Saturday, 21st December 2024

ಮನೆಯ ಹತ್ತಿರವೇ ಕಾಡು ಮರಗಳು !

ಶಶಾಂಕಣ

shashidhara.halady@gmail.com

ನಮ್ಮ ಮನೆಯ ತೋಟದಲ್ಲಿದ್ದ ಇತರ ಮರಗಳಲ್ಲಿ ಒಂದೆರಡು ಹಲಸಿನ ಮರಗಳು ಎದ್ದು ಕಾಣಿಸುತ್ತವೆ. ಆದರೆ, ಮರಗೊಡ್ಲು ವಿನ ಪ್ರಭಾವವೋ ಏನೋ, ಆ ಮರಗಳಲ್ಲಿ ಜಾಸ್ತಿ ಕಾಯಿಗಳೇ ಆಗುತ್ತಿರಲಿಲ್ಲ. ಈ ತೋಟದ ಅವಿಭಾಜ್ಯ ಅಂಗದಂತೆ, ಬೃಹದಾಕಾರಕ್ಕೆ ಬೆಳೆದು ನಿಂತ ಇನ್ನೊಂದು ಕಾಡು ಮರವೆಂದರೆ, ದೂಪದ ಮರ.

ನಮ್ಮ ಹಳ್ಳಿ ಮನೆ ಎದುರು ಉತ್ತರ ದಿಕ್ಕಿಗೆ ಗದ್ದೆ ಬಯಲು; ದಕ್ಷಿಣ ದಿಕ್ಕಿಗೆ ಒಂದು ಪುಟ್ಟ ತೋಟ. ನಮ್ಮ ಹಿಂದಿನವರು ಮಾಡಿದ್ದ ಅಡಿಕೆ ತೋಟವನ್ನು ನಮ್ಮ ಅಮ್ಮಮ್ಮನೂ ಮುಂದುವರಿಸಿಕೊಂಡು ಬಂದಿದ್ದರೇ ಹೊರತು, ಅದರಿಂದ ವಿಶೇಷ ಆದಾಯ ಬಂದಿದ್ದನ್ನಂತೂ ನಾನು ಕಂಡಿಲ್ಲ.

ಒಂದಷ್ಟು ಹಳೆಯ ಅಡಿಕೆ ಮರಗಳಿದ್ದ ಆ ತೋಟ ಅರ್ಧ ಎಕರೆ ಇತ್ತೇನೋ ಅಷ್ಟೇ. ಆ ತೋಟದಿಂದ ದೊರೆಯುತ್ತಿದ್ದ ಅಡಿಕೆ ಯನ್ನು ಮನೆ ಮುಂದೆ ಅಥವಾ ಚಪ್ಪರದ ಮೇಲೆ ಒಣಗಿಸಿ, ಗೋಟಡಕೆ ಮಾಡಿ, ಮಾರುತ್ತಿದ್ದರು. ಆ ಅಡಿಕೆ ಮರಕ್ಕೆ ಹಬ್ಬಿಸಿದ ಮೆಣಸಿನ ಬಳ್ಳಿಗಳಿಂದ ಪ್ರತಿ ಚಳಿಗಾಲ ಮುಗಿ ಯುವ ಹೊತ್ತಿಗೆ ಸುಮಾರು ಒಂದು ಕಳಸಿಗೆ ಮೆಣಸಿನಕಾಳು ದೊರೆಯು ತ್ತಿತ್ತು. ಅಡಕೆ ಮರಗಳಿಗೆ ಹಬ್ಬಿಸಿದ ವೀಳ್ಯದೆಲೆಗಳಿಂದ ಆದಾಯವಿಲ್ಲ ದಿದ್ದರೂ, ಎಲೆ ಅಡಿಕೆ ತಿನ್ನಲು, ಬಂದವರಿಗೆ ಎಲೆಅಡಿಕೆ ಆತಿಥ್ಯ ಮಾಡಲು ಉಪಯೋಗವಾಗುತ್ತಿತ್ತು. ಆ ತೋಟದ ಅಂಚಿ ನಲ್ಲಿದ್ದ ಒಂದೆರಡು ತೆಂಗಿನ ಮರಗಳಿಂದ ಒಂದಷ್ಟು ತೆಂಗಿನಕಾಯಿ ದೊರೆಯುತ್ತಿತ್ತು.

ಅದನ್ನೇಕೆ ಒಂದು ಸಾಧಾರಣ ಮಟ್ಟದ ತೋಟ ಎಂದೆ ಅಂದರೆ, ಅದರಲ್ಲಿದ್ದ ಅಡಕೆ ಮರಗಳನ್ನೂ ಮೀರಿಸುವಂತೆ ನಾನಾ ರೀತಿಯ ಕಾಡು ಮರಗಳು, ಬಳ್ಳಿಗಳು, ಪೊದೆಗಳು ತಮ್ಮಷ್ಟಕ್ಕೆ ಬೆಳೆದುಕೊಂಡು, ತೋಟವನ್ನು ‘ಮರಗೊಡ್ಲು’ ಮಾಡುವುದಕ್ಕೆ ತಮ್ಮ ಯಥಾನುಶಕ್ತಿ ಕಾಣಿಕೆ ಸಲ್ಲಿಸಿದ್ದವು. ಅಡಕೆ ತೋಟದಲ್ಲಿ ಇಂತಹ ಬೃಹತ್ ಗಾತ್ರದ ಮರಗಳಿದ್ದರೆ, ಅವು ಸೃಷ್ಟಿಸುವ ‘ಮರಗೊಡ್ಲು’ ಮತ್ತು ನೆಲದಾಳಕ್ಕೆ ಸಾಗುವ ಅವುಗಳ ಬೇರುಗಳಿಂದಾಗಿ, ಅಡಕೆ ಮರಗಳಿಗೆ ಹೊಡೆತವೇ ಸರಿ; ಅಡಕೆಯ
ಬೇರುಗಳು ಹೀರಬೇಕಾದ ಪೋಷ್ಟಿಕಾಂಶ ಮತ್ತು ನೀರನ್ನು, ಈ ಕಾಡು ಮರಗಳೇ ಹೀರಿಕೊಂಡು, ಅಡಕೆಯ ಇಳುವರಿಯನ್ನು ಕಡಿಮೆ ಮಾಡುತ್ತಿದ್ದವು.

ಈ ವಿಚಾರ ನಮ್ಮ ಅಮ್ಮಮ್ಮನಿಗೆ ಗೊತ್ತಿದ್ದರೂ, ಅದೇಕೋ, ಹಿಂದಿನವರು ಬೆಳೆಸಿಕೊಂಡು ಬಂದಿದ್ದ ಆ ತೋಟದ ಸ್ವರೂಪ ವನ್ನು ಬದಲಿಸಲು ಅವರು ಪ್ರಯತ್ನಿಸಿರಲಿಲ್ಲ. ಆ ತೋಟದ ಪೂರ್ವದ ಅಂಚಿನಲ್ಲಿ ಭಾರೀ ಗಾತ್ರದ ಎರಡು ಮಾವಿನ ಮರಗಳಿದ್ದವು; ನಮ್ಮೂರಿನ ಭಾಷೆಯಲ್ಲಿ ಅವು ಕಾಟು ಮಾವಿನ ಮರಗಳು. ಸಾಮಾನ್ಯವಾಗಿ ಎರಡು ವರ್ಷಗಳಿಗೊಮ್ಮೆ ಆ ಮರಗಳಲ್ಲಿ ಅಕ್ಷರಶಃ ಸಾವಿರಾರು ಮಾವಿನ ಮಿಡಿಗಳು ತೂಗುತ್ತಿದ್ದವು; ಆ ಮಿಡಿಗಳು ಎಳೆಯದಿದ್ದಾಗ, ಮೋಡದ ಕಾಟ ಜಾಸ್ತಿಯಾದರೆ, ಒಂದೇ ಸಮನೆ ನೆಲಕ್ಕೆ ಉದುರುತ್ತಿದ್ದವು; ಅವನ್ನು ನಾವು ಆರಿಸಿ ತಿಂದು, ಹಿರಿಯರಿಂದ ಬೈಸಿಕೊಳ್ಳು
ತ್ತಿದ್ದೆವು. ‘ಸೊನೆ ಸುಟ್ಟ ಮಾವಿನ ಮಿಡಿ ತಿಂದು ನಾಲಗೆ, ಗಂಟಲು ಹಾಳು ಮಾಡಿಕೊಳ್ಳಬೇಡಿ’ ಎಂಬುದು ಅವರ ಎಚ್ಚರಿಕೆ. ಮಾವಿನ ಮಿಡಿಗಳು ತುಸು ದೊಡ್ಡದಾದಾಗ, ಕೊಯ್ದು ಉಪ್ಪು ಹಾಕಿದ ಭರಣಿಗಳಲ್ಲಿ ನೆನೆಸಿ, ಚಿರುಟಿಸಿ, ಮೆಣಿಸಿನಕಾಯಿ
ಯನ್ನು ಅರೆದು ಮಿಶ್ರಮಾಡಿ ಉಪ್ಪಿನ ಕಾಯಿ ಮಾಡುತ್ತಿದ್ದರು.

ದೊಡ್ಡ ಪಾತ್ರೆಯಲ್ಲಿ ಒಂದು ರಾಶಿ ಉಪ್ಪಿನ ಕಾಯಿ ಮಾಡಿ, ಜಾಲಿಯಲ್ಲಿ ತುಂಬಿಸುವಾಗ ಅಮ್ಮಮ್ಮನ ಸಡಗರ, ಸಂಭ್ರಮ,
ಉತ್ಸಾಹಗಳನ್ನು ನೋಡಿಯೇ ನಂಬಬೇಕು. ನಮ್ಮ ಮನೆಗೆ ಎರಡು ವರ್ಷಗಳಿಗಾಗುವಷ್ಟು ಮತ್ತು ಇತರ ನೆಂಟರಿಗೂ ಅಷ್ಟಿಷ್ಟು ಹಂಚುವಷ್ಟು ಉಪ್ಪಿನ ಕಾಯಿಯನ್ನು ಕಷ್ಟಪಟ್ಟು ಮಾಡುವ ಆ ಶ್ರಮವು, ಸಂಭ್ರಮವಾಗಿ ಸಾಕಾರಗೊಳ್ಳುತ್ತಿದ್ದುದು ಆ
ತಲೆಮಾರಿಗೆ ಮಾತ್ರವೆ? ಆ ಎರಡು ಭಾರೀ ಮರಗಳಲ್ಲಿ, ಒಂದು ಮಾವಿನ ಮರದ ಮಿಡಿ ತುಸು ರುಚಿ, ಸುವಾಸನೆಯುಕ್ತ. ಇನ್ನೊಂದು ಮರದ ಮಿಡಿ ಬರೀ ಹುಳಿ; ಆ ಭಾರೀ ಎತ್ತರದ ಮರದ ಕಾಯಿಗಳು ಹಣ್ಣಾಗಿ ಕೆಳಗೆ ಬಿದ್ದಾಗ, ರುಚಿ ನೋಡಿದರೆ, ಆ ಹಣ್ಣು ಸಹ ಹುಳಿ ಜಮ! ಇದೇಕೆ ಈ ಮಾವಿನ ಹಣ್ಣು ಯಾವಾಗಲೂ ಸಿಹಿಗಟ್ಟುವುದೇ ಇಲ್ಲ ಎಂದು ನಮಗೆ ಅಚ್ಚರಿ.

ಅದಕ್ಕೆ ಉತ್ತರ ಹುಡುಕಿಕೊಟ್ಟವರು, ಶೃಂಗೇರಿಯಿಂದ ಒಮ್ಮೆ ನಮ್ಮ ಮನೆಗೆ ಬಂದಿದ್ದ ಚಿಕ್ಕಮ್ಮ. ಒಂದು ಬೇಸಗೆಯಲ್ಲಿ ಬಂದಿದ್ದ ಅವರು, ದುಂಡನೆಯ ಆಕಾರದ, ಚಿಕ್ಕ ಚಿಕ್ಕ ಗಾತ್ರದ ಆ ಹಣ್ಣನ್ನು ತಿಂದು, ‘ಇದು ಮಾವಿನ ಕಾಯಿ ಅಲ್ಲ, ಇದು ದಿಂಡಿನ ಕಾಯಿ. ಆದ್ದರಿಂದಲೇ ಹುಳಿ’ ಎಂದುದ್ಗರಿಸಿ, ನಮ್ಮ ಬಹುಕಾಲದ ಪ್ರಶ್ನೆಗೆ ಸೂಕ್ತ ಉತ್ತರ ಹೇಳಿದರು. ಅದೇನೇ ಇದ್ದರೂ, ಆ ಎರಡೂ ಕಾಟು ಮಾವಿನ ಮರದ ಹಣ್ಣುಗಳಿಂದ ‘ಹಣ್ ಚೆಟ್’ ಮಾಡುವ ಸಂಭ್ರಮಕ್ಕೆ ಕೊರತೆಯುಂಟಾಗಲಿಲ್ಲ.

ನಮ್ಮ ಪುಟ್ಟ ಅಡಕೆ ತೋಟದ ಪೂರ್ವದಂಚಿನಲ್ಲಿದ್ದ ಆ ಎರಡು ಬೃಹತ್ ಕಾಟು ಮಾವಿನ ಮರಗಳಿಗೆ ಹಬ್ಬಿಕೊಂಡಿದ್ದ ಒಂದು ಸೀಗೆ ಬಳ್ಳಿ, ಆ ತೋಟದ ಇನ್ನೋರ್ವ ‘ಕಾಡು ಸದಸ್ಯ’! ಆ ಬಳ್ಳಿ ಪ್ರತಿವರ್ಷ ನೀಡುತ್ತಿದ್ದ ಸೀಗೆಕಾಯಿಗಳನ್ನು ಪುಡಿ ಮಾಡಿ ಸ್ನಾನಕ್ಕೆ ಉಪಯೋಗಿಸುತ್ತಿದ್ದುದರಿಂದ, ಅದಕ್ಕೆ ಸಣ್ಣಮಟ್ಟದ ವಾಣಿಜ್ಯಕ ಮೌಲ್ಯವೂ ಇತ್ತು. ಎರಡೂ ಮರಗಳಿಗೆ ಹಬ್ಬಿ ಕೊಂಡಿದ್ದ ಆ ಬಳ್ಳಿಯ ಬುಡ ಎಲ್ಲಿತ್ತು ಎಂಬುದೇ ಗೊತ್ತಾಗುತ್ತಿರಲಿಲ್ಲ.

ಜತೆಗೆ ಅದರ ತುಂಬಾ ಮುಳ್ಳುಗಳು. ಅವು ಆಗಾಗ ಪುಡಿಯಾಗಿ ಕೆಳಗೆ ಬೀಳುತ್ತಿದ್ದವು. ಮಾವಿನ ಹಣ್ಣು ಆರಿಸಲು ಹೋದ ನಮ್ಮ ಕಾಲಿಗೆ ಚುಚ್ಚಿದ್ದೂ ಉಂಟು! ಆ ‘ಸೀಗೆಬಲ್ಲೆ’ಯನ್ನು ಕಡಿಸಿದರೆ, ಮಾವಿನ ಮಿಡಿ, ಮಾವಿನ ಹಣ್ಣು ಆರಿಸಲು ಸುಲಭ ವಾದೀತು ಎಂಬ ಅಭಿಪ್ರಾಯ ನಮ್ಮದು, ಅಂದರೆ ಮಕ್ಕಳದು. ‘ಎಲ್ಲಾದರು ಉಂಟೆ! ವರ್ಷ ವರ್ಷ ಅಷ್ಟೊಂದು ಸೀಗೆ ಕಾಯಿ ಬಿಡುತ್ತೆ, ಆ ಸೀಗೆಕಾಯಿಯನ್ನು ಪುಡಿ ಮಾಡಿದರೆ, ಮಕ್ಕಳಿಗೆ ತಲೆಸ್ನಾನಕ್ಕೆ ಅನುಕೂಲ, ಕೂದಲ ಜಿಡ್ಡು ಪೂರ್ತಿಯಾಗಿ
ತೊಳೆಯಲು ಆಗುತ್ತೆ, ಇಲ್ಲಾಂದರೆ ಹೆಣ್ಣು ಮಕ್ಕಳ ತಲೆಯಲ್ಲಿ ಹೇನಿನ ಪೈರೇ ಬೆಳೆದೀತು.

ಜತೆಗೆ ಹೋರಿ ಮೈ ಉಜ್ಜಿ ಸ್ನಾನ ಮಾಡಿಸುವುದಕ್ಕೂ ಆ ಸೀಗೆ ಪುಡಿಯೇ ಸೈ’ ಎಂಬುದು ನಮ್ಮ ಅಮ್ಮಮ್ಮನ ಅಭಿಪ್ರಾಯ. ಆದ್ದರಿಂದ ಆ ‘ಸೀಗೆ ಬಲ್ಲೆ’ ಮತ್ತು ಅದು ಬೀಳಿಸುವ ಮುಳ್ಳುಗಳು ನಮ್ಮ ತೋಟದ ಅವಿಭಾಜ್ಯ ಅಂಗಗಳಾಗಿಯೇ ಮುಂದು ವರಿದವು. ಅದೇ ತೋಟದ ಉತ್ತರ ಭಾಗದಲ್ಲಿ, ಅಂದರೆ ನಮ್ಮ ಮನೆಗೆ ಹತ್ತಿರದಲ್ಲೇ ಇದ್ದ ಅಮಟೆ ಮರದ ಗಾತ್ರ ಭಾರೀ ಎಂದೇ ಹೇಳಬಹುದು. ಪ್ರತಿ ವರ್ಷ ಬೇಸಗೆಯ ಸಮಯದಲ್ಲಿ ಆ ಮರ ನೀಡುತ್ತಿದ್ದ ಸಾವಿರಾರು ಅಮಟೆ ಕಾಯಿಗಳು, ಅಡುಗೆಗೆ ಹುಳಿ ಒದಗಿಸುವ ಒಂದು ಪ್ರಮುಖ ಮೂಲ. ಹುರುಳಿ ಸಾರಿಗೆ, ಅಮಟೆಕಾಯಿ ಗುದ್ದಿ ಹಾಕಿದರೆ, ಆ ಸಾರಿನ ರುಚಿಯೇ ಒಂದು ಉನ್ನತ ಮಟ್ಟಕ್ಕೆ ಬಂದು ನಿಲ್ಲುತ್ತದೆ.

ಮಳೆಗಾಲ ಆರಂಭವಾದಾಗ, ಆ ರೀತಿಯ ಹುರುಳಿ ಸಾರು ದೇಹಕ್ಕೆ ಹೆಚ್ಚಿನ ಶಕ್ತಿ ನೀಡುತ್ತಿತ್ತು. ಅಮಟೆ ಕಾಯಿಯ ಗೊಜ್ಜು, ಚಟ್ನಿ, ಮುದ್ದುಳಿ, ಉಪ್ಪಿನಕಾಯಿ ಎಲ್ಲವೂ ನಮ್ಮೂರಲ್ಲಿ ಜನಪ್ರಿಯ. ಮಾವಿನ ಮಿಡಿ ಉಪ್ಪಿನಕಾಯಿಗೆ ಹೋಲಿಸಿದರೆ, ಅಮಟೆ ಕಾಯಿ ಉಪ್ಪಿನ ಕಾಯಿ ಕೇವಲ ಮೂರರಿಂದ ಆರು ತಿಂಗಳು ಮಾತ್ರ ಉಪಯೋಗಿಸಬಹುದಿತ್ತು (ಫ್ರಿಜ್ ಇಲ್ಲದ ಆ ದಿನಗಳಲ್ಲಿ).
ಅಮಟೆ ಮರದ ಪಕ್ಕದಲ್ಲೇ ಇದ್ದ ಇನ್ನೊಂದು ದೊಡ್ಡ ಗಾತ್ರದ ಮರವೆಂದರೆ ಬಾಗಾಳು (ಬಕುಳ, ರಂಜ, ರೆಂಜೆ) ಮರ. ಇದಂತೂ ಅಪ್ಪಟ ಕಾಡು ವೃಕ್ಷ. ನಮ್ಮ ಮನೆಯ ಸುತ್ತಮುತ್ತಲಿನ ಹಾಡಿ- ಹಕ್ಕಲುಗಳಲ್ಲಿ, ಹರನಗುಡ್ಡೆಯಲ್ಲಿ ಬಾಗಾಳು  ರ ಗಳು ಸಾಕಷ್ಟಿದ್ದವು.

ಆದರೆ, ನಮ್ಮ ಮನೆಯ ಹತ್ತಿರವಿದ್ದ ಈ ಬಾಗಾಳು ಮರದ ವಿಶೇಷವೆಂದರೆ, ದೊಡ್ಡ ಗಾತ್ರ ಹೂವುಗಳು. ಪ್ರತಿ ಸಂಜೆ ಮತ್ತು
ಬೆಳಗ್ಗೆ (ವಿಶೇಷವಾಗಿ ಬೇಸಗೆಯಲ್ಲಿ) ಆ ಮರದಿಂದ ಕೆಳಗೆ ಉದುರುವ ಬಾಗಾಳು ಹೂಗಳನ್ನು ಆರಿಸುವುದೆಂದರೆ, ಮಕ್ಕಳಿಗೆ, ಹೆಂಗೆಳೆಯರಿಗೆ ಸಂಭ್ರಮ. ಆ ರೀತಿಯ ಆಯ್ದ ಹೂವುಗಳನ್ನು ನೀರಿನಲ್ಲಿ ತೊಳೆದು, ಬಾಳೆಯ ನಾರಿಗೆ ಪೋಣಿಸಿ ಮಾಲೆ ಮಾಡಿದರೆ, ಅವು ಹೆಂಗೆಳೆಯರಿಗೂ ಅಚ್ಚುಮೆಚ್ಚು, ದೇವರಿಗೂ ಪ್ರೀತಿ. ಬಾಗಾಳು ಹೂವು ಎಲ್ಲಾ ಸಂದರ್ಭಗಳಲ್ಲೂ, ಮದುವೆಗೆ ಸಹ, ಶ್ರೇಷ್ಟ ಎಂಬ ನಂಬಿಕೆ ನಮ್ಮೂರಲ್ಲಿದೆ. ಬಾಗಾಳು ಹೂವನ್ನು ಒಣಗಿಸಿಟ್ಟು ಸಹ ಉಪಯೋಗಿಸಬಹುದು.

ನಮ್ಮ ಮನೆಯ ತೋಟದಲ್ಲಿದ್ದ ಇತರ ಮರಗಳಲ್ಲಿ ಒಂದೆರಡು ಹಲಸಿನ ಮರಗಳು ಎದ್ದು ಕಾಣಿಸುತ್ತವೆ. ಆದರೆ, ಮರಗೊಡ್ಲು ವಿನ ಪ್ರಭಾವವೋ ಏನೋ, ಆ ಮರಗಳಲ್ಲಿ ಜಾಸ್ತಿ ಕಾಯಿಗಳೇ ಆಗುತ್ತಿರಲಿಲ್ಲ. ಈ ತೋಟದ ಅವಿಭಾಜ್ಯ ಅಂಗದಂತೆ, ಬೃಹದಾಕಾರಕ್ಕೆ ಬೆಳೆದು ನಿಂತ ಇನ್ನೊಂದು ಕಾಡು ಮರವೆಂದರೆ, ದೂಪದ ಮರ. ಇದಂತೂ ಅಪ್ಪಟ ಕಾಡಿನ ವಾಸಿ; ಅಪ್ಪಿ ತಪ್ಪಿ ನಮ್ಮ ತೋಟದಲ್ಲಿ ಬೆಳೆದಿತ್ತು.

ದೊಡ್ಡ ದೊಡ್ಡ ಒತ್ತೊತ್ತಾದ ಎಲೆ, ಅಗಲವಾದ ಕಾಂಡ, ವಿಶಾಲ ಕ್ಯಾನೊಪಿ; ಬಿಸಿಲು ನೆಲಕ್ಕೆ ತಾಗದಂತಹ ನೆರಳನ್ನು ನೀಡುವ ಮರ. ಆದರೂ ಅದನ್ನು ಕಾಪಿಟ್ಟಿದ್ದರು. ಏಕೆಂದರೆ, ಖಾದ್ಯ ತೈಲವನ್ನು ತಯಾರಿಸಬಹುದಾದ ಸಾವಿರಾರು ದೂಪದ ಕಾಯಿ ಗಳನ್ನು ಪ್ರತಿವರ್ಷ ಆ ಮರ ಕೊಡುತ್ತಿತ್ತು. ದೂಪದ ಎಣ್ಣೆಯಿಂದ ಕರಿದ ಹಪ್ಪಳ, ಅತ್ರಾಸ, ಕಾಯಿಅಪ್ಪ, ಮುಳುಕಗಳು
ಬಲು ರುಚಿ!

ಆ ದೂಪದ ಮರದ ಹತ್ತಿರವೇ ಒಂದು ರಾಮಪತ್ರೆ ಮರವಿತ್ತು. ಇದೂ ಸಹ ಕಾಡಿನ ಮರ; ಅದರಿಂದ ನಮ್ಮ ಮನೆಯವರಿಗೆ ಅಂತಹ ಉಪಯೋಗವಿರಲಿಲ್ಲ. ಅದರ ಹತ್ತಿರವೇ ಹರಿಯುತ್ತಿದ್ದ ತೋಡಿನುದ್ದಕ್ಕೂ, ಚಾರು ಮರ, ಬೋಗಿ ಮರ, ನೇರಳೆ ಮರ, ಇನ್ನೂ ಯಾವ್ಯಾವುದೋ ಕಾಟು ಮರಗಳು ಸಾಲಾಗಿ ಬೆಳೆದಿದ್ದವು. ಪ್ರತಿವರ್ಷ ತೋಟದ ‘ಬುಡ ಮಾಡಲು’, ಆ ಮರಗಳ
ಸೊಪ್ಪನ್ನು ಕಡಿದು, ಅಡಕೆ ಮರಗಳ ಬುಡಕ್ಕೆ ಹಾಕಿ, ಮಣ್ಣು ಮುಚ್ಚುತ್ತಿದ್ದರು. ಈ ಕಾಟು ಮರಗಳ ಸಾಲಿನಲ್ಲೇ ಒಂದು ಹೆಬ್ಬಲ ಸಿನ ಮರವೂ ಇತ್ತು. ಆದರೆ, ಅದರ ಕಾಯಿಗಳ ಗಾತ್ರ ಸರಾಸರಿಗಿಂತ ತುಸು ಚಿಕ್ಕದು.

ತೋಟದ ಅಂಚಿನಲ್ಲೇ ಹರಿಯುತ್ತಿದ್ದ ತೋಡನ್ನು ದಾಟಿ, ಸೇಡಿಮಣ್ಣಿನ ದರೆಯನ್ನು ಕೊರಕಲು ಬಿದ್ದ ದಾರಿಯನ್ನು ಬಳಸಿ
ಮೇಲೇರಿದರೆ, ಎರಡು ಭಾರೀ ಗಾತ್ರದ ಹೆಬ್ಬಲಸಿನ ಮರಗಳಿದ್ದವು. ಚೆನ್ನಾಗಿ ಬಿಸಿಲು ಬೀಳುವ ಜಾಗದಲ್ಲಿದ್ದುದರಿಂದಲೋ ಏನೋ, ಅಥವಾ ಅವುಗಳ ಜೀನ್ಸ್‌ನ ಪ್ರಭಾವದಿಂದಲೋ, ಆ ಎರಡು ಮರಗಳು ಬಿಡುತ್ತಿದ್ದ ಹೆಬ್ಬಲಸಿನ ಹಣ್ಣುಗಳ ರುಚಿ ಅಪ್ರತಿಮ. ಒಂದೇ ರೀತಿ ಕಾಣಿಸುವಂತೆ ಅಕ್ಕಪಕ್ಕದಲ್ಲಿ ಬೆಳೆದಿದ್ದ ಆ ಎರಡು ಮರಗಳಲ್ಲಿ ಹೆಬ್ಬಲಸಿನ ಹಣ್ಣಾಯಿತೆಂದರೆ,
ಮಕ್ಕಳಿಗೆ ಖುಷಿ. ಆ ಮರಗಳ ಹಣ್ಣುಗಳ ರುಚಿ ಹಾಗಿತ್ತು.

ಸಣ್ಣ ಮಗೆಕಾಯಿಯಷ್ಟು ಗಾತ್ರದ ಹಣ್ಣು; ಒಳಗೆ ಬಂಗಾರದ ಬಣ್ಣದ ತೊಳೆಗಳು; ಬಾಯಲ್ಲಿ ಹಾಕಿಕೊಂಡರೆ ರುಚಿ ಮಧುರ.
ಆದರೆ ಆ ರುಚಿಯನ್ನು ಸವಿಯಲು ಒಂದು ತೊಡಕಿತ್ತು. ನೇರವಾಗಿ ಸುಮಾರು 20 ಅಡಿ ಎತ್ತರ ಬೆಳೆದುಕೊಂಡಿದ್ದ ಆ ಮರದ ಕಾಂಡವನ್ನು ಏರಲು ಮಕ್ಕಳಿಗಂತೂ ಸಾಧ್ಯವಿರಲಿಲ್ಲ. ಕಾಂಡ 20 ಅಡಿ ಏರಿದ ನಂತರ ಕೊಂಬೆಗಳು ಟಿಸಿಲು ಒಡೆದು, ಅಡ್ಡಕ್ಕೆ
ಬೆಳೆದಿದ್ದವು. ಆ ಕೊಂಬೆಗಳ ತುಂಬಾ ನೂರಾರು ಹಣ್ಣುಗಳು. ಬೆಳಗಿನ ಹೊತ್ತಿನಲ್ಲಿ ಆ ಹಣ್ಣುಗಳು ಬಂಗಾರದ ಬಣ್ಣದಲ್ಲಿ ಹೊಳೆಯುತ್ತಿದ್ದವು! ಆದರೆ ಸುಲಭವಾಗಿ ಕೈಗೆಟಕುವಂತಿರಲಿಲ್ಲ.

ಅದಕ್ಕೆ ನಮ್ಮೂರಿನ ಯುವಕರಲ್ಲಿ ಒಂದು ಪರಿಹಾರವಿತ್ತು. ಆರೆಂಟು ‘ನ್ಯಾಗಳ ಬೀಳ’ನ್ನು ಒಂದಕ್ಕೊಂದು ಗಂಟು ಹಾಕಿ 30 ಅಡಿ ಉದ್ದದ ದಾರ ಮಾಡುತ್ತಿದ್ದರು. ಅದರೊಂದಿಗೆ ಮರ ಹತ್ತಿ, ಚೆನ್ನಾಗಿ ಮಾಗಿದ ಕಣ್ಣನ್ನು ಕೊಯ್ದು ಆ ಬಳ್ಳಿಯ ಒಂದು ತುದಿಗೆ ಕಟ್ಟಿ ನಿಧಾನವಾಗಿ ಕೆಳಗೆ ಬಿಡುತ್ತಿದ್ದರು. ಮರದ ಕೆಳಗೆ ಇದ್ದ ನಾವು ಹಣ್ಣನ್ನು ಬಿಡಿಸಿಕೊಂಡ ನಂತರ ಮರದ ಮೇಲಿದ್ದವರು ಬಳ್ಳಿಯನ್ನು ಮೇಲಕ್ಕೆ ಎಳೆದುಕೊಳ್ಳುತ್ತಿದ್ದರು. ಈ ಹಣ್ಣುಗಳು ಮರದ ಹಣ್ಣಾದರೆ ರುಚಿ ಜಾಸ್ತಿ.

ಆದರೆ ಯಾವಾಗಲೂ ಆ ರೀತಿ ಮರ ಏರಿ, ಕೊಯ್ದು ಕೊಡುವವರು ಸಿಗಬೇಕಲ್ಲ! ಆಗ ದೊಡ್ಡ ಕೊಕ್ಕೆ ಬಳಸಿ, ಬಲಿತ ಹೆಬ್ಬಲ ಸಿನ ಕಾಯಿಗಳನ್ನು ಬೀಳಿಸಿ ತಂದು, ಮನೆ ಎದುರಿನ ಹುಲ್ಲುಕುತ್ರಿಯ ಅಡಿಯೋ, ಹಟ್ಟಿಯಲ್ಲಿ ಹುಲ್ಲಿನ ನಡುವೆಯೂ ಇಡುತ್ತಿದ್ದೆವು. ಒಂದೆರಡು ದಿನಗಳಲ್ಲಿ ಅವು ಹಣ್ಣಾಗುತ್ತಿದ್ದವು. ಇಪ್ಪತ್ತನೆಯ ಶತಮಾನದಲ್ಲಿ ಹೆಬ್ಬಲಸಿನ ಹಣ್ಣಿನೊಳಗೆ ಇದ್ದ ಪುಟಾಣಿ ಬೀಜದಿಂದ ಎಣ್ಣೆ ಮಾಡುತ್ತಿದ್ದರಂತೆ; ಅದೇ ರೀತಿ ಮನೆಯ ಸುತ್ತ ಮುತ್ತ ಬೆಳೆಯುತ್ತಿದ್ದ ಹೊನ್ನೆ ಮರಗಳ ಕಾಯಿ ಯಿಂದಲೂ ಎಣ್ಣೆ ತೆಗೆಯುತ್ತಿದ್ದರಂತೆ; ಕಾಡಂಚಿನಲ್ಲಿ ಬೆಳೆಯುತ್ತಿದ್ದ ಮುಳ್ಳು ಹರಳಿನ ಕಾಯಿಯಿಂದಲೂ ಎಣ್ಣೆ ಮಾಡುತ್ತಿದ್ದ ರಂತೆ; ಇವೆಲ್ಲವೂ ದೀಪ ಬೆಳಗುವ ಎಣ್ಣೆಗಳು.

ಆ ಸಮಯದಲ್ಲಿ ಖಾದ್ಯ ತೈಲವಾಗಿ ಬಳಕೆಯಲ್ಲಿದ್ದುದು ದೂಪದ ಎಣ್ಣೆ ಮತ್ತು ತೆಂಗಿನ ಎಣ್ಣೆ. ನಮ್ಮ ಮನೆ ಪಕ್ಕದ ಆ ಪುಟ್ಟ ಕೈತೋಟದಲ್ಲಿ ಸಂಪಿಗೆ ಮರ, ಬಿಳಿ ದಾಸವಾಳದ ಗಿಡಗಳು ಸಹ ಇದ್ದವು. ಬಿಳಿ ದಾಸವಾಳದ ಎಲೆಗಳನ್ನು ಕತ್ತರಿಸಿ,
ಸೆಕೆ ಹಿಟ್ಟಿದೊಂದಿಗೆ ಮಿಶ್ರಣಗೊಳಿಸಿ ತಿನ್ನುವ ಪರಿಪಾಠ. ಇನ್ನೂ ಯಾವ್ಯಾವೋ ಮರಗಿಡಗಳು ಅಲ್ಲೆಲ್ಲಾ ಹರಡಿಕೊಂಡಿದ್ದವು. ಅದಕ್ಕೇ ನಾನು ಮೊದಲೇ ಹೇಳಿದ್ದು : ಅಲ್ಲಿ ಅಡಕೆ ಮರಗಳಿಗಿಂತ ಬೇರೆ ಗಿಡ ಮರಗಳೇ ಜಾಸ್ತಿ ಎಂದು.

ಅದೊಂದು ರೀತಿಯಲ್ಲಿ ಕಾಡು ಮಿಶ್ರಿತ ತೋಟ. ಆದ್ದರಿಂದಲೇ ಇರಬೇಕು, ಅಲ್ಲಿ ಹಾರುವ ಓತಿಗಳೂ ಇದ್ದವು! ಮನೆಯ ಪಕ್ಕದಲ್ಲೇ, ಒಂದು ಅಡಿಕೆ ಮರದಿಂದ ಇನ್ನೊಂದು ಮರಕ್ಕೆ ಗ್ಲೈಡ್ ಮಾಡುತ್ತಿದ್ದ ಆ ಹಾರುವ ಓತಿಯನ್ನು ಕಾಣುವ ಅವಕಾಶ ನನಗೆ ಹಲವು ಬಾರಿ ದೊರಕಿತ್ತು. ಈಗಲೂ ಹಾಲಾಡಿಯ ಸುತ್ತಮುತ್ತ ಹಾರುವ ಓತಿಗಳಿವೆ, ಆಗಾಗ ಕಾಣಸಿಕ್ಕು, ಮನದಲ್ಲಿ ಬೆರಗು ಮೂಡಿಸುತ್ತವೆ!