ಅನಿಸಿಕೆ
ಡಾ.ಪ್ರಭು ಬಸರಕೋಡ
ಗ್ರಾಮೀಣ ಪ್ರದೇಶಗಳಲ್ಲಿ, ಕೃತಕ ಬುದ್ಧಿಮತ್ತೆಯ ಉಪಕರಣಗಳಿಂದ ವಿದ್ಯಾರ್ಥಿಗಳಿಗೆ, ಅವರ ಗ್ರಹಣ ಸಾಮರ್ಥ್ಯವನ್ನು ಅನುಸರಿಸಿ, ಕಲಿಕೆಗೆ ಅನೇಕ ಅವಕಾಶಗಳನ್ನು ಕಲ್ಪಿಸಬಹುದಾಗಿದೆ. ಇದು ಅವರಿಗೆ ವೈಯಕ್ತಿಕ ಕಲಿಕೆಯ ಪರಿಣಾಮಕಾರಿ ಅನುಭವಗಳನ್ನು ಖಂಡಿತ ಒದಗಿಸಬಲ್ಲದು.
ನಮ್ಮ ರಾಜ್ಯ ಸೇರಿದಂತೆ, ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಶೈಕ್ಷಣಿಕ ವ್ಯವಸ್ಥೆಗಳ ನಡುವೆ ಅಗಾಧ ಅಂತರವಿರುವುದು ನಾವೆಲ್ಲರೂ ಒಪ್ಪಿಕೊಳ್ಳಬೇಕಾದ ಸಂಗತಿಯಾಗಿದೆ. ಗ್ರಾಮೀಣರ ಶಿಕ್ಷಣ ಪ್ರಗತಿಗೆ ಸರಕಾರವು ನಿರಂತರವಾಗಿ ಹತ್ತು ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದೆಯಾದರೂ, ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆಯಾಗದೆ ಯಶಸ್ಸು ಮರೀಚಿಕೆಯೇ ಆಗಿಬಿಟ್ಟಿದೆ. ಭೌತಿಕ ಸೌಲಭ್ಯಗಳ ಕೊರತೆಯ ಜತೆಜತೆಗೆ ಪಾಲಕರ ಆರ್ಥಿಕ ಪರಿಸ್ಥಿತಿ ಮತ್ತು ಅವರ ಶೈಕ್ಷಣಿಕ ಸ್ಥಿತಿಗತಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದು, ಪ್ರಸಕ್ತ ಕಾಲಘಟ್ಟದ ಸ್ಪರ್ಧಾತ್ಮಕತೆ ಹಾಗೂ ಶೈಕ್ಷಣಿಕ ಮಹತ್ವದ ಕುರಿತಾದ ಜಾಗೃತಿ ಇಲ್ಲದಿರುವುದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಅನುಪಾತದಲ್ಲಿನ ಅಗಾಧ ಅಂತರ, ಆಕರ್ಷಕ ಶೈಕ್ಷಣಿಕ ವಾತಾವರಣವಿಲ್ಲದಿರುವುದು, ತಂತ್ರಜ್ಞಾನದ ಬಳಕೆಯಲ್ಲಿ ಶಿಕ್ಷಕರಿಗೆ ಅಗತ್ಯ ಜ್ಞಾನದ ಕೊರತೆ- ಇವು ಗ್ರಾಮೀಣ ಪ್ರದೇಶದ ಶಿಕ್ಷಣ ಸಂಸ್ಥೆಗಳಲ್ಲಿ ನಿರಂತರವಾಗಿ ಕಾಣಬರುತ್ತಿರುವ ವಾಸ್ತವಿಕ ಸ್ಥಿತಿಗತಿಗಳಾಗಿವೆ.
ಕರ್ನಾಟಕ ರಾಜ್ಯದ ಶಿಕ್ಷಣ ಇಲಾಖೆಯ ಅಂಕಿ-ಅಂಶಗಳ ಆಧಾರದ ಮೇಲೆ ಹೇಳುವುದಾದರೆ, ರಾಜ್ಯದ ಶೇ.60
ಕ್ಕಿಂತಲೂ ಹೆಚ್ಚು ಜನರು ಗ್ರಾಮೀಣ ಪ್ರದೇಶಗಳಲ್ಲಿಯೇ ವಾಸಿಸುತ್ತಿದ್ದಾರೆ. ಇದರಿಂದಾಗಿ, ಶೈಕ್ಷಣಿಕ ನೆಲೆಯಲ್ಲಿ
ಗ್ರಾಮೀಣ ಪ್ರದೇಶದ ಸುಧಾರಣೆಯು ನಿಜಕ್ಕೂ ಒಂದು ಸವಾಲಿನ ಸಂಗತಿಯೇ ಆಗಿದೆ. ಇಂಥ ಸಂಕ್ರಮಣ ಸ್ಥಿತಿ ಯಲ್ಲಿ, ಕೃತಕ ಬುದ್ಧಿಮತ್ತೆಯ ಬಳಕೆಯು ಒಂದಷ್ಟು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಒಂದು
ಆಶಾದಾಯಕ ಬೆಳವಣಿಗೆಯಾಗಿದೆ ಎನ್ನಲಡ್ಡಿಯಿಲ್ಲ.
ಗ್ರಾಮೀಣ ಪ್ರದೇಶಗಳಲ್ಲಿ, ಕೃತಕ ಬುದ್ಧಿಮತ್ತೆಯ ಉಪಕರಣಗಳಿಂದ ವಿದ್ಯಾರ್ಥಿಗಳಿಗೆ, ಅವರ ಗ್ರಹಣ ಸಾಮರ್ಥ್ಯ ವನ್ನು ಅನುಸರಿಸಿ, ಕಲಿಕೆಗೆ ಅನೇಕ ಅವಕಾಶಗಳನ್ನು ಕಲ್ಪಿಸಬಹುದಾಗಿದೆ. ಇದು ಅವರಿಗೆ ವೈಯಕ್ತಿಕ ಕಲಿಕೆಯ ಪರಿಣಾಮಕಾರಿ ಅನುಭವಗಳನ್ನು ಖಂಡಿತ ಒದಗಿಸಬಲ್ಲದು. 2023ರ ಎಡುಟೆಕ್ ವಿಮರ್ಶೆಯ ವರದಿಯ ಅನುಸಾರ, ಕೃತಕ ಬುದ್ಧಿಮತ್ತೆಯ ವೇದಿಕೆಗಳು ವಿದ್ಯಾರ್ಥಿಗಳಿಗೆ ಶೇ.30ರಷ್ಟು ಅಧಿಕ ತೀವ್ರತೆಯೊಂದಿಗೆ, ಕಲೆ-ವಿಜ್ಞಾನ- ಗಣಿತ ಸೇರಿದಂತೆ ಇತರ ವಿಷಯಗಳಲ್ಲೂ ಉತ್ತಮ ಜ್ಞಾನವನ್ನು ನೀಡಬಲ್ಲವು ಹಾಗೂ ಪರಿಕಲ್ಪನೆಗಳನ್ನು ದೃಢೀ ಕರಿಸುವುದರೊಂದಿಗೆ ಕಲಿಕಾ ಸಾಮರ್ಥ್ಯಗಳನ್ನು ಗಟ್ಟಿಗೊಳಿಸಬಲ್ಲವು. ವಿದ್ಯಾರ್ಥಿಯ ಸಬಲತೆ ಮತ್ತು ದುರ್ಬಲತೆ ಗಳ ಆಧಾರದ ಮೇಲೆ ಕಲಿಕಾಂಶಗಳನ್ನು ಸ್ಥಿರೀಕರಿಸಿ, ಕಲಿಕೆಗೆ ಪೂರಕವಾದ ಮಾರ್ಗದರ್ಶನ ಗಳನ್ನು ನೀಡಲು ಸಾಧ್ಯವಿದೆ. ಈಗಾಗಲೇ ಒಂದಷ್ಟು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಕಾರ್ಯಕ್ರಮಗಳು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಆನ್ಲೈನ್ ತರಗತಿಗಳನ್ನು ಆಯೋಜಿಸಿ ಸಫಲತೆಯನ್ನು ಕಂಡಿರುವುದನ್ನು ಅಲ್ಲಗಳೆಯಲಾಗದು.
ಮಾತ್ರವಲ್ಲದೆ, ಸಾಕಷ್ಟು ಗ್ರಾಮೀಣ ಪ್ರದೇಶಗಳಲ್ಲೂ ಇತ್ತೀಚೆಗೆ ಕೃತಕ ಬುದ್ಧಿಮತ್ತೆ ಆಧರಿತ ಸ್ಮಾರ್ಟ್ಬೋರ್ಡ್ ಒದಗಿಸಿ, ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಮತ್ತು ಈ ಉಪಕ್ರಮವು ಒಂದಷ್ಟು ಸೂಕ್ತವಾದ ಪರಿಹಾರಗಳನ್ನು ನೀಡುತ್ತಿದೆ. ಸಾಮಾನ್ಯ ಬೋಧನಾ ವಿಧಾನಗಳಿಂದ ಕಲಿಯುವ ವಿದ್ಯಾರ್ಥಿಗಳಿಗಿಂತ, ಕೃತಕ ಬುದ್ಧಿಮತ್ತೆಯ ನೆರವು ದಕ್ಕಿರುವ ವಿದ್ಯಾರ್ಥಿಗಳ ಕಲಿಕೆಯಲ್ಲಿ ಶೇ.೧೮ರಷ್ಟು ಪ್ರಗತಿ ಕಂಡುಬಂದಿರುವುದನ್ನು ಕೆಲವು ಸಮೀಕ್ಷೆಗಳು ದೃಢಪಡಿಸಿವೆ.
ಕಲಿಕೆಯ ಪ್ರಕ್ರಿಯೆಯಲ್ಲಿ ಶಿಕ್ಷಕರ ಪಾತ್ರ ಗುರುತರವಾದದ್ದು. ಅವರ ಪರಿಣಾಮಕಾರಿ ಬೋಧನೆಯು ಶಿಕ್ಷಣ
ರಂಗದಲ್ಲಿ ಕ್ರಾಂತಿಗೆ ಕಾರಣವಾಗಬಲ್ಲದು. ಬದಲಾಗುತ್ತಿರುವ ಕಾಲಘಟ್ಟಕ್ಕೆ ಸರಿಸಮನಾಗಿ ಶಿಕ್ಷಕ ಬಳಗದವರು
ನವೀನ ಕೌಶಲಗಳು ಮತ್ತು ತಂತ್ರಜ್ಞಾನದೊಂದಿಗೆ ನಿತ್ಯವೂ ತಮ್ಮನ್ನು ಪಳಗಿಸಿಕೊಳ್ಳಬೇಕಾದ್ದು, ಸಮೀಕರಿಸಿ ಕೊಳ್ಳಬೇಕಾದ್ದು ತೀರಾ ಅಗತ್ಯವಾಗಿದೆ. ಇಂಥದೊಂದು ಹಿನ್ನೆಲೆಯಲ್ಲಿ, ಶಿಕ್ಷಕ ಬಳಗಕ್ಕೆ ಅಗತ್ಯವಿರುವ ಸಂಪನ್ಮೂಲವನ್ನು ಒದಗಿಸುವುದು ಕೂಡ ಅತ್ಯವಶ್ಯಕ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.
ಕೃತಕ ಬುದ್ಧಿಮತ್ತೆಯು ಶಿಕ್ಷಕ ಬಳಗವನ್ನು ಒಬ್ಬ ಒಳ್ಳೆಯ ಸ್ನೇಹಿತನಂತೆ ಕೈಹಿಡಿದು ನಡೆಸುವುದರ ಜತೆಗೆ, ಅನುಭವಿ ಶಿಕ್ಷಕನಂತೆ ಮಾರ್ಗದರ್ಶನವನ್ನೂ ನೀಡಬಲ್ಲದು. ಡೇಟಾ ವಿಶ್ಲೇಷಣೆ, ಬೋಧನೆಯ ನವೀನ ತಂತ್ರಗಳ ಪರಿಚಯ, ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಅಳೆಯುವ ವಿನೂತನ ಮಾನದಂಡಗಳು, ವೃತ್ತಿಪರ ತರಬೇತಿಗಳನ್ನು ನೀಡಲು ಇದು ಪೂರಕವಾಗಿದೆ. ವಿದ್ಯಾರ್ಥಿಗಳ ಕಲಿಕೆಯಲ್ಲಿ ಮಾತೃಭಾಷೆಯ ಬಳಕೆ ತುಂಬಾ ಮಹತ್ತರವಾದುದು. ಅದರಲ್ಲೂ ನಿರ್ದಿಷ್ಟವಾಗಿ, ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಮಾತೃಭಾಷೆಯ ಮೂಲಕದ ಬೋಧನೆಯು ಅತಿ ಹೆಚ್ಚು ಪರಿಣಾಮ ಬೀರಬಲ್ಲದು ಹಾಗೂ ವಿಷಯದ ಸಮರ್ಥ ಗ್ರಹಿಕೆಗೆ, ಉತ್ತಮ ಕಲಿಕೆಗೆ ರಹದಾರಿಯನ್ನೂ ಒದಗಿಸಬಲ್ಲದು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮಾತೃಭಾಷೆಯೇ ಕಲಿಕಾ/ಬೋಧನಾ ಮಾಧ್ಯಮವಾದಾಗ, ಅವರು ವಿಷಯವನ್ನು ಸುಲಭವಾಗಿ ಅರ್ಥೈಸಿಕೊಳ್ಳಬಲ್ಲರು ಮತ್ತು ಹೆಚ್ಚು ಕಾಲ ನೆನಪಿನಲ್ಲಿ ಇಟ್ಟುಕೊಳ್ಳಬಲ್ಲರು ಎಂಬುದನ್ನು ತಜ್ಞರ ವರದಿಗಳು ಸಾಕ್ಷೀಕರಿಸುತ್ತವೆ.
ಹೀಗಾಗಿ, ಕೃತಕ ಬುದ್ಧಿಮತ್ತೆಯ ಉಪಕರಣಗಳ ಮೂಲಕ ವಿದ್ಯಾರ್ಥಿಗಳ ಮಾತೃಭಾಷೆಯಲ್ಲೇ ಬೋಧನೆ ಮಾಡ ಬಹುದಾದ ಸೌಕರ್ಯವು ಒಂದು ವರದಾನವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ‘ನೋಡಿ ಕಲಿ, ಮಾಡಿ ತಿಳಿ, ಕೇಳಿ ಕಲಿ’ ಎನ್ನುವ ಸಿದ್ಧಾಂತಗಳಿಗೆ ಪೂರಕವಾಗಿರುವಂತೆ, ಸ್ಮಾರ್ಟ್ ತರಗತಿಗಳ ಮೂಲಕ ದೃಶ್ಯ ಆಧರಿತ ಕಲಿಕೆ ಮತ್ತು ಧ್ವನಿ ಆಧರಿತ ಕಲಿಕೆಗೆ ಅನುವು ಮಾಡಿಕೊಡಬಹುದಾಗಿದೆ. ಇದು ವಿದ್ಯಾರ್ಥಿಗಳ ಸ್ಮೃತಿಕೋಶಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪಬಲ್ಲದು. ಸರಕಾರಗಳು ಕೂಡ ಈ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಸಂಗತಿ.
ಕೃತಕ ಬುದ್ಧಿಮತ್ತೆಯ ಉಪಯೋಗವು ಶೈಕ್ಷಣಿಕ ರಂಗದಲ್ಲಿ ಮಹತ್ತರ ಬದಲಾವಣೆಯನ್ನು ತರಬಲ್ಲದಾದರೂ, ಅದಕ್ಕೂ ಒಂದಷ್ಟು ಇತಿಮಿತಿಗಳಿವೆ ಎಂಬುದನ್ನು ನಾವು ಅಲ್ಲಗಳೆಯಲಾಗದು. ಈ ಉಪಕ್ರಮಕ್ಕೆ ಅತ್ಯುತ್ತಮವಾದ, ವಿಶ್ವಾಸಾರ್ಹವಾದ ಇಂಟರ್ನೆಟ್ ವ್ಯವಸ್ಥೆ ತುಂಬಾ ಅಗತ್ಯವಾಗಿದೆ. ಕೃತಕ ಬುದ್ಧಿಮತ್ತೆಯ ಕಲಿಕಾ ಸಾಧನಗಳ
ಸಮರ್ಪಕ ಬಳಕೆಯಲ್ಲಿ ಜ್ಞಾನ ಮತ್ತು ಕೌಶಲ ಕೂಡ ಮಹತ್ತರ ಪಾತ್ರವನ್ನು ವಹಿಸಬಲ್ಲವು. ಶಿಕ್ಷಕ ಬಳಗ
ಸೇರಿದಂತೆ ವಿದ್ಯಾರ್ಥಿಗಳು ಈ ಕಲಿಕಾ ಸಾಧನಗಳನ್ನು ಸಮರ್ಥವಾಗಿ ಬಳಸುವಲ್ಲಿ ಇಚ್ಛಾಶಕ್ತಿಯ ಕೊರತೆ ಹೊಮ್ಮಿ
ದರೆ ಅದೊಂದು ಸಮಸ್ಯೆಯಾಗಬಲ್ಲದು. ಆದ್ದರಿಂದ, ಇಂಥ ಕೊರತೆಗಳನ್ನು ನೀಗಿಸಲು ಶಾಲಾಡಳಿತ ವ್ಯವಸ್ಥೆಗಳು,
ಸರಕಾರಗಳು ಹೆಚ್ಚೆಚ್ಚು ಹೂಡಿಕೆಯನ್ನು ಮಾಡುವುದರ ಜತೆಗೆ, ಒಂದಷ್ಟು ದಿಗ್ಗಜ ಕಂಪನಿಗಳ ಜತೆಗೂ ಕೈ ಜೋಡಿಸಬೇಕಿದೆ.
ಕೃತಕ ಬುದ್ಧಿಮತ್ತೆಯ ಬಳಕೆಯಿಂದಾಗುವ ಉಪಯೋಗ ಮತ್ತು ಅದರ ಅನಿವಾರ್ಯತೆಯ ಕುರಿತಾಗಿ ಹೆಚ್ಚೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ, ಕಾರ್ಯಾಗಾರಗಳನ್ನು ನಡೆಸಬೇಕಿದೆ. ಶಿಕ್ಷಕ ಬಳಗದವರ
ವಾಡಿಕೆಯ ಕಾರ್ಯಭಾರಗಳಿಗೆ ತೊಂದರೆಯಾಗದಂತೆ ಮತ್ತು ಹೊರೆಯಾಗದಂತೆ ತರಬೇತಿಗಳನ್ನು ನೀಡುವ
ಮೂಲಕ ಅವರನ್ನು ಕೌಶಲಪೂರ್ಣರನ್ನಾಗಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳಾದಲ್ಲಿ, ಗ್ರಾಮೀಣ
ಮತ್ತು ನಗರ ಪ್ರದೇಶಗಳ ನಡುವೆ ಕಾಣಬರುವ ಶೈಕ್ಷಣಿಕ ಪ್ರಗತಿಯ ತಾರತಮ್ಯಗಳಿಗೆ ಇತಿಶ್ರೀ ಹಾಡಬಹುದು,
ಪರಿಣಾಮಕಾರಿಯಾದ ಬದಲಾವಣೆಗಳನ್ನು ಕಾಣಬಹುದು.
(ಲೇಖಕರು ಪ್ರಾಧ್ಯಾಪಕರು)
ಇದನ್ನೂ ಓದಿ: artificialintelligencesummit