಿತ್ತು. ಶಿಕ್ಷಣದ ರಾಷ್ಟ್ರೀಕರಣವಾಗಬೇಕು ಎನ್ನುವ ಮಾತು  ಅಲ್ಲಲ್ಲಿ ಕೇಳಿಬರತೊಡಗಿತ್ತು. ಆದರೆ ಅದಕ್ಕೊಂದು
ಸ್ಪಷ್ಟವಾದ ರೂಪ ದೊರೆತಿರಲಿಲ್ಲ. ಅದನ್ನು ತಂದುಕೊಟ್ಟದ್ದು ಕರೋನಾ. ಖಾಸಗಿ ಶಾಲೆಯೊಂದರ ವಿದ್ಯಾರ್ಥಿಯ ಪೋಷಕರಿಗೆ ಶಾಲೆಯಿಂದ ಮೆಸೇಜ್ ಬಂದಿದೆ. 9ನೇ ತರಗತಿ ಪಾಸಾಗಿರುವ ವಿದ್ಯಾರ್ಥಿಯ ಕಳೆದ ಶೈಕ್ಷಣಿಕ ವರ್ಷದ ಫೀಸ್ ಕಟ್ಟಿ ಎಂದು. ಕಟ್ಟಬೇಕಾದ ಹಣ ಒಟ್ಟು 52 ಸಾವಿರ ರುಪಾಯಿಗಳು.

ಮೆಸೇಜ್ ನೋಡಿದ ಪೋಷಕರು ಹೌಹಾರಿದ್ದಾರೆ. ಕರೋನಾ ಕಾಲದಲ್ಲಿ ಲಾಕ್‌ಡೌನ್‌ನಿಂದಾಗಿ ಮೊದಲೇ ಒಂದು ರುಪಾಯಿ ಉತ್ಪತ್ತಿ ಇಲ್ಲ. ಸಂಸಾರ
ನಡೆಸುವುದೇ ಕಷ್ಟವಾಗಿದೆ. ಇಂಥ ಸಂದರ್ಭದಲ್ಲಿ 9ನೇ ತರಗತಿ ಪಾಸಾದ ಮಗುವಿಗೆ 52 ಸಾವಿರ ರು. ಫೀಸ್ ಕಟ್ಟಬೇಕು, ಪದವಿಗೆ ಸೇರಲಿರುವ ಮಗುವಿಗೆ
ಒಂದು ಲಕ್ಷಕ್ಕೂ ಹೆಚ್ಚು ಕಟ್ಟಬೇಕು. ಇಷ್ಟೊಂದು ಹಣ ಕಟ್ಟಿ ಮಕ್ಕಳನ್ನು ಓದಿಸುವುದು ಹೇಗೆ? ಬದುಕುವುದು ಹೇಗೆ? ಲಾಕ್‌ಡೌನ್‌ನಿಂದಾಗಿ ಆದಾಯವೇ ಇಲ್ಲದ
ಇಂಥ ಸಂದರ್ಭದಲ್ಲಿಯೂ ಖಾಸಗಿ ಶಾಲೆಗಳಿಗೆ ಕರುಣೆ ಎನ್ನುವುದೇ ಇಲ್ಲವೇ? ಸ್ವಲ್ಪವಾದರೂ ರಿಯಾಯಿತಿ ತೋರಿಸಬಾರದೆ? ಫೀಸ್ ಕಟ್ಟುವುದು
ಸಾಧ್ಯವಿಲ್ಲದಿದ್ದರೆ ಟಿ.ಸಿ. ತೆಗೆದು ಕೊಂಡು ಹೋಗಿ ಎನ್ನುವ ಉತ್ತರ ಸಿದ್ಧವಿದೆ.

ಇನ್ನೊಂದು ಶಾಲೆಯೂ ಸುಲಿಗೆಗೆ ಸಿದ್ಧವಾಗಿ ನಿಂತಿರಬಹುದಾದ ಈ ಕಾಲದಲ್ಲಿ ಟಿ.ಸಿ. ತೆಗೆದುಕೊಂಡು ಹೋದರೆ ಬಾಣಲೆಯಿಂದ ಬೆಂಕಿಗೆ ಬಿದ್ದಂತೆಯೇ ಅಲ್ಲವೇ? ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗೆ ಇದನ್ನೆಲ್ಲಾ ಯೋಚಿಸುವ ಅಗತ್ಯವೇ ಇರಲಿಲ್ಲ. ಟಿ.ಸಿ. ತೆಗೆದುಕೊಂಡು ಹೋಗಿ ಎನ್ನುವ ಟ್ರಂಪ್ ಕಾರ್ಡ್‌ಗೆ ಯಾರೇ ಆದರೂ ತಲೆಬಾಗುತ್ತಾರೆ ಎಂದು ಅವರಿಗೆ ತಿಳಿದಿತ್ತು. ತಮ್ಮ ಜಮೀನು ಮಾರಿ, ಒಡವೆಗಳನ್ನು ಅಡವಿಟ್ಟು ಮಕ್ಕಳ ವಿದ್ಯಾಭ್ಯಾಸಕ್ಕೆ
ಪೋಷಕರು ಹಣ ಹೊಂದಿಸುತ್ತಾರೆ ಎನ್ನುವುದು ಅವರಿಗೆ ಗೊತ್ತಿಲ್ಲದ ವಿಷಯವೇನೂ ಅಲ್ಲ. ಇಂಥ ದಬ್ಬಾಳಿಕೆಯ ಮನಸ್ಥಿತಿ ಖಾಸಗಿ ಶಾಲೆಗಳದ್ದು.

ಮ್ಯಾನೇಜ್‌ಮೆಂಟ್ ಹೇಳಿದಷ್ಟು ಡೊನೇಷನ್, ಫೀಸ್ ಕಟ್ಟಲೇಬೇಕು. ಟ್ಯೂಷನ್ ನೆಪದಲ್ಲಿ ಮತ್ತೊಮ್ಮೆ ಹಣ ಕೊಡಬೇಕಿತ್ತು. ಸಮವಸ್ತ್ರ, ಪುಸ್ತಕಗಳ ಬಾಬತ್ತು ಇನ್ನೊಂದಷ್ಟು ಖರ್ಚು ತಲೆಗೆ ಬರುತ್ತಿತ್ತು. ಇಷ್ಟೆಲ್ಲ ಇದ್ದರೂ ಮಕ್ಕಳ ಭವಿಷ್ಯತ್ತು, ಸಂಬಂಧಿಕರ ಮುಂದೆ ತಮ್ಮ ಪ್ರತಿಷ್ಠೆಯ ಪ್ರಶ್ನೆ ಇತ್ಯಾದಿ ಹಲವು ಕಾರಣಗಳು ಗುಪ್ತಗಾಮಿನಿಯಾಗಿ ಪೋಷಕರನ್ನು ಕಾಡುತ್ತಲೇ ಇತ್ತು. ಇತ್ತೀಚೆಗೆ ನಡೆದ ಘಟನೆಯೊಂದನ್ನು ಇಲ್ಲಿ ನೆನಪಿಸುವುದು ಖಂಡಿತ ಅನುಚಿತವಲ್ಲ. ಮೂರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗುವಿರುವ ತಂದೆ ತನ್ನ ಹಿರಿಯ ಮೂವರು ಮಕ್ಕಳನ್ನು ಖಾಸಗಿ ಶಾಲೆಯಲ್ಲಿ ಓದಿಸುತ್ತಿದ್ದರು. ಕೊನೆಯ ಮಗಳನ್ನು ಆರ್ಥಿಕ ಸಮಸ್ಯೆಯ ಪರಿಣಾಮವಾಗಿ ಪಿಯುಸಿಗೆ ಸರಕಾರಿ ಕಾಲೇಜಿಗೆ ಸೇರಿಸಿದ್ದರು.

ಆಕೆ ತನ್ನನ್ನೂ ಖಾಸಗಿ ಕಾಲೇಜಿಗೆ ಸೇರಿಸಿ ಎಂದು ದುಂಬಾಲು ಬಿದ್ದಾಗ ಈಗ ಆರ್ಥಿಕ ತೊಂದರೆ ಇದ್ದು, ಪದವಿಗೆ ಖಾಸಗಿ ಕಾಲೇಜಿಗೆ ಸೇರಿಸುತ್ತೇನೆ ಎಂದು ಭರವಸೆ ನೀಡಿದರು. ಆದರೆ ಇದನ್ನು ಸಹಿಸದ ಆಕೆ ಆತ್ಮಹತ್ಯೆ ಮಾಡಿಕೊಂಡಳು. ಮಗಳ ಅಗಲಿಕೆಯನ್ನು ಸಹಿಸದ ತಂದೆಯೂ ಆತ್ಮಹತ್ಯೆ ಮಾಡಿಕೊಂಡರು. ಖಾಸಗಿ ಶಾಲೆಗೆ ಹೋಗದಿರುವುದು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗುವಂತ ಮನಸ್ಥಿತಿ ಸಮಾಜದಲ್ಲಿ ಇದೆ ಎಂದಾದರೆ ಅದಕ್ಕೆ ಸರಕಾರದ ಹೊಣೆಗಾರಿಕೆ ಎಷ್ಟು ಎನ್ನುವುದು ಶಿಕ್ಷಣ ಸಚಿವರು ಚಿಂತಿಸಬೇಕಾದ ವಿಚಾರ.

ಇಷ್ಟೆಲ್ಲಾ ಕಷ್ಟಪಟ್ಟು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುವ ಬದಲು ಸರಕಾರಿ ಶಾಲೆಗಳಿಗೆ ಕಳುಹಿಸಬಹುದಲ್ಲ ಎಂದು ಕೇಳಿದರೆ ಪೋಷಕರಿಂದ ಗುಣಮಟ್ಟ ಎನ್ನುವುದರ ಹೊರತಾದ ಇನ್ನೊಂದು ಮಾತು ಬರುವುದಿಲ್ಲ. ಸರಕಾರಿ ಶಾಲೆಗಳಿಗೆ ಕಳುಹಿಸಿದರೆ ಏನು ಲಾಭ ಎನ್ನುವುದು ಬಹುತೇಕ ಪೋಷಕರಿಗೆ ಗೊತ್ತಿಲ್ಲ. ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಅಪರಿಮಿತವಾದ ಸೌಲಭ್ಯಗಳು ದೊರೆಯುತ್ತವೆ. ವಾರದ ಐದು ದಿನ ಕ್ಷೀರಭಾಗ್ಯ ಹಾಲು, ಮಧ್ಯಾಹ್ನದ ಊಟ, ಶಾಲೆಗೆ ಹೋಗಲು ಸೈಕಲ್, ಪುಸ್ತಕಗಳು, ಸ್ಕಾಲರ್‌ಶಿಪ್, ಒಂದರಿಂದ ಒಂಭತ್ತನೆಯ ತರಗತಿಯವರೆಗೆ ಒತ್ತಡವಿಲ್ಲದ ಶಿಕ್ಷಣ, ಹಾಸ್ಟೆಲ್, ಸೋಪ್, ಬ್ರಶ್, ಕೊಬ್ಬರಿ ಎಣ್ಣೆ, ಸಮವಸ, ಸಿ.ಸಿ.ಇ ಮೂಲಕ ಬೋಧನೆ, ಟಿ.ಎಲ್.ಎಂ. ಮೂಲಕ ಬೋಧನೆ, ಇನ್‌ಸ್ಪೈರ್ ಅವಾರ್ಡ್ ಮೂಲಕ ಭಾವೀ ವಿಜ್ಞಾನಿಗಳಿಗೆ ಪ್ರೋತ್ಸಾಹ, ವಿಕಲಚೇತನರಿಗೆ ವಿಶೇಷ ಸೌಲಭ್ಯಗಳು, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆಯಡಿ ಉಚಿತ ಆರೋಗ್ಯ ತಪಾಸಣೆ, ವಿದ್ಯಾರ್ಥಿನಿಯರಿಗೆ ಉಚಿತ ಶುಚಿಪ್ಯಾಡ್,
ಸಾಂಸ್ಕೃತಿಕ ಕಾರ್ಯಕ್ರಮಗಳು, ಅಕ್ಷರ ಫೌಂಡೇಶನ್ ಸಹಯೋಗದಲ್ಲಿ ಗಣಿತ ಕಲಿಕೆಗೆ ಉಚಿತ ಸಾಮಗ್ರಿಗಳು, ಉಚಿತ ಮಧ್ಯಾಹ್ನದ ಬಿಸಿಯೂಟ ಯೋಜನೆ, ಶಾಲೆ ಉಸ್ತುವಾರಿಗಾಗಿ ಎಸ್.ಡಿ.ಎಂ.ಸಿ. ರಚನೆ, ಸರಕಾರಿ ವೃತ್ತಿಯಲ್ಲಿ ಕನ್ನಡ ಮಾಧ್ಯಮ, ಗ್ರಾಮಾಂತರ ಕೋಟ, ನವೋದಯ ಆದರ್ಶ, ಮೊರಾರ್ಜಿ, ಕಸ್ತೂರಿ ಬಾ, ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾ, ಏಕಲವ್ಯ, ವಾಜಪೇಯಿ, ಕೆ.ಪಿ.ಎಸ್. ವಸತಿ ಶಾಲೆಗಳು… ಇಂಥ ಅನೇಕ ಸೌಲಭ್ಯಗಳು.

ಎಲ್.ಕೆ.ಜಿ.ಯಿಂದ ಹಿಡಿದು ಪದವಿಯ ತನಕ ಖಾಸಗಿ ಶಾಲೆಯಲ್ಲಿ ಓದಿಸಿದರೆ ಖರ್ಚು ಎಷ್ಟಾಗುತ್ತದೆ ಎನ್ನುವುದನ್ನು ಪಟ್ಟಿ ಮಾಡಿ. ಸರಕಾರಿ ಶಾಲೆಯಲ್ಲಿ ಹೆಚ್ಚಿನ ಖರ್ಚಿಲ್ಲದೆ ಓದಿಸಿ ಅದೇ ಹಣವನ್ನು ಬ್ಯಾಂಕ್‌ನಲ್ಲಿ ಡಿಪಾಜಿಟ್ ಇಟ್ಟು ನಿಮ್ಮ ಮಗುವಿನ 21ನೇ ವಯಸ್ಸಿನಲ್ಲಿ ಉಳಿತಾಯದ ಹಣ ಇಷ್ಟು ಎಂದು ತಿಳಿಸಿ ಅದನ್ನು ಏನು ಮಾಡಬೇಕು ಎನ್ನುವ ಸ್ವಾತಂತ್ರ್ಯ ಆತನಿಗೆ ಕೊಟ್ಟರೆ ಆತನ ಬಿಸಿನೆಸ್ ಗೆ ಅದೊಂದು ಬಂಡವಾಳವಾಗಬಹುದು. ಆಗ ಆತನ ಮುಖ ಅರಳುವುದನ್ನು ನೀವೇ ನೋಡಿ.

ಯಾವುದು ಒಳ್ಳೆಯದೆಂದು ನೀವೇ ನಿರ್ಧರಿಸಿ. ಖಾಸಗಿ ಶಾಲೆಗಳ ವ್ಯವಸ್ಥೆಯ ಬಗೆಗೆ ಇದು ಟೀಕೆ ಅಲ್ಲ. ಖಾಸಗಿ ಶಾಲೆಗಳು ಇರಲಿ, ಸಿರಿವಂತರು, ಸಾಧ್ಯ ವಿದ್ದವರೂ ತಮ್ಮ ಮಕ್ಕಳನ್ನು ಅಲ್ಲಿಗೇ ಸೇರಿಸಲಿ. ಯಾಕೆಂದರೆ ಖಾಸಗಿ ಶಾಲೆಗಳಲ್ಲೂ ಬಹಳಷ್ಟು ಉದ್ಯೋಗ ಅವಕಾಶ ಇರುತ್ತದೆ. ಸಾಕಷ್ಟು ಮಂದಿಗೆ
ಅಲ್ಲಿ ಸಂಬಳ ಸಿಗುತ್ತದೆ. ಬದುಕಿಗೊಂದು ದಾರಿಯಾಗುತ್ತದೆ. ಗುಣಮಟ್ಟದ ಶಿಕ್ಷಣವಂತೂ ಇದ್ದೇ ಇದೆ. ಆದರೆ ಸಾಧ್ಯವಿಲ್ಲದವರು ತಮ್ಮ ಮಕ್ಕಳನ್ನು ಅಲ್ಲಿಗೇ ಯಾಕೆ ಸೇರಿಸಬೇಕು ಎಂಬುದು ಯಕ್ಷ ಪ್ರಶ್ನೆ.

ಅಷ್ಟಕ್ಕೂ ಖಾಸಗಿ ಶಾಲೆಗಳು ಮಾಡುವುದಾದರೂ ಏನು? ಖಾಸಗಿ ಶಾಲೆಗಳು ಬುದ್ಧಿವಂತ ಮಕ್ಕಳಿಗೆ ಮಾತ್ರವೇ ಪ್ರವೇಶ ನೀಡುತ್ತವೆ. ಶೇ.೮೦ರಷ್ಟು
ಅಂಕಗಳಿಸಿದ ವಿದ್ಯಾರ್ಥಿ ಶೇ.90 ತೆಗೆಯುವಂತೆ ಮಾಡುವುದು ದೊಡ್ಡ ಸಾಧನೆಯಲ್ಲ. ಫೇಲಾದ ವಿದ್ಯಾರ್ಥಿಯನ್ನು ಶೇ.80 ಅಂಕ ತೆಗೆಯುವಂತೆ
ಮಾಡುವುದು ನಿಜವಾದ ಸಾಧನೆ. ಅಂಥ ಪ್ರಯತ್ನಕ್ಕೆ ಖಾಸಗಿ ಶಾಲೆಗಳು ಕೈ ಹಾಕುವುದೇ ಇಲ್ಲ. ಅವರದೇನಿದ್ದರೂ ಬುದ್ಧಿವಂತ ವಿದ್ಯಾರ್ಥಿಗಳನ್ನು ತೆಗೆದು ಕೊಂಡು ಶೇ.೧೦ ರಿಸಲ್ಟ್ ತೆಗೆದು ಫೀಸ್ ಇನ್ನಷ್ಟು ಹೆಚ್ಚಿಸುವ ಪ್ರಯತ್ನವಷ್ಟೆ ಆದರೆ ಸರಕಾರಿ ಶಾಲೆಗಳಲ್ಲಿ ಎಲ್ಲರಿಗೂ ಮುಕ್ತ ಪ್ರವೇಶ. ಸರಕಾರಿ ಶಾಲೆಗಳು ಶಿಕ್ಷಣ ಮಾರಾಟದ ಸರಕಾಗಬಾರದು ಎನ್ನುವ ನಮ್ಮ ಪರಂಪರೆಯನ್ನು ಬೆಂಬಲಿಸುತ್ತವೆ.

ಮಕ್ಕಳಿಗೆ ಶಿಕ್ಷಣ ಎನ್ನುವುದು ಪೋಷಕರಿಗೆ ಶಿಕ್ಷೆ ಎಂದಾಗಬಾರದೆಂದರೆ ಸರಕಾರಿ ಶಾಲೆಗಳನ್ನು ಬೆಂಬಲಿಸಲೇಬೇಕು. ಕರೋನೋತ್ತರ ಕಾಲದಲ್ಲಿಯೂ ಪೋಷಕರು ಹಣವಿಲ್ಲದೆ ಕಂಗಾಲಾಗಿದ್ದಾಗಲೂ ಖಾಸಗಿ ಶಾಲೆಗಳು ತಮ್ಮ ಬೇಡಿಕೆಗಳಲ್ಲಿ ಕಡಿತ ಮಾಡದಿದ್ದಾಗ ಒಂದು ಹಂತದಲ್ಲಿ ಪ್ರತಿಭಟನೆಗಳು, ಪೊಲೀಸರಿಗೆ ದೂರು ಇತ್ಯಾದಿಗಳು ನಡೆದವು. ಜತೆಗೆ ಪೋಷಕರೇ ಸ್ವಯಂ ಪ್ರೇರಣೆಯಿಂದ ಸರಕಾರಿ ಶಾಲೆಗಳತ್ತ ಮುಖ ಮಾಡಿದರು. ಹಾವೇರಿ, ಮಂಡ್ಯ, ಮೈಸೂರು, ಬೆಳಗಾವಿ, ಶಿರಸಿ, ಮಂಗಳೂರು, ಕೋಲಾರ ಇತ್ಯಾದಿ ಪ್ರದೇಶಗಳಲ್ಲಿ ಸರಕಾರಿ ಶಾಲೆಗಳು ಡಿಮ್ಯಾಂಡ್ ಕುದುರುತ್ತಿದೆ.

ರಾಜ್ಯದಲ್ಲಿರುವ ಸರಕಾರಿ ಶಾಲೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಮಕ್ಕಳ ನೇಮಕಾತಿ ನಡೆಯುತ್ತಿದೆ. ಹಾಗೆಂದು ಶಿಕ್ಷಣ ಸಚಿವರು ಇದು ತಮ್ಮ ಸಾಧನೆಯೆಂದು ಬೆನ್ನು ತಟ್ಟಿಕೊಳ್ಳುವ ಅಗತ್ಯವಿಲ್ಲ. ಇದು ಏನಿದ್ದರೂ ಕರೋನಾ ಕಾಲದ ಸ್ಥಿತ್ಯಂತರ ಅಷ್ಟೇ. ಆದರೆ ಇದನ್ನು ಇನ್ನು ಮುಂದುವರಿಸುವುದು ಖಂಡಿತ ಶಿಕ್ಷಣ ಸಚಿವರ ಕೈಯಲ್ಲಿದೆ. ಎಲ್ಲಾ ಸರಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸುವ ಕಾರ್ಯ ಸಮರದೋಪಾದಿಯಲ್ಲಿ ಆಗಬೇಕು. ಗ್ರಾಮೀಣ ಭಾಗಗಳ ಶಿಥಿಲ ಕಟ್ಟಡಗಳಿಗೆ ಕಾಯಕಲ್ಪ ನಡೆಯಬೇಕು. ಏಕೋಪಾಧ್ಯಾಯ ಶಾಲೆಗಳಿಗೆ ಹೆಚ್ಚಿನ ಶಿಕ್ಷಕರ ನೇಮಕವಾಗಬೇಕು. ಕಂಪ್ಯೂಟರ್ ನಂತಹ ಮೂಲ ಸೌಕರ್ಯಗಳ ವ್ಯವಸ್ಥೆ ಆಗಿ ಖಾಸಗಿ ಶಾಲೆಗಳಿಗೆ ಸರಿಗಟ್ಟುವ ಶಿಕ್ಷಣ ದೊರೆಯುವಂತಾಗಬೇಕು. ಅಷ್ಟಾದರೆ ಮರಳಿ ಬಾ ಶಾಲೆಗೆ ಇತ್ಯಾದಿ ಸ್ಲೋಗನ್‌ಗಳ ಅಗತ್ಯವಿರುವುದಿಲ್ಲ.

ಪೋಷಕರು ತಾವೇ ಮುಂದೆ ಬಂದು ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುತ್ತಾರೆ. ಅಷ್ಟಾದರೆ ಶಿಕ್ಷಣ ಸಚಿವರು ಖಂಡಿತ ತಮ್ಮ ಬೆನ್ನನ್ನು ತಾವೇ
ತಟ್ಟಿಕೊಳ್ಳಬಹುದು.