Thursday, 28th November 2024

ಬದುಕಿನ ಮೌಲ್ಯ ಬಿಟ್ಟುಕೊಡದ ಯುರೋಪು

ವಿಶ್ವರಂಗ

ರಂಗಸ್ವಾಮಿ ಮೂಕನಹಳ್ಳಿ

ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳನ್ನ ಬಹಳವಾಗಿ ಪ್ರೀತಿಸುತ್ತಾರೆ. ಜಗತ್ತಿನ ಸಕಲ ಒಳ್ಳೆಯದು ತಮ್ಮ ಮಕ್ಕಳಿಗೆ ಸಿಕ್ಕಲಿ ಎನ್ನುವ ಹಂಬಲ ಅವರದು. ಇನ್ನು ಮಕ್ಕಳನ್ನ ಅವರು ಸಂಬೋಧಿಸುವ ರೀತಿಯೂ ಅನನ್ಯ. ಮಕ್ಕಳನ್ನ ಅಕ್ಕರೆಯಿಂದ ಆಸ್ಥೆಯಿಂದ ಬೆಳೆಸುತ್ತಾರೆ. ಕೆಲವರಿಗೆ ಮುಂದಿನ ಹತ್ತು ಅಥವಾ ಇಪ್ಪತ್ತು ವರ್ಷದಲ್ಲಿ ಮಕ್ಕಳೇನಾಗಬೇಕು ಎನ್ನುವ ಪ್ಲಾನಿಂಗ್ ಕೂಡ ಇರುತ್ತದೆ. ಯಾವುದು ಸರಿ? ಯಾವುದು ತಪ್ಪು? ಎನ್ನುವುದನ್ನ ವಿಶ್ಲೇಷಿಸುವುದು ಈ ಬರಹದ ಉದ್ದೇಶವಲ್ಲ; ಬದಲಿಗೆ, ಇಪ್ಪತ್ತು ಅಥವಾ ಮೂವತ್ತು ವರ್ಷದ ಹಿಂದಿನ ಭಾರತದಲ್ಲಿ ಅಂದರೆ ನನ್ನ ಬಾಲ್ಯದಲ್ಲಿದ್ದ ಪೋಷಕರ ನಡವಳಿಕೆ ಅದೆಷ್ಟು ಭಿನ್ನವಾಗಿತ್ತು ಎನ್ನುವುದನ್ನ ಮೆಲುಕು ಹಾಕುವುದು.

ಬಾರ್ಸಿಲೋನಾ ತಲುಪಿದಾಗ ಅಲ್ಲಿನ ಮಕ್ಕಳ ಲಾಲನೆ, ಪೋಷಣೆಯನ್ನ ಕಂಡಿದ್ದೇನೆ. ಅಲ್ಲಿನ ಪೋಷಕರ ನಡವಳಿಕೆ ಬಗ್ಗೆ ಒಂದಷ್ಟು ಮಾಹಿತಿಯನ್ನ ಹಂಚಿಕೊಳ್ಳುವುದು ಈ ಬರಹದ ಉದ್ದೇಶ.
ಬಾರ್ಸಿಲೋನಾ ತಲುಪಿದ ಮೊದಲ ದಿನಗಳ ಬವಣೆಯನ್ನ ಗೆದ್ದು ಆ ನಂತರ ಅಲ್ಲಿನ ಸಮಾಜಕ್ಕೆ ಹೊಂದಿಕೊಂಡಾಗ ಬಹಳಷ್ಟು ವಿಷಯಗಳು ಅಚ್ಚರಿಗೊಳಿಸಿದ್ದವು. ಅವುಗಳಲ್ಲಿ ಇಲ್ಲಿನ ಜನ ಅವರ ಮಕ್ಕಳನ್ನ ಸಾಕುವ ರೀತಿ ಕೂಡ ಒಂದು. ಇಲ್ಲಿ ಮಕ್ಕಳನ್ನ ಮನೆಯ ಇತರೆ ಸದಸ್ಯರಂತೆ ಕಾಣಲಾಗುತ್ತದೆ. ಅಂದರೆ ಅವರಿಗೆ ಯಾವುದೇ ರೀತಿಯ ವಿಶೇಷ ಸವಲತ್ತು ಇರುವುದಿಲ್ಲ. ಆದರೆ ಭಾರತದಲ್ಲಿ ಮಾತ್ರ ಇಂದಿಗೂ ಮಕ್ಕಳನ್ನ ಮನೆಯ ಇತರೆ ಸದಸ್ಯರಿಗಿಂತ ಹೆಚ್ಚಿನ ಪ್ರೀತಿ, ಗೌರವ ಮತ್ತು ಸವಲತ್ತು ನೀಡಿ ನಡೆಸಿಕೊಳ್ಳಲಾಗುತ್ತದೆ.

ಸಾಲಿನಲ್ಲಿ ಒಬ್ಬ ಎಂದು ನಾವು ನಿಲ್ಲಿಸುವುದಿಲ್ಲ, ಮಗುವನ್ನ ನಾವು ಮನೆಯ ಕೇಂದ್ರಬಿಂದು ಮಾಡಿ ನಮ್ಮ ಬದುಕನ್ನ ಅದರ ಸುತ್ತಮುತ್ತ ಕಟ್ಟಿಕೊಳ್ಳುತ್ತೇವೆ. ಯುರೋಪಿಯನ್ನರು
ಹಾಗಲ್ಲ, ಅವರು ಎಂದಿಗೂ ಸ್ವಸುಖವನ್ನ ಯಾವುದೇ ಕಾರಣಕ್ಕೂ ತ್ಯಾಗ ಮಾಡುವುದಿಲ್ಲ. ಇಲ್ಲಿ ಮಕ್ಕಳನ್ನ ಆದಷ್ಟು ಬೇಗ ಅಂದರೆ ಐದು ಅಥವಾ ಆರನೇ ವಯಸ್ಸಿನಿಂದ ಸ್ವತಂತ್ರವಾಗಿ ಬದುಕಲು ಬಿಡುತ್ತಾರೆ. ಮೂರು ಅಥವಾ ನಾಲ್ಕನೇ ವಯಸ್ಸಿಗೆ ಅವರನ್ನ ಸ್ವತಂತ್ರವಾಗಿ ಮಲಗಲು ಬಿಡುತ್ತಾರೆ. ಅವರಿಗೆ ಪ್ರತ್ಯೇಕ ಕೋಣೆ ಹೊಂದುವುದು ಅವಶ್ಯಕ, ಜತೆಗೆ ಕಡ್ಡಾಯ ಕೂಡ. ಭಾರತ ಈ ವಿಷಯದಲ್ಲಿ ಬದಲಾಗುತ್ತಿದೆ. ಅದರ ಕಾರಣ ವನ್ನ ‘ಇದಮಿತ್ಥಂ’ ಎಂದು ಹೇಳಲು ಬಾರದು.

ಆದರೂ ಹೆಚ್ಚಿನ ಮನೆಗಳಲ್ಲಿ ಇಂದಿಗೂ ಮಕ್ಕಳು ಹತ್ತು, ಹನ್ನೆರಡು ವಯಸ್ಸಿನವರೆಗೆ ಪೋಷಕರ ಜತೆ ಮಲಗುವುದು ಸಾಮಾನ್ಯ. ಇತ್ತೀಚಿನ ಭಾರತೀಯ ಪೋಷಕರಲ್ಲಿ ಬಹಳಷ್ಟು ಬದಲಾವಣೆ ಕಂಡುಬರುತ್ತಿದೆ. ಆದರೆ ಹಿಂದಿನ ಕಾಲದಲ್ಲಿ ಮಕ್ಕಳಿಗೆ ಎಂದು ವಿಶೇಷ ಕೊಠಡಿ ಇರುತ್ತಿದ್ದುದು ಅತಿ ವಿರಳ. ಇನ್ನು ಮಕ್ಕಳನ್ನ ‘ಸ್ಲೀಪ್ ಓವರ್’ ಅಂದರೆ ಸ್ನೇಹಿತರ ಮನೆಯಲ್ಲಿ ಮಲಗಲು ಕಳಿಸುವುದು ಕೂಡ ಇಲ್ಲಿ ಸಾಮಾನ್ಯ. ಐದಾರು ವಯಸ್ಸಿನ ಮಕ್ಕಳು ಗೆಳೆಯರ ಮನೆಗೆ ಹೋಗುವುದು, ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಬದುಕುವುದು ಸಹಜ. ಭಾರತದ ದೊಡ್ಡ ನಗರಗಳಲ್ಲಿ ಮಕ್ಕಳನ್ನ  ಕಾಂಪೌಂಡ್‌ನಿಂದ ಹೊರಗೆ ಬಿಡುವುದು ದುಸ್ತರ ಎನ್ನುವ ಸ್ಥಿತಿ ತಲುಪಿದೆ. ಹೀಗಾಗಿ ಇದರ ಬಗ್ಗೆ ಹೆಚ್ಚು ಮಾತನಾಡದಿರುವುದು ಉತ್ತಮ. ಇದಕ್ಕೆ ಪೂರಕವಾಗಿ ಇನ್ನೊಂದು ವಿಷಯವನ್ನ ಕೂಡ ಪ್ರಸ್ತಾಪಿಸಿಬಿಡುತ್ತೇನೆ.

ಇಲ್ಲಿನ ಮಕ್ಕಳು ಇಂದಿಗೂ ಬುಗುರಿ, ಕುಂಟೆಬಿಯಂಥ ಆಟವನ್ನ ಆಡುತ್ತಾರೆ. ಹೌದು, ಬಾರ್ಸಿಲೋನಾದಂಥ ನಗರದಲ್ಲಿ ಕೂಡ ಮಕ್ಕಳು ಇಂದಿಗೂ ಇಂಥ ಆಟಗಳನ್ನ ಆಡುತ್ತಾರೆ. ಆದರೆ ಭಾರತದಲ್ಲಿ ಅದರಲ್ಲೂ ನಗರ ಪ್ರದೇಶಗಳಲ್ಲಿ ಇಂಥ ಆಟಗಳ ಸಮಯವನ್ನ ಓದು ಅಥವಾ ಗ್ಯಾಜೆಟ್‌ಗಳು ಕಸಿದುಬಿಟ್ಟಿವೆ. ಇಲ್ಲಿ ಆಹಾರ ಪದಾರ್ಥಗಳು ಅತ್ಯಂತ ದುಬಾರಿ ಇರುವ ಕಾರಣ, ಕೊಟ್ಟದ್ದನ್ನ ಬಿಸಾಡದೆ ತಿನ್ನುವ ತಿಳಿವಳಿಕೆಯನ್ನ ಮಕ್ಕಳಿಗೆ ಎಳವೆಯಿಂದಲೇ ಕಲಿಸುತ್ತಾರೆ. ನಮ್ಮಲ್ಲಿ ಮಾತ್ರ ಆಹಾರ ಪದಾರ್ಥಗಳ ವಿಷಯದಲ್ಲಿ ಅದರಲ್ಲೂ ಮಕ್ಕಳ ವಿಷಯದಲ್ಲಿ ಬಹಳಷ್ಟು
ಸಲೀಸಾಗಿ ವರ್ತಿಸುತ್ತೇವೆ. ಅದರಲ್ಲೂ ಕೆಲವರು ಸಭೆ-ಸಮಾರಂಭದಲ್ಲಿ ಮಕ್ಕಳನ್ನ ಊಟಕ್ಕೆ ಕೂರಿಸುತ್ತಾರೆ. ಎಲೆಯಲ್ಲಿ ಬಡಿಸಿದ ತೊಂಬತ್ತು ಪ್ರತಿಶತ ಆಹಾರ ಪೋಲಾಗುತ್ತದೆ.

ಇಂಥ ವಿಷಯದಲ್ಲಿ ಯುರೋಪಿಯನ್ನರು ಬಹಳ ನಾಜೂಕು. ಸ್ವಲ್ಪ ಆಹಾರ ಕೂಡ ಪೋಲಾಗದಂತೆ ಬಹಳ ಎಚ್ಚರ ವಹಿಸುತ್ತಾರೆ. ಇದಕ್ಕೆ ಇಲ್ಲಿನ ಕಾಸ್ಟ್ ಆಫ್ ಲಿವಿಂಗ್ ಬಹಳ
ದುಬಾರಿ ಇರುವುದು ಒಂದು ಕಾರಣ. ಒಟ್ಟಿನಲ್ಲಿ ಮಕ್ಕಳಿಗೆ ಚಿಕ್ಕಂದಿನಿಂದ ಊಟದ ಬೆಲೆ ತಿಳಿದಿರುತ್ತದೆ. ನಾವು ಮಕ್ಕಳನ್ನ ತರಹೇವಾರಿ ಹೆಸರುಗಳಿಂದ ಕರೆದು ಮುದ್ದಿಸುತ್ತೇವೆ
ಅಲ್ಲವೇ? ಇದೇ ರೀತಿ ಯುರೋಪಿಯನ್ನರಲ್ಲೂ ಮಕ್ಕಳನ್ನ ಮೂಲಹೆಸರು ಬಿಟ್ಟು ಇತರೆ ಪ್ರೀತಿಯ ಹೆಸರುಗಳಿಂದ ಕರೆಯುವ ಪರಿಪಾಠವಿದೆ. ‘ಮಗಳೇ’ ಎಂದು ನಾವು ಪ್ರೀತಿಯಿಂದ ಕರೆಯುವಂತೆ ಇಲ್ಲಿ ‘ಹಿಹಾ’  ಎನ್ನುತ್ತಾರೆ. ಅಂದರೆ ಮಗಳ ಹೆಸರಿಡಿದು ‘ಹೇಗಿದ್ದೀಯ?’ ಎನ್ನುವುದಕ್ಕಿಂತ ‘ಮಗಳೇ ಹೇಗಿದ್ದೀಯ?’ ಎನ್ನುವಂತೆ ಇಲ್ಲಿಯೂ ಯಥಾವತ್ತು ಬಳಕೆಯಲ್ಲಿದೆ. ಮಗಳನ್ನ ಅಥವಾ ಮಗನನ್ನ ‘ಬಂಗಾರಿ/ಬಂಗಾರ’ ಎಂದು ಕರೆಯುತ್ತೇವೆ ಅಲ್ಲವೇ? ಇಲ್ಲಿಯೂ ‘ಓರೋ’ ಎಂದು ಕರೆಯುತ್ತಾರೆ.

‘ಮಗಳೇ ನೀನು ನನ್ನ ಪ್ರಾಣ, ಜೀವ’ ಎನ್ನುವ ಮಾತುಗಳನ್ನ ಕೂಡ ನಾವು ಬಹಳಷ್ಟು ಬಾರಿ ಬಳಸುತ್ತೇವೆ. ಸ್ಪೇನ್‌ನಲ್ಲಿ ಕೂಡ ಇದು ಯಥಾರೂಪದಲ್ಲಿ ಬಳಕೆಯಲ್ಲಿದೆ. ಇಲ್ಲಿ
‘ಹಿಹಾ ತು ಎರೇಸ್ ಮೀ ವಿದಾ’ ಎನ್ನುವ ವಾಕ್ಯವನ್ನ ಬಳಸಲಾಗುತ್ತದೆ. ಭಾಷೆ ಬದಲಾಯಿತು, ಆದರೆ ಮಗಳ, ಮಗನ ಮೇಲಿನ ಮಮಕಾರ ಮಾತ್ರ ಇಂಚೂ ಬದಲಾಗಲಿಲ್ಲ. ನಮ್ಮ ‘ಬಂಗಾರ’ ಇಲ್ಲಿ ‘ಓರೋ’ ಆಯಿತು, ‘ನನ್ನ ಪ್ರಾಣ, ಜೀವ’ ಎನ್ನುವುದು ‘ವಿದಾ’ ಆಯಿತು. ಆದರೆ ಮೋಹ, ಪ್ರೀತಿ ಮಾತ್ರ . ಇದೆಲ್ಲ ಇತ್ತೀಚಿನ ಪೋಷಕರ ಕಥೆಯಾಯ್ತು. ಹಿಂದಿನ
ಪೋಷಕರ ಅಂದರೆ ಇಂದಿಗೆ ಮೂವತ್ತು ಅಥವಾ ನಲವತ್ತು ವರ್ಷದ ಹಿಂದಿನ ಪೋಷಕರ ಕಥೆಯೇನು? ನಿಮಗೆಲ್ಲ ತಿಳಿದಿರಲಿ, ಯುರೋಪು ಎಂದ ಮಾತ್ರಕ್ಕೆ ಅಲ್ಲಿನ ದೇಶಗಳು ಸದಾ ಇಂದಿನ ನಯ, ನಾಜೂಕು, ಸಿರಿತನವನ್ನ ಹೊಂದಿರಲಿಲ್ಲ.

ಅಲ್ಲಿಯೂ ಬವಣೆಯ ಸಾವಿರ, ಲಕ್ಷಗಟ್ಟಲೆ ಕಥೆಯಿದೆ. ಹತ್ತು ಹನ್ನೆರಡು ವರ್ಷದ ಬಾಲಕರು ಹೊಟ್ಟೆಪಾಡಿಗಾಗಿ ದುಡಿತಕ್ಕೆ ಇಳಿದಿದ್ದ ನಿದರ್ಶನಗಳಿವೆ. ಆದರೆ ಅವೆಲ್ಲವನ್ನ ಮೀರಿ ಅವರು ಸಮಾಜವಾಗಿ ಒಂದು ಹಂತವನ್ನ ತಲುಪಿದ್ದಾರೆ. ಹಿಂದಿನ ಯುರೋಪಿನ ಪೋಷಕರ ಸ್ಥಿತಿ, ಭಾರತೀಯ ಪೋಷಕರ ಸ್ಥಿತಿಗಿಂತ ಅತ್ಯಂತ ಉನ್ನತವಾಗೇನೂ ಇರಲಿಲ್ಲ. ಬೆಳಗ್ಗೆಯಿಂದ
ಸಂಜೆಯವರೆಗೆ ದುಡಿತದಲ್ಲಿ ಇರುತ್ತಿದ್ದ ಪೋಷಕರಿಗೆ ಮಕ್ಕಳ ಜತೆಗೆ ಸಮಯ ಕಳೆಯುವುದು ಕಷ್ಟವಾಗುತ್ತಿತ್ತು. ‘ಅಜ್ಜನಾದ ಮೇಲೆ ನಾನು ಹೆಚ್ಚಿನ ಆನಂದವನ್ನ ಪಡುತ್ತಿದ್ದೇನೆ’ ಎನ್ನುವ ಮಾತನ್ನ ನಾನು ಹಲವಾರು ಸ್ಪ್ಯಾನಿಷರ ಬಾಯಲ್ಲಿ ಕೇಳಿದ್ದೇನೆ.

ಸಮಾಜ ಬದಲಾಗುತ್ತಿರುತ್ತದೆ. ಸಮಾಜದ ಬದಲಾವಣೆ ಆಗುವುದು ಜನರ ಒಟ್ಟು ಮನಸ್ಥಿತಿಯಿಂದ. ಸಮಾಜದಲ್ಲಿ ಶುರುವಾಗುವ ಹುಚ್ಚು ಓಟದಲ್ಲಿ ಒಮ್ಮೆ ಸಿಕ್ಕಿಕೊಂಡರೆ ಅಲ್ಲಿಗೆ ಮುಗಿಯಿತು, ಅದರಿಂದ ಮುಕ್ತಿಯಿಲ್ಲ. ಒಂದರ ನಂತರ ಒಂದು ಬೇಕುಗಳ ಗುಡ್ಡ ಬೆಟ್ಟವಾಗುತ್ತ ಸಾಗುತ್ತದೆ. ಇವುಗಳ ಮಧ್ಯ ಬದುಕು ಮಂಕಾಗಿ ಕರಗಿಹೋಗುತ್ತದೆ. ಬಾರ್ಸಿಲೋನಾ ನಗರದಲ್ಲಿ ಎರಡು
ದಶಕದ ಹಿಂದೆಯೇ ಪೋಷಕರು ಮಕ್ಕಳನ್ನ ನಡೆಸಿಕೊಳ್ಳುತ್ತಿದ್ದ ರೀತಿ ನೋಡಿ ಬೇಡವೆಂದರೂ ನಮ್ಮ ಬಾಲ್ಯ ನೆನಪಾಗುತ್ತಿತ್ತು. ಒಮ್ಮೆ ನನ್ನ ಹಿರಿಯ ಸಹೋದರ ರಾಮ, ಅಪ್ಪನ ಬಳಿ
ಹೋಗಿ ‘ಬೂಟು ಕೊಳ್ಳಬೇಕು’ ಎಂದು ಹಣವನ್ನ ಕೇಳಿದ್ದಾನೆ, ಅಪ್ಪ ಹಣವನ್ನ ಡಿದ್ದಾರೆ. ರಾಮ ತನ್ನ ಎಲ್ಲಾ ಕೆಲಸವನ್ನ ಮುಗಿಸಿಕೊಂಡು ಸಂಜೆಯ ವೇಳೆಗೆ ಖುಷಿಯಿಂದ ಮನೆಗೆ ಬಂದವನೇ, ಬೂಟು ಹಾಕಿಕೊಂಡು ಎಲ್ಲರಿಗೂ ತೋರಿಸುತ್ತಿದ್ದ.

ಅಪ್ಪ ಕೂಡ ಕೆಲಸದಿಂದ ಬಂದಿದ್ದರು, ‘ಇದೇನೋ ರಾಮ, ಬೂಟು ಕೊಳ್ಳುತ್ತೇನೆ ಎಂದಿದ್ದೇ, ಇದರ ಜತೆಗೆ ಸಾಕ್ಸ್ ಕೂಡ ತಂದಿದ್ದೀಯ’ ಎಂದರು. ರಾಮ ಜೇಬಿನಿಂದ ಹತ್ತು ರುಪಾಯಿ ತೆಗೆದು
ಅಪ್ಪನಿಗೆ ವಾಪಸ್ಸು ನೀಡಿ, ‘ನೀವು ನೂರು ರುಪಾಯಿ ನೀಡಿದ್ದಿರಿ, ಇದರಲ್ಲಿ ಬೂಟಿನ ಜತೆಗೆ ಎರಡು ಜೊತೆ ಸಾಕ್ಸ್ ಕೂಡ ತೆಗೆದುಕೊಂಡು ಹತ್ತು ರುಪಾಯಿ ಮಿಕ್ಕಿತು’ ಎಂದ. ಅಪ್ಪ ಕೋಪದಿಂದ, ‘ನೀನು ಬೂಟು ತೆಗೆದುಕೊಳ್ಳುತ್ತೇನೆ ಎಂದಿದ್ದೇ, ಆದರೆ ಸಾಕ್ಸ್ ಬಗ್ಗೆ ನನಗೆ ಹೇಳಿರಲಿಲ್ಲ’ ಎಂದರು. ರಾಮನ ಖುಷಿಯೆ ಕ್ಷಣದಲ್ಲಿ ಜರ್ರನೆ ಇಳಿದುಹೋಗಿತ್ತು. ಅಪ್ಪನಿಗೆ ಅಂದು ಅದ್ಯಾವ ಸೋಲಾಗಿತ್ತೋ? ಅದೇನು ಬೇಸರವಿತ್ತೋ? ಅದ್ಯಾವ ದುಃಖವಿತ್ತೋ? ಗೊತ್ತಿಲ್ಲ. ಆದರೆ ನೆನಪಲ್ಲಿ ಉಳಿದಿರುವುದು ಮಾತ್ರ ಅಪ್ಪನ ಲಾಜಿಕ್ ಇಲ್ಲದ ಪ್ರಶ್ನೆ- ‘ಸಾಕ್ಸ್ ಏಕೆ
ತೆಗೆದುಕೊಂಡೆ? ನೀನು ಬೂಟು ಕೊಳ್ಳಲು ಮಾತ್ರ ಒಪ್ಪಿಗೆ ಪಡೆದಿದ್ದೇಯಲ್ಲವೇ?’ ಎನ್ನುವುದು.

ಸಾಕ್ಸ್ ಇಲ್ಲದೆ ಬೂಟು ಹಾಕಿಕೊಳ್ಳುವುದು ಹೇಗೆ? ಅಪ್ಪ ಎಂದರೆ ಎಂದಿಗೂ ಕಾಂತ ಮತ್ತು ರಾಮನಿಗೆ ಒಂಥರಾ ಭಯ. ಅಪ್ಪನಿಗೆ ಕೊಡಬೇಕಾದ ಗೌರವ ಕೊಟ್ಟು ಎದ್ದು ಹೋದರೆ ಸಾಕು ಎನ್ನುವ ಸಂಬಂಧ. ನನ್ನದು ಮಾತ್ರ ಅಪ್ಪನೊಂದಿಗೆ ಬೇರೆಯದೇ ಕಥೆ, ಅಪ್ಪ ಬೇಡವೆಂದರೂ ಬಿಡದೆ ಜಗ್ಗಿ ಅವರ ಕಥೆಗಳನ್ನ ಕೇಳುತ್ತಿದ್ದೆ, ಇಷ್ಟವಿಲ್ಲದಾಗ ಮುಲಾಜಿಲ್ಲದೆ ಕಿತ್ತಾಡುತ್ತಿದ್ದೆ. ‘ನಾನು ಸತ್ತ ಲೆ ನನ್ನ ಹೆಸರಲ್ಲಿ ತಿಥಿ ಮಾಡಿಕೊಂಡು ವಡೆ ತಿನ್ನುತ್ತೀರಿ, ಇzಗ ನನಗೇಕೆ ಶುಗರ್ ಹೆಸರಿನಲ್ಲಿ ಇಷ್ಟು ಕಟ್ಟುನಿಟ್ಟು’ ಎಂದಿದ್ದ ಅಪ್ಪನಿಗೆ ಸಾಯುವವರೆಗೂ ಪ್ರತಿ ವಾರಾಂತ್ಯ ವಡೆ ತಂದುಕೊಡುತ್ತಿದೆ. ಪದಗಳಲ್ಲಿ ವರ್ಣಿಸಲಾಗದ ಸಂಬಂಧವದು. ಆದರೆ ಮುಕ್ಕಾಲುಪಾಲು ಮನೆಗಳಲ್ಲಿ ಅಂದಿನ ದಿನಗಳಲ್ಲಿ ಅಪ್ಪ ಎಂದರೆ ಅವನೊಬ್ಬ ಗುಮ್ಮ.

ಮಕ್ಕಳು ತನ್ನ ಮಾತಿಗೆ ಬೆದರದೆ ಇದ್ದಾಗ ಅಮ್ಮನು ‘ಅಪ್ಪನಿಗೆ ಹೇಳ್ತಿನಿ ತಾಳು’ ಎಂದು ಹೆದರಿಸಲು ಬೇಕಾದ ಬೆತ್ತಪ್ಪ. ಅವಶ್ಯಕತೆಗಳ ಪೂರೈಸುವ ವ್ಯಕ್ತಿ, ಹಣ ಬೇಕಾದಾಗ ಸಂಪರ್ಕಿಸ ಬೇಕಾದ ಕೇಂದ್ರ!! ಇವತ್ತಿಗೂ ಭಾರತದ ಹಲವು ಮನೆಗಳಲ್ಲಿ ಈ ಕಥೆ ರಿಪೀಟ್ ಆಗುತ್ತಲೇ ಇರುತ್ತದೆ. ಮಕ್ಕಳನ್ನ ಇನ್ನಿಲ್ಲದಂತೆ ಪ್ರೀತಿಸುವ ಯುರೋಪಿಯನ್ನರು ಅವರಿಗೆ ಶಿಸ್ತು ಕೂಡ ಕಲಿಸುತ್ತಾರೆ. ಅವರನ್ನ ಕುಟುಂಬದ ಒಬ್ಬ ಸಾಮಾನ್ಯ ಸದಸ್ಯನಂತೆ ಕಾಣುತ್ತಾರೆ. ಮಕ್ಕಳು ಒಂದು ವಯಸ್ಸನ್ನ ದಾಟಿದ ನಂತರ ಅವರ ಹುಚ್ಚಾಟಗಳಿಗೆ ಹಣವನ್ನ ನೀಡುವುದಿಲ್ಲ.
ಅವರ ಹಣವನ್ನ ಅವರು ಗಳಿಸಿಕೊಳ್ಳಲು ಪ್ರೋತ್ಸಾಹ ನೀಡುತ್ತಾರೆ. ಹೆಚ್ಚಿನ ವ್ಯಾಸಂಗಕ್ಕೆ ಕೂಡ ಮನೆ ಒತ್ತೆ ಇಟ್ಟು ಹಣ ಕಳಿಸುವ ಪರಿಪಾಠ ಇಲ್ಲಿಲ್ಲ. ಭಾರತದಲ್ಲಿ ಪೋಷಕರು ಕರ್ತವ್ಯದ ಹೆಸರಿನಲ್ಲಿ ಬಹಳಷ್ಟು ಹಣವನ್ನ ಮಕ್ಕಳಿಗಾಗಿ ವ್ಯಯಿಸುತ್ತಾರೆ.

ಕುಟುಂಬ ವ್ಯವಸ್ಥೆಯ ಒಂದು ಕೊಂಡಿ ನಮ್ಮಲ್ಲಿ ಭದ್ರವಾಗಿ ಕಂಡರೆ ಇನ್ನೊಂದರಲ್ಲಿ ಅವರ ರೀತಿ ಸರಿಯೆನಿಸುತ್ತದೆ. ಸರಿ ತಪ್ಪುಗಳ ಮೀರಿ ಅವಲೋಕಿಸಿ ನೋಡಿದರೆ ಬದುಕಿಗೆ ಬ್ಯಾಲೆನ್ಸ್‌ಡ್
ಅಪ್ರೋಚ್ ಬಹಳ ಮುಖ್ಯ ಎನಿಸುತ್ತದೆ. ಆದರೆ ಇದೇ ಸಮತೋಲಿತ ರೀತಿ ಎಂದು ಗುರುತಿಸುವ ಬಗೆ ಹೇಗೆ? ಎನ್ನುವ ಪ್ರಶ್ನೆಗೆ ಉತ್ತರವನ್ನ ಪ್ರತಿ ಕುಟುಂಬವೂ ತಾನೇ ಕಂಡುಕೊಳ್ಳಬೇಕಾದ ಅವಶ್ಯಕತೆ ಇದೆ. ಇಷ್ಟೇ ಸರಿ ಎಂದು ಜಗತ್ತಿನ ಎಲ್ಲಾ ಕುಟುಂಬಗಳಿಗೆ ಒಂದು ರೀತಿ ಸೃಷ್ಟಿಸುವುದು ಸಾಧ್ಯವಿಲ್ಲ, ಅದು ಸಾಧುವೂ ಅಲ್ಲ.