ಅಭಿವ್ಯಕ್ತಿ
ತುರುವೇಕೆರೆ ಪ್ರಸಾದ್
ರಾಜ್ಯದ ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ಘೋಷಣೆ ಆಗಿದೆ. ಬಹುತೇಕ ಗ್ರಾಪಂಗಳಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ತೀವ್ರ ಸೆಣಸಾಟಕ್ಕೆ ಬಿದ್ದು ಅಧಿಕಾರದ ಚುಕ್ಕಾಣಿ ಹಿಡಿಯುವ ಹರಸಾಹಸ ಮಾಡುತ್ತಿವೆ.
ಯಾವುದೇ ಲೋಕಸಭೆ, ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಕಮ್ಮಿ ಇಲ್ಲದಂತೆ ಅಭ್ಯರ್ಥಿ ಗಳು, ವಿವಿಧ ಪಕ್ಷಗಳ ನಾಯಕರು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಮತದಾರರ ಮನವೊಲಿಸುವ ಹಲವು ತಂತ್ರ ಹೂಡಿದ್ದಾರೆ. ಪ್ರತಿ ಗ್ರಾಪಂ ವ್ಯಾಪ್ತಿ ಯಲ್ಲೂ ಮತದಾರರ ಸಂಖ್ಯೆೆ ಸೀಮಿತವಾಗಿರುವುದರಿಂದ ಮತ್ತು ಪ್ರತಿಯೊಂದು ಮತವೂ ನಿರ್ಣಾಯಕವಾದ್ದರಿಂದ ಬೇರೆ ಚುನಾವಣೆಗಳಂತೆ ಈ ಚುನಾವಣೆಗಳಲ್ಲೂ ಎಲ್ಲಾ ರೀತಿಯ ಆಮಿಷ ಗಳನ್ನು ಮತದಾರರಿಗೆ ಒಡ್ಡುವ ಲಕ್ಷಣಗಳು ಈಗಲೇ ಕಂಡು ಬರುತ್ತಿವೆ.
ಹಿಂದೆಲ್ಲಾ ನಡೆದಂತೆ ಈಗಲೂ ಸೀರೆ, ಪಂಚೆ, ಹೆಂಡ, ನಗದು ಚಿನ್ನಾಭರಣ ಗುಲಾಬ್ ಜಾಮೂನ್, ಮಟನ್, ಚಿಕನ್, ಮೊದ ಲಾದ ಊಟದ ಪ್ಯಾಕೆಟ್‌ಗಳು, ಬೆಳಗ್ಗೆೆ ಹಾಲು, ಸಂಜೆ ಅಲ್ಕೋಹಾಲು ವಾರಗಟ್ಟಲೆ ಮತದಾರರಿಗೆ ಸರಬರಾಜಾಗುವ ನಿರೀಕ್ಷೆ ಇದೆ. ಏಕೆಂದರೆ ಆಳುವ ಬಿಜೆಪಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾದರೆ ಕಳೆದುಕೊಂಡದ್ದನ್ನು ಮತ್ತು ಪಡೆಯುವ ಮತ್ತು ತಳಹಂತ ದಲ್ಲಿ ಕಾರ್ಯಕರ್ತರು ಇನ್ನೂ ಪಕ್ಷದ ಜತೆಗೆ ಇದ್ದಾರೆ ಎನ್ನುವುದನ್ನು ಪರೀಕ್ಷೆಗಿಡುವ ಸವಾಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕಿದೆ.
ವಾಸ್ತವವಾಗಿ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಪಕ್ಷಗಳಿಗಿಂತ ವ್ಯಕ್ತಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕಾಗುತ್ತದೆ. ಒಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿಯ ಮೂಲ ಕೇಂದ್ರ. ಇದು ತಳ ಹಂತದ ಅಭಿವೃದ್ಧಿ ಪ್ರಕ್ರಿಯೆ ನಡೆಯ ಬೇಕಾದ ಜಾಗ. ಅಭಿವೃದ್ಧಿಯ ವಿವಿಧ ಮಾದರಿಗಳ ನಿಷ್ಕರ್ಷೆ ಮಾಡುವ ಪ್ರಯೋಗಶಾಲೆಯಿದ್ದಂತೆ. ಹಾಗಾಗಿ ಒಂದು ಗ್ರಾಮ ಪಂಚಾಯ್ತಿಗೆ ಸೇರಿದ, ಆ ಗ್ರಾಮಗಳ ಸಮಸ್ಯೆಗಳ ಬಗ್ಗೆ ಅರಿವುಳ್ಳ ಮತ್ತು ಅಲ್ಲಿನ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ, ಸಮರ್ಥವಾಗಿ ನಿಭಾಯಿಸಬಲ್ಲ, ಪ್ರಾಮಾಣಿಕ ವ್ಯಕ್ತಿಯನ್ನು ಜನ ತಮ್ಮ ಪ್ರತಿನಿಧಿಯಾಗಿ ಆರಿಸುವುದು ಒಳಿತು.
ದುರದೃಷ್ಟವೆಂದರೆ ಪರೋಕ್ಷವಾಗಿ ಇಲ್ಲೂ ಪಕ್ಷ, ಹಣ, ಅಧಿಕಾರ ಹಾಗೂ ಆಮಿಷಗಳ ಆಧಾರದ ಮೇಲೆಯೇ ಚುನಾವಣೆ ನಡೆಯುತ್ತಿದೆ. ಹಿಂದೆಲ್ಲಾ ನೀರು, ವಿದ್ಯುತ್, ವಸತಿ, ರಸ್ತೆ ಇವು ಮೂಲ ಸೌಲಭ್ಯಗಳು ಎನಿಸಿತ್ತು. ಆದರೆ ಸುವರ್ಣ ಗ್ರಾಮ ಯೋಜನೆ, ವಸತಿ ಯೋಜನೆಗಳು ಹಾಗೂ ಇತರೆ ನಾನಾ ಯೋಜನೆಗಳು ಮತ್ತು ಮೇಲು ಹಂತದ ಅಭಿವೃದ್ಧಿ ಪ್ರಕ್ರಿಯೆಗಳಿಂದಾಗಿ
ಹಲವೆಡೆ ಇವು ಇಂದು ಇವೆಲ್ಲಾ ತೀವ್ರ ಸಮಸ್ಯೆಗಳಾಗಿ ಉಳಿದಿಲ್ಲ.
ಈಗ ಆರೋಗ್ಯ, ನೈರ್ಮಲ್ಯ, ಪರಿಸರ ನಿರ್ವಹಣೆ, ಘನತ್ಯಾಜ್ಯ ನಿರ್ವಹಣೆ ಇವು ಗ್ರಾಮಾಂತರ ಪ್ರದೇಶದಲ್ಲಿ ಸವಾಲಾಗಿವೆ. ಇವುಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವಲ್ಲಿ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯ್ತಿಗಳು ಸೋಲುತ್ತಿವೆ. ಒಂದು ಹಳ್ಳಿಯಲ್ಲಿ ಐದು ವರ್ಷಕ್ಕೊಮ್ಮೆ ಯಾರೂ ರಸ್ತೆ ವಿಸ್ತರಣೆ ಮಾಡುವುದಿಲ್ಲ, ಅಥವಾ ಹೊಸ ಚರಂಡಿ ನಿರ್ಮಾಣ ಮಾಡುವುದಿಲ್ಲ, ಹೊಸ ವಿನ್ಯಾಸದ ವಿದ್ಯುತ್ ಕಂಬ ಗಳನ್ನು, ದೀಪಗಳನ್ನು ಅಳವಡಿಸುವುದಿಲ್ಲ ಅಥವಾ ಹೊಸ ನೀರಿನ ಪೈಪ್‌ಗಳನ್ನು ಅಳವಡಿಸುವುದಿಲ್ಲ.
ಇವುಗಳ ಬದಲಾವಣೆಯ ಅವಶ್ಯಕತೆಯೂ ಬರುವುದಿಲ್ಲ. ಇವೆಲ್ಲಾ ಬಹುತೇಕ ಶಾಶ್ವತವಾಗಿ ಹಾಗೇ ಇರುತ್ತವೆ. ಇವುಗಳ
ನಿರ್ವಹಣೆಯೂ ವರ್ಷಪೂರ್ತಿ ಮಾಡಬೇಕಾದ ಕೆಲಸವಲ್ಲ. ಅದು ಜನಪ್ರತಿನಿಧಿಗಳ ದಕ್ಷತೆಗೆ ಸವಾಲಾಗಿ, ಕಳಪೆ ನಿರ್ವಹಣೆ
ಗಳಾಗಿಯೇ ಉಳಿದಿರುತ್ತವೆ. ಉದಾಹರಣೆಗೆ ಹಳ್ಳಿಗಳಲ್ಲಿ ರಾಶಿ ರಾಶಿ ಕಸ ತಿಪ್ಪೆಗಳಾಗಿ ರಾರಾಜಿಸಿರುತ್ತವೆ. ಅತ್ಯಾಧುನಿಕ ಡ್ರೈನೇಜ್ ಗಳಲ್ಲಿ ಕೊಳಚೆ ನೀರು ಮುಂದಕ್ಕೆೆ ಹರಿಯುವುದಿಲ್ಲ. ಮಳೆ ಬಂದರೆ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರ ಮನೆಗಳಿಗೆ
ಈ ಕೊಳಚೆ ನೀರು ಚರಂಡಿಯಿಂದ ಉಕ್ಕಿ ಹರಿದು ನೇರವಾಗಿ ನುಗ್ಗುತ್ತದೆ.
ಇನ್ನು ಈ ಡ್ರೈನೇಜ್‌ಗಳಲ್ಲಿ ಮಲ, ಮೂತ್ರಾದಿ ಸಕಲ ಮಲಿನಗಳೂ ಕೆಂಗೇರಿ ಕೊಳಚೆಯನ್ನೇ ನಾಚಿಸುವಂತೆ ಹರಿಯುತ್ತವೆ. ಗುಂಡಿ ಬಿದ್ದ ರಸ್ತೆಗಳ ಗುಂಡಿಗಳು ವರ್ಷಪೂರ್ತಿ ಹಾಗೇ ಇರುತ್ತವೆ. ಹಳ್ಳಿಗಳ ಮಧ್ಯಭಾಗದಲ್ಲೇ ಹೆಂಡ, ಕೋಳಿ, ಮಾಂಸದಂಗಡಿ ಗಳಿಗೆ ಪರವಾನಗಿ ನೀಡಲಾಗುತ್ತದೆ. ಚರಂಡಿಗೆ ಹರಿಯುವ ಮಲಮೂತ್ರಗಳ ದುರ್ನಾತವನ್ನು ಯಾವ ಸದಸ್ಯನೂ ನಿವಾರಿಸ ಲಾರ. ಕಾಲಿ ಸೈಟುಗಳಲ್ಲಿ ಬೆಳೆಯುವ ಬೃಹತ್ ಕಳೆ ಇವತ್ತಿಗೂ ಸ್ಥಳೀಯ ಸಂಸ್ಥೆಗಳಿಗೆ ಒಂದು ಸವಾಲೇ!
ಇಧಕ್ಕೆಲ್ಲಾ ಜನರೂ ಹೊಂದಿಕೊಂಡು ಬಿಟ್ಟಿದ್ದಾರೆ. ತೀರಾ ಮಿತಿಮೀರಿದಾಗ ಸ್ಥಳೀಯ ನಿವಾಸಿಗಳೇ ಪಂಚಾಯ್ತಿ ಕಚೇರಿಗೆ
ಹೋಗಿ ಈ ಅವ್ಯವಸ್ಥೆಗಳ ವಿರುದ್ಧ ಧ್ವನಿ ಎತ್ತುವಷ್ಟು ಜಾಗೃತಿ ಈಗ ಜನರಲ್ಲಿದೆ. ಹಾಗಾಗಿ ಈಗ ಒಬ್ಬ ಸ್ಥಳೀಯ ಸಂಸ್ಥೆಯ
ಜನಪ್ರತಿನಿಧಿಯ ಕಾರ್ಯಸ್ವರೂಪದ ವಿನ್ಯಾಸವೇ ಬದಲಾಗಿದೆ. ಒಂದು ನಿರ್ಧಿಷ್ಟ ಯೋಜನೆಯ ಮೂಲಕ ಅಭಿವೃದ್ಧಿಗಿಂತ
ಒಟ್ಟಾರೆ ಒಂದು ಊರಿನ ಅಭಿವೃದ್ಧಿಯ ದೃಷ್ಟಿಯಿಂದ ಸಮಗ್ರ ಸುಧಾರಣೆಯತ್ತ ಕಾರ್ಯಸೂಚಿ ರೂಪಿಸುವುದು ಮುಖ್ಯ
ಎನಿಸುತ್ತದೆ.
ಇಡೀ ಹಳ್ಳಿಗೆ ಉಪಯೋಗವಾಗುವಂಥ ಶಾಶ್ವತ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಎಲ್ಲಾ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಹೋರಾಟ ಮಾಡಬೇಕಾಗುತ್ತದೆ. ಇನ್ನು ಹಳ್ಳಿಯ ಸ್ವಚ್ಛತೆಯಷ್ಟೇ ಆಡಳಿತ ಸ್ವಚ್ಛತೆಯೂ ಮುಖ್ಯವಾಗುತ್ತದೆ. ಬಹುತೇಕ ಆಡಳಿತಗಳು ಇನ್ನೂ ಭ್ರಷ್ಟಕೂಪಗಳಾಗಿಯೇ ಉಳಿದಿವೆ. ಇವನ್ನು ಸ್ವಚ್ಛ ಮಾಡುವುದು ಇಂದಿನ ತುರ್ತು ಅಗತ್ಯ ಎನಿಸಿದೆ. ಸಾಮಾನ್ಯ ನಾಗರಿಕನೊಬ್ಬನ ಕೆಲಸ ಮಾಡಿಕೊಡಲು ಜನಪ್ರತಿನಿಧಿಯ ಶಿಫಾರಸ್ಸು ಬೇಕು, ಅವರು ಫೋನ್ ಮಾಡಿ ಹೇಳಬೇಕು ಎಂಬ ಧೋರಣೆ, ವ್ಯವಸ್ಥೆ ಇರಬಾರದು. ಅವನ ಕೆಲಸ ಯಾರ ಪ್ರಭಾವ, ಶಿಫಾರಸ್ಸೂ ಇಲ್ಲದೆ ಆಗಬೇಕು. ಅಂತಹ ವ್ಯವಸ್ಥೆ ಯನ್ನು, ಆಡಳಿತವನ್ನು ಗ್ರಾಮ ಪಂಚಾಯ್ತಿಯ ಜನಪ್ರತಿನಿಧಿಗಳು ರೂಢಿಸಬೇಕು.
ಭ್ರಷ್ಟತೆಯ ಜತೆ ಜತೆಗೆ ನಿರ್ಲಕ್ಷ್ಯ, ನಿಷ್ಕ್ರೀಯತೆ ಹಾಗೂ ಅಭಿವೃದ್ಧಿ ವಿರೋಧಿ ಧೋರಣೆಗಳೂ ಆಡಳಿತವನ್ನು ಕೇವಲ ಮೇಲ್ಮಟ್ಟದ ನಿರ್ವಹಣೆಗೆ ಸೀಮಿತಗೊಳಿಸಿದೆ. ಯಾವುದೇ ಕಾಮಗಾರಿ, ಅಭಿವೃದ್ಧಿ ಯೋಜನೆಗಳ ಬಗ್ಗೆ ಮುಂದಾಲೋಚನೆ, ಆಳವಾದ ಜ್ಞಾನ, ಅವುಗಳ ಬಾಳಿಕೆಯ ಅವಧಿಗಳ ನಿಷ್ಕರ್ಶೆ ಮಾಡದೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ.
ಕುಂಠಿತ ಕಾಮಗಾರಿಗಳ ದೆಸೆಯಿಂದಾಗಿ ಅಂದಾಜು ಮಾಡಿದ್ದರ ಹತ್ತಾರು ಪಟ್ಟು ಸಂಪನ್ಮೂಲ ಈ ಕಾಮಗಾರಿಗಳಿಗೆ ವ್ಯರ್ಥವಾಗಿ
ಹರಿದು ಹೋಗುತ್ತದೆ. ಜಿಪಿಎಸ್ ವ್ಯವಸ್ಥೆ ಇದ್ದಾಗಲೂ ಒಂದು ಹಳ್ಳಿಯಲ್ಲಿ ಯಾವುದೋ ಒಂದು ಯೋಜನೆಯಡಿ ಮಾಡಿದ
ಕಾಮಗಾರಿಯನ್ನೇ ತೋರಿಸಿ ಇನ್ನೊಂದು ಯೋಜನೆಯ ಮೂಲಕ ಹಣ ಲೂಟಿ ಮಾಡುವ ಉದಾಹರಣೆಗಳನ್ನು ನಾವು
ಈಗಲೂ ನೋಡುತ್ತಿದ್ದೇವೆ.
ಮುಖ್ಯವಾಗಿ ಗ್ರಾಮ ಪಂಚಾಯ್ತಿಗಳ ಆಡಳಿತ ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕಾದ್ದು ಅಲ್ಲಿನ ಜನಪ್ರತಿನಿಧಿಗಳ ಕರ್ತವ್ಯ. ಈಗ ಎಲ್ಲಾ ವ್ಯವಸ್ಥೆಗಳು ಡಿಜಿಟಲೀಕರಣವಾಗಿರುವಂತೆ ಸ್ಥಳೀಯ ಸಂಸ್ಥೆಗಳ ಮತ್ತು ಗ್ರಾಮ ಪಂಚಾಯ್ತಿಗಳ ಆಡಳಿತವೂ ಬಹುತೇಕ ಡಿಜಿಟಲೀಕರಣಗೊಳ್ಳುತ್ತಿದೆ. ಮನೆ ನಿರ್ಮಾಣ ಪರವಾನಗಿ, ವ್ಯಾಪಾರ ಪರವಾನಗಿ, ನೀರಿನ ಸಂಪರ್ಕ, ಜನನ – ಮರಣ ನೋಂದಣಿ, ಇ-ಆಸ್ತಿ ಹೀಗೆ ಎಲ್ಲವನ್ನೂ ಆನ್‌ಲೈನ್ ಮುಖಾಂತರವೇ ಪಡೆಯಬಹುದಾಗಿದೆ. ಆದರೆ ಬಹುತೇಕ ಜನಪ್ರತಿನಿಧಿಗಳಿಗೆ ಈ ಬಗ್ಗೆೆ ಸಮಗ್ರ ಮಾಹಿತಿ ತಿಳಿದಿಲ್ಲ. ಹಲವರಿಗೆ ಕಂಪ್ಯೂಟರ್ ಜ್ಞಾನವೇ ಇಲ್ಲ. ಹೀಗಿರುವಾಗ ದಿನನಿತ್ಯದ ಆಡಳಿತ ಹಾಗೂ ಯೋಜನೆಗಳಿಗೆ ಸಂಬಂಧಿಸಿದಂಥ ಮಾಹಿತಿ ಪಡೆಯಲು ಅಧಿಕಾರಿಗಳನ್ನೇ ಅವಲಂಭಿಸಬೇಕಾಗುತ್ತದೆ.
ಹೀಗಾದಾಗ ಆಡಳಿತದ ಮೇಲೆ ಜನಪ್ರತಿನಿಧಿಗಳಿಗೆ ನಿಯಂತ್ರಣ ಇರುವುದಿಲ್ಲ. ಅಲ್ಲಿ ನಡೆಯುವ ಲೋಪದೋಷಗಳನ್ನು ಗುರುತಿಸಲೂ ಆಗುವುದಿಲ್ಲ. ಇದಕ್ಕೆ ಮೀಸಲಿರುವ ಅಂತರ್ಜಾಲ ತಾಣವನ್ನು ಹಲವು ಸಂಸ್ಥೆಗಳಲ್ಲಿ ಸಮರ್ಪಕವಾಗಿ ನಿರ್ವಹಿಸ ಲಾಗುತ್ತಿಲ್ಲ. ಚುನಾವಣಾ ಸಂದರ್ಭದಲ್ಲೂ ನಮ್ಮ ಗ್ರಾಮ ಪಂಚಾಯ್ತಿಗಳ ಆಡಳಿತ ಹೇಗಿದೆ ಎಂದು ನಮಗೆ ಗೊತ್ತಿಲ್ಲದಿದ್ದರೆ ನಾವು ಯಾರಿಗೆ ಮತ ಹಾಕಿ ಏನು ಪ್ರಯೋಜನ? ಆದ್ದರಿಂದ ಈಗ ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳು ಕೇವಲ ಸರಕಾರಿ ಅನುದಾನವನ್ನು ಹಂಚುವುದಕ್ಕಷ್ಟೇ ಮೀಸಲಾಗದೆ ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆ, ಸ್ವಚ್ಛಭಾರತ್ ಅನುದಾನದ ಪರಿಣಾಮಕಾರಿ ಬಳಕೆ, ಕೌಶಲ ಅಭಿವೃದ್ಧಿ, ಮಾನವ ಸಂಪನ್ಮೂಲದ ಅಭಿವೃದ್ಧಿ, ಆರೋಗ್ಯ, ನೈರ್ಮಲ್ಯ ನಿರ್ವಹಣೆ, ಪರಿಸರ ನಿರ್ವಹಣೆ ಇವನ್ನು ಆದ್ಯತೆಯ ಕಾರ್ಯಸೂಚಿಯನ್ನಾಗಿ ರೂಪಿಸಿಕೊಳ್ಳಬೇಕಿದೆ.
ಅಂತಹ ದೂರದರ್ಶಿತ್ವವುಳ್ಳ ಸಮರ್ಥ ವ್ಯಕ್ತಿಗಳಿಗೆ ಯಾವುದೇ ಆಮಿಷಕ್ಕೊಳಗಾಗದೆ ಮತದಾರರು ಮತ ಚಲಾಯಿಸಬೇಕು. ಆದರೆ ಗ್ರಾಪಂ ಚುನಾವಣೆ ಪಕ್ಷಾತೀತ ವಾದದ್ದು ಎಂಬುದೇ ಎಲ್ಲರಿಗೆ ಮರೆತು ಹೋಗಿದೆ. ಅಂತಹದೊಂದು ಆಶಯ ಜನರು ಮತ್ತು ರಾಜಕೀಯ ಮುಖಂಡರ ಮನಸ್ಸಿನಿಂದ ದೂರಾಗಿ ಹೋಗಿದೆ. ಪಕ್ಷದ ಚಿಹ್ನೆ ಇಲ್ಲ ಎಂಬುದನ್ನೂ ಬಿಟ್ಟರೆ ಎಲ್ಲ ಪಕ್ಷಗಳೂ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಶತಾಯ ಗತಾಯ ಅಧಿಕಾರ ಗದ್ದುಗೆ ಹಿಡಿಯಲೇ ಬೇಕೆಂಬ ಸಂಕಲ್ಪದೊಂದಿಗೆ ಸೆಣಸಾಟಕ್ಕೆ ಇಳಿದಿವೆ.
ಗ್ರಾಮ ಪಂಚಾಯಿತಿಗಳಿಗೆ ಲಕ್ಷಾಂತರ ರು.ಗಳ ಅನುದಾನ ಹರಿದು ಬರುತ್ತಿದ್ದು, ಇದು ಎಲ್ಲಾ ಪಕ್ಷಗಳ ಕಣ್ಣು ಕುಕ್ಕಿದೆ. ಆಳುವ ಪಕ್ಷ ಬಿಜೆಪಿ ಅಧಿಕಾರ ಬಲ ಉಪಯೋಗಿಸಿ ಪಂಚಾಯಿತಿ ಚುನಾವಣೆ ಗೆಲ್ಲಲು ಯಾತ್ರೆ ಹೊರಟ ಮೇಲೆ ತೆರೆ ಮರೆಯಲ್ಲಿದ್ದ ಇತರ ಪಕ್ಷಗಳನ್ನು ರಣರಂಗಕ್ಕೆ ಆಹ್ವಾನಿಸಿದಂತಾಗಿದೆ. ಹೀಗಾಗಿ ಪಕ್ಷಗಳು ಚುನಾವಣೆಯಲ್ಲಿ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳಲು ಇನ್ನಿಲ್ಲದ ಕಾರ್ಯತಂತ್ರ ರೂಪಿಸಿವೆ. ಪಂಚಾಯಿತಿಯ ವ್ಯಾಪ್ತಿಗಳಲ್ಲಿ ವೈಯಕ್ತಿಕವಾಗಿ ಮತದಾರರಿಗೆ ಆಮಿಷ ತೋರುವ ಪ್ರಯತ್ನಗಳು ಪ್ರಾರಂಭವಾಗಿವೆ.
ಸ್ತ್ರೀ ಶಕ್ತಿ ಸಂಘಗಳ ಮೂಲಕ ಮಹಿಳೆಯರನ್ನು ತಮ್ಮತ್ತ ಸೆಳೆಯುವ ಪ್ರಯತ್ನವೂ ನಡೆಯುತ್ತಿವೆ. ಇವೆಲ್ಲಕ್ಕಿಂತ ಘೋರವಾದ್ದು ಮತ್ತು ಬೆಚ್ಚಿಬೀಳಿಸುವಂತಾದ್ದು ಎಂದರೆ ಗ್ರಾಮ ಪಂಚಾಯಿತಿ ಸದಸ್ಯತ್ವವನ್ನೇ ದುಡ್ಡಿಗೆ ಹರಾಜು ಹಾಕುತ್ತಿರುವುದು.
ದೇವಾಲಯಗಳು ಜನರ ಭಾವನೆಗಳ, ಶ್ರದ್ಧಾ ಭಕ್ತಿಯ ಕೆಂದ್ರಗಳು. ಇಂತಹ ಭಾವನಾತ್ಮಕ ಅಂಶಗಳನ್ನು ರಾಜಕೀಯ ಪಕ್ಷಗಳು ಮತಗಳಾಗಿ ಪರಿವರ್ತಿಸಲು ಹೊರಟಿವೆ. ಹಳ್ಳಿ ಹಳ್ಳಿಗಳಲ್ಲಿ ಪಕ್ಷಗಳು ತಮ್ಮ ಕಡೆಯ ಪ್ರಭಾವಿ ವ್ಯಕ್ತಿಗಳನ್ನು ಈ ಕೆಲಸಕ್ಕೆ ಹಚ್ಚು ತ್ತಿವೆ.
ಗ್ರಾಮದ ದೇವಾಲಯ ಅಥವಾ ಪೂಜಾಸ್ಥಳವನ್ನು ಅಭಿವೃದ್ಧಿಗೊಳಿಸುವ ಆಮಿಷವನ್ನು ಗ್ರಾಮಸ್ಥರಿಗೆ ಒಡ್ಡಲಾಗುತ್ತಿದೆ. ಇದಕ್ಕೆ ಎಲ್ಲಾ ಪಕ್ಷದವರೂ ನಾ ಮುಂದು ತಾ ಮುಂದೂ ಎಂದು ಮುಗಿ ಬೀಳುತ್ತಿರುವುದರಿಂದ ಈ ದೇವರ ಅಭಿವೃದ್ಧಿಗೆ ಪಂಚಾಯಿತಿ ಸ್ಥಾನಗಳೇ ಹರಾಜಿಗೆ ನಿಲ್ಲುತ್ತಿವೆ. ಯಾವ ವ್ಯಕ್ತಿ ಅತಿ ಹೆಚ್ಚು ಹಣವನ್ನು ದೇವಾಲಯದ ಅಭಿವೃದ್ಧಿಗೆ ಕೂಗುತ್ತಾನೋ ಅವನಿಗೆ ಆ ಹಳ್ಳಿಯ ಒಂದು, ಎರಡು ಕೆಲವೊಮ್ಮೆ 5ರಿಂದ 6 ಗ್ರಾಮ ಪಂಚಾಯಿತಿಯ ಸ್ಥಾನಗಳು ದಕ್ಕುತ್ತವೆ. ಆ ಸ್ಥಾನಗಳಿಗೆ ಆ ವ್ಯಕ್ತಿ ತನಗೆ ಬೇಕಾದವರಿಂದ ನಾಮಪತ್ರ ಹಾಕಿಸಬಹುದು. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಅಂತೆಯೇ ಆ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಮತ್ಯಾರೂ ನಾಮಪತ್ರ ಸಲ್ಲಿಸುವಂತಿಲ್ಲ.
ಹೀಗಾಗಿ ಹರಾಜು ಕೂಗಿದ ವ್ಯಕ್ತಿ ಮತ್ತು ಅವನ ಹಿಂದಿರುವ ಪಕ್ಷಕ್ಕೆ ಆ ಸ್ಥಾನಗಳು ಅನಾಯಾಸವಾಗಿ, ಅವಿರೋಧವಾಗಿ ದಕ್ಕುತ್ತಿವೆ. ರಾಜ್ಯದಾದ್ಯಂತ ಸುಮಾರು 25ಕ್ಕೂ ಹೆಚ್ಚು ಪಂಚಾಯಿತಿ ಸ್ಥಾನಗಳು ಲಕ್ಷಾಂತರ ರುಪಾಯಿಗೆ ಹರಾಜಾಗಿ ಹೋಗಿರುವುದಾಗಿ
ಪತ್ರಿಕೆಗಳೇ ವರದಿ ಮಾಡಿವೆ. ಮೇಲ್ನೋಟಕ್ಕೆ ಇದು ಗ್ರಾಮದ ಜನರ ಒಗ್ಗಟ್ಟಿನ ಸಂಕೇತ ಎನಿಸಿದರೂ ಇದು ಪ್ರಜಾಪ್ರಭುತ್ವ ಮೌಲ್ಯಗಳ ಅಧಃಪತನದ ಸಂಕೇತವಾಗಿದೆ. ದೇವರು, ಧರ್ಮದ ಹೆಸರಿನಲ್ಲಿ ಜನರ ಸಾಂವಿಧಾನಿಕ ಹಕ್ಕುಗಳನ್ನು ಮೊಟಕು ಗೊಳಿಸಲಾಗುತ್ತಿದೆ.
ಗ್ರಾಮಸ್ಥರ ಸಹಭಾಗಿತ್ವವೇ ಗ್ರಾಮ ಪಂಚಾಯಿತಿಯ ಮೂಲ ಪರಿಕಲ್ಪನೆ. ಈ ರೀತಿ ದುಡ್ಡಿಗೆ ಸದಸ್ಯತ್ವವನ್ನು ಹರಾಜು ಹಾಕು ತ್ತಿರುವುದರಿಂದ ಪಂಚಾಯಿತಿ ಪರಿಕಲ್ಪನೆಯ ಮೂಲ ಅಶಯಕ್ಕೆ ಧಕ್ಕೆ ಒದಗಿದೆ. ಜನರು ತಮ್ಮ ಆಯ್ಕೆಯ ಸ್ವಾತಂತ್ರ್ಯ ಕಳೆದು ಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮನ್ನು ಪ್ರತಿನಿಧಿಸುವ ವ್ಯಕ್ತಿಯನ್ನು ತಾವು ಆರಿಸದೆ ಅವನು ಬೇರೆ ಯಾರದೋ ಆಯ್ಕೆಯಾಗಿ ಹೇರಲ್ಪಡುತ್ತಾನೆ. ಹಾಗಾಗಿ ಅವನಿಗೆ ಜನರ ಸೇವೆ ಮಾಡುವ ಯಾವ ಉತ್ತರದಾಯಿತ್ವವೂ ಇರುವುದಿಲ್ಲ, ಜತೆಗೆ ಈ ಸ್ಥಾನ ಗಿಟ್ಟಿಸಲು ಅವನು ಮಾಡಿರುವ ದೇವರ ಸೇವೆಗೆ ತಕ್ಕ ನೈವೇದ್ಯವನ್ನು ಪಡೆಯುವ ಹುನ್ನಾರ ನಡೆಸಿಯೇ ತೀರುತ್ತಾನೆ. ಹೀಗಾಗಿ ಜನರು ದೇವರ ಹೆಸರಿನಲ್ಲಿ ತಮ್ಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಏನನ್ನೂ ಪ್ರಶ್ನಿಸದೆ ಅಮಾಯಕ ಬಲಿಪಶುಗಳಾಗುವ ಹಂತ ತಲುಪುತ್ತಿದ್ದಾರೆ.
ಇದು ಪ್ರಜಾಪ್ರಭುತ್ವ ಮತ್ತೊಮ್ಮೆ ಸರ್ವಾಧಿಕಾರದತ್ತ ತಿರುಗುವ ಲಕ್ಷಣವೆನಿಸಿದೆ. ಈ ಹರಾಜು ಪ್ರಕ್ರಿಯೆ ಮತ್ತೊಮ್ಮೆ ಸಮಾಜ ದಲ್ಲಿ ಜಾತ್ಯತೀತತೆಯ ಅಣಕ ಮಾಡುವಂತಿದ್ದು ವಗೀಕೃತ ಶ್ರೇಣಿ ವ್ಯವಸ್ಥೆಗೆ ಇಂಬು ನೀಡುತ್ತಿದೆ. ಶೋಷಿತ ಸಮೂಹವನ್ನು ತಾರತಮ್ಯ ದೃಷ್ಟಿಯಿಂದ ನೋಡುವಂತೆ ಮಾಡಿದೆ. ಅವರ ಆಯ್ಕೆಯಲ್ಲಿ ಅವರ ಪಾತ್ರವನ್ನೇ ನಗಣ್ಯ ಮಾಡಿ ಮೀಸಲಾತಿ
ಯ ಮಹತ್ವವನ್ನೇ ಕಡೆಗಣಿಸಲಾಗಿದೆ. ಸಾಮಾನ್ಯ ಮತ್ತು ಇತರ ವರ್ಗಗಳಿಗೆ ಮೀಸಲಾದ ಸ್ಥಾನಗಳನ್ನು ಲಕ್ಷಾಂತರ ರು.ಗಳಿಗೆ
ಕೂಗಲಾಗುತ್ತಿದೆ.
ಅದೇ ಪ.ಜಾತಿ/ಪ.ಪಂಗಡಗಳಿಗೆ ಮೀಸಲಾದ ಸ್ಥಾನಗಳನ್ನು ಕನಿಷ್ಠ ಮೊತ್ತಕ್ಕೆ ಕೂಗಲಾಗುತ್ತಿದೆ ಎಂಬ ವದಂತಿಗಳು ಕಳೆದ ಚುನಾವಣೆ ವೇಳೆ ಕೇಳಿ ಬಂದಿತ್ತು. ಒಂದು ವರ್ಗದ ಒಂದು ಸ್ಥಾನವನ್ನು ಹರಾಜಿನಲ್ಲಿ ಕೂಗಿದವರಿಗೆ ಪ.ಜಾತಿ/ ಪಂಗಡದ
ಮೀಸಲು ಸ್ಥಾನವನ್ನು ಉಚಿತವಾಗಿ ನೀಡಲಾಗಿತ್ತು. ಇದು ಪ್ರಜಾತಂತ್ರ ವ್ಯವಸ್ಥೆ ಮತ್ತು ವಿಕೇಂದ್ರೀ ಕರಣ ಇವರೆಡರ ಘೋರ
ಅಣಕ. ಈಗಲೂ ಇದು ನಡೆಯುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಒಂದೆರಡು ಪಂಚಾಯಿತಿ ವ್ಯಾಪ್ತಿಯಲ್ಲಿ ಯುವಕರು ಚುನಾವಣೆ ನಡೆಯಲೇಬೇಕು ಎಂದು ಪಟ್ಟು ಹಿಡಿದು ಇಂತಹ ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದಾರೆ. ಇದು ನಿಜಕ್ಕೂ ಆರೋಗ್ಯಕರ ಬೆಳವಣಿಗೆ.
ಎಲ್ಲಾ ಗ್ರಾಮಗಳ ಯುವಕರು ಇದನ್ನು ಮೇಲ್ಪಂಕ್ತಿಯನ್ನಾಗಿ ಸ್ವೀಕರಿಸಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡಬೇಕು. ರಾಜಕೀಯ ಮುಖಂಡರು ಜನರ ಭಾವನೆಗಳನ್ನು ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುವುದನ್ನು ನಿಲ್ಲಿಸಬೇಕು.