ಗಂಟಾಘೋಷ
ಗುರುರಾಜ್ ಗಂಟಿಹೊಳೆ
ಸಂಬಳ ಹೆಚ್ಚಿಸಿ ಎಂದು ಆರೇಳು ವರ್ಷದಿಂದ ಹೋರಾಟ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ತಾಲೂಕು, ಜಿ, ರಾಜ್ಯಮಟ್ಟದಲ್ಲಿ ಹೋರಾಡಿದೆವು. ಸ್ಪಂದನೆ ಶೂನ್ಯವಾಯ್ತು. ಕೇವಲ ನಮ್ಮ ಸಮಯ ಮತ್ತು ಹಣ ವ್ಯರ್ಥವಾ ಯಿತೇ ವಿನಾ ಯಾವ ಫಲವೂ ದೊರೆಯಲಿಲ್ಲ ಎಂದು ನೊಂದು ನುಡಿಯುತ್ತಿzರೆ ಅಕ್ಷರದಾಸೋಹದ ಅಡುಗೆ ಸಹಾಯಕಿಯರು.
ಜನಪ್ರಿಯ ಯೋಜನೆ, ಭಾಗ್ಯಗಳ ಸದ್ದುಗದ್ದಲಗಳ ಇಂದಿನ ದಿನಗಳಿಗಿಂತ, ನಿಜವಾಗಿಯೂ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದ ದೇಶದ ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ಯಶಸ್ವಿಯಾದಂಥ ಯೋಜನೆಗಳನ್ನು ಹಿಂದಿನ ದಿನಮಾನಗಳಲ್ಲಿ ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತಂದರೆನ್ನಬಹುದು. ಇಂಥವುಗಳಲ್ಲಿ ಅಕ್ಷರ ದಾಸೋಹ- ಮಧ್ಯಾಹ್ನದ ಬಿಸಿಯೂಟ ಯೋಜನೆಯೂ ಒಂದು.
ಸುಮಾರು 2008-09ರಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಕರಿಗೆ ಮತ್ತು ಸಹಾಯಕಿಯರಿಗೆ ಕೇವಲ 300 ರು.ಗಳನ್ನು ಗೌರವಧನವಾಗಿ ನೀಡಲಾಗುತ್ತಿತ್ತು. ಇಷ್ಟು ವರ್ಷಗಳ ಸತತ ದುಡಿಮೆಯ ಫಲವಾಗಿ ಇದು ಸದ್ಯಕ್ಕೆ
3600 ರು.ಗೆ ಬಂದು ನಿಂತಿದೆ. Cook Cum Helper ಸಿಬ್ಬಂದಿಗಳಿಗೆ ಇಡೀ ದೇಶದ ಹೆಚ್ಚು ಸಂಬಳ ನೀಡುತ್ತಿರು ವುದು ಕೇರಳ ರಾಜ್ಯ. ಅಲ್ಲಿ ಗೌರವ ಧನ ಎಂದು 12 ಸಾವಿರ ರು. ಮಾಸಿಕ ಸಂಬಳ ನೀಡುತ್ತಿದ್ದರೆ, ಪ್ರಸ್ತುತ ಕರ್ನಾಟಕದಲ್ಲಿ 3600 ರು. ನೀಡಲಾಗುತ್ತಿದೆ. ಕನಿಷ್ಠವೇತನ ಎಂದು ಪರಿಗಣಿಸಿದ ಹಣಕ್ಕಿಂತಲೂ ಕಡಿಮೆ ಯಿರುವ ಈ ಸಂಬಳಕ್ಕೆ ನಮ್ಮ ಮಹಿಳೆಯರು ಸರಕಾರಿ ಪ್ರಾಯೋಜಿತ ಯೋಜನೆಗಳಲ್ಲಿ ದುಡಿಯುತ್ತಿರುವುದು.
ಇಂದಿನ ದುಬಾರಿ ದಿನಗಳಲ್ಲಿ, ಕೆ.ಜಿ. ಬೇಳೆಗೆ 180 ರು., ಕೆಜಿ ಅಕ್ಕಿಗೆ 80 ರು. ಇದೆ. ಈರುಳ್ಳಿ ಬೆಲೆ ಗಗನಕ್ಕೆ ತಾಕಿದೆ. ಇದರೊಟ್ಟಿಗೆ, ಸಂಸಾರದಲ್ಲಿ ಮಕ್ಕಳ ಶಾಲಾ ಖರ್ಚು ಸೇರಿದಂತೆ ಇತರೆ ಖರ್ಚುಗಳನ್ನೂ, ಆಸ್ಪತ್ರೆ, ಔಷಧಿ ವೆಚ್ಚ ವನ್ನೂ ಭರಿಸಲು ನಿತ್ಯ ದುಡಿಮೆಯ ಇದೇ ಸಂಬಳವೇ ಆಶ್ರಯ. ಗ್ರಾಮೀಣ ಭಾಗದಲ್ಲಿ, ಬಡತನ ರೇಖೆ ಗಿಂತ ಕೆಳಗಿರುವ ಮತ್ತು ದುಡಿಮೆ ಮಾಡಿಯೇ ಬದುಕಬೇಕಾದ ಸ್ಥಿತಿಯಲ್ಲಿರುವ ಕುಟುಂಬಗಳ ಮಕ್ಕಳು ಸಹಜವಾಗಿಯೇ ತಂದೆ ತಾಯಿಗಳ ಜತೆಗೆ ಕೂಲಿ, ಇತರೆ ದುಡಿಮೆಗೆ ಹೋಗುವುದು ಸಾಮಾನ್ಯ.
ಹಾಗಾಗಿ, ಕಲಿಕೆಗೆ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಲು ಅವರ ದುಡಿಮೆಯ ಭಾರವನ್ನು ಕಡಿಮೆ ಮಾಡಲು ಈ ಬಿಸಿಯೂಟ ಯೋಜನೆಯನ್ನು ಪರಿಚಯಿಸಲಾಯಿತು. 1995ರ ಆಗ 15ರಂದು ರಾಷ್ಟ್ರೀಯ ಪೌಷ್ಠಿಕತೆ (NP-NSPE) ಹೆಚ್ಚಿಸುವ ಯೋಜನೆಯ ಭಾಗವಾಗಿ Mid Day Meal (MDM) ಅನ್ನು ಪ್ರಾರಂಭದಲ್ಲಿ 2800 ಕೇಂದ್ರ ಗಳಲ್ಲಿ ಜಾರಿಗೆ ತರಲಾಯಿತು. ಮುಂದೆ 1998ರಲ್ಲಿ ರಾಷ್ಟ್ರವ್ಯಾಪಿ ವಿಸ್ತರಿಸಲಾಯಿತು.
ಮಕ್ಕಳಲ್ಲಿ ಪೌಷ್ಠಿಕತೆ ಹೆಚ್ಚಿಸುವುದು, ಊಟಕ್ಕಾಗಿಯೇ ದುಡಿಮೆಗೆ ಹೊರಟಿರುವ ಮಕ್ಕಳನ್ನು ಕಲಿಕೆಗೆ ಆಕರ್ಷಿಸು ವುದು, ಅನಾರೋಗ್ಯ, ಆಹಾರದ ಕೊರತೆಯ ನೆಪದಲ್ಲಿ ಶಾಲೆ ತಪ್ಪಿಸುವುದು ಇದರಿಂದ ನಿಲ್ಲುತ್ತದೆ ಎಂಬ ಉದ್ದೇಶ ದಿಂದ ಈ ಯೋಜನೆಯನ್ನು ಎಲ್ಲ ಗ್ರಾಮೀಣ ಭಾಗಗಳಿಗೂ ಜಾರಿಗೊಳಿಸಲಾಯಿತು. ಮಧ್ಯಾಹ್ನದ ಬಿಸಿಯೂಟ ವನ್ನು ರಜಾದಿನಗಳಲ್ಲಿ ಹೊರತುಪಡಿಸಿ, 1 ರಿಂದ 5ನೇ ತರಗತಿಯ ಎಲ್ಲ ಮಕ್ಕಳಿಗೆ 450 ಗ್ರಾಂ ಕ್ಯಾಲರಿ, 12 ಗ್ರಾಂ ಪ್ರೋಟೀನ್ ಅಂಶದ ಆಹಾರವನ್ನು ಮತ್ತು 6 ರಿಂದ 7ನೇ ತರಗತಿಯವರಿಗೆ 700 ಗ್ರಾಂ ಕ್ಯಾಲರಿ, 20 ಗ್ರಾಂ ಪ್ರೋಟೀನ್‌ಯುಕ್ತ ಆಹಾರ ನೀಡ ಬೇಕೆಂದು 2015ರಲ್ಲಿ ನಿಗದಿಪಡಿಸಲಾಯಿತು.
ಸರಕಾರದ 2021ರ ಅಧಿಕೃತ ಮಾಹಿತಿಯಂತೆ ಕರ್ನಾಟಕದಲ್ಲಿ 120000 ಸಹಾಯಕಿಯರು (Cooks-Cum-Helpers) Mid Day Meal ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2007ರಲ್ಲಿ ಉಪರಾಷ್ಟ್ರಪತಿಗಳ ಆಜ್ಞೆಯ ಮೇರೆಗೆ ಶಾಲಾ ಮಕ್ಕಳಿಗೆ ಹಾಲು ಕೊಡುವ ಯೋಜನೆಯೂ ಇದಕ್ಕೆ ಸೇರಿಕೊಂಡಿತು. ಈ ಯೋಜನೆ ಕೇಂದ್ರ ಸರಕಾರದ್ದಾ ದರೂ, ಆರ್ಥಿಕ ಸಹಾಯದ ಜತೆಗೆ ಇದನ್ನು ನಿರ್ವಹಿಸುವ ಜವಾಬ್ದಾರಿ ಆಯಾ ರಾಜ್ಯ ಸರಕಾರಗಳದ್ದಾಗಿರುತ್ತದೆ.
ಇದಕ್ಕಾಗಿಯೇ, ಕೇಂದ್ರ ಸರಕಾರವು ಪ್ರತ್ಯೇಕ ಬಜೆಟ್ ನಿಗದಿಪಡಿಸಿದ್ದು, ಕೇಂದ್ರ ಮತ್ತು ರಾಜ್ಯಗಳು 60:40ರ
ಅನುಪಾತದಲ್ಲಿ ಇದನ್ನು ನಿರ್ವಹಿಸುತ್ತಿವೆ. ಈ ಮೂಲಕ, ದೇಶಾದ್ಯಂತ 12 ಕೋಟಿ ಮಕ್ಕಳು 11 ಲಕ್ಷ ಶಾಲೆಗಳಿಗೆ ಈ
ಯೋಜನೆ ಯಶಸ್ವಿಯಾಗಿ ತಲುಪಿದೆ ಎನ್ನಬಹುದು. 2021ರಲ್ಲಿ Mid day Meal ಯೋಜನೆಯನ್ನು PM POSHAN’ (Pradhan Mantri Poshan Shakti Nirman) ಎನ್ನುವ ಹೆಸರಿನ ಮೂಲಕ ಮರುಪರಿಚಯಿಸಿ, ಇದಕ್ಕಾಗಿ 2021ರಿಂದ 2025ರವರೆಗಿನ ಯೋಜನೆಗಾಗಿ, 1,30,795 ಕೋಟಿ ಯಷ್ಟು ಬಜೆಟ್ ಮೀಸಲಿಡಲಾಯಿತು.
ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಇಂಥ ಒಂದು ಯೋಜನೆಯ ಯಶಸ್ಸಿನ ಹಿಂದೆ ದುಡಿಯುವ ಸಾವಿರಾರು ಮಹಿಳೆಯರ ಶ್ರಮವಿದೆ ಎಂಬುದನ್ನು ಯಾರೂ ಮರೆಯಬಾರದು. ಸುಮಾರು 25 ವರ್ಷಗಳ ಅವಿರತ
ದುಡಿಮೆ ಈ ಸಹಾಯಕಿಯರದು. ಇಂಥವರಿಗೆ ಪ್ರಾರಂಭದಲ್ಲಿ ತಿಂಗಳಿಗೆ 200/300 ರು. ನಿಗದಿಯಾಗಿತ್ತೆಂದರೆ ನೀವು ನಂಬಲೇಬೇಕು. ಹೀಗಾಗಿ, ಕೆಲ ಸರಕಾರಿ ಶಾಲೆಗಳಲ್ಲಿ ‘ಅಕ್ಷರ ದಾಸೋಹ’ದ ಅಡುಗೆ ಕೈಂಕರ್ಯದಲ್ಲಿ ತೊಡಗಿರುವ ಅಮ್ಮಂದಿರನ್ನು ಹಾಗೇ ಸುಮ್ಮನೆ ಮಾತಿಗೆಳೆದೆ.
“ಏನಮ್ಮಾ, ನಿಮ್ ಶಾಲೆಯಲ್ಲಿ ಎಷ್ಟು ಮಕ್ಕಳಿಗೆ ಬಿಸಿ ಊಟ ತಯಾರಿಸ್ತೀರಿ?” ಎಂದು ಕೇಳಿದ್ದಕ್ಕೆ, “600+
ಮಕ್ಕಳಿಗೆ ಅಡುಗೆ ಮಾಡಿ ಬಡಿಸ್ತೀವಿ” ಎಂದರಾಕೆ. “ಓಹ್! ಅಷ್ಟೊಂದು ಮಕ್ಕಳಿಗೆ ಅಡುಗೆ ಮಾಡಲು ಎಷ್ಟು
ಜನ ಸಿಬ್ಬಂದಿಗಳಿದ್ದೀರಿ?” ಎಂದು ಕೇಳಿದ್ದಕ್ಕೆ, “ನೂರು ಜನಕ್ಕೆ ಒಬ್ಬರ ಲೆಕ್ಕದಂತೆ 6 ಜನ ಇದ್ದೀವಿ” ಎಂದರವರು.
“ಮುಖ್ಯ ಅಡುಗೆಯವರಿಗೂ, ಉಳಿದವರಿಗೂ ಸಂಬಳದಲ್ಲಿ ವ್ಯತ್ಯಾಸ ಇದೆಯಾ?” ಎಂದು ಕೇಳಿದರೆ, “ಹೌದು, ನಮ್ಮ ಶಾಲೆಯಲ್ಲಿ ಒಬ್ಬರು ಮುಖ್ಯ ಅಡುಗೆಯವರು. ಅವರಿಗೆ 3700 ರು. ಸಂಬಳ, ಉಳಿದ 5 ಜನರಿಗೆ 3600 ರು. ಸಂಬಳ!” ಎಂದರಾಕೆ. “ಎಷ್ಟು ಗಂಟೆಗೆ ಅಡುಗೆ ಡ್ಯೂಟಿ ಆರಂಭಿಸ್ತೀರಿ?” ಎಂದು ಕೇಳಿದರೆ, “ನಮ್ ಶಾಲೆಯಲ್ಲಿ ನೋಡಿ 600+ ಮಕ್ಕಳಿzರೆ. ಬೆಳಗ್ಗೆ 8:30ಕ್ಕೆಲ್ಲ ಶಾಲೆಗೆ ಬರ್ತಿವಿ.
ಈಗ ನಿತ್ಯವೂ ಹಾಲು ಕಾಯಿಸಿ ಕೊಡಬೇಕು. ಮೊಟ್ಟೆ ಬೇಯಿಸಿ, ಅದರ ಸಿಪ್ಪೆ ತೆಗೆದುಕೊಡೋದು ಒಂದು ದೊಡ್ಡ ಕೆಲಸ ನಮ್ಮ ಪಾಲಿನದು. ನಂತರ ಮಧ್ಯಾಹ್ನದ ಅಡುಗೆ ತಯಾರಿ, ಆಮೇಲೆ ಅಡುಗೆ ಬಡಿಸಿ, ಪಾತ್ರೆ ತೊಳೆದು,
ಅಡುಗೆ ಕೋಣೆ ಶುಚಿಗೊಳಿಸಿ ಹೊರಬರುವಾಗ ಮಧ್ಯಾಹ್ನ 3 ಗಂಟೆಯಾಗುತ್ತದೆ. ಒಟ್ಟು ಕನಿಷ್ಠ 6 ಗಂಟೆ ಕೆಲಸ ಮಾಡ್ತೀವಿ ಒಬ್ಬೊಬ್ಬರೂ. ಈಗ ನಮಗೆ ಈ 6 ಗಂಟೆ ಕೆಲಸಕ್ಕೆ ಎಷ್ಟು ಸಂಬಳ ಸಿಗುತ್ತದೆ ಎಂದು ನೀವೇ ಲೆಕ್ಕ
ಹಾಕಿ” ಎಂದರಾಕೆ!
26 ದಿನಕ್ಕೆ 3600 ರುಪಾಯಿ ಅಂದರೆ, ಆ ವೇತನದಿಂದ ಅವರ ಜೀವನ ನಿರ್ವಹಣೆ ಸಾಧ್ಯವೇ? “ಮಧ್ಯಾಹ್ನ ಮೂರರ ನಂತರ ನಮಗೆ ಬೇರೆ ಕೆಲಸಕ್ಕೆ ಹೋಗಲು ಆಗಲ್ಲ. ಇಲ್ಲಿ ಬರುವ ಸಂಬಳದಿಂದ ಜೀವನ ನಡೆಸಲು ಆಗಲ್ಲ” ಎಂಬುದು ಅವರ ಅಳಲು. “ಜತೆಗೆ ಆರೇಳು ವರ್ಷ ಸೇವೆ ಸಲ್ಲಿಸಿದವರಿಗೂ ಕೆಲಸದ ಭದ್ರತೆ ಇಲ್ಲ. ಸಂಬಳದಲ್ಲಿ ಏರಿಕೆ ಇಲ್ಲ. ಅಧಿಕ ದಾಖಲಾತಿ ಇರುವ ಶಾಲೆಗಳಲ್ಲಿ ಎ ರೀತಿಯಿಂದಲೂ ಕೆಲಸ ಹೆಚ್ಚು. ಅದೇ ನೂರರ ಒಳಗೆ ವಿದ್ಯಾರ್ಥಿಗಳಿರುವ ಶಾಲೆಯಲ್ಲೂ ‘ಅಕ್ಷರ ದಾಸೋಹ’ ಇದೆ. ಅಲ್ಲಿ ಇಬ್ಬರು ಸಿಬ್ಬಂದಿಗಳಿದ್ದಾರೆ. ಅವರಿಗೆ ಕೆಲಸದ ಹೊರೆ ತುಂಬಾ ಕಡಿಮೆ. ಆದರೆ ಸಂಬಳ ನಮ್ಮಷ್ಟೇ ಪಡಿತಾರೆ” ಎನ್ನುವಾಗ ಅಡುಗೆ ಅಮ್ಮನ ಮನದಾಳ ಅರ್ಥ ವಾಯ್ತು. “5 ಕೆ.ಜಿ. ಅಕ್ಕಿ ಬೇಯಿಸುವವರಿಗೂ 50 ಕೆ.ಜಿ. ಅಕ್ಕಿ ಬೇಯಿಸುವ ವರಿಗೂ ಒಂದೇ ಮಾನದಂಡ ಸರಿಯಾ?” ಎಂಬುದು ಅವರ ಪ್ರಶ್ನೆ.
“ಸರಿ, ಕೆಲಸದ ಪ್ರಮಾಣ, ಸಂಬಳದ ವಿಷಯ ಇಷ್ಟಾಯ್ತು. ಇನ್ನು ಕೊಡುವ ಗೌರವಧನವನ್ನಾದರೂ ಸರಿಯಾದ ಸಮಯಕ್ಕೆ ಅಕೌಂಟಿಗೆ ಜಮಾ ಮಾಡ್ತಿದ್ದಾರಾ?” ಎಂದು ಕೇಳಿದರೆ, “ಈಗ ನೋಡಿ ಮೊನ್ನೆ ಆಗ, ಸೆಪ್ಟೆಂಬರ್, ಅಕ್ಟೋಬರ್ 3 ತಿಂಗಳು ನಮ್ಮ ಸಂಬಳ ತಡೆ ಹಿಡಿದಿದ್ದರು. ಅಂತೂ ಕೊನೆಗೆ 3 ತಿಂಗಳ ಸಂಬಳ ಒಟ್ಟಿಗೆ ಹಾಕಿದ್ರು. ಈಗ ನವೆಂಬರ್ ತಿಂಗಳ ಸಂಬಳ ಈ ವಾರ ಬಂದದ್ದೇ ನಮ್ಮ ಪುಣ್ಯ. ಸಂಬಳ ಹೆಚ್ಚಿಸಿ ಎಂದು ಆರೇಳು ವರ್ಷದಿಂದ ಹೋರಾಟ ಮಾಡಿದರೂ ಪ್ರಯೋಜನ ಆಗಲಿಲ್ಲ. ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ನಾವು ಹೋರಾಡಿದೆವು. ಆದರೆ ಸ್ಪಂದನೆ ಶೂನ್ಯವಾಯ್ತು. ಕೇವಲ ನಮ್ಮ ಸಮಯ ಮತ್ತು ಹಣ ವ್ಯರ್ಥವಾಯಿತೇ ವಿನಾ ಯಾವ ಫಲವೂ
ದೊರೆಯಲಿಲ್ಲ” ಎಂದರು.
“ಸರಿ, ವರ್ಷಕ್ಕೊಮ್ಮೆ ಬೋನಸ್, ಯೂನಿಫಾರ್ಮ್ ಏನಾದರೂ ಕೊಡ್ತಾರಾ?” ಅಂತ ಕೇಳಿದ್ರೆ, “ಬೋನಸ್
ಇಲ್ಲ ಏನೂ ಇಲ್ಲ.
ಯೂನಿಫಾರ್ಮ್ ಅಂತೇನೂ ಇಲ್ಲ. ಅಡುಗೆ ಮಾಡುವಾಗ ಹಾಕುವ ಕವಚದಂಗಿ ವರ್ಷಕ್ಕೊಂದು ಕೊಡ್ತಾರೆ” ಎಂದರು. “ಶನಿವಾರನೂ ಅಡುಗೆ ಮಾಡ್ತೀರಾ?” ಅಂತ ಕೇಳಿದ್ರೆ, “ಹೌದು ಅದು ಕಡ್ಡಾಯ” ಎಂದರು. “ಸರಿ, ದಸರಾ ರಜೆ, ಬೇಸಗೆ ರಜೆಯಲ್ಲಿ ಅಡುಗೆ ಕೆಲಸ ಇರಲ್ಲ. ಆಗ ಸಂಬಳ ಸಿಗುತ್ತಾ?” ಎಂದು ಕುತೂಹಲದಿಂದ ಕೇಳಿದೆ. “ಅಯ್ಯೋ ಅಷ್ಟೆ ಉದಾರತೆ ಇದ್ದಿದ್ರೆ ನಾವು ಹೋರಾಟ ಮಾಡ್ತಿದ್ದಾವಾ? ಕೆಲಸ ಮಾಡಿದ್ದಕ್ಕೇ ಸರಿಯಾದ ಪಗಾರ ಬರಲ್ಲ. ಇನ್ನು ರಜಾದಿನದ ಸಂಬಳವೆಲ್ಲ ಕನಸಿನ ಮಾತು” ಎನ್ನುತ್ತಾ ಬೆವರೊರೆಸಿಕೊಂಡರು.
“ಸರಿ, ನಿಮ್ಮ ಬೇಡಿಕೆ ಏನು ಹೇಳಿ?” ಎಂದೆ ಕೊನೆಯದಾಗಿ. “ದಿನಕ್ಕೆ ಕನಿಷ್ಠ ಸಂಬಳ ನಿಗದಿ ಮಾಡ್ಲಿ. ಈ ನೂರೈವತ್ತು ರುಪಾಯಿ ಯಿಂದ ಹೇಗೆ ಬದುಕೋದು ನೀವೇ ಹೇಳಿ” ಎಂದರು. “ಜತೆಗೆ ನಮಗೆ ಆರೋಗ್ಯ ಭದ್ರತೆ ಬೇಕು. ಅಡುಗೆ ಮನೆ ಅಂದ ಮೇಲೆ, ಬೆಂಕಿ, ಬಿಸಿ ಪದಾರ್ಥ. ಯಾವಾಗ ಏನೂ ಆಗಬಹುದು. ಹಾಗಾಗಿ ಆ ಕುರಿತು ನಮಗೆ ವಿಮೆಯ ಸೌಲಭ್ಯ ಇದ್ದರೆ ಒಂದಿಷ್ಟು ನಿರಾಳ. ಜತೆಗೆ ಪ್ರತಿವರ್ಷ ಕನಿಷ್ಠವಾದರೂ ಸಂಬಳ ಹೆಚ್ಚಿಸಬೇಕಲ್ವ? ಎಲ್ಲಾ ಉದ್ಯೋಗದವರಿಗೂ ಈ ಸಂಬಳ ಹೆಚ್ಚಳದ ಸೌಲಭ್ಯ ಇದೆ. ನಮ್ಮ ಸಂಬಳವೇಕೆ ನಿಂತ ನೀರು?” ಎಂದರು. ಹೆಚ್ಚು ದಾಖಲಾತಿ ಇರುವ ಶಾಲೆಯ ಸಿಬ್ಬಂದಿಗಳಿಗೆ ವಿಶೇಷ ಪ್ಯಾಕೇಜ್ ನೀಡಿದರೆ ತುಂಬಾ ಅನುಕೂಲ. ಯಾಕೆಂದರೆ ಇದರಿಂದ ಶ್ರಮದ ಅಪಮೌಲ್ಯ ನಿಲ್ಲುತ್ತದೆ ಎಂಬುದು ಅಕ್ಷರ ದಾಸೋಹ ಸಿಬ್ಬಂದಿಗಳ ಧ್ವನಿಯಾಗಿದೆ.
ಇದನ್ನೂ ಓದಿ: Gururaj Gantihole Column: ಸರ್ವರ್ ಸಮಸ್ಯೆ: ನಂಗೂ ಫ್ರೀ, ನಿಂಗೂ ಫ್ರೀ…!