Friday, 20th September 2024

ಏರು ರಕ್ತದೊತ್ತಡ ಸಮಸ್ಯೆ ಕಣ್ಣಿನಲ್ಲಿ ಕಾಣಿಸುವುದೇ ?

ವೈದ್ಯ ವೈವಿಧ್ಯ

drhsmohan@gmail.com

ಸಾಮಾನ್ಯವಾಗಿ ಈ ಕಾಯಿಲೆ ವಯಸ್ಸಾದ ವ್ಯಕ್ತಿಗಳಲ್ಲಿ, ಹೃದಯ ಮತ್ತು ರಕ್ತನಾಳದ ತೊಂದರೆ ಇರುವವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅಲ್ಲಿಯವರೆಗೆ ಸ್ಪಷ್ಟವಾಗಿ ಕಾಣುತ್ತಿದ್ದ ಕಣ್ಣು ಒಮ್ಮೆಲೆ ಒಂದು ಕಣ್ಣಿನಲ್ಲಿ ಕಾಣಿಸುವುದಿಲ್ಲವೆಂದು ಆರಂಭ ವಾಗಬಹುದು. ಇಲ್ಲವೇ ದೃಷ್ಟಿಯ ಯಾವುದೇ ಒಂದು ಭಾಗದಲ್ಲಿ ಕಾಣುವುದಿಲ್ಲವೆಂದು ಶುರುವಾಗುತ್ತದೆ.

ಬಿಪಿ ಅಥವಾ ಏರು ರಕ್ತದೊತ್ತಡ ಹೆಚ್ಚಿನ ಎಲ್ಲರಿಗೆ ಗೊತ್ತಿರುವ ಕಾಯಿಲೆ. ಪ್ರತಿಯೊಬ್ಬರ ದೇಹದಲ್ಲಿಯೂ ಒಂದು ನಿರ್ದಿಷ್ಟ ರಕ್ತದೊತ್ತಡ ಇರುತ್ತದೆ. ಸಾಮಾನ್ಯವಾಗಿ ಅದು 90/60 ಅಥವಾ 120/80 ಮಿಮೀ ಪಾದರಸ – ಈ ಅಂಕಿಗಳ ಆಸು ಪಾಸು ಇರುತ್ತದೆ. ಈ ಅಂಕಿಗಿಂತ ಒತ್ತಡ ಹೆಚ್ಚಾದಾಗ ರಕ್ತದೊತ್ತಡ ಕಾಯಿಲೆ ಇದೆಯೇ ಎಂದು ವೈದ್ಯರು ಸಂದೇಹಿಸಿ ನಾನಾ
ಪರೀಕ್ಷೆ ನಡೆಸಿ ಕಾಯಿಲೆಯನ್ನು ಪತ್ತೆ ಹಚ್ಚುತ್ತಾರೆ.

ಏರು ರಕ್ತದೊತ್ತಡ ಇರುವವರು ಕೆಲವೊಮ್ಮೆ ಕೆಲವು ಲಕ್ಷಣಗಳನ್ನು ಹೊಂದಿರಬಹುದು. ಅವುಗಳೆಂದರೆ ತಲೆನೋವು, ತಲೆಸುತ್ತು, ಹೆಚ್ಚು ಕೆಲಸ ಮಾಡಲಾಗದೆ ಮೈಯೆಲ್ಲ ಸುಸ್ತಾಗುವುದು – ಈ ರೀತಿಯ ಲಕ್ಷಣಗಳು.

ಕಣ್ಣಿನ ಮೇಲೆ ಪ್ರಭಾವ: ಕಣ್ಣಿನಲ್ಲಿ ಈ ಕಾಯಿಲೆ ಮುಖ್ಯವಾಗಿ ರೆಟಿನೋಪತಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ೧೫ ವರ್ಷದ ತರುಣಿ ಪರೀಕ್ಷೆ ಹತ್ತಿರ ಬಂದ ಹಾಗೆ ತನ್ನ ಬಲಗಣ್ಣು ಸರಿಯಾಗಿ ಕಾಣಿಸುತ್ತಿಲ್ಲ ಎಂಬ ತೊಂದರೆ ಹೇಳಿಕೊಂಡು ಚಿಕಿತ್ಸೆಗಾಗಿ ಬಂದಳು. ವಿವರವಾದ ಕಣ್ಣಿನ ಪರೀಕ್ಷೆ ಮಾಡಿದಾಗ ಅವಳ ಬಲಗಣ್ಣಿನಲ್ಲಿ ಶೇ.೯೦ ದೃಷ್ಟಿ ಪತನವಾಗಿತ್ತು. ಎಡಗಣ್ಣಿನಲ್ಲಿ ಶೇ.೪೫ ದೃಷ್ಟಿ ಪತನವಾಗಿತ್ತು. ಎರಡೂ ಕಣ್ಣಿನ ಅಕ್ಷಿಪಟಲದಲ್ಲಿ ಒಂದೇ ರೀತಿಯ ರೋಗ ಲಕ್ಷಣಗಳು ಇದ್ದವು. ವಿವರವಾದ ಪರೀಕ್ಷೆ ನಡೆಸಿದಾಗ ಬಲಗಣ್ಣಿನ ಅಕ್ಷಿಪಟಲದ ಮಧ್ಯೆ ಮ್ಯಾಕ್ಯುಲ ( Macula ) ಭಾಗದಲ್ಲಿ ಒಸರುಗಳನ್ನು ಕಂಡು ಇದು ಒಂದು ರೀತಿಯ ದೈಹಿಕ ಕಾಯಿಲೆ ಇರಬೇಕೆಂದು ಸಂಶಯದಿಂದ ರಕ್ತದ ಒತ್ತಡ ಪರೀಕ್ಷಿಸಿದಾಗ 220/160 ಮಿ ಮೀ ಪಾದರಸ ಇತ್ತು. ಈ ಚಿಕ್ಕ ವಯಸ್ಸಿನಲ್ಲಿ ಈ ರೀತಿಯ ಏರಿದ ರಕ್ತದೊತ್ತಡವೇ? ಎಂದು ಆಶ್ಚರ್ಯ ಮೂಡಿದ್ದು ಸಹಜ.

ದೇಹದ ಕಾಯಿಲೆಯಾದ ಏರು ರಕ್ತದೊತ್ತಡ ಕಣ್ಣಿನಲ್ಲಿ ಕಾಣಿಸಿಕೊಳ್ಳುವ ಒಂದು ಅಪ ರೂಪದ ರೀತಿ ಇದು. ಇದನ್ನು ಏರು ರಕ್ತದೊತ್ತಡದ ಕೊನೆಯ ಹಂತವಾದ ಪ್ಯಾಪಿಡಿಮಾ (Papilledema) ಹಂತ ಎಂದು ವೈದ್ಯರು ಗುರುತಿಸುತ್ತಾರೆ.
ಪಂಚೇಂದ್ರಿಯಗಳಲ್ಲಿ ಒಂದಾದ ಕಣ್ಣು, ದೇಹದ ಹಲವು ಕಾಯಿಲೆಗಳ ಇರುವನ್ನು ಪತ್ತೆ ಹಚ್ಚುವಲ್ಲಿ ಅಥವಾ ವಿವಿಧ ಪರಿಣಾಮಗಳನ್ನು ತಿಳಿಯುವಲ್ಲಿ ದೇಹದೊಳಗೆ ಒಂದು ರೀತಿಯ ಕಿಟಕಿ ಆಗಬಲ್ಲದು.

ಅಂದರೆ ದೇಹದ ನಾನಾ ಅಂಗಾಂಶಗಳಂತೆ ತನಗೆ ಸಂಬಂಧಿಸಿದ ರೋಗಗಳಿಗೆ ಮಾತ್ರ ತಿರುಗುವುದೇ ಅಲ್ಲದೆ ದೇಹದ ಹಲವು ಗಂಭೀರ ಅಥವಾ ಮುಖ್ಯವಾದ ರೋಗಗಳು ಕಣ್ಣಿನಲ್ಲಿ ಹಲವು ಪರಿಣಾಮಗಳನ್ನು ಬೀರಬಲ್ಲವು, ಕಣ್ಣಿನಲ್ಲಿ ಕಾಣಿಸಿ ಕೊಳ್ಳಬಲ್ಲವು. ಈ ದಿಸೆಯಲ್ಲಿ ಇಂತಹ ಕಾಯಿಲೆಗಳು ರೋಗಿಯಲ್ಲಿ ಇರುವ ಬಗ್ಗೆ ವೈದ್ಯನಿಗೆ ಸಂಶಯ ಬಂದಾಗ ವಿವರವಾದ ಕಣ್ಣಿನ ಪರೀಕ್ಷೆ ಎಷ್ಟೋ ಮಾಹಿತಿಯನ್ನು ನೀಡಬಲ್ಲದು.

ಏರು ರಕ್ತದೊತ್ತಡದ ರೆಟಿನೋಪತಿ: ರಕ್ತದೊತ್ತಡ ಮೂಲಭೂತವಾಗಿ ದೈಹಿಕ ಕಾಯಿಲೆಯಾದರೂ ಅದರ ಪರಿಣಾಮ ಹಲವು ಅಂಗಗಳಲ್ಲಿ ನಿಚ್ಚಳವಾಗಿ ಕಾಣಿಸುತ್ತದೆ. ಅದರಲ್ಲಿ ಕಣ್ಣು ಬಹಳ ಮುಖ್ಯವಾದುದು. ಏಕೆಂದರೆ ಕಣ್ಣಿನಲ್ಲಿ ಆಗುವ ಬದಲಾವಣೆ ಗಳನ್ನು ಹಾಗೂ ವ್ಯತ್ಯಾಸಗಳನ್ನು ನೇರವಾಗಿ ಕಣ್ಣಿನ ವೈದ್ಯ ತನ್ನ ಕಣ್ಣಿನಿಂದ ನೋಡಬಹುದು. ತಾನು ಕೈಗೊಂಡ ಚಿಕಿತ್ಸೆಯ
ಪರಿಣಾಮವನ್ನು ನೇರವಾಗಿ ನೋಡಲು ಸಾಧ್ಯವಿರುವುದರಿಂದ ಚಿಕಿತ್ಸೆಯ ಬದಲಾವಣೆ, ಚಿಕಿತ್ಸೆಯ ಬಗ್ಗೆ ಖಚಿತವಾದ ಅಭಿಪ್ರಾಯ ಎಲ್ಲವೂ ಕಣ್ಣಿನ ಅಕ್ಷಿಪಟಲ ಪರೀಕ್ಷೆ ಮಾಡುವುದರಿಂದ ಸಾಧ್ಯ.

ರಕ್ತದೊತ್ತಡ ಹೆಚ್ಚಾದಂತೆ ರಕ್ತನಾಳಗಳ ಮೇಲೆ ಒತ್ತಡ ಹೆಚ್ಚಿಸುತ್ತ ಹೋಗುತ್ತದೆ. ಹೀಗೆ ಹೆಚ್ಚಾಗುವ ಒತ್ತಡದ ಪ್ರಮಾಣ ಎಷ್ಟಿದೆ, ವ್ಯಕ್ತಿಗೆ ಅನುಗುಣ ವಾಗಿ ರಕ್ತನಾಳದ ತಾಳಿಕೊಳ್ಳುವ ಶಕ್ತಿ ಎಷ್ಟಿದೆ ಎಂಬುದನ್ನು ಅವಲಂಬಿಸಿ ನಾನಾ ಪರಿಣಾಮಗಳು
ಕಾಣಿಸಿಕೊಳ್ಳುತ್ತವೆ. ಚಿಕ್ಕ ವಯಸ್ಸಿನ ರೋಗಿಗಳಲ್ಲಿ ದೈಹಿಕ ಪ್ರತಿರೋಧ ಹೆಚ್ಚಿರುವುದರಿಂದ ಕಣ್ಣಿನ ರಕ್ತನಾಳಗಳು ಪ್ರಮಾಣ ದಲ್ಲಿ ಚಿಕ್ಕದಾಗುವುದನ್ನು ಬಿಟ್ಟರೆ, ಉಳಿದಂತೆ ಹೆಚ್ಚಿನ ಪರಿಣಾಮಗಳಾಗುವುದಿಲ್ಲ.

ಅದೇ ತೀರ ವಯಸ್ಸಾದ ರೋಗಿಗಳಲ್ಲಿ ಯಾದರೆ ದೈಹಿಕ ಪ್ರತಿರೋಧ ಮತ್ತು ರಕ್ತನಾಳಗಳ ತಾಳಿಕೊಳ್ಳುವ ಶಕ್ತಿ ಎರಡೂ ಕಡಿಮೆ ಇರುವುದರಿಂದ ವಿವಿಧ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಮೊದಲ ಹಂತದಲ್ಲಿ ಅಕ್ಷಿಪಟಲದ ಅಪಧಮನಿಗಳು
ತೀರಾ ಚಿಕ್ಕದಾಗುತ್ತಾ ಹೋಗುತ್ತವೆ. ಇನ್ನೂ ಮುಂದುವರಿದ ಹಂತದಲ್ಲಿ ರಕ್ತಸ್ರಾವಗಳು ಜೊತೆಗೆ ವಿವಿಧ ಲವಣಗಳು ಸೇರಿ ಕಾಣಿಸಿಕೊಳ್ಳುವ ಬೆಳ್ಳಗಿನ ಮತ್ತು ಹಳದಿಯ ಒಸರು ( Exudates) ಗಳು ಅಕ್ಷಿಪಟಲದ ವಿವಿಧ ಭಾಗಗಳಲ್ಲಿ ಶೇಖರ ಗೊಳ್ಳುತ್ತವೆ. ಈ ರೀತಿಯ ಒಸರುಗಳು ಅಕ್ಷಿಪಟಲದ ಮಧ್ಯಭಾಗವಾದ ಮ್ಯಾಕುಲದಲ್ಲಿ ಕೆಲವೊಮ್ಮೆ ನಕ್ಷತ್ರದ ಆಕಾರದಲ್ಲಿ ಶೇಖರಗೊಳ್ಳುತ್ತವೆ. ಆಗ ಅಂತಹ ವ್ಯಕ್ತಿಯ ದೃಷ್ಟಿ ಗಮನಹಾರವಾಗಿ ಕುಂಠಿತಗೊಳ್ಳುತ್ತದೆ.

ಏರುರಕ್ತದೊತ್ತಡ ಕಾಯಿಲೆಯನ್ನು ಮೊದಲಿನಿಂದ ಸರಿಯಾಗಿ ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವುದರಿಂದ ರೆಟಿನೋಪತಿ ಈ
ಹಂತಕ್ಕೆ ಹೋಗುವುದನ್ನು ತಪ್ಪಿಸಬಹುದು. ಏರು ರಕ್ತದೊತ್ತಡದ ಅಕ್ಷಿಪಟಲ ಬೇನೆಯ ತೀರ ಮುಂದುವರಿದ ಹಂತವೆಂದರೆ ಪ್ಯಾಪಿಡಿಮಾ ಹಂತ. ಈ ಹಂತದಲ್ಲಿ ವ್ಯಕ್ತಿಯ ರಕ್ತದೊತ್ತಡ ಅಸಾಮಾನ್ಯವಾಗಿ 220/120 ಮಿ ಮೀ ಪಾದರಸಕ್ಕೆ ಏರಿರು ತ್ತದೆ. ದೃಷ್ಟಿ ನರವಾದ ಆಪ್ಟಿಕ್ ನರದಲ್ಲಿ ಒಂದು ರೀತಿಯ ದ್ರವ ಸೇರಿಕೊಂಡು ಅದು ಊದಿ ಕೊಳ್ಳುತ್ತದೆ. ಆಗ ಅಕ್ಷಿಪಟಲವನ್ನು ಪರೀಕ್ಷಿಸಿದರೆ ಆಪ್ಟಿಕ್ ನರದ ಬದಿಯ ಭಾಗಗಳು ಅಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತವೆ.

ಅಕ್ಷಿಪಟಲದ ತುಂಬಾ ವಿವಿಧ ರೀತಿಯ ರಕ್ತಸ್ರಾವಗಳು, ಒಸರುಗಳು ತುಂಬಿಕೊಂಡಿರುತ್ತವೆ. ಈ ಹಂತದಲ್ಲಿ ತೀವ್ರವಾದ ಚಿಕಿತ್ಸೆ ಅನಿವಾರ್ಯ. ಇಲ್ಲದಿದ್ದರೆ ಅಂತಹ ವ್ಯಕ್ತಿಯ ಕಣ್ಣು ನಾಶವಾಗುವುದಲ್ಲದೆ ಜೀವಕ್ಕೂ ಅಪಾಯವಿದೆ.

ಗರ್ಭಿಣಿಯರಲ್ಲಿ ರೆಟಿನೋಪತಿ : ಗರ್ಭಿಣಿಯರಲ್ಲಿ ಸುಮಾರು ೬ ರಿಂದ ೯ ತಿಂಗಳ ಮಧ್ಯೆ ಯಾವಾಗ ಬೇಕಾದರೂ ಕಾಣಿಸಿ ಕೊಳ್ಳ ಬಹುದಾದ ರೆಟಿನೋಪಟತಿ ಹೆಚ್ಚಿನ ಸಂದರ್ಭಗಳಲ್ಲಿ ಏರು ರಕ್ತದೊತ್ತಡದ ರೆಟಿನೋಪತಿಯನ್ನೇ ಹೋಲುತ್ತದೆ. ಮೊದಮೊದಲು ಅಕ್ಷಿ ಪಟಲದ ಅಪಧಮನಿಗಳು ಕಿರಿದಾಗುತ್ತಾ ಹೋಗುತ್ತವೆ. ಈ ಕಿರಿದಾಗುವಿಕೆ ಜಾಸ್ತಿ ಆದಂತೆ ಒಂದು ರೀತಿಯ ನಡುಕ ಅಪಧಮನಿಯಲ್ಲಿ ಕಾಣಿಸಿಕೊಳ್ಳುತ್ತದೆ. ಈ ಹಂತದಲ್ಲಿ ರೋಗಿಯ (ಗರ್ಭಿಣಿಯ) ರಕ್ತದೊತ್ತಡ ಹೆಚ್ಚಾದಂತೆ ಅಕ್ಷಿಪಟಲದಲ್ಲಿ ಒಂದು ರೀತಿಯ ಬೀಗು ಕಾಣಿಸಿಕೊಳ್ಳುತ್ತದೆ. ಈ ಬೀಗು ಮೊದಮೊದಲು ಏರು ರಕ್ತದೊತ್ತಡದಲ್ಲಿ ಕಾಣಿಸಿ ಕೊಳ್ಳುವ ಬಿಗುವಿನಂತೆ ಕಾಣಿಸಿಕೊಂಡು ಆ ಬಳಿಕ ಹಲವು ಸಂದರ್ಭಗಳಲ್ಲಿ ಅಕ್ಷಿಪಟಲ ಸರಿಯುವಿಕೆ (Retinal
detachment) ಯ ವರೆಗೂ ಮುಂದುವರಿಯಬಹುದು.

ಗರ್ಭಿಣಿಯರಲ್ಲಿ ಈ ರೀತಿಯ ಕಾಯಿಲೆ ಕಾಣಿಸಿಕೊಂಡಾಗ ನೇತ್ರ ತಜ್ಞನ ಮೇಲೆ ವಿಶೇಷವಾದ ಜವಾಬ್ದಾರಿ ಹುಟ್ಟಿಕೊಳ್ಳುತ್ತದೆ. ಅಂದರೆ ಗರ್ಭಿಣಿಯರಲ್ಲಿ ಕೊನೆಯ ಮೂರು ತಿಂಗಳುಗಳಲ್ಲಿ ಉಂಟಾಗಬಹುದಾದ ಯಾವುದೇ ರೀತಿಯ ದೃಷ್ಟಿಗೆ ಸಂಬಂಧ ಪಟ್ಟ ಲಕ್ಷಣಗಳನ್ನು ವೈದ್ಯರು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಗತ್ಯವಾಗಿ ಈ ಬಗ್ಗೆ ವಿಶೇಷವಾದ ಕಣ್ಣಿನ ಅಕ್ಷಿಪಟಲದ ಪರೀಕ್ಷೆಯನ್ನು ನಡೆಸಬೇಕು. ಅಕ್ಷಿಪಟಲದಲ್ಲಿ ಉಂಟಾಗುವ ನಡುಕ ಮತ್ತು ಗರ್ಭಿಣಿ ಮಹಿಳೆಯರಲ್ಲಿ ಲೆಕ್ಕಾಚಾರಕ್ಕೆ ಸಿಗದ
ಹೆಚ್ಚಾಗುವ ತೂಕ, ರೆಟಿನೋಪತಿ ಗಮನಾರ್ಹವಾಗಿ ಹೆಚ್ಚಾಗುವುದು – ಈ ಎಲ್ಲಾ ಲಕ್ಷಣಗಳು ಕಾಣಿಸಿಕೊಂಡಾಗ ಗರ್ಭವನ್ನು ತಾಯಿಯ ದೇಹದ ಮತ್ತು ಕಣ್ಣಿನ ಆರೋಗ್ಯದ ದೃಷ್ಟಿಯಿಂದ ಕೆಲವೊಮ್ಮೆ ಗರ್ಭವನ್ನು ಕೊನೆಗೊಳಿಸುವ ಅನಿವಾರ್ಯ
ನಿರ್ಧಾರವನ್ನು ನೇತ್ರ ತಜ್ಞ ತೆಗೆದುಕೊಳ್ಳಬೇಕಾಗುತ್ತದೆ. ಮತ್ತು ಅದನ್ನು ನೆರವೇರಿಸುವಂತೆ ಸೀರೋಗ ತಜ್ಞರಿಗೆ ಸಲಹೆ ಕೊಡಬೇಕಾದ ಅನಿವಾರ್ಯತೆ ಒದಗುತ್ತದೆ.

ಹೀಗೆ ಮಾಡದಿದ್ದರೆ ಈ ಕಾಯಿಲೆಗೆ ಒಳಗಾದ ತಾಯಿಯ ಕಣ್ಣು ಅಂಧತ್ವ ಹೊಂದಬಹುದು ಅಥವಾ ಜೀವವೇ ಹೋಗಬಹುದು. ಹಾಗಾಗಿ ಇಂತಹ ಸಂದರ್ಭಗಳಲ್ಲಿ ಕಾಯಿಲೆಯನ್ನು ಬಹಳಷ್ಟು ಮೊದಲೇ ಗುರುತಿಸಿ ಸೂಕ್ತ ಚಿಕಿತ್ಸೆಯನ್ನು ಕ್ಲುಪ್ತ ಕಾಲದಲ್ಲಿ
ಕೊಡುವುದರಿಂದ ಉಂಟಾಗಬಹುದಾದ ಹಾನಿ ಯನ್ನು ಗಮನಾರ್ಹವಾಗಿ ತಪ್ಪಿಸಬಹುದು. ಏರು ರಕ್ತದೊತ್ತಡ ಕಣ್ಣಿನ ಅಕ್ಷಿ ಪಟಲದ ರಕ್ತ ನಾಳಗಳ ಮೇಲೆ ಪ್ರಭಾವ ಬೀರುತ್ತದೆ. ಅವುಗಳಲ್ಲಿ ಮುಖ್ಯವಾಗಿ ಎರಡು ರೀತಿಯ ಕಾಯಿಲೆಗಳು ಕಂಡು ಬರುತ್ತವೆ.

ಅಕ್ಷಿಪಟಲದ ಅಭಿಧಮನಿಯ ಮುಚ್ಚುವಿಕೆ: ಸಾಮಾನ್ಯವಾಗಿ ಈ ಕಾಯಿಲೆ ವಯಸ್ಸಾದ ವ್ಯಕ್ತಿಗಳಲ್ಲಿ, ಹೃದಯ ಮತ್ತು ರಕ್ತನಾಳದ ತೊಂದರೆ ಇರುವವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅಲ್ಲಿಯವರೆಗೆ ಸ್ಪಷ್ಟವಾಗಿ ಕಾಣುತ್ತಿದ್ದ ಕಣ್ಣು ಒಮ್ಮೆಲೆ ಒಂದು ಕಣ್ಣಿನಲ್ಲಿ ಕಾಣಿಸುವುದಿಲ್ಲವೆಂದು ಆರಂಭವಾಗಬಹುದು. ಇಲ್ಲವೇ ದೃಷ್ಟಿಯ ಯಾವುದೇ ಒಂದು ಭಾಗದಲ್ಲಿ ಕಾಣುವು ದಿಲ್ಲವೆಂದು ಶುರುವಾಗುತ್ತದೆ. ಈ ಸಂದರ್ಭದಲ್ಲಿ ರೋಗಿಯ ಅಕ್ಷಿಪಟಲವನ್ನು ಪರೀಕ್ಷೆ ಮಾಡಿದಾಗ ಅಕ್ಷಿಪಟಲದ ತುಂಬಾ ರಕ್ತಸ್ರಾವದ ತುಣುಕುಗಳು, ಎಲ್ಲಾ ಅಭಿಧಮನಿಗಳು ವಿಪರೀತವಾಗಿ ಹಿಗ್ಗಿಕೊಂಡಿರುವುದು ಕಾಣುತ್ತದೆ.

ಕೆಲವೊಮ್ಮೆ ಅಭಿಧಮನಿಯ ಯಾವುದೇ ಒಂದು ಸೆಳೆ ಈ ರೀತಿಯ ಕಾಯಿಲೆಗೆ ತುತ್ತಾದಾಗ ದೃಷ್ಟಿಗೆ ಅಂತಹ ವಿಪರೀತವಾದ ತೊಂದರೆ ಆಗದೆ ಇರಬಹುದು. ಆದರೆ ಕ್ರಮೇಣ ಮುಚ್ಚುವಿಕೆ ಮಧ್ಯ ಭಾಗದ ಅಕ್ಷಿಪಟಲಕ್ಕೆ ಸಂಬಂಧಪಟ್ಟ ಅಭಿಧಮನಿಗೆ
ಆವರಿಸಿದಾಗ ಕಣ್ಣು ಅಂಧತ್ವ ಹೊಂದುತ್ತದೆ.

ಹೆಚ್ಚಿನ ಸಂದರ್ಭಗಳಲ್ಲಿ ಈ ಕಾಯಿಲೆಯ ಚಿಕಿತ್ಸೆ ನಿರಾಶಾದಾಯಕ ಎಂದೇ ಹೇಳಬೇಕು. ಮತ್ತೊಂದು ಗಂಭೀರವಾದ ಸಮಸ್ಯೆ ಎಂದರೆ ಈ ರೀತಿಯ ಅಭಿಧಮನಿಯ ಮುಚ್ಚುವಿಕೆಗೆ ಪಾತ್ರವಾದ ಕಣ್ಣು ಎರಡು ಮೂರು ತಿಂಗಳುಗಳಲ್ಲಿ  ತೀವ್ರತರ ವಾದ ಗಂಭೀರವಾದ ಗ್ಲೋಕೋಮ ಕಾಯಿಲೆಗೆ ತಿರುಗಬಹುದು. ಹಾಗಾಗಿ ಈ ಕಾಯಿಲೆಯಲ್ಲಿ ಕೆಲವೊಮ್ಮೆ ಲೇರ್ಸ ಚಿಕಿತ್ಸೆ ಉಪಯೋಗವಾಗುತ್ತದೆ. ಇನ್ನೂ ಕೆಲವೊಮ್ಮೆ ಗ್ಲೋಕೋಮಾದ ವಿರುದ್ಧ ಚಿಕಿತ್ಸೆ ಮಾಡಬೇಕು. ಇನ್ನೊಂದು ಕಣ್ಣನ್ನು ಸಹಿತ ಆಗಾಗ ಪರೀಕ್ಷಿಸಬೇಕಾಗುತ್ತದೆ.

ಅಕ್ಷಿಪಟಲದ ಅಪಧಮನಿಯ ಮುಚ್ಚುವಿಕೆ : ಸಾಮಾನ್ಯವಾಗಿ 25- 40 ವರ್ಷದವರಲ್ಲಿ ಕಾಣಿಸಿಕೊಳ್ಳುವ ಈ ಕಾಯಿಲೆ ಒಂದೇ ಕಣ್ಣಿನಲ್ಲಿ ಕಾಣಿಸಿಕೊಂಡರೂ ಮತ್ತೊಂದು ಕಣ್ಣಿಗೂ ಬರುವ ಸಾಧ್ಯತೆ ಇದೆ. ಕೆಲವೊಮ್ಮೆ ವಿವಿಧ ರಕ್ತನಾಳಗಳ ಕಾಯಿಲೆಗಳೂ ಇದಕ್ಕೆ ಕಾರಣವಾಗಬಹುದು. ಮೂಲಭೂತವಾಗಿ ರಕ್ತನಾಳದ ಆಕುಂಚನಕ್ಕೆ ಕಾರಣವಾಗುವ ವಿವಿಧ ಕಾಯಿಲೆಗಳೂ ಕಾರಣ ವಾಗಬಹುದು.

ಉದಾಹರಣೆ : ಇಳಿ ವಯಸ್ಸಿನಲ್ಲಿರುವ ಸಾಮಾನ್ಯ ರೋಗಗಳಾದ ರಕ್ತನಾಳದ ಸ್ಲೀರೋಸಿಸ, ರಕ್ತದ ಏರು ಒತ್ತಡ, ಧೂಮಪಾನಿ ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ರಕ್ತನಾಳ ಮುಚ್ಚುವಿಕೆಯಂತಹ ಕಾಯಿಲೆಯಾದ ಬರ್ಗರ್ಸ್ ಕಾಯಿಲೆಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಈ ರೀತಿಯ ರಕ್ತನಾಳದ ಮುಚ್ಚುವಿಕೆ ಅಕ್ಷಿಪಟಲದ ಪ್ರಧಾನ ಅಪಧಮನಿಯಲ್ಲಿಯೇ ಕಾಣಿಸಿಕೊಳ್ಳಬಹುದು. ಅಥವಾ ಅದರ ಅಧೀನದ ಸಣ್ಣ ಸಣ್ಣ ರಕ್ತನಾಳಗಳಲ್ಲೂ ಕಾಣಿಸಿಕೊಳ್ಳಬಹುದು. ಇದರ ಪರಿಣಾಮ ಎಂದರೆ ಪಕ್ಷಿ ಪಟಲಕ್ಕೆ ರಕ್ತ ಪೂರೈಕೆ ಸಂಪೂರ್ಣವಾಗಿ ಅಥವಾ ಆಂಶಿಕವಾಗಿ ನಿಂತು ಅಂತಹ ಅಕ್ಷಿಪಟಲ ಸಾವನ್ನು ಹೊಂದುತ್ತದೆ.

ಅಂದರೆ ಇದರ ಅರ್ಥ ಅಂತಹ ಕಣ್ಣು ದಿಢೀರ‍್ ಅಂಧತ್ವ ಹೊಂದುತ್ತದೆ. ಇಂತಹ ಅಕ್ಷಿಪಟಲವನ್ನು ಪರೀಕ್ಷಿಸಿದಾಗ ದೊಡ್ಡ ದೊಡ್ಡ ಅಪಧಮನಿಗಳು ಸಣ್ಣ ಸಣ್ಣ ದಾರಗಳಂತೆ ಕಾಣಿಸಿಕೊಳ್ಳುತ್ತವೆ. ಸಣ್ಣ ಸಣ್ಣ ಅಪಧಮನಿಗಳು ಕಾಣಿಸುವುದೇ ಇಲ್ಲ.
ಇದಾಗಿ ಕೆಲವೇ ಗಂಟೆಗಳಲ್ಲಿ ಅಕ್ಷಿಪಟಲವು ತನ್ನ ಎಂದಿನ ಹೊಳಪನ್ನು ಕಳೆದುಕೊಂಡು ಸಂಪೂರ್ಣವಾಗಿ ಬಿಳಿಚಿಕೊಳ್ಳುತ್ತದೆ. ದೃಷ್ಟಿಯ ಮಧ್ಯ ಭಾಗವಾದ ಮಚ್ಚೆ ಅಥವಾ ಮ್ಯಾಕ್ಕುಲ ದ ಭಾಗದಲ್ಲಿ ಕೆಂಬಣ್ಣದ ದೃಷ್ಟಿಯ ಬಟ್ಟಿನ ರೀತಿಯ ಚುಕ್ಕೆ ಕಾಣಿಸಿಕೊಳ್ಳುತ್ತದೆ. ರಕ್ತನಾಳದ ಮುಚ್ಚುವಿಕೆ ಸಂಪೂರ್ಣವಾಗಿಲ್ಲದಿದ್ದಾಗ ಆದಷ್ಟು ಬೇಗ ಚಿಕಿತ್ಸೆ ಮಾಡುವುದರಿಂದ ಸ್ವಲ್ಪ ಪ್ರಮಾಣದ ದೃಷ್ಟಿಯನ್ನು ಉಳಿಸಬಹುದು. ಆದರೆ ರಕ್ತನಾಳದ ಮುಚ್ಚುವಿಕೆ ಪೂರ್ಣ ಪ್ರಮಾಣದ್ದಾದಾಗ ದೃಷ್ಟಿಯನ್ನು
ಹಿಂತಿರುಗಿ ಪಡೆಯುವುದು ತೀರ ಕಷ್ಟ.

ಹಾಗಾಗಿ ಬಿ ಪಿ ಕಾಯಿಲೆಯ ಬಗ್ಗೆ ನಿರ್ಲಕ್ಷ್ಯ ಮಾಡದೆ ಸೂಕ್ತ ವೈದ್ಯರ ಮಾರ್ಗದರ್ಶನದಲ್ಲಿ ಚಿಕಿತ್ಸೆ ಮಾಡಬೇಕು.