Friday, 20th September 2024

ಡಿಎನ್‌ಎ – ಸೀಕ್ವೆನ್ಸಿಂಗ್

ಅವಲೋಕನ

ಪ್ರೊ.ಎಂ.ಆರ್‌.ನಾಗರಾಜು/ಡಾ.ಗಣೇಶ್ ಎಸ್.ಹೆಗಡೆ

ಡಿಎನ್‌ಎ – ಸೀಕ್ವೆಂನ್ಸಿಂಗ್’ ಅಂದರೆ ಪ್ರತೀ ಜೀನ್ ದಲ್ಲಿಯ ಡಿಎನ್‌ಎ ಸುರುಳಿಗಳಲ್ಲಿನ ಎ, ಜಿ, ಸಿ, ಟಿ ಮೂಲಾಕ್ಷರಗಳ ಅನನ್ಯ ಜೋಡಣಾಕ್ರಮವನ್ನು ದಾಖಲಿಸುವುದು, ಮೊದಲೇ ಹೇಳಿದಂತೆ ಇದು ಭಾಷೆಕಲಿತು ಅದರ ವಿನ್ಯಾಸವನ್ನು ತಿಳಿಯುವ ಕ್ರಮ.

‘ಹ್ಯೂಮ್ಯಾನ್ ಜೀನೋಮ್ ಪ್ರೊಜೆಕ್ಟ್’ ಎಂಬ ಮಾನವನ ಡಿಎನ್‌ಎ – ಸೀಕ್ವೆಂನ್ಸಿಂಗ್‌ನ ಬೃಹತ್‌ಕಾರ್ಯವನ್ನು 1990 ರಿಂದ 2003 ರ ಸುದೀರ್ಘ ಅವಧಿಯಲ್ಲಿ ಪೂರೈಸಿದ್ದಾರೆ, ಹಾಗೂ ಈ ಸೀಕ್ವೆಂನ್ಸಿಂಗ್ ಕಾರ್ಯವನ್ನು ವಿಶ್ವದ ಎಲ್ಲಾ ಜೀವಸಂಕುಲಗಳಿಗೆ
ವಿಸ್ತರಿಸಿ ನಡೆಸಲಾಗುತ್ತಿದೆ!

ಜೀವಭಾಷೆಯ ಮೂಲಾಕ್ಷರಗಳು ಮತ್ತದರ ವ್ಯಾಕರಣಗಳನ್ನೆಲ್ಲಾ ಬಹುತೇಕ ಅರಿತಾದ ಮೇಲೆ ಈಗ ಅಲ್ಲಿನ ವ್ಯಾಕರಣ ದೋಷಗಳ ತಿದ್ದುಪಡಿಯ ಜತೆಗೆ ಒಂದಿಷ್ಟು ಹೊಸ ಶಬ್ದಗಳನ್ನು ಸೇರ್ಪಡಿಸುವ ಕೆಲಸಕ್ಕೆ ಕೈಹಾಕಿರುವುದೇ ಪ್ರಸ್ತುತ ಸಂಶೋ ಧನೆಯ ಒಳಾರ್ಥ! ಈ ರೀತಿ, ಭಾಷೆಯಲ್ಲಿ ಹೊಸ ಪದ ಸೇರ್ಪಡೆ ಮತ್ತು ತಿದ್ದುಪಡಿಗಳನ್ನು ಮಾಡುವ ನೂತನ ಸಂಪಾದನಾ ಕೈಪಿಡಿಯ (ಇಜಣಟಿg ಖಿooಟbox) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವುದೇ ಈ ಸಂಶೋಧನೆಯ ಮಹಾಸಾಧನೆ. ಭಾಷೆಯ ಅಕ್ಷರಜ್ಞಾನ ಮತ್ತದರ ವ್ಯಾಕರಣ ತಿಳಿದಿದೆ, ಜೊತೆಗೆ ಈಗ ಭಾಷೆಯ ಸಂಪಾದನಾ ಕೈಪಿಡಿಯೇ ಕೈಗೆ ಸಿಕ್ಕಮೇಲೆ ಅದರ ಅಪಾರ ಸಾಧ್ಯತೆಗಳನ್ನು ವಿಜ್ಞಾನಿಗಳು ಬಿಟ್ಟಾರೆಯೇ? ಮನುಷ್ಯ ಮತ್ತು ಸಸ್ಯಗಳಿಗೆ ಹೇಗೆ ರೋಗ – ರುಜಿನ ಗಳಿವೆಯೋ ಹಾಗೇ ಇವುಗಳಿಗೆ ರೋಗಕಾರಕವಾದ ಬ್ಯಾಕ್ಟೀರಿಯಾಗಳಿಗೂ ರೋಗ ತರುವ ಜೀವಿಗಳಿದ್ದಾವೆ!

ಅವುಗಳೇ ಬ್ಯಾಕ್ಟೀರಿಯೋ ಫೇಜ್ ಎಂಬ ಅಣುಜೀವಿಗಳು –  ವೈರಸ್‌ಗಳು. ರೋಗಕಾರಕಗಳೊಂದಿಗೆ ಸೆಣೆಸುವ ನಮ್ಮಲ್ಲಿರುವ
ಪ್ರತಿರೋಧ ವೈವಸ್ಥೆಯಂತೆಯೇ ಈ ಬ್ಯಾಕ್ಟೀರಿಯಾದ ಕೋಶದಲ್ಲಿ ಕ್ರಿಸ್ಪರ್ (CRISPR: Clusters of Regularly Interspaced Short Palindromic Repeats) ಎಂಬ ಬ್ಯಾಕ್ಟೀರಿಯೋ ಫೇಜ್-ಪ್ರತಿರೋಧ ವ್ಯವಸ್ಥೆ ಅಭಿವೃದ್ಧಿ ಹೊಂದಿದೆ. ಬ್ಯಾಕ್ಟೀರಿಯಾ ಮೇಲೆ ಕೂತು ತನ್ನ ವಂಶವಾ(ಡಿಎನ್‌ಎ)ಯನ್ನು ಒಳಗೆ ತಳ್ಳುವ ಈ ವೈರಸ್ಸುಗಳು, ಬ್ಯಾಕ್ಟೀರಿಯಾದ ದೇಹದೊಳಗೇ ತನ್ನ ಸಾವಿರಾರು ಪ್ರತಿಗಳನ್ನು ತಯಾರಿಸಿಕೊಂಡು ನಂತರ ಬ್ಯಾಕ್ಟೀರಿಯಾವನ್ನು ಒಡೆದು ಹೊರಬರುತ್ತವೆ!

ಆದರೆ ‘ಕ್ರಿಸ್ಪರ್ ಪ್ರತಿರೋಧ ವ್ಯವಸ್ಥೆ’ಯನ್ನು ರೂಪಿಸಿಕೊಂಡ ಬ್ಯಾಕ್ಟೀರಿಯಾವು ವೈರಸ್ಸಿನ ವಂಶವಾಹಿಯನ್ನು ತನ್ನ ಕ್ಯಾಸ್ &9 Cas9 (Crispr Associated Protein)  ಎಂಬ ಎನ್‌ಝೈಮ್ ಮುಖಾಂತರ ಕತ್ತರಿಸಿ ನಾಶಮಾಡುತ್ತದೆ. ಈ ಪ್ರಕ್ರಿಯೆಯಲ್ಲಿ
ನೂತನ ಟಿ-ಆರ್‌ಎನ್‌ಎ ಅಣುವೊಂದು ಭಾಗವಹಿಸುತ್ತಿರುವುದನ್ನು 2011ರಲ್ಲಿ ಗುರುತಿಸಿದ ಷಾರ್‌ಪೆಂಟೈರ್ ಹಾಗೂ ತಂಡ ದವರು ಆರ್‌ಎನ್‌ಎ ಕುರಿತು ವಿಶೇಷ ಪಾಂಡಿತ್ಯವನ್ನು ಹೊಂದಿದ್ದ ಡೌಡ್ನಾರವರೊಂದಿಗೆ ಸಂಶೋಧನಾ ಸಹಭಾಗಿತ್ವವನ್ನು ಸ್ಥಾಪಿಸಿಕೊಂಡು ಮುಂದುವರಿದ ಸಂಶೋಧನೆಗಳನ್ನು ಕೈಗೊಂಡರು.

ಬ್ಯಾಕ್ಟೀರಿಯಾದ ಕ್ರಿಸ್ಪರ್ ವ್ಯವಸ್ಥೆಯನ್ನು ಪ್ರನಾಳದಲ್ಲಿ ಅಭಿವೃದ್ಧಿಪಡಿಸುವ ಈ ತಂಡವು, ಡಿಎನ್‌ಎಯ ನಿಖರವಾದ ಭಾಗವನ್ನಷ್ಟೇ ಕತ್ತರಿಸುವ ಕ್ಯಾಸ್-9 ಎನ್‌ಝೈಮ್‌ನ್ನು ಅಭಿವೃದ್ಧಿಪಡಿಸುವ ಜತೆಗೆ, ಕತ್ತರಿಸಿದ ಭಾಗದಲ್ಲಿ ಅಪೇಕ್ಷಿತವಾದ ಇನ್ನೊಂದು ಭಾಗವನ್ನು ಅಷ್ಟೇ ನಿಖರವಾಗಿ ಕಸಿಮಾಡುವ ಕಲೆಯನ್ನೂ ಸಿದ್ಧಿಸಿಕೊಂಡು, ಈ ಸಂಗತಿಗಳನ್ನು ಪ್ರತ್ಠಿತ ‘ಸೈನ್ಸ್’ ಪತ್ರಿಕೆಯಲ್ಲಿ 2012ರಲ್ಲಿ ಪ್ರಕಟಿಸಿತು. ಕೆಲವೇ ವಾರಗಳ ಅವಧಿಯಲ್ಲಿ ಬದುಕಿನ ಮೂಲಾಕ್ಷರಗಳನ್ನೇ ಬದಲಾಯಿಸಿ ಮರುಸ್ಥಾಪಿಸಬಲ್ಲ ಚಮತ್ಕಾರ ಸದೃಶವಾದ ಈ ಸಂಶೋಧನೆ ಈಗ, ನಮ್ಮ ಪ್ರಸಿದ್ಧ ಜಾದೂಗಾರರಾದ ಕುಧ್ರೋಳಿ ಗಣೇಶ್‌ರವರ ಪ್ರದರ್ಶನದಲ್ಲಿ ಬರುವ ‘ಮಾಯದ ಕತ್ತರಿಯೊ….ಆಹಾ ಮಾಯದ ಕತ್ತರಿಯೋ….’ ಎಂಬ ‘ಮಾಯದ-ಕತ್ತರಿ’ಯಾಗಿ ಗೋಚರಿಸುತ್ತಿದೆ!

ಈ ಮೂಲ ಸಂಶೋಧನೆಯು ವಿಶ್ವಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಅನೇಕ ಪ್ರಯೋಜನಕಾರಿ ಸಂಶೋಧನೆಗಳಿಗೆ ದಾರಿ ನಿರ್ಮಿಸಿದೆ. ಕೃಷಿ ಸಂಶೋಧಕರು ಕ್ರಿಸ್ಪರ್ – ತಂತ್ರಜ್ಞಾನವನ್ನು ಬಳಸಿ ಕೊಳೆ, ಕೀಟ ಹಾಗೂ ಬರ ನಿರೋಧಕ, ಸಧೃಡ ಆಹಾರ ತಳಿಗಳನ್ನು ತಯಾರಿಸುವಲ್ಲಿ ನಿರತರಾದರೆ, ಆರೋಗ್ಯ ಕ್ಷೇತ್ರದಲ್ಲಿ ಮಾನವನನ್ನು ಬಹುದೀರ್ಘಕಾಲದಿಂದ ಕಾಡುತ್ತಿರುವ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಮಾನಸಿಕ ರೋಗಗಳೇ ಮುಂತಾದವುಗಳ ನಿರ್ಮೂಲನೆಯ ನೂತನ ವಿಧಾನ ಹಾಗೂ ವಿವಿಧ ಆನುವಂಶೀಯ ರೋಗಗಳನ್ನು ಭ್ರೂಣ(ಎಂಬ್ರಿಯೋ)ದ ಹಂತದಲ್ಲೇ ಸರಿಪಡಿಸುವ, ಸಿಸ್ಟಿಕ್ -ಬ್ರೋಸಿಸ್, ಹೀಮೋಫೀಲಿಯಾ
ಮುಂತಾದ ಸಿಂಗಲ್ ಜೀನ್ ಡಿಸ್‌ಆರ್ಡರ್‌ಗಳನ್ನು ಸರಿಪಡಿಸುವ ಮತ್ತು ಎಚ್.ಐ. ಮುಂತಾದ ಅನೇಕ ರೋಗಕಾರಕ (ಪ್ಯಾಥೋಜೆನಿಕ್) ಸೂಕ್ಷ್ಮಜೀವಿ /ವೈರಸ್ ಗಳನ್ನು ನಿರ್ನಾಮಮಾಡುವ ಕನಸಿನ ಹೊಸ ಆವಿಷ್ಕರಣಗಳಿಗೆ ಚಾಲನೆ ದೊರೆತಿದೆ. ಇವೆಲ್ಲವೂ ಮಾನವ ಕುಲಕ್ಕೆ ಅಪ್ರತಿಮ ಕೊಡುಗೆಗಳಾಗುವುದು ನಿಶ್ಚಿತ.

ಈ ಸಂಶೋಧನೆಯ ನಂತರ, ಜಗತ್ತಿನ ಬಹುತೇಕ ಎಲ್ಲಾ ಅಣುಜೀವಶಾಸ ಮತ್ತು ಜೀವರಸಾಯನಶಾಸದ ಪ್ರಯೋಗಾಲಯಗಳು ಕ್ರಿಸ್ಪರ್-ತಂತ್ರಜ್ಞಾನದ ಒಂದಿಲ್ಲೊಂದು ಸಂಶೋಧನೆಯಲ್ಲಿ ತೊಡಗಿವೆ. ಇಂಡಿಯಾ ಟುಡೇಯ ವರದಿಯಂತೆ ನವದೆಹಲಿಯ Institute of Genomics and Integrative Biology(IGIB) ಸಂಸ್ಥೆಯಲ್ಲಿ 2016 ರಿಂದಲೇ ರೋಗಿಯ ಬೋನ್‌ಮ್ಯಾರೋದ ಜೀನ್ ‌ನ್ನು ಕ್ರಿಸ್ಪರ್ ಮುಖಾಂತರ ಬದಲಾವಣೆ ಮಾಡಿ ಏಡ್ಸ್, ಹಂಟಿಂಗ್ಟನ್ ವ್ಯಾಧಿಗಳನ್ನು ಗುಣಪಡಿಸಲು ಪ್ರಯತ್ನಿಸಲಾಗುತ್ತಿದೆ.

ಅಲ್ಲಿಯ ಹಿರಿಯ ವಿಜ್ಞಾನಿಗಳಾದ ದೇಬಜ್ಯೋತಿ ಚಕ್ರಬರ್ತಿಯವರ ಪ್ರಕಾರ ಸದ್ಯದ ‘ಕೋವಿಡ್-19’ರ ಸೋಂಕನ್ನು ನಿಖರವಾಗಿ,  ಮತ್ತು ತ್ವರಿತವಾಗಿ ಹಾಗೂ ಅತ್ಯಂತ ಕಡಿಮೆ ವೆಚ್ಚದಲ್ಲಿ ಪತ್ತೆಹಚ್ಚಬಹುದಾದ ಕ್ರಿಸ್ಪರ್ ತಂತ್ರಜ್ಞಾನದ ‘ಪೇಪರ್-ಸ್ಟ್ರಿಪ್ ಪರೀಕ್ಷೆ’ಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.

ಇದು ಸಧ್ಯದಲ್ಲೇ ಈಗಿನ ದುಬಾರಿಯ ಆರ್.ಟಿ. – ಪಿಸಿಆರ್ ಪದ್ಧತಿಯನ್ನು ಬದಲಾಯಿಸಲಿದೆ. ಆದರೆ ಈ ತಂತ್ರಜ್ಞಾನದ ಇನ್ನೊಂದು ಮುಖವೂ ಈಗಾಗಲೇ ಅನಾವರಣಗೊಂಡುಬಿಟ್ಟಿದೆ. ‘ಜಿಯಾನ್‌ಕುಯ್’ ಎಂಬ ಚೀನಾದ ವಿಜ್ಞಾನಿಯೊಬ್ಬರು ಕ್ರಿಸ್ಪರ್ ಮೂಲಕ ಜಗತ್ತಿನ ಮೊದಲ ವಂಶವಾಹಿ ಮಾರ್ಪಡಿತ ಮಗು (ಅವಳಿ ಹೆಣ್ಣುಮಕ್ಕಳನ್ನು) ಹುಟ್ಟುವಂತೆ ಮಾಡಿದ್ದಾರೆ, ಅಥವಾ  ‘ಉತ್ಪಾದಿಸಿದ್ದಾರೆ’ಎಂದರೂ ತಪ್ಪಾಗಲಿಕ್ಕಿಲ್ಲ! ಎಚ್‌ಐ- ಪಾಸಿಟೀವ್ ಇರುವ ಪೋಷಕರೂ ಎಚ್‌ಐವಿ – ನೆಗೆಟೀವ್
ಇರುವ ಆರೋಗ್ಯವಂತ ಮಗುವನ್ನು ಪಡೆಯಲು ಸಹಕರಿಸಲು ಮಾನವ ಭ್ರೂಣವನ್ನೇ ತಿದ್ದುಪಡಿಮಾಡುವ ರಹಸ್ಯ ಸಂಶೋಧನೆಯನ್ನು ಇವರು ಕೈಗೊಂಡಿದ್ದರು.

ಅಕ್ಟೋಬರ್ 2018ರಲ್ಲಿ ‘ಲುಲು ಮತ್ತು ನಾನಾ’ ಎಂಬ ಅವಳಿ ಹೆಣ್ಣು ಮಕ್ಕಳು ಈ ತಂತ್ರಜ್ಞಾನದಿಂದ ಹುಟ್ಟಿದ್ದಾಗಿ ನಂತರ ಘೋಷಿಸಿ, ಇಡೀ ವಿಜ್ಞಾನ ಸಮುದಾಯದಲ್ಲೇ ತಲ್ಲಣವನ್ನೆಬ್ಬಿಸಿದರು. ಈ ಕಾರಣಕ್ಕಾಗಿಯೇ ನಂತರ ಚೀನಾ ಸರಕಾರವು ಅವರ
ಸಂಶೋಧನೆಯನ್ನು ಸ್ಥಗಿತಗೊಳಿಸಿ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು! ಆದ್ದರಿಂದ ನೊಬೆಲ್
ಪುರಸ್ಕೃತರಾದ ಜೆನ್ನೀಫರ್ ಡೌಡ್ನಾರವರೇ ತಮ್ಮ ಅನೇಕ ಉಪನ್ಯಾಸಗಳಲ್ಲಿ ‘ಈ ತಂತ್ರಜ್ಞಾನವನ್ನು ವಿಶ್ವಾದ್ಯಂತ ವಿಸ್ತೃತ
ಚರ್ಚೆಗೆ ಒಳಪಡಿಸಿ ಅದನ್ನು ದುರುಪಯೋಗವಾಗದಂತೆ ಬಳಸಲು ಸೂಕ್ತ ಮಾರ್ಗಸೂಚಿಗಳನ್ನು ಮಾಡಬೇಕೆಂದು
ಆಗ್ರಹಿಸುತ್ತಿದ್ದಾರೆ!

ನೊಬೆಲ್ ಪುರಸ್ಕೃತ ಈ ಸಂಶೋಧನೆಯ ಕುರಿತು ನಾವು ಹೆಮ್ಮೆಪಡಬೇಕಾದ ಸಂಗತಿಯೂ ಒಂದಿದೆ! ನಮ್ಮ ಕರ್ನಾಟಕದ
ಬೆಳಗಾವಿಯಲ್ಲಿ ಜನಿಸಿ ಇಲ್ಲಿಯೇ ಶಾಲಾ ಶಿಕ್ಷಣವನ್ನು ಪಡೆದ ಡಾ.ಸಮರ್ಥ ಕುಲಕರ್ಣಿ ಇವರು 2017ರಿಂದ ಇಮ್ಯಾನ್ಯಲೆ
ಷಾರ್‌ಪೆಂಟೈರ್‌ರವರು ಸ್ಥಾಪಿಸಿದ ಕ್ರಿಸ್ಪರ್ ಥೆರಾಪ್ಯುಟಿಕ್ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರಾಗಿ (ಸಿ.ಇ.ಒ.) ಕಾರ್ಯ ನಿರ್ವಸುತ್ತಿದ್ದಾರೆ! ಪ್ರತಿಭಾವಂತ ಯುವ ಬಯೋಟೆಕ್ನಾಲಜಿ – ವಿಜ್ಞಾನಿಯಾಗಿರುವ ಡಾ. ಸ್ಯಾಮ್ (ಯುಎಸ್‌ನ ಗೆಳೆಯರಿಂದ ಹೀಗೇ ಪರಿಚಿತರಾಗಿದ್ದಾರೆ), ಈ ಸಂಸ್ಥೆಗೆ 2015ರಲ್ಲೇ ಸೇರಿದ್ದರು. ಬೆಳಗಾವಿಯ ‘ರಾಷ್ಟ್ರೀಯ ಮಿಲಿಟರಿ ಶಾಲೆ’ ಮತ್ತು ‘ಜಿಎಸ್‌ಎಸ್ ಪಿಯು ಕಾಲೇಜು’ಗಳಲ್ಲಿ ಓದಿದ ಇವರು, ‘ಐಐಟಿ ಖರಗಪುರದಲ್ಲಿ ಬಿ.ಟೆಕ್. ಮಾಡಿ ‘ಯುನಿವರ್ಸಿಟಿ ಆಫ್ ವಾಷಿಂಗ್ಟನ್’ನಲ್ಲಿ
ಡಾಕ್ಟ್ರೇಟ್ ಪದವಿ ಪಡೆದಿದ್ದಾರೆ.

ವಿಶ್ವದ ಅತ್ಯುನ್ನತ ಪ್ರಶಸ್ತಿಯಾದ ‘ನೊಬೆಲ್’ ಕೂಡ ಆಪಾದನೆಗಳಿಂದ ಹೊರತಾಗಿಲ್ಲ! ರಸಾಯನಶಾಸದಲ್ಲಿನ ಈ ಬಾರಿಯ  ನೊಬೆಲನ್ನು ಷಾರ್‌ಪೆಂಟೈರ್ ಹಾಗೂ ಡೌಡ್ನಾರವರಿಬ್ಬರಿಗೇ ನೀಡಿರುವುದೂ ಕೂಡ ವಾದಕ್ಕೆ ಕಾರಣವಾಗಿದೆ. ಏಕೆಂದರೆ ಕ್ರಿಸ್ಪರ್ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ ಅನೇಕರನ್ನು ಕಡೆಗಣಿಸಲಾಗಿದೆ!

ಸ್ಪೇನ್‌ನ ಫ್ರಾನ್ಸಿಸ್ಕೋ ಮೊಜಿಕಾ (‘ಕ್ರಿಸ್ಪರ್’ ಹೆಸರಿನ ನಾಮಕರಣ ಮಾಡಿದವರು ಇವರೆ), ಲಿಥುಯಾನಿಯಾದ ವರ್ಜಿನಿಜಸ್ ಎಸ್., ದಕ್ಷಿಣ ಕೋರಿಯಾದ ಜಿನ್ ಸೂ ಕಿಮ್, ಸಾಲ್ಟ್ ಲೇಕ್ ಸಿಟಿಯ ಡಾನಾ ಕ್ಯಾರೋಲ್, ಮೆಸಾಚ್ಯುಸೇಟ್ಸ್ ತಂತ್ರಜ್ಞಾನ ಸಂಸ್ಥೆಯ ಫೆಂಗ್ ಝಾಂಗ್. ಫೆಂಗ್ ಝಾಂಗ್ ರವರಂತೂ ಈ ಪ್ರಶಸ್ತಿಯನ ಮೂರನೇ ಪಾಲುದಾರರೆಂದೇ ಬಿಂಬಿತರಾಗಿದ್ದರು. ಇವರೆಲ್ಲರೀಗ ಕ್ರಿಸ್ಪರ್‌ನ ತೆರೆಮರೆಯಹೀರೋಗಳಾಗಿದ್ದಾರೆ!

ಇತ್ತೀಚಿನ ಸಂಶೋಧನೆಗಳ ದಿಕ್ಕು ಬಹುತೇಕ ಒಮ್ಮುಖವಾಗಿ ಮಾನವನ ಸೌಕರ್ಯಾಭಿವೃದ್ಧಿ ಕೇಂದ್ರಿತವಾಗಿ ಸಾಗುತ್ತಿದೆ. ಇನ್ನು ಮೊದಲೇ ಹೇಳಿದಂತೆ, ಜೀವ-ಭಾಷೆಯ ಸಂಪಾದನಾ ಕೈಪಿಡಿಯೇ ಕೈಗೆ ಸಿಕ್ಕಮೇಲೆ ಅದರಿಂದ ‘ವಂಶವಾಹಿ ಮಾರ್ಪಡಿತ ಮಾನವ ಸೃಷ್ಟಿ ನಡೆದು ಹೊಸ ಹೊಸ ಅವಾಂತರಗಳು ಆಗದೆಂದು ಹೇಳಲು ಸಾಧ್ಯವಿಲ್ಲ! ಇದರ ನೂರೆಂಟು ಸಾಧ್ಯತೆಗಳು ನಮ್ಮಂಥ ಸಾಮಾನ್ಯರ ಕಲ್ಪನೆಗೇ ಎಟಕುತ್ತಿರುವಾಗ, ಮುಂದೇನಾದೀತು ಎಂಬುದು ಕೊಂಚ ಆತಂಕಕಾರಿಯೇ ಆಗಿದೆ. ಸಸ್ಯವಾಗಲಿ, ಪ್ರಾಣಿಯಾಗಲಿ ಒಟ್ಟಾರೆ ಜೀವಲೋಕದ ಮೂಲ ಡಿಎನ್‌ಎ ಅಣುವೇ ಆಗಿರುವುದರಿಂದ, ಜೊತೆಗೀಗ ನೂತನ ಅಣು-ಕಸಿ
ತಂತ್ರಜ್ಞಾನವೂ ಸಂಶೋಧಿತವಾದಮೇಲೆ ಪ್ರಾಣಿ ಹಾಗೂ ಸಸ್ಯಲೋಕದ ನಡುವಿನ ಅಂತರವೇ ಮಾಯವಾಗುವ ಸಾಧ್ಯತೆಯಿದೆ!

ಮೂಲತಃ ಕಸಿಮಾಡುವಿಕೆಯಲ್ಲಿ ಕೆಲವೊಂದು ನಿರ್ಬಂಧವಿದೆ, ಜಾತೀಯ ಭಾಗಗಳನ್ನು ಕಸಿಮಾಡಲು ಸಾಧ್ಯವಿಲ್ಲ. ಅಂದರೆ ಸಪೋಟಹಣ್ಣಿನ ಗಿಡಕ್ಕೆ ದಾಸವಾಳದ ರೆಂಬೆಕಸಿ ಸಾಧ್ಯವಿಲ್ಲ, ಹಾಗೇ ಮಾನವನಿಗೆ ಬೇರೆ ಪ್ರಾಣಿಯ ಅಂಗಜೋಡಣೆ ಆಗದು, ಅಷ್ಟೇ ಏಕೆ ಇನ್ನೊಬ್ಬ ಮನುಷ್ಯನ ಭಾಗವನ್ನೇ ಕಸಿಮಾಡುವುದಾದರೂ ಮೊದಲು ಈರ್ವರ ರಕ್ತದ ಗುಂಪಿನಲ್ಲಿ ಸಾಮ್ಯತೆ ಇರಬೇಕು! ಇಷ್ಟೆಲ್ಲಾ ನಿಯಮ – ನಿರ್ಬಂಧಗಳು ಕಸಿತಂತ್ರಕ್ಕಿದೆ, ಆದರೆ ಪ್ರಸ್ತುತದ ಈ ಸಂಶೋಧನೆಯು ಕಸಿತಂತ್ರದ ಎಲ್ಲಾ ನಿಯಮ – ನಿರ್ಬಂಧಗಳನ್ನು ಗಾಳಿಗೆ ತೂರಿಬಿಟ್ಟಿದೆ! ಇದು ‘ಅಣು – ಕಸಿ’ ತಂತ್ರಜ್ಞಾನವಾದ್ದರಿಂದ ಕಸಿತಂತ್ರದ ಕಸಿವಿಸಿ ಗಳನ್ನೆಲ್ಲಾ ಮಾಯವಾಗಿಸಿ, ಸಸ್ಯ ಹಾಗೂ ಪ್ರಾಣಿಲೋಕವನ್ನು ವಿಚಿತ್ರವಾಗಿ ಬೆಸೆಯಬಹುದಾದ ಹೊಸ ಕಸಿವಿಸಿಯನ್ನು
ಹುಟ್ಟುಹಾಕುವ ಹಾಗಿದೆ!

ಅಂದರೆ, ಈ ಅನ್ಯರೂಪೀಕರಣ ಅಣು – ಕಸಿ ತಂತ್ರಜ್ಞಾನದಿಂದ ಅನೇಕ ಸೋಜಿಗದ ಅನ್ವಯಗಳ ಸಾಧ್ಯತೆಗಳನ್ನು ಊಹಿಸ ಬಹುದಾಗಿದೆ. ಉದಾಹರಣೆಗೆ, ಇಲಿಯ ಮೇಲೆ ಎಲೆ ಕೋಸು, ಬಾಳೆ ಗಿಡದಲ್ಲಿ ಮೊಟ್ಟೆ, ಗಿಡದ ರೆಂಬೆಯಲ್ಲಿ ಈರುಳ್ಳಿ, ಶಕ್ತಿ ವಂತನೂ ಆದ ಬುದ್ಧಿವಂತ ಮನುಷ್ಯ ಹೀಗೆ…..! ಅವಳ ತೊಡುಗೆ ಇವಳಿಗಿಟ್ಟು ನೋಡಬಯಸಿದೆ ಇವಳ ಉಡುಗೆ…ಎಂದು
ಇಂಗ್ಲೀಷ್ ಕತೆಗಳಂಥವನ್ನು ಕನ್ನಡದಲ್ಲೂ ಬರೆಯಬೇಕೆಂಬ-ಬಿ.ಎಂ.ಶ್ರೀಕಂಠಯ್ಯರವರ ಮಾತು, ಈ ರೀತಿಯಲ್ಲಿ ಸಾಕಾರವಾಗಿ ಬಿಡಬಹುದೇ? ವಿಜ್ಞಾನದ ಇತಿಹಾಸವನ್ನು ಗಮನಿಸಿದರೆ, ವಿಜ್ಞಾನದ ಸಂಶೋಧನೆಗಳು ಸದುಪಯೋಗವಾಗಿರುವ ಹಾಗೆ
ದುರುಪಯೋಗವಾಗಿರುವ ಸಂದರ್ಭಗಳೂ ಇವೆ, ಆದ್ದರಿಂದ ಈ ಸಂಶೋಧನೆಯ ನಿಖರ ಫಲಶೃತಿಯ ಊಹೆ ಅಸಾಧ್ಯ.

ಜಾದೂಗಾರನ ಕೈಯಲ್ಲಿದ್ದ ಬರಿ ಕೈಚಳದ ಮಾಯದ –  ಕತ್ತರಿಯು ಈಗ ವಿಜ್ಞಾನಿಗಳಿಂದ ಸಾಕಾರವಾಗಿದೆ. ಆದರೀಗ ಮಾಯದ – ಕತ್ತರಿಯು ಸುರಕ್ಷಿತರ ಕೈಯಲ್ಲೇ ಉಳಿದೀತೇ? ಎಲ್ಲಿಯದನೋ ಅದೆಲ್ಲಿಯದಕೋ ಹೆಣೆಯುವನು ? ಒಲ್ಲೆವೆನೆ ನೀವೇ ಕಿತ್ತಾಡಿ ಕೊಳಿರೆನುವನ್ ? ಬೆಲ್ಲದಡುಗೆಯಲಿ ಡಿ ಮರಳನೆರಚಿರಿಸುವನು ?ಒಳ್ಳೆಯುಪಕಾರಿ ಧಿ – ಮಂಕುತಿಮ್ಮ ?  ಬೆಲ್ಲದಡುಗೆ ಯಲ್ಲಿ ಮರಳನ್ನೆರಚುತ್ತಾರೋ, ಅಥವಾ ಅದರಲ್ಲಿನ ಮರಳನ್ನು ಹೊರತೆಗೆಯುತ್ತಾರೋ ಎನ್ನುವುದು ವಿಜ್ಞಾನಿಗಳ ವಿವೇಚನೆಗೆ ಬಿಟ್ಟಿದ್ದು, ವಿಜ್ಞಾನ ಕ್ಷೇತ್ರದ ಸಂಶೋಧನಾ – ರಂಗಸ್ಥಳಕ್ಕೆ ಶ್ರೀಸಾಮಾನ್ಯರಿಗೆ ಪ್ರವೇಶವಿಲ್ಲ, ಫಲಿತಾಂಶವನ್ನಷ್ಟೆ ಗಮನಿಸಿ ಆಶ್ಚರ್ಯಪಡಬಹುದು!