ಪ್ರಚಲಿತ
ಪ್ರಕಾಶ್ ಶೇಷರಾಘವಾಚಾರ್
ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪನವರ ಕಳೆದ 50 ವರ್ಷಗಳ ಅವರ ರಾಜಕೀಯದಲ್ಲಿ ಬಹುದೊಡ್ಡ ಶಕ್ತಿಯಾಗಿ ಬೆಳೆದಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯ ಏಕಮೇವ ಅತ್ಯಂತ ಜನಪ್ರಿಯ ಜನನಾಯಕ ಎಂಬುದರಲ್ಲಿ ಎರಡು ಮಾತಿಲ್ಲ.
ಪುರಸಭಾ ಸದಸ್ಯನಿಂದ ಆರಂಭವಾದ ಇವರ ರಾಜಕೀಯ ಪಯಣ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗುವವರೆಗೆ ಇವರ ರಾಜಕೀಯ ಸಾಗಿದೆ. ಶಿಕಾರಿ ಪುರದಲ್ಲಿ ಆರ್ಎಸ್ಎಸ್ ತಾಲೂಕು ಕಾರ್ಯವಾಹ ಜವಾಬ್ದಾರಿಯಿಂದ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ನಂತರ ಶಿವಮೊಗ್ಗ ಬಿಜೆಪಿ ಅಧ್ಯಕ್ಷ ರಾಗುವವರೆಗೆ ಇವರ ಜಿಲ್ಲಾ ಮಟ್ಟದ ರಾಜಕೀಯವು ಸಾಗುತ್ತದೆ. 1983ರಲ್ಲಿ ಶಿಕಾರಿಪುರದಿಂದ ವಿಧಾನಸಭೆಗೆ ಮೊಟ್ಟ ಮೊದಲ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸುತ್ತಾರೆ. ಆ ನಂತರ ಇವರು ರಾಜಕೀಯದಲ್ಲಿ ಹಿಂತಿರುಗಿ ನೋಡುವುದಿಲ್ಲ ತಮ್ಮ ರೈತಪರ ಕಾಳಜಿಯಿಂದ ರಾಜ್ಯ ರೈತರ ಕಣ್ಮಣಿಯಾಗಿ ಬಿಂಬಿತರಾಗುತ್ತಾರೆ.
ಬಗರ್ ಹುಕುಂ ಸಾಗುವಳಿ ಸಕ್ರಮ ಮಾಡಲು ರೈತರ ಸಾಲಮನ್ನಾ ಮತ್ತು ರೈತರ ಸಾಲದ ಬಡ್ಡಿ ಮನ್ನಾ, ಮಾಡಲು ಒತ್ತಾಯಿಸಿ ಯಡಿಯೂರಪ್ಪನವರು ಐತಿಹಾಸಿಕ ಹೋರಾಟವನ್ನು ಕೈಗೊಂಡಿದ್ದಾರೆ. ಇವರ ಹೋರಾಟದ ಫಲವಾಗಿಯೇ ಇಂದು ಸಾಲಮನ್ನಾ ಯೋಜನೆಯು ಮುನ್ನಲೆಗೆ ಬಂದು ಲಕ್ಷಾಂತರ ಬಡ ರೈತರ ಪಾಲಿಗೆ ವರವಾಗಿ ಪರಿಣಮಿಸಿದೆ. ಬಗರ್ ಹುಕುಂ ಸಾಗುವಳಿಯ ಜಮೀನು ಸಕ್ರಮ ಮಾಡಲು ಸರಕಾರ ಸಮಿತಿ ರಚಿಸಿ ಅರ್ಹ ರೈತರಿಗೆ ಸಾಗುವಳಿ ಜಮೀನು ಮಂಜೂರು ಮಾಡಿದ ಕಾರಣ ಇಂದು ಸಾವಿರಾರು ರೈತರು ಇದರ ಲಾಭವನ್ನು ಪಡೆದು ಭೂ ಒಡೆಯರಾಗಿದ್ದಾರೆ.
ಈ ರೀತಿ ಆರಂಭವಾದ ಸಾರ್ವಜನಿಕ ಜೀವನದಲ್ಲಿ 1989ರಲ್ಲಿ ಯಡಿಯೂರಪ್ಪನವರು ರಾಜ್ಯ ಬಿಜೆಪಿ ಅಧ್ಯಕ್ಷರಾಗುತ್ತಾರೆ. ಅದೇ ಸಮಯದಲ್ಲಿ ಅನಂತ ಕುಮಾರ್ ಪ್ರಧಾನ ಕಾರ್ಯದರ್ಶಿಯಾಗುತ್ತಾರೆ. ಇವರಿಬ್ಬರ ಜೋಡಿ ಚಾಣಕ್ಯ ಚಂದ್ರಗುಪ್ತರ ಹಾಗೆ ಬಿಜೆಪಿಯ ಪ್ರವರ್ಧಮಾನಕ್ಕೆ ಹಗಲಿರುಳು ದುಡಿಯುತ್ತಾರೆ.
ಮತ್ತು ರಾಜ್ಯದಲ್ಲಿ ಬಿಜೆಪಿಯನ್ನು ಪ್ರಬಲವಾದ ಪಕ್ಷವಾಗಿ ಕಟ್ಟಿ ನಿಲ್ಲಿಸುತ್ತಾರೆ. 1990 ರಲ್ಲಿ ಅಯೋಧ್ಯೆ ರಾಮಮಂದಿರ ಹೋರಾಟದ ಕಾವು ದೇಶಾದ್ಯಂತ ಬೀಸಲು ಆರಂಭಿಸುತ್ತದೆ.
ಕರ್ನಾಟಕದಲ್ಲಿಯೂ ಹೋರಾಟಕ್ಕೆ ಅತಿ ಹೆಚ್ಚಿನ ಬೆಂಬಲ ದೊರೆಯುವುದು. ಈ ಹೋರಾಟದ ಫಲವಾಗಿ ಬಿಜೆಪಿಯ ಹೆಸರು ರಾಜ್ಯದ ಹಳ್ಳಿ ಹಳ್ಳಿಗೂ ತಲಪುತ್ತದೆ. ಸಾವಿರಾರು ಯುವಕರು ಬಿಜೆಪಿಗೆ ಹರಿದು ಬಂದ ಕಾಲವದು. 1991 ರ ಲೋಕಸಭಾ ಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ 4 ಸ್ಥಾನಗಳನ್ನು
ಗೆಲ್ಲುತ್ತದೆ. ಈ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಯಡಿಯೂರಪ್ಪ ಅವರು ಬಂಗಾರಪ್ಪನವರ ಹೆಂಡತಿ ತಂಗಿಯ ಗಂಡ ಶಿವಪ್ಪನವರ ಕೈಯಲ್ಲಿ ಸೋಲನ್ನು ಅನುಭವಿಸುತ್ತಾರೆ. ಇದೊಂದು ಅನಿರೀಕ್ಷಿತ ಸೋಲಾಗಿತ್ತು.
94ರ ತರುವಾಯ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ರಾಜ್ಯದಲ್ಲಿ ಮುಖ್ಯವಾಹಿನಿಯ ಪಕ್ಷವಾಗಿ ಎದ್ದು ನಿಲ್ಲುತ್ತದೆ. 1992ರಲ್ಲಿ ಅಯೋಧ್ಯ ಕರಸೇವೆಗೆ ಕರಸೇವಕರ ದಂಡು ಅಯೋಧ್ಯೆಗೆ ಧಾವಿಸುತ್ತದೆ. ಕರ್ನಾಟಕದಿಂದಲೂ ಸಹಸ್ರಾರು ಕಾರ್ಯಕರ್ತರು ಭಾಗವಹಿಸುತ್ತಾರೆ. ಈ ಕರಸೇವೆಯಲ್ಲಿ ಯಡಿಯೂರಪ್ಪ ನವರು ಒಬ್ಬ ರಾಮಭಕ್ತನಾಗಿ ಭಾಗವಹಿಸುತ್ತಾರೆ. ಹಿರಿಯೂರು ಕೃಷ್ಣಮೂರ್ತಿಯವರು ಸಂಘದ ಅತ್ಯಂತ ಗೌರವಾನ್ವಿತ ವ್ಯಕ್ತಿ. ಯಡಿಯೂರಪ್ಪನವರನ್ನು ರಾಜಕೀಯ ಮುನ್ನೆಲೆಗೆ ತರಲು ಇವರ ಕೊಡುಗೆ ಅಪಾರವಾಗಿತ್ತು. ಯಡಿಯೂರಪ್ಪನವರು ಇವರನ್ನು ತಮ್ಮ ಗುರುಗಳೆಂದು ಪರಿಗಣಿಸುತ್ತಿದ್ದರು.
1991 ರ ನಂತರ ರಾಜ್ಯದಲ್ಲಿ ಬಿಜೆಪಿಯ ಹೋರಾಟ ಪರ್ವ ಆರಂಭವಾಗುತ್ತದೆ. ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅನೇಕ ಹೋರಾಟಗಳು ನಡೆಯುತ್ತದೆ. ಅಂದಿನ ಬಂಗಾರಪ್ಪ ಮತ್ತು ಮೊಯ್ಲಿಯವರ ಸರಕಾರ ಆಂತರಿಕ ಕಚ್ಚಾಟ ಭ್ರಷ್ಟಾಚಾರಗಳಿಂದ ಜನತೆಯ ರೋಸಿ ಹೋಗಿದ್ದರು. ಇದನ್ನು ಯಡಿಯೂರಪ್ಪ ಮತ್ತು ಅನಂತ್ ಜೋಡಿ ಚೆನ್ನಾಗಿ ಬಳಸಿಕೊಂಡಿತ್ತು. ಯಡಿಯೂರಪ್ಪನವರು ಬಿಡುವಿಲ್ಲದೆ ಹೋರಾಟ ಪಾದ ಯಾತ್ರೆ ವಿಧಾನಸೌಧ ಮುತ್ತಿಗೆ ರೈತ ಜಾಥ ಹೀಗೆ ಒಂದಲ್ಲ ಒಂದು ಹೋರಾಟದ ಮೂಲಕ ರಾಜ್ಯದ ಮೂಲೆ ಮೂಲೆಯಲ್ಲಿಯೂ ಬಿಜೆಪಿಗೆ ನೆಲೆ ದೊರಕಿಸಿ ಕೊಟ್ಟರು.
94 ವಿಧಾನಸಭೆ ಚುನಾವಣೆಗೆ ಮುನ್ನ ರಾಮಕೃಷ್ಣ ಹೆಗ್ಡೆ ಮತ್ತು ದೇವೆಗೌಡರು ಮತ್ತೆ ಒಂದಾಗದಿದ್ದರೆ ಚುನಾವಣಾ ಫಲಿತಾಂಶ ಭಿನ್ನವಾಗುವ ಸಾಧ್ಯತೆಗಳು ಇದ್ದವು. 40ಸೀಟುಗಳನ್ನು ಗೆದ್ದು ಬಿಜೆಪಿ ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ಅಧಿಕೃತ ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು. ಯಡಿಯೂರಪ್ಪನವರು
ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾಗುತ್ತಾರೆ. 1996ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 6 ಸ್ಥಾನಗಳನ್ನು ಗೆಲ್ಲುತ್ತದೆ. ಅನಂತಕುಮಾರ್ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾಗುತ್ತಾರೆ. 98ರಲ್ಲಿ ಮತ್ತೆ ಲೋಕಸಭೆಗೆ ಚುನಾವಣೆ ನಡೆಯುತ್ತದೆ ಕೇಂದ್ರದಲ್ಲಿ ವಾಜಪೇಯಿ ನೇತೃತ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ನೇತೃತ್ವದ ಸರಕಾರ ರಚನೆಯಾಗುತ್ತದೆ.
ಯಡಿಯೂರಪ್ಪನವರು ಅದೆಷ್ಟು ಬಾರಿ ಹಗಲು ರಾತ್ರಿ ಧರಣಿಯನ್ನು ಕೈಗೊಂಡರೋ ಲೆಕ್ಕ ಸಿಗದು. ಹಲವಾರು ರಾತ್ರಿಗಳನ್ನು ರಸ್ತೆಯಲ್ಲಿಯೇ ಕಳೆದಿರುವುದು ಇವರ ಹೆಗ್ಗಳಿಕೆ ಮತ್ತು ಜನಪರ ಹೋರಾಟದ ಬದ್ಧತೆಯನ್ನು ತೋರುತ್ತದೆ. ರಾಮಕೃಷ್ಣ ಹೆಗಡೆಯವರ ಲೋಕಶಕ್ತಿಯು ಜನತಾದಳದ ಜತೆ ವಿಲೀನವಾಗುತ್ತದೆ. ಇದರ ಪರಿಣಾಮ ಬಿಜಿಪಿಯ ಮೇಲೆಯು ಉಂಟಾಗುತ್ತದೆ. ಈ ಬಾರಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಇಬ್ಬರು ಸೋಲುತ್ತಾರೆ.
1999ರ ವಿಧಾನಸಭೆಯ ಚುನಾವಣೆಯಲ್ಲಿ ಯಡಿಯೂರಪ್ಪ ಪರಾಭವಗೊಂಡಿದ್ದರು ಪಕ್ಷ ಅವರನ್ನು 2000 ದಲ್ಲಿ ವಿಧಾನ ಪರಿಷತ್ ಸದಸ್ಯ ಮಾಡುತ್ತದೆ. ಅನಂತ ಕುಮಾರ್ ಅಧ್ಯಕ್ಷತೆಯಲ್ಲಿ 2004ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿಕೂಟ 84 ಸ್ಥಾನಗಳನ್ನು ಗೆಲ್ಲುತ್ತದೆ. 2006ರಲ್ಲಿ ಕುಮಾರಸ್ವಾಮಿ ಸಮ್ಮಿಶ್ರ ಸರಕಾರದಿಂದ ಹೊರಬಂದು ಬಿಜೆಪಿಯ ಜತೆ 20:20 ರ ಸರಕಾರ ರಚನೆ ಮಾಡುತ್ತಾರೆ ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿಯಾಗಿ ಹಣಕಾಸು ಸಚಿವರಾಗಿ ಹಲವು ಜನಪರ ಯೋಜನೆಗಳನ್ನು ಆರಂಭಿಸುತ್ತಾರೆ.
ತಮ್ಮ 20 ತಿಂಗಳ ಅವಧಿಯು ಮುಗಿದ ತರುವಾಯ ಕುಮಾರಸ್ವಾಮಿ ಕೊಟ್ಟ ಮಾತಿನ ಪ್ರಕಾರ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡುವುದಿಲ್ಲ. ಕುಮಾರ ಸ್ವಾಮಿ ವಚನಭ್ರಷ್ಟ ಪಟ್ಟವನ್ನು ಹೊರುತ್ತಾರೆ. 2009ರಲ್ಲಿ ಮತ್ತೆ ವಿಧಾನಸಭೆಗೆ ಚುನಾವಣೆ ನಡೆದು ಬಿಜೆಪಿ 110 ಸ್ಥಾನಗಳನ್ನು ಗೆದ್ದು ಪಕ್ಷೇತರರ ಬೆಂಬಲ ಪಡೆದು ಸರಕಾರವನ್ನು ರಚನೆಯಾಗುತ್ತದೆ. ಯಡಿಯೂರಪ್ಪನವರು ಮುಖ್ಯಮಂತ್ರಿ ಯಾಗುತ್ತಾರೆ. 2011ರಲ್ಲಿ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ. ಮುಂದಿನ ರಾಜಕೀಯ ಬೆಳವಣಿಗೆಯಲ್ಲಿ ಅವರು ಬಿಜೆಪಿ ತೊರೆದು ಕೆಜೆಪಿ ಸ್ಥಾಪಿಸಿ ವಿಧಾನಸಭೆಗೆ ಪ್ರತ್ಯೇಕವಾಗಿ ಸ್ಪರ್ಧಿಸಿ 6 ಸ್ಥಾನಗಳನ್ನು ಗೆಲ್ಲುತ್ತಾರೆ ಆದರೆ ಬಿಜೆಪಿಗೆ ದೊಡ್ಡ ಹಾನಿಯಾಗಿರುತ್ತದೆ.
2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ 4o ಸ್ಥಾನಕ್ಕೆ ಕುಸಿಯುತ್ತದೆ. ಏಕಾಂಗಿಯ ಹೋರಾಟ ಸಾಧ್ಯವಿಲ್ಲ ಎಂದು ಮನಗೊಂಡ ಯಡಿಯೂರಪ್ಪ ತಮ್ಮ ಕೆಜೆಪಿಯನ್ನು ಬಿಜೆಪಿಯಲ್ಲಿ ಅನಿವಾರ್ಯವಾಗಿ ವಿಲೀನಗೊಳಿಸುತ್ತಾರೆ. 2014 ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರು ಶಿವಮೊಗ್ಗ ಕ್ಷೇತ್ರ ದಿಂದ ಲೋಕಸಭೆಗೆ ಸ್ಪರ್ಧಿಸಿ ಮೋದಿಯವರ ಅಲೆಯಲ್ಲಿ ದೊಡ್ಡ ಬಹುಮತದಿಂದ ಆಯ್ಕೆಯಾಗುತ್ತಾರೆ. ಪಕ್ಷ ಬಿಟ್ಟು ಹೋಗಿ ವಾಪಸ್ ಹಿಂತಿರುಗಿದ
ತರುವಾಯವು ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಯಿತು. ದೇಶದಲ್ಲಿ ಈ ಗೌರವಕ್ಕೆ ಪಾತ್ರರಾದ ಏಕೈಕ ನಾಯಕ ಯಡಿಯೂರಪ್ಪ. ಹೆಜ್ಜೆ ಹೆಜ್ಜೆಗೂ ಬಿಜಿಪಿ ಯಡಿಯೂಪ್ಪನವರಿಗೆ ಸಾಥ್ ನೀಡಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ 103 ಸೀಟುಗಳನ್ನು ಗೆದ್ದು ಅಧಿಕಾರಕ್ಕೆ ಹತ್ತಿರ ಬರುತ್ತದೆ. ಆದರೆ ಮತ್ತೆ ಸರಕಾರ ರಚಿಸಲು ಸಾಧ್ಯ ವಾಗುವುದಿಲ್ಲ. ಮತ್ತೊಮ್ಮೆ ಯಡಿಯೂರಪ್ಪ ಅವರು ವಿರೋಧ ಪಕ್ಷದ ನಾಯಕರಾಗುತ್ತಾರೆ. 2019 ರಲ್ಲಿ ಕುಮಾರ ಸ್ವಾಮಿಯವರ ಸರಕಾರ ಪತನವಾಗಿ ಯಡಿಯೂರಪ್ಪನವರು ನಾಲ್ಕನೆ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆಯನ್ನು ಏರುತ್ತಾರೆ.
ತಮ್ಮ ರಾಜಕೀಯ ಜೀವನದ ಪಯಣದಲ್ಲಿ 8 ಬಾರಿ ಶಾಸಕಾರಾಗಿದ್ದಾರೆ. ಒಮ್ಮೆ ವಿಧಾನ ಪರಿಷತ್ ಸದಸ್ಯ ಒಮ್ಮೆ ಲೋಕಸಭಾ ಸದಸ್ಯರಾಗಿದ್ದಾರೆ. ಮೂರು ಬಾರಿ ವಿರೋಧ ಪಕ್ಷದ ನಾಯಕ ಒಂದು ಬಾರಿ ಉಪ ಮುಖ್ಯಮಂತ್ರಿ ನಾಲ್ಕು ಬಾರಿ ಮುಖ್ಯಮಂತ್ರಿಯಾದ ಛಲಗಾರ ಯಡಿಯೂರಪ್ಪ ಅವರು ಕಳೆದ 50 ವರ್ಷದಲ್ಲಿ ಬಿಜೆಪಿಯ ನಾಯಕತ್ವ ಯಡಿಯೂರಪ್ಪನವರ ಶಕ್ತಿಯನ್ನು ಬೆಳಸಿ ಅದಕ್ಕೆ ತಕ್ಕದಾದ ಸ್ಥಾನವನ್ನು ಸದಾಕಾಲ ನೀಡಿ ಗೌರವಿಸಿದೆ.
ಅವರ ಗೌರವಕ್ಕೆ ಧಕ್ಕೆ ಬರುವ ಹಾಗೆ ಪಕ್ಷ ಅವರೊಡನೆ ಎಂದೂ ನಡೆದುಕೊಂಡಿಲ್ಲ. ಅವರ ಹೆಸರು ಹಲವಾರು ಭ್ರಷ್ಟಾಚಾರ ಹಗರಣಗಳಲ್ಲಿ ಕೇಳಿ ಬಂದ ಸಂದರ್ಭದಲ್ಲಿಯೂ ಪಕ್ಷ ಅವರೊಡನೆ ಬಂಡೆಯ ಹಾಗೆ ನಿಂತಿತ್ತು. ಇವರ ಆರೋಪಗಳನ್ನು ತನಿಖೆ ಮಾಡಲು ರಾಜ್ಯಪಾಲರು ಅನುಮತಿ ನೀಡಿದಾಗ ಅದರ ವಿರುದ್ದ ಬಿಜೆಪಿ ಕರ್ನಾಟಕ ಬಂದ್ ಕರೆ ನೀಡಿ ಬೆಂಬಲಿಸಿತ್ತು. ಯಡಿಯೂರಪ್ಪನವರನ್ನು ಬಿಜೆಪಿ ಯಾವ ವೇಳೆಯಲ್ಲಿಯೂ ಕಡೆಗಣಿಸಿಲ್ಲ ಮತ್ತು ಅವರಿಗೆ ಎಲ್ಲ ಗೌರವ ನೀಡಿದೆ. ಜನ ನಾಯಕ ಯಡಿಯೂರಪ್ಪ ಅವರು ಬಿಜೆಪಿಯ ಆಸ್ತಿ ಅವರ ನಾಯಕತ್ವ ಮಾರ್ಗದರ್ಶನ ಪಕ್ಷ ಸದಾ ಎದುರು ನೋಡುತ್ತಿರುತ್ತದೆ.