Sunday, 27th October 2024

Srivathsa Joshi Column: ಬುರಿಡಾನ್‌ನ ಕತ್ತೆ ಅನಿರ್ಣೀತ; ಬುರ್ನಾಸ್‌ ಕತ್ತೆ ಅಭಿಜಾತ !

ತಿಳಿರು ತೋರಣ

ಶ್ರೀವತ್ಸ ಜೋಶಿ

srivathsajoshi@yahoo.com

ಅಭಿಜಾತ ಎಂಬ ಪದವನ್ನು ನಾವು ಸಾಮಾನ್ಯವಾಗಿ ಕಲಾವಿದರ ಅಥವಾ ವಿಶೇಷ ಪ್ರತಿಭೆಯುಳ್ಳವರ ವ್ಯಕ್ತಿಚಿತ್ರ ಗಳಲ್ಲಿ ಗಮನಿಸುತ್ತೇವೆ. ಉದಾಹರಣೆಗೆ, ‘ಕನ್ನಡ ಚಿತ್ರರಂಗ ಕಂಡ ಅನನ್ಯ ಹಾಸ್ಯನಟ ನರಸಿಂಹರಾಜು ಒಬ್ಬ ಅಭಿಜಾತ ಕಲಾವಿದರಾಗಿದ್ದರು’, ‘ಬರಹಗಾರ ಜಯಂತ ಕಾಯ್ಕಿಣಿಯವರದು ಅಭಿಜಾತ ಪ್ರತಿಭೆ, ತಂದೆಯೇ ಅವರಿಗೆ ಆದರ್ಶಪ್ರಾಯ’, ‘ಮಹಾತ್ಮರೆನಿಸುವವರಿಗೆ ಕೆಲವು ಅಭಿಜಾತ ಗುಣಗಳಿರುತ್ತವೆ…’ ಇತ್ಯಾದಿ.

ಅಭಿಜಾತ ಅಂದರೆ ಜನ್ಮದಾರಭ್ಯ ಅಥವಾ ಹುಟ್ಟಿದಾಗಿನಿಂದಲೂ ಎಂದರ್ಥ. ಇನ್ನೂ ಹಿಂದಕ್ಕೆ ಹೋಗಿ ಆಗರ್ಭ ಅಂದರೆ ಗರ್ಭದಲ್ಲಿರುವಾಗಿಂದಲೂ ಎಂದು ಕೂಡ ಬಳಸುವುದಿದೆ, ಹೆಚ್ಚಾಗಿ ಶ್ರೀಮಂತಿಕೆಗೆ. ಅದಿಲ್ಲಿ ಬೇಡ,
ಅಭಿಜಾತ ಮಾತ್ರ ಸಾಕು. ಅಭಿಜಾತ ಪದಕ್ಕೆ ಸಮಾನವಾಗಿ ಅಚ್ಚಕನ್ನಡದ ‘ಹುಟ್ಟಾ’ ಸಹ ಬಳಸುವುದುಂಟು. ಉದಾಹರಣೆಗೆ, ‘ರಾಜಕಾರಣಿಗಳೆಲ್ಲ ಹುಟ್ಟಾ ಭ್ರಷ್ಟರು’, ‘ಮುಖೇಶ್ ಅಂಬಾನಿಯೇನೂ ಹುಟ್ಟಾ ಶ್ರೀಮಂತರಲ್ಲ; ಯೆಮೆನ್ ದೇಶದಲ್ಲಿ ಪೆಟ್ರೋಲ್‌ಬಂಕ್ ಕಾರ್ಮಿಕರಾಗಿದ್ದ ಧೀರೂಭಾಯಿ ಅಂಬಾನಿಯ ಮಗನಾಗಿ ಆತ ಬೆಳೆದ ಕಥೆ ರೋಚಕ!’, ‘ವರ್ಜಿನ್ ಸಮೂಹಸಂಸ್ಥೆಯ ರಿಚರ್ಡ್ ಬ್ರಾನ್ಸನ್ ಹುಟ್ಟಾ ಪರಮಸಾಹಸಿ…’, ‘ಮನೆಮಾತು ಮಲಯಾಳಂ ಆದರೂ ಕನ್ನಡದಲ್ಲಿ ವಕ್ರಾರ್ಥ, ವ್ಯಂಗ್ಯಾರ್ಥ ಸೃಷ್ಟಿಸಿ ಹುಟ್ಟಾ ಕನ್ನಡಿಗರನ್ನು ಮೀರಿಸಿದವರು
ನಾ.ಕಸ್ತೂರಿ’ ಇತ್ಯಾದಿ.

ಇಲ್ಲಿ ಇನ್ನೊಂದು ಸೂಕ್ಷ್ಮವನ್ನೂ ಗಮನಿಸಬೇಕು. ಸಂಸ್ಕೃತದ ‘ಅಭಿಜಾತ’ವನ್ನು ಕಲೆ, ಪ್ರತಿಭೆಗಳ ಸುಸಂಸ್ಕೃತ ಶ್ರೇಷ್ಠತೆಯ ಸಂದರ್ಭಗಳಿಗೆ ಮಾತ್ರ ಹೆಚ್ಚಾಗಿ ಬಳಸುತ್ತೇವೆ. ಕನ್ನಡದ ‘ಹುಟ್ಟಾ’ ಆದರೋ ಒಳ್ಳೆಯದಕ್ಕೆ ಮಾತ್ರವಲ್ಲ ಕಚಡಾ ಕ್ವಾಲಿಟಿಗಳಿಗೂ ಹೊಂದುತ್ತದೆ. ‘ಆತ ಹುಟ್ಟಾ ಕಂಜೂಸಿ, ಆಕೆ ಹುಟ್ಟಾ ಜಗಳಗಂಟಿ, ಅವರು ಹುಟ್ಟಾ ದಗಲ್ಬಾಜಿ ಸ್ವಭಾವದವರು…’ ಎಂದು ಮುಂತಾಗಿ.

ಅದಿರಲಿ, ಇಂದಿನ ಶೀರ್ಷಿಕೆಯಲ್ಲಿರುವ ಅಭಿಜಾತ ಕತ್ತೆಯ ಕತೆ ಏನು? ಕತ್ತೆಯಂಥ ಕತ್ತೆಗೆ ಅಭಿಜಾತ ಎಂಬ ಸುಸಂಸ್ಕೃತ ವಿಶೇಷಣದ ಗೌರವ ಬೇಕೇ? ಅದನ್ನು ಆಮೇಲೆ ನೋಡೋಣ. ಅಭಿಜಾತ ಕತ್ತೆ ಎನ್ನುವುದು ನಿಮಗೆ ಸರಿಹೋಗುವುದಿಲ್ಲವಾದರೆ ಹುಟ್ಟಾ ಕತ್ತೆ ಎಂದೇ ಹೇಳೋಣ. ಈ ಒಂದು ಹೊಸ ವಿಚಾರ ನನ್ನ ತಲೆಯೊಳಗೆ ಮೊನ್ನೆಯಷ್ಟೇ ಎಂಟ್ರಿ ಪಡೆದದ್ದು. ಅದೇನಾಯ್ತೆಂದರೆ, ಕಳೆದ ವಾರ ‘ತಿಳಿರುತೋರಣ’ದಲ್ಲಿ ವಿಜಯಭಾಸ್ಕರ್
ಸಂಗೀತ ನಿರ್ದೇಶನದ 56 ಚಿತ್ರಗೀತೆಗಳನ್ನು ಆಯ್ದು ಅಂತ್ಯಾಕ್ಷರಿಯಂತೆ ಪೋಣಿಸಿದ್ದೆನಷ್ಟೆ? ಅಂಕಣದ ನಿಯತ ಓದುಗ ಮತ್ತು ನನ್ನೊಬ್ಬ ಹಿರಿಯ ಹಿತೈಷಿ, ಮೈಸೂರಿನ ರಾಘವೇಂದ್ರ ಭಟ್ಟರು ಒಂದು ಚಿಕ್ಕ-ಚೊಕ್ಕ ಪ್ರತಿಕ್ರಿಯೆ ಬರೆದರು, ಹೀಗೆ: ‘ಇಂದಿನ ಬರಹವು ಚಿತ್ರಗೀತೆಗಳ ರಸಿಕರಿಗೆ ಇಷ್ಟವಾಗುವಂತಿದ್ದು ನಾನಂತೂ ಇದರಲ್ಲಿ ಬುರ್ನಾಸು! ಇಂತಿ ನಮಸ್ಕಾರ’. ರಾಘವೇಂದ್ರ ಭಟ್ಟರಿಂದ ಹೆಚ್ಚೂಕಡಿಮೆ ಪ್ರತಿವಾರವೂ ಪ್ರತಿಕ್ರಿಯೆಯ
ಮಿಂಚಂಚೆ ಬಂದೇಬರುತ್ತದೆ.

ಅವರಿಗೆ ಅನಿಸಿದ್ದನ್ನು ಪ್ರಾಮಾಣಿಕವಾಗಿ ಬರೆದು ತಿಳಿಸುತ್ತಾರೆ. ಯಾವುದೇ ತರಹದ ಕೃತಕತೆ ಇರುವುದಿಲ್ಲ. ಎಲ್ಲ ಸಹಜ-ಸುಂದರ. ಈ ಪ್ರತಿಕ್ರಿಯೆ ಯಾದರೂ ಅಷ್ಟೇ. ಆದರೆ ಅದರಲ್ಲಿನ ಒಂದು ನಿರ್ದಿಷ್ಟ ಪದಬಳಕೆ ನನ್ನ ಗಮನವನ್ನು ವಿಶೇಷವಾಗಿ ಸೆಳೆಯಿತು. ಅವರಿಗೆ ಮಾರೋಲೆ ಬರೆಯುವಂತೆ ನನ್ನನ್ನು ಪ್ರೇರಿಸಿತು. ‘ನಮಸ್ಕಾರ
ಸರ್! ನನಗೆ ಖುಷಿ ಮತ್ತು ಆಶ್ಚರ್ಯ ತಂದಿದ್ದು ನೀವು ಬಳಸಿದ ‘ಬುರ್ನಾಸು’ ಪದ. ಆಶ್ಚರ್ಯವೇಕೆಂದರೆ ಅದು ಹೆಚ್ಚಾಗಿ ದಕ್ಷಿಣಕನ್ನಡದಲ್ಲಿ ತುಳು ಮಾತನಾಡುವವರ ಬಳಕೆಯಲ್ಲಿ ಇರುವ ಪದ, ನಿಮಗೆ ಹೇಗೆ ಸಿಕ್ಕಿತು ಅಂತ ನನಗೀಗ ಕುತೂಹಲ!’ ಎಂದು ಬರೆದೆ.

ಅದು ನಿಜ ಕೂಡ. ದಕ್ಷಿಣಕನ್ನಡ-ಉಡುಪಿ ಜಿಲ್ಲೆಗಳಲ್ಲಿ ‘ಬುರ್ನಾಸ್’ ಪದ ವ್ಯಾಪಕವಾಗಿ ಬಳಕೆಯಲ್ಲಿದೆ. ‘ಆಯೆ ಬಜೀ ಬುರ್ನಾಸ್ ಭಾಸ್ಕರೆ’ ಎಂದು ತುಳು ಮಾತನಾಡುವವರಷ್ಟೇ ಅಲ್ಲ, ‘ಅಸಲೆಂ ಬುರ್ನಾಸ್ ಸಿನಿಮ್ ಕೊಣಾಕ್, ಕಿತ್ಯಾಕ್ ಜಾಯ್ ಆಸ್‌ಲ್ಲೆಂ?’ ಎಂದು ಕೊಂಕಣಿ ಭಾಷೆಯವರೂ ಬಳಸುತ್ತಾರೆ. ಕುಂದಗನ್ನಡದವರೂ, ಕೇರಳ ಗಡಿನಾಡಿನ ಬ್ಯಾರಿಗಳೂ ಬಳಸುತ್ತಾರೆ. ಅತ್ಯಲ್ಪಸಂಖ್ಯೆಯ ನಾವು ಚಿತ್ಪಾವನಿ ಭಾಷೆಯಲ್ಲೂ ಬಳಸುತ್ತೇವೆ. ಸ್ವಾರಸ್ಯ ವೆಂದರೆ ಈ ಭಾಷೆಗಳನ್ನು ಮಾತೃಭಾಷೆಯಾಗಿ ಹೊಂದಿರುವವರು ಕನ್ನಡದಲ್ಲಿ ವ್ಯವಹರಿಸುವಾಗಲೂ ಇದೇ ಪದವನ್ನು ಉಪಯೋಗಿಸುತ್ತಾರೆ.

ಅಷ್ಟರಮಟ್ಟಿಗೆ ಇದು ಏಕರೂಪದಲ್ಲಿ ಸರ್ವವ್ಯಾಪಿಯಾಗಿದೆ. ಬುರ್ನಾಸ್ ಎಂದರೆ ಪ್ರಯೋಜನವಿಲ್ಲದ್ದು, ಉತ್ತಮ
ಗುಣಮಟ್ಟವಿಲ್ಲದ್ದು, ಕಳಪೆ ದರ್ಜೆಯದು, ಹೇಳಿಕೊಳ್ಳುವಂಥ ವಿಶೇಷತೆ ಏನೂ ಇಲ್ಲದ್ದು ಅಂತ ಅರ್ಥ. ‘ಈಗಿನ ಸಿನಿಮಾ ಹಾಡುಗಳಲ್ಲಿ ಹೆಚ್ಚಿನವೆಲ್ಲ ಬುರ್ನಾಸ್’, ‘ವಿಮಾನಗಳಲ್ಲಿ ಊಟ ತಿಂಡಿ ಈಗೀಗ ಬುರ್ನಾಸ್ ಆಗಿದೆ…’, ‘ಬಿಗ್‌ಬಾಸ್ ಅಲ್ಲ ಅದರಲ್ಲಿರುವವರು (ಮತ್ತು ನೋಡುವವರೂ) ಎಲ್ಲ ಬುರ್ನಾಸ್’- ಎಂದು ಬೇಕಾದಷ್ಟು ಉದಾ ಹರಣೆಗಳನ್ನು ಕೊಡಬಹುದು. ನಾನು ಗಮನಿಸಿದಂತೆ ಕರಾವಳಿ ಜಿಲ್ಲೆಗಳನ್ನು ಬಿಟ್ಟರೆ ಬೇರೆಕಡೆಗಳಲ್ಲಿ ಈ ಪದ ಕಿವಿಗೆ ಬೀಳದು. ರಾಘವೇಂದ್ರ ಭಟ್ಟರು ಮೂಲತಃ ಶಿವಮೊಗ್ಗದವರು, ಈಗ ಮೈಸೂರಿನವರು, ಅವರಿಗೆಲ್ಲಿಂದ ಈ ಪದ ಸಿಕ್ಕಿತು ಮತ್ತು ನಿಸ್ಸಂಕೋಚವಾಗಿ ತಮ್ಮನ್ನೇ ಬುರ್ನಾಸ್ ಎನ್ನುವಂತೆ ಮಾಡಿತು ಎಂದು ನನಗೆ ಆಶ್ಚರ್ಯ.

ಅಷ್ಟುಹೊತ್ತಿಗೆ ಅವರಿಂದ ಮತ್ತೆ ಮಿಂಚಂಚೆ ಬಂತು: ‘ಆತ್ಮೀಯ ಶ್ರೀವತ್ಸರೇ, ಈ ಅಮೂಲ್ಯ ಪದದ ವ್ಯುತ್ಪತ್ತಿ ಒಬ್ಬರು ನುಡಿಜಾಣರಿಂದ ಕೇಳಿದ್ದೆ. ಅದು Born ass ಅಂತೆ! ಹುಟ್ಟಾ ಕತ್ತೆ! ಹೇಗಿದೆ ಗಮ್ಮತ್ತು! ನಮಸ್ಕಾರ’.
ಆಹಾ! ಈಗ ತಿಳಿಯಿತು ಬುರ್ನಾಸ್ ಅಂದರೆ Born ass! ಸಿಯಟ್ ಟೈರುಗಳ ಜಾಹೀರಾತಿನಲ್ಲಿ Born tough ಅಂತ ಇದ್ದಹಾಗೆ. ಅದಾದರೋ ಸಿಯಟ್ ಟೈರಿನ ಹಿರಿಮೆ. ಇಲ್ಲಿ ಬುರ್ನಾಸ್ ಅಂದರೆ ಕತ್ತೆಯನ್ನು ಹೀನಾಯವಾಗಿ ಕಾಣುವುದು ಮತ್ತು ಮೂದಲಿಸುವುದರ ಇನ್ನೊಂದು ರೂಪ. ಅಂದಹಾಗೆ, ಕತ್ತೆಯ ಬಗ್ಗೆ ಅಷ್ಟೊಂದು ತಾತ್ಸಾರ, ಅನಾದರಕ್ಕೆ ಕಾರಣ ಏನಿರಬಹುದು? ಕತ್ತೆಗೆ ತಿಪ್ಪೆಯೇ ತವರುಮನೆ, ಕತ್ತೆ ಬಲ್ಲುದೇ ಬತ್ತದ ಸುಗ್ಗಿಯ, ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ, ಕತ್ತೆಗೆ ಏಕೆ ಕಾಲುಕಡಗ, ಕತ್ತೆಯ ಮೊಲೆಯಲ್ಲಿ ಖಂಡುಗ ಹಾಲಿದ್ದರೇನು, ಕಾರ್ಯವಾಸಿ ಕತ್ತೆಕಾಲು ಹಿಡಿ… ಮುಂತಾದ ಗಾದೆಮಾತುಗಳನ್ನೇ ಗಮನಿಸಿ. ಕತ್ತೆ ಎಂದರೆ ಬುರ್ನಾಸ್ ಎಂದೇ ಭಾವನೆ. ‘ಉಷ್ಟ್ರಾಣಾಂ ವಿವಾಹೇಷು ಗೀತಂ ಗಾಯಂತಿ ಗರ್ದಭಾಃ| ಪರಸ್ಪರಂ ಪ್ರಶಂಸಂತಿ ಅಹೋ ರೂಪಮ್ ಅಹೋ ಧ್ವನಿಃ’ (ಒಂಟೆಗಳ ಮದುವೆಯಲ್ಲಿ ಕತ್ತೆಗಳ ಸಂಗೀತ ಕಛೇರಿ.

ಪರಸ್ಪರ ಹೊಗಳುತ್ತಿವೆ, ಏನು ರೂಪ ಏನು ಧ್ವನಿ!) ಎಂಬಂಥ ಸಂಸ್ಕೃತ ಸುಭಾಷಿತಗಳಲ್ಲೂ ಕತ್ತೆಯೆಂದರೆ ನಾಲಾಯಕ್. ‘ಘಟಂ ಭಿಂದ್ಯಾತ್ಪಟಂ ಛಿಂದ್ಯಾತ್ಕುರ್ಯಾದ್ರಾಸಭರೋಹಣಮ್| ಯೇನ ಕೇನ ಪ್ರಕಾರೇಣ ಪ್ರಸಿದ್ಧಃ ಪುರುಷೋ ಭವೇತ್||’ ಎಂಬ ಮತ್ತೊಂದು ಸುಪ್ರಸಿದ್ಧ ಸುಭಾಷಿತದಲ್ಲೂ, ಕತ್ತೆಯ ಮೇಲೆ ಸವಾರಿ ಮಾಡುವುದೆಂದರೆ ತುಚ್ಛ, ತಮಾಷೆ ಎಂಬ ಚಿತ್ರಣ. ಇಸ್ಪೀಟ್ ಆಟದ ಕತ್ತೆಯಂತೂ ಇಸ್ಪೀಟ್ ಆಡಿದವರಿಗೆಲ್ಲ ಗೊತ್ತಿದೆ. ವಾಟಾಳ್ ನಾಗರಾಜ್ ಸಹ ಕತ್ತೆಗಳ ಮದುವೆ-ಮೆರವಣಿಗೆ ಮಾಡಿಸಿಯಾರು; ಉದ್ದೇಶ ವಿಡಂಬನೆಯೇ. ಕತ್ತೆಯ ಬಗೆಗಿನ ಪರಿಹಾಸ್ಯಕ್ಕೆ ನನ್ನ ಸ್ನೇಹಿತ ಅರವಿಂದ ಸಿಗದಾಳು ಅವರ ಒಂದು ತಮಾಷೆ ಅಬ್ಸರ್ವೇಶನ್ನನ್ನೂ ಸೇರಿಸಬಹುದು. ಅದೇನೆಂದರೆ, ಹೆಂಗಸರ ಹೆಸರಿನ ಕೊನೆಯಕ್ಷರ ‘ಕಾ’ ಇದ್ದರೆ ಒಂದು ಸಂಭವನೀಯ ಆಭಾಸ.

ಚಂದ್ರಿಕಾ, ಭೂಮಿಕಾ, ಮಲ್ಲಿಕಾ, ಮೋನಿಕಾ, ರಾಧಿಕಾ, ರೇಣುಕಾ ಇತ್ಯಾದಿ ಕಾ-ಕಾರಾಂತ ಹೆಸರುಗಳನ್ನು ಗಮನಿಸಿ. ಇಂಥ ಹೆಸರುಳ್ಳವರನ್ನು ಅವರ ಅಣ್ಣ-ತಮ್ಮಂದಿರ ಮಕ್ಕಳು ಹೇಗೆ ಕರೆಯುತ್ತಾರೆ? ಚಂದ್ರಿಕಾ ಅತ್ತೆ, ಭೂಮಿಕಾ ಅತ್ತೆ, ರೇಣುಕಾ ಅತ್ತೆ ಅಂತೆಲ್ಲ ಬಿಡಿಸಿ ಕರೆಯುವಷ್ಟು ವ್ಯವಧಾನ ಮಕ್ಕಳಿಗಿರುತ್ತದೆಯೇ? ಅವರು ಲೋಪಸಂಧಿ ಬಳಸಿ ಕೊಂಡು ಸುಲಭಮಾರ್ಗ ಹಿಡಿಯುತ್ತಾರೆ. ಚಂದ್ರಿಕತ್ತೆ, ಭೂಮಿಕತ್ತೆ, ಮಲ್ಲಿಕತ್ತೆ, ರೇಣುಕತ್ತೆ, ರಾಧಿಕತ್ತೆ… ಅಂತನೇ ಪ್ರೀತಿಯಿಂದ ಕರೆಯುತ್ತಾರೆ.

ಪಾಪ ಆ ಹೆಂಗಳೆಯರೆಲ್ಲ ಅಭಿಜಾತ ಕತ್ತೆಗಳಾಗಿರದಿದ್ದರೂ ಕತ್ತೆ ಎಂದು ಕರೆಸಿಕೊಳ್ಳಬೇಕಾದ ಪರಿಸ್ಥಿತಿ! ಕಾ-ಕಾರಾಂತ ಹೆಸರುಗಳಷ್ಟೇ ಅಲ್ಲ, ಕಿ-ಕಾರಾಂತ ಜಾನಕಿ, ದೇವಕಿಗಳದೂ ಇದೇ ಅವಸ್ಥೆ. ಜಾನಕಿ ಅತ್ತೆ, ದೇವಕಿ
ಅತ್ತೆ…. ಊಹುಂ. ಜಾನಕತ್ತೆ, ದೇವಕತ್ತೆಯೇ ಬೆಸ್ಟ್! ಹಾಗಂತ, ಕತ್ತೆಯೆಂದರೆ ಕೀಳು ಎಂದೇನೂ ಇಲ್ಲ. ಕತ್ತೆಯು
ಅಭಿಮಾನದಿಂದ ಉಬ್ಬಬಹುದಾದ, ಹಿರಿಮೆಯಿಂದ ಹಿಗ್ಗಬಹುದಾದ ಕೆಲವು ಸಂಗತಿಗಳೂ ಇವೆ. ನಮಗೆ ಪ್ರಾಥಮಿಕ ಶಾಲೆಯ ಪಠ್ಯಪುಸ್ತಕದಲ್ಲಿದ್ದ ‘ಸಂತೆಗೆ ಹೋದನು ಭೀಮಣ್ಣ…’ ಪದ್ಯವನ್ನು ನೆನಪಿಸಿಕೊಳ್ಳಬೇಕು. ಅದು, ಕತ್ತೆ ತನ್ನ ಜಾಣತನ ಪ್ರದರ್ಶಿಸಿ ಕುದುರೆಯನ್ನು ಬೇಸ್ತುಬೀಳಿಸುವ ಪ್ರಸಂಗದ ಈಸೋಪನ ಕಥೆ.

ಅದನ್ನಾಧರಿಸಿ ಕಯ್ಯಾರ ಕಿಂಞಣ್ಣ ರೈಯವರು ಬರೆದ ಅತ್ಯಂತ ಜನಪ್ರಿಯ ನೀತಿಪದ್ಯ. ‘ನೀ ನನಗಿದ್ದರೆ ನಾ ನಿನಗೆ ನೆನಪಿರಲೀ ನುಡಿ ನಮ್ಮೊಳಗೆ’ ಎಂಬ ಸಾರ್ವಕಾಲಿಕ ನೀತಿಮಾತು. ಈಸೋಪನು ಆ ಕಥೆಯನ್ನು ಹೆಣೆದಿದ್ದೇಕೆ ಎಂಬುದಕ್ಕೂ ಒಂದು ಪ್ರತೀತಿ ಇದೆ. ಒಂದು ಕಥೆಯಲ್ಲಾದರೂ ತನ್ನ ಜಾಣತನವನ್ನು ಕುರಿತು ಎರಡು ಒಳ್ಳೆಯ ಮಾತನ್ನು ಬರೆಯಬೇಕೆಂದು ಕತ್ತೆ ಒಮ್ಮೆ ಈಸೋಪನನ್ನು ಅಂಗಲಾಚಿತಂತೆ. ಹಾಗೆ ಮಾಡಿದರೆ ಜನ ತನ್ನನ್ನೇ ಕತ್ತೆಯೆಂದು ಹೀಗಳೆಯುತ್ತಾರೆಂದು ಈಸೋಪ ಕತ್ತೆಗೆ ಹೇಳಿದನಂತೆ.

ನಿರಾಶೆಗೊಂಡ ಕತ್ತೆ ಬೇಸರದಿಂದಲೇ ಅಲ್ಲಿಂದ ಹೊರಟುಹೋಯಿತಂತೆ. ಆಮೇಲೆ ಕತ್ತೆಯ ಬಗ್ಗೆ ಈಸೋಪನಿಗೆ
ಕನಿಕರ ಬಂದು ಆ ಸುಂದರ ಕಥೆಯನ್ನು ಹೆಣೆದನಂತೆ. ಅದನ್ನು ಕಥೆಗಿಂತಲೂ ಸುಂದರ ಪದ್ಯವಾಗಿಸಿದರು ನಮ್ಮ ಕಿಂಞಣ್ಣ ರೈಗಳು. ಅಂತೆಯೇ ಪ್ರಾಚೀನ ಕಾಲದಿಂದಲೂ ಅಗಸರೊಂದಿಗೆ ಅವಿನಾಭಾವ ಸಂಬಂಧವಿರುವ ಕತ್ತೆ, ‘ಪ್ರಪಂಚದ ಯಾವ ಧರ್ಮಗುರುವೂ ತೊಳೆಯಲಾರದಷ್ಟು ಕೊಳೆಯನ್ನು ಅಗಸ ತೊಳೆದಿರುತ್ತಾನೆ’ ಎಂಬ ಗಿರೀಶ ಕಾರ್ನಾಡರ ತುಘಲಕ್ ನಾಟಕದ ಡೈಲಾಗ್‌ನಲ್ಲಿ ಅಗಸನ ಶ್ರೇಷ್ಠತೆಯ ಸ್ವಲ್ಪ ಪಾಲನ್ನು ಪಡೆಯಲಿಕ್ಕೆ ಅರ್ಹತೆ ಯುಳ್ಳದ್ದೇ. ಕತ್ತೆಯ ಇನ್ನೊಂದು ಅಗ್ಗಳಿಕೆಯೆಂದರೆ ಭಾರತೀಯ ಕಾಲಮಾನ ಪದ್ಧತಿಯಲ್ಲಿ, ಸಂವತ್ಸರಗಳ ನಾಮಧೇಯದಲ್ಲಿ ಬರುವ ಏಕೈಕ ಪ್ರಾಣಿ ಕತ್ತೆ!

ಹೌದು, ಸಂವತ್ಸರ ಚಕ್ರದ 60 ಸಂವತ್ಸರಗಳಲ್ಲಿ 25ನೆಯದರ ಹೆಸರು ‘ಖರ’. ಸಂಸ್ಕೃತದಲ್ಲಿ ಖರ ಎಂದರೆ ಕತ್ತೆ. ‘ಚಕ್ರೀವಂತಸ್ತು ಬಾಲೇಯಾ ರಾಸಭಾ ಗರ್ದಭಾಃ ಖರಾಃ’ ಎಂದು ಅಮರವಾಕ್ಯ. ಚಕ್ರೀವತ್, ಬಾಲೇಯ, ರಾಸಭ, ಗರ್ದಭ, ಮತ್ತು ಖರ- ಇವೆಲ್ಲವೂ ಕತ್ತೆಯ ಪರ್ಯಾಯನಾಮಗಳು. ಅದೆಲ್ಲಕ್ಕಿಂತ ಹೆಚ್ಚಾಗಿ ಕತ್ತೆಯ ಹಿರಿಮೆ ಇತ್ತೀಚಿನ ವರ್ಷಗಳಲ್ಲಿ ಬೆಳಕಿಗೆ ಬಂದಿರುವುದು ಅದರ ಹಾಲಿನ ಮಹತ್ತದಿಂದ. ಕತ್ತೆಯ ಮೊಲೆಯಲ್ಲಿ ಖಂಡುಗ ಹಾಲಿದ್ದರೇನು? ಎಂಬ ಗಾದೆಮಾತನ್ನು ಸುಳ್ಳಾಗಿಸಿದ ಸಂಶೋಧನೆಗಳಿಂದ. ಕತ್ತೆಯ ಹಾಲು ಆರೋಗ್ಯಕ್ಕೆ
ಒಳ್ಳೆಯದಂತೆ. ಹಸುವಿನ ಹಾಲಿಗಿಂತಲೂ ಹೆಚ್ಚು ಜೀವಸತ್ತಗಳು, ಕೊಬ್ಬಿನ ಪ್ರಮಾಣ ಕಡಿಮೆ, ಚಿಕ್ಕ ಮಕ್ಕಳ ದೇಹದ
ಜೀರ್ಣಾಂಗವ್ಯವಸ್ಥೆಗೆ ಸರಿಯಾಗಿ ಹೊಂದಿಕೊಳ್ಳುತ್ತದೆ ಮತ್ತು ಬಹಳ ಬೇಗನೆ ಜೀರ್ಣವಾಗುತ್ತದೆ, ರೋಗ ನಿರೋಧಕ ಗುಣವೂ ಹೆಚ್ಚಿರುತ್ತದೆ… ಎಂದು ಕತ್ತೆ ಹಾಲು ತಜ್ಞರ ಅಂಬೋಣ. ಇದನ್ನು ನಾವು ಬರೀ ಬುರ್ನಾಸ್ ಬಕ್ವಾಸ್ ಎಂದು ಹೀಗಳೆಯಬೇಕಿಲ್ಲ.

ಪಿಎಚ್‌ಡಿ ಪದವೀಧರ, ಕಾಲೇಜಿನಲ್ಲಿ ಪ್ರಾಧ್ಯಾಪಕ ವೃತ್ತಿಯಲ್ಲಿರುವ, ತುಮಕೂರು ಜಿಲ್ಲೆಯ ಮಧುಗಿರಿಯ ರಂಗೇಗೌಡರು ಪ್ರವೃತ್ತಿಯಾಗಿ ಕತ್ತೆ ಸಾಕಾಣಿಕೆ ಉದ್ಯಮ ನಡೆಸುತ್ತಿರುವ ಬಗ್ಗೆ ವಾಟ್ಸ್ಯಾಪ್‌ನಲ್ಲಿ ಇತ್ತೀಚೆಗೆ ಒಂದು ವಿಡಿಯೊ ಹರಿದಾಡಿತ್ತು. ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿದ್ದ ಶ್ರೀನಿವಾಸ ಗೌಡ ಎಂಬುವವರು ಕೊರೋನಾ ಕಾಲದಲ್ಲಿ ಉದ್ಯೋಗಕ್ಕೆ ಕುತ್ತು ಬಂದಾಗ ಮಂಗಳೂರಿನಲ್ಲಿ ಕತ್ತೆ ಫಾರ್ಮ್ ಆರಂಭಿಸಿ ಈಗ ಅದನ್ನೇ ಕಸುಬನ್ನಾಗಿಸಿ ಕೊಂಡಿರುವ ಸುದ್ದಿಯೂ ಪತ್ರಿಕೆಗಳಲ್ಲಿ ಬಂದಿತ್ತು. ಅವರೆಲ್ಲ ಕತ್ತೆ ಹಾಲು ಮಾರಿ ಕಾಸು ಗಳಿಸುವ ದಾರಿ ಕಂಡು ಕೊಂಡವರು. ಅವರಿಗಿಂತಲೂ ಸ್ಮಾರ್ಟ್ ಅಂದರೆ ಶತಮಾನಗಳ ಹಿಂದಿನ ಸುರಸುಂದರಿ ಕ್ಲಿಯೊಪಾತ್ರ. ಆಕೆ ದಿನವೂ ಕತ್ತೆಗಳ ಹಾಲಿನಿಂದಲೇ ಸ್ನಾನ ಮಾಡುತ್ತಿದ್ದಳಂತೆ. ಸುಮಾರು 700 ಕತ್ತೆಗಳ ಹಾಲು ಕ್ಲಿಯೊಪಾತ್ರಳ ಸ್ನಾನಕ್ಕೆಂದೇ ಸರಬರಾಜಾಗುತ್ತಿತ್ತಂತೆ. ಮನುಷ್ಯದೇಹಕ್ಕೆ ಕತ್ತೆಹಾಲು ಒಳ್ಳೆಯದೆಂದು ಹಿಪೋಕ್ರೇಟನ ಹಿತವಚನ. ಆತ ಹೇಳಿದ್ದು ದೇಹದ ಆರೋಗ್ಯ ದೃಷ್ಟಿಯಿಂದ. ಕ್ಲಿಯೊಪಾತ್ರ ಅದನ್ನು ಬಾಹ್ಯ ಸೌಂದರ್ಯಕ್ಕೆಂದು ಅರ್ಥಮಾಡಿ ಕೊಂಡಳು. ಅವಳ ಬ್ರೇನ್ ಹೇಗೋ ಗೊತ್ತಿಲ್ಲ, ಬ್ಯೂಟಿ ಅಂತೂ ಬುರ್ನಾಸ್ ಖಂಡಿತ ಅಲ್ಲ.

ಗ್ರೀಕ್ ರಾಣಿಯ ಉಲ್ಲೇಖದಂತೆಯೇ, ನಮ್ಮ ಭಾರತೀಯ ಪುರಾಣಗಳಲ್ಲಿ ಬರುವ ಕತ್ತೆಯ ಉಲ್ಲೇಖವನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಅದು ಧೇನುಕಾಸುರನ ಕಥೆ. ವಿಷ್ಣುಪುರಾಣದಲ್ಲಿ, ಮಹಾಭಾರತ ಮತ್ತು ಭಾಗವತಗಳಲ್ಲೂ ಬರುತ್ತದೆ. ಧೇನುಕ ಒಬ್ಬ ರಾಕ್ಷಸ. ಕಂಸನ ಅನುಯಾಯಿ. ಬೃಂದಾವನ ಸಮೀಪದ ತಾಳವನದಲ್ಲಿ ಕತ್ತೆಯ ರೂಪ ವನ್ನು ಧರಿಸಿ ತನ್ನ ಪರಿವಾರ ದೊಂದಿಗೆ ವಾಸಮಾಡುತ್ತಿದ್ದನಂತೆ. ಅಲ್ಲಿಗೆ ಬಂದವರನ್ನೆಲ್ಲ ಕೊಂದು ತಿನ್ನುತ್ತಿದ್ದನಂತೆ. ಒಂದು ದಿನ ಗೊಲ್ಲ ಹುಡುಗರು ತಾಳೆಯ ಹಣ್ಣುಗಳನ್ನು ತಿನ್ನಬೇಕೆಂದು ಆಸೆಪಟ್ಟರು. ಶ್ರೀಕೃಷ್ಣ-
ಬಲರಾಮರನ್ನೂ ಕೂಡಿಕೊಂಡು ಅವರೆಲ್ಲ ತಾಳವನಕ್ಕೆ ಹೋದರು. ಬಲರಾಮನು ತಾಳೆಮರವನ್ನು ಹಿಡಿದು ಅಲ್ಲಾಡಿಸಲಾಗಿ ಅನೇಕ -ಲಗಳು ಮರದಿಂದ ಉದುರಿಬಿದ್ದವು.

ಗೊಲ್ಲರು ಅವುಗಳನ್ನು ಆಯ್ದುಕೊಳ್ಳುತ್ತಿದ್ದಾಗ ಕತ್ತೆಯ ರೂಪದ ಧೇನುಕಾಸುರನು ಬಂದು ಬಲರಾಮನ ಮೇಲೆ ಬಿದ್ದನು. ಬಲರಾಮನು ಆ ಕತ್ತೆಯ ಹಿಂಗಾಲುಗಳನ್ನು ಗರಗರಗನೆ ತಿರುಗಿಸಿ ತಾಳೆಯ ಮರಕ್ಕೆ ಹೊಡೆದು ಕೊಂದನು. ಇದು ಕಥೆಯ ಸಾರಾಂಶ. ಕಲಿಯುಗದಲ್ಲೂ ಕತ್ತೆಗಳೇಕೆ ಕೋಪ ಬಂದರೆ ಹಿಂಗಾಲುಗಳಿಂದ ಒದೆಯುತ್ತವೆ ಎಂಬು ದಕ್ಕೆ ಈ ಕಥೆಯಲ್ಲಿ ಉತ್ತರ ಸಿಗುತ್ತದೆ. ಹಿಂದಿನ ಜನ್ಮದಲ್ಲಿ ನಡೆದ ಅವಮಾನ ನೆನಪಾಗಿ ಅವುಗಳಿಗೆ ರೋಷ ಉಕ್ಕುತ್ತದೇನೋ. ಹೀಗಾಗಿ ಹಿಂಗಾಲುಗಳನ್ನೇ ಆಯುಧವನ್ನಾಗಿಸಿ ಹೋರಾಡುತ್ತವೆ ಸರಿ, ಲೇಖನದ ಮುಕ್ತಾಯ ಹಂತದಲ್ಲಿ ಅನಿರ್ಣೀತ ಕತ್ತೆಯ ವಿಚಾರಕ್ಕೆ ಬರುತ್ತೇನೆ. ಅನಿರ್ಣೀತ ಅಂದರೆ ನಿರ್ಣಯಿಸಲಾಗದ್ದು ಅಥವಾ ನಿರ್ಧಾರ ಮಾಡಲು ಅಶಕ್ಯವಾದದ್ದು.

ನೀವು ಬಟ್ಟೆಯಂಗಡಿಯಲ್ಲಿ ಸೀರೆ ತಗೊಳ್ಳುವಾಗ ಹುಡುಕಿ ಹುಡುಕಿ ಎರಡನ್ನು ಶಾರ್ಟ್‌ಲಿಸ್ಟ್ ಮಾಡಿ ಅದರ ಪೈಕಿ ಯಾವುದು ಫೈನಲ್ ಎಂದು ನಿರ್ಧರಿಸಲಾಗದೆ ಎರಡನ್ನೂ ಬಿಟ್ಟು ಬೇರೊಂದು ಅಂಗಡಿಯಲ್ಲಿ ನೋಡುವಾ ಎಂದು ಹೊರಬಂದದ್ದಿದೆಯೇ? ರೆಸ್ಟೋರೆಂಟ್‌ನಲ್ಲಿ ಸೌತ್ ಇಂಡಿಯನ್ ಊಟ ತಗೊಳ್ಳಲಾ ಅಥವಾ ನಾರ್ತ್ ಇಂಡಿಯನ್ ನಾನ್ ಗೋಬಿಮಟರ್ ತಗೊಳ್ಳಲಾ ಅಂತನ್ನೋ ಸಂದಿಗ್ಧಕ್ಕೆ ಸಿಲುಕಿದ್ದಿದೆಯೇ? ಉದ್ಯೋಗಕ್ಕೆ
ಎರಡು ಕಂಪನಿಗಳಿಂದ ಆ-ರ್ ಲೆಟರ್ ಬಂದಾಗ ಯಾವುದಕ್ಕೆ ಸೇರಲಿ ಎಂದು ತಲೆಕೆರೆದುಕೊಂಡದ್ದಿದೆಯೇ? ಒಟ್ಟಿನಲ್ಲಿ, ನಿರ್ಧಾರ ತೆಗೆದುಕೊಳ್ಳಲಾರದೆ ಒಂದರೆಕ್ಷಣವಾದರೂ ತೊಳಲಾಡಿದ್ದಿದೆಯೇ? ಹೌದು ಅಂತಾದರೆ ಆ ಕ್ಷಣದಲ್ಲೊಮ್ಮೆ ನೀವು ಬುರಿಡಾನ್‌ನ ಕತ್ತೆ ಆಗಿದ್ದೀರಿ ಎಂದೇ ಅರ್ಥ!

ಬುರಿಡಾನ್‌ನ ಕತ್ತೆ (Buridan’s Ass) ಎಂದರೆ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿನ ವಿರೋಧಾಭಾಸ. ಒಂದು ಕತ್ತೆ ಇರುತ್ತದೆ. ಅದಕ್ಕೆ ವಿಪರೀತ ಬಾಯಾರಿಕೆಯೂ ವಿಪರೀತ ಹಸಿವೆಯೂ ಆಗಿರುತ್ತದೆ. ಅದರ ಇಕ್ಕೆಲಗಳಲ್ಲಿ ಒಂದು ಬಕೆಟ್‌ನಲ್ಲಿ ನೀರು ಮತ್ತೊಂದು ಬಕೆಟ್‌ನಲ್ಲಿ ಬೈಹುಲ್ಲು ಇಡಲಾಗುತ್ತದೆ. ಯಾವ ಬಕೆಟ್‌ಗೆ ಮೊದಲು ಬಾಯಿ
ಹಾಕಬೇಕು ಎಂದು ನಿರ್ಧರಿಸಲಾರದೆ ಕತ್ತೆ ಸುಮ್ಮನಾಗುತ್ತದೆ.

ಅಷ್ಟೇಅಲ್ಲ ಹಾಗೇ ಉಪವಾಸವಿದ್ದು ಕೊನೆಗೆ ಸತ್ತೇ ಹೋಗುತ್ತದೆ! 14ನೆಯ ಶತಮಾನದಲ್ಲಿ ಬಾಳಿದ ಫ್ರೆಂಚ್ ತತ್ತ್ವಜ್ಞಾನಿ ಜೀನ್ ಬುರಿಡಾನ್ ಎಂಬಾತ ಈ ವಿರೋಧಾಭಾಸವನ್ನು ಮೊತ್ತಮೊದಲಿಗೆ ಸಾರ್ವಜನಿಕವಾಗಿ ಚರ್ಚಿಸಿ ದನು. ಸಾಕಷ್ಟು ಗೇಲಿಗೂ ಒಳಗಾದನು. ಅವನು ಪ್ರಯೋಗ ಮಾಡಿದ್ದು ತನ್ನ ಸಾಕುನಾಯಿಯ ಮೇಲೆ. ಆದರೆ ನಾಯಿಗಾದರೂ ಸ್ವಲ್ಪ ಸ್ಮಾಟ್ ನೆಸ್ ಇರುತ್ತದೆ, ಎದುರಿಗೆ ಆಹಾರವಿದ್ದೂ ನಿರ್ಧರಿಸಲಾರದೆ ಉಪವಾಸದಿಂದ ಸತ್ತುಹೋಗಬೇಕಿದ್ದರೆ ಅದು ಕತ್ತೆಯಂಥ ದಡ್ಡ ಪ್ರಾಣಿಯೇ ಇರಬೇಕು ಎಂದು ಜನ ತಮಾಷೆ ಮಾಡಿದರು. ಆ
ಪ್ರಯೋಗವನ್ನು ‘ಬುರಿಡಾನ್‌ನ ಕತ್ತೆ’ ಎಂದೇ ಗುರುತಿಸಿದರು.

ನಿರ್ಧಾರ ಮಾಡಲಾಗದ, ಡಿಸಿಶನ್ ಮೇಕಿಂಗ್ ಕೆಪ್ಯಾಸಿಟಿ ಇಲ್ಲದ ವ್ಯಕ್ತಿಯನ್ನು ‘ಬುರಿಡಾನ್‌ನ ಕತ್ತೆ’ ಎಂದು ತಮಾಷೆ ಮಾಡುವುದು ರೂಢಿಯಾಯ್ತು. ಈಗಿನ್ನು ಇಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ. ರಿಪಬ್ಲಿಕನ್ ಪಾರ್ಟಿಯ ಹುರಿಯಾಳು ಹರಕುಬಾಯಿಯ ಡೊನಾಲ್ಡ್ ಟ್ರಂಪ್. ಪಕ್ಷದ ಚಿಹ್ನೆ ಆನೆ. ಡೆಮೊಕ್ರಾ ಟಿಕ್ ಪಾರ್ಟಿಯ ಅಭ್ಯರ್ಥಿ ಕಮಲಾ ಹ್ಯಾರಿಸ್. ಅವರ ಚಿಹ್ನೆ ಕತ್ತೆ. ಕಮಲತ್ತೆ ಕತ್ತೆ ಎಂದರೆ ಕತ್ತೆ-ಲತ್ತೆ ಎರಡೂ ಬಂತು. ಅವರಿಬ್ಬರಿಗಿಂತ ದೊಡ್ಡ ಕತ್ತೆಗಳೆಂದರೆ ‘ಯಾರು ಹಿತವರು ಎನಗೆ ಈ ಇಬ್ಬರೊಳಗೆ’ ಎಂದು ನಿರ್ಧರಿಸಲಾಗದ, ಅಮೆರಿಕನ್ ಪ್ರಜೆಗಳೆಂಬ ಅನಿರ್ಣೀತ ಬುರಿಡಾನ್ ಕತ್ತೆಗಳು!

ಇದನ್ನೂ ಓದಿ: Srivathsa joshi Column: ವಿಜಯ ಭಾಸ್ಕರ್‌ ರಾಗಸಂಯೋಜನೆ ಮಾಡಿದ್ರೆ ಎಲ್ಲೆಲ್ಲು ಸಂಗೀತವೇ !