Monday, 23rd December 2024

Dr Karaveeraprabhu Kyalakonda Column: ಅನ್ನದಾತನ ಬೆನ್ನಿಗೆ ಬಿದ್ದ ಬೇನೆಗಳು

ತನ್ನಿಮಿತ್ತ

ಡಾ,ಕರವೀರಪ್ರಭು ಕ್ಯಾಲಕೊಂಡ

ಸಣ್ಣವನಲ್ಲೋ ನೀ ಪುಣ್ಯವಂತನು, ಕಣ್ಣು ತೆರೆದು ನೋಡು ಒಕ್ಕಲಿಗ | ಮಣ್ಣಿನ ಸೇವಕ ಬಣ್ಣಿಸಲಾರೆನು, ಚೆನ್ನಾಗಿ ಕಾಪಾಡು ಒಕ್ಕಲಿಗ’ ಎಂಬ ಹೆಗ್ಗಳಿಕೆಗೆ ಪಾತ್ರರಾದ ರೈತರು ಈ ದೇಶದ ಬೆನ್ನೆಲುಬು. ‘ಅನ್ನದಾತಾ ಸುಖೀಭವ’ ಎನ್ನುವ ಸಂಸ್ಕೃತಿ ನಮ್ಮದು. ಬಿತ್ತಿದ ಬೀಜ ಮೊಳಕೆಯೊಡೆದು, ಚಿಗುರಿ, ಹಸಿರಾಗಿ ಹುಲುಸಾಗಿ ಬೆಳೆದು -ಲವು ಅರಳುವವರೆಗೂ ರೈತ ಅದೆಷ್ಟು ಶ್ರಮ ವಹಿಸಬೇಕು!

ರೈತನಷ್ಟು ಸಹನಾಮಯಿ, ಕರುಣಾಮಯಿ ಮತ್ಯಾರು ಇರಲಾದೀತು? ರೈತರಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ, ಏಕೆಂದರೆ ನಮ್ಮ ನಿತ್ಯದ ಊಟದ ಹಿಂದೆ ರೈತರ ಶ್ರಮವಿದೆ. ಬೆಳೆಯ ಮೂಲಕ ಜಗತ್ತನ್ನೇ ಬೆಳಗುವ ರೈತ, ತಾನು ಮಾತ್ರ ತೆರೆಮರೆಯಲ್ಲೇ ಉಳಿದುಬಿಡುತ್ತಾನೆ. ಆತನ ದುಃಖ-ದುಮ್ಮಾನ, ಸಂಕಟ-ಸಂಕಷ್ಟಗಳಿಗೆ ಕೊನೆಯೇ
ಇಲ್ಲ. ಆದರೂ ಆತ ನೇಗಿಲು ಹೊತ್ತು ಕಾಯಕ ಮಾಡುತ್ತಲೇ ಇರುತ್ತಾನೆ. ಇಂಥ ನಿಸ್ವಾರ್ಥಿಯನ್ನು ನೆನೆಯಲೆಂದೇ, ರೈತ ನಾಯಕ ಹಾಗೂ ಮಾಜಿ ಪ್ರಧಾನಿ ದಿ. ಚೌಧರಿ ಚರಣ್ ಸಿಂಗ್ ಅವರ ಹುಟ್ಟಿದ ದಿನವಾದ ಡಿಸೆಂಬರ್ ೨೩ನ್ನು
‘ರಾಷ್ಟ್ರೀಯ ರೈತರ ದಿನ’ವಾಗಿ ಆಚರಿಸಲಾಗುತ್ತಿದೆ.

ಕೃಷಿಯೊಂದಿಗೆ ಪಶುಪಾಲನೆಯಲ್ಲೂ ತೊಡಗುವ ರೈತ ತನ್ನ ದನ-ಕರುಗಳನ್ನು, ಎಮ್ಮೆ-ಗೋವುಗಳನ್ನು ಕುಟುಂಬದ ಸದಸ್ಯರಂತೆಯೇ ಪ್ರೀತಿಸುತ್ತಾನೆ, ಸಾಕಿ ಸಲಹುತ್ತಾನೆ. ‘ಕೃಷಿ ಹಸನಾಗಿದ್ದಲ್ಲಿ ದುರ್ಭಿಕ್ಷ ಇರಲಾರದು’ ಎಂಬುದೊಂದು ಮಾತಿದೆ. ಬ್ಯಾಂಕ್ ಖಾತೆಯಲ್ಲಿ ಅದೆಷ್ಟು ಹಣವಿದ್ದರೇನು ಬಂತು, ಹೊಟ್ಟೆಗೆ ಅನ್ನವನ್ನಲ್ಲದೆ ನೋಟು-ನಾಣ್ಯಗಳನ್ನು ತಿನ್ನಲಾದೀತೇ?! ಆದರೆ ನಮ್ಮಲ್ಲಿ ಅನೇಕರಿಗೆ ಕೃಷಿಕರೆಂದರೆ ಅದೇನೋ ತಾತ್ಸಾರ. ರೈತರಿಲ್ಲದೆ ಜಗವು ಉಳಿಯಬಹುದೇ ಎಂಬುದನ್ನು ಇಂಥವರು ಒಮ್ಮೆ ಯೋಚಿಸಿ ನೋಡಬೇಕು. ರೈತರ ಕಷ್ಟ-ಸುಖಗಳ ಬಗ್ಗೆ ಸಾಧ್ಯವಾದಷ್ಟು ಅರಿತಿರಬೇಕು, ಅವರ ಶ್ರಮದ ಬಗ್ಗೆ ಗೌರವವಿರಬೇಕು.

ವಿಶ್ವದ ಶೇ.೫೦ರಷ್ಟು ಮಂದಿ ಕೃಷಿಯನ್ನು ಅವಲಂಬಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೃಷಿರಂಗದಲ್ಲಿ ಅನೇಕ
ಪ್ರಗತಿಗಳಾಗಿದ್ದು ಬಂಜರು ಭೂಮಿಯೂ ಹಚ್ಚ ಹಸಿರುಟ್ಟು ನಲಿಯುತ್ತಿದೆ. ಆದರೆ ಈ ಬದಲಾವಣೆಯಿಂದಾಗಿ ರೈತನ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ರೋಗ ಹರಡುವ
ಕ್ರಿಮಿ-ಕೀಟಗಳ ಬಗ್ಗೆ ಯೋಚಿಸಿಲ್ಲ. ‘ಮಳೆ ಬಂದರೆ ಕೇಡಲ್ಲ’ ಎಂದು ನಂಬಿರುವ ರೈತರು, ನಾಡಿನ ಜನರಿಗೆ ಅನ್ನ ನೀಡಲೆಂದು ಮಳೆ-ಗಾಳಿ, ಬಿಸಿಲು- ಚಳಿಯನ್ನು ಲೆಕ್ಕಿಸದೆ ಹಗಲಿರುಳೂ ಹೊಲಗದ್ದೆಗಳಲ್ಲಿ ಬೆವರು ಸುರಿಸಿ ದುಡಿಯುತ್ತಾರೆ. ನಿದ್ರೆಗೆಟ್ಟು ನೀರು ಹಾಯಿಸುತ್ತಾರೆ.

ಹೀಗೆ ದುಡಿಯುವಾಗ ಕೆರೆಕಟ್ಟೆಗಳು, ಒಡ್ಡುಗಳು, ಹಳ್ಳ-ಹೊಳೆಗಳು, ಕಾಲುವೆಗಳಲ್ಲಿ ಸಿಗುವ ನೀರನ್ನೇ ಅವರು ಕುಡಿಯುವುದು ಸರ್ವೇಸಾಮಾನ್ಯ. ಇದರಿಂದಾಗಿ ತಮಗರಿವಿಲ್ಲದಂತೆಯೇ ಜಲಜನ್ಯ ಜಡ್ಡುಗಳಿಗೆ ಒಡ್ಡಿಕೊಳ್ಳು ತ್ತಾರೆ. ಬ್ಯಾಕ್ಟೀರಿಯಾದಿಂದ ಬರುವ ಕಾಲರಾ, ವಿಷಮಜ್ವರ, ಉಪವಿಷಮಜ್ವರ, ರಕ್ತಬೇಧಿ, ವೈರಸ್‌ನಿಂದ ಬರುವ ವೈರಲ್ ಹೆಪಟೈಟಿಸ್, ಪೋಲಿಯೋ ಮೈಲೈಟಿಸ್‌ಗಳು ಮಾತ್ರವಲ್ಲದೆ, ದುಂಡು ಜಂತು, ದಾರದ ಜಂತು ಮತ್ತು ಕೊಕ್ಕೆ ಜಂತು ಹುಳುಗಳಿಂದ ಬರುವ ಕಾಯಿಲೆಗಳು, ಸೊಳ್ಳೆಗಳಿಂದ ಉಂಟಾಗುವ ಮಲೇರಿಯಾ, ಆನೆಕಾಲು ರೋಗ, ಮಿದುಳು ಜ್ವರ, ಏಡಿಸ್ ಈಜಿಪ್ಟಿ ಸೊಳ್ಳೆಯಿಂದ ಉಂಟಾಗುವ ಡೆಂಘೆ, ಚಿಕೂನ್ ಗುನ್ಯಾ ಮುಂತಾದ ಕಾಯಿಲೆಗಳಿಗೆ ರೈತರು ತುತ್ತಾಗುವುದುಂಟು.

ಇನ್ನು ಕುರಿ, ಕೋಳಿ, ನಾಯಿ, ದನ-ಕರುಗಳ ಒಡನಾಟದಿಂದಾಗಿ ರೇಬಿಸ್, ಆಂಥ್ರಾಕ್ಸ್, ಮಾಲ್ಟ್ ಜ್ವರ, ಧನುರ್ವಾ
ಯು, ಕ್ಷಯ, ಹೈಡಾಟಿಡ್ ಸಿಸ್ಟ್, ಅಲರ್ಜಿಕ್ ಬ್ರಾಂಕೈಟಿಸ್ ಮುಂತಾದ ರೋಗಗಳಿಗೆ ರೈತರು ಈಡಾಗುವ ಸಾಧ್ಯತೆ
ಹೆಚ್ಚು. ಕೃಷಿಕಾರ್ಯದಲ್ಲಿ ತೊಡಗಿರುವಾಗ ಹಾವು- ಚೇಳುಗಳ ಕಾಟ, ಜೇನುಹುಳು, ಕಡಿಜೀರಿಗೆ ಹುಳುಗಳ
ಕಡಿತಕ್ಕೆ ರೈತರು ಒಳಗಾಗಬಹುದು. ಇನ್ನು, ಬೆಳೆಗಳಿಗೆ ಬಳಸುವ ರಸಗೊಬ್ಬರ, ಅವಕ್ಕೆ ರೋಗವಾದಾಗ ಬಳಸುವ
ಕೀಟನಾಶಕಗಳು ರೈತರ ಮೇಲೆ ವಿಷಕಾರಿ ಪ್ರಭಾವವನ್ನು ಬೀರುವುದಿದೆ. ಇವನ್ನು ಅಲಕ್ಷಿಸಿದರೆ ಅಪಾಯ ತಪ್ಪಿದ್ದಲ್ಲ.

ದವಸ-ಧಾನ್ಯಗಳನ್ನು ರಾಶಿ ಮಾಡುವಾಗ ಅವುಗಳಿಂದ ಹೊಮ್ಮುವ ಹೊಟ್ಟು, ತೆಂಗಿನ ನಾರು, ಹತ್ತಿ ಮತ್ತು ತಂಬಾಕಿನ ಧೂಳು ಮುಂತಾದವು ಉಸಿರಾಟದ ಸಮಸ್ಯೆಗಳಿಗೆ ಮೂಲವಾಗುತ್ತವೆ. ಪರಿಣಾಮವಾಗಿ ರೈತರು ಅಲರ್ಜಿಕ್ ಬ್ರಾಂಕೈಟಿಸ್, ಕೆಮ್ಮು-ದಮ್ಮುಗಳ ಕಾಟಕ್ಕೆ ತುತ್ತಾಗುತ್ತಾರೆ. ಪರಿಸರದಲ್ಲಾಗುವ ವ್ಯತ್ಯಯವೂ ರೈತರನ್ನು ಕಾಡುವುದುಂಟು. ಸುಡುಬಿಸಿಲಿನಲ್ಲಿ/ಬಿಸಿ ವಾತಾವರಣದಲ್ಲಿ ಕಾರ್ಯನಿರ್ವಹಿಸಬೇಕಾಗಿ ಬರುವ ರೈತರು ಅದರಿಂದ ಒದಗುವ ಬವಣೆಗಳಿಗೆ ಒಡ್ಡಿಕೊಳ್ಳಲೇಬೇಕಾಗುತ್ತದೆ.

ಮಳೆಗಾಲದಲ್ಲಿ ಸಿಡಿಲು ಬಡಿದೂ ಕೆಲವರು ಸಾಯುವುದಿದೆ (ಇನ್ನು, ಅತಿವೃಷ್ಟಿ ಅಥವಾ ಅನಾವೃಷ್ಟಿಯ ಪರಿಣಾಮವಾಗಿ ಬೆಳೆನಷ್ಟವಾಗಿ, ಸಾಲದ ಬಾಧೆ ತಾಳಲಾಗದೆ ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆ ಸಾಕಷ್ಟಿದೆ). ಇದೇ ರೀತಿಯಲ್ಲಿ, ಶೀತಗಾಳಿಯಲ್ಲಿ ಕೆಲಸ ಮಾಡುವುದರಿಂದಾಗಿ ನೆಗಡಿ- ಕೆಮ್ಮು-ಶೀತದ ಸಮಸ್ಯೆಗಳಿಂದ ರೈತರು ತೊಳಲಾಡಬೇಕಾಗಬಹುದು. ಇವೆಲ್ಲವೂ ದೈಹಿಕ ಮತ್ತು ಮಾನಸಿಕ ಒತ್ತಡಗಳಿಗೆ ಕಾರಣವಾಗಬಹುದು.

ಕೀಟನಾಶಕದ ವಿಷಕಾರಿ ರಾಸಾಯನಿಕಗಳು ಭೂಮಿ, ನೀರು ಮತ್ತು ಧಾನ್ಯಗಳಲ್ಲಿ ಬೆರೆತು ಅವನ್ನೂ ಕಲುಷಿತ ಗೊಳಿಸುತ್ತವೆ ಮತ್ತು ಕೃಷಿಕಾರ್ಯಕ್ಕೆ ಸಹಕಾರಿಯಾಗಿರುವ ಕೆಲ ಕೀಟಗಳನ್ನೂ ಸಾಯಿಸುತ್ತವೆ. ಕೆಲವೊಂದು ರಾಸಾಯನಿಕಗಳು ದೇಹದ ಮೇಲೆ ನೇರವಾಗಿ ಪರಿಣಾಮ ಬೀರಿದರೆ, ಇನ್ನು ಕೆಲವು ದುಷ್ಪರಿಣಾಮಗಳನ್ನು ಉಲ್ಬಣಗೊಳಿಸುತ್ತವೆ ಮತ್ತು ಚರ್ಮದ ಕಾಯಿಲೆಗಳಿಗೆ ಮೂಲವಾಗುತ್ತವೆ.

“ಗಟ್ಟಿದೇಹ ದೊಡ್ಡ ಮನಸು ದೇವನಿಂದ ಪಡೆದನು, ಯೋಗಿಯಾಗಿ ತ್ಯಾಗಿಯಾಗಿ ಅನ್ನ ನೀಡುತಿರುವನು”
ಎಂಬ ಕವಿವಾಣಿಯಿಂದ ರೈತನನ್ನು ಬಣ್ಣಿಸಿ, ಅವನ ಶವದ ಮೇಲೂ ರಾಜಕೀಯ ಮಾಡುವುದನ್ನು ಕೆಲ ಜನಪ್ರತಿನಿ
ಧಿಗಳು ಮೈಗೂಡಿಸಿಕೊಂಡಿದ್ದಾರೆ. ವಿಪರ್ಯಾಸವೆಂದರೆ, ‘ರೈತನೇ ದೇಶದ ಬೆನ್ನೆಲುಬು’ ಎಂದು ವೇದಿಕೆಗಳಲ್ಲಿ
ತೌಡುಕುಟ್ಟುವ ಇಂಥವರು, ರೈತಸ್ನೇಹಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ಹಿಂದೇಟು ಹಾಕುತ್ತಾರೆ. ರೈತರ ಸಂಕಟ- ಸಂಕಷ್ಟಗಳ ನಿವಾರಣೆಗೆ ಮುಂದಾಗದೆ, ಅವರ ಬೆನ್ನು ಮೂಳೆಯ ಮೇಲೆಯೇ ನಡೆದಾಡಿ ನೆಲಕ್ಕೆ ಕುಸಿಯುವಂತೆ ಮಾಡುತ್ತಾರೆ. ಈ ಪರಿಪಾಠ ಇನ್ನಾದರೂ ನಿಲ್ಲಬೇಕು. ರೈತರ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಗತಿ ಯನ್ನು ಸುಧಾರಿಸುವ ನಿಟ್ಟಿನಲ್ಲಿ ‘ರಾಷ್ಟ್ರೀಯ ರೈತರ ದಿನ’ವಾದ ಇಂದು ಅವರು ಶಪಥ ಮಾಡಬೇಕು. ಆಗ ಮಾತ್ರವೇ ‘ಜೈ ಕಿಸಾನ್’ ಎಂಬ ಘೋಷಣೆ ಸಾರ್ಥಕವಾದೀತು, ರೈತರಲ್ಲಿ ನೆಮ್ಮದಿ ಮೂಡೀತು.

(ಲೇಖಕರು ವಿಶ್ರಾಂತ ಜಿಲ್ಲಾ ಶಸ್ತ್ರ ಚಿಕಿತ್ಸಕರು)

ಇದನ್ನೂ ಓದಿ: Dr KaraVeeraprabhu Kyalakonda Column: ಸಾರ್ವಕಾಲಿನ ಸತ್ಯ ಸಾರಿದ ಕನಕದಾಸರು