ಸ್ಮರಣೆ
ಸಂತೋಷ್
ಎಸ್ ಬಿಪಿ ಎಂಬ ಪದವೇ ಇಂಪಾದ ಗಾಯನದಂತೆ ರೋಮಾಂಚನಕಾರಿ ಅನುಭವ ನೀಡುತ್ತದೆ. ಅದುವೇ ಈ ಹೆಸರಿಗಿರುವ ಶಕ್ತಿ. ಇಡೀ ಭಾರತೀಯ ಚಿತ್ರರಂಗದಲ್ಲಿ ಆ ಹೆಸರಿಗೆ ಅಷ್ಟೊಂದು ಶಕ್ತಿಬರಲು ಶ್ರಮಿಸಿದ ಅಪ್ರತಿಮ ಸಾಧಕನ ಸಾಧನೆಯೂ ಸಹ ಅಲ್ಪವಲ್ಲ.
ಐವತ್ತು ವರ್ಷಗಳಲ್ಲಿ 40ಸಾವಿರ ಕ್ಕೂ ಅಧಿಕ ಗೀತೆಗಳನ್ನು ಹಾಡಿ ಭಾರತೀಯ ಮನಗೆದ್ದ ಪ್ರೀತಿಯ ‘ಗಾನ ಗಾರುಡಿಗ’ ಎಸ್‌ಪಿಬಿ.
ಆಂಧ್ರಪ್ರದೇಶದಲ್ಲಿ ಜನಿಸಿದರೂ ಅಖಂಡ ಭಾರತದಲ್ಲಿ ತನ್ನ ಗಾಯನ ಪ್ರತಿಭೆಯಿಂದಲೇ ತನ್ನತ್ತ ಸೆಳೆದ ಅನನ್ಯ ಸಾಧಕ. 1966ರ ಡಿಸೆಂಬರ್ 15ರಂದು ತೆಲುಗಿನ ಮರ್ಯಾದಾ ರಾಮಣ್ಣ ಎಂಬ ಚಲನಚಿತ್ರದಲ್ಲಿ ಏಮೀ ಮೋಹಂ (ಏನೀ ಮೋಹ) ಎಂದು ತನ್ನ ಗಾಯನ ಪ್ರತಿಭೆಯನ್ನು ಪ್ರದರ್ಶಿಸಿದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಇಡೀ ದಕ್ಷಿಣ ಭಾರತದ ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಘನತೆ ತಂದುಕೊಡುವಷ್ಟು ಎತ್ತರಕ್ಕೆ ಬೆಳೆದಿದ್ದು ಇತಿಹಾಸ.
ತೆಲುಗು, ತಮಿಳು, ಕನ್ನಡ, ಹಿಂದಿ ಸೇರಿದಂತೆ ಭಾರತದ 14 ಪ್ರಾದೇಶಿಕ ಭಾಷೆಗಳಲ್ಲಿ ಗೀತೆಗಳನ್ನು ಹಾಡಿ ರಂಜಿಸಿದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಯಾವುದೇ ಒಂದು ರಾಜ್ಯದ ಪ್ರತಿಭೆಯಾಗಿ ಸೀಮಿತಗೊಳ್ಳದೆ ಇಡೀ ಅಖಂಡ ಭಾರತದ ಪ್ರತಿಭೆಯಾಗಿ ಪ್ರಜ್ವಲಿಸಿದ ವಿಶಿಷ್ಟ ಪ್ರತಿಭೆ. ಇಡೀ ಭಾರತೀಯ ಚಿತ್ರರಂಗದಲ್ಲಿ ಹಿನ್ನೆಲೆ ಗಾಯನ ವಿಭಾಗಕ್ಕೆ ಘನತೆ ಒದಗಿಸುವಲ್ಲಿ ಶ್ರಮಿಸಿದ ಕೆಲವೇ ಕೆಲವು ಸಂಗೀತ ಸಾಧಕರ ಸಾಲಿನಲ್ಲಿ ಎಸ್‌ಪಿಬಿ ಪ್ರಮುಖರಾಗಿ ನಿಲ್ಲುತ್ತಾರೆ.
ಕನ್ನಡ ಚಲನಚಿತ್ರಗಳ ಗಾಯನದಮೂಲಕ ಕನ್ನಡಿಗರನ್ನು ಸೆಳೆದಿದ್ದರೂ, ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಮೂಲಕ ಕನ್ನಡದ ಮನಸುಗಳಿಗೆ ಮತ್ತಷ್ಟು ಹತ್ತಿರವಾದವರು. ‘ನನ್ನ ಶ್ರೇಯಸ್ಸಿನ ಸಿಂಹಪಾಲು ಕನ್ನಡಿಗರದು’ ‘ಕರ್ನಾಟಕ ಹಾಗೂ ಕನ್ನಡಿಗರು ನನ್ನ ಮನಸ್ಸಿನಲ್ಲಿ ಸದಾ ಹಸಿರು’ ಎಂದು ನುಡಿದ ಅವರ ನುಡಿಗಳು, ಕನ್ನಡಿಗರಿಗೆ ಹಾಗೂ ಕನ್ನಡ ನಾಡಿಗೆ ಅವರು
ಸಮರ್ಪಿಸಿದ ಗೌರವ ಸಮರ್ಪಣೆಗೆ ಸಾಕ್ಷಿ. ನಕ್ಕರೆ ಅದೇ ಸ್ವರ್ಗ ಎಂಬ ಚಲನಚಿತ್ರದ ಕನಸಿದೋ ನನಸಿದೋ ಎನ್ನುವ ಗೀತೆ ಯನ್ನು ಹಾಡುವ ಮೂಲಕ 1967ರಲ್ಲಿ ಕನ್ನಡ ಚಿತ್ರರಂಗವನ್ನು ಪ್ರವೇಶಿದ ಎಸ್.ಪಿ.ಬಾಲಸುಬ್ರಹ್ಮಣ್ಯಂ ತಮ್ಮ ನಗುವಿನ ಮೂಲಕವೇ ಅತ್ಯುತ್ತಮ ಗೀತೆಗಳನ್ನು ಕನ್ನಡದ ಮನಸುಗಳಿಗಾಗಿ ಹಾಡಿ ರಂಜಿಸಿದವರು. ಕನ್ನಡಿಗರ ಮನಸಿನಲ್ಲಿ ತಾನೊಬ್ಬ ಕನ್ನಡಿಗನಾಗಿಯೇ ಉಳಿದ ಸಾಧಕ. ಈ ಸಾಧಕನ ಮತ್ತೊಂದು ವಿಶೇಷತೆ ಎಂದರೆ, ತೆಲುಗು ಚಿತ್ರರಂಗದಲ್ಲಿ ಕರ್ನಾಟಕ ಸಂಗೀತ ಹಿನ್ನೆಲೆಯುಳ್ಳ ಗೀತೆಗಳನ್ನು ಹಾಡಿ ರಂಜಿಸಿ ಕರ್ನಾಟಕ ಸಂಗೀತದ ಘನತೆ ಹೆಚ್ಚಿಸಿದ್ದು.
1995ರಲ್ಲಿ ಕನ್ನಡದ ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರದಲ್ಲಿ ಹಾಡಿದ ಹಿಂದೂಸ್ಥಾನಿ ಸಂಗೀತ ಹಿನ್ನೆೆಲೆಯುಳ್ಳ ಗೀತೆಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕ ರಾಷ್ಟ್ರಪ್ರಶಸ್ತಿ ಲಭಿಸಿದ್ದು.
ಕನ್ನಡದಲ್ಲಿ ಅಭಿನಯಿಸಿದ ಚಿತ್ರಗಳು
1982- ಬಾಳೊಂದು ಚದುರಂಗ
1983- ತಿರುಗುಬಾಣ
1993- ಮುದ್ದಿನಮಾವ
1998- ಸಂದರ್ಭ
1999- ಮಾಯ
2003- ಮಹಾ ಎಡಬಿಡಂಗಿ
2007- ಕಲ್ಯಾಣೋತ್ಸವ
2007- ಹೆತ್ತರೆ ಹೆಣ್ಣನ್ನೆ ಹೆರಬೇಕು.