ಅಶ್ವತ್ಥಕಟ್ಟೆ
ranjith.hoskere@gmail.com
ಬಿಜೆಪಿಯವರು ಹಿಂದೂತ್ವದ ಅಜೆಂಡಾದಲ್ಲಿ ಚುನಾವಣೆಗೆ ಹೋದ ಸಮಯದಲ್ಲಿ, ಕಾಂಗ್ರೆಸ್ನವರು ಮುಸ್ಲಿಮರನ್ನು ಓಲೈಸಲು ಮುಂದಾದರೆ ಮುಸ್ಲಿಮರ ವೋಟುಗಳು ಭದ್ರವಾಗಬಹುದು. ಆದರೆ ‘ಹಿಂದ’ ಹಾಗೂ ಮೇಲ್ವರ್ಗದವರು ಬಿಜೆಪಿ ಯತ್ತ ವಾಲುವ ಅಪಾಯವೇ ಹೆಚ್ಚಿರುತ್ತದೆ.
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ದಿನದಿಂದ ದಿನಕ್ಕೆ ರಣ ರಂಗುಪಡೆಯುತ್ತಿದೆ. ಅದರಲ್ಲಿಯೂ ರಾಜ್ಯದ ಚುನಾವಣೆ ಕಾಂಗ್ರೆಸ್ಗೆ ಅಸ್ತಿತ್ವ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವುದರಿಂದ, ಸಹಜವಾಗಿಯೇ ವಾಕ್ಸಮರಗಳು ಜೋರಾಗಿವೆ. ಜನರದಲ್ಲಿ ಉಳಿಯುವ ಕಾರಣಕ್ಕಾಗಿ ಎರಡೂ ಪಕ್ಷಗಳು ಹಲವು ಅಸ್ತ್ರಗಳನ್ನು ಪ್ರಯೋಗಿಸು ತ್ತಿದ್ದು, ಆ ಎಲ್ಲವುಗಳಲ್ಲಿ ‘ಭಾವನಾತ್ಮಕ ವಿಷಯ’ಗಳೇ ಪ್ರದಾನವಾಗಿವೆಯೇ ಎನ್ನುವ ಅನುಮಾನಗಳು ಹೆಚ್ಚಾಗುತ್ತಿದೆ.
ಹೌದು, ಚುಣಾವಣೆಗೆ ನಾಲ್ಕೈದು ತಿಂಗಳು ಇರುವಾಗಲೇ ಜನ ಸಂಪರ್ಕ ಯಾತ್ರೆ, ಬಸ್ ಯಾತ್ರೆ ಹೀಗೆ ಸಾಲು ಸಾಲು ಯಾತ್ರೆಗಳನ್ನು ಕಾಂಗ್ರೆಸ್, ಜೆಡಿಎಸ್ ಹಾಗೂ ಆಡಳಿತರೂಢ ಬಿಜೆಪಿ ಆರಂಭಿಸಿವೆ. ಜೆಡಿಎಸ್ ‘ಪ್ರಾದೇಶಿಕ ಅಸ್ಮಿತೆ’ಯ ಹೆಸರಲ್ಲಿ ಚುನಾವಣಾ ಪ್ರಚಾರವನ್ನು ಕೈಗೆತ್ತಿಕೊಂಡಿದ್ದರೆ ಕಾಂಗ್ರೆಸ್ ಹಾಗೂ ಬಿಜೆಪಿ ಮಾತ್ರ ಅಭಿವೃದ್ಧಿಗಿಂತ ಹೆಚ್ಚಾಗಿ ಭಾವನಾತ್ಮಕ ವಿಷಯಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ಮತಗಳ ಕ್ರೋಡೀಕರಣಕ್ಕೆ ಬಳಸಿಕೊಳ್ಳುತ್ತಿವೆ ಎನ್ನುವುದು ಇತ್ತೀಚಿಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಬಿಜೆಪಿ ನಾಯಕರು ‘ಹಿಂದುತ್ವ’ದ ಅಜೆಂಡಾದಲ್ಲಿ ಚುನಾವಣೆ ನಡೆಸಲು ಸಿದ್ಧತೆ ನಡೆಸಿಕೊಂಡಿದ್ದರೆ, ಕಾಂಗ್ರೆಸ್ ‘ಅಹಿಂದ’ ಜಪ ಮಾಡುತ್ತಿದೆ. ಅದರಲ್ಲಿಯೂ ಪರಿಶಿಷ್ಟರ ಮೀಸಲನ್ನು ಬಿಜೆಪಿ ಸರಕಾರ ಹೆಚ್ಚಿಸಿದ ಬಳಿಕ ದಲಿತ ವೋಟುಗಳು ಎಲ್ಲಿ ಕಾಂಗ್ರೆಸ್ ಕೈಯಿಂದ ಜಾರಿ ಬಿಜೆಪಿ ಮಡಿಲು ಸೇರುವುದೋ ಎನ್ನುವ ಆತಂಕದಲ್ಲಿ ಪರಿಶಿಷ್ಟರ ಮತಗಳು ಚದುರದಂತೆ ಎಚ್ಚರವಹಿಸಲು ‘ದಲಿತ ಸಿಎಂ’ ಅಸ್ತ್ರವನ್ನು ಬಿಟ್ಟು ನೋಡುತ್ತಿದೆ.
ಈ ರೀತಿಯ ಪ್ರಯತ್ನಗಳು ರಾಜಕೀಯ ವಲಯದಲ್ಲಿ ಸರ್ವೇ ಸಾಮಾನ್ಯ. ಆದರೆ ಈ ಎಲ್ಲವನ್ನು ಮೀರಿ ದೇಶದ ಭದ್ರತೆ, ಅಸ್ಮಿತೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಮಾತನಾಡುವುದು ಅಥವಾ ಎಲ್ಲವನ್ನು ವಿರೋಧಿಸಲೇಬೇಕು ಎಂದು
ವಿರೋಧಿಸುವುದು ಸರಿಯಲ್ಲ. ಈ ರೀತಿ ಮಾಡುವುದರಿಂದ ಒಂದು ಸಮುದಾಯದ ಮತಗಳು ಸಿಗುವುದು ಎಷ್ಟು ನಿಜವೋ, ಅದರ ವಿರುದ್ಧವಿರುವ ಸಮುದಾಯದ ಮತಗಳು ಕೈಬಿಟ್ಟು ಹೋಗುವುದು ಅಷ್ಟೇ ನಿಜ.
ಆದರೆ ಈ ವಿಷಯದಲ್ಲಿ ಕಾಂಗ್ರೆಸ್ಗೆ ಹೆಚ್ಚು ನಷ್ಟ ಎನ್ನುವುದನ್ನು ಕಾಂಗ್ರೆಸಿಗರು ಮರೆಯಬಾರದು. ಹಿಂದೂತ್ವವೆಂದು ಬಿಜೆಪಿ ಎಷ್ಟು ಗಟ್ಟಿ ಧ್ವನಿ ಎತ್ತುವುದೋ ಅದಕ್ಕೆ ಪ್ರತಿಕ್ರಿಯಿಸಲು ಕಾಂಗ್ರೆಸ್ ಮುಸ್ಲಿಮರ ಪರ ಬ್ಯಾಟ್ ಬೀಸುತ್ತಿದ್ದಾರೆ. ಆದರೆ ಈ ರೀತಿ ಧ್ವನಿ ಎತ್ತಿದ ಸಮಯದಲ್ಲಿ ಕಾಂಗ್ರೆಸ್ಗೆ ಅರಿವಿಲ್ಲದೇ ಹಿಂದೂ ಮತಗಳು ಕಾಂಗ್ರೆಸ್ನಿಂದ ವಿಭಜನೆಯಾಗುತ್ತವೆ. ಒಂದು ವೇಳೆ ಆಪ್ ಅಥವಾ ಒವೈಸಿ ಪಕ್ಷಗಳು ಸ್ಪರ್ಧಿಸಿದರೆ, ಅತ್ತ ಮುಸ್ಲಿಂ ಮತಗಳು ಇಲ್ಲದೇ, ಇತ್ತ ಹಿಂದೂ ಮತಗಳೂ ಸಿಗದ ಪರಿಸ್ಥಿತಿ ಯಲ್ಲಿ ಕಾಂಗ್ರೆಸ್ ನಿಲ್ಲುತ್ತದೆ.
ಇದೀಗ ಹೊಸದಾಗಿ ಶುರುವಾಗಿರುವ ವಿವಾದಗಳೆಂದರೆ ಒಂದು ವೀರ ಸಾವರ್ಕರ್ ಅವರ ಭಾವಚಿತ್ರವನ್ನು ಬೆಳಗಾವಿಯ ವಿಧಾನಸಭೆಯಲ್ಲಿ ಹಾಕಿಸಿದ್ದಕ್ಕೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ವಿಷಯದಲ್ಲಿ ಹೇಳಿರುವ ಹೇಳಿಕೆ. ಕುಕ್ಕರ್ ಬಾಂಬ್ ಸೋಟದ ವಿಷಯದಲ್ಲಿ ಹೇಳುವುದಾದರೆ, ಭದ್ರತೆಯ ವಿಷಯ ದಲ್ಲಿ ಯಾವುದೇ ರಾಜಕೀಯ ಪಕ್ಷದವರೂ ಸಾಫ್ಟ್ ಆಗುವುದು ದೇಶದ ದೃಷ್ಟಿಯಿಂದ ಉತ್ತಮ ಬೆಳೆವಣಿಗೆಯಲ್ಲ. ಶಂಕಿತ ಉಗ್ರನ ವಿರುದ್ಧ ಹತ್ತಾರು ದಾಖಲೆಗಳಿದ್ದರೂ, ಆತನನ್ನು ಏಕಾಏಕಿ ಉಗ್ರನೆಂದು ಹೇಗೆ ಘೋಷಿಸಿದ್ದೀರಿ ಎಂದು ಪ್ರಶ್ನಿಸುವುದು ರಾಷ್ಟ್ರೀಯ ಪಕ್ಷವೊಂದರ ರಾಜ್ಯಾಧ್ಯಕ್ಷರಾಗಿ ಹೇಳುವ ಅಥವಾ ಪ್ರಶ್ನಿಸುವ ಪ್ರಶ್ನೆಯಲ್ಲ.
ಮತ್ತೊಂದು ವಿವಾದವೆಂದರೆ ಸೋಮವಾರದಿಂದ ಬೆಳಗಾವಿಯಲ್ಲಿ ಆರಂಭವಾಗಿರುವ ಚಳಿಗಾಲದ ಅಧಿವೇಶನದ ಮೊದಲ ದಿನ ವೀರ ಸಾವರ್ಕರ್ ಸೇರಿದಂತೆ ಆರು ಜನರ ಫೋಟೋವನ್ನು ವಿಧಾನಸಭೆಯಲ್ಲಿ ಹಾಕಲಾಗಿರುವುದು. ಮಹಾತ್ಮ ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್, ಸರ್ದಾರ್ ವಲ್ಲಭಬಾಯಿ ಪಾಟೀಲ್, ಬಸವಣ್ಣ, ವಿವೇಕಾನಂದ ಹಾಗೂ ಸಾವರ್ಕರ್ ಫೋಟೋಗಳನ್ನು ಹಾಕಲಾಗಿದೆ. ಆದರೆ ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರ ಫೋಟೋವನ್ನು ಹಾಕಿಲ್ಲ. ನೆಹರು ಅವರ ಸಂಪುಟದಲ್ಲಿದ್ದ ಪಟೇಲರ ಫೋಟೋ ಹಾಕುವಾಗ, ನೆಹರು ಫೋಟೋ ಬಿಟ್ಟಿರುವುದು ಸರಿಯಲ್ಲ ಎನ್ನುವುದು ಅನೇಕರ ವಾದವಾಗಿದೆ.
ಆದರೆ ಈ ವಿಷಯದಲ್ಲಿ ಕಾಂಗ್ರೆಸ್ ನೆಹರು ಫೋಟೋ ಏಕೆ ಹಾಕಿಲ್ಲ ಎಂದು ಪ್ರಶ್ನಿಸಿದಕ್ಕಿಂತ ಹೆಚ್ಚಾಗಿ ಸಾವರ್ಕರ್ ಫೋಟೋ ಹಾಕಿದ್ದು ಏಕೆ ಎನ್ನುವ ಪ್ರಶ್ನೆಯನ್ನು ಎತ್ತುತ್ತಿದೆ. ಸ್ವಾತಂತ್ರ್ಯ ಸೇನಾನಿ ಎನ್ನುವ ಕಾರಣಕ್ಕೆ ಸಾವರ್ಕರ್ ಫೋಟೋವನ್ನು ಹಾಕಿದ್ದರೆ, ಕರ್ನಾಟಕದವರೇ ಆಗಿರುವ ಹತ್ತಾರು ಸ್ವಾತಂತ್ರ್ಯ ಹೋರಾಟಗಾರರಿದ್ದರು ಅವರ ಫೋಟೋಗಳನ್ನು ಹಾಕಿಲ್ಲ. ಆದರೆ ಈ ವಿಷಯವನ್ನು ‘ಎತ್ತಿ’ ಹೋಗುವಲ್ಲಿ ಕಾಂಗ್ರೆಸ್ ವಿಫಲವಾಗಿದೆ.
ಸಾವರ್ಕರ್ರನ್ನು ವಿರೋಧಿಸುವ ಬದಲು ನೆಹರು ಫೋಟೋವನ್ನು ಏಕೆ ಹಾಕಿಲ್ಲವೆಂದು ಪ್ರಶ್ನಿಸಿದ್ದರೆ ಬಿಜೆಪಿ ಹಿನ್ನಡೆಯಾಗು ತ್ತಿತ್ತು. ಆದರೆ ಕಾಂಗ್ರೆಸ್ನವರು ಈ ವಿಷಯದಲ್ಲಿಯೂ ‘ಹಿಂದುತ್ವ’ ಅಥವಾ ಬಲಪಂಥೀಯತೆಯನ್ನು ತರುವ ಮೂಲಕ ಸಂಕಷ್ಟ ಮಾಡಿಕೊಳ್ಳುತ್ತಿದೆ. ಸಾವರ್ಕರ್ ಅವರನ್ನು ಕಾಂಗ್ರೆಸ್ ವಿರೋಧಿಸುತ್ತಿದ್ದಂತೆ, ಬಿಜೆಪಿಗರು ‘ಟಿಪ್ಪುವನ್ನು ಪ್ರೋತ್ಸಾಹಿಸುವ ನೀವು ಸಾವರ್ಕರ್ ಅವರನ್ನು ಏಕೆ ವಿರೋಧಿಸುವಿರಿ?’ ಎಂದು ಪ್ರಶ್ನಿಸಿದರೆ ಅದಕ್ಕೆ ಕಾಂಗ್ರೆಸ್ ಬಳಿ ಉತ್ತರವಿಲ್ಲವಾಗಿದೆ.
ಹಾಗೇ ನೋಡಿದರೆ, ಚುನಾವಣಾ ಸಮಯದಲ್ಲಿ ‘ಧರ್ಮ’ ದಂಗಲ್ ಎಷ್ಟೇ ನಡೆದರು ಅದರ ನೇರ ಲಾಭವನ್ನು ಬಿಜೆಪಿ ಪಡೆದುಕೊಳ್ಳಲಿದೆ. ಏಕೆಂದರೆ ಬಿಜೆಪಿ ಎಂದರೆ ಹಿಂದೂತ್ವದ ಪರವಾಗಿರುವ ಪಕ್ಷ ಎನ್ನುವ ಕಾರಣಕ್ಕೆ ಹೇಗಿದ್ದರೂ, ಮುಸ್ಲಿಂನ ವೋಟುಗಳು ಎಂದಿಗೂ ಬಿಜೆಪಿಯತ್ತ ವಾಲುವುದಿಲ್ಲ (ಇನ್ನು ಕೆಲವು ಮುಸ್ಲಿಂ ಮತದಾರರು ಎಂದಿಗೂ ಬಿಜೆಪಿ ಬಿಟ್ಟು ಹೋಗುವುದಿಲ್ಲ). ಆದ್ದರಿಂದ ಧರ್ಮದ ವಿಷಯದಲ್ಲಿ ಹಿಂದುತ್ವಕ್ಕೆ ಎಷ್ಟೇ ಒತ್ತುಕೊಟ್ಟು ಪ್ರಚಾರ ನಡೆಸಿದರೂ ಬಿಜೆಪಿಗೆ ನಷ್ಟ
ಎನ್ನುವುದು ಹೆಚ್ಚಿರುವುದಿಲ್ಲ. ಆದರೆ ಇದಕ್ಕೆ ತದ್ವಿರುದ್ಧವಾಗಿ ಕಾಂಗ್ರೆಸ್ ಪರಿಸ್ಥಿತಿಯಿದೆ.
ಏಕೆಂದರೆ ಕಾಂಗ್ರೆಸ್ ಮುಸ್ಲಿಂ ಮತಗಳೊಂದಿಗೆ ದಲಿತ ಹಾಗೂ ಹಿಂದುಳಿದ ವರ್ಗಗಳ ಮತಗಳನ್ನು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಿರುವಾಗ ಬಿಜೆಪಿಯವರು ಹಿಂದೂತ್ವದ ಅಜೆಂಡಾದಲ್ಲಿ ಚುನಾವಣೆಗೆ ಹೋದ ಸಮಯದಲ್ಲಿ, ಕಾಂಗ್ರೆಸ್ ನವರು ಮುಸ್ಲಿಮರನ್ನು ಓಲೈಸಲು ಮುಂದಾದರೆ ಮುಸ್ಲಿಮರ ವೋಟುಗಳು ಭದ್ರವಾಗಬಹುದು. ಆದರೆ ‘ಹಿಂದ’ ಹಾಗೂ ಮೇಲ್ವರ್ಗದವರು ಬಿಜೆಪಿಯತ್ತ ವಾಲುವ ಅಪಾಯವೇ ಹೆಚ್ಚಿರುತ್ತದೆ.
ಆ ಕಾರಣಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ‘ಸಾಫ್ಟ್ ಹಿಂದುತ್ವ’ವನ್ನು ಅಳವಡಿಸಿಕೊಂಡಿದ್ದರು. ಹಿಜಾಬ್, ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್ ಕಟ್ ಸೇರಿದಂತೆ ಹಲವು ವಿವಾದಗಳು ಎದ್ದಾಗಲೂ, ಡಿಕೆಶಿ ಅವರು ಬ್ಯಾಲೆನ್ಸ್ಡ್ ಆಗಿ ಮಾತನಾಡಲು ಪ್ರಯತ್ನಿಸುತ್ತಿದ್ದರು. ಆದರೆ ಮೊನ್ನೆ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಶಾರೀಕ್ ಪರ ವಕಾಲತ್ತು ವಹಿಸದಿದ್ದರೂ, ‘ತನಿಖೆ ನಡೆಸದೇ ಉಗ್ರನೆಂದು ಹೇಗೆ ಘೋಷಿಸಿದ್ದೀರಾ? ಕುಕ್ಕರ್ ಬ್ಲಾಸ್ಟ್ ಅನ್ನು ಬಾಂಬ್ ಬ್ಲಾಸ್ಟ್ ಎನ್ನುವಂತೆ ತೋರಿಸುವ ಮೂಲಕ ಬಿಜೆಪಿ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಪ್ರಕರಣವನ್ನು ಈ ರೀತಿ ಬಿಂಬಿಸಿದ್ದಾರೆ’ ಎನ್ನುವ ಮಾತುಗಳನ್ನು ಹೇಳುವ ಮೂಲಕ ಇಷ್ಟು ದಿನ ‘ನಿಭಾಯಿಸಿದ್ದ’ ಸಾಫ್ಟ್ ಹಿಂದೂತ್ವವನ್ನು ಒಂದೇ ದಿನಕ್ಕೆ ಕೆಡವಿ ಹಾಕಿಕೊಂಡಿದ್ದಾರೆ ಎಂದರೆ ತಪ್ಪಾಗುವುದಿಲ್ಲ.
ಆದರೆ, ರಾಜಕೀಯ ತಜ್ಞರ ಪ್ರಕಾರ ಡಿ.ಕೆ.ಶಿವಕುಮಾರ್ ಅವರು ಅಲ್ಪಸಂಖ್ಯಾತ ಮತಗಳನ್ನು ಸೆಳೆಯುವ ಉದ್ದೇಶಕ್ಕಾಗಿಯೇ ಈ ರೀತಿಯ ಸಹಾನುಭೂತಿ ತೋರಿಸಿದ್ದಾರೆ. ಮುಸ್ಲಿಂ ಮತಗಳನ್ನು ಓಲೈಸುವ ಅಥವಾ ಬಿಜೆಪಿ ವಿರೋಧಿಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕಾರಣಕ್ಕಾಗಿ ಈ ರೀತಿಯ ಹೇಳಿಕೆ ನೀಡಿರಬಹುದು. ಆದರೆ ಕರ್ನಾಟಕದಲ್ಲಿ ಎಂದಿಗೂ ಧರ್ಮದ ಆಧಾರದಲ್ಲಿ ಚುನಾವಣೆಗಳು ನಡೆದಿಲ್ಲ.
ಒಂದು ವೇಳೆ ನಡೆದರೂ, ಮುಸ್ಲಿಮರ ವೋಟುಗಳನ್ನು ಉಳಿಸಿಕೊಳ್ಳುವ ಕಾರಣಕ್ಕಾಗಿ ಮಾಡಿರುವ ಈ ಹೇಳಕೆ ಅವರದ್ದೇ ಸಮುದಾಯವಾಗಿರುವ ಒಕ್ಕಲಿಗರನ್ನು ಕಾಂಗ್ರೆಸ್ ನಿಂದ ದೂರ ಮಾಡಿದಂತಾಗುತ್ತದೆ ಎನ್ನುವುದು ಹಲವರ ಅಭಿಪ್ರಾಯ ವಾಗಿದೆ. ದಕ್ಷಿಣ ಭಾರತದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ರಾಜಕೀಯ ನೆಲೆಯೆಂದು ಉಳಿದಿರುವ ಏಕೈಕ ರಾಜ್ಯ ಕರ್ನಾಟಕ ವಾಗಿರುವುದರಿಂದ ಶತಾಯ ಗತಾಯ ಈ ರಾಜ್ಯದಲ್ಲಿ ತಮ್ಮ ಆಡಳಿತ ಸ್ಥಾಪನೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಈ ರೀತಿಯ ಪ್ರಯತ್ನವನ್ನು ಮುಂದುವರಿಸುವುದರಲ್ಲಿ ಅನುಮಾನವಿಲ್ಲ.
ಆದರೆ ರಾಜಕೀಯ ಪಕ್ಷಗಳ ಬೇಳೆ ಬೇಯಿಸಿಕೊಳ್ಳುವ ಕಾರಣಕ್ಕೆ ನೀಡುವ ಹೇಳಿಕೆಗಳಿಂದ ‘ಶಾಂತಿಯ ತೋಟವಾಗಿರುವ’ಲ್ಲಿ ಅಶಾಂತಿ ಸೃಷ್ಟಿಯಾಗಬಾರದು. ಏಕೆಂದರೆ ಕರ್ನಾಟಕ ಇಲ್ಲಿಯವರೆಗೆ ಇಲ್ಲಿನ ಶಾಂತಿ ಸೌಹಾರ್ದಕ್ಕೆ ಹೆಸರಾಗಿದೆಯೇ ಹೊರತು, ಹೊಡೆದಾಟಗಳಿಗಲ್ಲ ಎನ್ನುವುದನ್ನು ರಾಜಕೀಯ ಮುಖಂಡರು ಮರೆಯಬಾರದು.
Read E-Paper click here