ಅಲೆಮಾರಿಯ ಡೈರಿ
mehandale100@gmail.com
ಇದು ತೀರ ಅಪರಿಚಿತವೇನಲ್ಲ. ಆದರೆ ದೊಡ್ಡ ಪ್ರವಾಸಿ ಸ್ಥಳಗಳ ಹೊಡೆತಕ್ಕೆ ಕೊಂಚ ಆಫ್ ಬೀಟ್ ಆಗುವ ಮತ್ತು ಕೇವಲ ಸ್ನೇಹಿತರ ವಲಯದ ಗುಂಪುಗಳಿಗೇ ಮಾತ್ರ ಮೀಸಲಾಗಿ ಬಿಡುವ ಇಂಥಾ ಸ್ಥಳಗಳು ಹೆಚ್ಚಿನ ಕುಟುಂಬ ಪ್ರವಾಸಕ್ಕೆ ಲಭ್ಯ ವಾಗು ವುದೇ ಇಲ್ಲ. ಹೆಚ್ಚಿನ ಪ್ರವಾಸಿಗರಿಗೆ ರೆಡಿಮೇಡ್ ಸ್ಥಳಗಳು ಬೇಕಿರುತ್ತವೆ. ವಾಹನ ಇಳಿದ ಕೂಡಲೇ ಸೆಲಿಗೆ ಪಕ್ಕಾಗಬೇಕು.
ಅಲ್ಲಲ್ಲಿ ಉತ್ತಮ ವ್ಯವಸ್ಥೆ ಇರಬೇಕು. ನಮ್ಮಲ್ಲಿ ಇಂಥಾ ಪ್ಲಾನ್ಡ್ ಅಥವಾ ಆಯೋಜಿತ ತಿರುಗಾಟವನ್ನೇ ಮಾಡುವುದರಿಂದ ಪ್ರವಾಸದಲ್ಲಿ ಕೆಲವೊಮ್ಮೆ ಇಂಥ ಚೆಂದದ ಅಪರೂಪದ ದೇವಲೋಕದ ಪ್ರತಿಕೃತಿಗಳು ನಮ್ಮ ಕೈ ತಪ್ಪುತ್ತವೆ. ಹಾಗೆ ವಿಶೇಷವಾಗಿ ಜನ ಮಿಸ್ ಮಾಡಿಕೊಳ್ಳುವ ಮತ್ತು ಅರೆರೆ ನಾವು ಅ ಹೋಗಿದ್ವಿ ಎನ್ನುವ ಹೊತ್ತಿಗೆ ತಡವಾಗಿ ರುತ್ತದೆ. ನಮ್ಮದೇ ನೆಲದ ಅಪ್ಸರ ಕೊಂಡದ ಹಾಗೆ ಅಕ್ಷರಶಃ ಅದನ್ನೆ ನೆನೆಸುವ, ಆದರೆ ಇನ್ನಿಷ್ಟು ಆಮೋದಕ್ಕೆ ತೆರೆದುಕೊಳ್ಳುವ ಅತ್ಯುತ್ತಮ ಪ್ರವಾಸಿ ತಾಣ, ಹೈಕಿಂಗ್, ಟ್ರೆಕಿಂಗ್, ಕ್ಯಾಂಪಿಂಗ್, ವಿಸಿಟಿಂಗ್ ಹೀಗೆ ಎಲ್ಲದಕ್ಕೂ ಹೇಳಿ ಮಾಡಿಸಿದ ತಾಣ ದೇವಕುಂಡ, ಮೂಲತಃ ಪಂಚತೀರ್ಥ ಎಂದು ಹೆಸರಾಗಿರುವ ದೇವಿ ಕುಂಡ ಅದು.
ಹೆಚ್ಚಿನ ಜನರಿಗೆ ಒಡಿಸ್ಸಾ ಎಂದ ಕೂಡಲೇ ಪುರಿ, ಕೋನಾರ್ಕ್ ಮತ್ತು ಭುವನೇಶ್ವರ ಹೊರತುಪಡಿಸಿ ಪ್ರವಾಸವೇ ಇರುವುದಿಲ್ಲ. ಅಫ್ ಕೋರ್ಸ್ ಪ್ರವಾಸೋದ್ಯಮ ಮತ್ತು ಇತರೆ ಆಪರೇಟರ್ಗಳು ಇದನ್ನೊಂದು ಗೋಲ್ಡನ್ ಟ್ರೈಯಾಂಗಲ್ ಎಂದು ಬಿಂಬಿಸಿ ಇಲ್ಲ ಹುಲುಸಾಗಿ ಉದ್ಯಮ ಬೆಳೆಸಿದ್ದಾರೆ. ಆದರೆ ನೆಟ್ನ್ಲೊಮ್ಮೆ ಇಣುಕಿ ನೋಡಿ. ಲೆಕ್ಕ ತಪ್ಪಿ ಹೊಸ ಅಲೆಯ ಪ್ರವಾಸಿಗರು ಕಾಲಾಡಿಸಿ ಬಂದಿದ್ದಾರೆ ಈ ದೇವಕುಂಡದಲ್ಲಿ. ಹಾಗೆ ಕೈಗೆಟುಕ್ಕಿದ್ದಕ್ಕೆ ಅಲೆಮಾರಿತನವೂ ಕಾರಣವಿದ್ದೀತು.
ಇನ್ನು ನಿನ್ನೆ ಮೊನ್ನೆಯಿಂದ ಎಡೆ ಚಾಲ್ತಿಗೆ ಬರುತ್ತಿರುವ ಮಯೂರ್ಭಂಜ್ ಎನ್ನುವ ಪ್ರದೇಶದ ತೆಕ್ಕೆಯಲ್ಲಿರುವ ಈ ದೇವಕುಂಡ ಫೋಟೊಗ್ರಫಿಗೆ ಮತ್ತು ವಿಹಾರಕ್ಕೆ ಒಂದು ದಿನ ನೈಸರ್ಗಿಕವಾಗಿ ಸುಮ್ಮನೆ ಕಳೆದು ಹೋಗಲು ಹೇಳಿ ಮಾಡಿಸಿದ ತಾಣ. ಹಲವು ಕೋನದಲ್ಲಿ ಚಿತ್ರೀಸಿದರೂ ಮುಗಿಯದ ಇದರ ಆವರಣ, ಅನಾವರಣವಾಗಿಸಿದ್ದು ಇತಿಹಾಸದಲ್ಲಿ ರಾಜ ಪ್ರಫುಲ್ಚಂದ್ರ ಭಾಂಜ್ ಎಂಬಾತ. ಕಾಡಿನಲ್ಲಿ ಎತ್ತರದ ಶಿಖರದ ತುದಿಯಿಂದ ನೂರೈವತ್ತು ಅಡಿ ಆಳಕ್ಕೆ ಧುಮುಕುವ ಮೂಲಕ ಬಿದ್ದ ಜಾಗದಲ್ಲಿ ಕೊಳವೊಂದು ನಿರ್ಮಾಣವಾಗಿದ್ದು, ನೀರಿನ ಹರಿವು, ರಭಸದ ಹೊರತಾಗಿಯೂ ಸುಮಾರು ಹದಿನೈದು ಅಡಿ ಆಳದವರೆಗೆ ಎಲ್ಲ ಸ್ಪಷ್ಟವಾಗಿ ಕಾಣುವಷ್ಟು ಸ್ವಚ್ಛ ಶುಭ್ರ. ನೀರು ಅಲ್ಲ ಪನ್ನೀರು ಎನ್ನುತ್ತೀರಿ.
ಮಯೂರ್ಭಂಜ್ ಜಿಯ ಸಿಮಿಲಿಪಾಲ್ ರಾಷ್ಟ್ರೀಯ ಪ್ರಾಣಿಸಂರಕ್ಷಣಾ ಉದ್ಯಾನವನದ ಆವರಣದಲ್ಲಿರುವ ದೇವಕುಂಡ ದಟ್ಟ ಅಡವಿಯ ಮಧ್ಯದ ಹಸಿರು ಹಸಿರು ತಾಣ. ಇದು ಮೂಲ ಐದು ಕುಂಡಗಳ ಆವರಣವಾಗಿದ್ದು ಇದಕ್ಕೆ ಪಂಚ ಲಿಂಗೇಶ್ವರ ಅಥವಾ ಪಂಚತೀರ್ಥ ಎಂದು ಹೆಸರೂ ಇದೆ. ಭದ್ರಾಕುಂಡ, ತೈಲಕುಂಡ, ಹರಿದ್ರಾಕುಂಡ ಮತ್ತು ದೇವಿಕುಂಡಗಳು ಇನ್ನಿತರ ನಾಲ್ಕು ತೀರ್ಥ ಕುಂಡಗಳಾಗಿದ್ದು, ಜಲಪಾತದ ವೈಭವದಿಂದಾಗಿ ಎಲ್ಲ ಸೇರಿ ದೇವಕುಂಡ ಎಂದೇ ಪ್ರಸಿದ್ಧಿ. ಇದು ತಾಂತ್ರಿಕರಿಗೆ ಮತ್ತು ಮಂತ್ರವಾದಿಗಳಿಗೆ ಒಂದು ಪ್ರಮುಖ ನಂಬುಗೆಯ ತೀರ್ಥವಾಗಿದ್ದು, ಮಧ್ಯ ಭಾರತದ ಹೆಚ್ಚಿನ ಮಂತ್ರವಾದಿಗಳಿಗೆ ಮೇಲಿರುವ ಅಂಬಿಕೆ ದೇವಿಯ ದೇವಸ್ಥಾನ ಅತ್ಯಂತ ಪವಿತ್ರ ಸ್ಥಾವರ.
ನೀರು ಬೀಳುವ ನೆತ್ತಿಯ ಮೇಲೆ ಈ ದೇವಸ್ಥಾನ ಇದ್ದು ದೇವಿ ಅಂಬಿಕೆಯ ತಿಂಗಳಾವರ್ತಿ ಸ್ರಾವದ ಅವಧಿಯಲ್ಲಿ ಸರಿಯಾಗಿ ಮೂರು ದಿನ ನೀರು ಹಚ್ಚನೆಯ ದಪ್ಪ ಹಾಲಿನ ನೊರೆಯಾಗಿ ಬದಲಾಗುವ ವೈಚಿತ್ರ್ಯಕ್ಕೆ ಐತಿಹಾಸಿಕ ಕತೆ ಜೋಡಿಸಲಾಗಿದೆ. ಆದರೆ ವಿeನಿಗಳ ಪ್ರಕಾರ ನೆಲದಿಂದ ಮೇಲಕ್ಕೇರುವ ಪ್ರಮುಖ ರಸಾಯನಿಕ ಜನ್ಯ ಅಂಶಗಳು ಆಗಾಗ ಅವರ್ತದಲ್ಲಿ ಬಿಡುಗಡೆಯಾಗಿ ನೀರನ್ನು ಹಾಗೆ ಅಚ್ಚ ಬಿಳಿಯ ನೊರೆಯಾಗಿ ಸಮಯಕ್ಕನುಗುಣವಾಗಿ, ಮೂರು ದಿನಕಾಲ ಹರಿಯುತ್ತಿದೆ ಎನ್ನುತ್ತಾರೆ. ಅವರ ವಾದ, ನಂಬಿಕೆಗಳು ಅವರವರದ್ದು.
ದೇಶದ ಪ್ರಮುಖ ಪ್ರವಾಸಿ ಸ್ಥಳಗಳ ಹೆಗ್ಗುರುತಾಗಿರುವ ಒಡಿಶಾ ಇತ್ತ ದೇವಸ್ಥಾನ, ಅತ್ತ ತೀರ್ಥಕ್ಷೇತ್ರ, ಅದಕ್ಕೂ ಮೊದಲಿಗೆ ಸಮುದ್ರ ತೀರ, ಹಿಂದಕ್ಕೆ ಬಂದರೆ ಪುರಿ ಜಗನ್ನಾಥನ ಜಗತ್ಪ್ರಸಿದ್ಧ ಯಾತ್ರೆ, ಜಾತ್ರೆ ಸೇರಿದಂತೆ ಸೂರ್ಯ ದೇವಸ್ಥಾನದ ಕೋನಾರ್ಕ್ ಹೀಗೆ ಅದರದ್ದೇ ಆದ ಪ್ರವಾಸಿ ಐಡೆಂಟಿಟಿಯನ್ನು ಹೊಂದಿರುವ ರಾಜ್ಯ. ಆದರೆ ಮಯೂರ್ ಭಂಜ್ ಪ್ರದೇಶದ ಸಿಮಿಲಿಪಾಲ್ ಅರಣ್ಯ ವಲಯದ ಆಕರ್ಷಣೆಗಳೇ ಬೇರೆ. ಅದರಿಂದ ಪ್ರವಾಸದ ಹೊರತಾದ ಭೇಟಿಗಳು ಈ ಭಾಗವನ್ನು ಆರ್ಥಿಕವಾಗಿಯೂ ಮೇಲ್ದರ್ಜೆಗೆ ಏರಿಸುವಷ್ಟು ಶಕ್ತವಾಗಿ, ಇಲ್ಲಿ ಕ್ಯಾಂಪಿಂಗ್ ಮತ್ತು ಇತ್ಯಾದಿ ಚಟುವಟಿಕೆಯಲ್ಲಿ ಕಾರ್ಯಚರಿಸುತ್ತಿವೆ.
ಮೂಲತಃ ಈ ಪ್ರಮುಖ ಸ್ಥಳಗಳಿಂದ ದೂರವೇ ಇರುವ ದೇವಕುಂಡ, ಅದರ ಅರಣ್ಯ ಪ್ರದೇಶ ಮತ್ತು ಹಸಿರು ಸೇರಿದಂತೆ ರಾಷ್ಟ್ರೀಯ ಉದ್ಯಾನದಲ್ಲಿರುವುದು ಸಾಕಷ್ಟು ಮುತುವರ್ಜಿ ಕಾಯ್ದುಕೊಳ್ಳಲು ಕಾರಣವಾಗಿದೆ. ಇದರ ಮೂಲ ನೆಲೆಯಿಂದ ಆಚೆಗೆ ಹತ್ತೇ ಕಿ.ಮೀ. ದೂರ ಇರುವ ಉಡಾಲಾ ಪ್ರದೇಶ ಮಹಾಭಾರತ ವಿರಾಟ ಪರ್ವದ ಐತಿಹ್ಯ ಹೊಂದಿದ್ದು ಪಾಂಡವರು ಕಳೆದ ಕೊನೆಯ ಒಂದು ವರ್ಷದ ಕಥಾ ನಕಕ್ಕೆ ಜತೆಯಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಅವರ ಆಯುಧ ಅವಿತಿಡುವ ಶಮೀ ವೃಕ್ಷವೂ ಇಲ್ಲಿದ್ದು ನಂಬುಗೆ ಉಳ್ಳವರಿಗೆ ಮತ್ತೊಂದು ಬೋನಸ್ ಪ್ರದೇಶ ಇದು. ಕಾಡು ದಾರಿ ಮತ್ತು ಉಡಾಲಾದ ವಿಶಿಷ್ಟ ಐತಿಹ್ಯದ ಕಾರಣ ಸಣ್ಣಮಟ್ಟದಲ್ಲಿ ಪ್ರದೇಶವನ್ನು ಆರ್ಥಿಕವಾಗಿ ಸ್ಥಳೀಯರು ಬಳಸಿಕೊಳ್ಳುತ್ತಿದ್ದಾರೆ.
ಉಡಾಲಾ ಡಿವಿಸನ್ನ ದೇವಕುಂಡ ಮುಖ್ಯ ಪಟ್ಟಣವಾದ ಪ್ರದೇಶವಾದ ಬಾರಿಪಾಡಾದಿಂದ ಅರವತ್ತೈದು ಕಿ.ಮೀ. ಆದರೆ ಜಿಯ ಮುಖ್ಯಸ್ಥಾನ ಬಾಲಸೋರ್ನಿಂದ ತೊಂಬತ್ತು ಕಿ.ಮೀ. ದೂರವಿದೆ. ಕುಲ್ದೀಹಾ ಮತ್ತು ಲುಲುಂಗ್ ಪ್ರದೇಶಗಳೂ ಇನ್ನೆರಡು ದಿಕ್ಕಿನಿಂದ ಇಷ್ಟೆ ಹೆಚ್ಚು ಕಡಿಮೆ ಅರವತ್ತೆಪ್ಪತ್ತು ಕಿ.ಮೀ. ದೂರದಲ್ಲಿದ್ದು ಅಲ್ಲಿಗೂ ಸೂಕ್ತ ವಾಹನ ಮತ್ತು ರಸ್ತೆಸಾರಿಗೆ ಇನ್ನಿತರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಮಟ್ಟಿಗೆ ಸಣ್ಣ ನಗರಗಳೂ ಹೌದು.
ಅಲ್ಲದೆ ಇವೆರಡೂ ಪಟ್ಟಣಗಳು ಸಾಕಷ್ಟು ನಿರಂತರ ಓಡಾಟದ ರೈಲು ಸೌಲಭ್ಯವನ್ನು ಹೋದಿದ್ದು, ವಿಮಾನ ಪಯಣ ಸ್ವಲ್ಪ ದೂರವೇ. ಕಾರಣ ಪ್ರಮುಖ ವಿಮಾನ ನಿಲ್ದಾಣಗಳೆರಡು ಕನಿಷ್ಠ ಇನ್ನೂರೈವತ್ತು ಕಿ.ಮೀ. ದೂರವಿದ್ದು, ರಸ್ತೆ ಸಾರಿಗೆ ಮಾತ್ರ ಸೂಕ್ತವಾಗಿ ಸಂಪರ್ಕ ಕಲ್ಪಿಸಿವೆ. ಸ್ಥಳೀಯ ಜೀಪು ಮತ್ತು ಟ್ಯಾಕ್ಸಿ ಆಟೊ ರಿಕ್ಷಾಗಳು ನಿಗದಿತ ಹತ್ತಿರ ಊರುಗಳಿಂದ ಪ್ರವಾಸಿಗರಿಗೆ ಟ್ರೆಕ್ಕಿಂಗ್ನವರಿಗೆ ಸೇವೆ ಸಲ್ಲಿಸುತ್ತಿದ್ದು, ಶ್ರಾವಣ ಮತ್ತು ಮಕರ ಸಂಕ್ರಮಣ ಹೊತ್ತಿಗೆ ಇದು ಅಪ್ಪಟ ತೀರ್ಥ ಕ್ಷೇತ್ರವಾಗಿ ಬದಲಾ ಗುತ್ತದೆ. ಅಂಬಿಕಾ ದೇವಿಯ ಮಂದಿರದ ಕಾರಣ ಜನಗಳ ಭಕ್ತಿಯ ಪರಾಕಾಷ್ಠೆಗೆ ದೇವಕುಂಡ ಒಮ್ಮೆ ನಲುಗುವುದು ಸುಳ್ಳಲ್ಲ.
ಆಗ ಈ ಉಳಿದ ಕುಂಡಗಳಾದ ಭದ್ರಾ ಕುಂಡ, ತೈಲ ಕುಂಡ, ಹರಿದ್ರಾ ಕುಂಡ ಮತ್ತು ದೇವಿಕುಂಡಗಳು ಮುನ್ನೆಲೆಗೆ ಬರುತ್ತವೆ. ಅಲ್ಲಿ
ಯೋನಿಪೂಜೆಯ ಒಂದು ಐತಿಹ್ಯದ ಕತೆಯೂ ಲಭ್ಯವಿದ್ದು ಅದೆಲ್ಲ ಯಾವ ಮಟ್ಟಿಗೆ ನಿಜ ಏನು ಎತ್ತ ಎಂಬುವುದು ಭಾರತ ದಂತಹ ಹಲವು ಸಂಪ್ರದಾಯ ಮತ್ತು ನಂಬುಗೆಯ ದೇಶದಲ್ಲಿ ಸುಲಭಕ್ಕೆ ಕೈಗೂ, ನಂಬುಗೆಗೂ ಪ್ರಾಯೋಗಿಕ ಮಾಹಿತಿ ಇತ್ಯಾ ದಿಗೂ ದಕ್ಕುವುದು ಕಷ್ಟ.
ನಿರ್ದಿಷ್ಟ ಹಬ್ಬದ ಹೊತ್ತಿಗೆ ಇದು ಪಂಚಸಾಗರ ತೀರ್ಥವಾಗಿ ಭಕ್ತರ ನಂಬುಗೆಯ ತೀರ್ಥದ ಮುಳುಗೇಳುವ ನೆಲೆಯಾಗುತ್ತದೆ. ಆಗ ಮುಳುಗೇಳುವ ಕಾರಣ ಮತ್ತು ಆ ತೀರ್ಥಕ್ಷೇತ್ರದ ಸ್ನಾನದ ಮಹಿಮೆಯಿಂದ ಭಕ್ತಾದಿಗಳ ಎಲ್ಲ ರೋಗರುಜಿನಗಳಿಗೆ ತೀರ್ಥರೂಪ ದಲ್ಲಿ ದೇವಿಯ ವರದಾನವಿದ್ದು ಪರಿಹಾರಗಳು ಸಿಗುತ್ತವೆ ಎನ್ನುವ ನಂಬಿಕೆ ದೊಡ್ಡ ಮಟ್ಟದಲ್ಲಿ ಚಾಲ್ತಿಯಲ್ಲಿದೆ. ಮೊದಲೆಲ್ಲ ಇದು ವರ್ಕೌಟ್ ಆಗುತ್ತಿದ್ದುದೂ ಹೌದಾಗಿತ್ತು. ಕಾರಣ ಮೇಲ್ಗಡೆ ಇರುವ ಹರಿದ್ವರ್ಣದ ಕಾಡಿನ ಮಡಿಲಿನಿಂದ ಬಸಿಯುವ ನೀರು ರಭಸದಲ್ಲಿ ಹಲವು ರೀತಿಯ ವನಸ್ಪತಿ ಮತ್ತು ಔಷಧಿಯ ಗುಣಗಳ ಅಂಶಗಳನ್ನು ತನ್ನೊಂದಿಗೆ ನೀರಿನಲ್ಲಿ ಸೇರಿಸಿಕೊಂಡು ಧುಮುಕುತ್ತಿತ್ತಲ್ಲ.
ಮುಳುಗಿ ಏಳುವಾಗ ಮೈಗೂ, ತೀರ್ಥರೂಪದಲ್ಲಿ ನೀರನ್ನು ಸೇವಿಸುವ ಜನರಿಗೆ ಹಲವು ರೋಗಗಳಿಗಾದರೂ ಬಹುಶಃ ನೈಸರ್ಗಿಕ ಪರಿಹಾರ ಸಮಾಧಾನ ಸಿಕ್ಕಿದ್ದೀತು. ಹಾಗಾಗಿ ಆಗಿನ ಚಾಲ್ತಿಯಲ್ಲಿರುವ ನಿಜ ವಿದ್ಯಮಾನಗಳು ಆ ಹೊತ್ತಿಗೆ ಧಾರ್ಮಿಕ ನಂಬುಗೆ ಯನ್ನು ಗಟ್ಟಿಗೊಳಿಸುವ ಮೂಲಕ, ಈಗ ವರ್ಷದರಡು ಬಾರಿ ಅಪ್ಪಟ ಜಾತ್ರೆಯಂತಾಗುತ್ತದೆ ಇದು. ಎತ್ತರದ ಶಿಲಾ ಪರ್ವತದ ನೆತ್ತಿಗಿರುವ ದೇವಿಯ ಪಾದದಡಿಯಿಂದ ನುಸುಳುವ ನೀರು ಬೀಳುವ ಪರಿ ಅದ್ಭುತ. ಕರ್ನಾಟಕಾದ ಅಪ್ಸರಕೊಂಡ ಒಮ್ಮೆ ಮನಸ್ಸಿನ ಸೈಡ್ವಿಂಗಿನಿಂದ ರಪ್ಪನೆ ಪಾಸಾಗುವುದು ನಿಶ್ಚಿತ. ಅಷ್ಟೆ ಚೆಂದ ಮತ್ತು ನಿಸರ್ಗ ರಮಣೀಯತೆ ಎರಡೂ ಕಡೆ.
ಮಳೆಗಾಲದಲ್ಲಿ ಎಲ್ಲ ದಿಕ್ಕಿನಿಂದ ಅಷ್ಟೂ ಕುಂಡಗಳಲ್ಲಿ ಧುಮ್ಮಿಕ್ಕುವ ಪರಿಗೆ ಪಂಚಕುಂಡವೆಂದಿದ್ದರೂ ನೀರಿನ ಹರಿವು ಕಮ್ಮಿ ಯಾದರೂ ಸಣ್ಣ ತೊರೆಯಾದರೂ ದೇವಕುಂಡ ಮಾತ್ರ ನಿತ್ಯ ಶಾಮಲೆ. ಹಾಗಾಗಿ ಪಂಚಸಾಗರ, ತೀರ್ಥ, ಕುಂಡಗಳ ಇತ್ಯಾದಿ ಹೆಸರುಗಳ ಹೊರತಾಗಿಯೂ ದೇವಕುಂಡಾ ಎಂದೇ ಪ್ರಸಿದ್ಧಿ. ಅಲೆಮಾರಿಗಳಂತೆ ಟೆಂಟ್ ಹಾಕಿಕೊಂಡು ಇದ್ದು ಹೋಗಲು ತುಂಬ ಸೂಕ್ತ ತಾಣ. ಒಮ್ಮೆ ಬಿದ್ಕೊಂಡೂ ಬನ್ನಿ ಅವಕಾಶ ಸಿಕ್ಕಿದಾಗ.