Saturday, 14th December 2024

ಜಿ20 ಅಧ್ಯಕ್ಷತೆ: ಭಾರತಕ್ಕಿದು ಹಗ್ಗದ ಮೇಲಿನ ನಡಿಗೆ

-ಶಶಿ ತರೂರ್

೨೦೨೨ ರ ಡಿಸೆಂಬರ್ ೧ರಂದು ಭಾರತ ಒಂದು ವರ್ಷದ ಅವಧಿಗೆ ಜಿ೨೦ ದೇಶಗಳ ಒಕ್ಕೂಟದ ಅಧ್ಯಕ್ಷತೆ ವಹಿಸಿಕೊಂಡಿತು. ಅದರ ಬೆನ್ನಲ್ಲೇ ತನ್ನ ಅಧ್ಯಕ್ಷತೆಯು ‘ವಸುಧೈವ ಕುಟುಂಬಕಂ’ ತತ್ವದ ಮೇಲೆ ನಡೆಯಲಿದೆ, ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ತತ್ವದ ಮೇಲೆ ನಾವು ಕೆಲಸ ಮಾಡಲಿದ್ದೇವೆ ಎಂದು ಭಾರತ ಪ್ರಕಟಿಸಿತು. ಇಂಡೋ ನೇಷ್ಯಾದಿಂದ ಹಸ್ತಾಂತರಗೊಂಡ ಅಧಿಕಾರವನ್ನು ಭಾರತ ಸ್ವೀಕರಿ ಸಿದಾಗ ಎಲ್ಲರೂ ಇದು ಸರದಿಯ ಪ್ರಕಾರ ಬಂದ ಮಾಮೂಲಿ ಇನ್ನೊಂದು ವರ್ಷದ ಸದಸ್ಯತ್ವ ಎಂಬಂತೆ ನೋಡಿದ್ದರು. ಜಿ೨೦ ಅಧ್ಯಕ್ಷತೆ ಬರುವುದೇ ಹಾಗೆ. ಅದರ ಸದಸ್ಯ ರಾಷ್ಟ್ರಗಳ ನಡುವೆ ಪ್ರತಿ ವರ್ಷ ಒಂದೊಂದು ದೇಶಕ್ಕೆ ಸರದಿಯ ಪ್ರಕಾರ ಅಧ್ಯಕ್ಷತೆ ಹಸ್ತಾಂತರವಾಗುತ್ತದೆ. ಆದರೆ, ಭಾರತ ತಾನು ಬೇರೆಲ್ಲ ರಾಷ್ಟ್ರಗಳ ರೀತಿಯಲ್ಲಿ ನಾಮ್ ಕೆ ವಾಸ್ತೆ ಅಧ್ಯಕ್ಷನಾಗಿ ಉಳಿಯುವುದಿಲ್ಲ ಎಂಬುದನ್ನು ಬಹಳ ಬೇಗ ತೋರಿಸಿಕೊಟ್ಟಿತು. ಈ ಒಂದು ವರ್ಷದ ಅಲ್ಪಾವಧಿಯನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಲು ಭಾರತ ಅತ್ಯುತ್ಸಾಹದಿಂದ ಅಡಿಯಿಟ್ಟಿತು. ಬರೋಬ್ಬರಿ ೨೦೦ಕ್ಕೂ ಹೆಚ್ಚು ಸಭೆಗಳನ್ನು, ೬೦ಕ್ಕೂ ಹೆಚ್ಚು ನಗರಗಳಲ್ಲಿ, ೩೨ಕ್ಕೂ ಹೆಚ್ಚು ವಿಷಯಗಳ ಮೇಲೆ ಏರ್ಪಡಿಸಿತು. ಭಾರತದಲ್ಲಿ ಎಲ್ಲಿಯೇ ಜಿ೨೦ ಸಭೆ ನಡೆದರೂ ಅಲ್ಲಿಗೆ ಬರುವ ವಿದೇಶಿ ಅತಿಥಿಗಳನ್ನು ದೈತ್ಯಾಕಾರದ ಬಿಲ್‌ಬೋರ್ಡ್‌ಗಳು ಅದ್ದೂರಿಯಾಗಿ ಸ್ವಾಗತಿಸಿದವು.

ಇದೀಗ ನಾಳೆ, ಸೆ.೯ರಂದು ನಡೆಯಲಿರುವ ಜಿ೨೦ ಶೃಂಗಕ್ಕಾಗಿ ಜಾಗತಿಕ ನಾಯಕರನ್ನು ಬರಮಾಡಿಕೊಳ್ಳಲು ದೇಶದ ರಾಜಧಾನಿ ದೆಹಲಿ ಸಜ್ಜಾಗಿ ನಿಂತಿದೆ. ಭಾರತದ ರೀತಿಯಲ್ಲಿ ಇನ್ನಾವುದೇ ದೇಶ ಈವರೆಗೆ ಜಿ೨೦ ಅಧ್ಯ
ಕ್ಷತೆಯ ವರ್ಷವನ್ನು ಇಷ್ಟು ಅದ್ದೂರಿಯಾಗಿ ಸಂಭ್ರಮಾಚರಣೆಯ ರೀತಿಯಲ್ಲಿ ನಡೆಸಿಕೊಟ್ಟ ಇತಿಹಾಸ ಇಲ್ಲ. ಅದರಲ್ಲಿ ಯಾವುದೇ ಅನುಮಾನ ಬೇಡ. ಈ ಅವಽಯಲ್ಲಿ ಭಾರತ ತನ್ನನ್ನು ತಾನು ಜಾಗತಿಕ ನಾಯಕನೆಂಬಂತೆ ಯಶಸ್ವಿಯಾಗಿ ಬಿಂಬಿಸಿಕೊಂಡಿತು. ಅಷ್ಟೇ ಅಲ್ಲ, ಭಾರತದ ಪ್ರಜಾಪ್ರಭುತ್ವವನ್ನು ‘ಜಗತ್ತಿನ ಪ್ರಜಾ ಪ್ರಭುತ್ವದ ತಾಯ್ನಾಡು’ ಎಂಬಂತೆ ಯಶಸ್ವಿಯಾಗಿ ಕಟ್ಟಿಕೊಟ್ಟಿತು. ಕಳೆದೊಂದು ವರ್ಷದ ಅವಽಯಲ್ಲಿ ಭಾರತ ನಾನಾ ವಿಷಯಗಳ ಮೇಲೆ ಜಿ೨೦ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳ ಜತೆ ಸಾಕಷ್ಟು ಸಭೆಗಳನ್ನು, ವರ್ಕ್‌ಶಾಪ್‌ಗಳನ್ನು, ಸೆಮಿನಾರ್‌ಗಳನ್ನು ಹಾಗೂ ಮಾತುಕತೆಗಳನ್ನು ನಡೆಸಿದೆ. ಅಂತಹ ಸಂವಾದಗಳಲ್ಲಿ ಜಿ೨೦ ರಾಷ್ಟ್ರಗಳ ಬೇರೆ ಬೇರೆ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಹಾಗೂ ಪರಿಹಾರಗಳನ್ನು ಹುಡುಕುವ ಪ್ರಯತ್ನ ಮಾಡಿದೆ. ತನ್ಮೂಲಕ ತನಗೆ ಜಾಗತಿಕ ಸವಾಲುಗಳಿಗೆ ಪರಿಹಾರ ಕಂಡುಹಿಡಿಯುವ ಶಕ್ತಿಯಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಎಲ್ಲ ದೇಶಗಳ ಜತೆಗೆ ಮುಕ್ತವಾಗಿ ವ್ಯವಹರಿಸುವ ಹಾಗೂ ಎಲ್ಲರನ್ನೂ ಒಳಗೊಂಡಂತೆ ಒಳಿತಿಗಾಗಿ ಕೆಲಸ ಮಾಡುವ ನಮ್ಮ ದೇಶದ ಹಳೆಯ ಸಂಪ್ರದಾಯ ಕೂಡ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸಮಾಡಿದೆ. ಇದೇ ವೇಳೆ, ಭಾರತ ತಾನು ದಕ್ಷಿಣ ಜಗತ್ತಿನ ಧ್ವನಿ ಎಂಬಂತೆ ಬಿಂಬಿಸಿಕೊಳ್ಳಲು ಕೂಡ ಯತ್ನಿಸಿದೆ. ಅದರ ಮೂಲಕ, ಈಗ ನಿಷ್ಕ್ರಿಯವಾಗಿರುವ ಜಿ-೭೭ ಒಕ್ಕೂಟ ಹಾಗೂ ಅಲಿಪ್ತ
ಚಳವಳಿಯ ಉತ್ತರಾಧಿಕಾರಿಯ ರೀತಿಯಲ್ಲಿ ಭಾರತ ತನ್ನನ್ನು ಸ್ಥಾಪಿಸಿಕೊಂಡಿದೆ. ಭಾರತದ ಅಧ್ಯಕ್ಷತೆಯಲ್ಲಿ ಜಿ೨೦ ದೇಶಗಳ ನಡುವಿನ ಸಭೆಗಳಲ್ಲಿ ಚರ್ಚೆಗೊಳಪಟ್ಟ ವಿಷಯಗಳ ಪಟ್ಟಿ ಬಹಳ ಉದ್ದವಿದೆ. ಜಾಗತಿಕ ಆರ್ಥಿಕತೆ, ಸ್ಥೂಲ ಅರ್ಥಶಾಸೀಯ ನೀತಿಗಳು, ಮೂಲ ಭೂತ ಸೌಕರ್ಯಗಳಿಗೆ ಹಣಕಾಸು, ಸುಸ್ಥಿರ ಬಂಡವಾಳ ಹೂಡಿಕೆ, ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆ, ಅಂತಾರಾಷ್ಟ್ರೀಯ ತೆರಿಗೆ, ಹಣಕಾಸು ಕ್ಷೇತ್ರದ ಸುಧಾರಣೆಗಳು, ಭ್ರಷ್ಟಾಚಾರ ನಿಗ್ರಹ, ಕೃಷಿ, ಸಂಸ್ಕೃತಿ, ಅಭಿವೃದ್ಧಿ, ಡಿಜಿಟಲ್ ಆರ್ಥಿಕತೆ, ಉದ್ಯೋಗಾವಕಾಶಗಳು, ಪರಿಸರ ಮತ್ತು ಹವಾಮಾನ, ಶಿಕ್ಷಣ, ಇಂಧನ ರೂಪಾಂತರ, ಆರೋಗ್ಯ, ವ್ಯಾಪಾರ ಮತ್ತು ಹೂಡಿಕೆ, ಪ್ರವಾ ಸೋದ್ಯಮ ಹೀಗೆ ಅಸಂಖ್ಯ ವಿಷಯಗಳು ಚರ್ಚೆಗೆ ಬಂದಿವೆ. ಈ ಸಭೆಗಳಲ್ಲಿ ಎಲ್ಲ ಸದಸ್ಯ ರಾಷ್ಟ್ರಗಳೂ ಮುಕ್ತವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು, ಇಲ್ಲಿ ಎದುರಾದ ಸಮಸ್ಯೆಗಳಿಗೆ ತಮ್ಮಲ್ಲಿ ಈಗಾಗಲೇ ಇದ್ದಿರಬಹುದಾದ ಪರಿಹಾರಗಳನ್ನು ತಿಳಿಸಿಕೊಡಲು ಹಾಗೂ ಜಿ೨೦ ಸದಸ್ಯ ರಾಷ್ಟ್ರಗಳ ನಡುವಿನ ಪ್ರಮುಖ ಕಳಕಳಿಯ ವಿಷಯದಲ್ಲಿ ಒಮ್ಮತಾಭಿಪ್ರಾಯ ಹೊಂದಲು ಅವಕಾಶಗಳು ದೊರೆತಿವೆ.

ಇಲ್ಲೊಂದು ಗಮನಾರ್ಹ ವಿಷಯ ಹೇಳಬೇಕು. ಜಿ೨೦ ಒಕ್ಕೂಟಗಳ ಅಧ್ಯಕ್ಷನಾಗಿ ಭಾರತ ಮಾಡಿದ ಬಹುದೊಡ್ಡ ಸಾಧನೆಯೆಂದರೆ ಈವರೆಗೆ ಜನರಿಂದ ದೂರವೇ ಉಳಿದಿದ್ದ ‘ಜಿ೨೦’ ಎಂಬ ವ್ಯವಸ್ಥೆಯನ್ನು ಜನರ ಬಳಿಗೆ ಒಯ್ದು ಈ ಒಕ್ಕೂಟವನ್ನು ನಿಜವಾದ ಅರ್ಥದಲ್ಲಿ ‘ಜನರ ಜಿ೨೦’ಯನ್ನಾಗಿ ಮಾಡಿದ್ದು. ಕಳೆದೊಂದು ವರ್ಷದುದ್ದಕ್ಕೂ ಜಿ೨೦ ಚಟುವಟಿಕೆಗಳಲ್ಲಿ ನಮ್ಮ ದೇಶದ ಜನಸಾಮಾನ್ಯರು ದೊಡ್ಡ ಪ್ರಮಾಣದಲ್ಲಿ ಪಾಲ್ಗೊಂಡಿದ್ದಾರೆ. ಉದಾಹರಣೆಗೆ, ಯುನಿವರ್ಸಿಟಿ ಕನೆಕ್ಟ್, ಜನ್ ಭಾಗಿದಾರಿ, ಹಾರ್ನ್‌ಬಿಲ್ ಉತ್ಸವ, ಸ್ಮಾರಕಗಳಿಗೆ ವಿದ್ಯುದಲಂಕಾರ, ಮರಳು ಕಲೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಸಿದ ಆಂದೋಲನಗಳಲ್ಲಿ ಜನರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಹೀಗಾಗಿ ಇಷ್ಟು ವರ್ಷಗಳ ಕಾಲ ಜಿ೨೦ ಎಂಬ ಹೆಸರನ್ನೇ ಕೇಳಿರದಿದ್ದ ಭಾರತೀಯರಿಗೂ ಈ ವರ್ಷ ಇಂತಹದ್ದೊಂದು ಜಾಗತಿಕ ಒಕ್ಕೂಟ ಎಷ್ಟು ಮಹತ್ವದ್ದು ಎಂಬುದು ಅರ್ಥವಾಗಿದೆ. ಈ ಚಟುವಟಿಕೆಗಳಲ್ಲಿ ಯುವಕರು, ನಾಗರಿಕ ಸಮಾಜದ ಪ್ರತಿ ನಿಧಿಗಳು, ಥಿಂಕ್ ಟ್ಯಾಂಕ್‌ಗಳು ಹಾಗೂ ಇನ್ನಿತರ ಪ್ರಮುಖರು ಪಾಲ್ಗೊಂಡಿದ್ದರು. ಅವರಿಗೆಲ್ಲ ಜಿ೨೦ ಒಕ್ಕೂಟ ಏನು ಮಾಡುತ್ತದೆ, ಯಾವ್ಯಾವ ವಿಷಯಗಳ ಬಗ್ಗೆ ಅದು ಗಮನ ಹರಿಸುತ್ತಿದೆ ಮತ್ತು ಭಾರತದ ಜಿ೨೦ ಅಧ್ಯಕ್ಷತೆಯ ಅವಧಿಯಲ್ಲಿ ಏನೇನು ಬೆಳವಣಿಗೆಗಳು ನಡೆಯುತ್ತಿವೆ ಎಂಬುದು ಅರ್ಥವಾಗಿದೆ. ಅದೇ ವೇಳೆ, ಬೇರೆ ಬೇರೆ ದೇಶಗಳಿಂದ ಬಂದ ಜಿ೨೦ ಪ್ರತಿನಿಧಿಗಳಿಗೆ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ದರ್ಶನ ಮಾಡಿಸಲಾಗಿದೆ. ಅವರಿಗೆ ಭಾರತೀಯತೆ ಎಂದರೇನು ಎಂಬುದನ್ನು ಬೇರೆ ಬೇರೆ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳು, ಪ್ರದರ್ಶನಗಳು ಹಾಗೂ ಇಲ್ಲಿನ ಊಟ-ತಿಂಡಿ ತಿನಿಸುಗಳ ಮೂಲಕ ಅರ್ಥ ಮಾಡಿಸಲಾಗಿದೆ. ತನ್ಮೂಲಕ ಭಾರತದ ವೈವಿಧ್ಯ, ಆ ವೈವಿಧ್ಯದಲ್ಲೇ ಇರುವ ಐಕ್ಯಮತ್ಯ ಹಾಗೂ ಇಲ್ಲಿನ ಆತಿಥ್ಯದ ಸಂಸ್ಕೃತಿಯನ್ನು ಜಗತ್ತಿನ ಮುಂದೆ ತೆರೆದಿಡಲಾಗಿದೆ.

ಭಾರತದ ‘ಸಾಫ್ಟ್ ಪವರ್ ಅಸೆಟ್ ’ಗಳೇ ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ನಮ್ಮ ದೇಶವನ್ನು ಮುಂಚೂಣಿ ನಾಯಕನನ್ನಾಗಿ ರೂಪಿಸುತ್ತಿವೆ. ಸರಕಾರ ಕೂಡ ಯೋಗ, ಆಯುರ್ವೇದ, ಬಾಲಿವುಡ್ ಹಾಗೂ ಕ್ರಿಕೆಟ್‌ನಂತಹ ವಿಷಯಗಳನ್ನು ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ತನ್ನಬ್ರ್ಯಾಂಡ್ ಇಮೇಜನ್ನು ವೃದ್ಧಿಸಿಕೊಂಡಿದೆ. ಜಿ೨೦ ಒಕ್ಕೂಟದ ಮೇಲೆ ಶಾಶ್ವತವಾಗಿ ತನ್ನ ಗುರುತನ್ನು ಉಳಿಸಲು ಭಾರತ ಈ ಅವಧಿಯಲ್ಲಿ ಕೆಲ ವಿಶಿಷ್ಟ ಯೋಜನೆಗಳನ್ನು ಕೈಗೊಂಡಿದೆ. ಜಿ೨೦ ಸದಸ್ಯ ರಾಷ್ಟ್ರಗಳಲ್ಲಿ ಪ್ರಾಕೃತಿಕ ವಿಪತ್ತು ಸಂಭವಿಸಿದರೆ ತಕ್ಷಣ ಪ್ರತಿಕ್ರಿಯಿಸಲು ವಿಶೇಷ ಕಾರ್ಯಕಾರಿ ಸಮಿತಿಯೊಂದನ್ನು ರಚಿಸಲು ಎಲ್ಲರನ್ನೂ ಒಪ್ಪಿಸಿದೆ. ಹಾಗೆಯೇ, ಸದಸ್ಯ ರಾಷ್ಟ್ರಗಳಲ್ಲಿ ಸ್ಟಾರ್ಟಪ್‌ಗಳಿಗೆ ಉತ್ತೇಜನ ನೀಡಲು ಪ್ರತ್ಯೇಕ ಸಮಿತಿಯನ್ನು ರಚಿಸಿದೆ. ಸಿರಿಧಾನ್ಯಗಳು ಹಾಗೂ ಇನ್ನಿತರ ಸಠಾಂಪ್ರದಾಯಿಕ ಧಾನ್ಯಗಳ ಬಗ್ಗೆ ಅಧ್ಯಯನ ಮಾಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಿದೆ. ಜತೆಗೆ, ಆಫ್ರಿಕನ್ ಒಕ್ಕೂಟದ ದೇಶಗಳನ್ನು ಶಾಶ್ವತ ಪ್ರತಿನಿಧಿಯನ್ನಾಗಿ ಮಾಡಬೇಕೆಂಬ ಪ್ರಸ್ತಾಪ ಮಂಡಿಸಿದೆ. ಜಿ೨೦ ದೇಶಗಳಿಗೆ ಭಾರತವು ಪರಿಚಯಿಸಿದ ‘ಡಿಜಿಟಲ್ ಮೂಲಸೌಕರ್ಯ’ ಹಾಗೂ ‘ಹಸಿರು ಅಭಿವೃದ್ಧಿ’ಯ ಪರಿಕಲ್ಪನೆಗಳಿಗೆ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ. ಬಹುರಾಷ್ಟ್ರೀಯ ಅಭಿವೃದ್ಧಿ ಬ್ಯಾಂಕ್‌ಗಳ ಸುಧಾರಣೆ ಹಾಗೂ ಸುಸ್ಥಿರ, ಎಲ್ಲರನ್ನೂ ಒಳಗೊಂಡ ಮತ್ತು ವೇಗದ ಅಭಿವೃದ್ಧಿಗೆ ಉತ್ತೇಜನ ನೀಡುವ ಭಾರತದ ಪ್ರಸ್ತಾಪಗಳು ಜಿ೨೦ ಶೃಂಗದ ಅಂತಿಮ ಘೋಷಣೆಗಳಲ್ಲೂ ಸ್ಥಾನ ಪಡೆಯಲಿವೆ.

ಭಾರತವು ಜಿ೨೦ ಸಮೂಹದ ದೇಶಗಳನ್ನು ಕೇವಲ ಸ್ಥೂಲ ಅರ್ಥಶಾಸಕ್ಕೆ ಸಂಬಂಧಿಸಿದ ೨೦ ದೇಶಗಳ ಗುಂಪಿನ ಬದಲು ಜಾಗತಿಕ ಒಳಿತಿಗಾಗಿ ಕೆಲಸ ಮಾಡುವ ಒಕ್ಕೂಟವನ್ನಾಗಿ ನೋಡಲು ಬಯಸುತ್ತದೆ. ಇದಕ್ಕಾಗಿ ಭಾರತ ಪ್ರಸ್ತಾಪಿಸಿದ ಏಳು ವರ್ಷಗಳ ಸುಸ್ಥಿರ ಅಭಿವೃದ್ಧಿಯ ಗುರಿಗಳಿಗೆ ಈಗಾಗಲೇ ಜಿ೨೦ ಹಣಕಾಸು ಸಚಿವರ ಸಭೆಯಲ್ಲಿ ಒಪ್ಪಿಗೆ ಲಭಿಸಿದೆ. ಕೊರೋನಾ ನಂತರದ ಜಗತ್ತಿಗೆ ಜಿ೨೦ ದೇಶಗಳ ದೆಹಲಿ ಶೃಂಗವು ‘ಗಾಯ ಗುಣಪಡಿಸುವ, ಸೌಹಾರ್ದವನ್ನು ಸಾರುವ ಹಾಗೂ ಹೊಸ ಭರವಸೆ ಮೂಡಿಸುವ ಶೃಂಗ’ವಾಗಿ ಹೊರ ಹೊಮ್ಮಬೇಕು ಎಂಬ ಗುರಿಯನ್ನು ಭಾರತ ಹೊಂದಿದೆ. ಆದರೆ ಅದಕ್ಕೆ ಸಾಕಷ್ಟು ಸವಾಲುಗಳೂ ಇವೆ. ನಮ್ಮ ದೇಶದೊಳಗೇ ಮಣಿಪುರದಲ್ಲಿ ಸುದೀರ್ಘ ಅವಧಿಯಿಂದ ಮತೀಯ ಗಲಭೆ ನಡೆಯುತ್ತಿದೆ. ಹರಿಯಾಣದ ನೂಹ್‌ನಲ್ಲಿ ಹಾಗೂ ಗುರುಗ್ರಾಮದಲ್ಲಿ ನಡೆಯುತ್ತಿರುವ ಗಲಭೆಗಳು ಕೂಡ ದಿನನಿತ್ಯ ಹೆಡ್‌ಲೈನುಗಳಾಗುತ್ತಿವೆ. ಸ್ವತಃ ಭಾರತಕ್ಕಾದ ಈ ಗಾಯವನ್ನೂ ಗುಣಪಡಿಸಿ, ಸೌಹಾರ್ದವನ್ನು ಮೂಡಿಸಬೇಕಲ್ಲವೇ? ವಿದೇಶಗಳ ಎದುರು ಭಾರತ ಸರಕಾರ ಪಠಿಸುವ ‘ವಸುಧೈವ ಕುಟುಂಬಕಂ’ ಎಂಬ ಜಪ ಹಾಗೂ ಸ್ವದೇಶದಲ್ಲಿ ಜನಾಂಗೀಯ ಹಿಂಸಾಚಾರವನ್ನು ಹತ್ತಿಕ್ಕಲು ಗನ್‌ಗಳನ್ನು ಬಳಸುವುದು ಇವುಗಳ ನಡುವಿನ ವೈರುಧ್ಯ ವಿದೇಶಿ ಗಣ್ಯರಿಗೆ ಕಾಣಿಸುತ್ತಿದೆ. ಎಷ್ಟು ಬೇಗ ಭಾರತ ತನ್ನೊಳಗಿನ ಈ ದಳ್ಳುರಿಯನ್ನು ಶಮನ ಮಾಡಿಕೊಳ್ಳುತ್ತದೆಯೋ ಅಷ್ಟು ಚೆನ್ನಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ವಿಸ್ವಾಸಾರ್ಹತೆ ಹೆಚ್ಚಿಸಿಕೊಳ್ಳುತ್ತದೆ.

ಆದರೆ, ಜಗತ್ತು ಎದುರಿಸುತ್ತಿರುವ ಸಂಕಷ್ಟದ ಮುಂದೆ ಭಾರತದ ಈ ಸಮಸ್ಯೆಗಳು ದೊಡ್ಡದಲ್ಲ. ಕೋವಿಡ್ ಹಾಗೂ ಉಕ್ರೇನ್ ಬಿಕ್ಕಟ್ಟಿನ ಬಳಿಕ ಜಗತ್ತಿನ ಬೇರೆ ಬೇರೆ ದೇಶಗಳ ಸಾಲ ಬೆಟ್ಟದಷ್ಟು ಹೆಚ್ಚಾಗಿದೆ. ಹೆಚ್ಚುಕಮ್ಮಿ ೭೦ ದೇಶಗಳು ಸಾಲದ ಹೊರೆ ಹೊರಲಾಗದೆ ಏದುಸಿರು ಬಿಡುತ್ತಿವೆ. ಹೀಗಾಗಿ ಅವು ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಹಾಗೂ ಸಾಮಾಜಿಕ ಸುರಕ್ಷತೆಯಲ್ಲಿ ಹಣ ತೊಡಗಿಸಲು ಆಗದೆ ಕಷ್ಟಪಡುತ್ತಿವೆ. ಈ ಜಾಗತಿಕ ಸಾಲದ ಬಿಕ್ಕಟ್ಟನ್ನು ನಿಭಾಯಿಸುವುದು ಹಾಗೂ ಕೊರೋನೋತ್ತರ ಘಾಸಿಗಳಿಂದ ಸುಸ್ಥಿರ ಹಾಗೂ ಎಲ್ಲರನ್ನೂ ಒಳಗೊಳ್ಳುವ ರೀತಿಯಲ್ಲಿ ಜಗತ್ತು ಗುಣಮುಖವಾಗಿ ಹೊರಹೊಮ್ಮುವಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಜಿ೨೦ ದೇಶಗಳ ಮೇಲಿದೆ. ಹೀಗಾಗಿ ಸಾಲದ ವಿಷಯದಲ್ಲಿ ಪಾರದರ್ಶಕತೆ ಹಾಗೂ ಸುಸ್ಥಿರತೆಯನ್ನು ತಂದು, ಸಾಲದ ಭಾರದಿಂದ ನಲುಗುತ್ತಿರುವ ದೇಶಗಳಿಗೆ ನಿರಾಳತೆ ಒದಗಿಸಿಕೊಡುವ ನಿಟ್ಟಿನಲ್ಲಿ ಭಾರತವು ಜಿ೨೦ ದೇಶಗಳ ಜತೆ ಸೇರಿ ಏನಾದರೂ ಪರಿಹಾರ ಕಂಡುಹಿಡಿಯಬೇಕಿದೆ. ಅದೇ ವೇಳೆ, ಬಡ ದೇಶಗಳು ಹಾಗೂ ಅಲ್ಲಿನ ಜನರಿಗೆ ಮತ್ತೆ ಬದುಕು ಕಟ್ಟಿಕೊಳ್ಳಲು ಸಂಪನ್ಮೂಲಗಳು ಸಿಗುವಂತೆ ಮಾಡುವುದಕ್ಕೂ
ಪ್ರಯತ್ನಿಸಬೇಕಿದೆ. ಆದರೆ ಈ ವಿಷಯದಲ್ಲಿ ಬಡ ಹಾಗೂ ಶ್ರೀಮಂತ ದೇಶಗಳ ನಡುವೆ ಒಮ್ಮತ ಮೂಡಿಸುವುದು ಸುಲಭವಿಲ್ಲ. ಹೀಗಾಗಿ ಶೃಂಗದಲ್ಲಿ ಏನು ಪರಿಹಾರ ಹೊರಹೊಮ್ಮುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಭಾರತದ ಜಿ೨೦ ವಕ್ತಾರರು ಮಾಧ್ಯಮಗಳ ಮುಂದೆ ಎಷ್ಟೇ ಎಚ್ಚರಿಕೆಯಿಂದ ಮಾತನಾಡಿ ‘ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎಂಬಂತೆ ಬಿಂಬಿಸಲು ಯತ್ನಿಸಿದ್ದರೂ ಕೆಲ ಪ್ರಮುಖ ವಿಷಯಗಳಲ್ಲಿ ಜಿ೨೦ ದೇಶಗಳ ನಡುವೆ ಸಹಮತ ಮೂಡಿಸಲು ಈವರೆಗೂ ನಮಗೆ ಸಾಧ್ಯವಾಗಿಲ್ಲ. ಏಕೆಂದರೆ ಜಿ೨೦ ದೇಶಗಳು ಇರುವುದೇ ಹಾಗೆ. ಅವುಗಳ ನಡುವೆ ಅಭಿವೃದ್ಧಿಯ ವಿಷಯದಲ್ಲಿ, ಸಂಸ್ಕೃತಿ ಹಾಗೂ ಜನಜೀವನದ ವಿಷಯದಲ್ಲಿ, ರಾಜಕೀಯ ವ್ಯವಸ್ಥೆಯಲ್ಲಿ, ಆರ್ಥಿಕ ಮಾದರಿಗಳಲ್ಲಿ ಹಾಗೂ ಸಾಂಸ್ಕೃತಿಕ ಮೌಲ್ಯಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಹೀಗಾಗಿ ಯಾವುದೇ ಪ್ರಮುಖ ವಿಷಯದಲ್ಲಿ ಈ ಎಲ್ಲ ದೇಶಗಳು ಒಮ್ಮತಕ್ಕೆ ಬರಬೇಕು ಅಂದರೂ
ಅದು ಸುಲಭದ ತುತ್ತಲ್ಲ. ಅದರಲ್ಲೂ ಹವಾಮಾನ ಬದಲಾವಣೆ, ವ್ಯಾಪಾರ, ತೆರಿಗೆ, ಡಿಜಿಟಲ್ ಆರ್ಥಿಕತೆ, ಆರೋಗ್ಯ ಹಾಗೂ ಅಭಿವೃದ್ಧಿಯ ವಿಷಯಗಳಲ್ಲಿ ಒಮ್ಮತ ಮೂಡಿಸುವುದು ಇನ್ನೂ ಕಷ್ಟವಿದೆ. ಎಲ್ಲಕಿಂತ ಹೆಚ್ಚಾಗಿ, ಉಕ್ರೇನ್ ಯುದ್ಧದ ವಿಷಯದಲ್ಲಿ ಎಲ್ಲರೂ ಒಪ್ಪುವ ಪರಿಹಾರ ಸೂತ್ರವೊಂದನ್ನು ಕಂಡುಕೊಳ್ಳುವುದು ಬಹುದೊಡ್ಡ ಸವಾಲಿನ ಸಂಗತಿ. ಅಚ್ಚರಿಯ ಸಂಗತಿಯೆಂದರೆ, ಬಾಲಿ ಶೃಂಗದಲ್ಲಿ ಇಂಡೋನೇಷ್ಯಾ ಹೇಗೋ ಇದಕ್ಕೊಂದು ಪರಿಹಾರ ಸೂತ್ರಕ್ಕೆ ಎಲ್ಲರನ್ನೂ ಒಪ್ಪಿಸುವಲ್ಲಿ ಯಶಸ್ವಿಯಾಗಿತ್ತು.

ಉಕ್ರೇನ್ ಬಿಕ್ಕಟ್ಟನ್ನು ಎದುರಿಸುವುದು ಮತ್ತು ಜಾಗತಿಕ ಶಾಂತಿ ಹಾಗೂ ಸ್ಥಿರತೆಯ ಮೇಲಿನ ಅದರ ದುಷ್ಪರಿಣಾಮಗಳನ್ನು ಪರಿಹರಿಸುವುದು ಸದ್ಯ ಜಗತ್ತು ಎದುರಿಸುತ್ತಿರುವ ಅತಿದೊಡ್ಡ ಸವಾಲು. ಉಕ್ರೇನ್ ಯುದ್ಧವು ಪ್ರಾದೇಶಿಕ ಹಾಗೂ ಜಾಗತಿಕ ಭದ್ರತೆಗೆ ಮತ್ತ ಜಾಗತಿಕ ಆರ್ಥಿಕತೆಗೆ ಗಂಭೀರ ಅಪಾಯವನ್ನು ತಂದೊಡ್ಡಿದೆ. ಯುದ್ಧದಿಂದಾಗಿ ಜನರು ಪರದಾಡುತ್ತಿದ್ದಾರೆ. ಇಂಧನ ಪೂರೈಕೆ ಅಸ್ತವ್ಯಸ್ತಗೊಂಡಿದೆ. ಆಹಾರದ ಅಭದ್ರತೆ
ಹೆಚ್ಚಾಗಿದೆ. ಆರ್ಥಿಕ ಅಪಾಯಗಳು ಹೆಚ್ಚಾಗಿವೆ. ದೇಶ-ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಹಳಸಿವೆ. ಈ ವಿಷಯದಲ್ಲಿ ಭಾರತವು ರಷ್ಯಾ ಜೊತೆಗಿನ ತನ್ನ ಐತಿಹಾಸಿಕ ಸ್ನೇಹವನ್ನು ಬಳಸಿಕೊಂಡು ಏನಾದರೂ ಒಳ್ಳೆಯದು ಮಾಡಲು ಸಾಧ್ಯವೇ ಎಂದು ಯತ್ನಿಸಿದೆ. ಹಾಗೆಯೇ ಅಮೆರಿಕದ ಜೊತೆಗೆ ತನಗಿರುವ ಸ್ನೇಹ ಮತ್ತು ಇನ್ನಿತರ ದೇಶಗಳ ಜೊತೆಗಿನ ಉತ್ತಮ ಸಂಬಂಧವನ್ನು ಬಳಸಿಕೊಂಡು ಮಾಸ್ಕೋವನ್ನು ಜಿ೨೦ ಶೃಂಗದ ಮಾತುಕತೆಯ ಮೇಜಿಗೆ ಕರೆದುಕೊಂಡು ಬರಲು ಪ್ರಯತ್ನಿಸಿದೆ. ಇದೇ ವೇಳೆ, ಭಾರತವು ಈ ವೇದಿಕೆಯನ್ನು ಉಕ್ರೇನ್‌ನಲ್ಲಿ ಶಾಂತಿ ನೆಲೆಸುವಂತೆ ಮಾಡಲು ಹಾಗೂ ರಷ್ಯಾ ಜೊತೆಗೆ ರಾಜಿ ಮಾಡಿಕೊಳ್ಳಲು ಆ ದೇಶದ ಮನವೊಲಿಸುವುದಕ್ಕೂ ಬಳಸಿಕೊಳ್ಳಲು ಯತ್ನಿಸಬಹುದಿತ್ತು. ಆದರೆ, ಈವರೆಗೆ ಒಮ್ಮತ ಮೂಡಿರುವ ಜಂಟಿ ಹೇಳಿಕೆಯಲ್ಲಿ ಅಂತಹ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಏಕೆಂದರೆ ಉಕ್ರೇನ್ ಯುದ್ಧದ ಹೆಸರೆತ್ತಿದರೆ ರಷ್ಯಾ ಆ ಮಾತುಕತೆಯಿಂದ ಹಿಂದಕ್ಕೆ ಸರಿಯುತ್ತಿದೆ.

ಪಾಶ್ಚಾತ್ಯ ದೇಶಗಳು ರಷ್ಯಾವನ್ನು ದೂಷಿಸುತ್ತಿವೆ. ಹಾಗೂ ಭೂರಾಜಕೀಯ ವಿಷಯಗಳಿಗೆ ಜಿ೨೦ಯಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಚೀನಾ ಹಿಂದಕ್ಕೆ ಸರಿಯುತ್ತಿದೆ. ದೆಹಲಿ ಜಿ೨೦ ಶೃಂಗದ ಫಲಿತಾಂಶವು ಎಲ್ಲ ಸದಸ್ಯ ರಾಷ್ಟ್ರ ಗಳಿಗೂ ಒಪ್ಪಿತವಾಗುವ ರೀತಿಯಲ್ಲಿ ನ್ಯಾಯಯುತವಾಗಿ ಹಾಗೂ ಸಮತೋಲಿತವಾಗಿ ಇರಬೇಕೆಂಬ ನಿಟ್ಟಿನಲ್ಲಿ ಭಾರತಯತ್ನಿಸುತ್ತಿದೆ. ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನಡುವೆ ಸೇತುವೆಯಾಗಲು ಮತ್ತು ದೈತ್ಯ ಆರ್ಥಿಕ ಶಕ್ತಿಗಳು ಹಾಗೂ ಭವಿಷ್ಯದ ದೈತ್ಯ ಆರ್ಥಿಕ ಶಕ್ತಿಗಳ ನಡುವೆ ಜಿ೨೦ ವೇದಿಕೆಯನ್ನು ಸಂಪರ್ಕದ ಕೊಂಡಿಯನ್ನಾಗಿಸುವುದಕ್ಕೂ ಪ್ರಯತ್ನಿಸುತ್ತಿದೆ. ಇದೊಂದು ಮಹಾನ್ ಸವಾಲಿನ ಕೆಲಸ. ಎಲ್ಲ ಸದಸ್ಯ ದೇಶಗಳ ಸಹಮತದೊಂದಿಗೆ ಶೃಂಗದ ಜಂಟಿ ಘೋಷಣೆ ಹೊರಬಿದ್ದ ನಂತರವಷ್ಟೇ ಭಾರತ ತನ್ನ ಜಿ೨೦ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿದೆಯೇ ಅಥವಾ ಹಗ್ಗದ ಮೇಲಿನ
ನಡಿಗೆಯಲ್ಲಿ ಜಾರಿಬಿದ್ದಿದೆಯೇ ಎಂಬುದು ಜಗತ್ತಿಗೆ ತಿಳಿಯಲಿದೆ.
(ಲೇಖಕರು ಕಾಂಗ್ರೆಸ್ ಸಂಸದರು)