Thursday, 26th December 2024

Gururaj Gantihole Column: ಅಂಚೆ ಇಲಾಖೆ ಫೀನಿಕ್ಸ್‌ʼನಂತೆ ಪುಟಿಗೆದ್ದದ್ದೇ ರೋಚಕ !

ಗಂಟಾಘೋಷ

ಗುರುರಾಜಾ ಗಂಟಿಹೊಳೆ

ನಾವು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾಗ, ‘ಟ್ರಿಣ್… ಟ್ರಿಣ್ ಅಂಚೆಯಣ್ಣ’ ಅಂತ ಒಂದು ಪಾಠವಿತ್ತು. ಅದನ್ನು ಓದಿದ ಮೇಲೆ ನಾವು ಕೂಡ ಮನೆಯಲ್ಲಿ ಅಂಚೆಯಣ್ಣನ ಆಟವಾಡುತ್ತಿದ್ದ ನೆನಪು ಬರುತ್ತಿದೆ. ಈ ಅಂಚೆಯಣ್ಣ ಯಾರಿಗೆ ಗೊತ್ತಿಲ್ಲ ಹೇಳಿ!

ನದಿ, ಕಾಲುವೆ, ಹಳ್ಳಿ, ಗುಡ್ಡಗಾಡು ಪ್ರದೇಶ ಎನ್ನದೆ, ಮಳೆ- ಚಳಿ-ಬಿಸಿಲು ಹೀಗೆ ಎಲ್ಲದಕ್ಕೂ ಮೈಯೊಡ್ಡಿಕೊಂಡು ಬರುವವ. ಖಾಕಿ ಬಟ್ಟೆ ಧರಿಸಿ ಸೈಕಲ್ ಏರಿಕೊಂಡು ಬಂದ ಈತ ‘ಟ್ರಿಣ್ ಟ್ರಿಣ್’ ಸದ್ದಿನೊಂದಿಗೆ ಮನೆಯ ಮುಂದೆ
ನಿಂತನೆಂದರೆ, ದೂರದ ಊರಿಗೆ ದುಡಿಯಲು ಹೋಗಿರುವ ಮಗನ ಪತ್ರ ಅಥವಾ ಮನಿ ಆರ್ಡರ್ ಬಂದಿದೆ ಎಂದೇ ಅರ್ಥ! ಇಂಥ ಅಂಚೆಯಣ್ಣ ಗ್ರಾಮೀಣರ ಬದುಕಿನ ಅವಿಭಾಜ್ಯ ಅಂಗವಾಗಿದ್ದ. ಅಕ್ಷರ ಬಾರದ ಹಳ್ಳಿಯ
ಮಂದಿಯ ಪತ್ರ ಬರೆಯಲು, ಓದಲು ಅಥವಾ ಸಂದೇಶ ರವಾನಿಸಲು ಅವನೇ ಸಾಥಿಯಾಗಿದ್ದ.

ಇದೆಲ್ಲ ಸಾಧ್ಯವಾಗಿದ್ದು ಹೇಗೆ ಎಂಬುದೇ ಒಂದು ರೋಚಕ ಕಥೆ. ಭಾರತೀಯ ಅಂಚೆ ಸೇವೆಯು ಭಾರತ ಸರಕಾರ ನಡೆಸುವ ದೊಡ್ಡ ಸಾರ್ವಜನಿಕ ಬಟವಾಡೆ ವ್ಯವಸ್ಥೆ. ವಿಶ್ವದಲ್ಲೇ ಬೃಹತ್ತಾದ ಸಂಪರ್ಕಜಾಲ ಎನಿಸಿಕೊಂಡ ಹೆಮ್ಮೆಯೂ ಇದಕ್ಕಿದೆ.

ದೇಶಾದ್ಯಂತ ಇರುವ 156000 ಅಂಚೆ ಕಚೇರಿಗಳಲ್ಲಿ 5 ಲಕ್ಷಕ್ಕೂ ಅಧಿಕ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲರ ನಿರಂತರ ದುಡಿಮೆಯೇ ಈ ವ್ಯವಸ್ಥೆಯ ಯಶಸ್ಸಿಗೆ ಕಾರಣ. ದೇಶದ ಯಾವೂರಿಗೆ ಹೋದರೂ ಅಂಚೆ ಕಚೇರಿ ಬಹುತೇಕ ಇರುತ್ತದೆ; ಅರ್ಥಾತ್, ಇದು ಇಡೀ ದೇಶವನ್ನು- ದೇಶಸ್ಥರನ್ನು ಜೋಡಿಸುವ ಕೆಲಸ ಮಾಡಿದೆ.
ವೈವಿಧ್ಯಮಯ ಸೇವೆಗಳನ್ನು ಒದಗಿಸುವ ಕಾರಣ ದಿಂದಾಗಿ ನಮ್ಮ ಅಂಚೆ ಇಲಾಖೆಯು ಜನಸ್ನೇಹಿಯೂ ಆಗಿದೆ.

ಸಾಮಾನ್ಯ ಪತ್ರ ವ್ಯವಹಾರ, ನೋಂದಾಯಿತ ಪತ್ರ ವ್ಯವಹಾರ, ಶೀಘ್ರ ಅಂಚೆ, ಪಾರ್ಸೆಲ್ ಸೇವೆ, ಇ-ಅಂಚೆ, ವಿಶೇಷ ಕೊರಿಯರ್ ಸೇವೆ ಈ ಪೈಕಿ ಮುಖ್ಯವಾದಂಥವು. ಜತೆಗೆ ಹಣದ ವ್ಯವಹಾರದ ವಿಭಾಗದಲ್ಲಿ ಮನಿ ಆರ್ಡರ್, ಮ್ಯೂಚುಯಲ್ ಫಂಡ್, ಹಣ ವರ್ಗಾವಣೆ ಸೇರಿವೆ. ರಾಷ್ಟ್ರೀಯ ಉಳಿತಾಯ ಪತ್ರ, ಕಿಸಾನ್ ವಿಕಾಸ್ ಪತ್ರ, ಆವರ್ತಿತ ಠೇವಣಿ ಮತ್ತು ನಿಶ್ಚಿತ ಠೇವಣಿಗಳಂಥ ವಿಶೇಷ ಉಳಿತಾಯ ಸೇವೆಗಳನ್ನು ಒದಗಿಸುತ್ತಿರುವ ಇಲಾಖೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆಗೂ ಮುಂದಾಗಿದೆ.

ಅಂಚೆ ಪೆಟ್ಟಿಗೆಗಳು ಸಾಮಾನ್ಯವಾಗಿ ಕೆಂಪು (ಸ್ಥಳೀಯವಲ್ಲದ ಪತ್ರಗಳಿಗೆ), ಹಸಿರು (ಸ್ಥಳೀಯ, ಮಹಾನಗರ ಮತ್ತು
ಪ್ರಮುಖ ನಗರಗಳ ಪತ್ರಗಳಿಗೆ) ಮತ್ತು ಹಳದಿ (ಶೀಘ್ರ ಅಂಚೆ ಸೇವೆಗೆ) ಬಣ್ಣಗಳನ್ನು ಹೊಂದಿರುತ್ತವೆ. ಭಾರತದಲ್ಲಿ ಅಂಚೆಸೇವೆ ಶುರುವಾಗಿದ್ದು ಬ್ರಿಟಿಷರಿಂದ. ಈಸ್ಟ್ ಇಂಡಿಯಾ ಕಂಪನಿ ಭಾರತದಲ್ಲಿ ನೆಲೆಯೂರಿದಾಗ ಅದರ ಪ್ರಮುಖ ಆಡಳಿತ ಕೇಂದ್ರಗಳಾಗಿದ್ದ ಕಲ್ಕತ್ತಾ, ಮದ್ರಾಸ್ ಮತ್ತು ಬಾಂಬೆ ನಡುವೆ ವಸ್ತುಗಳು, ಪತ್ರಗಳು, ಪ್ರಮುಖ ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳಲೆಂದು 1746-1766ರ ಅವಧಿಯಲ್ಲಿ ಈ ವ್ಯವಸ್ಥೆ ಜಾರಿಯಾಯಿತು.

ಶುರುವಿನಲ್ಲಿ ಈ ವ್ಯವಸ್ಥೆಯನ್ನು ‘ಕಂಪನಿ ಮೇಲ್’ ಎನ್ನಲಾಗುತ್ತಿತ್ತು. ವಾರನ್ ಹೇಸ್ಟಿಂಗ್‌ನಿಂದ 1766ರಲ್ಲಿ ಪೂರ್ಣಪ್ರಮಾಣದಲ್ಲಿ ಆರಂಭವಾದ ‘ಕಂಪನಿ ಮೇಲ್’ ವ್ಯವಸ್ಥೆ, 1854ರ ಸುಮಾರಿಗೆ ಬ್ರಿಟಿಷ್ ಗವರ್ನರ್
ಜನರಲ್ ಲಾರ್ಡ್ ಡಾಲ್‌ಹೌಸಿಯ ಮೂಲಕ ರಾಣಿಯ ಆಡಳಿತ ವ್ಯಾಪ್ತಿಗೆ ಬಂತು. ರಾಬರ್ಟ್ ಕ್ಲೈವ್ ಮೂಲಕ
ಸ್ಥಳೀಯ ಅಂಚೆ ಕಚೇರಿಯು ಬಾಂಬೆಯಲ್ಲಿ 1784ರಲ್ಲಿ ಆರಂಭವಾಯಿತು. ಅಂಚೆಚೀಟಿಯನ್ನು ಅಂಟಿಸುವ
ಪದ್ಧತಿಯು ಸರ್ ಬಾರ್ಟ್ ಲೇ ಎಂಬಾತನಿಂದ ಸಿಂಧ್ ಪ್ರಾಂತ್ಯದಲ್ಲಿ ಶುರುವಾಯಿತು. ಮೊದಲ ಜಿಪಿಒ ಆರಂಭ ಗೊಂಡಿದ್ದು ಕಲಕತ್ತೆಯ ಪೋರ್ಟ್ ವಿಲಿಯಂ ಆವರಣದಲ್ಲಿ. ನಂತರ, ವಾಲ್ಟರ್ ಗ್ರೆನ್ ವಿಲ್ಲೆ ಎಂಬ ವಿನ್ಯಾಸ ಕಾರನಿಂದ ಅಂಚೆ ಪೆಟ್ಟಿಗೆ ರೂಪುಗೊಂಡಿತು, ದೇಶದ ವಿವಿಧೆಡೆ ಅಂಚೆ ಕಚೇರಿಗಳು ಆರಂಭವಾದವು.

ಶುರುವಿನಲ್ಲಿ ಕಲಕತ್ತೆ, ಮದ್ರಾಸ್, ಬಾಂಬೆಯಲ್ಲಷ್ಟೇ ಇದ್ದ ಜಿಪಿಒ, 1800ರಲ್ಲಿ ಬೆಂಗಳೂರಿನಲ್ಲೂ ಅಸ್ತಿತ್ವಕ್ಕೆ ಬಂತು. ಪ್ರಾರಂಭದಲ್ಲಿ ‘ಪ್ರಿ-ಪೇಯ್ಡ್’ ಕಾಪರ್ ಟಿಕೆಟ್‌ಗಳನ್ನು ಸ್ಟ್ಯಾಂಪ್‌ನಂತೆ ಬಳಸಲಾಗುತ್ತಿತ್ತು. ಡಾಲ್ ಹೌಸಿಯು
1854ರಲ್ಲಿ ಪೋಸ್ಟ್ ಆಫೀಸ್ ಕಾಯ್ದೆಯನ್ನು ಜಾರಿಗೆ ತಂದು, ಏಕರೂಪದ ನಿಗದಿತ ದರಪಟ್ಟಿಯ ಜತೆಗೆ ‘ಡೈರೆಕ್ಟರ್ ಜನರಲ್ ಆ- ಪೋಸ್ಟ್ ಆಫೀಸ್’ (ಡಿಜಿಪಿ) ಹುದ್ದೆಯನ್ನು ಸೃಷ್ಟಿಸಿದ. 1948ರಲ್ಲಿ ಗಾಂಧಿಯವರ ಫೋಟೋ, ಅಂಚೆಯಲ್ಲಿ ಪ್ರಕಟವಾದ ಮೊದಲ ಪುರುಷನ ಚಿತ್ರವೆನಿಸಿಕೊಂಡರೆ, ಕೃಷ್ಣಭಕ್ತೆ ಮೀರಾಬಾಯಿ ಈ ನಿಟ್ಟಿನಲ್ಲಿ ಮೊದಲ ಮಹಿಳೆ ಎನಿಸಿಕೊಂಡರು. 192ರ ಆಗಸ್ಟ್ 15ರಂದು ‘ಪೋಸ್ಟಲ್ ಇಂಡೆಕ್ಸ್ ನಂಬರ್’ (ಪಿನ್) ಎಂಬ ವಿನೂತನ ವ್ಯವಸ್ಥೆಯನ್ನು ಶ್ರೀರಾಮ್ ಭೀಕಾಜಿ ವೆಳಾಂಕರ್ ದೇಶಾದ್ಯಂತ ಪರಿಚಯಿಸಿದರು. ನಂತರದ ದಿನಗಳಲ್ಲಿ ಇಲಾಖೆಯು ಜನರ ಅಗತ್ಯಕ್ಕೆ ತಕ್ಕಂತೆ ಹಲವು ಬದಲಾವಣೆಗಳನ್ನು ಹಂತಹಂತವಾಗಿ ರೂಪಿಸಿಕೊಂಡು ಮುನ್ನಡೆಯಿತು.

ಅಂಚೆ ಇಲಾಖೆಯು ಇತರ ಸರಕಾರಿ ವ್ಯವಸ್ಥೆಗಳಂತಲ್ಲ, ಇಲ್ಲಿ ಸೇವಾಪರತೆಗೇ ಆದ್ಯತೆ. ದೇಶಾದ್ಯಂತ ಜಾಲವನ್ನು
ಹೊಂದಿರುವ ಈ ಇಲಾಖೆಯ ಬಗ್ಗೆ ಜನರಿಗೆ ಹೆಮ್ಮೆಯಿದೆ, ಮೆಚ್ಚುಗೆಯಿದೆ. ಖಾಸಗಿ ಬಟವಾಡೆ ಕಂಪನಿಗಳು ಬಂದಿ
ದ್ದರೂ ಜನರು ಅಂಚೆ ಇಲಾಖೆಯನ್ನು ಕೈಬಿಟ್ಟಿಲ್ಲ. ಇದುವೇ ಇಲಾಖೆಯ ಯಶಸ್ಸಿನ ಗುಟ್ಟು. ಹತ್ತಾರು ಕಿ.ಮೀ.
ದೂರದೂರಿಗೆ ಒಂದು ಪುಟ್ಟಪತ್ರ ಬಂದರೂ ಬದ್ಧತೆಯೊಂದಿಗೆ ತಲುಪಿಸುವ ಈ ವ್ಯವಸ್ಥೆಗೆ ‘ಹ್ಯಾಟ್ಸಾಫ್’
ಎನ್ನಲೇಬೇಕು. ಜಗತ್ತಿನ ಏಕೈಕ ತೇಲುವ ಅಂಚೆ ಕಚೇರಿ‌ ಕಾಶ್ಮೀರದ ದಾಲ್ ಸರೋವರದಲ್ಲಿದೆ. ಭಾರತ-ಟಿಬೆಟ್
ಗಡಿಪ್ರದೇಶಕ್ಕೆ ಹೊಂದಿಕೊಂಡಿರುವ ಹಿಕ್ಕಿಮ್ ಎಂಬ ಹಳ್ಳಿಯು ಹಿಮಾಲಯದ ವ್ಯಾಪ್ತಿಯಲ್ಲಿ 14570 ಅಡಿಗ
ಳಷ್ಟು ಎತ್ತರದಲ್ಲಿದ್ದು, ಇಲ್ಲಿರುವುದು ಜಗತ್ತಿನ ಅತ್ಯಂತ ಎತ್ತರದ ಅಂಚೆ ಕಚೇರಿ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಇಲ್ಲಿನ ಪೋಸ್ಟ್ ಮಾಸ್ಟರ್ ರಿಂಚೆನ್ ಚೆರಿಂಗ್ 1983ರಿಂದ ಕಾರ್ಯನಿರ್ವಹಿಸುತ್ತಿದ್ದು, ಚಳಿ-ಮಳೆ-ಬಿರುಗಾಳಿಗಳು
ಇವರ ಕೆಲಸಕ್ಕೆ ಅಡ್ಡಿಯಾಗಿಲ್ಲ. ನಿಮಗೆ ಗೊತ್ತೇ, ಅಂಟಾರ್ಕ್ಟಿಕಾದಲ್ಲೂ ನಮ್ಮ ಅಂಚೆ ಕಚೇರಿಯೊಂದು ಕೆಲಸ
ಮಾಡುತ್ತಿದೆ. ಹವಾಮಾನ ಶಾಸಜ್ಞ ಜಿ.ಸುಧಾಕರ್, 1988ರಲ್ಲಿ ದಕ್ಷಿಣ ಗಂಗೋತ್ರಿಯ ಸಂಶೋಧನಾ ಕೇಂದ್ರದಲ್ಲಿ ಇದನ್ನು ಪ್ರಾರಂಭಿಸಿದರು. ನಮ್ಮ ಅಂಚೆ ಇಲಾಖೆಯು ಆಧುನಿಕ ತಂತ್ರಜ್ಞಾನಗಳ ಬಳಕೆಯಲ್ಲಿ ಕೈಚೆಲ್ಲಿದ್ದುಂಟು, ಖಾಸಗಿಯವರ ಕಡಿಮೆ ವೆಚ್ಚದ ಕೊರಿಯರ್ ಸೇವೆಯ ತೀವ್ರಸ್ಪರ್ಧೆಯನ್ನು ಎದುರಿಸಲು ಕಷ್ಟಪಟ್ಟಿದ್ದೂ ಉಂಟು. ‘ಎಂದಿಗೂ ಬದಲಾಗದ, ಆಧುನಿಕತೆಯನ್ನು ರೂಢಿಸಿಕೊಳ್ಳದ ಇಲಾಖೆ’ ಎಂದು ಜನರೂ ಹಂಗಿಸತೊಡಗಿದ್ದರು.

ಸರಕಾರದ ನಿರ್ಲಕ್ಷ್ಯದಿಂದಾಗಿಯೂ ಇನ್ನೇನು ಗತಕಾಲಕ್ಕೆ ಸರಿಯಲಿದೆ ಎನ್ನುವಂತಿದ್ದ ಇಲಾಖೆಗೆ ಮರುಜನ್ಮ,
ಆಧುನಿಕ ಸ್ಪರ್ಶ ಸಿಕ್ಕಿದ್ದು 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿಯವರ ಸರಕಾರದಿಂದ. ಅದು ವಿನೂತನ
ಕಾರ್ಯಶೈಲಿಗಳನ್ನು ರೂಪಿಸಿ ಹೊಸ ಚೈತನ್ಯ ತುಂಬಿದ್ದರಿಂದ ಬಹುತೇಕ ಧರಾಶಾಯಿಯಾಗಿದ್ದ ಇಲಾಖೆ
ಫೀನಿಕ್ಸ್‌ನಂತೆ ಮತ್ತೆ ಪುಟಿದೆದ್ದು ನಿಂತಿತು. ಹಿಂದಿನ ಸರಕಾರಗಳಂತೆ ಅಂಚೆ ಇಲಾಖೆಯನ್ನು ಸೇವೆಗಷ್ಟೇ ಸೀಮಿತ ಗೊಳಿಸದ ಮೋದಿ ಸರಕಾರ, ವಾಣಿಜ್ಯ ಚಟುವಟಿಕೆಗಳ ಭಾಗವಾಗಿ ಹೊಸ ಪ್ರಯೋಗಗಳಿಗೆ ಅವಕಾಶವಿತ್ತು ಇಲಾಖೆಯ ಆರ್ಥಿಕ ಸ್ಥಿತಿಯನ್ನು ಸುಧಾರಿಸಿತು, ಹೊಸಬಗೆಯ ಸೇವಾವಿಭಾಗಗಳನ್ನು ಪರಿಚಯಿಸಿತು.

ಬ್ಯಾಂಕ್ ಮತ್ತಿತರೆ ಹಣಕಾಸು ಸೇವಾ ವ್ಯವಸ್ಥೆಗಳು ಇಲ್ಲದ ಜಾಗದಲ್ಲಿ ಪರ್ಯಾಯ ಬ್ಯಾಂಕ್ ಆಗಿ ಕಾರ್ಯ ನಿರ್ವಹಿಸಲು ಅನುವುಮಾಡಿಕೊಟ್ಟಿತು. ಕೋವಿಡ್ ಕಾಲಘಟ್ಟದಲ್ಲಿ ಅಂಚೆ ಕಚೇರಿ ನೀಡಿದ ಸೇವೆ ಮಹತ್ತರ ವಾದುದು. ‘ನಿಮ್ಮ ಮನೆ ಬಾಗಿಲಿಗೆ, ನಿಮ್ಮ ಬ್ಯಾಂಕ್’ ಎಂಬ ಧ್ಯೇಯದೊಂದಿಗೆ ‘ಪೇಮೆಂಟ್ ಬ್ಯಾಂಕ್’ ಆಗಿ ಕೂಡ ಅಂಚೆ ಇಲಾಖೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಬ್ಯಾಂಕ್‌ನ ಮೂಲಕ ಕಟ್ಟಕಡೆಯ ಹಳ್ಳಿಯವರೂ ಉಳಿತಾಯ ಖಾತೆ ತೆರೆದು ಠೇವಣಿ ಇರಿಸಬಹುದು, ದಿನದ 24 ಗಂಟೆಯೂ ಹಣ ವರ್ಗಾವಣೆ ಮಾಡಬಹುದು. ‘ನರೆಗಾ’, ‘ವಿದ್ಯಾರ್ಥಿ ವೇತನ’ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಲವು ಯೋಜನೆಗಳ ಹಣವನ್ನು ‘ಡಿಬಿಟಿ’ ವ್ಯವಸ್ಥೆಯ ಮೂಲಕ ಫಲಾನುಭವಿಗಳಿಗೆ ನೇರವಾಗಿ ತಲುಪಿಸಲಾಗುತ್ತಿದೆ.

ಸಾಲ, ವಿಮೆ, ಹೂಡಿಕೆ, ಉಳಿತಾಯ ಯೋಜನೆಗಳು ಕೂಡ ಅಂಚೆ ಇಲಾಖೆಯಲ್ಲಿ ಲಭ್ಯವಿವೆ, ಡಿಜಿಟಲ್
ಪೇಮೆಂಟ್, ವ್ಯವಹಾರ ಸಂಬಂಧಿತ ಹಣಕಾಸು ವರ್ಗಾವಣೆಗಳೂ ‘ಪೇಮೆಂಟ್ ಬ್ಯಾಂಕ್’ ಮೂಲಕ ಯಶಸ್ವಿಯಾಗಿ ನಡೆಯುತ್ತಿವೆ. ಇಷ್ಟಾಗಿಯೂ, ಖಾಸಗಿಯವರ ಸ್ಪರ್ಧೆಯೆದುರು ಬೆಳೆದು ಉಳಿಯುವುದು ಸುಲಭವಲ್ಲ ಎಂಬುದನ್ನು ಅಂಚೆ ಇಲಾಖೆ ಮನಗಾಣಬೇಕಿದೆ. ಹಿಂದೆಲ್ಲಾ ಅಂಚೆಯ ಪತ್ರಗಳು ಜನರ ಕೈಸೇರಲು ತಿಂಗಳುಗಟ್ಟಲೆ ಸಮಯ ವಾಗುತ್ತಿತ್ತು, ನಂತರ ಈ ಸಮಸ್ಯೆ ವಾರಕ್ಕೆ ಬಂದು ಮುಟ್ಟಿತು.

ಸದ್ಯ ಖಾಸಗಿಯವರ ‘ಅದೇ ದಿನದ ಸೇವೆ’ ಅತಿಹೆಚ್ಚು ಬಳಕೆಯಲ್ಲಿದ್ದು, ಈ ಕುರಿತೂ ಇಲಾಖೆ ಗಮನಹ
ರಿಸಬೇಕಿದೆ. ಖಾಸಗಿ ಕೊರಿಯರ್‌ನವರು ‘ಕಡಿಮೆ ಶುಲ್ಕ-ತುರ್ತುಸೇವೆ’ ವ್ಯವಸ್ಥೆಯ ಮೂಲಕ ಕೊರಿಯರ್
ಮತ್ತು ಕಾರ್ಗೋ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಹಾಗಾಗಿ ಬಳಕೆದಾರರ ಮೇಲೆ ‘ಬೆಲೆ ಹೇರಿಕೆ’ಯನ್ನು
ತಪ್ಪಿಸುವುದರ ಜತೆಗೆ ಅಂಚೆ ಇಲಾಖೆಯು ಜನಾನುರಾಗಿ ಯಾಗಿಯೂ ಇನ್ನಷ್ಟು ಬೆಳೆಯಬೇಕು, ಇನ್ನೂ
ಶತಮಾನಗಳವರೆಗೆ ಉಳಿಯಬೇಕು.

ಸದ್ಯ ಅಂಚೆ ಇಲಾಖೆಯು ವಿಧಿಸುತ್ತಿರುವ ಸೇವಾವೆಚ್ಚದ ಕುರಿತು ಸಾಹಿತಿಗಳು, ಪುಸ್ತಕ ಪ್ರಕಾಶಕರು, ವಿದ್ಯಾರ್ಥಿಗಳ
ವಲಯದಲ್ಲಿ ಆಕ್ಷೇಪಗಳಿವೆ. ‘ಒಂದು ಪುಸ್ತಕದ ಬೆಲೆ 100 ರುಪಾಯಿಯಷ್ಟಿದ್ದರೆ, ಅದರ ಅಂಚೆವೆಚ್ಚವೇ 40 ರು.
ಗಳನ್ನು ದಾಟುತ್ತದೆ, ಪುಸ್ತಕವನ್ನು ಕೊಂಡು ಓದುವ ವ್ಯಕ್ತಿ ಹೆಚ್ಚಿನ ವೆಚ್ಚವನ್ನು ಹೇಗೆ ಭರಿಸಿಯಾನು?” ಎನ್ನು ತ್ತಿದ್ದಾರೆ ಪ್ರಕಾಶಕರು. ಆದ್ದರಿಂದ, ವಿವಿಧ ಸೇವೆಗಳಿಗೆ ನಿಗದಿಪಡಿಸಲಾಗಿರುವ ದರವನ್ನು ಸ್ಪರ್ಧಾತ್ಮಕ ನೆಲೆಯಲ್ಲಿ ಪರಿಷ್ಕರಿಸುವ ಕುರಿತು ಇಲಾಖೆ ಆಲೋಚಿಸಬೇಕಿದೆ.

ಇತ್ತೀಚಿನ ಸುದ್ದಿಗಳ ಪ್ರಕಾರ ಮೋದಿ ಸರಕಾರವು ಅಂಚೆ ಇಲಾಖೆಯನ್ನು ‘ಲಾಜಿಸ್ಟಿಕ್ ಕಂಪನಿ’ಯಂತೆ ಸೇವಾ ವಲಯದಲ್ಲಿ ಬೆಳೆಸಲು ನಿರ್ಧರಿಸಿದ್ದು, ಇದಕ್ಕಾಗಿ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ಗಳನ್ನು ಪ್ರಕಟಿಸುವ ಸೂಚನೆಗಳು ವ್ಯಕ್ತವಾಗಿವೆ. ಇದು ಸಾಧ್ಯವಾದರೆ, ವಾರ್ಷಿಕವಾಗಿ 12000 ಕೋಟಿ ರು.ಗಿಂತ ಅಧಿಕ ಆದಾಯ ಹೊಂದಿರುವ ಅಂಚೆ ಇಲಾಖೆಯು ಮತ್ತೊಂದು ಸ್ತರಕ್ಕೆ ತನ್ನನ್ನು ತೆರೆದುಕೊಳ್ಳಲಿದೆ.

ಈಶಾನ್ಯ ರಾಜ್ಯದ 6000 ಹಳ್ಳಿಗಳು ಸೇರಿದಂತೆ ಇನ್ನೂ 25000ದಷ್ಟು ಹಳ್ಳಿಗಳು ಭಾರತದಲ್ಲಿ ಮೊಬೈಲ್ ನೆಟ್
ವರ್ಕ್ ಸಂಪರ್ಕಕ್ಕೆ ಒಳಪಟ್ಟಿಲ್ಲ. ಇದನ್ನು ಬರುವ ವರ್ಷದೊಳಗೆ ಪೂರ್ತಿಗೊಳಿಸಿ, ದೇಶಾದ್ಯಂತ ಅಂಚೆ
ಸೇವೆ ಯನ್ನು ವಿಶಿಷ್ಟವಾಗಿ ಬಳಸಲು ನಿರ್ಧರಿಸಲಾಗಿದೆ ಎಂದಿದ್ದಾರೆ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ
ಸಿಂಧಿಯಾ. ಮೋದಿ ಸರಕಾರದ ಈ ಕನಸಿನ ಜತೆಗೆ ಜನರೂ ಕೈಜೋಡಿಸಿ ಇಲಾಖೆಯ ಸೇವೆಯನ್ನು ಸಮರ್ಪಕವಾಗಿ
ಬಳಸಿಕೊಳ್ಳಲು ಮುಂದಾಗಬೇಕಿದೆ.

ಶತಮಾನಗಳಿಂದಲೂ ಜನರ ನಾಡಿಮಿಡಿತದೊಂದಿಗೆ ಬೆರೆತಿರುವ ಅಂಚೆಯಣ್ಣನ ಸೇವೆಗೆ ಬೆಲೆಕಟ್ಟಲಾಗದು.
ಸೈಕಲ್ ಏರಿ ಪತ್ರಗಳನ್ನು ವಿಲೇವಾರಿ ಮಾಡುತ್ತ ಬದುಕನ್ನೂ ಕಟ್ಟಿಕೊಳ್ಳುವುದು ಸುಲಭದ ಮಾತಲ್ಲ. ಪರರಿಗೆ ಸಂತಸ ಹಂಚುವ ಅಂಚೆಯಣ್ಣನ ಬದುಕೂ ಬೆಳಗಬೇಕು. ನಾವೆಲ್ಲರೂ ಕೈಜೋಡಿಸಿದರೆ ಅಂಚೆ ಇಲಾಖೆಯು
ವಿಶ್ವಮಾನ್ಯವಾಗುವ ದಿನಗಳು ದೂರವಿಲ್ಲ.

ಇದನ್ನೂ ಓದಿ: Gururaj Gantihole Column: ಗಂಗಾಕಲ್ಯಾಣ ಯೋಜನೆ: ಎಂಎಲ್‌ಎಗಳು ಹೈರಾಣ !