Thursday, 12th December 2024

ಉತ್ತರಪ್ರದೇಶವನ್ನು ಬದಲಾಯಿಸುತ್ತಿರುವ ಅಭಿವೃದ್ದಿ ಮಂತ್ರದ ಆಡಳಿತ 

ಅಭಿವ್ಯಕ್ತಿ
ಗಣೇಶ್ ಭಟ್ ವಾರಣಾಸಿ

ಒಮ್ಮೆ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ದೆಹಲಿಗೆ ಸೇರುವ ರಸ್ತೆ ಉತ್ತರ ಪ್ರದೇಶದ ಮೂಲಕವಾಗಿ ಸಾಗುತ್ತದೆ ಎಂದು ಹೇಳಿದ್ದರು. ಭಾರತದ ರಾಜಕಾರಣದಲ್ಲಿ ಉತ್ತರಪ್ರದೇಶವು ವಹಿಸುತ್ತಿರುವ ಮಹತ್ತರ ಪಾತ್ರವನ್ನು ಕವಿ ಹೃದಯದ ವಾಜಪೇಯಿ ಹೀಗೆ ಬಣ್ಣಿಸಿದ್ದರು. ಭಾರತದ ಅತ್ಯಂತ ಜನ ನಿಬಿಡ ರಾಜ್ಯ ಉತ್ತರಪ್ರದೇಶವಾಗಿದೆ.

2011ರ ಜನಗಣತಿಯ ಪ್ರಕಾರ ಉತ್ತರ ಪ್ರದೇಶದ ಜನಸಂಖ್ಯೆ 20 ಕೋಟಿ ಆಗಿತ್ತು. ಈಗ ಆ ರಾಜ್ಯದ ಜನಸಂಖ್ಯೆ ಸುಮಾರು 23.7
ಕೋಟಿಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಜಗತ್ತಿನ 193 ದೇಶಗಳಲ್ಲಿ 189 ದೇಶಗಳ ಜನಸಂಖ್ಯೆ ಉತ್ತರ ಪ್ರದೇಶದ ಜನಸಂಖ್ಯೆಯಷ್ಟಿಲ್ಲ. ಉತ್ತರಪ್ರದೇಶವನ್ನು ಒಂದು ಸ್ವತಂತ್ರ ದೇಶದಂತೆ ಪರಿಗಣಿಸಿದಲ್ಲಿ ಅದು ಜಾಗತಿಕವಾಗಿ 5ನೇ ಅತೀ ಹೆಚ್ಚು ಜನಸಂಖ್ಯೆಯ ದೇಶವಾಗುತ್ತಿತ್ತು. ಅತೀ ಹೆಚ್ಚು ಸದಸ್ಯರನ್ನು ಲೋಕಸಭೆಗೆ ಹಾಗೂ ರಾಜ್ಯಸಭೆಗೆ ಆರಿಸಿ ಕಳುಹಿಸುವ ರಾಜ್ಯವೂ
ಉತ್ತರಪ್ರದೇಶವೇ. ಅಲ್ಲಿಂದ 80 ಎಂಪಿಗಳು ಲೋಕಸಭೆಗೆ ಹಾಗೂ 32 ಎಂಪಿಗಳು ರಾಜ್ಯಸಭೆಗೆ ಆಯ್ಕೆಯಾಗುತ್ತಾರೆ.

ಇದೇ ಕಾರಣದಿಂದ ದೇಶದ ಆಡಳಿತ ಚುಕ್ಕಾಣಿಯನ್ನು ಹಿಡಿಯಬಯಸುವ ರಾಜಕೀಯ ಪಕ್ಷಗಳು ಉತ್ತರಪ್ರದೇಶವನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತವೆ. ಅಲ್ಲಿನ ರಾಜಕೀಯದ ಮೇಲೆ ಪ್ರಭುತ್ವವನ್ನು ಸಾಧಿಸುವ ರಾಜಕೀಯ ಪಕ್ಷಗಳು ದೆಹಲಿಯ ಅಧಿಕಾರದ ಗದ್ದುಗೆಗೆ ಹತ್ತಿರವಾಗುತ್ತಾರೆ. 1985ರ ಕಾಲದಲ್ಲಿ ಬೀಮಾರೂ (ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಉತ್ತರ ಪ್ರದೇಶ) ರಾಜ್ಯಗಳೆಂದು ಗುರುತಿಸಲ್ಪಟ್ಟಿದ್ದ ರಾಜ್ಯಗಳಲ್ಲಿ ಉತ್ತರ ಪ್ರದೇಶವೂ ಇತ್ತು. ಅಲ್ಲಿ ಅತೀ ಹೆಚ್ಚು ಬಡತನ, ನಿರುದ್ಯೋಗ, ಭ್ರಷ್ಟಾಚಾರ, ಶಿಶುಮರಣ, ಸಾಮಾಜಿಕ ಅಸಮಾನತೆ, ಸ್ವಜನ ಪಕ್ಷಪಾತ, ಅಪರಾಧ, ಸ್ತ್ರೀ ಶೋಷಣೆ ಮೊದಲಾದವುಗಳು ಅಲ್ಲಿ ಹೆಚ್ಚು ಇತ್ತು. ಈಗಲೂ ಅವುಗಳು ಸಂಪೂರ್ಣವಾಗಿ ನಿವಾರಣೆಯಾಗಿಲ್ಲ. ಅಲ್ಲಿನ ರಾಜಕೀಯ ವ್ಯವಸ್ಥೆಯೂ ಹಾಗೆಯೇ ಅಪರಾಧ ಹಿನ್ನೆಲೆ ಇರುವ ರಾಜಕಾರಣಿಗಳೂ ಅಲ್ಲಿ ಹೆಚ್ಚೇ. ಎಷ್ಟೋ ಮಂದಿ ಕುಖ್ಯಾತ ಗ್ಯಾಂಗ್ ಸ್ಟರ್‌ಗಳು ಹಾಗೂ ಅಪರಾಧಿಗಳು ಜೈಲಿನಲ್ಲಿದ್ದುಕೊಂಡೇ ಚುನಾವಣೆಗೆ ನಿಂತು ಜಯಿಸುವುದು ಅಲ್ಲಿ ಸರ್ವೇ ಸಾಮಾನ್ಯ ಎನ್ನುವಂತೆ ಇದ್ದವು.

2012ನೇ ಇಸವಿಯಲ್ಲಿ ನಡೆದ ರಾಜ್ಯ ಚುನಾವಣೆಯಲ್ಲಿ ಸುಮಾರು ಮೂವತ್ತು ಮಂದಿ ಅಪರಾಧಿಗಳು ಜೈಲಿನಲ್ಲಿದ್ದುಕೊಂಡೇ ಚುನಾವಣೆಗೆ ಸ್ಪರ್ಧಿಸಿದ್ದರು. ಕೆಲವರು ಗೆದ್ದಿದ್ದರು ಕೂಡಾ. ಉತ್ತರ ಪ್ರದೇಶದಲ್ಲಿ 2017ರಲ್ಲಿ ನಡೆದ ಚುನಾವಣೆಯಲ್ಲಿ ಭಾಜಪಾ
ಭಾರೀ ಬಹುಮತದಿಂದ ಚುನಾವಣೆಯನ್ನು ಗೆದ್ದಿತು. ಜಾತಿ ಸಮೀಕರಣವನ್ನು ಮೀರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಅಭಿವೃದ್ಧಿ ಕೆಲಸಗಳ ಆಧಾರದಲ್ಲಿ ಬಿಜೆಪಿಯು ಉತ್ತರಪ್ರದೇಶವನ್ನು ಗೆದ್ದಿತು. ಗೋರಖ್ ಪುರದಿಂದ ಸತತವಾಗಿ 5 ಬಾರಿ ಗೆದ್ದಿದ್ದ ನಾಥ ಪರಂಪರೆಯ ಮಠಾಧೀಶ ಯೋಗಿ ಆದಿತ್ಯನಾಥರನ್ನು ಉತ್ತರಪ್ರದೇಶದ ಮುಖ್ಯಮಂತ್ರಿಯನ್ನಾಗಿ ಆರಿಸಲಾ ಯಿತು.

ಹಿಂದೂ ಸನ್ಯಾಸಿಯೊಬ್ಬ ಮುಖ್ಯಮಂತ್ರಿಯಾದ ಕೆಲವು ವಿಚಾರವಾದಿಗಳ ಟೀಕೆಗೂ ಗುರಿಯಾಯಿತು. ಖ್ಯಾತ ಸುಪ್ರೀಂ ಕೋರ್ಟ್ ವಕೀಲ ಫಾಲೀ ನಾರಿಮನ್, ಸಿನಿಮಾ ನಟ ಪ್ರಕಾಶ್ ರಾಜ್ ಮೊದಲಾದವರು ಬಿಜೆಪಿ ಪಕ್ಷವು ಆದಿತ್ಯನಾಥ್ ಅನ್ನು ಮುಖ್ಯಮಂತ್ರಿ ಯಾಗಿಸುವುದರ ಮೂಲಕ ಹಿಂದುತ್ವ ರಾಜಕೀಯವನ್ನು ಮರು ಸ್ಥಾಪಿಸುತ್ತಿದೆ ಎಂದು ಟೀಕೆಯನ್ನು ಮಾಡಿದ್ದರು. ಆದರೆ ಉತ್ತರಪ್ರದೇಶದಂಥ ಅತ್ಯಂತ ಅತೀ ಸಂಕೀರ್ಣ ರಾಜಕೀಯವನ್ನು ಸರಿಪಡಿಸಲು ಯೋಗಿ ಆದಿತ್ಯನಾಥರಂಥ ಸನ್ಯಾಸಿಯ
ಅವಶ್ಯಕತೆ ಇತ್ತು.

ಯೋಗಿ ಮುಖ್ಯಮಂತ್ರಿಯಾದ ಮೊದಲಿಗೆ ಉತ್ತರ ಪ್ರದೇಶದ ಹದಗೆಟ್ಟ ಕಾನೂನು ವ್ಯವಸ್ಥೆಯನ್ನು ಸರಿಪಡಿಸುವ ಕೆಲಸಕ್ಕೆ ಕೈಹಾಕಿದರು. ಉತ್ತರಪ್ರದೇಶದ ಪಾತಕಲೋಕ ರಾಜ್ಯದ ಇಡೀ ಪೊಲೀಸ್ ವ್ಯವಸ್ಥೆಯನ್ನೇ ಅಲ್ಲಾಡಿಸುತ್ತಿತ್ತು. ಕೊಲೆಯಂಥ ಅಪರಾಧ, ಸುಲಿಗೆಯಂಥ ಅಪರಾಧವನ್ನು ಮಾಡಿ ಕಾನೂನು ಕೈಗಳಿಂದ ನುಣುಚಿಕೊಳ್ಳುವ ವ್ಯವಸ್ಥೆಯೂ ಅಲ್ಲಿತ್ತು. ಅಪರಾಧಿ ಗಳ ವಿರುದ್ಧ ಕೋರ್ಟ್ ನಲ್ಲಿ ಸಾಕ್ಷಿ ಹೇಳಲು ಕೂಡಾ ಯಾರೂ ಧೈರ್ಯ ತೋರುತ್ತಿರಲಿಲ್ಲ.

ಇತ್ತೀಚೀಗೆ ಎನ್ಕೌಟರ್‌ನಲ್ಲಿ ಬಲಿಯಾದ ವಿಕಾಸ್ ದುಬೆ ಪ್ರಕರಣದ ಹಿನ್ನೆಲೆಯನ್ನು ನೋಡಿದಾಗ ಇದು ಅರ್ಥವಾಗಬಹುದು. ರಾಜಕಾರಣಿಯಾಗಿ ಪರಿವರ್ತಿತನಾಗಿದ್ದ ಕಾನ್ಪುರದ ಗ್ಯಾಂಗ್’ಸ್ಟರ್ ದುಬೆಯ ಮೇಲೆ 60ಕ್ಕೂ ಹೆಚ್ಚಿನ ಕ್ರಿಮಿನಲ್ ಕೇಸ್ ಗಳಿದ್ದವು. ಉತ್ತರಪ್ರದೇಶದ ಮಂತ್ರಿಯೋರ್ವರ ಕೊಲೆಯ ಆರೋಪವೂ ಆತನ ಮೇಲೆ ಇತ್ತು. ಈತನನ್ನು ಬಂಧಿಸಲು ಆತನ ಮನೆಗೆ ತೆರಳಿದ ಪೊಲೀಸರ ಮೇಲೆ ಆಕ್ರಮಣ ನಡೆಸಿದ ದುಬೆಯ ತಂಡ 8 ಮಂದಿ ಪೋಲೀಸರ ಸಾವಿಗೆ ಕಾರಣವಾಯಿತು.

ಮಧ್ಯಪ್ರದೇಶದ ಉಜ್ಜೆನಿಯಲ್ಲಿ ಅಡಗಿ ಕುಳಿತಿದ್ದ ದುಬೆಯನ್ನು ಪೊಲೀಸರು ಬಂಧಿಸಿ ಯುಪಿಗೆ ಕರೆತರುತ್ತಿದ್ದ ಸಂದರ್ಭದಲ್ಲಿ ದುಬೆ ಪೊಲೀಸರ ಮೇಲೆ ಆಕ್ರಮಣ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಆತನನ್ನು ಗುಂಡಿಕ್ಕಿ ಸಾಯಿಸಿದರು. ಕಳೆದ 3 ವರ್ಷಗಳಲ್ಲಿ ಉತ್ತರಪ್ರದೇಶದಲ್ಲಿ 6476 ಎನ್ಕೌಂಟರ್‌ಗಳು ನಡೆದಿವೆ. ಇವುಗಳಲ್ಲಿ 125 ಗ್ಯಾಂಗ್ ಸ್ಟರ್‌ಗಳನ್ನು ಸಾಯಿಸ ಲಾಗಿದೆ.

2419 ರೌಡಿಗಳು ಎನ್ಕೌಂಟರ್‌ಗಳಲ್ಲಿ ಗಾಯಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ 13 ಪೊಲೀಸರ ಅಮೂಲ್ಯ ಜೀವವೂ ಹರಣ ವಾಗಿದೆ. ಈಗ ಅಲ್ಲಿ ಕಾನೂನು ಕ್ರಮ ಕೈಗೊಳ್ಳಲು ಬಂದ ಪೊಲೀಸರ ಮೇಲೆಯೇ ಆಕ್ರಮಣ ಮಾಡುವ ಕುಖ್ಯಾತರನ್ನು ಮಟ್ಟ ಹಾಕಲಾಗುತ್ತಿದೆ. ಪೊಲೀಸ್ ಹಾಗೂ ಕ್ರಿಮಿನಲ್‌ಗಳ ನಡುವಿನ ಘರ್ಷಣೆಯ ಸಂದರ್ಭದಲ್ಲಿ ಪೊಲೀಸರಿಗೆ ತಮ್ಮ ಆತ್ಮ ರಕ್ಷಣೆ ಮಾಡಿಕೊಳ್ಳಲು ಗುಂಡುಹಾರಿಸಲು ಅವಕಾಶವನ್ನು ಕೊಡಲಾಗಿದೆ. 2020ನೇ ಇಸವಿಯಲ್ಲಿ ವಿಕಾಸ್ ದುಬೆಯೂ ಸೇರಿದಂತೆ 21 ಮಂದಿ ರೌಡಿ ಶೀಟರ್‌ಗಳು ಎನ್ಕೌಂಟರ್‌ನಲ್ಲಿ ಸಾಯಿಸಲ್ಪಟ್ಟಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 13,837 ಅಪರಾಧಿಗಳನ್ನು ಜೈಲಿಗೆ ಹಾಕಲಾಗಿದೆ. ಉತ್ತರಪ್ರದೇಶದಲ್ಲಿ ರೌಡಿಗಳು ಎನ್ಕೌಂಟರ್‌ಗೆ ಎಷ್ಟು ಹೆದರಿದ್ದಾರೆ ಎಂದರೆ ಅವರೆಲ್ಲಾ ತಾವಾಗಿಯೇ ಬಂದು ತಪ್ಪೊಪ್ಪಿಕೊಂಡು ಶರಣಾಗುತ್ತಿದ್ದಾರೆ. ಉತ್ತರ ಪ್ರದೇಶವನ್ನು ಕಾಡುತ್ತಿದ್ದ ಇನ್ನೊಂದು ಪ್ರಮುಖ ಸಮಸ್ಯೆ ಮೆದುಳು ಜ್ವರದಂಥ (ಎನ್ಸೆಫಾಲಿಟಿಸ್) ಸಾಂಕ್ರಾಮಿಕ ರೋಗಗಳು. ಮಕ್ಕಳನ್ನು ಕಾಡುವ ಮೆದುಳು ಜ್ವರಕ್ಕೆ ರಾಜ್ಯದಲ್ಲಿ ಸಾವಿರಾರು ಮಕ್ಕಳು ಬಲಿಯಾಗುತ್ತಿದ್ದರು. ಯುಪಿಯಲ್ಲಿ 2014ರಲ್ಲಿ ಈ ಮಹಾಮಾರಿಗೆ 5850 ಮಕ್ಕಳು ಬಲಿಯಾಗಿದ್ದರು. 2016ರಲ್ಲಿ 6917 ಮಕ್ಕಳು ಹಾಗೂ 2016ರಲ್ಲಿ 6121 ಮಕ್ಕಳು ಎನ್ಸೆಫಾಲಿಟಿಸ್‌ಗೆ
ಬಲಿಯಾಗಿದ್ದರು. ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಮೇಲೆ ಅವರು ಪ್ರತಿನಿಧಿಸುತ್ತಿದ್ದ ಗೋರಖ್‌ಪುರ್ ನಲ್ಲೇ 2017ನೇ ಇಸವಿಯಲ್ಲಿ ಮೆದುಳುಜ್ವರಕ್ಕೆ 1317 ಮಕ್ಕಳು ಬಲಿಯಾದುದು ರಾಷ್ಟಿಯ ಸುದ್ದಿಯಾಯಿತು.

ಯೋಗಿ ಸರಕಾರವು ಅದೇ ವರ್ಷ ಎನ್ಸೆಫಾಲಿಟಿಸ್ ಬಾಧಿತ ಜಿಲ್ಲೆಗಳಲ್ಲಿ ಮಕ್ಕಳಿಗೆ ಎನ್ಸೆಫಾಲಿಟಿಸ್ ನಿರೋಧಕ ಚುಚ್ಚುಮದ್ದು ಕಾರ್ಯಕ್ರಮ ದಸ್ತಕ್ ಆಂದೋಲನವನ್ನು ಆರಂಭಿಸಿತು. ಜಾಗತಿಕ ಸಂಸ್ಥೆಯಾದ ಯುನಿಸೆಫ್ ಕೂಡಾ ಈ ಕಾರ್ಯದಲ್ಲಿ ಉತ್ತರಪ್ರದೇಶ ಸರಕಾರದ ಜೊತೆಗೆ ಕೈಜೋಡಿಸಿತು. ಲಸಿಕಾ ಕಾರ್ಯಕ್ರಮವು ಮಕ್ಕಳ ಜೀವ ಉಳಿಸುವಲ್ಲಿ ಬಹಳ ಯಶಸ್ವಿಯಾ ಯಿತು. 2018ರಲ್ಲಿ ಎನ್ಸೆಫಾಲಿಟಿಸ್‌ಗೆ ಬಲಿಯಾಗುತ್ತಿದ್ದ ಮಕ್ಕಳ ಸಂಖ್ಯೆಯಲ್ಲಿ ಶೇ.65 ಪ್ರಮಾಣ ಕಡಿಮೆಯಾಯಿತು. 2018ರಲ್ಲಿ 125 ಮಕ್ಕಳು ಮಾತ್ರ ಈ ರೋಗಕ್ಕೆೆ ಬಲಿಯಾಗಿದ್ದರು.

2019ರಲ್ಲಿ ಸಾವಿನ ಪ್ರಮಾಣದಲ್ಲಿ ಶೇ.90 ಕಡಿಮೆಯಾಗಿದೆ ಹಾಗೂ ಆ ವರ್ಷ ಮೆದುಳುಜ್ವರಕ್ಕೆ ಅಲ್ಲಿ ಬಲಿಯಾದವರ ಸಂಖ್ಯೆ 30. 2020 ರಲ್ಲಿ ಇಡೀ ರಾಜ್ಯದಲ್ಲಿ ಕೇವಲ 7 ಮಕ್ಕಳು ಮಾತ್ರ ಎನ್ಸೆಫಾಲಿಟಿಸ್‌ಗೆ ಬಲಿಯಾಗಿದ್ದಾರೆ. ಇದು ಯೋಗಿ ಆದಿತ್ಯನಾಥ ಸರಕಾರವು ಎಷ್ಟು ಯಶಸ್ವಿಯಾಗಿ ಹಾಗೂ ಪರಿಣಾಮಕಾರಿಯಾಗಿ ಲಸಿಕೆ ಕಾರ್ಯಕ್ರಮವನ್ನು ಜಾರಿಗೊಳಿಸಿ ಎನ್ಸೆಫಾಲಿಟಿಸ್ ಅನ್ನು ನಿಯಂತ್ರಿಸಿತು ಎನ್ನುವುದಕ್ಕೆ ಒಂದು ಉದಾಹರಣೆಯಾಗಿದೆ.

ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶಪಡಿಸುವ ಗಲಭೆಕೋರರ ಆಸ್ತಿಯನ್ನು ಮಟ್ಟಹಾಕಿ ನಷ್ಟವನ್ನು ಭರಿಸುವ ಸುಗ್ರೀವಾಜ್ಞೆ ಯನ್ನು ಹೊರಡಿಸಿದ ಮೊದಲ ರಾಜ್ಯ ಉತ್ತರಪ್ರದೇಶ. ಇತ್ತೀಚೆಗೆ ಸಿಎಎ ವಿರುದ್ಧದ ಪ್ರತಿಭಟನೆಯ ನೆಪದಲ್ಲಿ ಸಾರ್ವಜನಿಕ ಆಸ್ತಿಗ ಹಾನಿ ಮಾಡಿದ ಪ್ರತಿಭಟನಕಾರರ ಕೈಯಿಂದಲೇ ನಷ್ಟವನ್ನು ಸರಕಾರ ವಸೂಲಿ ಮಾಡಿದೆ.

ರಾಜ್ಯದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಬಗ್ಗೆ ಯೋಗಿ ಬಹಳ ಆಸ್ಥೆ ವಹಿಸಿದ್ದಾರೆ. ಯುಪಿಯ ಹಿಂದುಳಿದ ಪ್ರದೇಶ ಗಳ ಅಭಿವೃದ್ಧಿಗೆ ಹೆಚ್ಚು ಗಮನ ಕೊಡಲಾಗಿದೆ. 340.82 ಕಿಲೋಮೀಟರ್ ಉದ್ದದ ಪೂರ್ವಾಂಚಲ್ ಎಕ್ಸ್ಪ್ರೆಸ್ ವೇ, 290 ಕಿಲೋಮೀಟರ್ ಉದ್ದದ ಬುಂದೇಲ್ ಖಂಡ್ ಎಕ್ಸ್’ಪ್ರೆಸ್ ವೇ ಹಾಗೂ 596 ಕಿಲೋಮೀಟರ್ ಉದ್ದದ ಗಂಗಾ ಎಕ್ಸ್ಪ್ರೆಸ್ ವೇ
ನಿರ್ಮಾಣವಾಗುತ್ತಿದೆ. 2017ರ ಮೊದಲು ಉತ್ತರಪ್ರದೇಶದ ಕೇವಲ 2 ನಗರಗಳಿಗೆ ಮಾತ್ರ ವಿಮಾನಯಾನ ಸಂಪರ್ಕವಿತ್ತು. ಕಳೆದ 3 ವರ್ಷಗಳಲ್ಲಿ ಉತ್ತರಪ್ರದೇಶದ ಇನ್ನೂ 7 ನಗರಗಳಿಗೆ ವಿಮಾನ ಯಾನ ಸಂಪರ್ಕ ಆರಂಭವಾಗಿದೆ.

ಇನ್ನೂ 12 ವಿಮಾನ ನಿಲ್ದಾಣಗಳ ಕಾಮಗಾರಿ ನಡೆಯುತ್ತಿದೆ. ಬುಂದೇಲ್ ಖಂಡದಲ್ಲಿ 50 ಲಕ್ಷ ಕೃಷಿಕರಿಗೆ ಅನುಕೂಲವಾಗುವಂತೆ 18 ಲಕ್ಷ ಹೆಕ್ಟೇರ್ ಭೂಮಿಗೆ ನೀರುಣಿಸುವ ನೀರಾವರಿ ಯೋಜನೆ ಜಾರಿಯಾಗಿದೆ. ಅರ್ಜುನ್ ಸಹಾಯಕ್, ಭವಾನಿ, ಸರ್ಯೂ ಕಾಲುವೆ, ಮಧ್ಯಗಂಗಾ ಕಾಲುವೆ ಮೊದಲಾದ ನೀರಾವರಿ ಯೋಜನೆಗಳಿಂದ ಕೋಟ್ಯಂತರ ರೈತರಿಗೆ ಸಹಾಯ ವಾಗುತ್ತಿದೆ. 1.14 ಕೋಟಿ ಬಡವರ ಮನೆಗಳಿಗೆ ಉಚಿತ ವಿದ್ಯುದೀಕರಣವಾಗಿ ರಾಜ್ಯದ ಬಹುತೇಕ ಶೇ.100 ಮನೆಗಳಿಗೆ ವಿದ್ಯುದೀ ಕರಣವಾಗಿದೆ. ಬಡವರಿಗೆ ಉಚಿತ ಮನೆ ಕಟ್ಟಿಸಿಕೊಡುವ ಪ್ರಧಾನ ಮಂತ್ರಿ ಆವಾಸ್ ಯೋಜನಾದಡಿಯಲ್ಲಿ ಉತ್ತರಪ್ರದೇಶಕ್ಕೆ 14,61,516 ಮನೆಗಳು ಮಂಜೂರಾಗಿದ್ದು ಇವುಗಳಲ್ಲಿ ಈಗಾಗಲೇ 13,89,507 ಮನೆಗಳನ್ನು ನಿರ್ಮಿಸಿ ಕೊಡಲಾಗಿದ್ದು, ಶೇ.95 ಗುರಿಯನ್ನು ಸಾಧಿಸಲಾಗಿದೆ.

ಬಡವರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಯೋಜನೆಯಾದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 1,30,81,054 ಮನೆಗಳ ಮಹಿಳೆಯರಿಗೆ ಅಡುಗೆ ಗ್ಯಾಸ್ ಸಂಪರ್ಕ ಕೊಡಲಾಗಿದೆ. ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ ಉತ್ತರ ಪ್ರದೇಶದಲ್ಲಿ 1.7 ಕೋಟಿ ಟಾಯ್ಲೆಟ್ ಗಳನ್ನು ಕಟ್ಟಿಸಿಕೊಡಲಾಗಿದೆ. ಇದೀಗ ಉತ್ತರಪ್ರದೇಶವು ಹೂಡಿಕೆದಾರರ ಹಾಗೂ ಕೈಗಾರಿಕೋದ್ಯಮಿಗಳ ಆಕರ್ಷಣೆಯ ಕೇಂದ್ರವಾಗಿ ಬದಲಾಗಿದೆ. ಅಲ್ಲಿ ಕಡಿಮೆಯಾಗಿರುವ ಭ್ರಷ್ಟಾಚಾರ, ಹೆಚ್ಚಿದ ಮೂಲಭೂತ ಸೌಕರ್ಯ, ಹೂಡಿಕೆ ದಾರರಿಗೆ ಪ್ರೋತ್ಸಾಹ ಕೊಡುವ ನೀತಿ ಮೊದಲಾದ ಕಾರಣಗಳಿಂದ ಉತ್ತರಪ್ರದೇಶವು ಹೂಡಿಕೆದಾರರಿಗೆ  ಪ್ರಿಯವಾಗುತ್ತಿದೆ.

ರಾಜ್ಯದ ಕಾರ್ಮಿಕ ಕಾನೂನುಗಳನ್ನು ಹಾಗೂ ಉದ್ಯಮಗಳಿಗೆ ಭೂಮಿ ಖರೀದಿಯ ಕಾನೂನುಗಳನ್ನು ಸಡಿಲಿಸಲಾಗಿದೆ. ಹೂಡಿಕೆ ದಾರರು ಭೂಮಿಗೆ ಬೇಡಿಕೆ ಸಲ್ಲಿಸಿ 15 ದಿವಸಗಳೊಳಗೆ ಭೂಮಿಯನ್ನು ಮಂಜೂರು ಮಾಡುವ ಏಕ ಗವಾಕ್ಷಿ ವ್ಯವಸ್ಥೆಗಳನ್ನು ಅಲ್ಲಿ ಮಾಡಲಾಗಿದೆ. ಈ ವರ್ಷ ದೇಶದ ರಾಜ್ಯವಾರು ಉದ್ಯಮ ಸ್ನೇಹಿ ಸೂಚ್ಯಂಕವಾದ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಪಟ್ಟಿಯಲ್ಲಿ ಉತ್ತರಪ್ರದೇಶವು ಎರಡನೇ ಸ್ಥಾನಕ್ಕೆ ಏರಿದೆ. ಜಾಗತಿಕವಾಗಿ ಕರೋನಾ ಹಬ್ಬಲು ಕಾರಣವಾದುದುರಿಂದ ಹಾಗೂ ತನ್ನ ವಿಸ್ತಾರವಾದದಿಂದ ಚೀನಾವು ಜಾಗತಿಕವಾಗಿ ವಿವಿಧ ದೇಶಗಳ ಕೋಪಕ್ಕೆ ಪಾತ್ರವಾಗಿ ಬಹಳಷ್ಟು ಹೂಡಿಕೆದಾರರು ತಮ್ಮ ಉತ್ಪಾದನಾ ಚಟುವಟಿಕೆಯನ್ನು ಚೀನಾದಿಂದ ಭಾರತಕ್ಕೆ ವರ್ಗಾಯಿಸುತ್ತಿದ್ದು ಇವರಲ್ಲಿ ಬಹಳಷ್ಟು ಹೂಡಿಕೆದಾರರನ್ನು ತನ್ನ ರಾಜ್ಯಕ್ಕೆೆ ಸೆಳೆಯುವಲ್ಲಿ ಯೋಗಿ ಸಫಲರಾಗಿದ್ದಾರೆ.

ಜರ್ಮನಿಯ ಪ್ರಸಿದ್ಧ ಪಾದರಕ್ಷೆ ತಯಾರಕ ಸಂಸ್ಥೆ ವಾನ್ ವೆಲ್ಕ್ಸ್ ತನ್ನ ಉತ್ಪಾದನಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ಚೀನಾದಿಂದ ಉತ್ತರ ಪ್ರದೇಶದ ಆಗ್ರಾಗೆ ವರ್ಗಾಯಿಸಿದೆ. ಜರ್ಮನಿಯ ಮಿಲಿಟರ್ ಹಾರ್ಡ್ ವೇರ್ ಉತ್ಪಾದಕ ರೈನ್ ಮೆಟಲ್ ಸಂಸ್ಥೆ ಉತ್ತರ ಪ್ರದೇಶಕ್ಕೆ ವರ್ಗಾವಣೆಗೊಂಡಿದೆ ಹಾಗೂ ದಕ್ಷಿಣ ಕೊರಿಯಾದ ಇಲೆಕ್ಟ್ರಿಕ್ ಕಾರು ಉತ್ಪಾದಕ ಸಂಸ್ಥೆ ಎಡಿಸನ್
ಉತ್ತರಪ್ರದೇಶದಲ್ಲಿ 5000 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಿ ಉತ್ಪಾದನಾ ಚಟುವಟಿಕೆಗಳನ್ನು ಆರಂಭಿಸಿದೆ. ಸಿಸ್ಕೋ, ಅಡೋಬ್, ಯುಪಿಎಸ್, ಫೆಡೆಕ್ಸ್ ಮೊದಲಾದ ಅಮೆರಿಕಾದ 60 ಕಂಪನಿಗಳು ತಮ್ಮ ಉತ್ಪಾದನಾ ಚಟುವಟಿಕೆಗಳನ್ನು ಚೀನಾ ದಿಂದ ಉತ್ತರ ಪ್ರದೇಶಕ್ಕೆ ವರ್ಗಾಯಿಸುವ ಆಸಕ್ತಿ ತೋರಿವೆ.

ಸ್ಯಾಮ್ಸಂಗ್ ಮೊಬೈಲ್ ಕಂಪನಿಯು ತನ್ನ ಅತೀ ದೊಡ್ಡ ಉತ್ಪಾದನಾ ಕೇಂದ್ರವನ್ನು ಉತ್ತರಪ್ರದೇಶದ ನೋಯಿಡಾದಲ್ಲಿ
ಆರಂಭಿಸುತ್ತಿದೆ. 6 ಜಪಾನಿ ಕಂಪನಿಗಳು ಕೂಡಾ ಚೀನಾದಿಂದ ಉತ್ತರಪ್ರದೇಶದೆಡೆ ಮುಖ ಮಾಡಿವೆ. ಇದೀಗ ದೇಶದ ಅತೀದೊಡ್ಡ ಫಿಲ್ಮ್ ಸಿಟಿಯನ್ನು ಗೌತಮಬುದ್ಧ ನಗರದಲ್ಲಿ ಆರಂಭಿಸುವುದಾಗಿ ಯೋಗಿ ಘೋಷಣೆ ಮಾಡಿದ್ದಾರೆ. ಉತ್ತರಪ್ರದೇಶದ ವಾರ್ಷಿಕ ಜಿಡಿಪಿಯನ್ನು ಒಂದು ಟ್ರಿಲಿಯನ್ ಡಾಲರ್(ಸುಮಾರು 73 ಲಕ್ಷ ಕೋಟಿ ರುಪಾಯಿಗಳು) ಗಳಿಗೆ ಏರಿಸುವ ಯೋಜನೆಯನ್ನು ಕೂಡ ಯೋಗಿ ಸರಕಾರವು ಹಾಕಿಕೊಂಡಿದೆ.

ಮಹಾರಾಷ್ಟ್ರ, ದೆಹಲಿ, ಮಧ್ಯಪ್ರದೇಶ ಹೀಗೆ ಉದ್ಯೋಗ ಅರಸಿ ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದ ಸುಮಾರು 31 ಲಕ್ಷ ಯುಪಿಗರು ಕರೋನಾ ಕಾರಣದಿಂದ ಉತ್ತರಪ್ರದೇಶಕ್ಕೆೆ ಹಿಂದಿರುಗಿದ್ದಾರೆ. ಇವರೆಲ್ಲರ ಕೌಶಲ್ಯದ ಬಗ್ಗೆ ಸಮೀಕ್ಷೆಯನ್ನು (ಸ್ಕಿಲ್ ಮ್ಯಾಪಿಂಗ್) ಸರಕಾರವು ನಡೆಸಿದೆ. ಸದ್ಯ ಅವರೆಲ್ಲರಿಗೂ ಉಚಿತವಾಗಿ ಆಹಾರ ವಸ್ತುಗಳನ್ನು ರೇಶನ್ ವ್ಯವಸ್ಥೆಯ ಮೂಲಕ ಮಾಡಲಾಗಿದ್ದು, ಅವರಿಗೆ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಉದ್ಯೋ ಗವನ್ನು ಕೊಡಲಾಗುತ್ತಿದೆ. ಈ ಎಲ್ಲರಿಗೂ ಉತ್ತರ ಪ್ರದೇಶದಲ್ಲಿಯೇ ಉದ್ಯೋಗ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಸರಕಾರ
ಹೇಳಿದೆ. ಉತ್ತರಪ್ರದೇಶದಲ್ಲಿಂದು ಅಪರಾಧ ಪ್ರಕರಣಗಳು ಕಡಿಮೆಯಾಗುತ್ತಿದೆ, ಭ್ರಷ್ಟಾಚಾರ ರಹಿತ ಪಾರದರ್ಷಕ ವ್ಯವಸ್ಥೆಯಲ್ಲಿ ಸರಕಾರಿ ಸೌಲಭ್ಯಗಳು ಜನರನ್ನು ನೇರವಾಗಿ ತಲುಪುತ್ತಿದೆ, ರಸ್ತೆ, ವಿದ್ಯುತ್ ನೀರಾವರಿ ಮೂಲಭೂತ ಇದೆಲ್ಲದರ ಪರಿಣಾಮವಾಗಿ
ಹೂಡಿಕೆದಾರರು ಉತ್ತರ ಪ್ರದೇಶದತ್ತ ಮುಖ ಮಾಡುತ್ತಿದ್ದಾರೆ.

ಒಂದು ಕಾಲದಲ್ಲಿ ಗೂಂಡಾರಾಜ್ ಅನಿಸಿಕೊಂಡಿದ್ದ ಉತ್ತರಪ್ರದೇಶದ ಕಾನೂನು ವ್ಯವಸ್ಥೆ ನಿಧಾನವಾಗಿ ಹಳಿಗೆ ಬರುತ್ತಿದೆ.