ಸುಪ್ತ ಸಾಗರ
rkbhadti@gmail.com
ಶ್ಯಾಮಭಟ್ಟರ ಪ್ರಕಾರ, ಒಂದು ಕಿಲೋ ಚಂದನಕ್ಕೆ ಸಾವಿರ ರು.ನಿಂದ ದರ ಆರಂಭವಾಗುತ್ತದೆ. ಉತ್ತಮ ಗುಣಮಟ್ಟದ, ಚೆನ್ನಾಗಿ ಬೆಳೆದ ಮರಕ್ಕೆ ಬೆಲೆ ಇನ್ನೂ ಹೆಚ್ಚು. ಇನ್ನು ರಕ್ತಚಂದನ ಕೆಜಿ ಮತ್ತು ಅಡಿ ಲೆಕ್ಕದಲ್ಲಿಯೂ ಮಾರಾಟವಾಗು ತ್ತದೆ. ಅಡಿಗೆ 3-4 ಸಾವಿರ ರು. ಮೌಲ್ಯವಿದೆ.
ಕರಾವಳಿ ಭಾಗದ ಪ್ರಯೋಗಶೀಲ ಕೃಷಿಕರ ಪೈಕಿ ಮುಂಚೂಣಿಯ ಹೆಸರು ವಾದ್ಯಕೋಡಿ ಶಾಮಭಟ್ಟರದ್ದು. ಸಾಂಪ್ರದಾಯಿಕ ಅಡಕೆಯ ಜತೆಗೇ ಹತ್ತು ಹಲವಾರು ಬೆಳೆ ಪ್ರಯೋಗ ಗಳನ್ನು ನಡೆಸುತ್ತಲೇ ಬಂದಿರುವ ಭಟ್ಟರದ್ದು ಜೇನು ಕೃಷಿಯಲ್ಲಿ ಗಮನಾರ್ಹ ಸಾಧನೆ. ಈ ನಡುವೆ ಕರಾವಳಿ ಭಾಗದಲ್ಲಿ ರಕ್ತ ಚಂದನ ಕೃಷಿಯನ್ನೂ ಕೈಗೊಂಡು ಬೆರಗು ಮೂಡಿಸಿದವರು.
ಜೇನು ಸಾಕಣೆ, ದೇಸಿ ಪಶುಪಾಲನೆ, ಹಣ್ಣು-ತರಕಾರಿಗಳ ಕಸಿ ಪ್ರಯೋಗ, ಭತ್ತದ ತಳಿ ಸಂರಕ್ಷಣೆ ಹೀಗೆ ಒಂದ ಒಂದು ರೀತಿಯ ಹೊಸತರಲ್ಲಿ ಅವರು ತಮ್ಮನ್ನು ತಾವು ಸದಾ ತೊಡಗಿಸಿಕೊಂಡಿರುವ ‘70ರ ನವಯುವಕ.’
ಜೇನು ಕೃಷಿಯಲ್ಲಿ 4 ಲಕ್ಷ ಆದಾಯ: ಪುತ್ತೂರಿನ ಜೇನು ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕರೂ ಆಗಿರುವ ಶ್ಯಾಮಭಟ್ಟರು ಕಳೆದ 42 ವರ್ಷಗಳಿಂದ ತೋಟ ಗಾರಿಕೆಗೆ ಪೂರಕವಾಗಿ ಜೇನು ಕೃಷಿಯಲ್ಲೂ ತೊಡಗಿಸಿಕೊಂಡಿದ್ದಾರೆ.
ನಿಸರ್ಗದಲ್ಲಿ ಸಹಜವಾಗಿ ದೊರೆಯಬಹುದಾದ ಸಂಪನ್ಮೂಲ ಬಳಸಿ, ಅತ್ಯಂತ ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ಪಡೆಯುವ ಕಸುಬುಗಳಲ್ಲಿ ಜೇನು ಕೃಷಿಯೂ ಒಂದು. ಸುಲಭ ತಾಂತ್ರಿಕತೆಯೊಂದಿಗೆ ಜೇನು ಕೃಷಿಗೆ ಆಸಕ್ತಿ , ಶ್ರದ್ಧೆ ಮುಖ್ಯ ಎನ್ನುತ್ತಾರೆ ಭಟ್ಟರು. ಮಲೆನಾಡು, ಕರಾವಳಿ ಭಾಗದಲ್ಲಿ ಒಂದು ಜೇನು ಕುಟುಂಬದಿಂದ ಪ್ರತಿ ವರ್ಷ ಸರಾಸರಿ 15-20 ಕಿ.ಗ್ರಾಂ. ಜೇನುತುಪ್ಪವನ್ನು ಪಡೆಯಬಹದು. ನಮ್ಮಲ್ಲಿ ಸದ್ಯಕ್ಕೆ 40ಕ್ಕೂ ಹೆಚ್ಚು ಜೇನು ಪೆಟ್ಟಿಗೆಗಳಿದ್ದು, ಪ್ರತಿ ವರ್ಷ ವಿಭಜಿಸಿ ಜೇನಿನ ಸಂಖ್ಯೆಯನ್ನು ಹೆಚ್ಚಿಸುತ್ತೇವೆ.
ಒಂದು ಹಂತದಲ್ಲಿ 100ಕ್ಕೂ ಹೆಚ್ಚು ಪೆಟ್ಟಿಗೆಗಳಿದ್ದವು. ಒಂದು ಪೆಟ್ಟಿಗೆಯಿಂದ ಹತ್ತು ಕೆ.ಜಿಗೂ ಹೆಚ್ಚು ತುಪ್ಪ ಸಂಗ್ರಹ ಆಗುತ್ತದೆ.
ಏನಿಲ್ಲವೆಂದರೂ 450-500 ರು. ಕೆಜಿಗೆ ದರ ಸಿಗುತ್ತದೆ. ಸ್ಥಳೀಯವಾಗಿಯೇ ಕಾಯಂ ಗ್ರಾಹಕರಿದ್ದಾರೆ. ಶುದ್ಧ ಜೇನು ಲಭ್ಯ ವಾಗುವುದರಿಂದ ಮುಂಚಿತವಾಗಿಯೇ ತಮ್ಮ ಬೇಡಿಕೆಯನ್ನು ಸಲ್ಲಿಸಿಬಿಡುತ್ತಾರೆ. ಹೀಗಾಗಿ ಮಾರುಕಟ್ಟೆ ಸಮಸ್ಯೆಯೇ ಇಲ್ಲ. ಒಮ್ಮೆ ಪೆಟ್ಟಿಗೆ ಖರೀದಿಸಿದರೆ ಬೇರೇ ಹೇಳಿಕೊಳ್ಳವಂಥ ಖರ್ಚು ಇಲ್ಲವೇ ಇಲ್ಲ. ಒಂದು ಪೆಟ್ಟಿಗೆಯಲ್ಲಿ 8000 ರು. ವರೆಗೂ ಲಾಭ ಗಳಿಸಬಹುದು.
ಕಳೆದ ವರ್ಷ ಜೇನಿನಿಂದಲೇ ‘4 ಲಕ್ಷ ರು.ಗೂ ಮಿಕ್ಕಿ ಆದಾಯ ಬಂದಿತ್ತು’ ಎಂದು ವಿವರಿಸುತ್ತಾರೆ. ಜೇನು ಹುಳುಗಳ ಪರಾಗಸ್ಪರ್ಶ ದಿಂದ ಏಲಕ್ಕಿ, ವೆನಿಲಾ, ಲಿಂಬು, ತೆಂಗು, ಅಡಕೆಯಂಥ ಬೆಳೆಗಳ ಇಳುವರಿಯಲ್ಲೂ ಶೇ.20 ಹೆಚ್ಚಳ ಸಾಧಿಸಬಹುದು. ಜತೆಗೆ ಸೌತೆ, ಕುಂಬಳ, ಬೀನ್ಸ್, ಬೆಂಡೆ ಮತ್ತಿತರ ತರಕಾರಿಗಳಲ್ಲಿ ಶೇ. 40 ಅಧಕ ಇಳುವರಿ ಪಡೆಯಬಹುದಾಗಿದೆ. ಜೇನು ಸಾಕಣೆಗೆ ತೋಟ ಗಾರಿಕೆ ಇಲಾಖೆಯಿಂದ ಸಹಾಯಧನವೂ ಲಭ್ಯವಿದೆ. ಗುಣಮಟ್ಟದ ಹಾಗೂ ರೋಗ ರಹಿತ ಜೇನು ಕುಟುಂಬ ವೃದ್ಧಿಗೆ ಖಾಸಗಿ ಮಧುವನಗಳ ಸ್ಥಾಪನೆಗೂ ಪ್ರೋತ್ಸಾಹ ನೀಡಲಾಗುತ್ತದೆ ಎನ್ನುತ್ತಾರೆ ಭಟ್ಟರು.
ಜೇನುಕೃಷಿಯನ್ನು ಅಳವಡಿಸಿಕೊಳ್ಳುವುದರಿಂದ ರೈತರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೆಚ್ಚು ಲಾಭ ಗಳಿಸಬಹುದಾಗಿದೆ. ಅಲ್ಲದೇ ಕೃಷಿಕರಲ್ಲದವರೂ ಸಹ ಜೇನುಕೃಷಿಯನ್ನು ಕೈಗೊಳ್ಳಬಹುದು. ಜೇನು ನಿಜಕ್ಕೂ ಕೃಷಿಕನ ಬದುಕಿನ ಸಿಹಿಯನ್ನು ಹೆಚ್ಚಿಸುತ್ತದೆ ಎಂದು ತಮ್ಮ ಅನುಭವವನ್ನು ಬಿಚ್ಚಿಡುತ್ತಾರೆ ಅವರು.
ಅಂಗಳದ ಬರ್ಮಾ ಭತ್ತ: 15 ಎಕರೆ ನೀರಾವರಿ ಜಮೀನು ಹಾಗೂ ಅಷ್ಟೇ ಪ್ರಮಾಣದ ಕಾಡು ಕೃಷಿಯನ್ನೂ ಕೈಗೊಂಡಿರುವ ಭಟ್ಟರು ಇತ್ತೀಚೆಗೆ ಅಪರೂಪದ ಬರ್ಮಾ ಭತ್ತದ ತಳಿಯ ಸಂರಕ್ಷಣೆ ಹಾಗೂ ಪ್ರಾಯೋಗಿಕ ಬೆಳೆ ಕಾರ್ಯವನ್ನೂ ಕೈಗೊಂಡಿ ದ್ದಾರೆ. ಹಿಂದಿನ ಗುಜರಾತ್, ರಾಜಸ್ಥಾನದ ರಾಜಮನೆತನಗಳವರು ಬಳಸುತ್ತಿದ್ದ ಈ ಶ್ರೀಮಂತ ವಿಶಿಷ್ಟ ತಳಿಯನ್ನು ಮನೆಯಂಗ ಳದ, ಅಡಕೆ ಸಿಪ್ಪೆಯ ಮೇಲೆ ಅತ್ಯಂತ ಕಡಿಮೆ ನೀರು ಬಳಸಿ ಬೆಳೆಯುತ್ತಿದ್ದಾರೆ.
ಒಂದೇ ಒಂದು ಸಸಿಯಿಂದ ಆರಂಭವಾದ ಭತ್ತ ಕೃಷಿಯಿಂದ ಕಳೆದ ವರ್ಷ 10 ಕೆಜಿ ಫಸಲು ಸಿಕ್ಕಿತ್ತು ಎನ್ನುತ್ತಾರೆ. ‘ನೇರಳೆ ಬಣ್ಣದ ಇದರ ಅಕ್ಕಿ ಬಲು ರುಚಿ. ಮಾರುಕಟ್ಟೆಯಲ್ಲಿ ಕೆ.ಜಿಗೆ 250 ರು.ಗೂ ಹೆಚ್ಚು ದರವಿದೆ ಇದಕ್ಕೆ. ಒಂದು ಕಾಲದಲ್ಲಿ ಭತ್ತದ ಗದ್ದೆ ಮಾಡುತ್ತಿದ್ದ ಸಂದರ್ಭದಲ್ಲಿ ಅಪರೂಪದ ತಳಿಗಳನ್ನು ಆಯ್ದು ಬೆಳೆಯುತ್ತಿದ್ದೆವು.
ಈಗ ಕಾರ್ಮಿಕರ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿಂದ ಭತ್ತ ಬೆಳೆಯುತ್ತಿಲ್ಲ. ಆದರೂ ಭತ್ತ ಕೃಷಿಯ ಖುಷಿಯನ್ನು ಕಳೆದು ಕೊಳ್ಳಲಿಚ್ಛಿಸದೇ ಅಂಗಳದ ಸಣ್ಣ ಪ್ರಮಾಣದಲ್ಲಿ ಮುಂದುವರಿಸುತ್ತಿದ್ದೇವೆ’ ಎಂದು ಹೇಳುತ್ತಾರೆ. ಸಸ್ಯ ಪ್ರಭೇದದಲ್ಲಿ ಶ್ರೀಗಂಧ ದಂತೆಯೇ ಅಪರೂಪದ ಸ್ಥಾನವನ್ನು ಪಡೆದಿರುವುದು ರಕ್ತ ಚಂದನ. ಸಾಮಾನ್ಯವಾಗಿ ಅರಣ್ಯ ಪ್ರದೇಶದಲ್ಲಿ ಸಹಜವಾಗಿ ಹುಟ್ಟಿ ಬೆಳೆಯುವ ರಕ್ತ ಚಂದನವನ್ನು ನೆಟ್ಟು ಪೋಷಿಸಿದವರ ಸಂಖ್ಯೆ ಕಡಿಮೆಯೇ.
ಇತ್ತೀಚಿನ ದಿನಗಳಲ್ಲಿ ಕಾಡು ಕೃಷಿಯ ಕಲ್ಪನೆಯಡಿ ಶ್ರೀಗಂಧ ಹಾಗೂ ರಕ್ತ ಚಂದನವನ್ನೂ ಅಲ್ಲಲ್ಲಿ ಕೆಲವರು ಬೆಳೆಸಲು ಮುಂದಾಗಿದ್ದಾರೆ. ಶಾಮಭಟ್ಟರು ತಮ್ಮ ಕೃಷಿಭೂಮಿಯಲ್ಲಿ ರಕ್ತ ಚಂದನ ಸಸಿಗಳನ್ನು ನೆಟ್ಟು ಬೆಳೆಸುವ ಪ್ರಯತ್ನ ಮಾಡಿದ್ದರು.
ನಾಲ್ಕಾರು ವರ್ಷಗಳ ಆರೈಕೆಯನ್ನೂ ಮಾಡಿದ್ದರಾದರೂ ಕರಾವಳಿಯ ವಾತಾವರಣಕ್ಕೆ ಹೊಂದಿಕೊಳ್ಳಲಾಗದೇ ಬಹುತೇಕ ಸಸಿಗಳು ಹುಳುಬಿದ್ದು ನಾಶವಾಗಿವೆ. ಕೆಲವು ಉಳಿದಿವೆಯಾದರೂ ನಿರೀಕ್ಷಿತ ಬೆಳವಣಿಗೆಯನ್ನು ಕಂಡಿಲ್ಲ.
ಆದರೆ, ಸ್ವಭಾವತಃ ರಕ್ತ ಚಂದನದ ಬೆಳವಣಿಗೆ ಶ್ರೀಗಂಧಕ್ಕಿಂತಲೂ ಶೀಘ್ರ ಎನ್ನುವ ಅವರು ಇದು ಎತ್ತರವಾಗುವ ಬದಲು ದಪ್ಪ ವಾಗುತ್ತ ಹೋಗುವುದರಿಂದ ತುಂಬ ಲಾಭದಾಯಕವೆನ್ನುತ್ತಾರೆ. ಅವರ ಸೋದರ ಆರ್.ಕೆ ಭಟ್ಟರು ಕನಕಪುರ ಸಮೀಪ ಶ್ರೀಗಂಧ ಕೃಷಿಯನ್ನು ಕೈಗೊಂಡಿದ್ದಾರೆ.
ಸೂಕ್ತವಾಗಿ ಬೆಳೆದರೆ ರಕ್ತಚಂದನ ಮರ ಬರೋಬ್ಬರಿ 8 ಮೀ. ಎತ್ತರದವರೆಗೂ ಆಗುತ್ತದೆ. 50-150 ಸೆ.ಮೀ. ವರೆಗೂ ವ್ಯಾಸದ ಕಾಂಡ ಬರುತ್ತದೆ. ಮೊದಲ 3 ವರ್ಷದಲ್ಲಿ 5 ಮೀ.ವರೆಗೂ ಬೆಳೆಯುತ್ತದೆ. ನಂತರ ಎತ್ತರ ಬೆಳೆಯುವುದು ನಿಂತು ಕಾಂಡ ದಪ್ಪವಾಗುತ್ತ ಸಾಗುತ್ತದೆ. ಸಂಪೂರ್ಣ ಕಟಾವಿಗೆ ಬರಲು ಗರಿಷ್ಠ ಇಪ್ಪತ್ತು ವರ್ಷಗಳು ಬೇಕು. ಒಣ ಭೂಮಿಯಲ್ಲಿ ಸೇರಿದಂತೆ ಶುಷ್ಕ ವಾತಾವರಣದಲ್ಲಿ ಅತಿ ಕಡಿಮೆ ನೀರಿನಲ್ಲೂ ಹುಲುಸಾಗಿ ಬೆಳೆಯಬಲ್ಲ ಚಂದನಕ್ಕೆ ರೋಗ ಮತ್ತು ಕೀಟದ ಬಾಧೆ
ವಿರಳ. ತೀರಾ ಹೆಚ್ಚಿನ ಮಳೆಯಲ್ಲಿ ಬೆಳೆಯಲಾರದು.
ಬುಡದಲ್ಲಿ ಹೆಚ್ಚಿನ ನೀರು ನಿಂತರೆ ಕೊಳೆತು ಹೋಗುವ ಸಾಧ್ಯತೆ ಇದೆ. ಹಾಗೆಂದು ಬೇಸಿಗೆಯಲ್ಲಿ ಬುಡ ತಂಪಾಗುವಷ್ಟು ನೀರು ಅಗತ್ಯ. ಮೊದಲ ಮೂರ್ನಾಲ್ಕು ವರ್ಷ ಹೆಚ್ಚಿನ ಆರೈಕೆ ಹಾಗೂ ನೀರು ಬೇಕಾಗುತ್ತದೆ. ನಂತರ ತನ್ನಿಂದ ತಾನೇ ಬೆಳೆಯುತ್ತವೆ. ಆರಂಭಿಕ ವರ್ಷಗಳಲ್ಲಿ ಸಾವಯವ, ಸಗಣಿ-ಹಸಿರೆಲೆ ಗೊಬ್ಬರ ಹಾಕಿದರೆ ಸಾಕು. ಹೆಚ್ಚಿನ ಗೊಬ್ಬರವಿಲ್ಲದೆಯೂ ಮಣ್ಣಿನಲ್ಲಿ
ಸಿಗುವ ಸತ್ವದಿಂದಲೇ ಬೆಳೆಯಬಲ್ಲ, ಬರವನ್ನು ತಾಳಿಕೊಂಡು ಬೆಳೆಯಬಲ್ಲ ಗುಣ ರಕ್ತಚಂದನಕ್ಕಿದೆ.
ಹೀಗಾಗಿ ಉತ್ತರ ಕರ್ನಾಟಕದಂಥ ಶುಷ್ಕ ಹವೆಯಲ್ಲಿಯೂ ಇದರ ಕೃಷಿಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಸಮುದ್ರ ಮಟ್ಟದಿಂದ ೭೫೦ ಮೀ. ಎತ್ತರದವರೆಗಿನ ಪ್ರದೇಶಗಳಿಗೆ ಇವು ಹೊಂದಿಕೊಳ್ಳುತ್ತವೆ.
ಬೆಲೆ ಎಷ್ಟು?: ವೈಜ್ಞಾನಿಕವಾಗಿ ಟೆರೋಕಾರ್ಪಸ್ ಸನ್ ಥಾಲಿನಸ್ ವರ್ಗಕ್ಕೆ ಸೇರಿದ ಈ ಚಂದನ, ದಕ್ಷಿಣ ಭಾರತದ ಆಂಧ್ರ
ಮತ್ತು ಕರ್ನಾಟಕದಲ್ಲಿ ಮಾತ್ರ ಕಾಣ ಸಿಗುತ್ತದೆ. ಭಾರತೀಯ ಮೂಲದ್ದೇ ಆದ ಈ ಸಸ್ಯ ಪ್ರಭೇದ ಸಾಕಷ್ಟು ಔಷಧಯುಕ್ತ ಗುಣ ಗಳನ್ನೂ ಹೊಂದಿದೆ. ಕೊರಡನ್ನು ತೇಯ್ದರೆ, ಕಾಂಡದ ತೊಗಟೆಯನ್ನು ಸೀಳಿದರೆ ಬರುವ ಕೆಂಪು ದ್ರಾವಣವನ್ನು ಪೂಜಾ ಕಾರ್ಯಗಳಲ್ಲೂ ಬಳಸಲಾಗುತ್ತದೆ. ಸೌದರ್ಯವರ್ಧಕವಾಗಿಯೂ, ಚರ್ಮ ರೋಗ ನಿವಾರಣೆಯಲ್ಲೂ ಇದನ್ನು ಬಳಸಲಾ
ಗುತ್ತದೆ. ಚರ್ಮದ ಆರೈಕೆಯ ದೃಷ್ಟಿಯಿಂದ ಹಾಗೂ ಕಾಂತಿವರ್ಧಕವಾಗಿ ಎಳೆಯ ಮಗುವಿನ ಮೈಗೆ ದಿನಾ ಚಂದನ ಲೇಪಿಸಿ ಬಳಿಕ ಸ್ನಾನ ಮಾಡಿಸುವ ಪದ್ಧತಿಯಿದೆ. ಆಯುರ್ವೇದ ಔಷಧ, ಸುಗಂಧ ದ್ರವ್ಯ ತಯಾರಿಕೆಯಲ್ಲಿ ಮತ್ತು ಸಂಗೀತ ವಾದ್ಯಗಳ ತಯಾರಿಕೆಯಲ್ಲೂ ಬಳಸಲಾಗುತ್ತದೆ.
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಶ್ರೀಗಂಧಕ್ಕಿಂತ 3 ಪಟ್ಟು ಅಧಿಕ ಬೆಲೆಗೆ ರಕ್ತಚಂದನ ಮಾರಾಟವಾಗುತ್ತದಾದರೂ ಇತ್ತೀಚಿನ ಸರಕಾರಿ ನಿಯಮಾವಳಿ ಶ್ರೀಗಂಧದ ಕೃಷಿಗೇ ಹೆಚ್ಚಿನ ಆದ್ಯತೆ ನೀಡಿದೆ. 20 ವರ್ಷದ ಬಳಿಕ ಒಂದು ಕ್ವಿಂಟಲ್‌ಗೆ ಒಂದು ಲಕ್ಷಕ್ಕೂ ಹೆಚ್ಚಿನ ಮೌಲ್ಯ ಇದೆ. ಒಂದು ಮರದಿಂದ ಕನಿಷ್ಠ ಎರಡು ಕ್ವಿಂಟಲ್ ಕೊರಡು ಸಿಗುತ್ತದೆ.
ಶ್ಯಾಮಭಟ್ಟರ ಪ್ರಕಾರ, ಒಂದು ಕಿಲೋ ಚಂದನಕ್ಕೆ ಸಾವಿರ ರು.ನಿಂದ ದರ ಆರಂಭವಾಗುತ್ತದೆ. ಉತ್ತಮ ಗುಣಮಟ್ಟದ, ಚೆನ್ನಾಗಿ ಬೆಳೆದ ಮರಕ್ಕೆ ಬೆಲೆ ಇನ್ನೂ ಹೆಚ್ಚು. ಇನ್ನು ರಕ್ತಚಂದನದ ಕೆಜಿ ಮತ್ತು ಅಡಿ ಲೆಕ್ಕದಲ್ಲಿಯೂ ಮಾರಾಟವಾಗುತ್ತದೆ. ಅಡಿಗೆ 3-4 ಸಾವಿರ ರು. ಮೌಲ್ಯವಿದೆ.
ಎಲ್ಲಿವೆ ಮರಗಳು?: ಆಂಧ್ರ ಪ್ರದೇಶದ ಕಡಪಾ ಜಿಲ್ಲೆ ಮತ್ತು ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಅಲ್ಪ ಪ್ರಮಾಣದಲ್ಲಿ
ರಕ್ತಚಂದನವನ್ನು ಬೆಳೆಯಲಾಗುತ್ತಿದೆ. ಮಂಡ್ಯದ ಹುಲಿಕೆರೆ ಲೋಯರ್ ಟನಲ, ಮಳವಳ್ಳಿ ತಾಲೂಕಿನ ಬಸವನಬೆಟ್ಟ
ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಶೆಟ್ಟಹಳ್ಳಿಯ ಅರಣ್ಯ ಪ್ರದೇಶಗಳಲ್ಲಿ ರಕ್ತಚಂದನ ಮರಗಳು ಹೆಚ್ಚಾಗಿ ಇವೆ. ಮಂಡ್ಯದ ಶೆಟ್ಟಿಹಳ್ಳಿ ಅರನ್ಯ ಪ್ರದೇಶ, ಬೀದರ್, ಹುಮನಾಬಾದ್, ಕಲಬುರಗಿಯ ಚಿಂಚೋಳಿ, ಕೋಲಾರ ಮತ್ತು ಹೊಸಕೋಟೆ ಪ್ರದೇಶ ದಲ್ಲಿ ರಕ್ತಚಂದನ ಸಸಿಗಳನ್ನು ಅರಣ್ಯ ಇಲಾಖೆಯ ವತಿಯಿಂದಲೇ ಪ್ರಾಯೋಗಿವಾಗಿ ಬೆಳೆಸಲಾಗುತ್ತಿದೆ. ಒಮ್ಮೆ ಗಿಡ ಬದುಕಿದರೆ ಮತ್ತೆ ಹೆಚ್ಚಿನ ಆರೈಕೆ ಬಯಸದೆ ಬೆಳೆಯುತ್ತದೆ ಎನ್ನುತ್ತಾರೆ ಭಟ್ಟರು.
ಮಲೇಷಿಯಾ, ಚೀನಾ ಮತ್ತು ಜಪಾನ್‌ನಲ್ಲಿ ಇದಕ್ಕೆ ವಿಪರೀತ ಬೇಡಿಕೆ ಇದೆ. ರಕ್ತಚಂದನದಲ್ಲಿ ಥೋರಿಯಂ ಅಂಶ ಹೆಚ್ಚಿರುವು ದರಿಂದ ಅಣುವಿಕಿರಣ ಕ್ರಿಯೆಗಳಲ್ಲೂ ಇದನ್ನು ಬಳಸಲಾಗುತ್ತದೆ ಎನ್ನಲಾಗುತ್ತಿದೆ.
ಸಂಪೂರ್ಣ ಸಾವಯವ: ಸಂಪೂರ್ಣ ಸಾವಯವ ಪದ್ಧತಿಯ ಗೆದ್ದಿರುವ ವಾದ್ಯಕೋಡಿಯವರು ಅಡಕೆಯ ಜತೆಗೆ ವೆನಿಲಾ,
ಕಾಳುಮೆಣಸು, ಏಲಕ್ಕಿ ಮತ್ತಿತರ ವಾಣಿಜ್ಯ ಬೆಳೆಗಳು, ಗೇರು, ತೆಂಗು, ಹಲಸು, ಮಾವಿನ ಹಣ್ಣುಗಳೂ ಸೇರಿದಂತೆ ಬಹುಬೆಳೆಯಲ್ಲಿ ಗೆದ್ದಿzರೆ. ಒಂದೇ ಮಾವಿನ ಸಸಿಯಲ್ಲಿ 20ಕ್ಕೂ ಹೆಚ್ಚು ತಳಿಗಳ ಕಸಿ ಮಾಡಿ ಪ್ರಯೋಗ ನಡೆಸಿದ್ದರು.
ಆ ಪೈಕಿ ಸದ್ಯಕ್ಕೆ 10-12 ತಳಿಗಳು ಉಳಿದಿವೆ. ಕಳೆದ ವರ್ಷ ಸಮೃದ್ಧ ಫಲ ನೀಡಿತ್ತು. ಕಾಡು ಕೃಷಿಯಲ್ಲಿ 250ಕ್ಕೂ ಹೆಚ್ಚು
ಗೇರು ಸಸಿಗಳನ್ನು ಕೂರಿಸಿದ್ದು, ಉತ್ತಮ ಬೆಳೆವಣಿಗೆ ಕಂಡಿದೆ. ಇದಲ್ಲದೇ ನಡುವೆ ಹಲಸು ಸೇರಿದಂತೆ ಮೌಲಿಕ ಸಸಿಗಳನ್ನು ಬೆಳೆಸುತ್ತಿರುವುದಾಗಿ ವಿವರಿಸುತ್ತಾರೆ.
ಸ್ಥಳೀಯ ತೋಟಗಾರಿಕೆ, ಕೃಷಿ ಇಲಾಖೆ, ರುಡ್ ಸೆಟ್ ಸೇರಿದಂತೆ ಹಲವು ಸಂಸ್ಥೆಗಳ ಸಂಪನ್ಮೂಲ ವ್ಯಕ್ತಿಯಾಗಿಯೂ ಕಾರ್ಯ ನಿರ್ವಹಿಸುವ ಭಟ್ಟರು, ತಮ್ಮಲ್ಲಿಗೆ ಬರುವ ರೈತರು, ಕೃಷಿ ಆಸಕ್ತರಿಗೆ ನಿರಂತರ ಮಾಹಿತಿ ನೀಡುವ, ಜಾಗೃತಿ ಮೂಡಿಸುವ, ಯುವಕರಿಗೆ ನೈಪುಣ್ಯ ಅಭಿವೃದ್ಧಿ ಯಲ್ಲಿ ನೆರವಾಗುತ್ತಾರೆ. ಒಟ್ಟಿನಲ್ಲಿ ವಾದ್ಯಕೋಡಿ ಶ್ಯಾಮಭಟ್ಟರೆಂದರೆ ಕೃಷಿಯಲ್ಲಿ ಸದಾ ಕ್ರಿಯಾಶೀಲರು.
ವಾದ್ಯಕೋಡಿ ಶ್ಯಾಮಭಟ್ಟರ ಸಂಪರ್ಕಕ್ಕೆ: ೯೪೪೯೧ ೦೩೨೬೦