Friday, 29th November 2024

Gururaj Gantihole Column: ನಶಿಸುತ್ತಿದೆ ಶತಮಾನದ ಇತಿಹಾಸದ ಕುಂದಾಪ್ರ ಟೈಲ್ಸ್!‌

ಗಂಟಾಘೋಷ

ಗುರುರಾಜ್‌ ಗಂಟಿಹೊಳೆ

ನಿಸರ್ಗದ ಮಡಿಲಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಎಷ್ಟೋ ರೈತಾಪಿ ಜನರನ್ನು, ಪ್ರಕೃತಿಪ್ರಿಯರನ್ನು ನಾವೆಲ್ಲ ನೋಡಿದ್ದೇವೆ.
ರಾಷ್ಟ್ರಕವಿ ಕುವೆಂಪು ಅವರ ಕೆಂಪುಹೆಂಚಿನ ಮನೆಯ ಫೋಟೋಗಳನ್ನು ನಾವೆಲ್ಲ ನೋಡಿ ಇಂದಿಗೂ ಆನಂದಿಸತ್ತಿದ್ದೇವೆ. ಹೆಂಚಿನ ಮನೆಯ ಸೊಬಗು, ವೈಭವವನ್ನು ನೋಡುವುದೇ ಆನಂದ. ಅಂದಿನ ಬಹುತೇಕರು ತಮ್ಮ ವಾಸದ ಮನೆ, ತೋಟದ ಮನೆ, ದವಸ-ಧಾನ್ಯ ಸಂಗ್ರಹಿ
ಸುವ ಕೊಠಡಿಗಳನ್ನು ಸಹ ಕೆಂಪುಹೆಂಚಿನ ಚಾವಣಿ ಹಾಕಿಯೇ ಕಟ್ಟುತ್ತಿದ್ದರು. ದಶಕಗಳವರೆಗೂ ಇದೇ ಪರಂಪರೆ ಮುಂದುವರಿದುಕೊಂಡು ಬಂದಿತ್ತು. ನಂತರದಲ್ಲಾದ ಬದಲಾವಣೆಗಳಿಂದಾಗಿ ಅನಿವಾರ್ಯವೆಂಬಂತೆ ಬಹುತೇಕರು ಆರ್‌ಸಿಸಿ ಮನೆಗಳತ್ತ ವಾಲುತ್ತಿದ್ದಾರೆ. ಇಷ್ಟಾಗಿಯೂ ಸಾಂಪ್ರದಾಯಿಕ ಶೈಲಿಯ ಹೆಂಚಿನ ಮನೆಗಳನ್ನು ಕಟ್ಟುವವರೂ ಇದ್ದಾರೆಂಬುದು ಖುಷಿಯ ಸಂಗತಿ.

ಮಣ್ಣಿನೊಂದಿಗೆ ನಂಟಿರುವ, ಆರೋಗ್ಯಕ್ಕೂ ಹಾನಿಕಾರಕವಲ್ಲದ, ಬಳಸಲಿಕ್ಕೂ ಸರಳವಾಗಿದ್ದ ಕಾರಣಕ್ಕೆ ನಾಡಿನಾದ್ಯಂತ ಹೆಂಚಿನ ಮನೆಗಳೇ ಕಾಣಬರುತ್ತಿದ್ದವು. ಹೌದು, ನಾನೀಗ ಹೇಳಹೊರಟಿರುವುದು ದೇಸಿ ಉತ್ಪನ್ನವಾಗಿ ಕರ್ನಾಟಕದ, ಅಷ್ಟೇಕೆ ದೇಶದ ಮನೆಮಾತಾಗಿದ್ದ, ಮನಮುಟ್ಟುವ ರೀತಿಯಲ್ಲಿ ಜನಸಾಮಾನ್ಯರ ಬದುಕಿನ ಭಾಗವಾಗಿದ್ದ ನಮ್ಮ ‘ಕುಂದಾಪ್ರ ಟೈಲ್ಸ್’ ಬಗ್ಗೆ! “ಭಾರತೀಯರು ತಯಾರಿಸುವ ಉಕ್ಕು, ಕಬ್ಬಿಣವನ್ನು ‘ಕಾಟನ್ ಕ್ಯಾಂಡಿ’ಯಂತೆ ನಾನೇ ಪೂರ್ತಿ ನುಂಗಿಬಿಡಬಲ್ಲೆ” ಎಂಬ ಬ್ರಿಟಿಷ್ ಅಧಿಕಾರಿಯೊಬ್ಬನ ಕುಹಕದ ಮಾತಿಗೆ ಮನ
ನೊಂದ ಜಮ್‌ಷೆಡ್‌ಜಿ ಟಾಟಾ ಅವರು 1907ರಲ್ಲಿ ಭಾರತದ ಮೊಟ್ಟಮೊದಲ ಉಕ್ಕಿನ ಕಾರ್ಖಾನೆ ಸ್ಥಾಪಿಸಿ ಇತಿಹಾಸ ನಿರ್ಮಿಸಿದರು. ತರುವಾಯದಲ್ಲಿ 1919ರಲ್ಲಿ ಕುಂದಾಪುರದಲ್ಲಿ ಕೆಂಪು ಹೆಂಚಿನ ಉದ್ಯಮವೂ ಮೈದಳೆಯಿತು. ಬ್ರಿಟಿಷರ ಆಳ್ವಿಕೆಯ ಬಿಗಿಮುಷ್ಟಿಯಲ್ಲಿ ದುಡಿದು ಕಾಲ ತಳ್ಳಬೇಕಿದ್ದ ಆ ಸಮಯದಲ್ಲಿ ಸ್ಥಳೀಯ ಜನರಿಗೆ ಉದ್ಯೋಗ, ಅನ್ನ ಕೊಡುವ ನಿಟ್ಟಿನಲ್ಲಿನ ಈ ನಿರ್ಧಾರ ಸಾಮಾನ್ಯವಾದುದಾಗಿರಲಿಲ್ಲ ಎಂಬುದನ್ನು ಇಂದಿನ ತಲೆಮಾರು ಅರಿಯಬೇಕಿದೆ. ಇಂಥ ಇತಿಹಾಸವಿರುವ ಕುಂದಾಪ್ರ ಟೈಲ್ಸ್, ‘ಮಂಗಳೂರು ಟೈಲ್ಸ್’ ಎಂದೇ ನಾಡಿನಾದ್ಯಂತ ಪ್ರಸಿದ್ಧಿಯಾಗಿದೆ ಕೂಡ. ಈ ಹೆಂಚು ಬರುವ ಪೂರ್ವದಲ್ಲಿ, ಕುಂಬಾರರು ಮಣ್ಣನ್ನು ಸಾಂಪ್ರದಾಯಿಕ ರೀತಿಯಲ್ಲಿ ಸುಟ್ಟು ತಯಾರಿಸುತ್ತಿದ್ದ ಹೆಂಚುಗಳನ್ನು ಮನೆಯ ಚಾವಣಿಗೆ ಬಳಸಲಾಗುತ್ತಿತ್ತು.

ಟೋಪಿ ಮಂಜುನಾಥಯ್ಯ ಎಂಬುವವರು 1919ರಲ್ಲಿ ಕುಂದಾಪುರದಲ್ಲಿ ವಿಶಿಷ್ಟ ವಿನ್ಯಾಸದ ‘ದಿವಾಕರ್ ಟೈಲ್ಸ್’ ಎಂಬ ಹೆಸರಿನಡಿ ಹೆಂಚಿನ ಉದ್ಯಮವನ್ನು ಪ್ರಾರಂಭಿಸಿದರು. ಇದಕ್ಕೆ ಅಂದಿನ ಬ್ರಿಟಿಷ್ ಅಧಿಕಾರಿಗಳೂ ಪ್ರಶಂಸಿಸಿ ಪ್ರೋತ್ಸಾಹಿಸಿದ್ದರಂತೆ. ಈ ಮೂಲಕ ಕುಂದಾಪುರ,
ಮಂಗಳೂರು ಮತ್ತು ಸುತ್ತಲಿನ ಪ್ರದೇಶದಲ್ಲಿ ಯಥೇಚ್ಛವಾಗಿ ಬಳಕೆಗೆ ಬಂದ ಹೆಂಚುಗಳು ನಾಡಿನಾದ್ಯಂತ ಪ್ರಸಿದ್ಧವಾದವು. ನಂತರ 1947ರಲ್ಲಿ, ಮಂಗಳೂರಿನ ‘ಓಂ ಟೈಲ್ಸ್’ನವರು ಇದೇ ಕಾರ್ಖಾನೆಯನ್ನು ಮುಂದುವರಿಸಿಕೊಂಡು, ಟೈಲ್ಸ್ ಉತ್ಪಾದನೆಯನ್ನು ಉದ್ಯಮವಾಗಿಸುವ ಹಾದಿಯಲ್ಲಿ ಯತ್ನಿಸುತ್ತ ಬಂದರು. ಹೀಗೆ ಕುಂದಾಪ್ರ ಟೈಲ್ಸ್, ಮಂಗಳೂರು ಟೈಲ್ಸ್ ಹೊಸ ಮೈಲಿಗಲ್ಲು ಸ್ಥಾಪಿಸಲು ಅಣಿಯಾದವು. ಇಂಥ ವಿಶಿಷ್ಟ ಪ್ರಯತ್ನದಿಂದಾದ ಪ್ರೇರಣೆಯೆಂಬಂತೆ 1936ರಲ್ಲಿ ಬಸ್ರೂರಿನ ಶಿವರಾಂ ತೋಳಾರ್ ಎಂಬುವವರು ‘ಪ್ರಭಾಕರ್ ಟೈಲ್ಸ್’ ಹೆಸರಿನ ಕಾರ್ಖಾನೆ ಆರಂಭಿಸಿದರೆ, 1950 ಆಸುಪಾಸಿನಲ್ಲಿ ‘ಕಾಮತ್ ಟೈಲ್ಸ್’ ಶುರುವಾಯಿತು. ನಂತರ, ಮೂಕಾಂಬಿಕಾ ಟೈಲ್ಸ್, ಕರ್ನಾಟಕ ಟೈಲ್ಸ್, ರಘು ಟೈಲ್ಸ್, ಸುಪ್ರೀಂ ಟೈಲ್ಸ್ ಸೇರಿದಂತೆ ಹೆಂಚು ತಯಾರಿಸುವ 20ಕ್ಕೂ ಹೆಚ್ಚು ಕಾರ್ಖಾನೆಗಳು ಕುಂದಾಪುರ, ಮಂಗಳೂರಿನಲ್ಲಿ ಶುರುವಾಗಿ ಸಾವಿರಾರು ಸ್ಥಳೀಯರು ಬದುಕು ಕಟ್ಟಿಕೊಳ್ಳುವುದಕ್ಕೆ ಆಸರೆಯಾಗಿದ್ದವು. ಹಾನಿಕರವಲ್ಲದ ಪರಿಸರಸ್ನೇಹಿ ದೇಸಿ ಉತ್ಪನ್ನಗಳ ತಯಾರಿಯ ಮೂಲಕ ಅವು ಮನೆಮಾತಾಗಿದ್ದವು. ಆದರೀಗ, ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಈ ಕಾರ್ಖಾನೆಗಳ ಸಂಖ್ಯೆ 6-8ಕ್ಕೆ ಬಂದು ನಿಂತಿದೆ.

ಕಾರ್ಖಾನೆಯೊಂದರಲ್ಲಿ ಸುಮಾರು 250-300 ಕೆಲಸಗಾರರು ದುಡಿಯಬಹುದಾಗಿತ್ತು. ಇಂಥ ದೇಸಿ ಉದ್ಯಮವು ಸುಮಾರು 100 ವರ್ಷಗಳ ತನ್ನ ಕಾಲಾವಧಿಯಲ್ಲಿ ಲಕ್ಷಾಂತರ ಜನರ ಬದುಕಿಗೆ ಆಸರೆಯಾಗಿದ್ದುಂಟು. ಬರಗಾಲ, ಪ್ಲೇಗ್, ಕಾಲರಾ ಅಪ್ಪಳಿಸಿದ ವೇಳೆ ಎಷ್ಟೋ ಜನರು,
“ನೀವು ಕೂಲಿ ಕೊಡದಿದ್ದರೂ ಪರವಾಗಿಲ್ಲ ಕೆಲಸ ಕೊಡಿ. ಒಂದು ಹೊತ್ತು ಊಟವಾದರೂ ಆದೀತು” ಎನ್ನುತ್ತಿದ್ದಂಥ ದುರ್ಭರ ಸಂದರ್ಭದಲ್ಲೂ ಇಂಥ ಕಾರ್ಖಾನೆಗಳು ಕಾರ್ಮಿಕರಿಗೆ ಅನ್ನ ನೀಡಿವೆ. ಹೀಗಾಗಿ ಎಷ್ಟೋ ತಲೆಮಾರುಗಳು ಅವುಗಳ ಶ್ರೀರಕ್ಷೆಯಲ್ಲಿ ಉನ್ನತ ಬದುಕನ್ನೂ ಕಟ್ಟಿಕೊಂಡಿವೆ.

ಕಾಲಾನಂತರದಲ್ಲಿ ‘ಚೈನ್ ಕನ್ವೇಯರ್’ ಎಂಬ ವ್ಯವಸ್ಥೆಗಳು, ಹೊಸ ಉಪಕರಣಗಳು ಕಾರ್ಖಾನೆಯೊಳಗೆ ತೂರಿಕೊಂಡವು. ಜೆಸಿಬಿಯಂಥ ಯಂತ್ರಗಳೂ ಈಗ ಬಳಕೆಯಾಗುತ್ತಿವೆ. ಹೀಗಾಗಿ ದುಡಿಯುವವರಿಗೆ ದೈಹಿಕ ಶ್ರಮವೂ ಕಡಿಮೆಯಾಗತೊಡಗಿತು, ದುಡಿಯುವವರೂ ಕಡಿಮೆ ಯಾಗುತ್ತ ಬಂದರು. ಜತೆಗೆ. ಜನರೂ ಬೇರೆ ಬೇರೆ ಉದ್ಯೋಗದತ್ತ ಒಲವು ತೋರಿದ ಕಾರಣ, ನೌಕರರಿಲ್ಲದೆ ಎಷ್ಟೋ ಕಾರ್ಖಾನೆಗಳು ಮುಚ್ಚಿಹೋಗಿವೆ. ಸುಮಾರು 40-50 ವರ್ಷಗಳ ಹಿಂದೆ ಬಹುತೇಕ ಹೆಂಚಿನ ಕಾರ್ಖಾನೆಗಳು ಶುರುವಾಗಿದ್ದು ನದಿತೀರದಲ್ಲೇ. ಹೆಂಚುಗಳಿಗಿದ್ದ ಬೇಡಿಕೆ ಇದಕ್ಕೆ ಕಾರಣ. ಬಾಂಬೆ, ಗುಜರಾತ್ ಸೇರಿದಂತೆ ಅಂದು ವಿವಿಧ ರಾಜ್ಯಗಳಿಗೆ ಹೆಂಚುಗಳನ್ನು ಕಳುಹಿಸಲು ದೋಣಿಗಳನ್ನು ಬಳಸಲಾಗುತ್ತಿತ್ತು. ಜನರೇ ಅವನ್ನು ತಲೆಮೇಲೆ ಹೊತ್ತು ಪುಟ್ಟ ದೋಣಿಗಳಲ್ಲಿ ತುಂಬಿಕೊಂಡು ಗಂಗೊಳ್ಳಿಯ ಬಂದರನ್ನು ತಲುಪಬೇಕಿತ್ತು. ಇಲ್ಲಿಂದ ಸಮುದ್ರ ಮಾರ್ಗವಾಗಿ ಬಾಂಬೆ, ಗುಜರಾತನ್ನು ತಲುಪುತ್ತಿದ್ದವು ಕರ್ನಾಟಕದ ಹೆಮ್ಮೆಯ ‘ಕುಂದಾಪ್ರ ಹೆಂಚುಗಳು’.

ಮಂಗಳೂರಿನಲ್ಲಿದ್ದ ೫೦ಕ್ಕೂ ಹೆಚ್ಚು ಕಾರ್ಖಾನೆಗಳ ಪೈಕಿ, ಬ್ರಿಟಿಷರ ಕಾಲದಲ್ಲಿ ಆರಂಭವಾಗಿದ್ದ ‘ಅಲ್ಬುಕರ್ಕ್’ ಕಾರ್ಖಾನೆ ಸೇರಿದಂತೆ ನಾಲ್ಕು ಮಾತ್ರವೇ ಇಂದು ಕಾರ್ಯ ನಿರ್ವಹಿಸುತ್ತಿವೆ. ಆದರೆ, ಮಣ್ಣು ಮತ್ತು ಕೆಲಸಗಾರರ ಕೊರತೆ ಮತ್ತಿತರೆ ಕಾರಣಗಳಿಂದಾಗಿ ಈ ಕಾರ್ಖಾನೆಗಳೂ
ಮುಚ್ಚುವ ಹಂತದಲ್ಲಿವೆ. ಸ್ವಾತಂತ್ರ್ಯಪೂರ್ವ ಕಾಲದಿಂದಲೂ ವೈಭವೋಪೇತವಾಗಿ ನಡೆದುಕೊಂಡು ಬಂದ ದೇಸಿ ಉದ್ಯಮವೊಂದು
ಹೇಳಹೆಸರಿಲ್ಲದಂತಾಗುವ ಹಂತದಲ್ಲಿದೆ. ಇದಕ್ಕೆ ಕಾರಣಗಳೂ ಹಲವು. ಪರಿಸರವಾದಿಗಳ ಹೆಸರಿನಲ್ಲಿ ಕಿರುಕುಳ, ಉದ್ಯಮಕ್ಕೆ ಅಡೆತಡೆ ಉಂಟುಮಾಡುವುದು, ಮಾಧ್ಯಮಗಳಲ್ಲಿ ತಪ್ಪಾಗಿ ಮಾಹಿತಿ ಹಂಚಿಕೊಳ್ಳುವುದು ನಡೆದೇ ಇದೆ. ಇನ್ನು ಅರಣ್ಯ ಇಲಾಖೆಯವರು ಈ ಉದ್ಯಮವನ್ನು ಗಣಿಗಾರಿಕೆಯಂತೆ ಸಂಶಯಾತ್ಮಕ ದೃಷ್ಟಿಯಿಂದ ನೋಡುವುದು, ನಡೆದುಕೊಳ್ಳುವುದು ಕೂಡ ದೊಡ್ಡ ಅಡೆತಡೆಯಾಗಿದೆ. “ನೂರಾರು ಕುಟುಂಬಗಳಿಗೆ ಜೀವನೋಪಾಯವಾಗಬಲ್ಲ ಹೆಂಚಿನ ಕಾರ್ಖಾನೆಗಳು ಬಳಸುವುದು, ಖಾಸಗಿಯವರ ಜಮೀನಿನಲ್ಲಿ ದೊರೆಯುವ ಆವೆಮಣ್ಣನ್ನು ಮಾತ್ರ. ಅದು ಕೂಡ, ದುಡ್ಡು ಕೊಟ್ಟು ಅಧಿಕೃತವಾಗಿ ಖರೀದಿಸಿ ತಂದು ಶ್ರಮವಹಿಸಿ ಉದ್ಯಮ ನಡೆಸುತ್ತಿದ್ದೇವೆ ಎಂಬುದನ್ನು ಇಂಥವರಿಗೆ ತಿಳಿಸಬೇಕಿದೆ, ನಮ್ಮ ಕಷ್ಟಗಳ ಕುರಿತು ಅರಿವು ಮೂಡಿಸಬೇಕಿದೆ” ಎಂದು ಬೇಸರದಿಂದಲೇ ಹೇಳುತ್ತಾರೆ ಈ ಉದ್ಯಮವನ್ನು ನಡೆಸುವವರು.

ದೇಸಿ ಹೆಂಚನ್ನು ವಿರೋಧಿಸುವವರೇ, ಚೀನಾದಿಂದ ಬರುವ ಕಡಿಮೆ ಗುಣಮಟ್ಟದ ಟೈಲ್ಸ್ ಅನ್ನು ಬೆಂಬಲಿಸುತ್ತಾರೆ ಎಂಬುದು ವಿಪರ್ಯಾಸ! ಹೊರದೇಶದಿಂದ ಬರುವ ಕಳಪೆ ಗುಣಮಟ್ಟದ ಟೈಲ್ಸ್, ವಿಟ್ರಿಫೈಡ್ ಸಿರಾಮಿಕ್ ಟೈಲ್ಸ್ ಇತ್ಯಾದಿಗಳಿಗೆ ಶೇ.28ರಷ್ಟು ಜಿಎಸ್‌ಟಿ ವಿಧಿಸಲಾಗು ತ್ತಿದೆ; ಸ್ವಂತ ಹಣ ಹೂಡಿ, ಸ್ಥಳೀಯರಿಗೆ ಕೂಲಿಕೊಟ್ಟು, ಸ್ಥಳೀಯವಾಗಿ ಟೈಲ್ಸ್ ತಯಾರಿಸುವ ಮತ್ತು ದೇಶದ ಆರ್ಥಿಕತೆಯ ಭಾಗವಾಗಿರುವ ನಮಗೂ ಶೇ.28ರಷ್ಟೇ ತೆರಿಗೆ ವಿಧಿಸಲಾಗುತ್ತಿದೆ.

ಹೀಗಾದರೆ, ವಿದೇಶಿ ಸರಕುಗಳ ಮಾರಾಟದ ಹಣವು ವಿದೇಶಕ್ಕೆ ಹೋಗುತ್ತದೆ. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಯಾವ ನ್ಯಾಯ? ಎಂದು ನೊಂದು ನುಡಿಯುತ್ತಾರೆ ಸುಮಾರು 40 ವರ್ಷಗಳಿಂದ ಹೆಂಚಿನ ಕಾರ್ಖಾನೆ ನಡೆಸಿಕೊಂಡು ಬರುತ್ತಿರುವವರು. ಪ್ರಧಾನಿ ಮೋದಿಯವರು ‘ಒಂದು ರಾಷ್ಟ್ರ, ಒಂದು ಉತ್ಪನ್ನ’ ಎಂದು ಹೇಳಿ ವಿಶಿಷ್ಟ ದೇಸಿ ಉತ್ಪನ್ನಗಳನ್ನು ದೇಶಾದ್ಯಂತ ಪರಿಚಯಿಸಿದರು. ಈ ಕಾರಣದಿಂದ, ಉತ್ತರ ಪ್ರದೇಶ ಮತ್ತು ಈಶಾನ್ಯ ರಾಜ್ಯಗಳು ತಮ್ಮ ಸ್ಥಳೀಯ ಉತ್ಪನ್ನಗಳನ್ನು ದೇಶಾದ್ಯಂತ ಮಾರುವಲ್ಲಿ ಯಶಸ್ಸನ್ನು
ಕಂಡಿವೆ. ಆದರೆ ನಮ್ಮಲ್ಲಿ ಸ್ಥಳೀಯ ಆಡಳಿತಾತ್ಮಕ ವ್ಯವಸ್ಥೆಗಳೇ ಹಲವು ಅಡೆತಡೆ, ಸಮಸ್ಯೆಗಳನ್ನು ಒಡ್ಡಿ ಉದ್ಯಮವನ್ನು ನಿಲ್ಲಿಸಲು ಯತ್ನಿಸುತ್ತಿವೆ ಎನ್ನುತ್ತಾರೆ ಇಂಥ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರು. ಸರಿಯಾಗಿ ದುಡಿದರೆ ಸರಕಾರಿ ಶಾಲಾ ಮೇಷ್ಟ್ರಿಗೆ ಸಿಗುವ ಸಂಬಳದಷ್ಟು ನಮಗಿಲ್ಲಿ ಕೂಲಿ ಸಿಗುತ್ತದೆ; ಇಲ್ಲಿ ದುಡಿಯುತ್ತಲೇ ಮಕ್ಕಳನ್ನು ಸರಕಾರಿ/ ವಿದೇಶಿ ನೌಕರಿಗೆ ಕಳುಹಿಸಿದ್ದೇನೆ ಎನ್ನುತ್ತಾರೆ ಇಲ್ಲಿ ದುಡಿಯುವ ಹಿರಿಯರೊಬ್ಬರು.

ಸರಿಯಾಗಿ ಕಾರ್ಯ ನಿರ್ವಹಿಸುವ ಒಂದು ಕಾರ್ಖಾನೆಯು ದಿನಕ್ಕೆ 15-20 ಸಾವಿರದಷ್ಟು ಹೆಂಚುಗಳನ್ನು ತಯಾರಿಸಬಲ್ಲದು. ಇದಕ್ಕೆ ಒಂದು ಲಾರಿಭರ್ತಿ ಸೌದೆ, 200 ಲೀಟರ್ ಸೀಮೆಎಣ್ಣೆ, ಯೋಗ್ಯ ಆವೆಮಣ್ಣು ಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕಾರ್ಮಿಕರು ಬೇಕು. ಇದೆಲ್ಲವನ್ನೂ ಸರಿದೂಗಿಸಿಕೊಂಡು ಸ್ವತಃ ಹೂಡಿಕೆ ಮಾಡಿ ಕಾರ್ಖಾನೆಯನ್ನು ನಿರ್ವಹಿಸುವ ಶಕ್ತಿ ಮಾಲೀಕರಿಗೆ ಇರಬೇಕು. ಹೀಗೆ ಸರಕಾರದ ಯಾವೊಂದು ಸಹಾಯವಿಲ್ಲದೆ, ಹಾನಿಕಾರಕ ವಸ್ತುಗಳನ್ನು ಬಳಸದೆ ದೇಸಿ ಮಟ್ಟದಲ್ಲಿ ತಯಾರಾಗುವ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೇಕು, ಸರಕಾರದಿಂದ
ಬೆಂಬಲಬೆಲೆಯೂ ಬೇಕು ಎಂಬುದು ಕಾರ್ಖಾನೆಗಳ ಮಾಲೀಕರ ಆಗ್ರಹ.

ಇಷ್ಟಾಗಿಯೂ ಕೆಲ ಹೆಂಚಿನ ಕಾರ್ಖಾನೆಗಳು ಆಧುನಿಕತೆಗೆ ತೆರೆದುಕೊಂಡು ಹೊಸಬಗೆಯ ಬೇರೆ ಬೇರೆ ಉತ್ಪನ್ನಗಳನ್ನು ತಯಾರಿಸುತ್ತಿವೆ. ಪ್ರಸ್ತುತ ಸೌದೆ ಕೊಡುವಲ್ಲಿ ಅರಣ್ಯ ಇಲಾಖೆಯವರ ತಕರಾರಿದ್ದು, ಇದಕ್ಕೆ ಸೂಕ್ತ ಪರಿಹಾರ/ಪರಸ್ಪರ ಒಪ್ಪಂದಗಳಾಗಬೇಕು. ಇವನ್ನು ಸಬ್ಸಿಡಿ ದರದಲ್ಲಿ ಕಾರ್ಖಾನೆಗಳಿಗೆ ಮಾರುವಂತೆ ಸರಕಾರ ಸೂಚಿಸಬೇಕು. ಸೀಮೆಎಣ್ಣೆಯನ್ನು ಹೊರಗಿನ ಮಾರುಕಟ್ಟೆ ಯಲ್ಲಿ ದುಬಾರಿ ಬೆಲೆ ತೆತ್ತು ಖರೀದಿಸುವಂತಾಗಿದ್ದು, ಈ ಸಮಸ್ಯೆಯೂ ನಿವಾರಣೆಯಾಗಬೇಕು. ಪ್ರಸ್ತುತ ಸೌದೆಯ ಅಭಾವದಿಂದಾಗಿ ಗೇರುಬೀಜದ ಒಣತೊಗಟೆಯನ್ನು
ಪರ್ಯಾಯವಾಗಿ ಬಳಸಲಾಗುತ್ತಿದ್ದು, ಕೃಷಿ ಇಲಾಖೆಯ ವರು ಮತ್ತು ಇತರೆಯವರು ಇದನ್ನು ಸಬ್ಸಿಡಿ ದರದಲ್ಲಿ ಕೊಡುವಂತಾಗಬೇಕು. ಜತೆಗೆ, ವಿದೇಶಗಳಿಂದ ಕಡಿಮೆ ಗುಣಮಟ್ಟದ ಟೈಲ್ಸ್ ಸಾಮಗ್ರಿಗಳನ್ನು ತಂದು ಮಾರಿ ಲಾಭ ಮಾಡಿಕೊಳ್ಳುವ ಮನಸ್ಥಿತಿಯನ್ನು ಬಿಟ್ಟು, ಸ್ಥಳೀಯ
ವಸ್ತುಗಳ ಮಾರಾಟ ಮತ್ತು ಖರೀದಿಗೆ ಪ್ರೋತ್ಸಾಹಿಸಿದರೆ, ದುಡಿಯವ ವರ್ಗದ ಹಿತಕಾಯುವ ದೇಸಿ ಉತ್ಪನ್ನವೊಂದಕ್ಕೆ ಮರುಜನ್ಮ ಸಿಕ್ಕಂತಾಗುತ್ತದೆ.

ಹೆಂಚಿನ ಕಾರ್ಖಾನೆಗಳಿಗೂ ಶ್ರೀಸಾಮಾನ್ಯರಿಗೂ ಒಂದು ಭಾವನಾತ್ಮಕ ನಂಟಿದೆ. ಇಲ್ಲಿ ದುಡಿಯುವ ವರ್ಗಒಂದೆಡೆಯಾದರೆ, ಮನೆಗಳಿಗೆ ಹೆಂಚನ್ನೇ ಬಳಸುತ್ತಿದ್ದವರೂ ದೊಡ್ಡ ಪ್ರಮಾಣದಲ್ಲಿದ್ದರು. ಹೀಗಾಗಿ ಸ್ಥಳೀಯ ಹೆಂಚುಗಳಿಗೆ ಬೇಡಿಕೆ ಚೆನ್ನಾಗಿತ್ತು. ಎಷ್ಟೇ ಸೆಕೆಯಿದ್ದರೂ
ಹೆಂಚಿನ ಮನೆಯಲ್ಲಿ ತಂಪಾದ ವಾತಾವರಣವಿರುತ್ತದೆ, ಮಳೆಗಾಲದಲ್ಲೂ ಹಿತವಾಗಿರುತ್ತದೆ. ಆದ್ದರಿಂದ ಹೆಂಚಿನ ಕಾರ್ಖಾನೆಗಳ ಪುನರು ಜ್ಜೀವನಕ್ಕೆ ಸರಕಾರಗಳು ಪ್ರೋತ್ಸಾಹಿಸಬೇಕು.

ವಿಶೇಷ ಯೋಜನೆ/ಪ್ಯಾಕೇಜ್‌ಗಳ ಮೂಲಕ ಅವಕ್ಕೆ ಆಧುನಿಕ ಸ್ಪರ್ಶ ಸಿಗುವಂತೆ ಮಾಡಬೇಕು. ಆಧುನಿಕ ಶೈಲಿಯ ಮನೆಗಳಿಗೆ ಬೇಕಿರುವ ಹೊಸ ರೀತಿಯ ಹೆಂಚುಗಳು ಈ ಕಾರ್ಖಾನೆಗಳಲ್ಲಿ ತಯಾರಾಗುವಂತಾಗಬೇಕು. ಸ್ಥಳೀಯವಾಗಿ ಉತ್ತಮ ಮಾರುಕಟ್ಟೆ ವ್ಯವಸ್ಥೆ ಬರುವಂತೆಯೂ ನೋಡಿಕೊಳ್ಳಬೇಕು. ಹೆಂಚಿನ ಕಾರ್ಖಾನೆಗಳು ಗ್ರಾಮೀಣ ಜನಜೀವನದೊಂದಿಗೆ ಹೊಂದಿಕೊಂಡಿದ್ದವು, ಆ ದಿನ ಮರಳಬೇಕು. ಇಲ್ಲವೆಂದರೆ, ಕುಂದಾಪ್ರ/ಮಂಗಳೂರು ಹೆಂಚುಗಳು ಹಿಂದೆ ಹೀಗೆ ಇದ್ದವು ಎಂಬ ಸಾಲನ್ನು ಇತಿಹಾಸದ ಪುಟಗಳಲ್ಲಿ ಓದಬೇಕಾಗುತ್ತದೆ. ಅಂಥ ಸಂದರ್ಭ
ಬಾರದಿರಲಿ. ಸರಕಾರ-ಸಮಾಜ-ಕಾರ್ಖಾನೆ ಮಾಲೀಕರ ಸಾಂಕ ಯತ್ನದಲ್ಲಿ ಈ ಉದ್ಯಮ ಮತ್ತೆ ಮೇಲೆದ್ದು ಮತ್ತಷ್ಟು ಉದ್ಯೋಗಗಳನ್ನು ಸೃಷ್ಟಿಸಬೇಕು, ಭಾವನಾತ್ಮಕ ಬಾಂಧವ್ಯವನ್ನು ಗಟ್ಟಿಗೊಳಿಸಿ ಮುನ್ನಡೆಯಬೇಕು.