Dr Murali Mohan Chuntaru Column: ನಿಷ್ಕಾಮ ಸೇವೆಗೆ ಮತ್ತೊಂದು ಹೆಸರು ಗೃಹರಕ್ಷಕ ದಳ
Dr Murali Mohan Chuntaru Column: ನಿಷ್ಕಾಮ ಸೇವೆಗೆ ಮತ್ತೊಂದು ಹೆಸರು ಗೃಹರಕ್ಷಕ ದಳ

ತನ್ನಿಮಿತ್ತ
ಡಾ.ಮುರಲೀ ಮೋಹನ್ ಚೂಂತಾರು
ಕಾನೂನು ಮತ್ತು ಶಿಸ್ತುಪಾಲನೆಯಲ್ಲಿ ಪೊಲೀಸ್ ಇಲಾಖೆಗೆ ಪೂರಕಪಡೆಯಾಗಿ ಕೆಲಸ ಮಾಡುವ ಗೃಹರಕ್ಷಕ ದಳವು, ಪ್ರಾಕೃತಿಕ ವಿಪತ್ತು ಮತ್ತು ಮಾನವ ನಿರ್ಮಿತ ವಿಷಮ ಪರಿಸ್ಥಿತಿಗಳ ವೇಳೆ ಜೀವ ಹಾಗೂ ಆಸ್ತಿ ಸಂರಕ್ಷಣೆ, ವಿಪತ್ತು ನಿರ್ವಹಣೆ, ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಲ್ಲಿ ಸಮುದಾಯಕ್ಕೆ ಅಗತ್ಯ ನೆರವು ನೀಡುತ್ತದೆ.
ಗೃಹರಕ್ಷಕ ದಳ ಎಂಬುದು ಸರಕಾರದ ಅಧೀನದಲ್ಲಿರುವ, ಸಮವಸಧಾರಿ ಶಿಸ್ತುಬದ್ಧ ಸ್ವಯಂಸೇವಕರನ್ನು ಒಳಗೊಂಡ ಒಂದು ಸಂಸ್ಥೆಯಾಗಿದ್ದು, ಸಮಾಜಕ್ಕೆ ತುರ್ತು ಅಗತ್ಯ ಒದಗಿದಾಗ ಇದು ಸೇವೆ ಸಲ್ಲಿಸುತ್ತದೆ. ಸಮಾಜದ ಎಲ್ಲಾ ವರ್ಗದ ಜನರಿಗೆ ರಕ್ಷಣೆ ನೀಡುವ ಧ್ಯೇಯವಿರುವ ಈ ಸಂಸ್ಥೆಗೆ ‘ನಿಷ್ಕಾಮ ಸೇವೆಯೇ’ ಪರಮಗುರಿ, ಅದುವೇ ಸಂಸ್ಥೆಯ ಮೂಲಮಂತ್ರ. ಎರಡನೇ ಮಹಾಯುದ್ಧದ ವೇಳೆ ಹಿಟ್ಲರನ ‘ನಾಜಿ’ ಸೈನ್ಯಪಡೆಯನ್ನು ಹಿಮ್ಮೆಟ್ಟಿಸಲು, ಪೊಲೀಸ್ ಮತ್ತು ಮಿಲಿಟರಿಗೆ ಪರ್ಯಾಯವಾಗಿ, ದೇಶವನ್ನು ರಕ್ಷಿಸಲು ದೇಶದ ಜನರೇ ಹುಟ್ಟುಹಾಕಿದ ನಾಗರಿಕ ಪಡೆಯನ್ನು ಮೊದಲು ‘ಲೋಕಲ್ ಡಿಫೆನ್ಸ್ ವಾಲಂಟೀರ‍್ಸ್’ (ಎಲ್‌ಡಿವಿ) ಅಂದರೆ ‘ಸ್ಥಳೀಯ ರಕ್ಷಣಾ ಸ್ವಯಂ ಸೇವಕರು’ ಎಂದು ಕರೆಯಲಾಗುತ್ತಿತ್ತು.
1946ರಲ್ಲಿ ಭಾರತದ ಬಾಂಬೆ ರಾಜ್ಯದಲ್ಲಿ ಗೃಹರಕ್ಷಕ ದಳದ ಮೂಲ ಅಸ್ತಿತ್ವಕ್ಕೆ ಬಂತು. ನೌಕಾದಳ, ವಾಯುಪಡೆ ಮತ್ತು ಭೂಸೇನೆಯ ಜತೆಗೆ ಜನರಿಗೆ ಮತ್ತು ದೇಶಕ್ಕೆ ತುರ್ತು ಸಂದರ್ಭಗಳಲ್ಲಿ ರಕ್ಷಣೆ ನೀಡಲೆಂದು ‘ಪೌರರಕ್ಷಣೆ ಮತ್ತು ಗೃಹರಕ್ಷಕ ದಳ’ ಎಂಬುದಾಗಿ ಇದು ಡಿಸೆಂಬರ್ 6ರಂದು ಅಸ್ತಿತ್ವಕ್ಕೆ ಬಂತು. ಮೊರಾರ್ಜಿ ದೇಸಾಯಿಯವರು ಪ್ರಧಾನಿಯಾಗಿದ್ದಾಗ ಗೃಹರಕ್ಷಕ ದಳದ ಕಾಯ್ದೆ-ಕಾನೂನುಗಳನ್ನು ಗೃಹಸಚಿವಾಲಯದ ಅಡಿಯಲ್ಲಿ ತರಲಾ ಯಿತು. ಸಾಮಾನ್ಯ ದಿರಿಸಿನಲ್ಲಿದ್ದುಕೊಂಡು ಪೊಲೀಸರಿಗೆ ಸಹಾಯಮಾಡುವ ಇಂಥ ಸ್ವಯಂಸೇವಕರ ಪಡೆಯನ್ನು, ಮತೀಯ ಗಲಭೆ, ಹಿಂಸಾಚಾರಗಳ ವೇಳೆ ಜನರಿಗೆ ರಕ್ಷಣೆಯೊದಗಿಸಲು ನಿಯೋಜಿಸಲಾಗಿತ್ತು.
ನಂತರ ಈ ಪಡೆಯನ್ನು ಬೇರೆ ರಾಜ್ಯಗಳಲ್ಲೂ ಆರಂಭಿಸಲಾಯಿತು. 196ರ ಭಾರತ-ಚೀನಾ ಯುದ್ಧದ ವೇಳೆ ಈ ಪಡೆಯನ್ನು ರಕ್ಷಣಾ ಕಾರ್ಯಕ್ಕೆ ಬಳಸಲೆಂದು, ಕೇಂದ್ರ ಸರಕಾರವು ಎಲ್ಲಾ ರಾಜ್ಯ ಸರಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ವಯಂಸೇವಕರ ತಂಡಗಳಿಗೆ ‘ಗೃಹರಕ್ಷಕ ದಳ’ ಎಂಬ ಮಾನ್ಯತೆಯೊಂದಿಗೆ ಖಾಕಿ ಸಮವಸ್ತ್ರವನ್ನು ನೀಡಿತು.
ಪ್ರಾಥಮಿಕ ಧ್ಯೇಯಗಳು: ಕಾನೂನು ಮತ್ತು ಶಿಸ್ತುಪಾಲನೆಯಲ್ಲಿ ಪೊಲೀಸ್ ಇಲಾಖೆಗೆ ಪೂರಕಪಡೆಯಾಗಿ ಕೆಲಸಮಾಡುವ ಗೃಹರಕ್ಷಕ ದಳವು, ಪ್ರಾಕೃತಿಕ ವಿಪತ್ತು ಮತ್ತು ಮಾನವ ನಿರ್ಮಿತ ವಿಷಮ ಪರಿಸ್ಥಿತಿಗಳ ವೇಳೆ ಜೀವ ಹಾಗೂ ಆಸ್ತಿ ಸಂರಕ್ಷಣೆ, ವಿಪತ್ತು ನಿರ್ವಹಣೆ, ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಲ್ಲಿ ಸಮುದಾಯಕ್ಕೆ ಅಗತ್ಯ ನೆರವು ನೀಡುತ್ತದೆ. ಅಗ್ನಿ ಅವಘಡ, ವೈಮಾನಿಕ ದಾಳಿ, ಸುನಾಮಿ, ಭೂಕಂಪಗಳಾದಾಗ, ಸಾಂಕ್ರಾಮಿಕ ರೋಗಗಳುಉಲ್ಬಣಗೊಂಡಾಗ ಸಾಮಾಜಿಕ ಸುವ್ಯವಸ್ಥೆ-ಶಾಂತಿ- ನೆಮ್ಮದಿಯ ಮರುಸ್ಥಾಪನೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ.
ಯಾರು ಸೇರಬಹುದು?
ಗೃಹರಕ್ಷಕ ದಳಕ್ಕೆ ಸೇರಲು ಬಯಸುವವರಿಗೆ ಮುಖ್ಯವಾಗಿ ಸಮಾಜಸೇವೆಯ ತುಡಿತವಿರಬೇಕು. ಸ್ವಯಂಸೇವಾಮನೋಭಾವವುಳ್ಳ ಸಮಾಜದ ಯಾವುದೇ ಸ್ತರದ ವ್ಯಕ್ತಿಗಳು ಈ ದಳವನ್ನು ಸೇರಿಕೊಳ್ಳಬಹುದು. ಸದೃಢ ಆರೋಗ್ಯವನ್ನು ಹೊಂದಿದ್ದು, ಯಾವುದೇ ಸ್ವಹಿತಾಸಕ್ತಿಯಿಲ್ಲದೆ ಸಮಾಜದ ಉನ್ನತಿಗೆ ‘ನಿಷ್ಕಾಮ ಸೇವೆ’ ಸಲ್ಲಿಸುವ ಮನೋಧರ್ಮ ಅವರಲ್ಲಿರಬೇಕು. ಯಾವುದೇ ಭಾಷಾ ಮಾಧ್ಯಮದಲ್ಲಿ ಕನಿಷ್ಠ ಪಕ್ಷ 10ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು, ವಯೋಮಾನವು 19 ವರ್ಷ ಮೇಲ್ಪಟ್ಟಿರಬೇಕು ಮತ್ತು 50 ವರ್ಷದ ಒಳಗಿರಬೇಕು. ಸಾಮಾನ್ಯವಾಗಿ ಒಮ್ಮೆ ದಾಖಲಾತಿ ಯಾದ ಬಳಿಕ 3 ವರ್ಷಗಳಿಗೊಮ್ಮೆ ಮರುದಾಖಲಾತಿ ಮಾಡಿಕೊಳ್ಳಬೇಕು. ಸರಕಾರವೇ ನಿಗದಿಪಡಿಸಿದ ಅರ್ಜಿ ನಮೂನೆಗಳು ಗೃಹರಕ್ಷಕ ದಳದ ಜಿಲ್ಲಾ ಕಚೇರಿಗಳಲ್ಲಿ ಉಚಿತವಾಗಿ ದೊರಕುತ್ತವೆ.
ಅರ್ಜಿ ಸಲ್ಲಿಸಿದ ವ್ಯಕ್ತಿಯ ಮೇಲೆ ಯಾವುದೇ ಪೊಲೀಸ್ ದೂರು ಮತ್ತು ಕ್ರಿಮಿನಲ್ ದಾಖಲೆ ಇಲ್ಲವೆಂಬುದುಸಾಬೀತಾದ ಬಳಿಕ ಆತನ ಆಯ್ಕೆಗೆ ಸಂದರ್ಶನ ನಡೆಯುತ್ತದೆ. ಆಯ್ಕೆಯಾದವರಿಗೆ 10 ದಿನಾವಧಿಯ ಮೂಲ ತರಬೇತ ಇರುತ್ತದೆ. ಈ ಶಿಬಿರದಲ್ಲಿ, ನಿಯೋಜಿತ ಕರ್ತವ್ಯಗಳನ್ನು ಶಿಸ್ತುಬದ್ಧವಾಗಿ, ಪರಿಣಾಮಕಾರಿಯಾಗಿ ನಿರ್ವಹಿಸಿದವರಿಗೆ ಪ್ರಥಮ ಚಿಕಿತ್ಸೆ, ಪ್ರವಾಹದ ವೇಳೆಯಲ್ಲಿನ ರಕ್ಷಣೆ, ಅಗ್ನಿಶಮನ, ಸಂಚಾರ ನಿಯಂತ್ರಣ, ಶಸಗಳ ಬಳಕೆ ವಿಷಯದಲ್ಲಿ ತರಬೇತಿ ನೀಡಿ ಸಜ್ಜುಗೊಳಿಸಲಾಗುತ್ತದೆ.
ವಿದ್ಯಾರ್ಥಿಗಳು, ಕೃಷಿಕರು, ವೈದ್ಯರು, ಅಭಿಯಂತರರು, ವಕೀಲರು, ಶಿಕ್ಷಕರು, ಕೂಲಿಕಾರ್ಮಿಕರು ಹೀಗೆ ಸಮಾಜದ ಎಲ್ಲ ವರ್ಗಗಳ ಜನರನ್ನು ಗೃಹರಕ್ಷಕರಾಗಿ ಸೇರಿಸಿಕೊಳ್ಳಲಾಗುತ್ತದೆ. ಒಟ್ಟಿನಲ್ಲಿ, ತಮ್ಮ ದಿನನಿತ್ಯದ ಕೆಲಸ ವೇಳೆಯಿಂದಾಚೆಗೆ ವಿಶಿಷ್ಟ ತರಬೇತಿ ಪಡೆದು, ಅವಶ್ಯಕ ಮತ್ತು ತುರ್ತು ಸಂದರ್ಭಗಳಲ್ಲಿ ನಿಸ್ವಾರ್ಥ ಸ್ವಯಂ ಸೇವೆಯನ್ನು ದೇಶಕ್ಕೆ ಮುಡಿಪಾಗಿಡುವ ನಮ್ಮ-ನಿಮ್ಮಂಥ ಸಾಮಾನ್ಯ ಸ್ತ್ರೀ-ಪುರುಷರೇ ಗೃಹರಕ್ಷಕರುಎಂದರೆ ತಪ್ಪಾಗಲಾರದು.
ಇದೇ ರೀತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರು ಈ ದಳದಲ್ಲಿ ಸೇವೆ ಸಲ್ಲಿಸಲು ಮುಕ್ತ ಅವಕಾಶ ವಿರುತ್ತದೆ.
ಗೃಹರಕ್ಷಕರ ಕರ್ತವ್ಯಗಳೇನು?
ದೇಶದ ಆಂತರಿಕ ಭದ್ರತೆಯನ್ನು ಕಾಪಾಡುವಲ್ಲಿ ಪೊಲೀಸ್ ವ್ಯವಸ್ಥೆಗೆ ಪೂರಕವಾಗಿ ಕಾರ್ಯನಿರ್ವಹಿಸುವುದು. ನೆರೆಹಾವಳಿ, ಭೂಕಂಪ, ಚಂಡಮಾರುತ, ಸುನಾಮಿ, ಭೂಕುಸಿತದಂಥ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯಚರಣೆಯಲ್ಲಿ, ಗಾಯಾಳುಗಳ ಮತ್ತು ಮೃತದೇಹಗಳ ಶೋಧನೆ, ಸ್ಥಳಾಂತರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು.
ಯುದ್ಧ ಅಥವಾ ತುರ್ತುಸ್ಥಿತಿ ಎದುರಾದಾಗ, ವೈಮಾನಿಕ ದಾಳಿಗಳಾದಾಗ ಸಮುದಾಯವನ್ನು ಎಚ್ಚರಿಸುವುದುಮತ್ತು ಸಂರಕ್ಷಿಸುವುದು. ಕಟ್ಟಡ ಕುಸಿತ, ಅನಿಲ ಸೋರಿಕೆಯ/ಸೋಟದ ದುರಂತ ಅಥವಾ ಇನ್ನಾವುದೇ ವಿಷಮ ಪರಿಸ್ಥಿತಿಯಂಥ ಮಾನವ ನಿರ್ಮಿತ ವಿಕೋಪಗಳ ವೇಳೆ ಜನರ ಪ್ರಾಣ,
ಆಸ್ತಿ-ಪಾಸ್ತಿಯನ್ನು ರಕ್ಷಿಸುವುದು. ಜಾತ್ರೆ, ಉತ್ಸವ, ರಾಷ್ಟ್ರೀಯ ಹಬ್ಬಗಳ ಆಚರಣೆ, ಮುಷ್ಕರ, ಪ್ರತಿಭಟನೆ, ಸಾರ್ವಜನಿಕ ಸಭೆ-ಸಮಾರಂಭಗಳ ಸಮಯದಲ್ಲಿ, ಚುನಾವಣೆಯ ವೇಳೆಯಲ್ಲಿ ಬಂದೋಬಸ್ತ್ ಕರ್ತವ್ಯಗಳಿಗೆ ನೆರವಾಗುವುದು.
ಸಂಚಾರ ನಿರ್ವಹಣೆ, ಕಾನೂನು-ಸುವ್ಯವಸ್ಥೆ, ಸಾರ್ವಜನಿಕ ಕಟ್ಟಡಗಳ ಪಹರೆ ಕರ್ತವ್ಯಗಳಲ್ಲಿ ಸಹಭಾಗಿಯಾಗುವುದು. ಪೊಲೀಸ್ ಠಾಣೆ, ರಾಜ್ಯ ಗುಪ್ತಚರ ವಿಭಾಗ, ಕಾರಾಗೃಹ, ಸಾರಿಗೆ, ಪ್ರವಾಸೋದ್ಯಮ, ರೇಲ್ವೆ, ವಿಧಿವಿಜ್ಞಾನ ಪ್ರಯೋಗಾಲಯ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಎನ್‌ಸಿಸಿ ಇತ್ಯಾದಿಗಳಲ್ಲಿ ಪಹರೆ ಕರ್ತವ್ಯಮತ್ತು ಸಾಮಾಜಿಕ ಸ್ವತ್ತು ರಕ್ಷಣಾ ಕಾರ್ಯಗಳಲ್ಲಿ ಭಾಗಿಯಾಗುವುದು.
ಗೃಹರಕ್ಷಕ ದಳದ ‘ಗಡಿರಕ್ಷಣಾ ಪಡೆ’ಯು ದೇಶದ ಗಡಿಯನ್ನು ಕಾಯುವಲ್ಲಿ ಗಡಿಭದ್ರತಾ ಪಡೆಗೆ (ಬಿಎಸ್ಎಫ್) ಸಹಾಯ ನೀಡುತ್ತದೆ. ಸಮಾಜಕ್ಕೆ ನಮ್ಮ ಕೈಲಾದ ಏನಾದರೂ ಕೆಲಸವನ್ನು ಮಾಡಬೇಕು ಎನ್ನುವ ತುಡಿತವಿರುವ ವ್ಯಕ್ತಿಗಳಿಗೆ, ಯಾವುದೇ ಫಲಾಪೇಕ್ಷೆಯಿಲ್ಲದೆ ಸಮುದಾಯದ ಸೇವೆ ಮಾಡುವ ಆಶಯವನ್ನು ಹೊಂದಿರುವವರಿಗೆ ಗೃಹರಕ್ಷಕ ದಳವು ಒಂದು ಒಳ್ಳೆಯ ವೇದಿಕೆ ಎಂದರೆ ತಪ್ಪಾಗಲಾರದು. ಗೃಹರಕ್ಷಕರು ಯಾವುದೇ ಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುತ್ತಿದ್ದರೂ, ಈ ದಳಕ್ಕೆ ಹೆಚ್ಚೆಚ್ಚು ಜನರು ಸೇರಲಿ ಎಂಬ ಸದುದ್ದೇಶದಿಂದ ಮತ್ತು ಅವರ ಸೇವೆಯನ್ನು ಗುರುತಿಸುವ ಸಲುವಾಗಿ ಸರಕಾರವು ದಿನವೊಂದಕ್ಕೆ ೬೦೦ ರುಪಾಯಿಯಂತೆ ಗೌರವ ಧನ ನೀಡಿ ಪ್ರೋತ್ಸಾಹಿಸುತ್ತಿದೆ. ಇದಲ್ಲದೆ, ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಿಯೋ ಜಿಸಲಾದ ಪೊಲೀಸ್ ಪೇದೆಗಳಿಗೆ ಮೀಸಲಾದ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರಿಗೆ ಮಾತ್ರ ದಿನವೊಂದಕ್ಕೆ 850 ರು., ಅಗ್ನಿಶಾಮಕ ದಳ, ಸಾರಿಗೆ-ಗೃಹ ಇಲಾಖೆ, ಎನ್‌ಸಿಸಿಗಳಲ್ಲಿ ಕಾರ್ಯನಿರ್ವಹಿಸುವ ಗೃಹರಕ್ಷಕರಿಗೆ ದಿನಕ್ಕೆ 600 ರು. ನೀಡಲಾಗುತ್ತದೆ. 60 ವರ್ಷ ವಯಸ್ಸಾಗು ವವರೆಗೆ ಗೃಹರಕ್ಷಕ ದಳದಲ್ಲಿ ಕರ್ತವ್ಯ ನಿರ್ವಹಿಸಬಹುದು.
ಒಟ್ಟಿನಲ್ಲಿ ದೇಶದ ಆರ್ಥಿಕ, ಸಾಮಾಜಿಕ, ನೈತಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ, ಭದ್ರತೆಗೆ ಗೃಹರಕ್ಷಕ ದಳವುತನ್ನದೇ ಆದ ಕಾಣಿಕೆಯನ್ನು ನೀಡುತ್ತಾ ಬಂದಿದೆ. ಇಂಥ ನಿಷ್ಕಾಮ ಸೇವೆಗೈಯುವ ಎಲ್ಲ ಗೃಹರಕ್ಷಕ ಬಂಧುಗಳಿಗೆಗೃಹರಕ್ಷಕರ ದಿನವಾದ ಇಂದು (ಡಿ.6) ಒಂದು ಧನ್ಯವಾದ ಸಮರ್ಪಿಸೋಣ.
(ಲೇಖಕರು ವೈದ್ಯರು ಮತ್ತು ದ.ಕ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಠರು)
ಇದನ್ನೂ ಓದಿ: #Dr. Murali Mohan Chantaru