Friday, 22nd November 2024

ಎದೆತುಂಬಿ ಹಾಡಿ ನೂರೊಂದು ನೆನಪುಗಳನ್ನು ಬಿಟ್ಟುಹೋದ ಭಾವಜೀವಿ

ಅಭಿಮತ
ಉಷಾ ಜೆ.ಎಂ

ಈ ಗಾಯನ ಮಾಂತ್ರಿಕನಿಗೆ 6 ಬಾರಿ ರಾಷ್ಟ್ರ ಪ್ರಶಸ್ತಿ, 25 ಬಾರಿ ನಂದಿ ಪ್ರಶಸ್ತಿ ಬಂದಿವೆ. ಒಂದೇ ದಿನದಲ್ಲಿ ಅತಿ ಹೆಚ್ಚು ಹಾಡು  ಗಳನ್ನು ರೆಕಾರ್ಡ್ ಮಾಡಿದ ಹೆಗ್ಗಳಿಕೆಯೂ ಇವರದೇ. ದಾದ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಎಲ್ಲಾ ರೀತಿಯಲ್ಲಿ ಅರ್ಹರಿದ್ದರೂ, ಪದ್ಮಭೂಷಣ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದದ್ದು ವಿಪರ್ಯಾಸ.

ಸಂಗೀತ ಒಂದು ವಿಶ್ವಭಾಷೆ. ಕೆಲವರು ಸಂಗೀತವನ್ನು ಆತ್ಮಕ್ಕೆ ದಾರಿ ಎಂದು ಹೇಳುತ್ತಾರೆ. ಸಂಗೀತ ಭಾವನೆಗಳನ್ನು ವ್ಯಕ್ತಪಡಿ ಸುವ ಒಂದು ರೂಪ. ಇದು ಒಂದು ರೀತಿಯಲ್ಲಿ ಕಥೆಯನ್ನು ಹೇಳುವ ಒಂದು ಬಗೆ. ಸಮಾಜವನ್ನು ಒಗ್ಗೂಡಿಸುವ ಒಂದು ಬೆಸುಗೆ ಹಾಗೂ ಭಾವನಾತ್ಮಕ ಕೊಂಡಿ. ಒಂದು ಅಧ್ಯಯನದ ಪ್ರಕಾರ ಸಂಗೀತ ಮೆದುಳಿನ ಎಲ್ಲಾ ಭಾಗಗಳನ್ನು ಉತ್ತೇಜಿಸುತ್ತದೆ.

ಸಂಗೀತಕ್ಕೂ, ನೆನಪುಗಳಿಗೂ ಹಾಗೂ ಭಾವನೆಗಳಿಗೂ ಅವಿನಾಭಾವ ಸಂಬಂಧ. ಹಳೆಯ ಹಾಡುಗಳು ಹಳೆಯ ನೆನಪುಗಳ ಬುತ್ತಿಯನ್ನು ಹೊತ್ತು ತರುತ್ತವೆ. ಈ ಅನುಭವ ಹೆಚ್ಚೂ ಕಡಿಮೆ ಎಲ್ಲರಿಗೂ ಆಗಿರುತ್ತದೆ. ಯಾವುದಾದರೂ ಹಳೆಯ ಹಾಡನ್ನು ಕೇಳಿದಾಗ ಮನಸ್ಸು ಒಂದು ನಿರ್ದಿಷ್ಟ ಕಾಲಕ್ಕೆ ಹೋಗಿ ಬಿಡುತ್ತದೆ. ನಾವು ಅದೇ ಕಾಲದಲ್ಲಿದ್ದೇವೆ ಎನ್ನುವಷ್ಟರ ಮಟ್ಟಿಗೆ ವರ್ತಮಾನವನ್ನೇ ಮರೆತಿರುತ್ತೇವೆ. ನೊಂದಿರುವ ಮನಸ್ಸುಗಳನ್ನು ಸಮಾಧಾನಪಡಿಸುವ ಶಕ್ತಿ ಸಂಗೀತಕ್ಕಿದೆ. ನಮ್ಮ ನೆಚ್ಚಿನ
ಹಾಡು ಕೇಳಿದರೆ ಸ್ವಲ್ಪ ಸಮಾಧಾನವಾಗುವುದು ಖಚಿತ. ಎಷ್ಟೋ ಹಾಡುಗಳು ನಮ್ಮ ಜೀವನದ ಒಂದಲ್ಲ ಒಂದು ಕ್ಷಣಕ್ಕೆ ತಳಕು ಹಾಕಿಕೊಂಡಿರುತ್ತವೆ.

ಸಿಹಿ – ಕಹಿ ನೆನಪುಗಳನ್ನು ಹೊತ್ತುತರುವ ಇಂತಹ ಹಾಡುಗಳ ಸಿನಿಮಾಗಳನ್ನು ಎಷ್ಟೋ ಬಾರಿ ನಾವು ನೋಡಿರುವುದೇ ಇಲ್ಲ.
ಒಂದು ಹಾಡಿನ ಸಾಹಿತ್ಯಕ್ಕೆ ರಾಗ, ರಾಗಕ್ಕೆ ತಕ್ಕಂತೆ ಕಂಠಸಿರಿ ಇದ್ದಾಗ ಮಾತ್ರ ಸಂಗೀತ ಶ್ರೀಮಂತವೆನಿಸುತ್ತದೆ. ತನ್ನ ಅದ್ಭುತವಾದ ಕಂಠಸಿರಿಯಿಂದ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದ್ದು ನಮ್ಮ ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ.
ದಣಿವರಿಯದ 50 ವರ್ಷಗಳ ವೃತ್ತಿಜೀವನದಲ್ಲಿ, 16 ಭಾಷೆಗಳಲ್ಲಿ ಹಾಡಿದ 40000ಕ್ಕೂ ಅಧಿಕ ಹಾಡುಗಳು, ಸುಮಾರು 5 ರಿಂದ 6 ತಲೆಮಾರುಗಳ ಶ್ರೋತೃಗಳನ್ನು ಒಂದೊಂದು ಕಾಲಕ್ಕೆ ಕರೆದುಕೊಂಡು ಹೋಗುತ್ತವೆ. ನಮ್ಮ ಬಾಲ್ಯದಲ್ಲಿ ಬೆಳಿಗ್ಗೆ ಏಳುತ್ತಿದ್ದುದು ನಮ್ಮ ಗ್ರಾಮದ ದೇವಸ್ಥಾನದಲ್ಲಿ ಪ್ರಸಾರ ಮಾಡುತ್ತಿದ್ದ ಲಿಂಗಾಷ್ಟಕಂ, ಬಿಲ್ವಾಷ್ಟಕಂ ಭಕ್ತಿಗೀತೆಗಳನ್ನು ಕೇಳುತ್ತಾ. ಎಂತಹ ಅನಾಸ್ತಿಕರನ್ನೂ ಮಂತ್ರ ಮುಗ್ಧರನ್ನಾಗಿಸುವ ಮಾಧುರ್ಯ ಧ್ವನಿಯದು.

ಈಗಲೂ ಈ ಹಾಡುಗಳನ್ನು ಕೇಳುತ್ತಿದ್ದರೆ ನಮಗೇ ಗೊತ್ತಿಲ್ಲದೆ ಬಾಲ್ಯಕ್ಕೆ ಜಾರಿ ಬಿಡುತ್ತೇವೆ. ದೃಶ್ಯ ಮಾಧ್ಯಮದ ಹಾವಳಿ ಇಲ್ಲದ ಕಾಲದಲ್ಲಿ ರೇಡಿಯೋ ಒಂದು ಮಾಯಾ ಪೆಟ್ಟಿಗೆಯಾಗಿತ್ತು. ಅದರಲ್ಲಿ ಪ್ರಸಾರ ಮಾಡುತ್ತಿದ್ದ ಚಲನಚಿತ್ರ ಗೀತೆಗಳ ಗಾಯಕರ ಹೆಸರನ್ನು ಉದ್ಘೋಷಕರು ಹೇಳುವುದಕ್ಕೂ ಮುಂಚೆಯೇ ಗಾಯಕರ ಹೆಸರು ಎಸ್.ಪಿ.ಬಾಲಸುಬ್ರಹ್ಮಣ್ಯಂ ಎಂದು ಎಲ್ಲರು ಹೇಳಿ
ಬಿಡುತ್ತಿದ್ದರು. ಇವರ ಪಲ್ಲವಿ ಅನುಪಲ್ಲವಿ, ಬಂಧನ, ಗೀತಾ, ಸಿಬಿಐ ಶಂಕರ್, ಚಂದನದ ಗೊಂಬೆ, ಅರುಣರಾಗ, ಬಯಲುದಾರಿ, ಪ್ರೇಮಲೋಕ, ರಣಧೀರ, ಯುದ್ಧಕಾಂಡ ಸಿನಿಮಾದ ಹಾಡುಗಳನ್ನು ಕೇಳಿದಾಗಲೆಲ್ಲ ನೆನಪಾಗುವುದು ಮನೆ ಮಂದಿಯ ಜೊತೆ ಅಕ್ಕಪಕ್ಕದ ಮನೆಯವರೆಲ್ಲರೂ ಕುಳಿತು ಹಾಡುಗಳನ್ನು ಆಸ್ವಾದಿಸುತ್ತಿದ್ದ ಕಾಲ.

ಇನ್ನು 90ರ ದಶಕವನ್ನಂತು ಎಸ್.ಪಿ.ಬಿ ಯವರು ತಮ್ಮ ಇಂಪಾದ ಹಾಡುಗಳಿಂದ ಸುವರ್ಣ ಯುಗವಾಗಿ ಜನಮಾನಸದಲ್ಲಿ ಉಳಿಯುವಂತೆ ಮಾಡಿದರು. ಹಮ್ ಆಪ್‌ಕೆ ಹೈ ಕೌನ್, ಮೈನೆ ಪ್ಯಾರ್ ಕಿಯಾ, ಸಾಜನ್, ಶ್ರೀರಾಮಚಂದ್ರ, ಚಿಕ್ಕ ಯಜಮಾನ್ರು, ಅಣ್ಣಯ್ಯ, ಗಡಿಬಿಡಿ ಗಂಡ, ಅಮೃತ ವರ್ಷಿಣಿ ಮುಂತಾದ ಸಿನಿಮಾ ಹಾಡುಗಳನ್ನು ಕೇಳಿದಾಗಲೆಲ್ಲ ಮತ್ತೆ ಅಂದಿನ ಸುಂದರ ದಿನಗಳು ಮರುಕಳಿಸಬಾರದೇ ಎಂದು ಅನ್ನಿಸದೆ ಇರಲಾರದು.

70ರ ದಶಕದಲ್ಲಿ ಪಿ.ಬಿ. ಶ್ರೀನಿವಾಸ್ ಅವರು ರಾಜ್ ಕುಮಾರ ಅವರ ಶಾರೀರವಾದ ಹಾಗೆ, ಕಿಶೋರ್ ಕುಮಾರ್ ಅವರು ರಾಜೇಶ್ ಖನ್ನ ಅವರ ಶಾರೀರವಾದರು. ಹಾಗೆಯೇ 90ರ ದಶಕದಲ್ಲಿ ಬಾಲುರವರು ಸಲ್ಮಾನ್ ಖಾನ್ ಅವರ ಧ್ವನಿಯಾದರು. ಟೇಪ್ ರೆಕಾರ್ಡರ್‌ಗಳಲ್ಲಿ, ವಾಕ್ಮನ್ ಗಳಲ್ಲಿ, ಗಣೇಶ ಚತುರ್ಥಿ, ಮೊಹರಂ ಸಂದರ್ಭದ ಸಾರ್ವಜನಿಕ ಸಮಾರಂಭಗಳಲ್ಲಿ ಬಾಲುರವರ
ಹಾಡುಗಳದ್ದೇ ಕಾರುಬಾರು.

ಈ ಗಾಯನ ಮಾಂತ್ರಿಕನಿಗೆ 6 ಬಾರಿ ರಾಷ್ಟ್ರ ಪ್ರಶಸ್ತಿ, 25 ಬಾರಿ ನಂದಿ ಪ್ರಶಸ್ತಿ ಬಂದಿವೆ. ಒಂದೇ ದಿನದಲ್ಲಿ ಹೆಚ್ಚು ಹಾಡುಗಳನ್ನು  ರೆಕಾರ್ಡ್ ಮಾಡಿದ ಹೆಗ್ಗಳಿಕೆಯೂ ಇವರದೇ. ದಾದ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಎಲ್ಲಾ ರೀತಿಯಲ್ಲಿ ಅರ್ಹರಿದ್ದರೂ, ಪದ್ಮ ಭೂಷಣ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದದ್ದು ವಿಪರ್ಯಾಸ. ಆದರೂ ಅಭಿಮಾನಿಗಳ ಹೃದಯದಲ್ಲಿ ಮಾತ್ರ ಇವರು ಎಂದಿಗೂ ಮೇರು ಪರ್ವತವೆ.

ಈ ಮೇರುಪರ್ವತ ಮನೆ ಮನೆಗೆ ಇನ್ನೂ ಹತ್ತಿರವಾದದ್ದು ಎದೆ ತುಂಬಿ ಹಾಡುವೆನು ಎಂಬ ಕಾರ್ಯಕ್ರಮದಿಂದ. ಸರ್ವೇಜನಾಃ ಸುಖೀನೋ ಭವಂತು ಎಂದು ಹೇಳಿ ಪ್ರಾರಂಭಿಸುತಿದ್ದ ಈ ಕಾರ್ಯಕ್ರಮ ಈಗಿನ ರಿಯಾಲಿಟಿ ಶೋಗಳಲ್ಲಿ ಇರುವ ಕೃತಕತೆ ಇಲ್ಲದೆ, ನೈಜವಾಗಿ, ಸರಳವಾಗಿದ್ದ ಕಾರ್ಯಕ್ರಮ. ಅಷ್ಟು ದೊಡ್ದ ಸಾಧಕರಾದರೂ ಮಕ್ಕಳೊಡನೆ ಮಗುವಾಗಿ ತಮ್ಮ ಮೃದು ಮಾತುಗಳಿಂದ ತಿದ್ದುತ್ತಿದ್ದರು. ಸ್ಪರ್ಧೆಯಲ್ಲಿ ಗೆಲ್ಲುವುದೇ ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ ಎಂದು ಸೋತ ಮಕ್ಕಳಿಗೆ ಕಿವಿಮಾತು ಹೇಳುತ್ತಿದ್ದರು.

ನಮ್ಮ ಕನ್ನಡ ನಾಡಿನ ದತ್ತು ಪುತ್ರ ಜನರಿಗೆ ಇಷ್ಟವಾದದ್ದು ಇವರಲ್ಲಿದ್ದ ಪ್ರತಿಭೆಯಿಂದಷ್ಟೆ ಅಲ್ಲ, ಅವರಲ್ಲಿದ್ದ ಆದರ್ಶ ಪ್ರಾಯವಾದ ವ್ಯಕ್ತಿತ್ವದಿಂದಲೂ ಹೌದು. ಎಸ್.ಪಿ.ಬಿ ಅವರು ಅದೆಷ್ಟೋ ಸಾಮಾಜಿಕ ಸೇವೆಗಾಗಿ ನಡೆಸುವ ಸಂಗೀತ ಕಾರ್ಯಕ್ರಮಗಳನ್ನು ಹಣ ಪಡೆಯದೆಯೇ ಭಾಗವಹಿಸಿದ್ದಾರೆ. ಆಂಧ್ರದ ನೆಲ್ಲೂರಿನಲ್ಲಿರುವ ಅವರ ಪೂರ್ವಜರ ಮನೆಯನ್ನು
ವೇದ ಶಾಲೆಯಾಗಿ ಪರಿವರ್ತಿಸಲು ಕಂಚಿ ಮಠಕ್ಕೆ ದಾನವಾಗಿ ಕೊಟ್ಟಿದ್ದಾರೆ. ಅನೇಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಟ್ಟಿದ್ದಾರೆ. ಒಂದೆರಡು ಸಿನಿಮಾಗಳನ್ನು ಕೊಟ್ಟು. ತಮ್ಮನ್ನು ತಾವು ಸಲೆಬ್ರಿಟಿ ಎಂದು ಕರೆಯುತ್ತ ಅಹಂಕಾರದಿಂದ ಮೆರೆಯುವ ಈಗಿನ ಎಷ್ಟೋ ಕಲಾವಿದರು ಬಾಲುರವರ ನಮ್ರತೆಯನ್ನು ನೋಡಿ ಕಲಿಯಬೇಕು.

ನಮ್ರತೆಯ ಜತೆಗೆ ಇದ್ದದ್ದು ಇದ್ದ ಹಾಗೆ ಹೇಳುವ ನಿಷ್ಟುರತೆ ಎಸ್.ಪಿ.ಯವರಲ್ಲಿತ್ತು. ಸಿನಿಮಾ ಸಮಾರಂಭಗಳಲ್ಲಿ ಪ್ರಶಸ್ತಿ ವಿತರಣೆಯಲ್ಲಿ, ದಕ್ಷಿಣ ಭಾರತೀಯರಿಗೆ ಮಾಡುವ ತಾರತಮ್ಯದ ಬಗ್ಗೆ ಎಷ್ಟೋ ಬಾರಿ ಧ್ವನಿ ಎತ್ತಿದ್ದರು. ರಿಯಾಲಿಟಿ
ಶೋಗಳಲ್ಲಿ ಚಪ್ಪಾಳೆ ಗಿಟ್ಟಿಸಿಕೊಳ್ಳಲು, ಮಕ್ಕಳಿಂದ ವಯಸ್ಕರರು ಹಾಡುವ ದ್ವಂದಾರ್ಥದ ಹಾಡುಗಳನ್ನು ಹಾಡಿಸಿ ಮಕ್ಕಳ ಮುಗ್ಧತೆಯನ್ನು ಹಾಳು ಮಾಡಬೇಡಿ ಎಂದು ಕಳಕಳಿಯನ್ನು ವ್ಯಕ್ತಪಡಿಸಿದ್ದರು.

ಸಾಧಕರಿಗೆ ಅಭಿಮಾನಿಗಳ ಜೊತೆ ಟೀಕಾಕಾರರು ಇರುತ್ತಾರೆ. ಇದಕ್ಕೆ ಎಸ್.ಪಿ.ಬಿಯವರು ಹೊರತಾಗಿಲ್ಲ. ಇವರು ಬೇರೆಯವರನ್ನು ಬೆಳೆಯಲು ಬಿಡುವುದಿಲ್ಲ ಎಂಬ ಅಪವಾದವಿತ್ತು. ಒಂದು ವೇಳೆ ಅದು ನಿಜವಾಗಿದ್ದರೆ 40000 ಹಾಡುಗಳನ್ನು ಹಾಡಿದ ಇವರ ಮಗ ಚರಣ್ ಕೇವಲ ಬೆರಳಣಿಕೆಯಷ್ಟು ಹಾಡುಗಳನ್ನು ಹಾಡಿ ತೃಪ್ತಿಪಟ್ಟುಕೊಳ್ಳಬೇಕಾಗಿರಲಿಲ್ಲ.
ಕೋವಿಡ್ ಕಾಲದಲ್ಲಿ ತೀರಿಹೋದ ಎಷ್ಟೋ ಜನರಿಗೆ ಸರಿಯಾದ ಶವ ಸಂಸ್ಕಾರ ಸಿಕ್ಕಿಲ್ಲ. ಈ ಮಾತು ವಿಐಪಿಗಳಿಗೂ ಅನ್ವಹಿಸುತ್ತದೆ. ಆದರೆ ಇವರು ತಮ್ಮ ಎದೆಯಾಳದಿಂದ ದೇವರ ಹಾಡುಗಳನ್ನು ಹಾಡಿ, ಎಲ್ಲರನ್ನು ಭಕ್ತಿ ಪರವಶರಾಗಿ ಮಾಡಿದ ಫಲದಿಂದಲೋ ಏನೋ ಕೋವಿಡ್ ಸಮಯದಲ್ಲೂ ಅಭಿಮಾನಿಗಳ ಮಧ್ಯೆ, ಶಿವ ಆರಾಧ್ಯ ಸಂಪ್ರದಾಯದ ವಿಧಿ ವಿಧಾನಗಳ ಮೂಲಕ ಭೂತಾಯಿಯ ಮಡಿಲು ಸೇರಿದರು.

ಬಾಲುರವರು ಶಾಸ್ತ್ರೀಯವಾಗಿ ಸಂಗೀತವನ್ನು ಕಲಿಯದಿದ್ದರೂ, ಸಂಗೀತ ಮೇಧಾವಿಯಾದ ಸರಸ್ವತಿ ಪುತ್ರ. ಭೂಲೋಕದಲ್ಲಿ ಸಂಗೀತ ಸುಧೆ ಹರಿಸಿದ್ದು ಸಾಕು, ಇನ್ನು ನಿನ್ನ ಸಂಗೀತ ಸೇವೆ ಏನಿದ್ದರೂ ದೇವಲೋಕದಲ್ಲಿ ಎಂಬಂತೆ ಸರಸ್ವತಿ ತನ್ನ ಪುತ್ರನನ್ನು,
ಶುಕ್ರವಾರದಂದೇ ತನ್ನ ಲೋಕಕ್ಕೆ ಕರೆದುಕೊಂಡು ಹೋದಂತೆ ಇದೆ.

ತನ್ನ ಸುಮಧುರ ಹಾಡುಗಳಿಂದ ಜನರ ಹೃದಯಗಳನ್ನು ತಣಿಸಿ, ಗತ ದಿನದ ಸಿಹಿ-ಕಹಿ ನೆನಪುಗಳನ್ನು ಮರುಕಳಿಸುವಂತೆ ಮಾಡಿದ ಸ್ವರ ಮಾಂತ್ರಿಕ ನಮ್ಮ ನಡುವೆ ಇಲ್ಲ ಎಂದು ನೆನೆದರೆ ನಮಗೇ ಗೊತ್ತಿಲ್ಲದೆ ಕಣ್ಣುಗಳು ತೇವವಾಗುತ್ತವೆ.  ಎಸ್.ಪಿ.ಬಿ ಯವರು ನಾವೆಲ್ಲಾ ಜೀವ ಮಾನ ಕೇಳಿದರೂ ಮುಗಿಯದಷ್ಟು ಹಾಡುಗಳನ್ನು ಕೊಟ್ಟಿದ್ದಾರೆ. ಈ ಹಾಡುಗಳ ಮೂಲಕ ಬಾಲು ರವರು ಚಿರಂಜೀವಿಯಾಗಿರುತ್ತಾರೆ. ಗಾನ ಗಂಧರ್ವನೊಡಗಿನ ಶ್ರೋತೃಗಳ ಸಂಬಂಧ ಎಂದೆಂದಿಗೂ ಮುಗಿಯದ ಬಂಧನ.