Wednesday, 25th December 2024

Dr N Someshwara Column: ಕ್ಯಾಲಾಬಾರ್‌ ಅವರೆಯ ವಿಷದಿವ್ಯ !

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ಪ್ರಾಚೀನ ಭಾರತದ ನ್ಯಾಯ ಪದ್ಧತಿಯಲ್ಲಿ ಒಬ್ಬ ವ್ಯಕ್ತಿಯ ಪ್ರಾಮಾಣಿಕತೆಯನ್ನು ತಿಳಿಯಲು ಕೆಲವು ಪರೀಕ್ಷೆ ಗಳನ್ನು ನಡೆಸುತ್ತಿದ್ದರು. ಅಗ್ನಿ ಪರೀಕ್ಷೆ, ಜಲ ಪರೀಕ್ಷೆ, ವಿಷ ಪರೀಕ್ಷೆ, ತುಲಾ ಪರೀಕ್ಷೆ, ತೈಲ ಪರೀಕ್ಷೆ, ಸರ್ಪ ಪರೀಕ್ಷೆ, ಗೋಮತಿ ಪರೀಕ್ಷೆ, ತಂಡುಲ ಪರೀಕ್ಷೆ, ಲೋಹ ಪರೀಕ್ಷೆ, ಶಪಥ ಪರೀಕ್ಷೆ, ಪಾನೀಯ ಪರೀಕ್ಷೆ ಇತ್ಯಾದಿ. ಇವುಗಳಲ್ಲಿ ಅಗ್ನಿಪರೀಕ್ಷೆ ಅಥವ ಅಗ್ನಿದಿವ್ಯವು ಎಲ್ಲರಿಗೂ ತಿಳಿದಿರುವಂತಹದ್ದು.

ರಾಮನು ಸೀತೆಯ ಪತಿ ವ್ರತ್ಯವನ್ನು ಅನುಮಾನಿಸಿದಾಗ, ಸೀತೆಯು ಅಗ್ನಿಪರೀಕ್ಷೆಗೆ ಒಳಗಾಗಬೇಕಾಯಿತು. ಅಗ್ನಿಯು ಪ್ರತ್ಯಕ್ಷನಾಗಿ ಸೀತೆಯು ಪರಮಪವಿತ್ರೆ ಎಂದು ಸಾಕ್ಷಿಯನ್ನು ನುಡಿದ ಮೇಲೆ ರಾಮನು ಸೀತೆಯನ್ನು ಒಪ್ಪಿಕೊಂಡ. ಈ ರೀತಿಯ ಪರೀಕ್ಷೆಗಳು ವಾಸ್ತವದಲ್ಲಿ ನಡೆಯುತ್ತಿದ್ದವೆ ಅಥವ ಇವು ಕೇವಲ ಕಲ್ಪನೆಗಳೇ ಎಂದು ಕೆಲವರು ತಕರಾರು ತೆಗೆದದ್ದು ಉಂಟು. ಬಹುಶಃ ಕಳ್ಳನ ಮನಸ್ಸು ಹುಳ್ಳಹುಳ್ಳಗೆ ಎಂಬ ಗಾದೆಯ ಮಾತಿನ ಹಿನ್ನೆಲೆಯಲ್ಲಿ ಮೇಲಿನ ಎಲ್ಲ ಪರೀಕ್ಷೆಗಳು ಅಲ್ಲವಾದರೂ ಕೆಲವಾದರೂ ನಡೆಯುತ್ತಿದ್ದಿರಬಹುದು. ಉದಾಹರಣೆಗೆ ತಂಡುಲ ಪರೀಕ್ಷೆ. ಇಲ್ಲಿ ಆರೋಪಕ್ಕೆ ಒಳಗಾದವನು ಒಂದು ಮುಷ್ಟಿ ಅಕ್ಕಿಯನ್ನು ಜಗಿದು ತಿನ್ನಬೇಕಾಗಿತ್ತು. ಅವನು
ನಿಜವಾಗಿಯೂ ಅಪರಾಽಯಾಗಿದ್ದರೆ, ಭಯದ ಕಾರಣ ಅವನ ಬಾಯಿಯು ಒಣಗಿರುತ್ತದೆ. ಹಾಗಾಗಿ ಜಗಿದ ಅಕ್ಕಿ
ಯನ್ನು ಉಗುಳಿದಾಗ ಅದು ಒದ್ದೆಯಾಗಿರುವ ಬದಲು ಒಣಗಿರುವ ಸಾಧ್ಯತೆಯಿರುತ್ತದೆ.

ಅಪರಾಧ ಮಾಡಿರದವನಿಗೆ, ಯಾವುದೇ ಭಯವು ಇರದ ಕಾರಣ, ಅವನ ಬಾಯಿಯಲ್ಲಿ ಲಾಲಾ ರಸವು ಸಹಜವಾಗಿ ಉತ್ಪಾದನೆಯಾಗಿ, ಜಗಿದ ಅಕ್ಕಿಯಲ್ಲಿ ಸಾಕಷ್ಟು ಲಾಲಾರಸವಿರುತ್ತದೆ. ನ್ಯಾಯಾಧಿಪತಿಗಳು ಅವನನ್ನು ನಿರಪರಾಧಿ ಎಂದು ಗುರುತಿಸುತ್ತಿದ್ದರು.

ವಿಷಪರೀಕ್ಷೆ: ಆಫ್ರಿಕಾ ದೇಶದ ನೈಜೀರಿಯ ಪ್ರಾಂತದ ಪೂರ್ವದಿಕ್ಕಿನ ಪ್ರದೇಶವನ್ನು ಓಲ್ಡ್ ಕ್ಯಾಲಬರ್ ಎಂದು
ಕರೆಯುತ್ತಿದ್ದರು. ಇಲ್ಲಿ ಎಪಿಕ್ ಜನಾಂಗದವರು ವಾಸ ಮಾಡುತ್ತಿದ್ದರು. ಆಫ್ರಿಕ ದೇಶದಲ್ಲಿ ಮಾಟ ಅಥವ ವಿಚ್
ಕ್ರಾಫ್ಟ್ ಸಾಮಾನ್ಯವಾಗಿತ್ತು. ಅಲ್ಲಿನ ಸಮುದಾಯವು ಮಾಟ ಮಾಡುವವರನ್ನು ಉಗ್ರವಾಗಿ ಶಿಕ್ಷಿಸುತ್ತಿತ್ತು. ಆದರೆ ಮಾಟವನ್ನು ಮಾಡುವವರು ತಾವು ಮಾಟಗಾರ ಅಥವಾ ಮಾಟಗಾತಿ ಎನ್ನುವ ವಿಚಾರವನ್ನು ಸುಲುಭವಾಗಿ ಒಪ್ಪಿಕೊಳ್ಳುತ್ತಿರಲಿಲ್ಲ. ಹಾಗಾಗಿ ಮಾಟದ ಆರೋಪವನ್ನು ಹೊತ್ತವರು ಸಮುದಾಯದ ನ್ಯಾಯಸಭೆಯಲ್ಲಿ ಹಾಜ ರಾಗಬೇಕಾಗಿತ್ತು. ವಿಚಾರಣೆಯ ನಂತರ ಆರೋಪಿಯು ವಿಷಪರೀಕ್ಷೆಗೆ ಸಿದ್ಧವಾಗಬೇಕಾಗಿತ್ತು. ಸಮುದಾಯದ ಮುಖ್ಯಸ್ಥರು ಕ್ಯಾಲಾ ಬಾರ್ ಅವರೆಯ (ಫೈಸೋಸ್ಟಿಗ್ಮ ವೆನಿನೋಸಮ್) ಬೀಜಗಳನ್ನು ತರುತ್ತಿದ್ದರು. ಇವು ಮಹಾನ್ ವಿಷಕಾರಿ ಬೀಜಗಳು.

ಅವನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ನೀರಿನಲ್ಲಿ ಕಲೆಸುತ್ತಿದ್ದರು. ಅವನ್ನು ಆರೋಪಿಯು ಕುಡಿಯಬೇಕಾಗಿತ್ತು. ಆರೋಪಿಯು ಅಪರಾಧಿಯಾಗಿದ್ದರೆ ಅವನು ಕ್ಯಾಲಬಾರ್ ಅವರೆಯ ವಿಷಪ್ರಭಾವಕ್ಕೆ ತುತ್ತಾಗಿ ಸಾಯುತ್ತಿದ್ದ. ಅಪರಾಧಿಯಲ್ಲದಿದ್ದರೆ ಆತ ಬದುಕುಳಿಯುತ್ತಿದ್ದ. ನಿರಪರಾಧಿಯು ದೈವವು ನನ್ನನ್ನು ರಕ್ಷಿಸುತ್ತದೆ ಎಂಬ ನಂಬಿಕೆ ಯಲ್ಲಿ ನೀರನ್ನು ಗಟಗಟನೆ ಕುಡಿಯುತ್ತಿದ್ದ.

ದೇಹದಲ್ಲಿ ಒಮ್ಮೆಲೆ ವಿಷವು ಪ್ರಭಾವವು ಹೆಚ್ಚಿದಾಗ, ದೇಹವು ವಾಂತಿ ಮತ್ತು ಭೇದಿಯ ಮೂಲಕ ವಿಷವನ್ನು ವಿಸರ್ಜಿಸುತ್ತಿತ್ತು. ಯಾರು ನಿಜಕ್ಕೂ ಅಪರಾಧವನ್ನು ಮಾಡಿರುತ್ತಾರೋ, ಅವರಿಗೆ ಒಳಗೊಳಗೆ ಭಯ! ನಿಧಾನಕ್ಕೆ ವಿಷ ನೀರನ್ನು ತಡೆದು ತಡೆದು ಕುಡಿದಾಗ, ವಿಷವು ಕರುಳಿನ ಮೂಲಕ ಸಾವಕಾಶವಾಗಿ ರಕ್ತಪ್ರವಾಹವನ್ನು ಸೇರು
ತ್ತಿತ್ತು. ಅವರು ಸಾಯುತ್ತಿದ್ದರು. ಈ ವಿಷಪರೀಕ್ಷೆಯು ಮಾಟಗಾರಿಕೆಯ ಜೊತೆಯಲ್ಲಿ ಕಳ್ಳತನ, ಕೊಲೆ ಮತ್ತು ಹಾದರದ ಪ್ರಕರಣಗಳಲ್ಲಿಯೂ ನಡೆಯುತ್ತಿತ್ತು.

1846ರಲ್ಲಿ ಬ್ರಿಟಿಶ್ ಮಿಷನರೀಸ್ ಇಲ್ಲಿಗೆ ಬಂದರು. ಈ ವಿಷಪರೀಕ್ಷೆಯ ಋಜುತ್ವದಲ್ಲಿ ಅವರಿಗೆ ನಂಬಿಕೆ ಬರಲಿಲ್ಲ.
ಪ್ರತಿ ವರ್ಷ ಸರಾಸರಿ ೧೨೦ ಜನರು ಹೀಗೆ ಸಾಯುವುದನ್ನು ನೋಡಿ, ಈ ಅವೈಜ್ಞಾನಿಕ ಪದ್ದತಿಯನ್ನು ರದ್ದುಗೊಳಿಸಿ ದರು. ಮಿಷನರಿಗಳು ಈ ಕ್ಯಾಲಬಾರ್ ಅವರೆ ಬೀಜಗಳನ್ನು ಸ್ಕಾಟ್ಲಂಡಿಗೆ ಕೊಂಡೊಯ್ದರು. 1840ರಲ್ಲಿ ಜರ್ಮನ್ ಸಸ್ಯಶಾಸ್ತ್ರಜ್ಞ ಜೊಹಾನ್ ಜಾರ್ಜ್ ಕ್ರಿಶ್ಚಿಯನ್ ಲೆಹ್ಮನ್ (1792-1860) ಈ ಕ್ಯಾಲಬಾರ್ ಅವರೆಗೆ ವೈಜ್ಞಾನಿಕವಾಗಿ -ಸೋಸ್ಟಿಗ್ಮ ವೆನಿನೋಸಮ್ ಎಂದು ನಾಮಕರಣವನ್ನು ಮಾಡಿದ. 1855. ರಾಬರ್ಟ್ ಕ್ರಿಸ್ಟಿಸನ್ (1797-1882) ಎಂಬ ವಿಷವಿಜ್ಞಾನಿಯು ಈ ಅವರೆಯನ್ನು ಸ್ವಯಂ ತಿಂದು ಅದರ ವಿಷ ಸಾಮರ್ಥ್ಯವನ್ನು ಪರೀಕ್ಷಿಸಿದ.

ಬೀಜವನ್ನು ಸ್ವಲ್ಪವೇ ತಿಂದಿದ್ದ ಕಾರಣ, ಹೇಗೋ ಬದುಕುಳಿದ. 1863. ಈತನ ಶಿಷ್ಯ ಥಾಮಸ್ ರಿಚರ್ಡ್ ಫ್ರೇಸರ್ (1841-1920). ಇವನು ಕ್ಯಾಲಾಬಾರ್ ಅವರೆಯ ಸಾರವನ್ನು ತೆಗೆದ. ಆ ಸಾರವನ್ನು ಮನುಷ್ಯನ ದೇಹದ ವಿವಿಧ ಅಂಗದ ಮೇಲೆ ಪ್ರಯೋಗಿಸುತ್ತಾ ಬಂದ. ಕೊನೆಗೆ ಅದು ಕಣ್ಣಿನ ಪಾಪೆಯನ್ನು ಕುಗ್ಗಿಸುವುದನ್ನು ಗಮನಿಸಿದ. 1865. ಜರ್ಮನಿಯ ರಾಸಾಯನ ತಜ್ಞರಾದ ಜೂಲಿಯಸ್ ವಾನ್ ಜಾಬ್ಸ್ಟ್ (1839-1920) ಮತ್ತು ಆಸ್ವಾಲ್ಡ್ ಹೆಸ್ಸೆ (1835-1917) ರವರು ಕ್ಯಾಲಾಬಾರ್ ಅವರೆಯಲ್ಲಿರುವ ಪಟು ರಾಸಾಯನಿಕ -ಸೋಸ್ಟಿಜಗ್ಮೈನ್ (ಫೈಸ=ಮೂತ್ರಾಶಯ; ಬೀಜದ ಆಕಾರವು ಮೂತ್ರಾಶಯವನ್ನು ಹೋಲುತ್ತದೆ + ಸ್ಟಿಗ್ಮ = ಹೂವಿನ ಶಲಾಕಾಗ್ರ) ನನ್ನು ಪ್ರತ್ಯೇಕಿಸಿದರು. ಎಡಿನ್ಬರೋದಲ್ಲಿ ಕೆಲಸ ಮಾಡುತ್ತಿದ್ದ ಡೌಗ್ಲಾಸ್ ಮೋರೆ ಕೂಪರ್ ಲ್ಯಾಂಬ್ ಆರ್ಜಿಲ್ ರಾಬಟ್ ಸನ್ (1837- 1909) ಎಂಬ ಸ್ಕಾಟಿಶ್ ನೇತ್ರವೈದ್ಯ ಹಾಗೂ ಶಸ್ತ್ರವೈದ್ಯನಿದ್ದ.

ಇವನು ಕ್ಯಾಲಬಾರ್ ಅವರೆಯ ಸಾರವು ಕಣ್ಣಿನ ಪಾಪೆಯು ಕಿರಿದಾಗಿಸುವ ಬಗ್ಗೆ ಒಂದು ವೈದ್ಯಕೀಯ ಪ್ರಬಂಧ ವನ್ನು ಬರೆದು ಪ್ರಕಟಿಸಿದ. 1875ರಲ್ಲಿ ಜರ್ಮನ್ ನೇತ್ರವೈದ್ಯನು ಲಡ್ವಿಗ್ ಲೇಕರ್ (1839-1909) ಫೈಸೋಸ್ಟಿಗ್ಮೈನ್ ಗ್ಲಾಕೋಮ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಎನ್ನುವುದನ್ನು ತೋರಿಸಿಕೊಟ್ಟ.

ಗ್ಲಾಕೋಮ: ಗ್ಲಾಕೋಮ ಎನ್ನುವುದು ಕಣ್ಣಿಗೆ ಸಂಬಂಧಪಟ್ಟ ಹಲವು ರೋಗಗಳಿಗೆ ನೀಡಿರುವ ಸಮಷ್ಟಿ ಹೆಸರು. ಕಣ್ಣು ಗುಡ್ಡೆಯೊಳಗೆ ಜಲದ್ರವವು (ಏಕ್ವಿಯಸ್ ಹ್ಯೂಮರ್) ಉತ್ಪಾದನೆಯಾಗುತ್ತಿರುತ್ತದೆ. ಇದು ಕಣ್ಣಿನ ಮಸೂರ ಅಥವ ಲೆನ್ಸ್ ಹಾಗೂ ಪಾರಪಟಲ ಅಥವ ಕಾರ್ನಿಯಕ್ಕೆ ಪೋಷಕಾಂಶಗಳನ್ನು ಒದಗಿಸಿ, ಹೊರ ಹರಿಯುತ್ತಿರುತ್ತದೆ. ಈ ದ್ರವದ ಹೊರಹರಿಯುವಿಕೆಗೆ ಏನಾದರೂ ತೊಂದರೆಯಾದಲ್ಲಿ, ಉತ್ಪಾದನೆಯಾದ ದ್ರವವು ಅಲ್ಲಿಯೇ ಸಂಗ್ರಹ ವಾಗಿ ಕಣ್ಣುಗುಡ್ಡೆಯ ಒಳಗಿನ ಒತ್ತಡವು ಅಧಿಕವಾಗುತ್ತದೆ.

ಈ ಅಧಿಕ ಒತ್ತಡವು ಅಕ್ಷಿನರದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ನೋವು, ಕಣ್ಣು ಕೆಂಪಾಗುವುದು, ದೃಷ್ಟಿ
ಮಂದವಾಗುವುದು, ಬೆಳಕಿನ ಸುತ್ತ ಪ್ರಭಾವಳಿಯು ಕಂಡುಬರುವುದು ಇತ್ಯಾದಿ ರೋಗಲಕ್ಷಣಗಳು ಕಾಣಬಹುದು.
ಇದೊಂದು ತುರ್ತು ವೈದ್ಯಕೀಯ ಪರಿಸ್ಥಿತಿ. ತಕ್ಷಣವೇ ನೇತ್ರವೈದ್ಯರನ್ನು ಕಂಡು ಚಿಕಿತ್ಸೆಯನ್ನು ಕೊಡಿಸಬೇಕು.
ಇಲ್ಲದಿದ್ದರೆ ದೃಷ್ಟಿಯು ಶಾಶ್ವತವಾಗಿ ನಾಶವಾಗುವ ಸಾಧ್ಯತೆ ಯಿರುತ್ತದೆ. ಕೆಲವು ನಮೂನೆಯ ಗ್ಲಾಕೋಮದಲ್ಲಿ ನೋವು ಕಾಣದೆಯೂ ಇರಬಹುದು.

ಅಧಿಮಂತ: ಗ್ಲಾಕೋಮ, ಅನಾದಿ ಕಾಲದ ರೋಗ. ಮನುಷ್ಯನ ಇತಿಹಾಸದಷ್ಟೇ ಪುರಾತನವಾದದ್ದು. ಗ್ಲಾಕೋಮ ವನ್ನು ಹೋಲುವ ರೋಗಲಕ್ಷಣಗಳು ಪ್ರಾಚೀನ ಈಜಿಪ್ಟ್ ನಾಗರಿಕತೆಗೆ ಸಂಬಂಧಿಸಿದ ಈಬರ್ಸ್ ಪ್ಯಾಪಿರಸ್‌ನಲ್ಲಿ (ಕ್ರಿ.ಪೂ.1550) ದೊರೆಯುತ್ತದೆ. ಸುಶ್ರುತ ಮಹರ್ಷಿಯು (ಕ್ರಿ.ಪೂ.800-ಕ್ರಿ.ಪೂ.700) ತಮ್ಮ ಸುಶ್ರುತ ಸಂಹಿತೆಯಲ್ಲಿ ಗ್ಲಾಕೋಮವನ್ನು ಅಧಿಮಂತ ಎಂದು ಕರೆದಿದ್ದಾರೆ. ಕಣ್ಣಿನಲ್ಲಿ ವಿಪರೀತ ನೋವು ಕಂಡುಬರುತ್ತದೆ. ತಿಮಿರವು ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ಕಣ್ಣುಗುಡ್ಡೆಯ ಒಳಗೆ ಒಂದು ರೀತಿಯ ಭಾರ ಹೆಚ್ಚುವ ಅನುಭವವಾಗುತ್ತದೆ. ಚಿಕಿತ್ಸೆಯನ್ನು ಸಕಾಲದಲ್ಲಿ ನೀಡದಿದ್ದರೆ, ಕೊನೆಗೆ ದೃಷ್ಟಿಯು ಸಂಪೂರ್ಣವಾಗಿ ನಾಶವಾಗುತ್ತದೆ. ಸುಶ್ರುತರು ನಾನಾ ಚಿಕಿತ್ಸೆಗಳನ್ನು ಸೂಚಿಸಿದರೂ ಶಸಚಿಕಿತ್ಸೆಯನ್ನು ಮಾತ್ರ ಸೂಚಿಸದಿರುವುದು ತುಸು ಆಶ್ಚರ್ಯವನ್ನು ಉಂಟು ಮಾಡುತ್ತದೆ.

ಹಿಪ್ಪೋಕ್ರೇಟ್ಸ್ (ಕ್ರಿ.ಪೂ.460-ಕ್ರಿ.ಪೂ.370), ಮಧ್ಯ ವಯಸ್ಕರ ಕಣ್ಣುಗಳ ಪಾಪೆಯು ಹಸಿರು-ನೀಲಿ ಬಣ್ಣವನ್ನು
ಅಥವ ಬೂದು ಬಣ್ಣ ತಳೆಯುವುದನ್ನು ಗಮನಿಸಿದ. ಇದನ್ನು ಗ್ಲೈಕೋಸಿಸ್ ಎಂದು ಕರೆದ. ಇದು ಬಹುಶಃ ಗ್ಲಾಕೋಮದ ಕೊನೆಯ ಹಂತವಾಗಿರಬಹುದು ಅಥವ ಕಣ್ಣುಪೊರೆಯಾಗಿರಬಹುದು.

ರೋಮನ್ ವೈದ್ಯ ಗ್ಯಾಲನ್ (ಕ್ರಿ.ಶ.130-ಕ್ರಿ. ಶ.200) ಅಕ್ಷಿನರದ ಮಹತ್ವವನ್ನು ಅರಿತಿದ್ದ. ಅಕ್ಷಿನರಕ್ಕೆ ಹಾನಿಯಾದರೆ, ದೃಷ್ಟಿ ನಾಶವಾಗುವುದು ಅವನಿಗೆ ತಿಳಿದಿತ್ತು. ಆದರೆ ಗ್ಲಾಕೋಮವು ಅಂಧತ್ವಕ್ಕೆ ಕಾರಣವಾಗುವುದು ಅವನಿಗೆ ತಿಳಿದಿರಲಿಲ್ಲ. ಅವಿಸೆನ್ನ ಅಥವ ಇಬ್ನ್ ಸಿನ (950-1037) ಕ್ಯಾನನ್ ಆಫ್ ಮೆಡಿಸಿನ್ ಎಂಬ ವೈದ್ಯಕೀಯ ಗ್ರಂಥವನ್ನು ಬರೆದ.

ಇದರಲ್ಲಿ ಗ್ಲಾಕೋಮವನ್ನು ಹೋಲುವ ನೇತ್ರರೋಗದ ವಿವರಣೆಯನ್ನು ನೀಡಿದ. ಇವನು ಗ್ರೀಕರ ನಾಲ್ಕು ರಸಗಳ ಸಿದ್ಧಾಂತವನ್ನು ನಂಬಿದ್ದ ಕಾರಣ, ರಸಗಳ ಏರುಪೇರು ಕಣ್ಣಿನ ತೊಂದರೆಗೆ ಕಾರಣವೆಂದ. ಮಧ್ಯಯುಗದ ಯೂರೋಪಿಯನ್‌ ವೈದ್ಯಕೀಯ ಗ್ರಂಥಗಳೆಲ್ಲ ಗ್ಲಾಕೋಮ ಹಾಗೂ ಕಣ್ಣಿನ ಪೊರೆ (ಕ್ಯಾಟರಾಕ್ಟ್) ಗಳ ನಡುವೆ ಇರುವ ವ್ಯತ್ಯಾಸವನ್ನು ನಿಖರವಾಗಿ ಗುರುತಿಸದೆ, ಸುಮ್ಮನೇ ಗ್ಲಾಕೋಸಿಸ್ ಎಂದು ಕರೆದರು.

ಯೂರೋಪಿನಲ್ಲಿ ನವೋದಯ ಕಾಲವು ಮಾನವನ ಕಣ್ಣನ್ನು ಒಳಗೊಂಡಂತೆ ಇಡೀ ಅಂಗರಚನೆಗೆ ಆದ್ಯತೆಯು
ದೊರೆಯಿತು. ಕ್ರಮಬದ್ಧವಾದ ಅಧ್ಯಯನವು ನಡೆಯಿತು. ಜಿಯೋವನ್ನಿ ಬ್ಯಾಟಿಸ್ಟ ಮೋರ್ಗ್ಯಾಗ್ನಿ (1682-1771)
ಗ್ಲಾಕೋಮದಿಂದ ಸತ್ತವರ ಕಣ್ಣನ್ನು ಪರೀಕ್ಷೆಯನ್ನು ಮಾಡಿದ. ಅವರ ಕಣ್ಣುಗಳು ಗಟ್ಟಿಯಾಗಿ ಇರುವುದನ್ನು ಗುರುತಿಸಿದ. ಕಣ್ಣುಗುಡ್ಡೆಯಲ್ಲಿದ್ದ ಅಧಿಕ ಒತ್ತಡವೇ, ಕಣ್ಣಿನ ಈ ಗಟ್ಟಿತನಕ್ಕೆ ಕಾರಣವಾಗಿತ್ತು. ಹಾಗಾಗಿ ಕಣ್ಣು ಗುಡ್ಡೆಯ ಗಟ್ಟಿತನವನ್ನು ಪರೀಕ್ಷಿಸುವುದರ ಮೂಲಕ ಗ್ಲಾಕೋಮವನ್ನು ಪತ್ತೆಹಚ್ಚುವ ಮೊದಲ ಪ್ರಯತ್ನಗಳು ನಡೆದವು. ೧೮ನೆಯ ಶತಮಾನದ ಹೊತ್ತಿಗೆ ಕಣ್ಣಿನ ರಚನೆ ಹಾಗೂ ಕಾರ್ಯದ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿಗಳು ತಿಳಿದು ಬಂದವು ಹಾಗಾಗಿ ಅವರು ಗ್ಲಾಕೋಮ ಮತ್ತು ಕಣ್ಣುಪೊರೆಗಳೆರಡು ಪ್ರತ್ಯೇಕ ನೇತ್ರ ಸಮಸ್ಯೆಗಳೆಂದು ಅರಿತರು. ಹಾಗಾಗಿ ಅವುಗಳನ್ನು ಪ್ರತ್ಯೇಕವಾಗಿ ಗುರುತಿಸಿ ಚಿಕಿತ್ಸೆಯನ್ನು ನೀಡಲಾರಂಭಿಸಿದರು.

ಫೈಸೋಸ್ಟಿಗ್ಮೈನ್: ನಮ್ಮ ನರಗಳು ತಮ್ಮ ಕೆಲಸ ಕಾರ್ಯಗಳನ್ನು ನಡೆಸಲು ಅಸಿಟೈಲ್‌ಕೋಲಿನ್ ಎಂಬ ನರರಾಸಾಯನಿಕವನ್ನು ಬಳಸುತ್ತದೆ. ಅಸಿಟೈಲ್‌ಕೋಲಿನ್ ಹಿತ-ಮಿತ ಪ್ರಮಾಣದಲ್ಲಿ ಉತ್ಪಾದನೆಯಾಗಬೇಕು. ತನ್ನ ಕೆಲಸವನ್ನು ಮುಗಿಸಿದ ಕೂಡಲೇ ಹೆಚ್ಚುವರಿ ಅಸಿಟೈಲ್‌ಕೋಲಿನ್ ವಿಲಯನವಾಗಬೇಕು. ಈ ವಿಲಯನ ಕಾರ್ಯವನ್ನು ಸಕಾಲದಲ್ಲಿ ಕಾರ್ಯರೂಪಕ್ಕೆ ತರಲು ಅಸಿಟೈಲ್‌ಕೋಲಿನ್‌ಎಸ್ಟರೇಸ್ ಎನ್ನುವ ಕಿಣ್ವವಿರುತ್ತದೆ. ಅಸಿಟೈಲ್ ಕೋಲಿನ್ ಕಣ್ಣುಗುಡ್ಡೆಯೊಳಗಿರುವ ಹೆಚ್ಚುವರಿ ದ್ರವವು ಹೊರಹರಿಯುವುದಕ್ಕೆ ಅವಕಾಶವನ್ನು ಮಾಡಿಕೊಡುತ್ತದೆ.

ಹಾಗಾಗಿ ಕಣ್ಣುಗುಡ್ಡೆಯ ಒಳಗೆ ಒತ್ತಡ ಹಿತ-ಮಿತ ಪ್ರಮಾಣದಲ್ಲಿರುತ್ತದೆ. ಅಸಿಟೈಲ್ ಕೋಲಿನ್‌ಎಸ್ಟರೇಸ್ ಅಽಕ ಪ್ರಮಾಣದಲ್ಲಿ ಉತ್ಪಾದನೆಯಾದಾಗ, ಅದು ಅಸಿಟೈಲ್‌ಕೋಲಿನ್‌ಗೆ ತನ್ನ ಕೆಲಸವನ್ನು ಮಾಡಲು ಅವಕಾಶವನ್ನೇ ಕೊಡದೆ ಅದನ್ನು ನಾಶಪಡಿಸುತ್ತದೆ. ಆಗ ಕಣ್ಣುಗುಡ್ಡೆಯೊಳಗೆ ಇರುವ ಹೆಚ್ಚುವರಿ ದ್ರವವು ಹೊರ ಹರಿಯಲಾಗದೆ, ಅಲ್ಲೇ ಸಂಗ್ರಹವಾಗಿ ಕಣ್ಣುಗುಡ್ಡೆಯೊಳಗೆ ಒತ್ತಡವನ್ನು ಹೆಚ್ಚಿಸಿ ಗ್ಲಾಕೋಮಕ್ಕೆ ಕಾರಣವಾಗುತ್ತದೆ.

ಫೈಸೋಸ್ಟಿಗ್ಮೈನ್ ಈ ಹಠಮಾರಿ ಅಸಿಟೈಲ್‌ಕೋಲಿನ್ ಎಸ್ಟರೇಸ್‌ನ್ನು ಹದ್ದುಬಸ್ತಿನಲ್ಲಿಟ್ಟು, ಅದು ಅಸಿಟೈಲ್‌ ಕೋಲಿನ್ ನನ್ನು ಅಕಾಲದಲ್ಲಿ ನಾಶಪಡಿಸದಂತೆ ತಡೆಗಟ್ಟುತ್ತದೆ. ಆಗ ಅಸಿಟೈಲ್‌ಕೋಲಿನ್ ತನ್ನ ಸಹಜ ಕೆಲಸ ಕಾರ್ಯವನ್ನು ನಡೆಸಲು ಅವಕಾಶ ದೊರೆಯುತ್ತದೆ. ಕಣ್ಣಿನಲ್ಲಿರುವ ಹೆಚ್ಚುವರಿ ದ್ರವವು ಹೊರಹರಿಯುತ್ತದೆ. ಹೀಗೆ ಆಫ್ರಿಕದಲ್ಲಿದ್ದ ಕ್ಯಾಲಬಾರ್ ಅವರೆಯ ರಸದಲ್ಲಿದ್ದ ಹಾಗೂ ಜಾಬ್ಸ್ಟ್ ಮತ್ತು ಹೆಸ್ಸೆ ಪ್ರತ್ಯೇಕಿಸಿದ -ಸೋಸ್ಟಿಗ್ಮೈನ್ ಲೆಕ್ಕವಿಲ್ಲದಷ್ಟು ಜನರ ಅಂಧತ್ವವನ್ನು ನಿವಾರಿಸಲು ಶಕ್ತವಾದ ಕಥೆಯು ನಂಬಲು ಕಷ್ಟವಾಗಿದೆ. ಇಂದಿನ ದಿನಗಳ ಗ್ಲಾಕೋಮ ಚಿಕಿತ್ಸೆಯಲ್ಲಿ -ಸೋಸ್ಟಿಗ್ಮೈನಿಗೆ ಸ್ಥಾನವಿಲ್ಲ. ಏಕೆಂದರೆ ಅದಕ್ಕಿಂತಲೂ ಪರಿಣಾಮಕಾರಿ ಹಾಗೂ ಸುರಕ್ಷಿತವಾದ ಪೈಲೋಕಾರ್ಪೈನ್ ಎಂಬ ಔಷಧವು ಲಭ್ಯವಿದೆ. ಇಂದು ಗ್ಲಾಕೋಮವನ್ನು ನಿಗ್ರಹಿಸಬಲ್ಲ ಆಂಟಿ ಗ್ಲಾಕೋಮ ಡ್ರಗ್ಸ್ ದೊರೆಯುತ್ತಿವೆ. ತಿಮೋಲಾಲ್ ನಂತಹ ಬೀಟ-ಬ್ಲಾಕರುಗಳು ಉಪಯುಕ್ತ.

ಪ್ರಾಸ್ಟಾಗ್ಲಾಂಡಿನ್ ಅನಲಾಗ್ಸ್, ಕಾರ್ಬಾನಿಕ್ ಅನ್‌ಹೈಡ್ರೇಸ್ ಇನ್‌ಹಿಬಿಟಾರ್ಸ್ ಮುಂತಾದ ಸುರಕ್ಷಿತ ಔಷಧಗಳು ದೊರೆಯುತ್ತಿವೆ. ಹಾಗೆಯೇ ಶಸಚಿಕಿತ್ಸೆಗಳೂ ಲಭ್ಯವಿವೆ. ಹಾಗಾಗಿ ನೇತ್ರವೈದ್ಯರು ಯಾವ ನಮೂನೆಯ ಗ್ಲಾಕೋಮ ವಿದೆ ಹಾಗೂ ತೀವ್ರತೆಯು ಯಾವ ಪ್ರಮಾಣದಲ್ಲಿದೆ ಎನ್ನುವುದನ್ನು ಆಧರಿಸಿ, ಸೂಕ್ತ ಚಿಕಿತ್ಸೆಯನ್ನು ನೀಡುತ್ತಾರೆ.

ಇಂದು ಫೈಸೋಸ್ಟಿಗ್ಮೈನ್‌ನನ್ನು ಗ್ಲಾಕೋಮ ಚಿಕಿತ್ಸೆಯಲ್ಲಿ ಬಳಸದಿದ್ದರೂ, ಅಸಿಟೈಲ್‌ಕೋಲಿನ್‌ನನ್ನು ನಾಶ ಪಡಿಸುವ ಸುಮಾರು ೮೦೦ಕ್ಕೂ ಹೆಚ್ಚಿನ ರಾಸಾಯನಿಕಗಳ ವಿಷಚಿಕಿತ್ಸೆಯಲ್ಲಿ (ಆಂಟಿಕೋಲಿನೆರ್ಜಿಕ್ ಪಾಯ್ಸ ನಿಂಗ್) ಬಳಸಬಹುದು. ಹಾಗೆಯೇ ಅಮಿತಾಬ್ ಬಚ್ಚನ್‌ನನ್ನು ಕಾಡಿದ ಮಯಾಸ್ತೀನಿಯ ಗ್ರಾವಿಸ್ ಕಾಯಿಲೆ ಯಲ್ಲೂ ಬಳಸಬಹುದು.

ಇದನ್ನೂ ಓದಿ: Dr N Someshwara Column: ಔಷಧವಲ್ಲ, ಇದು ಪ್ರತ್ಯೇಕ ವಿಷ !