Thursday, 24th October 2024

Dr Vijay Darda Column: ನಂಬಿಕೆಯನ್ನಾದರೂ ರಾಜಕೀಯದಿಂದ ದೂರವಿಡಿ!

ಸಂಗತ

ಡಾ.ವಿಜಯ್‌ ದರಡಾ

ತಿರುಪತಿ ತಿಮ್ಮಪ್ಪನ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಪ್ರಾಣಿಜನ್ಯ ಕೊಬ್ಬು ಸೇರಿಸಲಾಗುತ್ತಿತ್ತು ಎಂಬ ಆರೋಪ ದೊಡ್ಡ ಕೋಲಾಹಲಕ್ಕೆ ಕಾರಣವಾಗಿದೆ. ಅದರ ಹಿಂದಿನ ಸತ್ಯವೇನು? ನಮ್ಮ ದೇಶದ ರಾಜಕೀಯ ಎತ್ತ ಸಾಗುತ್ತಿದೆ? ಕೊನೆಯ ಪಕ್ಷ ದೇವರಲ್ಲಿನ ನಂಬಿಕೆಯನ್ನಾದರೂ ರಾಜಕೀಯದಿಂದ ದೂರವಿಡಿ.

ತಿರುಪತಿಯ ತಿಮ್ಮಪ್ಪ ಜಗತ್ಪ್ರಸಿದ್ಧ ದೇವರು. ಆಂಧ್ರ ಪ್ರದೇಶದ ತಿರುಪತಿಯಲ್ಲಿರುವ ಬಾಲಾಜಿ ದೇಗುಲ
(ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನ) ಈಗ ಬೇಡದ ಕಾರಣಕ್ಕೆ ದೊಡ್ಡ ವಿವಾದದಲ್ಲಿ ಸಿಲುಕಿಕೊಂಡಿದೆ. ಅಲ್ಲಿನ
ಪ್ರಸಿದ್ಧ ಲಡ್ಡು ಪ್ರಸಾದದಲ್ಲಿ ಪ್ರಾಣಿಜನ್ಯ ಕೊಬ್ಬು ಪತ್ತೆಯಾಗಿದೆ ಎಂಬ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿದೆ.
ಕೋಟ್ಯಂತರ ಭಕ್ತರು ಶ್ರದ್ಧಾಭಕ್ತಿಯಿಂದ ಸೇವಿಸುವ , ರುಚಿಗೆ ಸರಿಸಾಟಿಯೇ ಇಲ್ಲದ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು, ಹಂದಿಯ ಕೊಬ್ಬು, ಮೀನಿನೆಣ್ಣೆಯಂಥ ಅಂಶಗಳು ಪತ್ತೆಯಾಗಿವೆ ಎಂಬ ಸುದ್ದಿ ಕೇಳಿ ಜನರು ಆಘಾತ ಕ್ಕೊಳಗಾಗಿದ್ದಾರೆ.

ಅದರಲ್ಲೂ ತಿರುಪತಿಯ ಬಾಲಾಜಿಯ ಪರಮ ಭಕ್ತರಂತೂ ಈ ವಿವಾದದಿಂದ ದಿಗ್ಭ್ರಮೆಗೊಂಡಿದ್ದಾರೆ. ಮೊದಲನೆ
ಯದಾಗಿ, ದೇವಸ್ಥಾನದ ಪ್ರಸಾದದಂಥ ಪವಿತ್ರ ತಿನಿಸಿನಲ್ಲಿ ಯಾರಿಗೂ ಗೊತ್ತಿಲ್ಲದೆ ಪ್ರಾಣಿಯ ಕೊಬ್ಬು ಬಳಕೆ ಯಾಗಲು ಸಾಧ್ಯವೇ ಎಂಬ ಸಂಗತಿಯೇ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಆದರೆ, ಇಂಥದೊಂದು ಆರೋಪ ಮಾಡಿದವರು ಸ್ವತಃ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು.

ಸಾಂವಿಧಾನಿಕ ಹುದ್ದೆಯಲ್ಲಿರುವ ಅವರಂಥ ದೊಡ್ಡ ವ್ಯಕ್ತಿಯೇ ಈ ಆರೋಪ ಮಾಡಿರುವುದರಿಂದ ಅದರ ಬಗ್ಗೆ
ತನಿಖೆಯಂತೂ ನಡೆಯಲೇಬೇಕು. ಇದು ಕಡೆಗಣಿಸುವ ವಿಚಾರ ಬಿಲ್‌ಕುಲ್ ಅಲ್ಲ. ಹೀಗಾಗಿ ಲಡ್ಡು ವಿಷಯದಲ್ಲಿ
ಸರಿಯಾದ ತನಿಖೆ ನಡೆದು ಸತ್ಯಸಂಗತಿ ಹೊರಗೆ ಬರಬೇಕು. ಅದಕ್ಕಿಂತಲೂ ಹೆಚ್ಚಾಗಿ, ನಂಬಿಕೆಯ ವಿಚಾರದಲ್ಲಿ ಯಾರೂ ರಾಜಕೀಯ ಮಾಡುವುದಕ್ಕೆ ಹೋಗಬಾರದು. ದೇವರಲ್ಲಿ ಜನರು ಇರಿಸಿರುವ ಶ್ರದ್ಧೆ ಮತ್ತು ಭಕ್ತಿಯನ್ನು ಯಾರೂ, ಯಾವುದೇ ಕಾರಣಕ್ಕೂ, ಯಾವತ್ತೂ ರಾಜಕೀಯಕ್ಕೆ ಎಳೆದು ತರಬಾರದು.

ತಿರುಪತಿ ತಿಮ್ಮಪ್ಪನ ದೇಗುಲದ ಅತ್ಯಾಧುನಿಕ ಹಾಗೂ ಸುಸಜ್ಜಿತವಾದ ಅಡುಗೆ ಮನೆಯಲ್ಲಿ ಪ್ರತಿನಿತ್ಯ ಸರಾಸರಿ
೩,೫೦,೦೦೦ ಲಡ್ಡು ತಯಾರು ಮಾಡುತ್ತಾರೆ. ಆ ಅಡುಗೆಮನೆಗೆ ‘ಪೋಟು’ ಎಂದು ಹೆಸರು. ತಿಮ್ಮಪ್ಪನ ದೇಗುಲದಲ್ಲಿ
ಪ್ರಸಾದವಾಗಿ ಭಕ್ತರಿಗೆ ಲಡ್ಡು ನೀಡುವ ಸಂಪ್ರದಾಯ ಹೆಚ್ಚುಕಮ್ಮಿ 300 ವರ್ಷಗಳಷ್ಟು ಹಳೆಯದು. ಕೇವಲ ಲಡ್ಡು
ಪ್ರಸಾದದಿಂದಲೇ ದೇಗುಲಕ್ಕೆ ಪ್ರತಿ ವರ್ಷ ಅಜಮಾಸು 500 ರಿಂದ 600 ಕೋಟಿ ರುಪಾಯಿ ಆದಾಯ ಬರುತ್ತದೆ.
ದೇವಸ್ಥಾನದ ಇತಿಹಾಸದಲ್ಲೇ ಈವರೆಗೆ ಯಾರೂ ಲಡ್ಡು ಪ್ರಸಾದದ ತಯಾರಿಕೆಯಲ್ಲಿ ಪ್ರಾಣಿಜನ್ಯ ಕೊಬ್ಬಿನ ಬಳಕೆಯಾಗುತ್ತಿದೆ ಅಥವಾ ಕಳಪೆ ವಸ್ತುಗಳನ್ನು ಬಳಸಲಾಗುತ್ತಿದೆ ಎಂಬಂಥ ಆರೋಪ ಮಾಡಿರಲಿಲ್ಲ.

ಮೊಟ್ಟಮೊದಲ ಬಾರಿ ಚಂದ್ರಬಾಬು ನಾಯ್ಡು ಆ ಆರೋಪ ಮಾಡಿದ್ದಾರೆ. ಹಿಂದಿನ ಸರಕಾರದ ಅವಧಿಯಲ್ಲಿ ಲಡ್ಡು ತಯಾರಿಸಲು ಶುದ್ಧ ತುಪ್ಪದ ಬದಲಾಗಿ ಪ್ರಾಣಿಜನ್ಯ ಕೊಬ್ಬಿನ ಕಲಬೆರಕೆ ಮಾಡಿದ ಅಶುದ್ಧ ತುಪ್ಪವನ್ನು ಬಳಸಲಾಗುತ್ತಿತ್ತು ಎಂಬುದು ಅವರ ಆರೋಪ. ಕಳೆದ ಐದು ವರ್ಷಗಳಲ್ಲಿ ವೈ.ಎಸ್.ಜಗನ್‌ಮೋಹನ ರೆಡ್ಡಿ
ಅವರು ತಿರುಪತಿ ಬಾಲಾಜಿ ದೇಗುಲದ ಪಾವಿತ್ರ್ಯವನ್ನೇ ಹಾಳುಗೆಡವಿದ್ದಾರೆ ಎಂದೂ ಅವರು ದೂರಿದ್ದಾರೆ. ಈಗ ತಮ್ಮ ಸರಕಾರ ಬಂದ ಮೇಲೆ ಪವಿತ್ರ ಲಡ್ಡುಗಳ ತಯಾರಿಯಲ್ಲಿ ಪರಿಶುದ್ಧ ತುಪ್ಪದ ಬಳಕೆ ಆರಂಭಿಸಿ ದೇವಸ್ಥಾನದ ಪಾವಿತ್ರ್ಯವನ್ನು ಮರುಸ್ಥಾಪನೆ ಮಾಡಿದ್ದೇವೆ ಎಂದೂ ನಾಯ್ಡು ಹೇಳಿಕೊಂಡಿದ್ದಾರೆ. ಇಲ್ಲೊಂದು ಸಂಗತಿ ಗಮನಿಸ ಬೇಕು.

ವೈ.ಎಸ್.ಜಗನ್‌ಮೋಹನ ರೆಡ್ಡಿ ಕ್ರಿಶ್ಚಿಯನ್. ಆ ಕಾರಣದಿಂದಾಗಿಯೇ ನಾಯ್ಡು ಮಾಡಿದ ಆರೋಪದಿಂದ ಹೊತ್ತಿ
ಕೊಂಡ ಬೆಂಕಿ ಇನ್ನೂ ಜೋರಾಗಿ ಉರಿಯುತ್ತಿದೆ. ಈ ವಿಷಯ ದೊಡ್ಡ ವಿವಾದವಾಗುತ್ತಿದ್ದಂತೆ ಕೇಂದ್ರ ಆರೋಗ್ಯ
ಸಚಿವ ಜೆ.ಪಿ.ನಡ್ಡಾ ತಕ್ಷಣ ಮುಖ್ಯಮಂತ್ರಿ ನಾಯ್ಡು ಜತೆಗೆ ಮಾತನಾಡಿ ಈ ಬಗ್ಗೆ ವರದಿ ಕೇಳಿದ್ದಾರೆ. ಅಲ್ಲದೆ, ತಾವು
ಕೂಡ ಸಂಬಂಧಪಟ್ಟ ಎಲ್ಲಾ ರಾಜಕೀಯ ಪಕ್ಷಗಳಿಂದ ಮಾಹಿತಿ ಕಲೆಹಾಕುವುದಾಗಿ ಭರವಸೆ ನೀಡಿದ್ದಾರೆ.

ಕುತೂಹಲಕರ ಸಂಗತಿಯೆಂದರೆ, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಗದ್ದಲಕ್ಕೆ ಕಾರಣವಾಗಿರುವ ಈ ‘ಲಡ್ಡು
ಪರೀಕ್ಷೆಯ ಪ್ರಯೋಗಾಲಯದ ವರದಿಯಲ್ಲಿ’ ಎಲ್ಲೂ ಅದು ತಿರುಪತಿ ಬಾಲಾಜಿ ದೇವಾಲಯದ ಲಡ್ಡು ಎಂದು
ನಿರ್ದಿಷ್ಟವಾಗಿ ಹೇಳಿಲ್ಲ. ವರದಿಯ ಮೊದಲ ಪುಟದಲ್ಲಿ ಅದನ್ನು ತಿರುಪತಿ ತಿರುಮಲ ದೇವಸ್ಥಾನಮ್ (ಟಿಟಿಡಿ)
ಮಂಡಳಿಯ ಅಧಿಕಾರಿಯನ್ನು ಸಂಬೋಧಿಸಿ ಬರೆದಿರುವಂತೆ ಇದೆಯಾದರೂ, ಲಡ್ಡುವಿನ ಉಲ್ಲೇಖವಿರುವ ಪುಟ ದಲ್ಲಿ ಎಲ್ಲೂ ಟಿಟಿಡಿ ಎಂಬ ಉಲ್ಲೇಖವಿಲ್ಲ.

ಹೀಗಾಗಿ, ಸಹಜವಾಗಿಯೇ, ಈ ಬಗ್ಗೆ ಅಧಿಕೃತ ವರದಿ ಬಿಡುಗಡೆ ಆಗುವವರೆಗೂ ಪ್ರಯೋಗಾಲಯದ ವರದಿಯ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನ ಇದ್ದೇ ಇರುತ್ತದೆ. ಮೊದಲು ಈ ಅನುಮಾನ ನಿವಾರಣೆಯಾಗಬೇಕು. ಲಡ್ಡು ಬಗ್ಗೆ ಚಂದ್ರಬಾಬು ನಾಯ್ಡು ಆರೋಪ ಮಾಡುತ್ತಿದ್ದಂತೆ ವೈಎಸ್‌ಆರ್ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯ ಮಂತ್ರಿ ಜಗನ್‌ಮೋಹನ ರೆಡ್ಡಿ ಪತ್ರಿಕಾಗೋಷ್ಠಿ ನಡೆಸಿ ಚಂದ್ರಬಾಬು ನಾಯ್ಡು ವಿರುದ್ಧ ಹರಿಹಾಯ್ದಿದ್ದಾರೆ,
‘ಚಂದ್ರಬಾಬುಗೆ ಧರ್ಮವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಚಟ ಮೊದಲಿನಿಂದಲೂ ಇದೆ, ಈಗಲೂ
ಅವರು ಅದನ್ನೇ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ತಮ್ಮ ನೇತೃತ್ವದ ಮೊದಲ ೧೦೦ ದಿನಗಳ ಆಡಳಿತದಲ್ಲಿ ಉಂಟಾದ ವೈಫಲ್ಯವನ್ನು ಮರೆಮಾಚಿ ಜನರ ಗಮನ ವನ್ನು ಬೇರೆಡೆ ಸೆಳೆಯುವುದಕ್ಕಾಗಿ ಲಡ್ಡುವಿನಲ್ಲಿ ಬಳಸಲಾದ ತುಪ್ಪದಲ್ಲಿ ಕಲಬೆರಕೆ ಮಾಡಲಾಗಿದೆ ಎಂದು ನಾಯ್ಡು ಆರೋಪ ಮಾಡಿ ವಿವಾದ ಹುಟ್ಟುಹಾಕಿದ್ದಾರೆ ಎಂದು ಜಗನ್ ಹೇಳಿದ್ದಾರೆ.

ವೈಎಸ್‌ಆರ್ ಪಕ್ಷದ ನಾಯಕ ಹಾಗೂ ಟಿಟಿಡಿಯ ಮಾಜಿ ಚೇರ್ಮನ್ ವೈ.ವಿ.ಸುಬ್ಬಾ ರೆಡ್ಡಿ ಕೂಡ ಅಖಾಡಕ್ಕೆ
ಪ್ರವೇಶಿಸಿ, ‘ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ಉಂಟುಮಾಡುವ ಮೂಲಕ ಚಂದ್ರಬಾಬು ನಾಯ್ಡು ಅವರು
ತಿರುಪತಿ ಬಾಲಾಜಿ ದೇಗುಲದ ಪಾವಿತ್ರ್ಯವನ್ನೇ ಹಾಳುಗೆಡವಿದ್ದಾರೆ’ ಎಂದು ಕಿಡಿಕಾರಿದ್ದಾರೆ. ಈ ನಡುವೆ ಆಂಧ್ರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಜಗನ್ ಸಹೋದರಿ ವೈ.ಎಸ್.ಶರ್ಮಿಳಾ ರೆಡ್ಡಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಈ ವಿಷಯದಲ್ಲಿ ಸಿಬಿಐ ತನಿಖೆ ನಡೆಸಬೇಕೆಂದು ಕೋರಿದ್ದಾರೆ. ಇಂಥ ಸೂಕ್ಷ್ಮ ವಿಷಯವನ್ನು ರಾಜಕೀಕರಣಗೊಳಿಸಬಾರದು ಎಂದು ಅವರು ಹೇಳಿದ್ದಾರೆ.

ಸಂಸದೀಯ ಸಮಿತಿಯ ಸದಸ್ಯನಾಗಿ ನಾನು ಈ ಹಿಂದೆ ಖುದ್ದಾಗಿ ತಿರುಪತಿ ದೇವಾಲಯದ ವ್ಯವಹಾರಗಳನ್ನು
ಗಮನಿಸಿದ್ದೇನೆ. ನನ್ನ ದೃಷ್ಟಿಯಲ್ಲಿ ಅಲ್ಲಿನ ಅಡುಗೆಮನೆ ಅತ್ಯಂತ ಉತ್ಕೃಷ್ಟ ಗುಣಮಟ್ಟದ್ದಾಗಿದೆ. ಅಲ್ಲಿ ಲಡ್ಡು ತಯಾರಿಕೆಯ ವಿಷಯದಲ್ಲಿ ತುಂಬಾ ಕಾಳಜಿ ವಹಿಸಲಾಗುತ್ತದೆ. ಅದನ್ನು ಅತ್ಯಂತ ಪವಿತ್ರ ಪ್ರಸಾದವೆಂದು ಪರಿಗಣಿಸಲಾಗುತ್ತದೆ. ಟಿಟಿಡಿ ಬಳಿ ಅದರದೇ ಆದ ಪ್ರಯೋಗಾಲಯವಿದೆ. ಅಲ್ಲಿ ಲಡ್ಡು ಪ್ರಸಾದಕ್ಕೆ ಬಳಸುವ ಪ್ರತಿಯೊಂದು ವಸ್ತುಗಳನ್ನೂ ಪರೀಕ್ಷಿಸಲಾಗುತ್ತದೆ. ಭಕ್ತರಿಗೆ ವಿತರಿಸುವುದಕ್ಕೂ ಮೊದಲು ಪ್ರತಿನಿತ್ಯ ಲಡ್ಡು ಪ್ರಸಾದವನ್ನು ಪರೀಕ್ಷಿಸಿ ಪ್ರಮಾಣೀಕರಿಸಲಾಗುತ್ತದೆ. ನಂತರವಷ್ಟೇ ಲಡ್ಡುಗಳಿಂದ ತುಂಬಿದ ಟ್ರೇಗಳು ಅಡುಗೆ ಮನೆಯಿಂದ ಪ್ರಸಾದ ವಿತರಣೆಯ ಕೌಂಟರ್‌ಗೆ ತೆರಳುತ್ತವೆ. ಇಂಥ ಕಟ್ಟುನಿಟ್ಟಿನ ವ್ಯವಸ್ಥೆಯಿರುವಾಗ ಲಡ್ಡುವಿನಲ್ಲಿ ಪ್ರಾಣಿಜನ್ಯ ಕೊಬ್ಬಿನಂಶವಿರುವ ತುಪ್ಪವನ್ನು ಬಳಸುತ್ತಿದ್ದರೆ ಅದು ಯಾರಿಗೂ ಗೊತ್ತಾಗದೆ ಇರುವುದು ಹೇಗೆ? ನಾನು ಈ ಅಂಕಣ ಬರೆಯುತ್ತಿರುವಾಗ, ಲಡ್ಡುವಿನಲ್ಲಿ ಬಳಸಿದ ನಿರ್ದಿಷ್ಟ ಬ್ರ್ಯಾಂಡ್‌ನ ತುಪ್ಪವೊಂದು ಕಲಬೆರಕೆ ಯಾಗಿತ್ತು ಎಂದು ಸೋಷಿಯಲ್ ಮೀಡಿಯಾದಲ್ಲಿ ಗುಲ್ಲೆದ್ದಿದೆ.

ಆದರೆ, ವಾಸ್ತವವಾಗಿ ಆ ಬ್ರ್ಯಾಂಡ್‌ನ ತುಪ್ಪವನ್ನು ನಾವು ಲಡ್ಡು ತಯಾರಿಕೆಗೆ ಬಳಸಿಯೇ ಇಲ್ಲ ಎಂದು ಟಿಟಿಡಿ
ಹೇಳುತ್ತಿದೆ. ನಾನಿದನ್ನು ಏಕೆ ಹೇಳುತ್ತಿದ್ದೇನೆ ಅಂದರೆ, ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ಪ್ರಮಾಣೀಕೃತ ವಲ್ಲದ ಅರೆಬೆಂದ ಮಾಹಿತಿ ಅಥವಾ ವದಂತಿಗಳು ಬಹಳ ಬೇಗ ಎಲ್ಲೆಡೆ ಹರಡುತ್ತವೆ. ಅವುಗಳನ್ನು ಜನರು ಹಿಂದೆ ಮುಂದೆ ನೋಡದೆ ನಂಬುತ್ತಾರೆ ಮತ್ತು ಬಹಳ ಉತ್ಸಾಹದಿಂದ ತಮ್ಮ ಕೈಯಾರೆ ಇನ್ನಷ್ಟು ಜನರಿಗೆ ಹಂಚಿಕೆ ಮಾಡುತ್ತಾರೆ. ಅದೃಷ್ಟವಶಾತ್ ಇಂದು ಹೀಗೆ ಹರಡುವ ಸುಳ್ಳು ಸುದ್ದಿಗಳ ಬಣ್ಣವನ್ನು ತಕ್ಷಣ ಬಯಲು ಮಾಡಿ ವದಂತಿಗಳಿಗೆ ತೆರೆ ಎಳೆಯುವ ಕೆಲಸವನ್ನೂ ಕೆಲವರು ಮಾಡುತ್ತಿದ್ದಾರೆ.

ತಿಮ್ಮಪ್ಪನ ಭಕ್ತರೊಬ್ಬರು ನನಗೆ ಇನ್ನೊಂದು ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿದರು. ಆಂಧ್ರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಜೂನ್ ತಿಂಗಳಲ್ಲಿ ಚಂದ್ರಬಾಬು ನಾಯ್ಡು ಸರಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಜೂನ್ 14ರಂದು ಟಿಟಿಡಿಗೆ ಹೊಸ ಸಿಇಒ ಆಗಿ ಶ್ಯಾಮಲ ರಾವ್ ಅವರನ್ನು ನೇಮಕ ಮಾಡಿತ್ತು. ಅವರು
ಜೂನ್ 21ರಂದು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಒಂದನ್ನು ಪೋಸ್ಟ್ ಮಾಡಿ, ‘ಶುದ್ಧ ತುಪ್ಪದಿಂದ
ತಯಾರಿಸಿದ ಲಡ್ಡು ತಿಂದಿದ್ದೀರಾ?’ ಎಂದು ಕೇಳಿದ್ದರು.

ಇದರರ್ಥ ಏನು? ಜನರ ನಂಬಿಕೆಗಳ ಜತೆ ಆಟವಾಡುವುದು ಅಥವಾ ಧಾರ್ಮಿಕ ಶ್ರದ್ಧೆಯನ್ನು ಘಾಸಿಗೊಳಿಸುವುದು ಸುಲಭ. ಆದರೆ ಇಂಥ ದಾಳಿಗಳು ತುಂಬಾ ಆಳವಾದ ಗಾಯ ಉಂಟುಮಾಡಿ, ಶಾಶ್ವತವಾಗಿ ಕಲೆ ಉಳಿಸಿಬಿಡುತ್ತವೆ.
ತಿರುಪತಿಯ ವಿಷಯದಲ್ಲೂ ಈಗ ಅದೇ ಆಗುತ್ತಿದೆ. ನಿಜಕ್ಕೂ ಇದು ದುರದೃಷ್ಟಕರ ಸಂಗತಿ. ಮೊದಲು ಸರಿಯಾದ
ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಬೇಕಿತ್ತು.

ನಂತರವಷ್ಟೇ ಬಹಿರಂಗ ಹೇಳಿಕೆ ನೀಡಬೇಕಿತ್ತು. ಇದನ್ನು ಮಾಡುವುದು ಸರಕಾರಕ್ಕೆ ಕಷ್ಟದ ಕೆಲಸವಾಗಿರಲಿಲ್ಲ.
ಇದ್ಯಾವುದನ್ನೂ ಮಾಡದೆ, ತನಿಖೆಗೂ ಮೊದಲೇ ವಿವಾದಾಸ್ಪದ ವಿಷಯವನ್ನು ಬಹಿರಂಗಪಡಿಸುವುದು ಸರಿಯಾದ ಕ್ರಮ ಅಲ್ಲ. ಇಂಥ ಕೃತ್ಯಗಳಿಂದ ಸಮಾಜದಲ್ಲಿನ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗುತ್ತದೆ. ಅದು ದೇಶವನ್ನು ದುರ್ಬಲಗೊಳಿಸುತ್ತದೆ. ಧರ್ಮ, ಜಾತಿ, ಭಾಷೆ ಅಥವಾ ಬಣ್ಣದ ಆಧಾರದ ಮೇಲೆ ರಾಜಕಾರಣ ನಡೆಸುವುದು ಶುದ್ಧ
ತಪ್ಪು. ಈಗ ದೇವರ ಪವಿತ್ರ ಪ್ರಸಾದ ಕೂಡ ರಾಜಕಾರಣಕ್ಕೆ ಬಲಿಯಾಗಿದೆ. ಓ ದೇವರೇ, ಇಂಥ ರಾಜಕಾರಣವನ್ನು
ನೀನೇ ಕ್ಷಮಿಸು! ಸಾಧ್ಯವಾದರೆ ಈ ಜನರಿಗೆ ಇನ್ನಷ್ಟು ಒಳ್ಳೆಯ ಬುದ್ಧಿ ಕೊಡು. ಕೊನೆಯ ಪಕ್ಷ ದೇವರನ್ನು ರಾಜಕೀಯದಿಂದ ಹೊರಗಿಡುವ ಒಳ್ಳೆಯ ಮನಸ್ಸನ್ನಾದರೂ ಅವರಿಗೆ ನೀಡು!

(ಲೇಖಕರು ಹಿರಿಯ ಪತ್ರಿಕೋದ್ಯಮಿ)

ಇದನ್ನೂ ಓದಿ: Dr. Vijay Darda Column: ಇಷ್ಟಕ್ಕೂ ರಾಷ್ಟ್ರಪತಿಗಳ ಆಘಾತಕ್ಕೆ ಬಲವಾದ ಕಾರಣವಿದೆ !