Wednesday, 27th November 2024

Dr C G Raghavendra Vylaya Column: ನಾವೆಲ್ಲರೂ ಅಗ್ನಿವೀರರಾಗೋ ಕಾಲ ಸನ್ನಿಹಿತವಾಗಿದೆ

ಕಳಕಳಿ

ಡಾ.ಸಿ.ಜಿ.ರಾಘವೇಂದ್ರ ವೈಲಾಯ

ಭಾರತದಲ್ಲಿ ಹಿಂದೂಗಳಾಗಿ ಹುಟ್ಟಿ ಅದೇನು ತಪ್ಪೆಸಗಿದ್ದೇವೋ ಎನಿಸುವಷ್ಟರ ಮಟ್ಟಿಗೆ ಪ್ರಸ್ತುತ ನಾವು ಹಿಂದೂ-ಬಿಯಾದಿಂದ ಬೇಸತ್ತಿದ್ದೇವೆ. ಸನಾತನಿಗಳು ಬಹುಸಂಖ್ಯಾತರಿರಲಿ, ಅಲ್ಪಸಂಖ್ಯಾತರಿರಲಿ ಎರಡೂ ಸಂದರ್ಭ ಗಳಲ್ಲೂ ಅವರೇ ಅನ್ಯಾಯಕ್ಕೊಳಗಾಗುವ, ಜನಸಂಖ್ಯಾ ಕುಸಿತವನ್ನು ಕಾಣುವ ದುರಂತವನ್ನು ಜಗತ್ತು ಎಲ್ಲೂ ಕಂಡಿರದು. ಬೌದ್ಧರ ಪ್ರಭಾವದಿಂದ ಅಶೋಕನ ಕಾಲಕ್ಕೆ ಕ್ಷಾತ್ರವನ್ನು ಕಡೆಗಣಿಸಿ, ಏಕಪಕ್ಷೀಯವಾಗಿ ಅಪಾತ್ರರಲ್ಲಿ ಅಹಿಂಸಾಚರಣೆ ಮಾಡಿದುದರ ವಿಷ ಫಲವೇ ಇಂದಿನ ಈ ಹಿಂದೂ ಉತ್ಪೀಡನ. ಹೀಗೆ ಮೊದಲ್ಗೊಂಡ ಅಹಿಂಸಾ ವಾದವು ಸಹನಶೀಲತೆ, ಸೌಹಾರ್ದ, ಸಹಬಾಳ್ವೆ ಮತ್ತು ಸೆಕ್ಯುಲರಿಸಂಗಳೆಂಬ ವಿಶೇಷಣಗಳಿಂದ ಕಾಲಕಾಲಕ್ಕೆ ಈ ದೇಶದ ರಾಜಕೀಯದಲ್ಲಿ ಮುನ್ನೆಲೆಗೆ ಬಂತು.

ಅದನ್ನೇ ಗಾಂಧಿ ಯಂಥವರು ಅಲ್ಪಸಂಖ್ಯಾತರ ತುಷ್ಟೀಕರಣದ ರಾಜಕೀಯಕ್ಕೆ ಬಳಸಿಕೊಂಡು ಹಿಂದೂಗಳನ್ನು ದಾರಿತಪ್ಪಿಸಿದರು. ಸನಾತನ ಧರ್ಮವು ಸಾರ್ವಕಾಲಿಕವಾಗಿ ಅಹಿಂಸೆಯನ್ನು ಬೋಧಿಸಲೇ ಇಲ್ಲ; ಅದು ಧರ್ಮದ ಮೂಲಭೂತ ಸಿದ್ಧಾಂತಗಳ ಭಾಗವೂ ಅಲ್ಲ. ಸನಾತನ ದರ್ಶನಗಳು ಆತ್ಮರಕ್ಷಣೆಗಾಗಿ, ದುಷ್ಟಶಿಕ್ಷೆ ಮತ್ತು ಶಿಷ್ಟ ರಕ್ಷೆಗಾಗಿ ಶಸ್ತ್ರಧಾರಣೆಯ ಮಹತ್ವವನ್ನು ಸಾರುತ್ತಲೇ ಬಂದಿವೆ. ಹಾಗಿಲ್ಲವಾದಲ್ಲಿ ನಮ್ಮ ದೇವದೇವಿಯರೆಲ್ಲಾ ಶಸ್ತ್ರ ಪಾಣಿಗಳಾಗಿಯೇ ಏಕಿರುತ್ತಿದ್ದರು? ‘ಶಸ್ತ್ರಾಣಿ ರಕ್ಷಿತೇ ರಾಷ್ಟ್ರೇ ಶಾಸ್ತ್ರ ಚರ್ಚಾ ಪ್ರವರ್ತತೇ’ ಎಂದು ನಮ್ಮ ಶೃತಿಗಳು ಸ್ಪಷ್ಟವಾಗಿ ಹೇಳಿವೆ.

ಹಿಂದೊಮ್ಮೆ ಈ ಭೂಮಿಯಲ್ಲಿ ಹಲವು ಮಾತೃಪೂಜಕ ಮತ್ತು ಮೂರ್ತಿಪೂಜಕ ನಾಗರಿಕತೆಗಳು ವಿಜೃಂಭಿಸಿದ್ದವು.
ಆದರೆ, ಮಧ್ಯಪ್ರಾಚ್ಯದಲ್ಲಿ ಹುಟ್ಟಿಕೊಂಡ ಅನಾಗರಿಕ ಸೆಮೆಟಿಕ್ ಪಂಥಗಳು ಬರುಬರುತ್ತಾ ಜಗದಗಲಕ್ಕೆ ವಕ್ಕರಿಸಿ ಕೊಂಡವು. ಮಾತೃಶೋಷಣೆ ಮತ್ತು ಮೂರ್ತಿಭಂಜನೆಯನ್ನೇ ತಮ್ಮ ಚಟುವಟಿಕೆಯ ಅವಿಭಾಜ್ಯ ಅಂಗವಾಗಿಸಿ ಕೊಂಡ ಈ ಪಂಥ ಗಳು ಮೂಲದಲ್ಲೇ ಅಧರ್ಮವನ್ನು ಹೊಂದಿದ್ದು, ಭಯ, ಆಮಿಷ ಮತ್ತು ಆಧುನಿಕತೆಯ ಹೆಸರಿನಲ್ಲಿ ಮಾನವತೆಯ ಬುಡಕ್ಕೇ ಕೊಡಲಿಯೇಟು ನೀಡುತ್ತಿವೆ. ಈಗ ಜಿಹಾದಿ ಮೂಲಭೂತವಾದ ಮತ್ತು ನಕ್ಸಲ್ ವಾದಗಳೂ ಸೇರಿಕೊಂಡು, ನಿರಂತರ ಆಕ್ರಮಣ, ಶೋಷಣೆ ಮತ್ತು ಗುಲಾಮಗಿರಿಯಿಂದ ಶತಮಾನ ಗಳ ಕಾಲ ನಲುಗಿದ ಹಿಂದೂಗಳನ್ನು ಮತ್ತಷ್ಟು ಹಿಂಸಿಸುತ್ತಿವೆ.

ಜಗತ್ತಿನಲ್ಲಿ ಇರುವುದೊಂದೇ ಧರ್ಮ, ಅದುವೇ ಸನಾತನ ಧರ್ಮ. ಉಳಿದವೆಲ್ಲಾ ಮತ-ಪಂಥಗಳಷ್ಟೇ. ಅವು
ಹೆಚ್ಚೆಂದರೆ ಪ್ರವಾದಿಯೊಬ್ಬನ ಸೀಮಿತ ದೃಷ್ಟಿಕೋನಗಳು ಮಾತ್ರವೇ. ಆದರೆ ಅಪೌರುಷೇಯ ವೇದಗಳಾದರೋ
ಅಸಂಖ್ಯಾತ ಋಷಿಮುನಿಗಳ ಸತ್ಯದರ್ಶನಗಳ ಮೊತ್ತ. ಇವು ಅನಾದಿ, ಅನಂತ, ಅವಿಚ್ಛಿನ್ನ ಪರಂಪರೆಯ ದಿಗ್ದರ್ಶಕ ಗಳು. ಭಾರತದಲ್ಲಿ ಅಲ್ಪಸಂಖ್ಯಾತರು, ಭ್ರಷ್ಟರು, ಅಪರಾಧಿಗಳು, ಶ್ರೀಮಂತರು, ಖ್ಯಾತನಾಮರು ಮತ್ತು ಭಯೋ ತ್ಪಾದಕರಿಗೆ ಮಾತ್ರವೇ ಮಾನವ ಹಕ್ಕುಗಳು ಅನ್ವಯವಾಗುತ್ತವೆ. ಮಿಕ್ಕಂತೆ ಅವುಗಳ ರಕ್ಷಣೆಗೆಂದೇ ಇರುವ ಸರಕಾರಿ ಕೃಪಾಪೋಷಿತ ಆಯೋಗಗಳು ಗಾಢನಿದ್ರೆಯಲ್ಲಿರುತ್ತವೆ.

ಕಾಶ್ಮೀರದ ಅಮಾಯಕ ಹಿಂದೂಗಳ ನರಮೇಧದ ನ್ಯಾಯನಿರ್ಣಯ ಮಾಡಲು ನಮ್ಮ ನ್ಯಾಯವ್ಯವಸ್ಥೆಗೆ ಸಮಯವೇ ಸಿಗುತ್ತಿಲ್ಲ. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ನಾಣ್ಣುಡಿ ಹಿಂದೂಗಳಿಗೆ ಅನ್ವಯ ವಾಗುವುದಿಲ್ಲ. ನೂರಾರು ಜಾತಿ-ಉಪಜಾತಿಗಳಾಗಿ ಹರಿದು ಹಂಚಿಹೋಗಿರುವ ಹಿಂದೂಗಳನ್ನು ನಾವೀಗ ಬಹುಸಂಖ್ಯಾತರೆಂದು ಕರೆಯ ಬಹುದೇ? ಆಂಗ್ಲರ ಒಡೆದಾಳುವ ನೀತಿಯನ್ನು ನಮ್ಮ ಸ್ವಘೋಷಿತ ಜಾತ್ಯತೀತರು ಚೆನ್ನಾಗಿ ಬಳಸಿಕೊಂಡಿದ್ದಾರೆ.

ಒಂದೊಂದು ಜಾತಿಯೂ ಒಂದೊಂದು ಪಕ್ಷಕ್ಕೆ ಕಾಯಂ ಮತಬ್ಯಾಂಕ್. ಹೀಗಿರುವಾಗ ಹಿಂದೂಗಳ ಸಾಮಯಿಕ
ಹಿತಾಸಕ್ತಿಯನ್ನು ಕೇಳುವವರಾರು? ಜಾತಿ ಸಮಾವೇಶಗಳಿಗೆ ದೊಡ್ಡ ಸಂಖ್ಯೆಯಲ್ಲಿ ಸೇರುವ ಜನರು ಹಿಂದೂ ಸಮಾವೇಶ ವೆಂದರೆ ಹಿಂಜರಿಯುತ್ತಾರೆ. ನಾವು ಒಟ್ಟಾಗಿ ಹಿಂದುತ್ವದೊಂದಿಗೆ ಎಂದು ಗುರುತಿಸಿಕೊಳ್ಳುವೆವೋ ಅಂದೇ ನಮಗೆ ಸ್ವಾತಂತ್ರ್ಯ; ಇಲ್ಲವಾದಲ್ಲಿ ಸ್ವತಂತ್ರ ಭಾರತದಲ್ಲಿ ನಾವು ಶಾಶ್ವತವಾಗಿ ಅತಂತ್ರರಾಗಲಿದ್ದೇವೆ.

ಕೊರೋನೋತ್ತರ ಆರ್ಥಿಕ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳುವ ಮೊದಲೇ ಜಗತ್ತು ಹಮಾಸ್-ಇಸ್ರೇಲ್, ಉಕ್ರೇನ್-ರಷ್ಯಾ, ಹಾಂಕಾಂಗ್-ಚೀನಾ ನಡುವಿನ ಯುದ್ಧಗಳಿಂದಾಗಿ ಭಯಗ್ರಸ್ತ ವಾತಾವರಣದಲ್ಲೇ ಕಾಲ ಕಳೆಯು ವಂತಾಗಿದೆ. ಜಾಗತಿಕ ಸರಬರಾಜು ಸರಪಳಿ ಮುರಿದುಬಿದ್ದಿದೆ, ಇಸ್ಲಾಮಿಕ್ ಭಯೋತ್ಪಾದನೆಯು ವಿಶ್ವಶಾಂತಿಗೆ ಸವಾಲಾಗಿ ಬೆಳೆಯುತ್ತಿದೆ. ಭಾರತದಲ್ಲಂತೂ ಲವ್ ಜಿಹಾದ್, ಡ್ರಗ್ಸ್ ಜಿಹಾದ್‌ನಂಥ ಪಿಡುಗುಗಳು ವ್ಯಾಪಕ ವಾಗಿಬಿಟ್ಟಿವೆ. ಯುರೋಪಿನ ವಿವಿಧೆಡೆ ಅಕ್ರಮ ವಲಸಿಗರ ಉಪಟಳವನ್ನು ನಿಯಂತ್ರಿಸಲಾಗುತ್ತಿಲ್ಲ. ಇಂಥ ವಿಷಮ ಪರಿಸ್ಥಿತಿಯಲ್ಲಿ ವಿಶ್ವ ಆರ್ಥಿಕತೆಯ ಏಕೈಕ ಆಶಾಕಿರಣ ಭಾರತವಷ್ಟೇ. ಅಮೆರಿಕ, ಯುರೋಪ್, ಚೀನಾಗಳಿಗೆ ಇದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.

ಮೋದಿಯುಗದಲ್ಲಿ ಭಾರತ ಕೈಗೊಂಡಿರುವ ಸ್ವತಂತ್ರ ರಾಜನೈತಿಕ ನಿರ್ಧಾರಗಳು, ರಷ್ಯಾ ಜತೆಗೆ ಮುಂದುವರಿದ ಪಾಲುದಾರಿಕೆ, ಗಟ್ಟಿಗೊಳ್ಳುತ್ತಿರುವ ಭಾರತದ ರಾಷ್ಟ್ರೀಯತೆ ಮತ್ತು ಜಾಗತಿಕ ನಾಯಕತ್ವ ಇವು ‘ದೊಡ್ಡಣ್ಣ’ನ ಕಣ್ಣುಗಳನ್ನು ಕೆಂಪಾಗಿಸಿವೆ. ಭಾರತ ತನ್ನ ಸಾಮಯಿಕ ಪಾಲುದಾರನೆಂದು ಅಮೆರಿಕ ತುತ್ತೂರಿ ಊದಿದರೂ, ಭಾರತದ ಉತ್ಕರ್ಷವನ್ನು ತಡೆದು ಏಷ್ಯಾದಲ್ಲಿ ಇನ್ನೊಂದು ಬೃಹತ್ ಶಕ್ತಿ ತಲೆಯೆತ್ತದಂತೆ ಮಾಡಲು ಸಾಧ್ಯ ವಾದುದನ್ನೆಲ್ಲಾ ಅದು ಒಳಗೊಳಗೇ ಮಾಡುತ್ತಿದೆ. ಭಾರತ ಸ್ವಾವಲಂಬಿಯಾಗುವುದು ಅಮೆರಿಕಕ್ಕೆ ಬೇಕಿಲ್ಲ;
ತನ್ನೆಲ್ಲಾ ಹುಕುಂಗಳಿಗೂ ಭಾರತ ‘ಜೀಹುಜೂರ್’ ಎನ್ನಬೇಕೆಂದು ಅದು ಬಯಸುತ್ತಿದೆ. ಹೀಗಾಗಿ ಅದು ಭಾರತ-
ವಿರೋಧಿ ಶಕ್ತಿಗಳೊಂದಿಗೆ ಜಾಗತಿಕ ಮಟ್ಟದಲ್ಲಿ ಶಾಮೀಲಾಗಿದೆ.

ಭಾರತದ ಪ್ರಜಾಪ್ರಭುತ್ವವನ್ನು, ಪ್ರಭುತ್ವ-ವಿರೋಧಿ ಆಂದೋಲನಗಳ ಹೆಸರಿನಲ್ಲಿ ಸದ್ದಿಲ್ಲದೆ ಕೊನೆಗಾಣಿಸಲು
ವಿಶ್ವಶಕ್ತಿಗಳು ಕಟಿಬದ್ಧವಾಗಿವೆ. ಈ ಹಿಂದೆ ಭಾರತದ ಮಿತ್ರರಾಷ್ಟ್ರವಾಗಿದ್ದ ಅಫ್ಘಾನಿಸ್ತಾನದಲ್ಲಿ ಅಶ್ರಫ್ ಘನಿ ನೇತೃತ್ವದ‌ ಸರಕಾರ ಕುಸಿದು ಭಾರತ-ವಿರೋಧಿ ತಾಲಿಬಾನ್ ಮಿಲಿಟರಿ ಆಡಳಿತ ಬರಲು ಅಮೆರಿಕವೇ ನೇರ ಕಾರಣ. ಅಮೆರಿಕ ಎಂದೂ ಯಾರಿಗೂ ದೀರ್ಘಕಾಲ ಮಿತ್ರನಾಗಿರುವುದು ಅಸಾಧ್ಯ.

ಅದರ ರಾಜಕೀಯ ನಿರ್ಧಾರಗಳು ಕೇವಲ ತತ್ಕಾಲದ ಸ್ವಾರ್ಥವನ್ನಷ್ಟೇ ಅವಲಂಬಿಸಿವೆ. ತನ್ನ ಹಿತಾಸಕ್ತಿಗಾಗಿ ಏನು
ಬೇಕಾದರೂ ಮಾಡುವ ಅಮೆರಿಕ, ತನ್ನ ರಾಜಕೀಯ, ಆರ್ಥಿಕ ಮತ್ತು ಮಿಲಿಟರಿ ಸಾಮರ್ಥ್ಯದ ಬಲದಿಂದ ಎಲ್ಲವನ್ನೂ ಅರಗಿಸಿಕೊಳ್ಳಬಲ್ಲದು. ವಿಶ್ವಸಂಸ್ಥೆ ಏನಿದ್ದರೂ ಅಮೆರಿಕದ ಕೈಗೊಂಬೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ವಿಂದು ಇಲ್ಲದಿರಲು ನೆಹರುರವರ ಕಮ್ಯುನಿಸ್ಟ್ ಮತ್ತು ಅಲಿಪ್ತ ನೀತಿಗಳೇ ಕಾರಣ. ಅಮೆರಿಕನ್ ರೀತಿ-ರಿವಾಜುಗಳನ್ನು ಚೀನಾ ಕೂಡ ಈಗ ಅನುಕರಿಸುತ್ತಿದೆ. ಅದು ಆರ್ಥಿಕ ಶೋಷಣೆಯಾಗಿರ ಬಹುದು, ಮಿಲಿಟರಿ ಹಸ್ತಕ್ಷೇಪದ ರೂಪದಲ್ಲಿರಬಹುದು.

ಜಗತ್ತಿನ ಅತಿದೊಡ್ಡ ಶಸ್ತ್ರಾಸ್ತ್ರ ತಯಾರಕ ಎನಿಸಿಕೊಂಡಿರುವ ಅಮೆರಿಕ, ಜಗತ್ತನ್ನು ಸದಾ ಯುದ್ಧದ ಸ್ಥಿತಿಯಲ್ಲೇ
ನೋಡಬಯಸುತ್ತದೆ. ತನ್ನ ಶಸ್ತ್ರಾಸ್ತ್ರ ದಾಸ್ತಾನು ಮಾರಾಟವಾಗಬೇಕೆಂದರೆ, ಎಲ್ಲೆಂದರಲ್ಲಿ ಸದಾ ಸಂಘರ್ಷಗಳು ನಡೆಯುತ್ತಿರಬೇಕು. ಇತ್ತಂಡಗಳೂ ಒಂದಲ್ಲಾ ಒಂದು ಒಪ್ಪಂದದ ಹೆಸರಲ್ಲಿ ತನ್ನಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುವ ಮೂಲಕ ತನ್ನ ಆರ್ಥಿಕತೆಗೆ ಬಲ ತುಂಬುವಂತಾಗಬೇಕು. ಹೀಗೆ ಕಾದಾಡಿ ಬಡವಾದ ದೇಶಗಳಿಗೆ ಆರ್ಥಿಕ ನೆರವಿನ ನೆಪದಲ್ಲಿ ದುಬಾರಿ ಬಡ್ಡಿಯ ಸಾಲ ನೀಡಿ ತಾನು ಮತ್ತಷ್ಟು ಶ್ರೀಮಂತನಾಗಬೇಕು- ಇವು ಅಮೆರಿಕದ ಹುನ್ನಾರಗಳಲ್ಲಿ ಕೆಲವಷ್ಟೇ. ಇದಕ್ಕೆ ಪರೋಕ್ಷ ವಾಗಿ ಸಹಕರಿಸುವ ದೇಶಗಳು ಅದಕ್ಕೆ ಮಿತ್ರರು, ಅಡ್ಡಿಯಾದ ವರೆಲ್ಲ ಶತ್ರುಗಳೇ. ತನ್ನ ಮಾತಿಗೆ ತಾಳಹಾಕದ ಯಾವುದೇ ಪ್ರಭುತ್ವವನ್ನೂ ಬೀಳಿಸಿ ತನ್ನ ಪರವಾಗಿ ರುವ ಛಾಯಾ ಸರಕಾರಗಳನ್ನು ಅಲ್ಲಿ ನೇಮಿಸುತ್ತಿರುವ ಅಮೆರಿಕ, ತನ್ನ ಪ್ರಜಾಪ್ರಭುತ್ವ-ವಿರೋಧಿ ನಡೆ ಮತ್ತು ಇಬ್ಬಗೆ ನೀತಿಯನ್ನು ಪದೇಪದೆ ಸಾಬೀತು ಪಡಿಸುತ್ತಿದೆ.

ಶ್ರೀಲಂಕಾದಲ್ಲಿ ಭಾರತ-ಸ್ನೇಹಿ ಸರಕಾರವು ಪತನವಾಗಿ, ಈಗ ಚೀನಾದ ಕೈಗೊಂಬೆ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಪಾಕಿಸ್ತಾನದಲ್ಲಿ ಇಸ್ಲಾಮಿಸ್ಟ್ ಜಿಹಾದಿಗಳ ಅಟ್ಟಹಾಸ ಎಲ್ಲೆ ಮೀರಿದ್ದು, ಅಳಿದುಳಿದ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ, ಕೊಲೆ, ಅತ್ಯಾಚಾರ, ಬಲವಂತದ ಮತಾಂತರ ಮತ್ತು ದೇಗುಲ ಧ್ವಂಸ ಪ್ರಕರಣಗಳು ನಿರಂತರ ನಡೆಯುತ್ತಿವೆ. ಭಾರತ- ಸ್ನೇಹಿಯಾಗಿದ್ದ ಬಾಂಗ್ಲಾ ಸರಕಾರವನ್ನು ಮೀಸಲಾತಿ ವಿರೋಧಿ ಹೋರಾಟದ ಹೆಸರಲ್ಲಿ ಬೀಳಿಸಿದ ನಂತರ, ಪಾಕ್ ಪ್ರೇರಿತ ಇಸ್ಲಾಮಿಸ್ಟ್ ಶಕ್ತಿಗಳು ಅಲ್ಲಿನ ಅಮಾಯಕ ಹಿಂದೂಗಳ ಮೇಲೆಸಗುತ್ತಿರುವ ದೌರ್ಜನ್ಯಗಳಿಗೆ ಕಡಿವಾಣವೇ ಇಲ್ಲದಂತಾಗಿದೆ.

ಇದರ ಹಿಂದೆಯೂ ವಿದೇಶಿ ಕೈವಾಡವಿರುವುದು ಗುಟ್ಟಾಗೇನೂ ಉಳಿದಿಲ್ಲ. ಜಗತ್ತಿನ ಏಕೈಕ ಹಿಂದೂದೇಶವಾಗಿದ್ದ ನೇಪಾಳವನ್ನು ‘ಜಾತ್ಯತೀತ’ ದೇಶವಾಗಿ ಬದಲಿಸಿ, ಭಾರತದ ಪರವಾಗಿದ್ದ ಅಲ್ಲಿನ ಚುನಾಯಿತ ಸರಕಾರವನ್ನು ಮಾವೋ ವಾದಿಗಳ ಮೂಲಕ ಬೀಳಿಸಿದ ಚೀನಾ ಅಲ್ಲೀಗ ತನ್ನ ಕೈಗೊಂಬೆಯನ್ನು ಅಧಿಕಾರಕ್ಕೆ ತಂದಿದೆ.

ಭಾರತ-ಚೀನಾ ನಡುವಿನ ‘ಬಫರ್ ಝೋನ್’ ಆಗಿದ್ದ ಟಿಬೆಟ್ ಅನ್ನು ಸದ್ದಿಲ್ಲದೆ ನುಂಗಿದ ಚೀನಾ ಈಗ ಅರುಣಾಚಲ
ಪ್ರದೇಶದ ಮೇಲೆ ತನ್ನ ಹಕ್ಕನ್ನು ಮಂಡಿಸುತ್ತಿದೆ. ಹೀಗೆ ಭಾರತದ ನೆರೆಹೊರೆ ದೇಶಗಳಲ್ಲಿನ ಅಶಾಂತಿ-ಅರಾಜಕತೆಗಳ
ಹಿಂದೆ ಅಮೆರಿಕ ನಿರ್ದೇಶಿತ ಪಾಶ್ಚಾತ್ಯ ಶಕ್ತಿಗಳ ಮತ್ತು ಚೀನಾದ ಹಸ್ತಕ್ಷೇಪವಿರುವುದು ಸುಸ್ಪಷ್ಟ. ಭಾರತವೇ ಇವೆಲ್ಲದರ ಅಂತಿಮಗುರಿ. ನಮ್ಮ ದೇಶಕ್ಕೆ ಸದ್ಯೋಭವಿಷ್ಯದಲ್ಲಿ ಅಪಾಯವು ಕಟ್ಟಿಟ್ಟಬುತ್ತಿ. ಅಪಾಯದ ಅರಿವಿ ದ್ದಾಗ ಮಾತ್ರವೇ ನಾವು ಪರಿಹಾರಕ್ಕಾಗಿ ಶ್ರಮಿಸಬಲ್ಲೆವು. ಬಾಂಗ್ಲಾದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಭಾರತದಲ್ಲೂ ಅಲ್ಪಸಂಖ್ಯಾತರ ಕುರಿತು ‘ಸುಳ್ಳು ಸುದ್ದಿ’ಗಳನ್ನು ನಿರಂತರವಾಗಿ ತೇಲಿಬಿಡುವ ಮುಖಾಂತರ ವ್ಯಾಪಕವಾದ ಆಡಳಿತ-ವಿರೋಧಿ ಅಲೆಯನ್ನೆಬ್ಬಿಸಿ, ಅದೇ ಮಾದರಿಯಲ್ಲಿ ಅರಾಜಕತೆ ಯನ್ನು ಬಿತ್ತುವ ಯತ್ನಗಳು ಹಿಂದೆಂದಿಗಿಂತಲೂ ಸುಯೋಜಿತವಾಗಿ ನಡೆಯುತ್ತಿವೆ.

ಮಣಿಪುರದ ಕ್ಷೋಭೆಯು ಇದರ ಟ್ರೇಲರ್ ಅಷ್ಟೇ. ಹಿಂದೂಗಳು ಈ ದೇಶದಲ್ಲಿ ಅಲ್ಪಸಂಖ್ಯಾತರಾಗುತ್ತಿದ್ದಂತೆ ಸಂವಿಧಾನ ಮತ್ತು ಪ್ರಜಾತಂತ್ರಗಳು ಕಣ್ಮರೆಯಾಗಿ, ಭಾರತವು ಮತ್ತೊಮ್ಮೆ ವಿಭಜಿಸಲ್ಪಡುವ ಅಪಾಯವಿದೆ. ಆದರೆ ನಮ್ಮ ‘ಸ್ಯೂಡೋ-ಸೆಕ್ಯುಲರ್’ ‘ನಿಯೋ-ಗಾಂಧಿಯನ್’ ನಾಯಕ ರಿಗೆ ಇದರ ಅರಿವಾಗುವುದೆಂದು? ಇಂದು ಹಿಂದೂ ಗಳು ಒಗ್ಗಟ್ಟಾಗಿ ಹಿಂದೂ ರಾಷ್ಟ್ರಕ್ಕೆ ಒಕ್ಕೊರಲಿನಿಂದ ಆಗ್ರಹಿಸದಿದ್ದರೆ ಮುಂದೊಂದು ದಿನ ನಾವು ಪರಿತಪಿಸ ಬೇಕಾ ದೀತು. ನಮ್ಮೆಲ್ಲಾ ಆಂತರಿಕ ಭೇದಭಾವಗಳನ್ನು ಬದಿಗೊತ್ತಿ ಸರಕಾರದ ಬೆನ್ನಿಗೆ ನಿಲ್ಲದೆ ಹೋದರೆ ನಾಳೆ ನಮ್ಮನ್ನು ರಕ್ಷಿಸುವವರಾರು? ಅಧಿಕಾರಿಗಳೋ, ಪೊಲೀಸರೋ, ನ್ಯಾಯಾಧೀಶರೋ, ಸೈನಿಕರೋ, ಇನ್ಯಾರೋ ನಮ್ಮನ್ನು ಕಾಪಾಡುತ್ತಾರೆ ಎಂಬ ಭ್ರಮೆಯನ್ನು ಬಿಟ್ಟುಬಿಡಬೇಕಾಗಿದೆ.

ಏಕೆಂದರೆ ನಮ್ಮೀ ಪವಿತ್ರ ಮಾತೃಭೂಮಿಯ ಮತ್ತು ಧರ್ಮದ ರಕ್ಷಣೆಗಾಗಿ ನಾವೆಲ್ಲರೂ ಬೀದಿಗಿಳಿಯಬೇಕಾದ ಪರಿಸ್ಥಿತಿ ಸದ್ಯದಲ್ಲೇ ಎದುರಾಗಬಹುದು. ಅದಕ್ಕಾಗಿ ನಾವೆಲ್ಲರೂ ಸಂಘಟಿತರಾಗಿ ಕಾರ್ಯೋನ್ಮುಖರಾಗಬೇಕು. ನಮ್ಮ ಪೂರ್ವಜರಿಗೆ ಇವೆಲ್ಲದರ ಸ್ಪಷ್ಟ ಪರಿಕಲ್ಪನೆಯಿತ್ತು. ಅಂದು ಮಂಗಲ್ ಪಾಂಡೆಯ ಕೈಯಲ್ಲೇನಾದರೂ ಬಂದೂಕು ಇರದಿದ್ದಿದ್ದರೆ, ರಾಯಲ್ ನೇವಿಯ ಯೋಧರು ಸಶಸ್ತ್ರಕ್ರಾಂತಿ ಮಾಡಿರದೇ ಇದ್ದರೆ, ನಾವಿನ್ನೂ ಆಂಗ್ಲರ ಗುಲಾಮರಾಗೇ ಇರುತ್ತಿದ್ದೆವು.

ನಮ್ಮ ರಕ್ಷಣೆ ಇನ್ನು ಮುಂದೆ ನಮ್ಮ ಹೊಣೆ. ಆತ್ಮರಕ್ಷಣೆಯಲ್ಲಿ ನಾವು ಆತ್ಮನಿರ್ಭರರಾಗಲು ಇದುವೇ ಸಕಾಲ. ನಾವು ನೀವೆಲ್ಲರೂ ಈಗ ಅಗ್ನಿವೀರರಾಗಬೇಕಿದೆ.

(ಲೇಖಕರು ನವಜಾತ ಶಿಶು ಮತ್ತು ಮಕ್ಕಳ ತಜ್ಞರು)