ಹಿಂದಿರುಗಿ ನೋಡಿದಾಗ
ಡಾ.ನಾ.ಸೋಮೇಶ್ವರ
ಆಧುನಿಕ ಶಸ್ತ್ರವೈದ್ಯಕೀಯವು ಇದು ಯಶಸ್ವಿಯಾಗುತ್ತಿರಲು ಮುಖ್ಯ ಕಾರಣಗಳೆಂದರೆ ಅರಿವಳಿಕೆಯ ತಂತ್ರಜ್ಞಾನದಲ್ಲಿ ನಡೆದ ಸುಧಾರಣೆಗಳು, ನಂಜುರೋಧಕ ವಿಜ್ಞಾನದಲ್ಲಿ ಆಗಿರುವ ಪ್ರಗತಿ ಹಾಗೂ ಅತ್ಯುತ್ತಮ ಪ್ರತಿಜೈವಿಕ ಔಷಧಿಗಳು. ನಂಜುರೋಧಕ ವಿಜ್ಞಾನವು ಆರಂಭವಾದ ಬಗೆ ಕುತೂಹಲಕರವಾಗಿದೆ. ಅನಾದಿ ಕಾಲದಿಂದಲೂ, ಮನುಷ್ಯನಿಗೆ ರೋಗಗಳು ಬರಲು ದೈವ ಅಥವಾ ದೆವ್ವಗಳ ಪ್ರಕೋಪವೇ ಕಾರಣ ಎನ್ನುವ ನಂಬಿಕೆ ಬಲವಾಗಿತ್ತು. ಇಂಥ ಸ್ಥಿತಿಯಲ್ಲಿ ‘ನಮ್ಮ ಬರಿಗಣ್ಣಿಗೆ ಕಾಣದ ಅದೃಶ್ಯಲೋಕದ ಅಗೋಚರ ಜೀವಿಗಳು ಇವೆ’ ಎನ್ನುವುದನ್ನು ಮೊದಲ ಬಾರಿಗೆ ಲ್ಯೂವೆನ್‌ಹಾಕ್ ತನ್ನ ಸೂಕ್ಷ್ಮದರ್ಶಕದ ಮೂಲಕ ತೋರಿಸಿಕೊಟ್ಟ.
ಒಂದೊಂದು ಸೋಂಕುರೋಗಕ್ಕೆ ಒಂದೊಂದು ಸೂಕ್ಷ್ಮಜೀವಿ ಕಾರಣವಾಗಿದೆ ಎನ್ನುವುದನ್ನು ಲೂಯಿ ಪ್ಯಾಶ್ಚರ್ ಮತ್ತು ರಾಬರ್ಟ್ ಕಾಚ್ ಇಬ್ಬರೂ ನಿರೂಪಿಸಿದರು. ಈ ನಡುವೆ, ಗಾಯಗಳು ಏಕೆ ಕೊಳೆಯುತ್ತವೆ ಎನ್ನುವುದರ ಬಗ್ಗೆ ಜೋಸೆಫ್ ಲಿಸ್ಟರ್ ತುಂಬಾ ಯೋಚಿಸುತ್ತಿದ್ದ. ಈ ಘಟ್ಟದಲ್ಲಿ ಎರಡು ವಿದ್ಯಮಾನಗಳು ಲಿಸ್ಟರನ ಗಮನಕ್ಕೆ ಬಂದವು. ಮೊದಲನೆಯದು ಇಂಗ್ಲೆಂಡಿನ ‘ಕಾರ್ಲಿಸೆಲ್’ ನಗರದಲ್ಲಿ, ಕಟ್ಟಿಕೊಂಡು ದುರ್ವಾಸನೆ ಬೀರುತ್ತಿದ್ದ ಚರಂಡಿಗಳನ್ನು ಶುದ್ಧೀಕರಿಸಲು ಕಾರ್ಬಾಲಿಕ್ ಆಸಿಡ್ ಬಳಸುತ್ತಿದ್ದರು. ಈ ಆಸಿಡ್ ಕಟ್ಟಿಕೊಂಡಿದ್ದ ಚರಂಡಿಯನ್ನು ಮುಕ್ತಗೊಳಿಸಿ ದ್ದಲ್ಲದೆ, ದುರ್ವಾಸನೆಯನ್ನೂ ನಿವಾರಿಸಿತು. ಎರಡನೆಯದು, ರೋಗಜನಕ ಸೂಕ್ಷ್ಮಜೀವಿಗಳನ್ನು ಲೂಯಿ ಪ್ಯಾಶ್ಚರ್ ಪ್ರಯೋಗದಲ್ಲಿ ಬಳಸಿದ ಮೇಲೆ, ಬ್ಯಾಕ್ಟೀರಿಯಗಳಿದ್ದ ಗಾಜಿನ ತಟ್ಟೆಯನ್ನು ಶಾಖಕ್ಕೆ ಒಡ್ಡುತ್ತಿದ್ದ, ಕುದಿಸುತ್ತಿದ್ದ ಇಲ್ಲವೇ ಮದ್ಯಸಾರದಿಂದ ನಾಶ ಮಾಡಿ ಸ್ವಚ್ಛಗೊಳಿಸುತ್ತಿದ್ದ. ಇವೆರಡನ್ನೂ ಗಮನಿಸಿದ ಲಿಸ್ಟರ್, “ಬ್ಯಾಕ್ಟೀರಿಯಗಳನ್ನು ಕೃತಕ ವಿಧಾನಗಳಿಂದ ಕೊಲ್ಲಲು ಸಾಧ್ಯ ಎನ್ನುವುದಾದರೆ, ಗಾಯಗಳನ್ನು ಕೊಳೆಯಿಸಿ ದುರ್ನಾತ ಬೀರುವ ಬ್ಯಾಕ್ಟೀರಿಯಗಳನ್ನೂ ಕೊಲ್ಲಲು ಸಾಧ್ಯವಾಗುತ್ತದೆಯಲ್ಲವೇ…” ಎಂದು ತರ್ಕಿಸಿದ.
ಬ್ಯಾಕ್ಟೀರಿಯಗಳನ್ನು ಕೊಲ್ಲಬಲ್ಲ ಹಲವು ರಾಸಾಯನಿಕಗಳನ್ನು ಪ್ರಯೋಗಿಸಿದ. ಅಂಥ ಉಪಯೋಗವೇನೂ ಆಗಲಿಲ್ಲ. ಕೊನೆಗೆ ಆಗಸ್ಟ್ 12, 1865ರಂದು 11 ವರ್ಷದ ಹುಡುಗನೊಬ್ಬ ಅಪಘಾತಕ್ಕೆ ತುತ್ತಾಗಿದ್ದ. ಅವನ ಕಣಕಾಲಿನಲ್ಲಿದ್ದ ‘ಟಿಬಿಯ’ ಎಂಬ ಮೂಳೆ ಮುರಿದಿತ್ತು. ಮುರಿದ ಚೂರು, ಸ್ನಾಯು ಮತ್ತು ಚರ್ಮವನ್ನು ಛೇದಿಸಿಕೊಂಡು ಹೊರಗೆ ಬಂದಿತ್ತು. ಅಂದಿನ ದಿನಗಳಲ್ಲಿ ಸಾಮಾನ್ಯವಾಗಿ ಇಂಥ ಸ್ಥಿತಿಯಲ್ಲಿ ಕಾಲನ್ನು ಛೇದಿಸುತ್ತಿದ್ದರು. ಆದರೆ ಆ ಹುಡುಗನಿಗೆ ಕೇವಲ 11 ವರ್ಷಗಳಾಗಿದ್ದರಿಂದ, ಲಿಸ್ಟರ್ ಒಂದು ದಿಟ್ಟ ಪ್ರಯೋಗ ಮಾಡಲು ನಿರ್ಧರಿಸಿದ. ಹೊರಗೆ ಬಂದಿದ್ದ ಮೂಳೆಯನ್ನು ಒಳಗೆ ತಳ್ಳಿ ಸ್ವಸ್ಥಾನದಲ್ಲಿ ಕೂರಿಸಿದ.
ಕಾಲು ಅಲುಗದಂತೆ ದಬ್ಬೆಗಳಿಂದ ಬಿಗಿದ. ಪ್ರಬಲ ಕಾರ್ಬಾಲಿಕ್ ಆಮ್ಲದಲ್ಲಿ ಹತ್ತಿ ಬಟ್ಟೆಯನ್ನು ಅದ್ದಿ ಅದನ್ನು ಗಾಯದ ಮೇಲಿಟ್ಟ. ತವರದ ಹಾಳೆಯಿಂದ ಪಟ್ಟಿ ಕಟ್ಟಿದ. 4 ದಿನ ಬಿಟ್ಟು ಪಟ್ಟಿಯನ್ನು ಬಿಚ್ಚಿದಾಗ ಯಾವುದೇ ಸೋಂಕಿನ ಲಕ್ಷಣಗಳಿರಲಿಲ್ಲ! ಕಾಲು ಆರೋಗ್ಯಕರವಾಗಿಯೇ ಇತ್ತು. ಪ್ರಬಲ ಕಾರ್ಬಾಲಿಕ್ ಆಮ್ಲವನ್ನು ಬಳಸಿದ್ದ ಕಾರಣ, ಕೆಲವೆಡೆ ಸುಟ್ಟ ಗುರುತುಗಳಿದ್ದವು. ಹಾಗಾಗಿ ಈಗ ದುರ್ಬಲ ಕಾರ್ಬಾಲಿಕ್ ಆಮ್ಲದಿಂದ ಗಾಯವನ್ನು ಸ್ವಚ್ಛಗೊಳಿಸಿ ಪಟ್ಟಿ ಕಟ್ಟಿದ. ಗಾಯವನ್ನು ಹೀಗೆ ನಿಯತವಾಗಿ ಸ್ವಚ್ಛಗೊಳಿಸುವುದನ್ನು ಮುಂದುವರಿಸಿದ. 6 ವಾರಗಳಲ್ಲಿ ಹುಡುಗ ಎದ್ದು ನಿಂತು ಸ್ವತಂತ್ರವಾಗಿ ನಡೆದ. ವೈದ್ಯಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ‘ಪವಾಡ’ ನಡೆದಿತ್ತು. ಕಾರ್ಬಾಲಿಕ್ ಆಮ್ಲವು ನಂಜುರೋಧಕ ವಿಜ್ಞಾನದ ಹೆಬ್ಬಾಗಿಲನ್ನೇ ತೆರೆಯಿತು.
ಕಾರ್ಬಾಲಿಕ್ ಆಸಿಡ್, ಫೀನೋಲಿಕ್ ಆಸಿಡ್, ಬೆಂಜ಼ೆನಾಲ್ ಎಂಬ ಹೆಸರುಗಳಿರುವ ಈ ರಾಸಾಯನಿಕವು ‘ಫೀನಾಲ್’ ಎಂಬ ಹೆಸರಿನಲ್ಲಿ ಹೆಚ್ಚು ಪ್ರಸಿದ್ಧವಾಗಿದೆ. ಕಚ್ಚಾ ಫೀನಾಲನ್ನು ಮೊದಲ ಬಾರಿಗೆ ಜರ್ಮನಿಯ ರಸಾಯನ ವಿಜ್ಞಾನಿ ಫ್ರೀಡ್ಲೀಬ್ ಫರ್ಡಿನಂಡ್ ರುಂಗೆ 1834ರಲ್ಲಿ ತಾರೆಣ್ಣೆ ಅಥವಾ ಡಾಂಬರಿನಿಂದ ಪ್ರತ್ಯೇಕಿಸಿದ. ರುಂಗೆ ಇದನ್ನು ‘ಕೋಲ್-ಆಯಿಲ್-ಆಸಿಡ್’ ಎನ್ನುವ ಅರ್ಥ ದಲ್ಲಿ ‘ಕಾರ್ಬಾಲಿಕ್ ಆಸಿಡ್’ ಎಂದು ಕರೆದ. ಕಾರ್ಬಾಲಿಕ್ ಆಸಿಡ್ ಎನ್ನುವ ರಾಸಾಯನಿಕಕ್ಕೆ ಫೀನಾಲ್ ಎಂದು ಚಾರ್ಲ್ಸ್ ಗೆರ್ಹಾರ್ಡ್ಟ್ ನಾಮಕರಣ ಮಾಡಿದ.
ಫೀನಾಲ್, ಎರಡಲುಗಿನ ಖಡ್ಗ. ಇದರ ಆವಿಯು ಕಣ್ಣು, ಮೂಗು, ಬಾಯಿ, ವಾಯುನಾಳ ಹಾಗೂ ಚರ್ಮವನ್ನು ಕೆರಳಿಸಬಲ್ಲದು, ಸುಡಬಲ್ಲದು. ಪದೇ ಪದೆ ಚರ್ಮದ ಸಂಪರ್ಕಕ್ಕೆ ಬಂದರೆ ಚರ್ಮದ ಉರಿಯೂತಕ್ಕೆ ಕಾರಣವಾಗಿ, ಮುಂದೆ ಅದು ಕ್ಯಾನ್ಸರ್ ಬೆಳೆಯಲು ಅವಕಾಶವನ್ನು ಮಾಡಿಕೊಡಬಹುದು. ಇದು ಮೂತ್ರಪಿಂಡ ಹಾಗೂ ಯಕೃತ್ತಿನ ಕೆಲಸ ಕಾರ್ಯಗಳನ್ನು ಏರುಪೇರು ಮಾಡುತ್ತದೆ. ಹೃದಯ ಮತ್ತು ಮಿದುಳಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೃದಯ ಮಿಡಿತ ಏರುಪೇರಾಗಿ, ಸೆಳವು ಕಂಡುಬಂದು, ವ್ಯಕ್ತಿ ಕೋಮಾಕ್ಕೆ ಒಳಗಾಗಬಹುದು. ಕೋಮಾ ದಲ್ಲಿಯೇ ಸಾವು ಸಂಭವಿಸಬಹುದು. ಫೀನಾಲ್, ಸೂಕ್ಷ್ಮಜೀವಿಗಳನ್ನು ಕೊಲ್ಲುವ ಹಾಗೆ, ಮನುಷ್ಯರನ್ನೂ ಕೊಲ್ಲಬಲ್ಲದು ಎನ್ನುವ ವಿಚಾರ ಕಾಲಕ್ರಮೇಣ ತಿಳಿಯಿತು.
ಜರ್ಮನ್ನರು ದ್ವಿತೀಯ ಮಹಾಯುದ್ಧದಲ್ಲಿ ಇದನ್ನು ಪರಿಪೂರ್ಣವಾಗಿ ದುರುಪಯೋಗಪಡಿಸಿಕೊಂಡರು. 1939ರ ‘ಆಕ್ಷಿಯಾನ್-ಟಿ೪’ ಸಾಮೂಹಿಕ ಕೊಲೆಗೆ ಕುಖ್ಯಾತವಾದ ಘಟನೆ. ಇಲ್ಲಿ ಜರ್ಮನ್ನರು ಹತ್ತತ್ತಿರ 3 ಲಕ್ಷ ಯೆಹೂದಿಗಳನ್ನು ಫೀನಾಲ್ ಇಂಜೆಕ್ಷನ್ ನೀಡಿ ಕೊಂದರು. ಇದು ಮನುಕುಲದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯವಾಗಿ ಉಳಿದಿದೆ.
ಈಗ ವಿಜ್ಞಾನ ಸಾಕಷ್ಟು ಮುಂದುವರಿದಿದೆ. ಜೀವವನ್ನು ತೆಗೆಯುವ ನಾಗರಹಾವಿನ ವಿಷವನ್ನು ಸೂಕ್ತ ವಿಧಾನದಲ್ಲಿ ಬಳಸಿದರೆ, ಅದು ಹೃದಯಾಘಾತಕ್ಕೆ ತುತ್ತಾಗಿರುವವರ ಜೀವವನ್ನು ಉಳಿಸಬಲ್ಲದು ಎಂಬುದು ನಮಗೆ ತಿಳಿದಿದೆ. ಹಾಗಾಗಿ, ಜೀವ ತೆಗೆವ ಫೀನಾಲನ್ನು ಹಲವು ರೀತಿಯ ಅನಾರೋಗ್ಯಗಳಿಗೆ ಸಮರ್ಪಕ ಔಷಧವಾಗಿ ಬಳಸುವುದು ಸಾಧ್ಯವಾಗಿದೆ. ಪಾರ್ಕಿನ್ಸನ್ ಕಾಯಿಲೆ, ಸೆರೆಬ್ರಲ್ ಪಾಲ್ಸಿ, ಮಿದುಳಿಗೆ ಆಗುವ ತೀವ್ರ ಸ್ವರೂಪದ ಪೆಟ್ಟುಗಳಲ್ಲಿ ಮಿದುಳು- ಬೆನ್ನುಹುರಿ-ನರಗಳು-ಸ್ನಾಯುಗಳ ನಡುವಿನ ಸಂಪರ್ಕ ಹಿತ-ಮಿತ ಪ್ರಮಾಣದಲ್ಲಿರದೆ ಅಽಕವಾಗಿದ್ದು ಸ್ನಾಯು ಬಿಗುಪಿಗೆ (ಸ್ಪಾಸ್ಟಿಸಿಟಿ) ಕಾರಣವಾಗುತ್ತದೆ. ಆ ಸ್ನಾಯುವನ್ನು ಚಲಿಸುವುದೂ ದುಸ್ತರವಾಗುತ್ತದೆ. ಇಂಥ ಸಂದರ್ಭದಲ್ಲಿ ಮಿತಪ್ರಮಾಣದ ಫೀನಾಲ್ ಇಂಜೆಕ್ಷನ್ ನೀಡಿ ಬಿಗುಪನ್ನು ತಗ್ಗಿಸಬಹುದು. ಆಗ ಆ ಸ್ನಾಯುವಿನ ಬಳಕೆ ಸುಲಭವಾಗುತ್ತದೆ. ಇದೇ ಮಾದರಿಯಲ್ಲಿ ‘ಬಾಟ್ಯುಲಿನಮ್ ಟಾಕ್ಸಿನ್-ಎ’ ಎಂಬ ವಿಷವಸ್ತುವನ್ನೂ ಔಷಧವಾಗಿ ಬಳಸಬಹುದು.
ಕಾರ್ಖಾನೆಗಳ ಕಾರ್ಮಿಕರು ಬಿಗಿ ಬೂಟುಗಳನ್ನು ದಿನಕ್ಕೆ 8-12 ಗಂಟೆಗಳವರೆಗೆ ನಿರಂತರವಾಗಿ ಬಳಸುವುದು ಅನಿವಾರ್ಯವಾಗುತ್ತದೆ. ಅದು ಸ್ವಲ್ಪ ಬಿಗಿಯಾಗಿದ್ದರೆ ಪಾದದ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಅವುಗಳಲ್ಲಿ ಹೆಬ್ಬೆರಳ ಉಗುರಿನ ಒಳಬೆಳವಣಿಗೆಯೂ (ಇನ್‌ಗ್ರೋವಿಂಗ್ ಆಫ್ ಟೊ ನೇಲ್) ಒಂದು. ಇದಕ್ಕೆ ಶಸ್ತ್ರಚಿಕಿತ್ಸೆಯೊಂದೇ ಮಾರ್ಗ. ಆದರೆ 3-4 ಸಲ ಶಸ್ತ್ರಚಿಕಿತ್ಸೆ ಮಾಡಿಸಿದರೂ, ಮತ್ತೆ ಮತ್ತೆ ವಕ್ರವಾಗಿಯೇ ಬೆಳೆಯುತ್ತದೆ.
ಇಂಥವರಿಗೆ ಉಗುರು ಮತ್ತೆ ಬೆಳೆಯದಂತೆ ಮಾಡಿದರೆ ಅವರ ಬದುಕು ಸಹನೀಯವಾಗುತ್ತದೆ. ಅದಕ್ಕಾಗಿ ಫೀನಾಲ್ ಇಂಜೆಕ್ಷನ್ನನ್ನು ಉಗುರಿನ ಕಣ್ಣಿಗೆ ನೀಡಲಾಗುತ್ತದೆ, ಆಗ ಉಗುರಿನ ಬೆಳವಣಿಗೆ ನಿಲ್ಲುತ್ತದೆ. ಇದುವೇ ‘ಮ್ಯಾಟ್ರಿಕ್ಸೆಕ್ಟಮಿ’. ಇತ್ತೀಚಿನ ದಿನಗಳಲ್ಲಿ ‘ಸೋಡಿಯಂ ಹೈಡ್ರಾಕ್ಸೈಡ್’ ಇಂಜೆಕ್ಷನ್ನನ್ನು ನೀಡುವ ಪದ್ಧತಿಯಿದೆ. ಲಸಿಕೆಯ ಸಂರಕ್ಷಕವಾಗಿ ಫೀನಾಲನ್ನು ಉಪಯೋಗಿಸಬಹುದು. ಉದಾಹರಣೆಗೆ ನ್ಯುಮೋನಿಯ ಮತ್ತು
ಮಿದುಳುರಿಯೂತವನ್ನು ತಡೆಗಟ್ಟುವ ‘ನ್ಯೂಮೋವ್ಯಾಕ್ಸ್-23’ ಲಸಿಕೆಯಲ್ಲಿ ಫೀನಾಲ್ ಇರುತ್ತದೆ. ಇದು ಲಸಿಕೆಯ ದ್ರವದಲ್ಲಿ ಯಾವುದೇ ಬ್ಯಾಕ್ಟೀರಿಯ ಬೆಳೆಯದಂತೆ ರಕ್ಷಿಸುತ್ತದೆ. ಹೀಗೆಯೇ ಟೈಫಾಯ್ಡ್ ಜ್ವರವನ್ನು ತಡೆಗಟ್ಟುವ ‘ಟೈಫಿಮ್-ವಿ’ ಲಸಿಕೆ, ಸಿಡುಬನ್ನು ತಡೆಗಟ್ಟುವ ‘ಅಇಅI 2000 ಲಸಿಕೆ’ ಮತ್ತು ಪೋಲಿಯೊ ಲಸಿಕೆಯಲ್ಲೂ ಫೀನಾಲನ್ನು ಸಂರಕ್ಷಕವಾಗಿ ಬಳಸಬಹುದು.
ಗಂಟಲು ನೋವು ಅಥವಾ ‘ಸೋರ್ ಥ್ರೋಟ್’ ಸಾಕಷ್ಟು ಕಿರಿಕಿರಿಯನ್ನುಂಟುಮಾಡಬಲ್ಲದು. ಆನ್ನ, ನೀರನ್ನು ನುಂಗುವುದಿರಲಿ, ಎಂಜಲನ್ನು ನುಂಗುವುದೂ ಕಷ್ಟವಾಗಬಹುದು. ಇಂಥ ಸಂದರ್ಭದಲ್ಲಿ ಫೀನಾಲ್ ಇರುವ ಸ್ಪ್ರೇಯನ್ನು ಬಳಸಬಹುದು. ಫೀನಾಲ್ ಗಂಟಲ ನೋವನ್ನು
ಗುಣಪಡಿಸುವುದಿಲ್ಲ, ಆದರೆ ಉಗ್ರಸ್ವರೂಪದ ನೋವನ್ನು ಶಮನ ಮಾಡುತ್ತದೆ. ಇಂಥ ಸ್ಪ್ರೇಗಳಲ್ಲಿ ಶೇ.1.4ರಷ್ಟು ಫೀನಾಲ್ ಇರುತ್ತದೆ. ಹಿತ-ಮಿತ ಫೀನಾಲನ್ನು ನಿಗದಿತ ಅಲ್ಪಕಾಲಾವಧಿಯಲ್ಲಿ ಬಳಸಿದರೆ ಯಾವುದೇ ದೊಡ್ಡ ಸಮಸ್ಯೆಯಾಗುವುದಿಲ್ಲ. ಆದರೆ ಫೀನಾಲಿನ ಸ್ವಯಂ
ವೈದ್ಯಕೀಯವು ನಿಷಿದ್ಧ. 3 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳಿಗೆ ಫೀನಾಲ್‌ಯುಕ್ತ ಸ್ಪ್ರೇ ಬಳಸಬಾರದು.
ಗಂಟಲು ನೋವಿನ ಜತೆಗೆ ಜ್ವರ, ಮೈಕೈ ನೋವು, ವಾಕರಿಕೆ ಅಥವಾ ವಾಂತಿಯಿದ್ದರೆ ಫೀನಾಲ್ ಸ್ಪ್ರೇಯನ್ನು ಬಳಸಬಾರದು. ವೈದ್ಯರನ್ನು ನೋಡಬೇಕು. ಸೋಂಕಿನ ಲಕ್ಷಣವಿದ್ದರೆ ಅವರು ಪ್ರತಿಜೈವಿಕ ಔಷಧಗಳನ್ನು ನೀಡಬಹುದು. ಕೆಲ ಹೆಣ್ಣುಮಕ್ಕಳ ಸೌಂದರ್ಯಪ್ರಜ್ಞೆ ಅಗತ್ಯಕ್ಕಿಂತ
ಹೆಚ್ಚಿರುತ್ತದೆ. ಮುಖದಲ್ಲಿ ಹಳೆಯ ಚರ್ಮದ ಲಕ್ಷಣಗಳು ಕಾಣಬಾರದು, ಚರ್ಮ ಹೊಸದಾಗಿದ್ದು ನಳನಳಿಸುತ್ತಿರಬೇಕು. ಅದಕ್ಕೆ ಅವರು ರಾಸಾಯನಿಕ ಚರ್ಮಸುಲಿತವನ್ನು ಮಾಡಿಸಿಕೊಳ್ಳುವರು. ಈರುಳ್ಳಿ ಸಿಪ್ಪೆಯನ್ನು ತೆಗೆಯುವಂತೆ, ಹಳೆಯ ಚರ್ಮವನ್ನು ಸುಲಿಯಲು ಫೀನಾಲ್ ಯುಕ್ತ ‘ಟ್ರೈಕ್ಲೋರೋ ಅಸಿಟಿಕ್ ಆಸಿಡ್’ ಬಳಸುವರು. ಇಂಥ ಚರ್ಮಸುಲಿತಕ್ಕೆ ಅಮೆರಿಕದ ‘ಎಫ್ ಡಿಎ’ನ ಅನುಮತಿಯಿದೆ. ಹಾಗೆಯೇ ಹಲವು ರೀತಿಯ ಆಹಾರ ಪದಾರ್ಥಗಳು ಹಾಗೂ ಸೌಂದರ್ಯವರ್ಧಕ ಸಾಮಗ್ರಿಗಳು ಹಾಳಾಗದಂತೆ ರಕ್ಷಿಸಲು ಫೀನಾಲ್‌ಯುಕ್ತ ‘ಬ್ಯುಟೈಲೇಟೆಡ್ ಹೈಡ್ರಾಕ್ಸಿ ಟಾಲಿನ್’ (ಬಿಎಚ್‌ಟಿ) ಎಂಬ ರಾಸಾಯನಿಕವನ್ನು ಬಳಸುವುದುಂಟು.
ಆದರೆ ಕೆಲವು ಅಮೆರಿಕನ್ನರು ಈ ಅತ್ಯಲ್ಪ ಪ್ರಮಾಣದ ಫೀನಾಲ್ ಸಹ ಅನಗತ್ಯ ಎಂದು ಭಾವಿಸಿ, ಫೀನಾಲ್‌ಯುಕ್ತ ವಸ್ತುಗಳನ್ನು ಕೊಳ್ಳದಂತೆ
ಎಚ್ಚರವಹಿಸುವರು. ಕೆಲ ಸಂದರ್ಭಗಳಲ್ಲಿ ಮನುಷ್ಯನ ಜೀವಕೋಶದಲ್ಲಿರುವ ಡಿಎನ್‌ಎ, ಆರ್‌ಎನ್‌ಎ ಮತ್ತು ಪ್ರೊಟೀನುಗಳನ್ನು ಪ್ರತ್ಯೇಕಿಸ ಬೇಕಾಗುತ್ತದೆ. ಇದಕ್ಕಾಗಿ ‘ಫೀನಾಲ್, ಕ್ಲೋರೋಫಾರಂ ಹಾಗೂ ಟ್ರೈಕ್ಲೋರೋಮೀಥೇನ್’ಗಳನ್ನು ಬಳಸುವುದುಂಟು. ಹಾಗಾಗಿ ಈ ಅಧ್ಯಯನ ಗಳು ನ್ಯಾಯಾಲಯದಲ್ಲಿನ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಸೂಕ್ತ ತೀರ್ಪನ್ನು ನೀಡಲು ನೆರವಾಗುತ್ತವೆ. ಕಾರ್ಬಾಲಿಕ್ ಸೋಪ್ ಪ್ರಸಿದ್ಧ. ವೈದ್ಯ ವಿದ್ಯಾರ್ಥಿಗಳಾಗಿದ್ದಾಗ ಶವವಿಚ್ಛೇದನ ಮಾಡಿದ ನಂತರ ಕಾರ್ಬಾಲಿಕ್ ಸೋಪಿನಲ್ಲಿ ಕೈಗಳನ್ನು ತೊಳೆದುಕೊಳ್ಳು ತ್ತಿದ್ದೆವು. ‘ರೆಡ್ ಕ್ರಾಸ್’ ಮತ್ತು ‘ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್’ ಮುಂತಾದ ಸಂಸ್ಥೆಗಳು ಬಡದೇಶಗಳಿಗೆ ನೆರವು ನೀಡುವಾಗ ಕಾರ್ಬಾಲಿಕ್ ಸೋಪನ್ನೂ ನೀಡುತ್ತವೆ. ಇದು ಉತ್ತಮ ಕ್ರಿಮಿನಾಶಕ ಎನ್ನುವುದನ್ನು ನಾವು ನೆನಪಿನಲ್ಲಿಡಬೇಕು.
ಹಣ್ಣು, ತರಕಾರಿ ಮತ್ತು ಒಣಬೀಜಗಳಲ್ಲಿರುವ ಫೀನಾಲ್‌ಯುಕ್ತ ಪ್ರತಿ-ಉತ್ಕರ್ಷಕಗಳು (ಆಂಟಿ- ಆಕ್ಸಿಡೆಂಟ್ಸ್) ಕ್ಯಾನ್ಸರನ್ನೂ ಒಳಗೊಂಡಂತೆ ಜೀವನಶೈಲಿಯ ರೋಗಗಳನ್ನು ತಡೆಗಟ್ಟಬಲ್ಲವು. ಅವು ಹೀಗಿವೆ: ರೆಸ್ವೆರೆಟ್ರಾಲ್- ದ್ರಾಕ್ಷಿ, ಕೆಂಪು ದ್ರಾಕ್ಷಾರಸ, ಶೇಂಗಾ (ಹೃದಯ ಸಂರಕ್ಷಕ); ಕ್ವೆರ್ಸಿಟಿನ್- ಈರುಳ್ಳಿ, ಸೇಬು, ಬೆರ್ರಿ (ರೋಗರಕ್ಷಣಾ ಸಾಮರ್ಥ್ಯ ವರ್ಧಕ); ಕರ್ಕ್ಯುಮಿನ್- ಅರಿಶಿನ (ಉರಿಯೂತ ರೋಧಕ, ಕ್ಯಾನ್ಸರ್ ನಿಗ್ರಾಹಕ); ಸ್ಯಾಲಿಸಿಲಿಕ್ ಆಸಿಡ್- ವಿಲ್ಲೋ ಮರದ ತೊಗಟೆ (ಜ್ವರಹಾರಕ, ಉರಿಯೂತ ರೋಧಕ); ಕ್ಯಾಚೆಸಿನ್- ಗ್ರೀನ್ ಟೀ, ಕೋಕೋ (ರಕ್ತನಾಳಗಳ ಆರೋಗ್ಯ ಸಂರಕ್ಷಕ); ಗ್ಯಾಲಿಕ್ ಆಸಿಡ್- ಚಹಾ, ಸುಮಾಕ್, ಗಾಲ್ನಟ್ (ಪ್ರತಿಜೈವಿಕ ಗುಣ); ಎಲಾಜಿಕ್ ಆಸಿಡ್- ದಾಳಿಂಬೆ,
ಸ್ಟ್ರಾಬೆರ್ರಿ (ಕ್ಯಾನ್ಸರ್ ರೋಧಕ); ಥೈಮಾಲ್- ಥೈಮ್ (ಪ್ರತಿಜೈವಿಕ ಗುಣ); ಲ್ಯೂಟೋಲಿನ್- ಸೆಲೆರಿ, ಪಾರ್ಸ್ಲೆ (ಕ್ಯಾನ್ಸರ್ ರೋಧಕ); ಟ್ಯಾನಿಕ್ ಆಸಿಡ್- ಚeಅ, ವೈನ್, ಬೀಜಗಳು (ಪ್ರತಿ ಉತ್ಕರ್ಷಕ).
ಫೀನಾಲ್ ಎರಡಲಗಿನ ಖಡ್ಗ! ಹದವರಿತು ಬಳಸಿದರೆ ಜೀವವನ್ನು ಉಳಿಸುತ್ತದೆ. ಮಿತಿಮೀರಿದರೆ ಜೀವವನ್ನು ತೆಗೆಯುತ್ತದೆ. ಹಾಗಾಗಿ ವಿವೇಚನೆಯೊಡನೆ ಈ ರಾಸಾಯನಿಕಗಳನ್ನು ಬಳಸೋಣ.
ಇದನ್ನೂ ಓದಿ: dr na someshwara