ಅಭಿಪ್ರಾಯ
ಮಾರುತೀಶ್ ಅಗ್ರಾರ
maruthishagrara@gmail.com
ದೇಶದ ಒಳಿತಿಗಾಗಿ ಕೈತುಂಬಾ ಸಂಬಳ ಪಡೆಯುತ್ತಿದ್ದ ಕೆಲಸವನ್ನು ತೊರೆದು ಜೀವನದ ಅರ್ಧ ವಯಸ್ಸನ್ನು ಜೈಲಿನಲ್ಲಿ ಹಾಗೂ ಗೃಹ ಬಂಧನದಲ್ಲೇ ಕಳೆದ ಆಂಗ್ ಸಾನ್ ಸೂಕಿಯನ್ನು ಮುಗಿಸಲು ನಿರ್ಧರಿಸಿರುವ ಮ್ಯಾನ್ಮಾರ್ ಸೇನೆ ಅವಳನ್ನು ಎಲ್ಲದರಲ್ಲೂ ಸಿಲುಕಿ ಹಾಕಿಸುವ ಪ್ರಯತ್ನ ಮಾಡುತ್ತಿದೆ. ಇದು ಇಡೀ ಮ್ಯಾನ್ಮಾರ್ ತಲೆ ತಗ್ಗಿಸುವ ಸಂಗತಿ.
ಆಂಗ್ ಸಾನ್ ಸೂಕಿಗೆ ಹೀಗಾಗ ಬಾರದಿತ್ತು! ನಿಜಕ್ಕೂ ಆಕೆ ಮ್ಯಾನ್ಮಾರ್‌ನ ನತದೃಷ್ಟ ನಾಯಕಿ. ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾಗಬೇಕೆಂದು ಹೋರಾಟಕ್ಕಿಳಿದ ಪರಿಣಾಮ ತನ್ನ ಜೀವನದ ಅರ್ಧ ಆಯಸ್ಸನ್ನು ಜೈಲುವಾಸದಲ್ಲೆ ಕಳೆಯಬೇಕಾಗಿ ಬಂದುದು ಸೂಕಿಯ ದುರಂತವೇ ಸರಿ. ಮ್ಯಾನ್ಮಾರ್‌ನ ಪದಚ್ಯುತ ನಾಯಕಿಯಾಗಿರುವ 75 ವರ್ಷದ ಸೂಕಿ ಈಗ ಮತ್ತೊಮ್ಮೆ ಜೈಲು ಹಕ್ಕಿಯಾಗಿದ್ದಾಳೆ.
ಲೈಸೆನ್ಸ್ ಇಲ್ಲದೆ ವಾಕಿ-ಟಾಕಿ ಹಾಗೂ ಸಿಗ್ನಲ್ ಜಾಮರ್ ಹೊಂದಿದ್ದಕ್ಕಾಗಿ ಆಕೆಗೆ ಅಲ್ಲಿನ ನ್ಯಾಯಾಲಯ ವೊಂದು ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದೆಲ್ಲವೂ ಆಕೆಯನ್ನು ರಾಜಕೀಯವಾಗಿ ಮೂಲೆಗುಂಪು ಮಾಡಲು ಅಲ್ಲಿನ ಸೇನೆ ಮಾಡುತ್ತಿರುವ ರಾಜಕೀಯ ಪಿತೂರಿ ಎಂದು ಈಗಾಗಲೇ ಬಹಿರಂಗಗೊಂಡಿ ರುವ ಸತ್ಯ. ಆಶ್ಚರ್ಯಕರ ಸಂಗತಿ ಏನು ಗೊತ್ತಾ? ಆಕೆಯ ಮೇಲಿರುವ ಪ್ರಕರಣಗಳೆಲ್ಲವೂ ನಿಜವೆಂದು ಸಾಬೀತಾ ದರೆ ನೂರು ವರ್ಷಕ್ಕೂ ಹೆಚ್ಚು ಕಾಲ ಸೂಕಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ!
1962 ರಿಂದ 2011ರ ತನಕ ಮ್ಯಾನ್ಮಾರ್‌ನಲ್ಲಿ ಸೇನಾಡಳಿತವಿತ್ತು. ಈ ಸಮಯದಲ್ಲಿ ದೇಶಾದ್ಯಂತ ನಾಗರಿಕ ಹತ್ಯೆಗಳು, ಸಮಾಜಘಾತುಕ ದಂಗೆಗಳು, ಪ್ರಜಾಪ್ರಭುತ್ವ ವಿರೋಧಿ ಕುಕೃತ್ಯಗಳು ಎಗ್ಗಿಲ್ಲದೆ ನಡೆಯುತ್ತಿದ್ದವು. ಆ ಸಮಯದಲ್ಲಿ ಮ್ಯಾನ್ಮಾರ್‌ನ ಯಾವೊಬ್ಬ ನಾಗರೀಕನೂ ಕೂಡ ಸೇನಾಡಳಿತವನ್ನು ಪ್ರಶ್ನಿಸು ವಂತಿರಲಿಲ್ಲ. ಪ್ರಶ್ನಿಸಿದರೆ ಮರುದಿನ ಆತ ಶವವಾಗಿ ಪತ್ತೆಯಾಗುತ್ತಿದ್ದ! ಆದರೂ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗಾಗಿ ಪ್ರತಿ ಭಟನೆಗಿಳಿದ ಮ್ಯಾನ್ಮಾರ್‌ನ ಅದೆಷ್ಟೋ ಮಂದಿ ನಾಗರಿಕರು, ವಿದ್ಯಾರ್ಥಿಗಳು ಸೇನಾಡಳಿತದ ಕ್ರೌರ್ಯಕ್ಕೆ ಸಿಕ್ಕಿ ಬೀದಿ ಹೆಣವಾಗಿದ್ದಾರೆ.
ಹಾಗಾಗೀ ಅಲ್ಲಿನ ಸೇನೆ ಏನೇ ಮಾಡಿದರೂ ಅದನ್ನು ವಿರೋಧಿಸುವವರು ಯಾರು ಇರಲಿಲ್ಲ. ಅಲ್ಲಿನ ಸೇನೆಯದು ಥೇಟ್ ತಾಲಿಬಾನ್ ಮಾದರಿಯ ಆಡಳಿತ!
ಹೀಗೆ ಮ್ಯಾನ್ಮಾರ್‌ನ ಜುಂಟಾ(ಮ್ಯಾನ್ಮಾರ್ ಸೇನೆಯ ಹೆಸರು) ಸೇನೆಯ ಐದು ದಶಕಗಳ ಸುದೀರ್ಘ ಆಡಳಿತ ಅಲ್ಲಿನ ಜನರನ್ನು ಕತ್ತಲೆ ಕೋಣೆಯೊಳಗೆ ಬಂಧಿಸಿಟ್ಟು ಇಡೀ ದೇಶವನ್ನೇ ಅರಾಜಕತೆಯ ಕೂಪಕ್ಕೆ ತಳ್ಳಿ ಬಿಟ್ಟಿತ್ತು. ಮ್ಯಾನ್ಮಾರ್‌ನ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಲ್ಲಿನ ಜನಕ್ಕೆ ಕತ್ತಲೆಯಲ್ಲಿನ ಮಿಂಚು ಹುಳುವಿನಂತೆ ಕಂಡವರು “ಆಂಗ್ ಸಾನ್ ಸೂಕಿ ಎಂಬ ಆಶಾಕಿರಣ. ಈಕೆ ಶತಾಯ ಗತಾಯ ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಸರಕಾರ ರಚನೆಯಾಗಬೇಕು. ಇಲ್ಲವೇ ಇದೇ ಮಣ್ಣಿನಲ್ಲಿ ತಾನು ಮಣ್ಣಾಗಬೇಕು ಅಲ್ಲಿಯವರೆಗೂ ತನ್ನ ಹೋರಾಟ ನಿಲ್ಲುವುದಿಲ್ಲ ಎಂದು ಸೇನೆಯ ಪ್ರಜಾಪ್ರಭುತ್ವ ವಿರೋಧಿ ಆಡಳಿತದ ವಿರುದ್ಧ ವಾಗಿ ದನಿ ಎತ್ತಿದ ಗಟ್ಟಿಗಿತ್ತಿ.
ಸೇನೆ ಈಕೆಯ ಹೋರಾಟ, ಪ್ರತಿಭಟನೆಗಳನ್ನು ಮಟ್ಟಹಾಕಲು ಸಾಕಷ್ಟು ಷಡ್ಯಂತ್ರಗಳನ್ನು ಹೂಡಿತು. ಸಾಲದ್ದಕ್ಕೆ ಸೂಕಿಯನ್ನು ಸೇನೆ ದಶಕಗಳ ಕಾಲ ಜೈಲು ಹಾಗೂ ಗೃಹಬಂಧನದಲ್ಲಿ ಕೂಡಿಹಾಕಿ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಅವಮಾನ ಮಾಡಿತು. ಆದರೂ ಸೂಕಿ ಒಂದಿನಿತು ಎದೆಗುಂದಲಿಲ್ಲ ಹಾಗೂ ತನ್ನ ಹೋರಾಟ ದಿಂದ ಹಿಂದೆ ಸರಿಯಲಿಲ್ಲ. ಜೈಲಿನಲ್ಲಿ ಇದ್ದುಕೊಂಡೇ ಜನ ವಿರೋಧಿ ಸೇನಾಡಳಿತವನ್ನು ಪ್ರಶ್ನಿಸಿ ಪ್ರತಿಭಟನೆ ಮಾಡುವ ಮೂಲಕ ಜಗತ್ತಿನ ಗಮನ ಸೆಳೆದ ಸೂಕಿ ಸೇನೆಯ ಯಾವ ಗೊಡ್ಡು ಬೆದರಿಕೆಗಳಿಗೂ ಅಂಜಲಿಲ್ಲ.
ಏಕೆಂದರೆ ಆಕೆಯ ರಕ್ತದ ಹೋರಾಟದ ಛಲವಿತ್ತು. ಆಕೆ ಆಧುನಿಕ ಮ್ಯಾನ್ಮಾರ್‌ನ ನಿರ್ಮಾತೃ ಆಂಗ್ ಸಾನ್ ನ ಮಗಳು. ಅಪ್ಪ ಆಂಗ್ ಸಾನ್ ಬ್ರಿಟಿಷರ ಆಡಳಿತ ಕ್ಕೊಳಗಾಗಿದ್ದ ಆಗಿನ ಬರ್ಮಾದ(ಈಗೀನ ಮ್ಯಾನ್ಮಾರ್)ಮೇಲೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಆಕ್ರಮಣ ಮಾಡಿದ ಜಪಾನನ್ನು ತಡೆದು ಬರ್ಮಾವನ್ನು ಜಪಾನಿ ಸೈನಿಕರಿಂದ ರಕ್ಷಿಸಿದ ಸೇನಾ ಜನರಲ. ಹೀಗಾಗಿ ಆಕೆಗೆ ಹೋರಾಟ ಎನ್ನುವುದು ರಕ್ತಗತವಾಗಿ ಬಂದಿತ್ತು. ಸೂಕಿ ಪ್ರಜಾತಾಂತ್ರಿಕ ವಿರೋಧಿಯಾಗಿದ್ದ ಸೇನಾಡಳಿತದ ವಿರುದ್ಧ ಪ್ರತಿ ಬಾರಿ ಬೀದಿಗಳಿದಾಗಲೂ ಸೇನೆ ಆಕೆಯ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಬಂಧಿಸುತ್ತಿತ್ತು.
ಸೂಕಿ ವಿಚಾರದಲ್ಲಿ ಸೇನೆ ಎಷ್ಟು ಕೆಟ್ಟದ್ದಾಗಿ ಅಂದರೆ ಮಾನವೀಯತೆ ಮರೆತು ನಡೆದುಕೊಂಡಿತ್ತೆಂದರೆ,“ಸೂಕಿ ಪತಿ ಕ್ಯಾನ್ಸರ್ ಪೀಡಿತರಾಗಿ ಜೀವನ್ಮರಣದ ಹೋರಾಟ ಎದುರಿಸುತ್ತಿದ್ದ ಸಂದರ್ಭದಲ್ಲಿ ಪ್ರೀತಿಸಿ ಮದುವೆಯಾಗಿದ್ದ ತನ್ನ ಪತ್ನಿಯನ್ನು ಕೊನೆಯ ಬಾರಿಗೆ ನೋಡಬೇಕೆಂದು ಆಸೆ ಪಟ್ಟು ಅಲ್ಲಿನ ಸೇನಾ ಸರಕಾರದ ಅನುಮತಿ ಕೇಳಿದರೆ ಸೇನೆ ಅವರ ಮನವಿಯನ್ನು ನಿರಾಕರಿಸಿತು. ಸೇನೆ ಸೂಕಿ ಪತಿಗೆ ಮ್ಯಾನ್ಮಾರ್‌ಗೆ ಬರಲು ವೀಸಾದ ಅನುಮತಿಯನ್ನೇ
ನೀಡಲಿಲ್ಲ! ಜಗತ್ತಿನ ಅನೇಕ ನಾಯಕರು ಇದೊಂದು ಬಾರಿ ಯಾದರೂ ಅವಕಾಶ ಮಾಡಿಕೊಡಿ ಎಂದು ಸೇನೆಯನ್ನು ಕೇಳಿಕೊಂಡರು ಯಾರ ಮಾತಿಗೂ ಸೇನೆ ಕಿವಿಗೊಡಲಿಲ್ಲ.
ಸೂಕಿಯ ಪತಿ ಇಲ್ಲಿಗೆ ಬರುವುದನ್ನು ತಡೆದರೆ ಆಕೆಯೇ ಆತನನ್ನು ನೋಡಲು ಮ್ಯಾನ್ಮಾರ್ ತೊರೆದು ಇಂಗ್ಲೆಂಡಿಗೆ ಹೋಗುತ್ತಾಳೆ. ಹಾಗೇನಾದರೂ, ಆಕೆ ತೆರಳಿ ದರೆ ಮರಳಿ ಬರದಂತೆ ನೋಡಿಕೊಂಡರಾಯಿತು ಎನ್ನುವುದು ಸೇನೆಯ ಲೆಕ್ಕಚಾರವಾಗಿತ್ತು! ಅದಕ್ಕನುಗುಣವಾಗಿ ಸೇನೆ ಸೂಕಿಗೆ ಒಂದು ಅವಕಾಶ ಮಾಡಿ ಕೊಡುವ ಸಂಚನ್ನು ರೂಪಿಸಿತು. ಅದರ ಪ್ರಕಾರ ಸೂಕಿ ತನ್ನ ಪತಿಯನ್ನು ನೋಡಲು ಇಚ್ಛಿಸಿದರೆ ಇಂಗ್ಲೆಂಡ್‌ಗೆ ಹೋಗಿ ಬರಬಹುದು ಎಂದು ಸೇನೆ ಹೇಳಿತು. ಆದರೆ ಸೇನೆಯ ಲೆಕ್ಕಾಚಾರ ಅರಿತಿದ್ದ ಸೂಕಿ ತನ್ನ ಪತಿಯನ್ನು ನೋಡಲು ಹೋಗುವುದಿಲ್ಲ ಎಂದು ಬಿಟ್ಟಳು! ಆಕೆಗೆ ತನ್ನ ಗಂಡನಿಗಿಂತ ಮ್ಯಾನ್ಮಾರ್ ಜನರ ಬದುಕು ಹಸನಾಗಬೇಕು ಎನ್ನುವ ತುಡಿತವಿತ್ತು. ಹಾಗಾಗಿ ಆಕೆ ತನ್ನ ಪತಿಯನ್ನು ನೋಡಲು ಇಂಗ್ಲೆಂಡ್ ಗೆ ಹೋಗುವುದನ್ನು ನಿರಾಕರಿಸಿದಳು.
ದಿನಕಳೆದಂತೆ ಆಕೆಯ ಪತಿಯ ಆರೋಗ್ಯ ಹದಗೆಟ್ಟು ಹಾಸಿಗೆ ಹಿಡಿದರು. ಆದರೂ ಸೂಕಿ ಧೃತಿಗೆಡಲಿಲ್ಲ, ನೋವನ್ನು ಮನಸ್ಸಿನ ನುಂಗಿಕೊಂಡಳು. ಕೊನೆಗೆ ಪತಿಯ ಆರೋಗ್ಯ ತೀರಾ ಹದಗೆಟ್ಟು ಅವರು ಪ್ರಾಣ ಬಿಟ್ಟರೂ ಸಹ ಸೂಕಿ ಅಲ್ಲಿನ ಜನರಿಗಾಗಿ ದೇಶವನ್ನು ಬಿಟ್ಟು ಬರಲಿಲ್ಲ. ಗಂಡನ ಅಂತ್ಯಕ್ರಿಯೆಗೂ ಹೋಗಲಿಲ್ಲ! ಅಷ್ಟರಮಟ್ಟಿಗೆ ದೇಶವಾಸಿಗಳೊಂದಿಗೆ ತನ್ನನ್ನು ತಾನು ಬೆಸೆದುಕೊಂಡಿದ್ದರು ಸೂಕಿ. ಜೈಲಿನಲ್ಲಿದ್ದುಕೊಂಡು ತನ್ನ ತಾಯಿಯನ್ನು ಕಳೆದುಕೊಂಡ ಸೂಕಿ ತನಗಿದ್ದ ಇಬ್ಬರು ಮಕ್ಕಳ ಮುಖವನ್ನು ದಶಕಗಳ ಕಾಲ ನೋಡದೇ ಮ್ಯಾನ್ಮಾರ್‌ನ ಪ್ರಜಾಪ್ರಭುತ್ವಕ್ಕಾಗಿ ಹೋರಾಡಿದ ಮಹಾ ನಾಯಕಿಯಾದಳು.
ಹೀಗೆ ತನ್ನ ಪ್ರಾಣದ ಹಂಗು ತೊರೆದು, ತಾಯಿಯನ್ನು ಹಾಗೂ ಪ್ರೀತಿಸಿ ಮದುವೆಯಾಗಿದ್ದ ಪತಿಯನ್ನು ಕಳೆದುಕೊಂಡು ದೇಶದ ಜನರ ಸ್ವಾತಂತ್ರ್ಯದ ಹಕ್ಕಿಗಾಗಿ ಹೋರಾಟ ಮಾಡಿದ ಸೂಕಿಗೆ ಕೊನೆಗೂ ಜಯ ಸಿಕ್ಕಿತು. ಸೂಕಿಯ ದಶಕಗಳ ಹೋರಾಟದ ಪರಿಣಾಮ ೨೦೧೧ರಲ್ಲಿ ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾಯಿತು. ಪ್ರಜಾಪ್ರಭುತ್ವ ವಿರೋಧಿ ಸೇನಾಡಳಿತದ ವಿರುದ್ದದ ತನ್ನ ದಶಕಗಳ ಉಗ್ರ ಹೋರಾಟದ ಪ್ರತಿಫಲವಾಗಿ ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವದ ಅಡಿಯಲ್ಲಿ ಸೂಕಿಯ ಎನ್‌ಎಲ್‌ಡಿ(ನ್ಯಾಷನಲ್‌ಲೀಗ್ ಫಾರ್ ಡೆಮಾಕ್ರಟಿಕ್)ಪಕ್ಷ ೨೦೧೫ರಲ್ಲಿ ಅಧಿಕಾರಕ್ಕೆ ಬಂತು. ಇದು ಸೇನೆಯ ಕಣ್ಣನ್ನು ಕೆಂಪಾಗಿಸಿತು. ಐದು ವರ್ಷಗಳ ಕಾಲ ಅಧಿಕಾರವಿರದೇ ಅಲ್ಲಿನ ಮಿಲಿಟರಿ ಒದ್ದಾಡಿತು. ಆದರೆ ತನಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಸೂಕಿ ಮ್ಯಾನ್ಮಾರ್ ಅನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದು ಜನಮನ್ನಣೆ ಗಳಿಸಿದರು. ಈ ಐದು ವರ್ಷಗಳ ಸೂಕಿ ಆಡಳಿತದಲ್ಲಿ ಮ್ಯಾನ್ಮಾರ್ ಅಕ್ಷರಶಃ ಬದಲಾಯಿತು.
ದಶಕಗಳ ಜನ ವಿರೋಧಿ ಸೇನಾಡಳಿತದಿಂದ ಬೇಸತ್ತಿದ್ದ ಜನರು ಸೂಕಿಯ ಪ್ರಜಾಪ್ರಭುತ್ವ ಆಡಳಿತವನ್ನು ಮನಸಾರೆ ಮೆಚ್ಚಿ ಅನೇಕರು ಆಕೆಯನ್ನು ಆರಾಧಿಸ ತೊಡಗಿದರು. 2015 ರಿಂದ 2020ರವರೆಗೆ ಐದು ವರ್ಷಗಳ ಯಶಸ್ವಿ ಆಡಳಿತ ನಡೆಸಿದ್ದ ಸೂಕಿ 2020ರಲ್ಲಿ ಮತ್ತೆ ಚುನಾವಣೆ ಎದುರಿಸಿದರು. ಸೇನೆ ಈ ಬಾರಿ ಏನಾದರೂ ಸರಿಯೇ ಸೂಕಿಯನ್ನು ಸೋಲಿಸಲೇ ಬೇಕೆಂದು ಹಠಕ್ಕೆ ಬಿದ್ದಂತೆ ಚುನಾವಣಾ ಅಖಾಡಕ್ಕೆ ಇಳಿಯಿತಾದರು ಸಿಕ್ಕಿದ್ದು ಮಾತ್ರ ಕಹಿ. ಹೌದು, ಸೇನೆ ಮತ್ತೊಮ್ಮೆ ಸೂಕಿಯ ಎದುರು ಮಂಡಿಯೂರಿತು!
2020ರ ಚುನಾವಣೆಯಲ್ಲಿ ಪುನಃ ಸೂಕಿಯೇ ಬಹುಮತದಿಂದ ಗೆದ್ದು ಎರಡನೇ ಬಾರಿಗೆ ಮ್ಯಾನ್ಮಾರ್‌ನ ಅಧಿಕಾರ ಹಿಡಿದರು. ಸೂಕಿಯ ಈ ಗೆಲುವನ್ನು ಸಹಿಸದ ಸೇನೆ ಏನಾದರೂ ಪಿತೂರಿ ಮಾಡಿ ಈಕೆಯನ್ನು ಕೆಳಗಿಳಿಸಬೇಕೆಂದು ತೀರ್ಮಾನಿಸಿತು. ತತ್ಪರಿಣಾಮ ಸೇನೆ ಸೂಕಿಯ 2020ರ ಚುನಾವಣೆಯ ಗೆಲುವನ್ನು ಅಕ್ರಮವೆಂದು ಪ್ರಶ್ನಿಸಿ 2021ರ ಫೆಬ್ರವರಿಯಲ್ಲಿ ಪ್ರಜಾಸತ್ತಾತ್ಮಕವಾಗಿ ಜನರಿಂದ ಆಯ್ಕೆಯಾದ ಸೂಕಿ ಸರಕಾರದ ಮೇಲೆಯೇ ದಂಗೆ ಎದ್ದಿತು! ಸೂಕಿ ಹಾದಿ ಯಾಗಿ ಸರಕಾರದ ಭಾಗವಾಗಿದ್ದ ಅನೇಕರನ್ನು ಬಂಧಿಸಿ ಎನ್‌ಎಲ್‌ಡಿ ಸರಕಾರವನ್ನು ವಜಾಗೊಳಿಸಿ ಬಿಟ್ಟಿತು ಜುಂಟಾ ಸೇನೆ. ಅಲ್ಲಿನ ನ್ಯಾಯಾಂಗ ಸಹ ಸೇನೆಯ ಕೈಗೊಂಬೆ ಆಗಿರುವುದರಿಂದ ಸೂಕಿಗೆ ನ್ಯಾಯಾಲಯದ ನೆರವು ಕೂಡ ಸಿಗದೆ ಹೋಯಿತು.
ಕಳೆದ ಅನೇಕ ದಶಕಗಳಿಂದ ಸೇನೆ ಸೂಕಿಯ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತಾ ಆಕೆಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಎಲ್ಲಾ ಕುತಂತ್ರಗಳನ್ನು ಮಾಡುತ್ತಿದೆ. ಒಂದು ದಿನ ಪೂರ್ತಿಯಾಗಿ ಮನೆಯೊಳಗೆ ಇರುವುದೆಂದರೆ ನರಕಯಾತನೆ ಆಗುವಷ್ಟು ಹಿಂಸೆ ಎಂದು ಭಾವಿಸುವ ನಾವುಗಳು ದೇಶದ ಜನರಿಗಾಗಿ ಸುಮಾರು ಇಪ್ಪತ್ತು ಇಪ್ಪತ್ತೈದು ವರ್ಷಗಳ ಕಾಲ ಜೈಲು ಹಾಗೂ ಗೃಹಬಂಧನ ದ ಕಳೆದಿರುವ ಸೂಕಿಯ ಹೋರಾಟವನ್ನು ಮೆಚ್ಚಬೇಕು.
ದೇಶದ ಒಳಿತಿಗಾಗಿ ಕೈತುಂಬಾ ಸಂಬಳ ಪಡೆಯುತ್ತಿದ್ದ ಕೆಲಸವನ್ನು ತೊರೆದು ಇಡೀ ಸೇನೆಯನ್ನು ಎದುರು ಹಾಕಿಕೊಂಡು ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಬುನಾದಿ ಹಾಕಲು ಮುಂದಾದ ಸೂಕಿಯನ್ನು ಅಲ್ಲಿನ ಜನ ಸರ್ವಾನು ಮತದಿಂದ ಆಯ್ಕೆ ಮಾಡಿದ್ದು ತಪ್ಪಾ? ಸೂಕಿಯ ಅವಿರತ ಹೋರಾಟ, ಅವಳಲ್ಲಿದ್ದ ಗಟ್ಟಿತನ, ಸಾಧಿಸುವ ಛಲ ಇರುವ ಆಕೆಯನ್ನು ಅಲ್ಲಿನ ಜನ ಮ್ಯಾನ್ಮಾರ್‌ನ ಐರನ್ ಲೇಡಿ ಎಂದು ಕರೆದರು.