Monday, 25th November 2024

Dr N Someshwara Column: ನಿತ್ಯಮಂತ್ರವಾಗಲಿ ʼಸತ್ಯಮೇವ ಜಯತೆʼ !

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ನಮ್ಮ ಜೀವಜಗತ್ತಿನತ್ತ ಒಂದು ವಿಶಾಲ ಪಕ್ಷಿನೋಟವನ್ನು ಹರಿಸೋಣ. ಜೀವಜಗತ್ತಿನಲ್ಲಿ ಸಸ್ಯಗಳು ಸ್ವತಂತ್ರ ಜೀವಿಗಳು. ಅವು ಸೂರ್ಯನ ಉಪಸ್ಥಿತಿಯಲ್ಲಿ ತಮ್ಮ ಆಹಾರವನ್ನು ತಾವು ಸೃಜಿಸಿಕೊಳ್ಳುತ್ತವೆ. ಸಸ್ಯಗಳನ್ನು ಸಸ್ಯಾಹಾರಿ ಪ್ರಾಣಿಗಳು ತಿನ್ನುತ್ತವೆ. ಸಸ್ಯಾಹಾರಿ ಪ್ರಾಣಿಗಳನ್ನು ಮಾಂಸಾಹಾರಿ ಪ್ರಾಣಿಗಳು ತಿನ್ನುತ್ತವೆ.
ಸಸ್ಯಗಳು, ಸಸ್ಯಾಹಾರಿ ಪ್ರಾಣಿಗಳು ಹಾಗೂ ಮಾಂಸಾಹಾರಿ ಪ್ರಾಣಿಗಳನ್ನು ಮನುಷ್ಯನು ತಿನ್ನುತ್ತಾನೆ. ಮನುಷ್ಯನನ್ನು
ತಿನ್ನುವ ಜೀವಿಗಳು ಅವನ ದೇಹದ ಮೇಲೆ ವಾಸಿಸುತ್ತವೆ ಹಾಗೂ ದೇಹದ ಒಳಗೂ ವಾಸಿಸುತ್ತವೆ. ಇಂಥ ಜೀವಿ ಗಳನ್ನು ‘ಪರೋಪಜೀವಿಗಳು’ ಅಥವ ‘ಪ್ಯಾರಾಸೈಟ್ಸ್’ ಎಂದು ಕರೆಯುತ್ತೇವೆ.

ದೇಹದ ಒಳಗೆ ವಾಸಿಸುವ ಜೀವಿಗಳಲ್ಲಿ ಕರುಳು ಹುಳುಗಳು ಮುಖ್ಯವಾದವು. ಇವು ಮನುಷ್ಯನ ರಕ್ತವನ್ನು ಹೀರಿ ಕೊಂಡು ಬದುಕುತ್ತವೆ ಹಾಗೂ ತಮ್ಮ ಸಂತಾನವನ್ನು ವರ್ಧಿಸುತ್ತವೆ. ಇನ್ನು ಮನುಷ್ಯನ ದೇಹದ ಹೊರಗೆ ನೋಡಿದಾಗ, ಅವನ ರಕ್ತವನ್ನು ಕುಡಿದು ಬದುಕುವ ಪ್ರಾಣಿಗಳಲ್ಲಿ ಹೇನು, ತಿಗಣಿ ಮತ್ತು ಸೊಳ್ಳೆಗಳು ಮುಖ್ಯ ವಾದವು. ಆದರೆ ಇವೆಲ್ಲಕ್ಕಿಂತಲೂ ಭೀಕರವಾದದ್ದು ‘ಸಾರ್ಕಾಪ್ಟೆಸ್ ಸ್ಕೇಬೈ’ ಎನ್ನುವ ಜೀವಿ. ಇದು ‘ಅರಾಕ್ನೀಡ’ ಎಂಬ ಗುಂಪಿಗೆ ಸೇರಿದ, ಜೇಡರಹುಳುವನ್ನು ಹೋಲುವಂಥ ಪುಟ್ಟ ಪ್ರಾಣಿ. ಇದನ್ನು ನಾವು ‘ನುಸಿ’ ಎಂದೂ ಕರೆಯುತ್ತೇವೆ. ಇದು ನಮ್ಮ ಚರ್ಮದಡಿಯಲ್ಲಿ ಬೀಡುಬಿಟ್ಟು, ನಮ್ಮ ದೇಹದ ರಕ್ತ ಮಾಂಸಗಳನ್ನು ತಿನ್ನುತ್ತಾ, ತಾನು ಬೆಳೆಯುತ್ತಾ, ತನ್ನ ಸಂಸಾರವನ್ನು ಬೆಳೆಸಿಕೊಳ್ಳುತ್ತ ನಮ್ಮಲ್ಲಿ ‘ಕಜ್ಜಿ’ ಎಂಬ ಕಾಯಿಲೆಯನ್ನುಂಟು ಮಾಡುತ್ತಾ, ನಮ್ಮ ಬಾಳನ್ನು ನರಕವನ್ನಾಗಿ ಮಾಡುತ್ತದೆ.

ಕಜ್ಜಿ ಒಂದು ಅನಾದಿ ಕಾಲದ ಕಾಯಿಲೆ. ಚರ್ಮದ ಕಾಯಿಲೆ. ಅಂಟು ಕಾಯಿಲೆ. ಕಜ್ಜಿಯು ಮನುಷ್ಯರಿಗೆ
ಮಾತ್ರ ವಲ್ಲ ನಾಯಿ, ಬೆಕ್ಕು ಮುಂತಾದ ಪ್ರಾಣಿಗಳಿಗೂ ಬರುವಂಥ ಕಾಯಿಲೆ. ಮಾನವ ವೈದ್ಯಕೀಯ ಇತಿಹಾಸದಲ್ಲಿ ಕಜ್ಜಿ ಎನ್ನುವ ಕಾಯಿಲೆಯ ಮೊದಲ ದಾಖಲೆಯು ಈಜಿಪ್ಷಿಯನ್ ಸಂಸ್ಕೃತಿಯ ಕಾಲದಲ್ಲಿ ದೊರೆಯುತ್ತದೆ. ಕ್ರಿ.ಪೂ.1550ರ ಕಾಲದ ‘ಈಬರ್ಸ್ ಪ್ಯಾಪಿರಸ್’ನಲ್ಲಿ ಕಜ್ಜಿಯ ವರ್ಣನೆಯು ದೊರೆಯುತ್ತದೆ. ಕ್ರಿ.ಪೂ.6ನೆಯ ಶತಮಾನದಲ್ಲಿ ರಚನೆಯಾಗಿರಬಹುದಾದ ಹಳೆಯ ಒಡಂಬಡಿಕೆಯ ‘ದಿ ಬುಕ್ ಆಫ್ ಲೆವಿಟಿಕಸ್’ನಲ್ಲಿ ಕಜ್ಜಿ ಮತ್ತು ಚರ್ಮವ್ಯಾಧಿಗಳ ವಿವರಣೆಯು ದೊರೆಯುತ್ತದೆ.

“ಒಬ್ಬ ವ್ಯಕ್ತಿಯ ತಲೆ ಅಥವಾ ಗಡ್ಡದಲ್ಲಿ ಕಜ್ಜಿ ಇದ್ದರೆ, ಚರ್ಮದಲ್ಲಿ ಆಳವಾಗಿ ಬೇರು ಬಿಟ್ಟಿದ್ದರೆ, ಅವನ ತಲೆ ಕೂದಲು ತೆಳ್ಳಗಾಗಿ ಹಳದಿ ಬಣ್ಣವನ್ನು ತಳೆದಿದ್ದರೆ ಅವನನ್ನು ಪಾದ್ರಿಯ ಬಳಿಗೆ ಕರೆತರಬೇಕು. ಪಾದ್ರಿಯು ಆ ವ್ಯಕ್ತಿಯನ್ನು ಏಳು ದಿನಗಳವರೆಗೆ ಕ್ವಾರಂಟೈನಿಗೆ ಒಳಪಡಿಸುತ್ತಾನೆ. ಆನಂತರವೂ ಅವನನ್ನು ಕಜ್ಜಿ ಕಾಡಿದರೆ, ಮತ್ತೆ 7 ದಿನಗಳ ಕಾಲ ಕ್ವಾರಂಟೈನಿಗೆ ಒಳಪಡಿಸುತ್ತಾನೆ. ತುರಿಕೆಯು ಪೂರ್ಣ ನಿಂತಿದ್ದರೆ ಮಾತ್ರ ಅವನನ್ನು ‘ಪರಿಶುದ್ಧ’ ಎಂದು ಪರಿಗಣಿಸಿ ಸಮಾಜದಲ್ಲಿ ಬೆರೆಯಲು ಅವಕಾಶವನ್ನು ಮಾಡಿಕೊಡುತ್ತಾನೆ” ಎನ್ನುವ ವರ್ಣನೆಯ ಜತೆಯಲ್ಲಿ “ಅವನು ಉಟ್ಟಂಥ ಉಡುಪುಗಳು ಹಸಿರು/ಹಳದಿ/ಕೆಂಪು ಬಣ್ಣದ ಕಲೆಗಳನ್ನು ಒಳಗೊಂಡಿದ್ದರೆ, ಆ ಬಟ್ಟೆಗಳನ್ನು ಏಳು ದಿನಗಳ ಕಾಲ ಪ್ರತ್ಯೇಕವಾಗಿ ಇರಿಸಬೇಕು ಇಲ್ಲವೇ ಸುಡಬೇಕು” ಎನ್ನುವ ಅರ್ಥವತ್ತಾದ ವಿವರಣೆಯಿದೆ.


ಅರಿಸ್ಟಾಟಲ್ ಸಹ ಕಜ್ಜಿಯ ನಿಖರ ಹಾಗೂ ವಿಸ್ತೃತ ವರ್ಣನೆಯನ್ನು ನೀಡಿದ್ದಾನೆ. ಚರ್ಮದ ಕೆಳಗೆ ಅವಿತಿರುವ
‘ಹೇನುಗಳು’ ಈ ಕಾಯಿಲೆಗೆ ಕಾರಣ ಎನ್ನುತ್ತಾನೆ. ಸೆಲ್ಸಸ್ (ಕ್ರಿ.ಪೂ.25-ಕ್ರಿ.ಶ.50) ತನ್ನ ‘ಡಿ ಮೆಡಿಸಿನ’ ಪುಸ್ತಕದಲ್ಲಿ
ಕಜ್ಜಿಯ ವಿವರಣೆಯನ್ನು ನೀಡಿದ್ದಾನೆ. ಮಧ್ಯಯುಗದ ಯುರೋಪಿಯನ್ನರು ಕೆಟ್ಟಗಾಳಿಯಿಂದ ಹಾಗೂ ಅಸ್ವಚ್ಛತೆ ಯಿಂದ ಕಜ್ಜಿ ಬರುತ್ತದೆ ಎಂದು ನಂಬಿದ್ದರು. ಬಹಳಷ್ಟು ಜನರು “ಪರೋಪಜೀವಿಗಳು ರೋಗಿಗಳ ಒಡಲಿನಲ್ಲಿಯೇ ಹುಟ್ಟುತ್ತವೆ” ಎಂದು ಭಾವಿಸಿದ್ದರು. ಇದಕ್ಕೆ ಆಧಾರವಾಗಿ ಕೊಳೆಯುವ ಮಾಂಸದಲ್ಲಿ ಕಂಡು ಬರುವ ಹುಳುಗಳನ್ನು ತೋರಿಸುತ್ತಿದ್ದರು.

1668ರಲ್ಲಿ ಇಟಲಿಯ ವೈದ್ಯ ಫ್ರಾನ್ಸಿಸ್ಕೋ ರೆಡಿ ಒಂದು ದಿಟ್ಟ ಸಂಶೋಧನೆಯನ್ನು ನಡೆಸಿದ. ಇವನು ಮಾಂಸ ವನ್ನು ಗಾಜಿನ ಸೀಸೆಯಲ್ಲಿಟ್ಟ. ನೊಣಗಳನ್ನು ಮಾಂಸದ ಸಂಪರ್ಕಕ್ಕೆ ಬರದಂತೆ ತಡೆದ. ಆಗ ಮಾಂಸ ಕೊಳೆತರೂ ಅದರಲ್ಲಿ ಹುಳುಗಳು ಕಂಡುಬರಲಿಲ್ಲ. ಹಾಗಾಗಿ “ಅಜೀವದಿಂದ ಜೀವ ಹುಟ್ಟಲಾರದು” ಎಂದ. ಈ ಪ್ರಯೋಗವನ್ನು ಅಂದಿನ ಜನ ಒಪ್ಪಲಿಲ್ಲ. ಇದೇ ಅವಧಿಯಲ್ಲಿ ರೆಡಿಯ ಶಿಷ್ಯನಾಗಿದ್ದ ಜಿಯೋವನ್ನಿ ಕಾಸಿಮೋ ಬೊನೊಮೊ 1687ರಲ್ಲಿ ರೆಡಿಗೆ ಒಂದು ಪತ್ರವನ್ನು ಬರೆದ. “ಹೆಂಗಸರು ತಲೆಯಲ್ಲಿರುವ ಹೇನು ಕೂರೆಗಳನ್ನು ಹಿಡಿದು, ನೆಲದ ಮೇಲೆ ಹಾಕಿ ಹೆಬ್ಬೆರಳ ಉಗುರಿನಿಂದ ಒತ್ತಿ ಸಾಯಿಸುವ ಹಾಗೆ, ಇಲ್ಲಿ ಕೆಲವು ಮಹಿಳೆಯರು ಸೂಜಿಯಿಂದ ಕಜ್ಜಿಯ ಗುಳ್ಳೆಯನ್ನು ಒಡೆದು, ಅದರೊಳಗಿರುವ ನೀರು ಹೊರಬಂದ ಮೇಲೆ ಬೆಳ್ಳನೆಂಬ ವಸ್ತುವನ್ನು ಉಗುರಿನಿಂದ ಒತ್ತಿ ಸಾಯಿಸುವುದನ್ನು ನೋಡಿದೆ.

ಕೂಡಲೆ ನಾನು ಕಜ್ಜಿಯಿದ್ದ ವ್ಯಕ್ತಿಯೊಬ್ಬನ ಕಜ್ಜಿಗುಳ್ಳೆಯನ್ನು ಒಡೆದು ಅದರೊಳಗಿದ್ದ ಬೆಳ್ಳನೆಯ ವಸ್ತುವನ್ನು ಹೊರತೆಗೆದು, ಅದನ್ನು ಸೂಕ್ಷ್ಮದರ್ಶಕದ ಅಡಿಯಲ್ಲಿಟ್ಟು ನೋಡಿದೆ! ಅದೊಂದು ‘ಪುಟ್ಟ ಆಮೆ’ಯ ಹಾಗಿತ್ತು! ಬಿಳಿಯ ಬಣ್ಣಕ್ಕಿತ್ತು. ಬೆನ್ನು ತುಸು ಕಪ್ಪಗಿತ್ತು. ಸ್ಪಷ್ಟ ತಲೆಯನ್ನು ಹೊಂದಿದ್ದ ಆ ಜೀವಿಗೆ ಆರು ಕಾಲುಗಳಿದ್ದವು. ಅದರ ಮೂತಿಯ ಮೇಲೆ ಎರಡು ಕೊಂಬುಗಳಂಥವು ಇದ್ದವು…” ಹೀಗೆ ಕಜ್ಜಿ ನುಸಿಯ ಸ್ಪಷ್ಟ ಚಿತ್ರವನ್ನು ಬೊನೊಮೊ ನೀಡಿದ. ವಾಸ್ತವದಲ್ಲಿ ಬೊನೊಮೊ ನೋಡಿದ್ದು ಕಜ್ಜಿಯ ಮರಿಹುಳುವನ್ನು. ವಯಸ್ಕ ಕಜ್ಜಿ ನುಸಿಗೆ ಎಂಟು ಕಾಲುಗಳಿರುತ್ತವೆ. ನಂತರ ಬೊನೊಮೊ ಈ ನುಸಿಗಳಲ್ಲಿ ಗಂಡು-ಹೆಣ್ಣು ಇರುವ ಬಗ್ಗೆ, ಅವುಗಳ ನಡುವೆ ಲೈಂಗಿಕ ಸಂಪರ್ಕವು ನಡೆಯುವ ಬಗ್ಗೆ, ಅದರಿಂದ ರೂಪುಗೊಳ್ಳುವ ಮೊಟ್ಟೆಗಳ ಬಗ್ಗೆ, ಮೊಟ್ಟೆಗಳು ಒಡೆದು ಮರಿಹುಳುಗಳು ಬರುವ ಬಗ್ಗೆ ಪೂರ್ಣ ವಿವರಗಳನ್ನು ನೀಡಿದ.

ಜಗತ್ತಿಗೆ ಮೊದಲ ಬಾರಿಗೆ ಕಜ್ಜಿಯ ಪೂರ್ಣ ವಿವರ ದೊರೆಯುವುದರ ಜತೆಯಲ್ಲಿ, ಒಂದು ರೋಗವನ್ನು ಒಂದು ಜೀವಿಯು ಉಂಟುಮಾಡಬಲ್ಲುದು ಎಂಬ ವಿವರಣೆಯು ಮೊದಲ ಬಾರಿಗೆ ದೊರೆಯಿತು. ಕಜ್ಜಿಯು ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಬರುತ್ತದೆ. ವಿಜ್ಞಾನಿಗಳು ಕಜ್ಜಿ ನುಸಿಗಳ ಬಗ್ಗೆ ವಿಸ್ತೃತ ಅಧ್ಯಯನವನ್ನು ಮಾಡಿ, ವಿವಿಧ ಕಜ್ಜಿ ನುಸಿಗಳ ಬಗ್ಗೆ ಕರಾರುವಾಕ್ಕಾದ ಮಾಹಿತಿಯನ್ನು ನೀಡಿರುವರು. ಮನುಷ್ಯರಿಗೆ ಕಜ್ಜಿಯನ್ನುಂಟುಮಾಡುವ ನುಸಿಯನ್ನು ‘ಸಾರ್ಕಾಪ್ಟಿಸ್ ಸ್ಕೇಬೈ’ ಅಥವಾ ‘ಸಾ. ಹೋಮಿನಿಸ್’ ಎಂದು ಕರೆದರು. ಅದೇ ರೀತಿ, ನಾಯಿಯಲ್ಲಿ ಕಜ್ಜಿಯನ್ನುಂಟು ಮಾಡುವ ನುಸಿಯನ್ನು ‘ಸಾರ್ಕಾಪ್ಟಿಸ್ ಸ್ಕೇಬೈ’ ಅಥವಾ ‘ಸಾ. ಕ್ಯಾನಿಸ್’ ಎಂದು ನಾಮಕರಣ ವನ್ನು ಮಾಡಿದರು. ಹೀಗೆಯೇ ಬೆಕ್ಕು, ಹಂದಿ, ನರಿ, ತೋಳಗಳಲ್ಲಿ ಕಜ್ಜಿಯನ್ನುಂಟು ಮಾಡುವ ಕಜ್ಜಿ ನುಸಿಗಳನ್ನು ಗುರುತಿಸಿರುವರು.

ಮನುಷ್ಯರ ಕಜ್ಜಿಯು ಅಂಟು ಕಾಯಿಲೆ. ಮನುಷ್ಯರಿಂದಲೇ ಮತ್ತೊಬ್ಬ ಮನುಷ್ಯರಿಗೆ ಹರಡುತ್ತದೆ. ಕಜ್ಜಿ ಬಂದಿ
ರುವ ನಾಯಿಯು ಮನುಷ್ಯರ ಹತ್ತಿರ ಮಲಗಿದರೆ, ನಾಯಿ ಕಜ್ಜಿಯು ಮನುಷ್ಯರಿಗೆ ಅಂಟಿಕೊಳ್ಳುತ್ತದೆ. ಆದರೆ ನಾಯಿ ಕಜ್ಜಿಯು ನಾಯಿಗೇ ವಿಶೇಷವಾಗಿರುವ ಕಾಯಿಲೆ, ಮನುಷ್ಯರಿಗೆ ಅಂಟಿಕೊಂಡರೂ ಪೂರ್ಣ ರೂಪದಲ್ಲಿ ಬೆಳೆಯುವುದಿಲ್ಲ. ಹಾಗಾಗಿ ನಾಯಿ ಕಜ್ಜಿಯು ಸ್ವಯಂ ನಿಯಂತ್ರಣಕ್ಕೆ ಬರುತ್ತದೆ ಮತ್ತು ಅದನ್ನು ತ್ವರಿತವಾಗಿ ಗುಣಪಡಿಸಲು ಸಾಧ್ಯವಿದೆ. ಕಜ್ಜಿಯ ಪ್ರಮುಖ ಲಕ್ಷಣ ತುರಿಕೆ. ಈ ತುರಿಕೆಯು ತೀವ್ರ ಸ್ವರೂಪದಲ್ಲಿರುತ್ತದೆ. ಸಾಮಾನ್ಯವಾಗಿ ರಾತ್ರಿಯ ಹೊತ್ತಿನಲ್ಲಿ ತುರಿಕೆಯು ಹೆಚ್ಚು. ಎರಡನೆಯದು ಕೆಂಪುಬಣ್ಣದ ದದ್ದುಗಳು. ಅವು ಮೊಡವೆಯ ಹಾಗೆ ಉಬ್ಬಿಕೊಂಡಿರುತ್ತವೆ.

ಕೆಲವು ಸಲ ಈ ದದ್ದುಗಳಲ್ಲಿ ನೀರು ತುಂಬಿರಬಹುದು ಅಥವಾ ಹುರುಪೆಗಳಿ ರಬಹುದು. ಮರಳಿನಲ್ಲಿ ನಾವು ನಡೆದುಕೊಂಡು ಹೋದರೆ, ಹೇಗೆ ನಮ್ಮ ನಡಿಗೆಯು ಗುರುತನ್ನು ಬಿಡುತ್ತದೆಯೋ, ಹಾಗೆಯೇ ಕಜ್ಜಿ ನುಸಿಯು ನಮ್ಮ ಚರ್ಮದ ಕೆಳಗೆ ಸುರಂಗವನ್ನು ಮಾಡಿಕೊಳ್ಳುತ್ತಾ ಹೋದ ಕಡೆಯಲ್ಲೆಲ್ಲ ಗುರುತನ್ನು ಬಿಡುತ್ತಾ ಹೋಗುತ್ತದೆ. ಚರ್ಮದ ಮೇಲೆ ಸೂಕ್ಷ್ಮ ರೂಪದ, ಅಲೆ ಅಲೆಯಾದ, ಬೂದು ಬಣ್ಣದ ಗೆರೆಗಳನ್ನು ಕಾಣಬಹುದು. ಇಂಥ ಗೆರೆಗಳು ನಮ್ಮ ಶರೀರದಲ್ಲಿ ಬಿಸಿ ಹೆಚ್ಚಿರುವ ಸ್ಥಳಗಳಲ್ಲಿ ಕಂಡುಬರುತ್ತವೆ.

ಉದಾ: ಬೆರಳುಗಳ ನಡುವೆ, ಮಣಿಕಟ್ಟು, ಮೊಳಕೈ, ಕಂಕುಳು, ಜನನಾಂಗಗಳು, ಸೊಂಟ. ಈ ಸ್ಥಳಗಳಲ್ಲಿ ವಿಪರೀತ ತುರಿಕೆ ಕಂಡುಬರುತ್ತದೆ. ತಡೆಯಲಸಾಧ್ಯವಾದ ತುರಿಕೆಯಿಂದಾಗಿ ಅದನ್ನು ಕೆರೆಯುತ್ತೇವೆ. ಆಗ ನಮ್ಮ ಉಗುರಿ ನಿಂದ ಸಣ್ಣ ಪುಟ್ಟ ತರಚುಗಾಯ ಗಳಾಗುತ್ತವೆ. ಉಗುರಿನ ಕೊಳೆಯಲ್ಲಿರುವ ಬ್ಯಾಕ್ಟೀರಿಯಾದಿ ಸೋಂಕು ಜನಕಗಳು ಗಾಯದ ಮೂಲಕ ಒಳಪ್ರವೇಶಿಸಿ ಸೋಂಕನ್ನು, ಮತ್ತಷ್ಟು ನವೆಯನ್ನು ಉಂಟುಮಾಡುತ್ತವೆ. ಅದನ್ನು ಕೆರೆದಾಗ ಕೀವು ರಕ್ತ ಹೊರಹರಿಯುತ್ತದೆ.

ಪ್ರಾಣಿಗಳಲ್ಲೂ ತುರಿಕೆ ಕಂಡುಬರುತ್ತದೆ. ಅವು ತುರಿಕೆ ಬಂದ ಭಾಗವನ್ನು ಮರಕ್ಕೋ, ಲೈಟುಕಂಬಕ್ಕೋ ಉಜ್ಜುತ್ತವೆ
ಇಲ್ಲವೇ ಬಾಯಿಂದ ನವೆಯನ್ನು ಶಮನಗೊಳಿಸಲು ಪ್ರಯತ್ನಿಸುತ್ತವೆ. ಇದು ತೀವ್ರವಾದಾಗ ಗಾಯಗಳಾಗುತ್ತವೆ.
ಕೂದಲು ಉದುರುತ್ತದೆ. ಗಾಯಗಳಲ್ಲಿ ಕೀವು ಅಧಿಕವಾಗಿ ಹೆಪ್ಪಳಿಕೆಗಳು ಮೂಡುತ್ತವೆ. ತುರಿಕೆ ವಿಪರೀತವಾದಾಗ, ಈ
ಪ್ರಾಣಿಗಳು ಒಂದು ಕಡೆ ನಿಲ್ಲದೆ ಚಡಪಡಿಸುತ್ತವೆ, ಎಲ್ಲೆಡೆ ಓಡಾಡುತ್ತಿರುತ್ತವೆ. ಕಜ್ಜಿಯಿಂದ ನರಳುವ ವ್ಯಕ್ತಿಯ ದೇಹದ ಭಾಗಗಳನ್ನು ಪರೀಕ್ಷಿಸುತ್ತಿರುವಂತೆಯೇ, ವೈದ್ಯರಿಗೆ ಸಮಸ್ಯೆ ಏನೆಂದು ಅರಿವಾಗುತ್ತದೆ. ಕೆಲವು ಸಲ ತುರಿಕೆ ಕಂಡುಬರುವ ಚರ್ಮ ವನ್ನು ಹೆರೆದು ಸೂಕ್ಷ್ಮದರ್ಶಕದಡಿಯಲ್ಲಿ ನೋಡಿದಾಗ, ನುಸಿಗಳು, ನುಸಿಗಳ ಮೊಟ್ಟೆಗಳು, ಮರಿಗಳು ಮತ್ತು ಮರಿಗಳ ಮಲವಿಸರ್ಜನೆ ಎಲ್ಲವೂ ಕಂಡುಬರುತ್ತವೆ. ಇದು ರೋಗನಿದಾನವನ್ನು ಖಚಿತಪಡಿಸು ತ್ತದೆ.

ಮನುಷ್ಯರಲ್ಲಿ ಕಂಡುಬರುವ ಕಜ್ಜಿಯನ್ನು ಪರ್ಮಿಥ್ರಿಯನ್ ಶೇ.5 ಲೇಪನ, ಕ್ರೊಟಾಮೈಟಾನ್ ಲೇಪನ, ಗಂಧಕ ಯುಕ್ತ ಲೇಪನಗಳನ್ನು ಹಚ್ಚುವುದರ ಮೂಲಕ ಗುಣಪಡಿಸಬಹುದು. ಐವರಿಮೆಕ್ಟಿನ್ ಎಂಬ ಗುಳಿಗೆಯನ್ನು ನುಂಗಲು ನೀಡಬಹುದು. ನವೆಯನ್ನು ಕಡಿಮೆ ಮಾಡಲು ನವೆರೋಧಕ ಗುಳಿಗೆಗಳನ್ನು ಅಥವಾ ಅಲ್ಪಕಾಲಾ ವಧಿಯ ಸ್ಟೀರಾಯ್ಡು ಗಳನ್ನು ಸೇವಿಸುವಂತೆ ಸೂಚಿಸಬಹುದು. ಪ್ರಾಣಿಗಳಲ್ಲಿ ಅಮಿಟ್ರಾಜ಼್, ಲೈಮ್ ಸಲರ್, ಬೆಂಜಾಯಿಲ್ ಪೆರಾಕ್ಸೈಡ್, ಐವರಿಮೆಕ್ಟಿನ್, ಸೆಲಾಮೆಕ್ಟಿನ್ ಅಥವಾ ಮೋಕ್ಸಿಡೆಕ್ಟಿನ್ ಗುಳಿಗೆ ಗಳನ್ನು ನೀಡಬಹುದು. ಕಜ್ಜಿಯನ್ನು ಬಂದಮೇಲೆ ಗುಣಪಡಿಸುವುದಕ್ಕಿಂತ, ಬರದಂತೆ ಮುನ್ನೆಚ್ಚರಿಕೆಯನ್ನು ವಹಿಸುವುದು ಮುಖ್ಯ. ಕಜ್ಜಿಬಂದವರೊಡನೆ ನಿಕಟ ದೈಹಿಕ ಸಂಪರ್ಕವನ್ನು ನಡೆಸಿದರೆ ಅಥವಾ ಅವರು ಬಳಸಿದ ವಸ್ತುಗಳನ್ನು ಉಪಯೋಗಿಸಿದರೆ ನಮಗೂ ಕಜ್ಜಿಯು ಅಂಟಿಕೊಳ್ಳುತ್ತದೆ. ಸ್ವಚ್ಛತೆಯೊಂದೇ ಇದರ ನಿವಾರಣೆಗೆ ಮೂಲಮಂತ್ರ. ಪ್ರತಿಯೊಬ್ಬ ವ್ಯಕ್ತಿಯು ತನ್ನ ದೈಹಿಕ ಸ್ವಚ್ಛತೆಗೆ ಎಷ್ಟು ಗಮನವನ್ನು ಕೊಡುತ್ತಾನೋ, ಅಷ್ಟೇ ಗಮನವನ್ನು
ತಾನು ಬಳಸುವ ಉಡುಪುಗಳು, ಹಾಸಿಗೆ, ದಿಂಬು, ಹೊದಿಕೆಗಳಿಗೂ ಕೊಡಬೇಕು.

ಕಜ್ಜಿಯು ಅಂಟು ಜಾಡ್ಯವಾಗಿರುವ ಕಾರಣ, ಹೆಚ್ಚು ಜನರು ಒಂದೆಡೆ ವಾಸಿಸುವ ಸ್ಥಳಗಳಾದ ಶಾಲೆ, ಹಾಸ್ಟೆಲ್, ಜೈಲು, ಅನಾಥಾಲಯಗಳು ಮುಂತಾದ ಕಡೆ ಹೆಚ್ಚು ಕಂಡುಬರುತ್ತದೆ. ಹಾಗೆ ಕಂಡುಬಂದಾಗ, ಎಲ್ಲರಿಗೂ ಚಿಕಿತ್ಸೆ ಯನ್ನು ನೀಡುವುದರ ಜತೆಯಲ್ಲಿ ಅವರ ಹಾಸಿಗೆ, ದಿಂಬು, ಹೊದಿಕೆಗಳ ಜತೆಗೆ ಅವರು ವಾಸಿಸುವ ಕಟ್ಟಡವನ್ನೂ ಸ್ವಚ್ಛಗೊಳಿಸಬೇಕಾಗುತ್ತದೆ. ಸಾಕುನಾಯಿಯನ್ನು ಬೀದಿನಾಯಿಗಳ ಜತೆ ಬೆರೆಯಲು ಬಿಡಬಾರದು. ಸೆಲಾಮೆಕ್ಟಿನ್ ಮತ್ತು ಮೋಕ್ಸಿಡೆಕ್ಟಿನ್‌ಯುಕ್ತ ಶಾಂಪುಗಳಿಂದ ಸ್ನಾನವನ್ನು ಮಾಡಿಸುತ್ತಿದ್ದರೆ ಸಾಕು ನಾಯಿಗೆ ಕಜ್ಜಿ ಅಂಟಿಕೊಳ್ಳುವ ಸಾಧ್ಯತೆಯು ಕಡಿಮೆಯಿರುತ್ತದೆ.

ಕಜ್ಜಿ ಅನಾದಿ ಕಾಲದ ರೋಗ. ಇದು ವ್ಯಕ್ತಿಯ ಬದುಕನ್ನು ತೀರಾ ಅಸ್ತವ್ಯಸ್ತ ಮಾಡುತ್ತದೆ. ಸ್ವಚ್ಛತೆಯ ಮೂಲಕ ಇದನ್ನು ತಡೆಗಟ್ಟಬಹುದು. ಪ್ರಾಣಿಗಳಿಗೆ ಬರುವ ಕಜ್ಜಿಯನ್ನು ನಿಗದಿತ ಶಾಂಪುವನ್ನು ಬಳಸುವುದರ ಮೂಲಕ ನಿಗ್ರಹಿಸಲು ಸಾಧ್ಯ. ಹಾಗಾಗಿ ಕಜ್ಜಿಯ ನಿಯಂತ್ರಣಕ್ಕೆ ‘ಸ್ವಚ್ಛಮೇವಜಯತೇ’ ಎನ್ನುವುದೇ ಮೂಲಮಂತ್ರವಾಗುತ್ತದೆ.

ಇದನ್ನೂ ಓದಿ: Dr N Someswara Column: ಅವನಿಗೆ ಹುಚ್ಚು ಹಿಡಿಸಿ ಕೊಂದುಬಿಟ್ಟರು !