Saturday, 23rd November 2024

Dr N Someswara Column: ಇದು ಸಯನೇಡಿಗಿಂತ ತೀವ್ರ ವಿಷ !

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ನಮಗೆ ಪೊಟಾಷಿಯಂ ಸಯನೇಡ್ ಗೊತ್ತು. ಇದು ಉಗ್ರವಿಷ. ಸಾಮಾನ್ಯವಾಗಿ ಭಯೋತ್ಪಾದಕರು ಸಯನೇಡ್ ಗುಳಿಗೆಗಳನ್ನು ತಮ್ಮಲ್ಲಿ ಇಟ್ಟುಕೊಂಡಿದ್ದು, ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳುವ ಸಮಯದಲ್ಲಿ ಆ ಗುಳಿಗೆಯನ್ನು ನುಂಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಇದಕ್ಕೆ ಉತ್ತಮ ಉದಾಹರಣೆ ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬೇಕಾಗಿದ್ದ ಶಿವರಾಸನ್. ಅರ್ಧ
ಗಂಟೆಯಲ್ಲಿ ಆತ ಮರಣಿಸಿದ. ಈ ಸಯನೇಡಿಗಿಂತಲೂ 1000-10000 ಪಟ್ಟು ತೀಕ್ಷ್ಣವುಳ್ಳ ವಿಷವಿದೆ. ಅದುವೇ
‘ಉಕ್ಕರಿ ಮೀನಿನ ವಿಷ’. ಇದನ್ನು ‘ಪಫರ್ ಫಿಶ್’ ಎನ್ನುವರು. ಈ ಮೀನು ಗಾಳಿಯನ್ನು ತನ್ನ ಉದರದಲ್ಲಿ ಹಿಡಿದಿಟ್ಟು
ಕೊಂಡು ದುಂಡಗೆ ಉಬ್ಬಿ ನಿಲ್ಲುತ್ತದೆ. ಹಾಗಾಗಿ ಇದನ್ನು ಬ್ಲೋ ಫಿಶ್, ಗ್ಲೋಬ್ ಫಿಶ್, ಬಲೂನ್ ಫಿಶ್, ಬಬಲ್ ಫಿಶ್,
ಸ್ವೆಲ್ ಫ಼ಿಶ್ ಎಂದೆಲ್ಲ ಕರೆಯುವುದುಂಟು. ಇದರಲ್ಲಿ ಸುಮಾರು 100 ಪ್ರಭೇದಗಳಿವೆ. ಇದು ಅಟ್ಲಾಂಟಿಕ್, ಪೆಸಿಫಿಕ್ ಹಾಗೂ ಹಿಂದುಮಹಾಸಾಗರದಲ್ಲಿ ವಾಸಿಸುತ್ತವೆ.

ಜಪಾನಿ ಭಾಷೆಯಲ್ಲಿ ಈ ಉಕ್ಕರಿ ಮೀನಿಗೆ ಹಾಗೂ ಆ ಮೀನಿನಿಂದ ತಯಾರಿಸುವ ಭಕ್ಷ್ಯಕ್ಕೆ ‘ಫುಗು’ ಎಂಬ ಹೆಸರಿದೆ.
ಕ್ರಿ.ಪೂ.೩೦೦ರ ಕಾಲಕ್ಕೆ ಸೇರಿದ ಚೀನಿ ವೈದ್ಯಕೀಯ ಗ್ರಂಥಗಳು ಫೂಗು ಅತ್ಯಂತ ಅಪಾಯಕಾರಿಯಾದ ಮೀನು,
ಇದನ್ನು ತಿನ್ನಬಾರದು, ತಿಂದವರು ಹೇಗೆಲ್ಲ ಯಾತನೆಪಟ್ಟು ಸಾಯುತ್ತಾರೆ ಎನ್ನುವುದನ್ನು ವರ್ಣಿಸುತ್ತವೆ. ಆದರೆ ಇದು ಅತ್ಯಂತ ರುಚಿ ರುಚಿಯಾದ ಮೀನು. ಇದನ್ನು ತಿನ್ನಲು ಜನರು ಹಾತೊರೆಯುತ್ತಾರೆ. ಇದೇ ಅವಧಿಯ ಜಪಾನಿ
ಬರಹಗಳು ಉಕ್ಕರಿ ಮೀನಿನಿಂದ ತಿನಿಸನ್ನು ತಯಾರಿಸುವುದು ಒಂದು ವಿಜ್ಞಾನವೂ ಹೌದು, ಕಲೆಯೂ ಹೌದು ಎಂದು ವರ್ಣಿಸುತ್ತವೆ. ಜಪಾನ್ ದೇಶವನ್ನು ‘ಎಡೊ ವಂಶಜರು’ ಆಳುತ್ತಿದ್ದಾಗ (1603-1868) ಫುಗುವನ್ನು ತಿನ್ನಲೇ ಬಾರದು, ಅದರಲ್ಲೂ ಸಮರಕಲೆಯಲ್ಲಿ ನಿಷ್ಣಾತರಾದ ಸಮು ರಾಯ್ ಯೋಧರು ಇದನ್ನು ಯಾವ ಕಾರಣಕ್ಕೂ ತಿನ್ನಬಾರದು ಎಂದು ಕಟ್ಟಾಜ್ಞೆಯನ್ನು ಮಾಡಿದ್ದರು.

ಆದರೂ ಜನರು ಈ ಮೀನಿನ ರುಚಿಗೆ ಮನಸೋತು, ಸತ್ತರೂ ಪರವಾಗಿಲ್ಲ ಇದನ್ನೊಂದು ತಿನ್ನಲೇಬೇಕು ಎಂದು ಹಾತೊರೆಯುತ್ತಿದ್ದರು. ಇಂದಿನ ಜಪಾನಿನಲ್ಲಿ ‘ಫುಗು’ ಭಕ್ಷ್ಯವನ್ನು ಸಿದ್ಧಪಡಿಸಲೆಂದೇ ವಿಶೇಷ ಅಡುಗೆ ಭಟ್ಟರಿ ರುತ್ತಾರೆ. ಇವರಿಗೆ ಉಕ್ಕರಿ ಮೀನಿನ ಯಾವ ಭಾಗದಲ್ಲಿ ವಿಷವಿರುತ್ತದೆ ಎನ್ನುವುದು ಗೊತ್ತು. ಅವುಗಳನ್ನು ಎಚ್ಚರಿಕೆ ಯಿಂದ ಛೇದಿಸಿ ಎಸೆಯುತ್ತಾರೆ. ಉಳಿದುದನ್ನು ಅಡುಗೆ ಮಾಡುತ್ತಾರೆ.

ಫುಗು ಭಕ್ಷ್ಯವನ್ನು ತಯಾರಿಸುವುದನ್ನು ಕಲಿಯಲು ಅಡುಗೆ ಭಟ್ಟರು ಕನಿಷ್ಠ 4 ವರ್ಷಗಳ ಕಾಲ ತರಬೇತಿಯನ್ನು ಪಡೆಯುತ್ತಾರೆ. ಅಯಾನ್ ಫ್ಲೆಮಿಂಗ್, ಜೇಮ್ಸ್ ಬಾಂಡ್ ಪಾತ್ರವನ್ನು ಸೃಜಿಸಿ ಬರೆದ ಪತ್ತೇದಾರಿ ಕಾದಂಬರಿಗಳು ವಿಶ್ವ ವಿಖ್ಯಾತ ವಾಗಿವೆ. ಅವು ಚಲನಚಿತ್ರಗಳಾಗಿ ಅಪಾರ ಜನಪ್ರಿಯತೆಯನ್ನು ಗಳಿಸಿವೆ. ‘ಫ್ರಮ್ ರಷ್ಯಾ ವಿತ್ ಲವ್’ (1957)
ಎನ್ನುವ ಕಾದಂಬರಿಯನ್ನು ಆಧರಿಸಿ, ಅದೇ ಹೆಸರಿನ ಚಲನಚಿತ್ರವು 1963ರಲ್ಲಿ ನಿರ್ಮಾಣವಾಯಿತು. ರೋಸ
ಕ್ಲೆಬ್ ಎಂಬ ಸುಂದರಿ ರಷ್ಯನ್ ಗೂಢಚಾರಿಣಿ. ಇವಳು ತನ್ನ ಬೂಟಿನೊಳಗೆ ಒಂದು ಹರಿತವಾದ ಚೂರಿಯನ್ನು ಇಟ್ಟು ಕೊಂಡಿರುತ್ತಾಳೆ. ಈ ಚೂರಿಗೆ ಉಕ್ಕರಿ ಮೀನಿನ ವಿಷವನ್ನು ಲೇಪಿಸಿರುತ್ತಾಳೆ.

ಹೊಡೆದಾಟದಲ್ಲಿ ಚೂರಿಯು ಜೇಮ್ಸ್ ಬಾಂಡ್‌ಗೆ ತಾಗುತ್ತದೆ. ಇದು ನರವಿಷ. ಬಾಂಡ್ ಕೆಳಕ್ಕೆ ಬೀಳುತ್ತಾನೆ. ವಿಷವು ಅವನ ಶರೀರದಾದ್ಯಂತ ಹರಡುತ್ತದೆ. ಅವನು ಕೋಮಾ ಸ್ಥಿತಿಗೆ ಹೊರಟು ಹೋಗುತ್ತಾನೆ. ಅಲ್ಲಿಗೆ ಕಾದಂಬರಿಯು ಮುಗಿಯುತ್ತದೆ. ಬಾಂಡ್ ಮುಂದೆ ಏನಾದ ಎನ್ನುವುದನ್ನು ಅಯಾನ್ ಫ್ಲೆಮಿಂಗ್ ಓದುಗರ ಕಲ್ಪನೆಗೆ ಬಿಟ್ಟು ಬಿಡುತ್ತಾನೆ. ಚಲನಚಿತ್ರದಲ್ಲಿ ಬಾಂಡ್ ಗಾಯ ಗೊಳ್ಳುವುದಿಲ್ಲ. ಅವನು ರೋಸ ಕ್ಲೆಬ್‌ಳನ್ನು ಸೋಲಿಸುತ್ತಾನೆ.
ಅಯಾನ್ ಫ್ಲೆಮಿಂಗ್ ‘ಡಾ.ನೋ’ ಎಂಬ ತನ್ನ ಮುಂದಿನ ಕಾದಂಬರಿಯಲ್ಲಿ ಜೇಮ್ಸ್ ಬಾಂಡ್ ಉಕ್ಕರಿ ಮೀನಿನ
ವಿಷದಿಂದ ಪಾರಾದಂತೆ ಚಿತ್ರಿಸುತ್ತಾನೆ. ಜೇಮ್ಸ್ ಬಾಂಡ್ ಪಾತ್ರಕ್ಕೆ ಸಾವೇ ಇಲ್ಲ!

ಉಕ್ಕರಿ ಮೀನಿನಲ್ಲಿರುವ ವಿಷದ ಬಗ್ಗೆ ಮೊದಲ ಬಾರಿಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡಿದವನು ಜಪಾನಿನ
‘ಯೋಷಿಜ಼ುಮಿ ತಹಾರ’ ಎಂಬ ವಿಜ್ಞಾನಿ. ಇವನು 1909 ರಲ್ಲಿ ಉಕ್ಕರಿ ಮೀನಿನ ಅಂಡಾಶಯದಿಂದ ಅದರ ವಿಷವನ್ನು ಪ್ರತ್ಯೇಕಿಸಿದ. ಉಕ್ಕರಿ ಮೀನುಗಳ ಗುಂಪಿಗೆ ಸೇರಿದ ಎಲ್ಲ ಜೀವಿಗಳ ಮೇಲ್ದವಡೆ ಹಾಗೂ ಕೆಳದವಡೆಯಲ್ಲಿ ಎರಡೆರಡು ಹಲ್ಲುಗಳು ಉಬ್ಬಿಕೊಂಡು ಕೊಕ್ಕಿನಂತೆ ಕಾಣುತ್ತವೆ. ಹಾಗಾಗಿ ಅವುಗಳಿಗೆ ನಾಲ್ಕು ಹಲ್ಲಿನ ಜೀವಿಗಳು ಎನ್ನುವ ಅರ್ಥದಲ್ಲಿ ‘ಟೆಟ್ರೋಡಾಂಟಿಡೆ’ ಎಂಬ ಹೆಸರನ್ನು ನೀಡಿದರು. ಅವು ಉತ್ಪಾದಿಸುವ ವಿಷಕ್ಕೂ ‘ಟೆಟ್ರ ಡೋಟಾಕ್ಸಿನ್’ ಎಂದು ಹೆಸರನ್ನಿಟ್ಟರು.

1960ರ ದಶಕದ ವೇಳೆಗೆ ಡಾ.ರಾಬರ್ಟ್ ಬಿ.ವುಡ್ವರ್ಡ್ ಎಂಬ ನೊಬೆಲ್ ಪುರಸ್ಕೃತ ರಸಾಯನ ಶಾಸ್ತ್ರಜ್ಞ ಟೆಟ್ರಡೋ ಟಾಕ್ಸಿನ್ನಿನ ರಾಸಾಯನಿಕ ಸ್ವರೂಪವನ್ನು ಅನಾವರಣ ಮಾಡಿದ. 1970-80ರ ದಶಕದಲ್ಲಿ ಸಿ.ವೈ.ಕಾವೊ ಮತ್ತು ಬ್ರೂಸ್ ಹಿಲ್ ಎಂಬ ವಿಜ್ಞಾನಿಗಳು ಟೆಟ್ರಡೋ ಟಾಕ್ಸಿನ್ ಹೇಗೆ ತನ್ನ ವಿಷ ಪ್ರಭಾವವನ್ನು ಬೀರುತ್ತದೆ ಎಂಬ ಬಗ್ಗೆ ಅಧ್ಯಯನವನ್ನು ಮಾಡಿದರು. 1950ರ ದಶಕದಲ್ಲಿ ಟೆಟ್ರಡೋಟಾಕ್ಸಿನ್ ವಿಷವು ಉಕ್ಕರಿ ಮೀನಿನಲ್ಲಿ ಮಾತ್ರವಲ್ಲ, ಅಷ್ಟಪದಿ, ನಕ್ಷತ್ರಮೀನು, ಕೆಲವು ಕಪ್ಪೆ, ಏಡಿಗಳಲ್ಲೂ ಇರುತ್ತದೆ ಎನ್ನುವ ವಿಚಾರವು ಕಾಲಕ್ರಮೇಣ ತಿಳಿದು ಬಂದಿತು.

ಉಕ್ಕರಿ ಮೀನಿನ ಯಾವ ಯಾವ ಭಾಗಗಳಲ್ಲಿ ವಿಷವಿದೆ ಎನ್ನುವುದನ್ನು ವಿಜ್ಞಾನಿಗಳು ಹುಡುಕಲಾರಂಭಿಸಿದರು.
ವಿಷವು ಪ್ರಧಾನವಾಗಿ ಯಕೃತ್ತು, ಅಂಡಾಶಯ ಹಾಗೂ ಚರ್ಮದಲ್ಲಿದೆ ಎನ್ನುವ ವಿಚಾರವು ತಿಳಿಯಿತು. ವಿಜ್ಞಾನಿ ಗಳು ಮತ್ತಷ್ಟು ಕುತೂಹಲಿಗಳಾಗಿ ವಿಷವು ಹೇಗೆ ಉತ್ಪಾದನೆಯಾಗುತ್ತದೆ ಎನ್ನುವುದರ ಬಗ್ಗೆ ಸಂಶೋಧನೆಯನ್ನು ನಡೆಸಿದಾಗ, ಅವರಿಗೆ ಅಚ್ಚರಿಯಾಯಿತು. ವಾಸ್ತವದಲ್ಲಿ ಉಕ್ಕರಿ ಮೀನು ವಿಷವನ್ನೇ ಉತ್ಪಾದಿಸುವುದಿಲ್ಲ ಎನ್ನುವ ಕುತೂಹಲಕರ ಮಾಹಿತಿಯು ಹೊರಬಿದ್ದಿತ್ತು.

ಇ.ಜೆ.ಕ್ರಾಸ್ಲೆ ಎಂಬ ವಿಜ್ಞಾನಿಯು ಉಕ್ಕರಿ ಮೀನಿನ ಜತೆಯಲ್ಲಿ ಸಹಜೀವನವನ್ನು ನಡೆಸುವ ಹಲವು ಸೂಕ್ಷ್ಮಜೀವಿ ಗಳು ವಿಷವನ್ನು ಉತ್ಪಾದಿಸುತ್ತವೆ ಎನ್ನುವ ರೋಚಕ ಸುದ್ದಿಯನ್ನು ಬಹಿರಂಗ ಗೊಳಿಸಿದ. ವಿಶೇಷ ಗುಣಲಕ್ಷಣಗಳ ವಿಬ್ರಿಯೊ, ಸ್ಯೂಡೋ ಮೊನಾಸ್, ಫಾಸ್ಫೋರಿಯಮ್, ಏರೋ ಮೊನಾಸ್, ಪ್ಲೀಸೋಮೊನಾಸ್, ಆಲ್ಟೆರೋ ಮೊನಾಸ್, ಶೆವಾ ನೆಲ್ಲ, ಮೈಕ್ರೋಕಾಕಸ್, ಸೆರಾಶಿಯ, ಬ್ಯಾಸಿಲ್ಲಸ್, ರೋಸಿಯೋಬ್ಯಾಕ್ಟರ್, ಎಂಟರೋಬ್ಯಾಕ್ಟರ್ ಮುಂತಾದ ಬ್ಯಾಕ್ಟೀರಿಯಗಳು ಟೆಟ್ರಡೋಟಾಕ್ಸಿನ್ ಅನ್ನು ಉತ್ಪಾದಿಸುತ್ತವೆ.

ಸಮುದ್ರದ ನೀರಿನಲ್ಲಿ ಈ ಬ್ಯಾಕ್ಟೀರಿಯಗಳ ಸಂಪರ್ಕಕ್ಕೆ ಬರದ ಹಾಗೆ ಉಕ್ಕರಿ ಮೀನನ್ನು ಬೆಳೆಸಿದರೆ, ಆ ಉಕ್ಕರಿ ಮೀನು ವಿಷರಹಿತವಾಗಿರುತ್ತದೆ. ಅದನ್ನು ಯಾವುದೇ ಭೀತಿಯಿಲ್ಲದೆ ತಿನ್ನಬಹುದು. ಹಾಗಾಗಿ ಬ್ಯಾಕ್ಟೀರಿಯಾಗಳ ಸಂಪರ್ಕಕ್ಕೆ ಬರದ ಹಾಗೆ ಸಿಹಿನೀರು ಮತ್ತು ಸಮುದ್ರ ನೀರಿನಲ್ಲಿ ಉಕ್ಕರಿಮೀನನ್ನು ಬೆಳೆಸುವ ಪ್ರಯತ್ನಗಳು ನಡೆದಿವೆ. ನಮ್ಮ ನರಮಂಡಲವು ಕೆಲಸ ಮಾಡಬೇಕಾದರೆ ಸೋಡಿಯಂ ಮತ್ತು ಪೊಟಾಷಿಯಂ ಅಯಾನುಗಳು ಬೇಕು. ಈ ಅಯಾನುಗಳು ನರಗಳ ಒಳಗೆ ಹೋಗಲು ಮತ್ತು ಹೊರಗೆ ಬರಲು ವಿಶೇಷ ಪಂಪ್‌ಗಳಿರುತ್ತವೆ ಹಾಗೂ ಇವುಗಳ ಚಲನವಲನಕ್ಕೆ ಅನುವು ಮಾಡಿಕೊಡುವ ವಿಶೇಷ ಪಥ/ಕಾಲುವೆಗಳಿರುತ್ತವೆ.

ಟೆಟ್ರಡೋಟೋಟಾಕ್ಸಿನ್ ಸೋಡಿಯಂ ಅಯಾನುಗಳ ಪಥ/ಕಾಲುವೆಗಳನ್ನು ಸ್ಥಗಿತಗೊಳಿಸುತ್ತದೆ. ಹಾಗಾಗಿ ಆ ನರವು ಕಾರ್ಯವಿಹೀನ ವಾಗುತ್ತದೆ. ನಿಶ್ಚೇಷ್ಟಿತವಾಗುತ್ತದೆ. ಟೆಟ್ರಡೋಟಾಕ್ಸಿನ್ನಿನ ಈ ಗುಣವು ಅನೇಕ ವೈದ್ಯಕೀಯ ಉಪಯೋಗಗಳ ಬಗ್ಗೆ ಭರವಸೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಟೆಟ್ರಡೋಟಾಕ್ಸಿನ್ ಎಷ್ಟೇ ವಿಷಮಯ ವಾಗಿದ್ದರೂ, ಅದನ್ನು ಎಚ್ಚರಿಕೆಯಿಂದ ಬಳಸುವುದರ ಮೂಲಕ ಹಲವು ಅನಾರೋಗ್ಯಗಳಲ್ಲಿ ತಡೆಯಬಹುದು ಎನ್ನುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅಂಥವುಗಳಲ್ಲಿ ನೋವು ನಿರ್ವಹಣೆಯು ಮುಖ್ಯವಾದದ್ದು.

ನೋವುಗಳಲ್ಲಿಯೇ ಅತ್ಯಂತ ಉಗ್ರ ನೋವೆಂದರೆ ಕ್ಯಾನ್ಸರ್ ರೋಗಿಗಳಲ್ಲಿ ಕಂಡುಬರುವ ನರಬೇನೆ ಹಾಗೂ
ಅರ್ಧತಲೆನೋವಿನ ಬೇನೆ. ಈ ನೋವುಗಳನ್ನು ಸಹಿಸಿಕೊಳ್ಳುವುದು ಕಷ್ಟ. ಇಂಥ ರೋಗಿಗಳಲ್ಲಿ ನೋವಿನ ಸಂವೇದನೆಗಳನ್ನು ಕೊಂಡೊಯ್ಯುವ ನರವನ್ನು ಗುರುತಿಸಿ, ಅದಕ್ಕೆ ಟೆಟ್ರಡೋಟಾಕ್ಸಿನ್ ಅನ್ನು ನಿಗದಿತ ಪ್ರಮಾಣದಲ್ಲಿ ಚುಚ್ಚಿದಾಗ, ನೋವು ಸಂಪೂರ್ಣವಾಗಿ ಮಾಯವಾಗುತ್ತದೆ. ಆದರೆ ಡೋಸ್ ಬಹಳ ಮುಖ್ಯ. ಏಕೆಂದರೆ ಡೋಸ್ ಹೆಚ್ಚಾದರೆ ಆ ನರವು, ಹಾಗೂ ಆ ನರವು ನಿಯಂತ್ರಿಸುವ ಸ್ನಾಯುವು ನಿಶ್ಚೇಷ್ಟಿತವಾಗುವ ಅಪಾಯವಿರುತ್ತದೆ.

ಟೆಟ್ರಡೋಟಾಕ್ಸಿನ್ ಸ್ಥಳೀಯ ಅರಿವಳಿಕೆಯಾಗಿ (ಲೋಕಲ್ ಅನೆಸ್ತೀಸಿಯ) ಉಪಯುಕ್ತ ಎನ್ನಲಾಗಿದೆ. ಅದ
ರಲ್ಲೂ ಹಲ್ಲುನೋವಿನಂಥ ಪ್ರಕರಣಗಳಲ್ಲಿ ಟೆಟ್ರಡೋ ಟಾಕ್ಸಿನ್ ಅನ್ನು ಪ್ರಯೋಗಿಸಿದಾಗ, ಅದು ನಿಗದಿತ ನರವನ್ನು ಮಾತ್ರ ನಿಶ್ಚೇಷ್ಟಿತಗೊಳಿಸುವ ಕಾರಣ, ದಂತಚಿಕಿತ್ಸೆಯನ್ನು ಕೊಡುವುದು ಸುಲಭವಾಗುತ್ತದೆ. ಟೆಟ್ರಡೋಟಾಕ್ಸಿನ್ ಸುದೀರ್ಘಕಾಲ ನೋವನ್ನು ನಿವಾರಿಸಬಲ್ಲದು.

ಅಪಸ್ಮಾರ (ಎಪಿಲೆಪ್ಸಿ) ಮಲ್ಟಿಪಲ್ ಸ್ಕ್ಲೀರೋಸಿಸ್ ಮತ್ತು ಏಮಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೀರೋಸಿಸ್
ಮುಂತಾದ ಗಂಭೀರ ನರಬೇನೆಗಳಲ್ಲಿ ಟೆಟ್ರಡೋಟಾಕ್ಸಿನ್ ಉಪಯುಕ್ತವಾಗಬಹುದು. ಹಾಗೆಯೇ ಹೃದಯಕ್ಕೆ
ಸಂಬಂಽಸಿದಂತೆ ಮಿಡಿತ ವೈಪರೀತ್ಯವು (ಅರಿದ್ಮಿಯ) ಕಂಡುಬರುತ್ತದೆ. ಕೆಲವು ಸಲ ಇದು ಜೀವಹಾರಕವಾಗ
ಬಲ್ಲದು. ಇದನ್ನು ನಿಯಂತ್ರಿಸಲು ಟೆಟ್ರಡೋಟಾಕ್ಸಿನ್ ಉಪಯುಕ್ತವಾಗಬಹುದು ಎಂಬ ನಿರೀಕ್ಷೆಯಿದೆ. ಈ
ದಿಶೆಯಲ್ಲಿ ಸಂಶೋಧನೆಗಳು ನಡೆದಿವೆ.

ಟೆಟ್ರಡೋಟಾಕ್ಸಿನ್ ಸುತ್ತಮುತ್ತಲೂ ಹಲವು ದಂತಕಥೆಗಳು ಹರಡಿವೆ. ಅವುಗಳಲ್ಲಿ ಮುಖ್ಯವಾದದ್ದು ವೇಡ್
ಡೇವಿಸ್ ಬರೆದ ಕಥೆ. ಈತನು ಮಾನವಶಾಸಜ್ಞ ಹಾಗೂ ಸಸ್ಯಶಾಸ್ತ್ರಜ್ಞ. ಇವನು ಹೈಟಿ ಪ್ರದೇಶದಲ್ಲಿ ಹಲವು ವರ್ಷಗಳವರೆಗೆ ಇದ್ದು ‘ದಿ ಸರ್ಪೆಂಟ್ ಆಂಡ್ ದಿ ರೈನ್‌ಬೋ’ (1985) ಎನ್ನುವ ಕಾದಂಬರಿಯನ್ನು ಬರೆದ. ಈ ಕಾದಂಬರಿಯಲ್ಲಿ ‘ಜ಼ೂಂಬಿ’ಗಳನ್ನು ಪ್ರಸ್ತಾಪಿಸಿದ. ಜ಼ೂಂಬಿಗಳೆಂದರೆ ಜೀವಚ್ಛವಗಳು.

ಜ಼ೂಂಬಿಗೆ ಒಳಗಾದ ಜನರು ಎಲ್ಲರಂತೆಯೇ ಇರುತ್ತಾರೆ. ಆದರೆ ಅವರಿಗೆ ಸ್ವಪ್ರಜ್ಞೆ ಇರುವುದಿಲ್ಲ. ಅವರ ಇಚ್ಛಾ ಶಕ್ತಿಯು ನಾಶವಾಗಿರುತ್ತದೆ. ಯಾರು ಜ಼ೂಂಬಿಯನ್ನು ನಡೆಸಿರುತ್ತಾರೋ, ಅವರು ಹೇಳಿದ್ದನ್ನು ಮಾತ್ರ ಯಾಂತ್ರಿಕ ವಾಗಿ ಮಾಡುತ್ತಾರೆ. ಇದು ಒಂದು ರೀತಿಯ ‘ಹೈಟಿಯನ್ ವೂಡು’ ಎಂದರೆ ‘ಹೈಟಿ ಜನರು ಮಾಡುವ ಮಾಟ’. ಈ ಮಾಟದಲ್ಲಿ ಹೈಟಿ ಜನರು ಹಲವು ಚಿತ್ತಭ್ರಾಮಕ ವಸ್ತುಗಳ ಜತೆಯಲ್ಲಿ ಟೆಟ್ರಡೋಟಾಕ್ಸಿನ್ ವಿಷವನ್ನು ಬಳಸುತ್ತಾರೆ ಎಂದು ವಿವರವಾಗಿ ಬರೆದಿದ್ದಾನೆ.

ಪಾಶ್ಚಾತ್ಯ ವಿಜ್ಞಾನಿಗಳು ಡೇವಿಸ್ ಬರೆದಿರುವ ಈ ಕಥೆಯಲ್ಲಿ ಯಾವುದೇ ಹುರುಳಿಲ್ಲ ವೆಂದಿದ್ದಾರೆ, ಕಪೋಲಕಲ್ಪಿತ ಎಂದು ವಾದಿಸಿದ್ದಾರೆ. ಆದರೆ ಡೇವಿಸ್ ಕಥನವು ‘ಪರಮಸತ್ಯ’ ಎಂದು ವಾದಿಸುವ ಸಾಕಷ್ಟು ಜನರು ಪಶ್ಚಿಮ ಗೋಳದಲ್ಲಿದ್ದಾರೆ. ಪ್ರಸ್ತುತ ಟೆಟ್ರಡೋಟಾಕ್ಸಿನ್ ಯುಕ್ತವಾದ ಯಾವುದೇ ಔಷಧವು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಏಕೆಂದರೆ ಇದನ್ನು ಎಚ್ಚರಿಕೆಯಿಂದ ಬಳಸುವುದೇ ಒಂದು ಸವಾಲಾಗಿದೆ. ಆದರೆ ಟೆಟ್ರಡೋಟಾಕ್ಸಿನ್ ರಚನೆಯಲ್ಲಿ ಅಲ್ಪಸ್ವಲ್ಪ ಮಾರ್ಪಾಟನ್ನು ಮಾಡಿ, ಒಂದು ಹೊಸ ಔಷಧವನ್ನು ತಯಾರಿಸುವ ಪ್ರಯತ್ನ ಗಳು ನಡೆದಿವೆ. ಅದು ಸಾಧ್ಯವಾದಂದು ನೋವು ನಿವಾರಣ ಚಿಕಿತ್ಸೆಯು ಸುಲಭವಾದೀತು.

ಟೆಟ್ರಡೋಟಾಕ್ಸಿನ್, ಸಯನೇಡಿಗಿಂತ 1000-10000 ಪಟ್ಟು ಹೆಚ್ಚು ವಿಷಕಾರಿ ಎಂದೆವು. ಆದರೆ ಇದುವೇ ಸರ್ವ ಶ್ರೇಷ್ಠ ವಿಷವಲ್ಲ! ನಮ್ಮ ಭೂಮಿಯ ಮೇಲಿರುವ ವಿಷಗಳಲ್ಲಿಯೇ ಅತ್ಯುಗ್ರವಾದ ವಿಷವನ್ನು ಕೊಲಂಬಿಯ
ದಲ್ಲಿರುವ ಗೋಲ್ಡನ್ ಪಾಯ್ಸನ್ ಫ್ರಾಗ್ ಉತ್ಪಾದಿಸುತ್ತದೆ.

ಇದನ್ನೂ ಓದಿ: Dr N Someswara Column: ಅವನಿಗೆ ಹುಚ್ಚು ಹಿಡಿಸಿ ಕೊಂದುಬಿಟ್ಟರು !