ಶಶಾಂಕಣ
shashidhara.halady@gmail.com
ಶ್ಯಾಮ್‌ಜಿ ಕೃಷ್ಣವರ್ಮ ಅವರು ಭಾರತೀಯರ ನೆನಪಿನಿಂದ ಬಹುತೇಕ ಮಾಸಿಹೋಗಿದ್ದಾರೆ; ಆದರೆ ಅವರು ಹುಟ್ಟುಹಾಕಿದ ‘ಇಂಡಿಯಾ ಹೌಸ್’ ವಿಚಾರವು ಆಗಾಗ ಪ್ರಸ್ತಾಪಕ್ಕೆ ಬರುತ್ತದೆ. ಭಾರತದಲ್ಲಿ ಯಾವುದಾದರೂ ರಾಜ್ಯದ ದಿವಾನರಾಗಿದ್ದು ಕೊಂಡು, ಉತ್ತಮ ಸಂಬಳ ಅಥವಾ ಗೌರವಧನ ಪಡೆದು, ಬ್ರಿಟಿಷ್ ಸರಕಾರದ ರೀಜೆಂಟ್/ಏಜೆಂಟರೊಂದಿಗೆ ಸಹಕರಿಸಿ ಆಡಳಿತ ನಡೆಸುತ್ತಾ ಕೃಷ್ಣವರ್ಮ ಅವರು ಇರಬಹುದಿತ್ತು. ಆದರೆ, ಅವರು ಪ್ರಾಮಾಣಿಕವಾಗಿ ಸ್ವಾತಂತ್ರ್ಯದ ಹಾದಿ ಹಿಡಿದರು.
ಶ್ಯಾಮ್‌ಜಿ ಕೃಷ್ಣವರ್ಮ ಅವರ ಹೆಸರನ್ನು ನಮ್ಮಲ್ಲಿ ಹೆಚ್ಚಿನವರು ಕೇಳದೇ ಇರಬಹುದು. ಆದರೆ ಇವರು ೧೯೩೦ರಲ್ಲಿ ಮೃತಪಟ್ಟಾಗ, ಇವರ ಸಾವಿನ ಸುದ್ದಿಯನ್ನು ಬ್ರಿಟಿಷರು ರಹಸ್ಯವಾಗಿಡಲು ಪ್ರಯತ್ನಿಸಿದ್ದರು ಎಂಬ ವಿಚಾರ ತಿಳಿದರೆ, ಕೆಲವರಿಗಾದರೂ ಇವರ ಕುರಿತು ತುಸು ಕುತೂಹಲ ಹುಟ್ಟಬಹುದು. ಇವರು ಸತ್ತಿದ್ದು ಜಿನೇವಾದಲ್ಲಿ! ಅಲ್ಲಿ ಅವರೇನು ಮಾಡುತ್ತಿದ್ದರು? ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು, ಅಮೆರಿಕ ಮೊದಲಾದ ಮುಂದುವರಿದ ದೇಶಗಳ ಸಹಾಯ ಪಡೆಯಲು, ಅಂತಾರಾಷ್ಟ್ರೀಯ ಹೋರಾಟ ನಡೆಸುತ್ತಾ, ಜಿನೇವಾ ದಿಂದಲೇ ‘ದಿ ಇಂಡಿಯನ್ ಸೋಷಿಯಾಲಜಿಸ್ಟ್’ ಎಂಬ ಪತ್ರಿಕೆ ನಡೆಸುತ್ತಿದ್ದರು! ಜತೆಗೆ, ಅಮೆರಿಕದ ಅಧ್ಯಕ್ಷ ವುಡ್ರೋ ವಿಲ್ಸನ್ ಹೆಸರಿನಲ್ಲಿ ಒಂದು ದತ್ತಿನಿಧಿ ಭಾಷಣವನ್ನು ‘ಲೀಗ್ ಆಫ್ ನೇಷನ್ಸ್’ನಲ್ಲಿ ನಡೆಸಲು ೧೦,೦೦೦ ಫ್ರಾಂಕ್ ಸಹಾಯಧನವನ್ನು ಘೋಷಿಸಿದ್ದರು.
ಆದರೆ, ಆ ಮೊತ್ತವನ್ನು ಸದುಪಯೋಗಪಡಿಸಿಕೊಳ್ಳಲು ಯಾರೂ ಮುಂದೆಬರದೇ ಇದ್ದುದು ಬೇರೆ ಮಾತು. ಫ್ರಾನ್ಸ್, ಸ್ವಿಜರ್ಲೆಂಡ್ ಮೊದಲಾದ ದೇಶಗಳಲ್ಲಿದ್ದು
ಕೊಂಡು, ನಮ್ಮ ದೇಶವನ್ನು ಬ್ರಿಟಿಷರ ದಾಸ್ಯದಿಂದ ಹೊರತರಲು ಇವರು ನಡೆಸಿದ ಪ್ರಾಮಾಣಿಕ ಹೋರಾಟ ವನ್ನು ನಮ್ಮ ದೇಶದ ಇಂದಿನ ತಲೆಮಾರು ಬಹುತೇಕ ಮರೆತಿರುವುದು ವಿಪರ್ಯಾಸವೇ ಸರಿ. ಶ್ಯಾಮ್‌ಜಿ ಕೃಷ್ಣವರ್ಮ (೧೮೫೭-೧೯೩೦) ಎಂಬ ಹೋರಾಟಗಾರನ ಸಾಹಸಗಳನ್ನು ಪ್ರಸ್ತಾಪಿಸುತ್ತಾ
ಹೋದರೆ, ಮೊದಲಿಗೆ ಕಾಣಿಸುವುದೇ ಲಂಡನ್‌ನಲ್ಲಿದ್ದ ‘ಇಂಡಿಯಾ ಹೌಸ್’ ಮತ್ತು ಅವರು ಹುಟ್ಟುಹಾಕಿದ‘ಇಂಡಿಯನ್ ಹೋಂ ಲೀಗ್’.
ಜೀವನವಿಡೀ ಹೋರಾಟದಲ್ಲೇ ತೊಡಗಿಕೊಂಡ ಈ ವ್ಯಕ್ತಿಯ ಬದುಕಿನ ವಿವರಗಳನ್ನು ನೋಡುತ್ತಾ ಹೋದರೆ, ಸಣ್ಣಗೆ ಅಚ್ಚರಿಯಾಗುತ್ತದೆ, ಆ ಕಾಲದಲ್ಲಿ ಅವರಿಗೆ ದೇಶಾಭಿಮಾನವು ಅದೆಲ್ಲಿಂದ ತುಂಬಿ ಬಂತು ಎಂದು ವಿಸ್ಮಯವಾಗುತ್ತದೆ. ಗುಜರಾತಿನ ಮಾಂಡ್ವಿಯಲ್ಲಿ ೧.೧೦.೧೮೫೭ರಲ್ಲಿ ಭಾನುಷಾಲಿ ಸಮುದಾಯದಲ್ಲಿ ಜನಿಸಿದ ಶ್ಯಾಮ್‌ಜಿ ಕೃಷ್ಣವರ್ಮ ಅವರು, ಮುಂಬಯಿಯಲ್ಲಿ ವಿದ್ಯಾಭ್ಯಾಸ ನಡೆಸಿ, ಆರ್ಯಸಮಾಜದ ದಯಾನಂದ ಸರಸ್ವತಿ ಯವರ ಸಂಪರ್ಕಕ್ಕೆ ಬಂದರು. ಆಕ್ಸ್-ರ್ಡ್‌ಗೆ ೧೮೭೯ರಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹೋದ ಕೃಷ್ಣವರ್ಮ ಅವರು, ೧೮೮೫ರಲ್ಲಿ ವಾಪಸು ಬಂದು, ಮಧ್ಯಪ್ರದೇಶದಲ್ಲಿ ದಿವಾನರಾದರು; ೧೮೮೩ರಿಂದ ೧೮೯೫ರ ತನಕ ಉದಯ ಪುರ ಮಹಾರಾಜರ ಜತೆ ಇದ್ದು, ನಂತರ ಜುನಾಗಢ್‌ನ ದಿವಾನರಾದರು.
ಅಲ್ಲಿ ಬ್ರಿಟಿಷ್ ಏಜೆಂಟನಿಂದ ಅವಮಾನಕ್ಕೆ ಒಳಗಾದಾಗ, ಬ್ರಿಟಿಷರ ವಸಾಹತು ನೀತಿಯು ನಮ್ಮ ದೇಶಕ್ಕೆ ಎಷ್ಟು ಮಾರಕ ಎಂದರಿತು, ಬ್ರಿಟಿಷರ ವಿರುದ್ಧ ಹೋರಾಡಲು ಸಿದ್ಧರಾದರು. ಅದಾಗಲೇ ನಮ್ಮ ದೇಶದಲ್ಲಿ ಕಾಂಗ್ರೆಸ್ ಪಕ್ಷವು ಚಟುವಟಿಕೆಗಳನ್ನು ನಡೆಸಲು ಆರಂಭಿಸಿತ್ತು; ಕುಂದುಕೊರತೆಗಳ ಕುರಿತು ಮನವಿ ನೀಡುವುದು, ಬ್ರಿಟಿಷ್ ಅಧಿಕಾರಿಗಳ ವಿರುದ್ಧ ಮೌನ ಪ್ರತಿಭಟನೆ ನಡೆಸುವುದು ಮೊದಲಾದವು ಕಾಂಗ್ರೆಸ್‌ನ ಹೋರಾಟದ ಹಾದಿ ಯಾಗಿತ್ತು; ಅಂದಿನ ದಿನಗಳಲ್ಲಿ ಬಿಳಿ ಜನರು ಮತ್ತು ನಮ್ಮ ದೇಶದ ವಿದ್ಯಾವಂತರು ಕಾಂಗ್ರೆಸ್‌ನ ಸದಸ್ಯರಾಗಿ ದ್ದರು. ಇದು ಕೃಷ್ಣವರ್ಮ ಅವರಿಗೆ ಸರಿಕಾಣಲಿಲ್ಲ.
ಪೂನಾದಲ್ಲಿ ಪ್ಲೇಗ್ ಹಾವಳಿ ಕಾಡಿದಾಗ, ಬ್ರಿಟಿಷ್ ಅಧಿಕಾರಿಗಳು ಸ್ಥಳೀಯರ ಮೇಲೆ ಇನ್ನಿಲ್ಲದ ದಬ್ಬಾಳಿಕೆ ಮಾಡಿದ್ದರು; ಇದರ ವಿರುದ್ಧ ಸಿಡಿದೆದ್ದ ಚಾಪೇಕರ್
ಸಹೋದರರು, ಡಬ್ಲ್ಯು.ಸಿ.ರ‍್ಯಾಂಡ್ ಎಂಬ ಹೆಸರಿನ ‘ಪ್ಲೇಗ್ ಕಮಿಷನರ್’ ಅನ್ನು ಗುಂಡಿಟ್ಟು ಕೊಂದರು (೧೮೯೭); ಇದರಿಂದ ಸ್ಫೂರ್ತಿ ಪಡೆದ ಕೃಷ್ಣವರ್ಮ
ಅವರು, ಬ್ರಿಟಿಷರ ವಿರುದ್ಧ ಸಕ್ರಿಯ ಹೋರಾಟವೇ ಸರಿಯಾದ ಮಾರ್ಗ ಎಂದು ನಿರ್ಧರಿಸಿ, ಲಂಡನ್‌ಗೆ ತೆರಳಿದರು.
ನಮ್ಮ ದೇಶವನ್ನು ಆಳುತ್ತಿದ್ದ ಬ್ರಿಟಿಷರ ರಾಜಧಾನಿ ಲಂಡನ್, ಆದ್ದರಿಂದ, ಅಲ್ಲಿಂದಲೇ ತನ್ನ ಹೋರಾಟ ಆರಂಭಿಸಬೇಕು ಎಂದು ನಿರ್ಧರಿಸಿದ ಕೃಷ್ಣವರ್ಮ
ಅವರು, ೧೯೦೦ರಲ್ಲಿ ಲಂಡನ್ನಿನಲ್ಲಿ ಒಂದು ಬೃಹತ್ ಬಂಗಲೆ ಖರೀದಿಸಿದರು. ಇದೇ ಇಂಡಿಯಾ ಹೌಸ್; ಮುಂದೆ ಹಲವು ಹೋರಾಟಗಾರರಿಗೆ, ಕ್ರಾಂತಿಕಾರಿ ಗಳಿಗೆ ನೆಲೆ ನೀಡಿದ ಕಟ್ಟಡ. ನಮ್ಮ ದೇಶ ಸ್ವಾತಂತ್ರ್ಯಕ್ಕಾಗಿ ತಾನು ಗಳಿಸಿದ ಸಂಪತ್ತನ್ನು ವಿನಿಯೋಗಿಸುವ ಅವರ ಈ ನಿರ್ಧಾರವು, ಲಂಡನ್‌ನಲ್ಲಿ ಹೋರಾಟದ ತಳಪಾಯ ವನ್ನು ನಿರ್ಮಿಸಿತು. ಮುಂದೆ ನಡೆದ ಗದರ್ ಚಳವಳಿಗೂ ಈ ಹೋರಾಟದ ಸ್ಫೂರ್ತಿ ಇದೆ. ನಮ್ಮ ದೇಶದ ಯುವಕರು ಲಂಡನ್‌ನಲ್ಲಿ ವಿದ್ಯಾಭ್ಯಾಸ ಮಾಡುವುದಾದರೆ, ತಾವು ೨೦೦೦ ರು. ಸಹಾಯಧನ ನೀಡುವುದಾಗಿ ಘೋಷಿಸಿದರು. ಜತೆಗೆ ದಯಾನಂದ ಸರಸ್ವತಿ ಅವರ ನೆನಪಿನಲ್ಲಿ ಸ್ಕಾಲರ್‌ಶಿಪ್, ಇತರ ನಾಲ್ಕು ಸ್ಕಾಲರ್‌ಶಿಪ್ ಗಳನ್ನು ಘೋಷಿಸಿ, ಭಾರತದಿಂದ ವಿದ್ಯಾರ್ಥಿ ಗಳನ್ನುಆಹ್ವಾನಿಸಿದರು.
೧೯೦೫ರಲ್ಲಿ ಅವರು ‘ದಿ ಇಂಡಿಯನ್ ಹೋಂ ರೂಲ್ ಸೊಸೈಟಿ’ ಆರಂಭಿಸಿ, ‘ದಿ ಇಂಡಿಯನ್ ಸೋಷಿಯಾಲ ಜಿಸ್ಟ್’ ಎಂಬ ಪತ್ರಿಕೆಯನ್ನು ಹುಟ್ಟುಹಾಕಿದರು.
ರಾಷ್ಟ್ರೀಯವಾದ, ಭಾರತಕ್ಕೆ ಸ್ವಾತಂತ್ರ್ಯ ದೊರಕಿಸುವುದು ಮೊದಲಾದವುಗಳೇ ಈ ಎರಡೂ ಚಟುವಟಿಕೆಗಳ ಉದ್ದೇಶ. ದಿ ಇಂಡಿಯನ್ ಹೋಂ ರೂಲ್ ಸೊಸೈಟಿಯ ಅಧಿಕೃತ ಧ್ಯೇಯೋದ್ದೇಶಗಳು ಸ್ಪಷ್ಟವಾಗಿದ್ದವು. ೧. ಭಾರತಕ್ಕೆ ತನ್ನದೇ ಆಡಳಿತ ದೊರಕಿಸುವುದು. ೨. ಭಾರತದ ಸ್ವಾತಂತ್ರ್ಯಕ್ಕಾಗಿ ಇಂಗ್ಲೆಂಡಿ ನಲ್ಲಿದ್ದುಕೊಂಡು ಪ್ರಚಾರ ನಡೆಸುವುದು. ೩. ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಏಕತೆಯ ಅರಿವನ್ನು ಭಾರತೀಯರಲ್ಲಿ ಮೂಡಿಸುವುದು.
ಭಾರತದಿಂದ ಬರುವ ವಿದ್ಯಾರ್ಥಿಗಳಿಗೆ ಸಹಾಯಧನ ಮತ್ತು ಆಶ್ರಯ ನೀಡುವ ಇವರ ಉದಾರ ನಡೆಯು, ಹಲವು ವಿದ್ಯಾರ್ಥಿಗಳನ್ನು ಅಲ್ಲಿಗೆ ಆಕರ್ಷಿಸಿತು.
ಇಂಡಿಯಾ ಹೌಸ್‌ನಲ್ಲಿ ೨೫ ಜನ ವಿದ್ಯಾರ್ಥಿಗಳು ತಂಗಬಹುದಾದ ಹಾಸ್ಟೆಲ್ ಅನ್ನು ಸಹ ಆರಂಭಿಸಿದರು. ದಾದಾಬಾಯಿ ನವರೋಜಿ, ಲಾಲಾಲಜಪತ್ ರಾಯ್,
ಮೇಡಂ ಭಿಕಾಜಿ ಕಾಮಾ ಮತ್ತು ಸ್ಥಳೀಯ ಕೆಲವು ಯುರೋಪಿಯನ್ನರ ಸಹಕಾರವು ಇವರ ಸಾಹಸಕ್ಕೆ ದೊರಕಿತು. ಇಂಡಿಯಾ ಹೌಸ್, ೧೯೦೫ರಿಂದ ೧೯೧೦ರ
ತನಕ ಚಟುವಟಿಕೆಯಿಂದಿತ್ತು – ಇದೇ ಅವಧಿಯಲ್ಲಿ ಲಾಲಾ ಹರ್‌ದಯಾಳ್, ವೀರೇಂದ್ರನಾಥ ಚಟ್ಟೋಪಾಧ್ಯಾಯ, ವಿನಾಯಕ ದಾಮೋದರ ಸಾವರ್ಕರ್,
ಮದನ್ ಲಾಲ್ ಧಿಂಗ್ರಾ ಮೊದಲಾದವರು ಇಲ್ಲಿದ್ದುಕೊಂಡು, ಬ್ರಿಟಿಷರ ವಿರುದ್ಧ ಸಕ್ರಿಯ ಹೋರಾಟ ನಡೆಸಿದರು ಎಂಬುದನ್ನು ಗಮನಿಸಿದಾಗ, ಶ್ಯಾಮ್‌ಜಿ
ಕೃಷ್ಣವರ್ಮ ಅವರ ಸಾಹಸದ ಮಟ್ಟ ಅರಿವಾಗುತ್ತದೆ.
೧೯೦೫ರಲ್ಲಿ ಲಂಡನ್‌ನಲ್ಲಿ ನಡೆದ ಯುನೈಟೆಡ್ ಕಾಂಗ್ರೆಸ್ ಆಫ್ ಡೆಮೊಕ್ರಾಟ್ಸ್‌ನಲ್ಲಿ ಶ್ಯಾಮ್‌ಜಿಯವರು ಇಂಡಿಯನ್ ಹೋಮ್ ರೂಲ್ ಸೊಸೈಟಿಯ ಪರವಾಗಿ
ಭಾಗವಹಿಸಿ, ಭಾರತಕ್ಕೆ ಸ್ವಾತಂತ್ರ್ಯ ನೀಡುವ ವಿಚಾರ ವನ್ನು ತೀವ್ರವಾಗಿ ಪ್ರತಿಪಾದಿಸಿದರು. ಇದನ್ನು ಗಮನಿಸಿದ ಬ್ರಿಟಿಷ್ ಸರಕಾರವು, ತಕ್ಷಣ ಇವರ ಮೇಲೆ
ಕಣ್ಣಿಟ್ಟಿತು; ರಹಸ್ಯ ಪೊಲೀಸರು ಇವರನ್ನು ಮತ್ತು ಇಂಡಿಯಾ ಹೌಸ್ ಅನ್ನು ಗಮನಿಸಲು ಆರಂಭಿಸಿದರು. ದಿ ಇಂಡಿಯನ್ ಸೋಷಿಯಾಲಜಿಸ್ಟ್ ಪತ್ರಿಕೆಯಲ್ಲಿ
ಬ್ರಿಟಿಷರ ವಿರುದ್ಧ ಲೇಖನ ಬರೆದುದಕ್ಕಾಗಿ, ಶ್ಯಾಮ್‌ಜಿ ಕೃಷ್ಣವರ್ಮ ಅವರನ್ನು ‘ಇನ್ನರ್ ಟೆಂಪಲ್’ನಿಂದ ನಿಷೇಧಿಸಲಾಯಿತು. ಲಂಡನ್‌ನ ದಿ ಟೈಮ್ಸ್ ಪತ್ರಿಕೆಯು
ಇವರನ್ನು ‘ಕುಖ್ಯಾತ ಕೃಷ್ಣವರ್ಮ’ ಎಂದು ಸಂಬೋಧಿಸಿತು! ಇವರು ಎತ್ತ ಸಂಚರಿಸಿದರೂ, ರಹಸ್ಯ ಪೋಲೀಸರು ಇವರನ್ನು ಹಿಂಬಾಲಿಸತೊಡಗಿದರು!
ಲಂಡನ್‌ನಲ್ಲಿಯೇ ಇದ್ದರೆ, ಬ್ರಿಟಿಷ್ ಸರಕಾರವನ್ನು ಎದುರುಹಾಕಿಕೊಂಡು ಹೋರಾಟ ಮುಂದುವರಿಸು ವುದು ಕಷ್ಟ ಎಂದರಿತ ಕೃಷ್ಣವರ್ಮ ಅವರು, ೧೯೦೭ರಲ್ಲಿ
ಪ್ಯಾರಿಸ್‌ಗೆ ತಮ್ಮ ನೆಲೆಯನ್ನು ಬದಲಾಯಿಸಿದರು. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಇವರನ್ನು ತನ್ನ ದೇಶಕ್ಕೆ ಕಳಿಸಬೇಕೆಂದು ಬ್ರಿಟಿಷರು ಫ್ರೆಂಚ್
ಸರಕಾರಕ್ಕೆ ಬರೆದರೂ ಅದು ವಿಫಲಗೊಂಡು, ಕೃಷ್ಣ ವರ್ಮ ಅವರು ಪ್ಯಾರಿಸ್‌ನಲ್ಲಿ ನೆಲೆ ಕಂಡುಕೊಳ್ಳಲು ಅವಕಾಶವಾಯಿತು. ಬ್ರಿಟಿಷರ ವಿರುದ್ಧದ ಚಟುವಟಿಕೆ
ಗಳ ತಾಣವಾಗಿದ್ದ ಇಂಡಿಯಾ ಹೌಸ್‌ನಲ್ಲಿ ಸಾವರ್ಕರ್ ಮೊದಲಾದವರು ಚಟುವಟಿಕೆಗಳನ್ನು ಮುಂದುವರಿಸಿ ದರು. ಈ ಮಧ್ಯೆ, ಸಾವರ್ಕರ್ ಅವರ ಬಿಡುಗಡೆಗೆ,
ಪ್ಯಾರಿಸ್‌ನಲ್ಲಿದ್ದುಕೊಂಡು ಕೃಷ್ಣವರ್ಮ ಹೋರಾಟ ನಡೆಸಿದರು. ೧೯೧೪ರಲ್ಲಿ ಬ್ರಿಟನ್ ರಾಜ ಐದನೆಯ ಜಾರ್ಜ್ ಪ್ಯಾರಿಸ್‌ಗೆ ಬರುವ ಕಾಯಕ್ರಮವಿತ್ತು; ಮೊದಲ ಮಹಾಯುದ್ಧದ ಹಿನ್ನೆಲೆಯಲ್ಲಿ ಬ್ರಿಟಿಷ್ ಮತ್ತು ಫ್ರೆಂಚರ ನಡುವಿನ ಸ್ನೇಹವನ್ನು ಗುರುತಿಸಿದ ಕೃಷ್ಣವರ್ಮ ಅವರು, ಸ್ವಿಜರ್ಲೆಂಡ್‌ನ ಜಿನೇವಾಕ್ಕೆ ತಮ್ಮ ನೆಲೆಯನ್ನು ಬದಲಾಯಿಸಿದರು. ಯುದ್ಧದ ಕಾಲವಾದ್ದರಿಂದ ಸ್ವಿಜರ್ಲೆಂಡ್ ಸರಕಾರವೂ ಇವರ ಚಲನವಲನ ಗಳಿಗೆ ನಿಯಂತ್ರಣ ಹೇರಿತು.
ಜಿನೇವಾದಲ್ಲಿ ಪ್ರೊ ಇಂಡಿಯಾ ಕಮಿಟಿ ಎಂಬ ಸಂಸ್ಥೆಯಿತ್ತು; ಅದರ ಅಧ್ಯಕ್ಷ ಡಾ. ಬ್ರೀಸ್ ಎಂಬಾತನೊಂದಿಗೆ ಕೃಷ್ಣವರ್ಮ ಅವರು ಕಾಲಕಳೆಯತೊಡಗಿದರು. ಆದರೆ, ಡಾ. ಬ್ರೀಸ್ ಎಂಬಾತನು ಬ್ರಿಟಿಷರ ರಹಸ್ಯ ಏಜೆಂಟ್ ಎಂಬುದು ನಂತರ ತಿಳಿಯಿತು! ಬೇರೆ ದಾರಿ ಇರದೇ, ಜಿನೇವಾದಲ್ಲಿದ್ದುಕೊಂಡು, ಭಾರತದ ಪರ ಹೋರಾಟವನ್ನು ಮುಂದುವರಿಸಿದರು. ಯುದ್ಧ ಮುಗಿದ ನಂತರ, ಅಮೆರಿಕ ಮೊದಲಾದ ದೇಶ ಗಳ ಸಹಾಯ ಪಡೆದು, ಅಂತಾರಾಷ್ಟ್ರೀಯ ಮಟ್ಟದಲ್ಲಿ
ಸ್ವಾತಂತ್ರ್ಯಕ್ಕಾಗಿ ಜನಾಭಿಪ್ರಾಯ ಮೂಡಿಸಲು ಪ್ರಯತ್ನ ನಡೆಸಿದರು. ೧೯೨೨ರ ನಂತರ ಅವರ ಪತ್ರಿಕೆ ಇಂಡಿಯನ್ ಸೋಷಿಯಾಲಾಜಿಸ್ಟ್ ಮುಂದುವರಿಯಲಿಲ್ಲ.
೩೦.೩.೧೯೩೦ರಂದು ಅನಾರೋಗ್ಯದಿಂದ ಇವರು ನಿಧನ ರಾದಾಗ, ಬ್ರಿಟಿಷ್ ಸರಕಾರವು ಈ ಸುದ್ದಿಯನ್ನು ಕೆಲವು ದಿನಗಳ ಕಾಲ ರಹಸ್ಯವಾಗಿಡಲು ಪ್ರಯತ್ನಿಸಿತ್ತು! ತಾನು ಸತ್ತ ನಂತರ, ತನ್ನ ದೇಹದ ಬೂದಿಯನ್ನು ೧೦೦ ವರ್ಷಗಳ ತನಕ ಕಾಪಿಟ್ಟು, ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ನಂತರ, ಅಲ್ಲಿಗೆ ಕಳಿಸಬೇಕೆಂದು ಶ್ಯಾಮ್‌ಜಿ ಕೃಷ್ಣವರ್ಮ ಅವರು ಬಯಸಿದ್ದರು. ಅದಕ್ಕಾಗಿ ಜಿನೇವಾದ ಸ್ಥಳೀಯ ಆಡಳಿತದೊಂದಿಗೆ ಒಪ್ಪಂದಕ್ಕೆ ಬಂದು, ಹಣವನ್ನೂ ಪಾವತಿಸಿದ್ದರು! ಆದರೆ, ದೇಶಕ್ಕೆ ಸ್ವಾತಂತ್ರ್ಯ ದೊರಕಿದ ತಕ್ಷಣ ಅವರ ಈ ಆಸೆಯನ್ನು ನಮ್ಮ ದೇಶದ ಸರಕಾರ ನೆರವೇರಿಸಲಿಲ್ಲ; ದೇಶಕ್ಕೆ ಸ್ವಾತಂತ್ರ್ಯ ದೊರಕಿ ಅರ್ಧ ಶತಮಾನ ಕಳೆದ ನಂತರ, ಪ್ಯಾರಿಸ್‌ನಲ್ಲಿದ್ದ ಡಾ. ಮುಖರ್ಜಿ ಎಂಬುವವರ ಮನವಿ ಮತ್ತು ಪ್ರಯತ್ನದ ಮೇರೆಗೆ, ೨೨.೮.೨೦೦೩ರಂದು ಕೃಷ್ಣವರ್ಮ ಮತ್ತು ಅವರ ಮಡದಿ ಭಾನುಮತಿಯವರ ಅಸ್ತಿಯನ್ನು ನಮ್ಮ ದೇಶಕ್ಕೆ ತರಲಾಯಿತು ಮತ್ತು ಗುಜರಾತಿನಲ್ಲಿ ಸೂಕ್ತ ರೀತಿಯಲ್ಲಿ ವಿಸರ್ಜಿಸಲಾಯಿತು.
ಶ್ಯಾಮ್‌ಜಿ ಕೃಷ್ಣವರ್ಮ ಅವರು ಇಂದು ನಮ್ಮ ದೇಶದ ಜನರ ನೆನಪಿನಿಂದ ಬಹುತೇಕ ಮಾಸಿಹೋಗಿದ್ದಾರೆ; ಆದರೆ ಅವರು ಹುಟ್ಟುಹಾಕಿದ ‘ಇಂಡಿಯಾ
ಹೌಸ್’ ವಿಚಾರವು ಆಗಾಗ ಪ್ರಸ್ತಾಪಕ್ಕೆ ಬರುತ್ತದೆ. ನಮ್ಮ ದೇಶದಲ್ಲಿ ಯಾವುದಾದರೂ ರಾಜ್ಯದ ದಿವಾನರಾಗಿದ್ದು ಕೊಂಡು, ಉತ್ತಮ ಸಂಬಳ ಅಥವಾ ಗೌರವಧನ ಪಡೆದು, ಬ್ರಿಟಿಷ್ ಸರಕಾರದ ರೀಜೆಂಟ್ ಅಥವಾ ಏಜೆಂಟರೊಂದಿಗೆ ಸಹಕರಿಸಿ, ಆಡಳಿತ ನಡೆಸುತ್ತಾ ಕೃಷ್ಣವರ್ಮ ಅವರು ಇರಬಹುದಿತ್ತು. ಆದರೆ, ಅವರು ಪ್ರಾಮಾಣಿಕವಾಗಿ ಸ್ವಾತಂತ್ರ್ಯದ ಹಾದಿ ಹಿಡಿದರು. ತಮ್ಮ ಗಳಿಕೆಯ ಸಂಪತ್ತನ್ನು ಲಂಡನ್‌ನಲ್ಲಿದ್ದ ಬೃಹತ್ ಬಂಗಲೆ ಖರೀದಿಸಲು ವಿನಿಯೋಗಿಸಿ, ಅದನ್ನು ಇಂಡಿಯಾ ಹೌಸ್ ಎಂದು ಕರೆದು, ಇಂಡಿಯನ್ ಹೋಂ ಲೀಗ್ ಸಂಸ್ಥೆ ಸ್ಥಾಪಿಸಿದರು ಮಾತ್ರವಲ್ಲ, ಭಾರತದಿಂದ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳಿಗೆ ೨,೦೦೦ ರು. ವಿದ್ಯಾರ್ಥಿವೇತನ ನೀಡಿ, ಇಂಡಿಯಾ ಹೌಸ್‌ನಲ್ಲಿ ವಸತಿ ಸೌಕರ್ಯವನ್ನೂ ಮಾಡಿಕೊಟ್ಟರು! ರಾಷ್ಟ್ರೀಯ ಹೋರಾಟಗಾರರ ತಂಗುದಾಣವಾದ ಇಂಡಿಯಾ ಹೌಸ್ ೨೦೦೫ರಿಂದ ೨೦೧೦ರ ತನಕ ತೀವ್ರ ಚಟುವಟಿಕೆಯಿಂದ ಕೆಲಸ ಮಾಡಿತು.
೧೯೦೯ರ ಸಮಯದಲ್ಲಿ ಬ್ರಿಟಿಷ್ ರಹಸ್ಯ ಏಜೆಂಟರು ಮತ್ತು ಸ್ಕಾಟ್ಲೆಂಡ್‌ಯಾರ್ಡ್‌ನ ಪೊಲೀಸರು ಇಂಡಿಯಾ ಹೌಸ್ ಅನ್ನು ತೀವ್ರವಾಗಿ ಗಮನಿಸತೊಡಗಿದರು. ಈ ಕಟ್ಟಡದಲ್ಲಿ ಭಾರತೀಯರು ಸೇರುತ್ತಿದ್ದರು; ಸಾವರ್ಕರ್ ಮೊದಲಾದವರು ಭಾರತದ ಸ್ವಾತಂತ್ರ್ಯಕ್ಕಾಗಿ ಇಲ್ಲಿ ಭಾಷಣ ಮಾಡುತ್ತಿದ್ದರು. ಮಾತ್ರವಲ್ಲ, ಬಂದೂಕಿನ ಮೊನೆಯನ್ನು ಮುಂದೆ ಮಾಡಿ ನಮ್ಮ ದೇಶವನ್ನು ಆಳುತ್ತಿದ್ದ ಬ್ರಿಟಿಷರನ್ನು ಓಡಿಸಲು, ಬಂದೂಕು ಮತ್ತು ಪಿಸ್ತೂಲುಗಳನ್ನು ಬಳಸಬೇಕು ಎಂಬುದು ಅವರ ನಿಲುವಾಗಿತ್ತು.
ಕೊನೆಯಲ್ಲಿ, ೧೯೧೦ರಲ್ಲಿ ಇಂಡಿಯಾ ಹೌಸ್‌ನ ಚಟುವಟಿಕೆಗಳು ನಿಂತುಹೋಗಲು ಒಂದು ಕೊಲೆಯು ಕಾರಣವಾಯಿತು! ಇಂಡಿಯಾ ಹೌಸ್‌ನಲ್ಲಿ ನಡೆಯುತ್ತಿದ್ದ
ಭಾಷಣಗಳು, ಚಟುವಟಿಕೆಗಳು ಮೊದಲಾದವುಗಳಿಂದ ಪ್ರಭಾವಿತನಾದ ಮದನ್ ಲಾಲ್ ಧಿಂಗ್ರಾ ಎಂಬ ಯುವಕನು, ವಿಲಿಯಂ ಕರ್ಜನ್ ವೈಲಿ ಎಂಬಾತನನ್ನು
ಗುಂಡಿಟ್ಟು ಸಾಯಿಸಿದ! ಆತನು ಬ್ರಿಟಿಷರು ನಡೆಸುತ್ತಿದ್ದ ಭಾರತ ಸರಕಾರದ ಹಿರಿಯ ಅಽಕಾರಿಯಾಗಿದ್ದನು. ಲಂಡನ್‌ನ ಇಂಪೀರಿಯಲ್ ಇನ್‌ಸ್ಟಿಟ್ಯೂಟ್‌ನಲ್ಲಿ
೧.೭.೧೯೦೯ರಂದು ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಭೆ ನಡೆಯುತ್ತಿದ್ದಾಗಲೇ, ಎದುರು ಬಂದ ಧಿಂಗ್ರಾ, ಕರ್ಜನ್ ವೈಲಿಯ ಎದೆಗೆ ಗುಂಡು ಹಾರಿಸಿ
ಸಾಯಿಸಿದನು! ಧಿಂಗ್ರಾನನ್ನು ಬಂಧಿಸಿದ ಬ್ರಿಟಿಷರು, ೧೯.೮.೧೯೦೯ರಂದು ನೇಣಿಗೆ ಹಾಕಿದರು!
ಇದಾದ ನಂತರ, ಇಂಡಿಯಾ ಹೌಸ್ ಅನ್ನು ತೀವ್ರವಾಗಿ ತಪಾಸಣೆಗೆ ಒಳಪಡಿಸಿದ ಬ್ರಿಟಿಷ್ ಸರಕಾರವು, ಅಲ್ಲಿ ಮುಂದೆ ಯಾವುದೇ ಚಟುವಟಿಕೆ ನಡೆಯದಂತೆ
ಮಾಡಿತು. ಶ್ಯಾಮ್‌ಜಿ ಕೃಷ್ಣ ವರ್ಮ ಅವರು ಲಂಡನ್‌ನಲ್ಲಿ ಸ್ಥಾಪಿಸಿದ ಇಂಡಿಯಾ ಹೌಸ್, ನಂತರದ ವರ್ಷಗಳಲ್ಲಿ ಒಂದು ದಂತಕತೆಯ ಸ್ವರೂಪ ಪಡೆದದ್ದನ್ನು ಕಾಣ ಬಹುದು. ಆದರೆ ಇಂಥ ಮಹತ್ ತ್ಯಾಗಮಾಡಿದ ಕೃಷ್ಣ ವರ್ಮ ಅವರು, ಲಂಡನ್ ನಗರವನ್ನು ತೊರೆದು, ಕೊನೆಯ ತನಕವೂ ಪ್ಯಾರಿಸ್, ಜಿನೇವಾ ಮೊದಲಾದ ಪರದೇಶದ ನಗರಗಳಲ್ಲಿ ವಾಸಿಸಬೇಕಾಯಿತು. ಇವರಂತೆಯೇ ಮೇಡಂ ಭಿಕಾಜಿ ಕಾಮಾ, ಚಟ್ಟೋ ಮೊದಲಾದ ಹೋರಾಟಗಾರರು ಸಹ ದೇಶದಿಂದ ದೂರವೇ ಇರಬೇಕಾಯಿತು. ಸ್ವತಂತ್ರ ಭಾರತದ ನೆಲದ ಮೇಲೆ ನಡೆದಾಡುವ ಅವರ ಕನಸು ನನಸಾಗಲೇ ಇಲ್ಲ.