Friday, 20th September 2024

ಹನುಮನ ನಾಡಿನ ಹಲವು ದ್ವೀಪಗಳ ಮಧ್ಯೆ…

ಅಲೆಮಾರಿಯ ಡೈರಿ

ಸಂತೋಷ್ ಮೆಹಂದಳೆ

Mehandale100@gmail.com

ಒಂದು ಅನಾಮತ್ತು ನಾಲ್ಕಾರು ತಾಸು ಪಯಣ, ಕಾಂಡ್ಲಾ ಕಾಡ ಮಧ್ಯೆ ರೋಚಕ ಬೋಟಿಂಗು ಮತ್ತೆ ಒಂದು ಬಾರ್ಜು.. ಮತ್ತಷ್ಟುನಡಿಗೆ, ಕೊನೆಯಲ್ಲೊಂದು ಗುಹೆ ಪ್ರವೇಶ.. ಅದರಾಚೆಗೆ ಎಲ್ಲೆಲ್ಲೂ ನೀಲ ನಭ.. ಒಂದೇಟಿಗೆ ಇದೆಲ್ಲ ಕೈಗೆ ಬಿಡುತ್ತದೆ ಹನುಮನ ನೆಲ ಹಂಡಮಾನ್‌ನಲ್ಲಿ ಅರ್ಥಾತ್ ಅಂಡಮಾನ್ ದ್ವೀಪ
ಸಮೂಹದಲ್ಲಿ.

ಸರಾಸರಿ ನೂರು ವಾಹನಗಳಿಗೆ ಒಮ್ಮೆ ಅದು ನಿಗದಿತ ಸಮಯಕ್ಕೆ ಪೊಲೀಸ್ ಬೆಂಗಾವಲಿನಲ್ಲಿ ದಾಟಿಸುತ್ತಾರೆ. ಪೂರ್ತಿ 47 ಕಿ.ಮೀ. ಒಂದೇ ಒಂದು ನಿಲುಗಡೆ ಇಲ್ಲದ ಏಕಮುಖ ಪಯಣ ಅದು. ಪೋರ್ಟ್‌ಬ್ಲೇರ್‌ನಿಂದ ಹೊರಡುವ ಪಯಣ ಸರಾಸರಿ ನಾಲ್ಕು ತಾಸುಗಳ ಕಾಲ ಮೊದಲು ವಾಹನ, ಆಮೇಲೆ ಬೆಂಗಾವಲಿನ ವಾಹನ, ಅದರಾಚೆಗೊಂದು ಬಾರ್ಜು ಮತ್ತೂ ಒಂದು ಸ್ಪೀಡ್‌ಬೋಟು, ನಂತರ ದುತ್ತನೆ ಎದುರಾಗುವ ಕಾಂಡ್ಲಾ ಕಾಡಿನ ಸಂದಿನಲ್ಲಿ ತಲೆ ಬಗ್ಗಿಸಿ, ಸಂದುಗೊಂದು ಗಳಲ್ಲಿ ನುಸುಳಬಹುದು ಎನ್ನುವ ಯೋಚನೆಗೂ ಮೊದಲೇ ಥ್ರಿಲಿಂಗ್ ಅನುಭವವನ್ನು ನೀಡಲೆಂದು ಓರೆ ಕೋರೆಯಾಗಿಸಿ ನುಗ್ಗುವ ಮೋಟಾರ್ ಬೋಟು, ನಂತರ ಸರಾಸರಿ ಮುಕ್ಕಾಲು ತಾಸಿನ ಕಾಲ್ದಾರಿ.

ಇದೆಲ್ಲಾ ಸೇರಿ ಒಂದು ಚೆಂದದ ಹಸಿರು ಕಾಡು, ನೀಲಿ ನೀಲಿ ನೀರು, ಅರೆಗಪ್ಪು ಕೆಂಪು ಮತ್ತು ಬಿಳಿಬಿಳಿ ಸ್ಟೆಲ್‌ಕೈಟ್‌ ಗಳ ಸಂಗಮವಾಗಿರುವ ಗುಹೆಯ ಪರಿಸರ ಪ್ರವೇಶಿಸಿದರೆ ಬಾರಾಟಾಂಗ್ ಪ್ರವಾಸ ಒಂದು ಹಂತಕ್ಕೆ ಬಂದಂತೆ. ಅಂಡಮಾನ್ ದ್ವೀಪ ಪ್ರವಾಸದಲ್ಲಿ ಅಪರೂಪದ ಅನುಭವಕ್ಕೀಡು ಮಾಡುವ ಬಾರಾಟಾಂಗ್ ಸಂದರ್ಶಿಸಲೇ ಬೇಕಾದ ಮತ್ತು ಅದಕ್ಕಾಗಿ ಒಂದಿಡೀ ದಿನ ಪೂರ್ತಿ ಉಳಿಸಿಕೊಳ್ಳಲೇಬೇಕಾದ ತಯಾರಿ ಪ್ರವಾಸಿಗರಿಗೆ ಇರಲೇ ಬೇಕಾಗುತ್ತದೆ. ಕಾರಣ ದ್ವೀಪ ತಾಣದ ಈ ಸ್ಥಳದಲ್ಲಿ ಎಲ್ಲವೂ ಕರಾರುವಾಕ್ಕು ಮತ್ತು ನಿಗದಿತ ಸಮಯಕ್ಕೆ ನಡೆಯಲೇಬೇಕು. ಇಲ್ಲದಿದ್ದರೆ ಆ ದಿನ ಪೂರ್ತಿ ಕೈಬಿಟ್ಟಂತೆಯೇ. ಇಲ್ಲಿ ಪ್ರತಿಯೊಂದೂ ಆಯಾ ದಿನ ಮತ್ತು ಸಮಯಕ್ಕೆ ಅಲ್ಲಿಂದ ಹೊರಡುವ ದೋಣಿ ಮತ್ತು ಬಾರ್ಜುಗಳ ಲೆಕ್ಕಾಚಾರದ ಮೇಲೆ ನಿಗದಿತವಾಗುತ್ತದೆ.

ಪ್ರತಿ ಬಾರ್ಜು ಅಥವಾ ಪ್ರಯಾಣಿಕರ ಹಡಗಿಗೆ ಆನ್‌ಲೈನ್ ಬುಕಿಂಗ್ ವ್ಯವಸ್ಥೆ ಇದ್ದು, ಸ್ಥಳೀಯವಾಗಿ ಅಲ್ಲಿಯೇ ಬಸ್ ಟಿಕೆಟ್‌ನಂತೆ ಖರೀದಿಸಿ ಪ್ರಯಾಣಿಸುವ ಯೋಜನೆ ಸಾಧ್ಯವೇ ಇಲ್ಲ. ಪ್ರತಿ ಹಂತದಲ್ಲೂ ಸುರಕ್ಷತೆಯ ಪರೀಕ್ಷೆಗಳೂ ಕಡ್ಡಾಯ. ಹಾಗಾಗಿ ದ್ವೀಪದೂರಿನ ಪಯಣ ದಲ್ಲಿ ಪ್ರತಿಯೊಂದೂ ಮೊದಲೇ ನಿಯೋಜಿ ಸಿದ ಸಮಯಕ್ಕನುಸಾರವೇ ನಡೆಯುತ್ತದೆ. ಪೋರ್ಟ್‌ಬ್ಲೇರ್‌ನ ಪ್ರಮುಖ ಸ್ಥಳದಿಂದ ವಾಹನದಲ್ಲಿ ಹೊರಟು ಬೆಳಗ್ಗೆ ಐದು ಗಂಟೆ ಹೊತ್ತಿಗೆ ಶಿರ್ಖಾಟಾಂಗ್‌ಗೆ ತಲುಪಿ ಕಾಯಬೇಕಾಗುತ್ತದೆ. ಈ ಶಿರ್ಖಾಟಾಂಗ್‌ನಲ್ಲಿ ಪೊಲೀಸ್ ಮತ್ತು ಫಾರೆಸ್ಟ್ ಎರಡೂ ಜಂಟಿಯಾಗಿ ಚೆಕ್ ಪೊಸ್ಟ್ ಮಾಡಿಕೊಂಡಿದ್ದು ಬೆಳಗ್ಗೆ ಆರು ಗಂಟೆಗೆ ಮೊದಲ ಕ್ಯಾನ್ವಾಯ್ ಬಿಡುತ್ತಾರೆ. ಈ ಗೇಟ್ ’ಜಾರ್ವಾ ಪ್ರೊಟೆಕ್ಷನ್ ಗೇಟ್’ ಎಂದೇ ಪರಿಚಿತ.

ಕಾರಣ ಇಲ್ಲಿಂದ ಸರಾಸರಿ ನಲ್ವತ್ತೇಳು ಕಿ.ಮೀ. ವ್ಯಾಪ್ತಿ ಕಾಡು ಪ್ರದೇಶ ಅಪ್ಪಟ ಮೂಲ ನಿವಾಸಿಗಳಾದ ಜಾರವಾ ಜನಾಂಗದವರಿಗಾಗಿ ಮೀಸಲಿರಿಸಲಾಗಿದ್ದು ಯಾವ ಕಾರಣ ಕ್ಕೂ ಅಲ್ಲಿ ಸಾಮಾನ್ಯ ನಾಗರಿಕರು(?) ಆ ಸಮುದಾಯದವರೊಡನೆ ಸಂಪರ್ಕಕ್ಕೆ ಬಾರದಂತೆ ಅವರನ್ನು ಸಾಕಲಾಗುತ್ತಿದೆ. ಅದರಿಂದ ಈ ಮೊದಲು ನಡೆಯುತ್ತಿದ್ದ ಪ್ರವಾಸಿಗರ ಕಿರಿಕಿರಿಯಿಂದ ಅವರು ಸುರಕ್ಷಿತರು. ಜತೆಗೆ ಆ ಜನಾಂಗಕ್ಕೂ ಈಗ ನೆಮ್ಮದಿ. ಹಾಗಾಗಿ ಪೋರ್ಟ್‌ಬ್ಲೇರ್ ನಿಂದ ಹೊರಟು ಶಿರ್ಖಾಟಾಂಗ್‌ನಲ್ಲಿ ಕಾಯ್ದು, ಬೆಳಗಿನ ಚಳಿಗೆ ಅಲ್ಲಿಯ ರಸ್ತೆ ಬದಿಯ ಟೀ ಕಾಫಿ, ಇಡ್ಲಿ ತಿನ್ನುತ್ತಾ ಆರು ಗಂಟೆಗೆ ಹೊರಟರೆ ಒಂದೂವರೆ ತಾಸಿಗೆಲ್ಲಾ ಅಚೆ ಬದಿಯ ’ನಾಯೆಂದರ್ ಜೆಟ್ಟಿ’ ತಲುಪಿರುತ್ತೇವೆ.

ಈ ಗೇಟಿನ ನಿಲುಗಡೆಯ ತಾಣವೆ ಮಜ. ಎರಡೂ ಕಡೆ ಸಾಲುಸಾಲು ಟೀ ಕಾಫಿ ಶಾಪ್‌ಗಳು ಬೆಳಗ್ಗೆ ನಾಲ್ಕಕ್ಕೆಲ್ಲಾ ಎದ್ದು ಬಿಸಿಬಿಸಿ ತಿಂಡಿ ತಯಾರಿಸುತ್ತಿದ್ದರೆ, ಎಂಥವರಿಗೂ ಬಿದಿರಿನ ಗಳದ ಅಂಗಡಿಗಳಲ್ಲಿ ರಸ್ತೆ ಬದಿಗೆ ಕೂತು ತಿನ್ನುವಂತೆ ಪ್ರೇರೇಪಿಸುತ್ತವೆ. ಉಬ್ಬಿ ನಿಲ್ಲುವ ಬಿಸಿಬಿಸಿ ಪೂರಿ ಅಸ್ವಾದಿಸಲು ಜಾಗಗೀಗ ಇತ್ಯಾದಿ ಗಮನಿಸಿದರೆ ದೇವ್ರಾಣೆ ಮಜ ಕಳೆದುಕೊಳ್ಳುತ್ತೇವೆ. ’ನಾಯೆಂದರ್ ಜೆಟ್ಟಿ’ಯಲ್ಲಿ ಸಿದ್ಧವಾಗಿರುವ ಬಾರ್ಜಿಗೆ, ಜನ, ಬಸ್ಸು, ಕಾರು, ಬೈಕು ಎಲ್ಲಾ ಹತ್ತಿಸಿ ಕೊಂಡು ಅರ್ಧ ಗಂಟೆಯಲ್ಲಿ ಆಚೆ ಬದಿಗಿನ ’ನಿಲಾಂಬುರ್ ಜೆಟ್ಟಿ’ ತಲುಪಿಸುತ್ತಾರೆ.

ಈ ನಿಲಾಂಬುರ್ ಜೆಟ್ಟಿಯಿಂದ ಬಾರಟಾಂಗ್ ದ್ವೀಪದ ಪುಟ್ಟದಾದ ಕಾಣಿಸದ ತೀರ ತಲುಪಿಕೊಳ್ಳಲು ಹತ್ತನ್ನೆರಡು ಜನರನ್ನು ಕೂರಿಸಿಕೊಂಡು ಹೊರಡಲು ಮೋಟಾರ್ ಬೋಟುಗಳು ಬಣ್ಣಬಣ್ಣದಲ್ಲಿ ನೀಲರಂಗಿನ ಶರಧಿಯ ಮಧ್ಯೆ ಕಂಗೊಳಿಸುತ್ತಾ ಕಾಯುತ್ತಿರುತ್ತವೆ. ಅದರಲ್ಲಿ ಸರಿ ಸುಮಾರು ಮತ್ತೆ ಅರ್ಧಗಂಟೆಯ ಪಯಣದ ನಂತರ ದಟ್ಟವಾದ ಕಾಂಡ್ಲ(ಮ್ಯಾಂಗ್ರೋವ್)ಕಾಡಿನ ಮಧ್ಯದಲ್ಲಿ ನಿರ್ಮಿಸಲಾದ ನೇರ ದಾರಿಯಲ್ಲಿ ಸುಮಾರು ಅರ್ಧ ಕಿ.ಮೀ. ನುಗ್ಗಿಸುತ್ತಾನೆ. ಇದೊಂದು ಅಪ್ಪಟ ರೋಚಕ ಮತ್ತು ನೆನಪಿನಲ್ಲುಳಿವ ದಾರಿ.

ಆಕಸ್ಮಾತ್ ಆಚೀಚೆಯಾದರೆ ಕಾಂಡ್ಲ ಮರಕ್ಕೆ ಸಿಕ್ಕಾಕಿಕೊಳ್ಳುವ, ಮತ್ತದರಿಂದ ತಪ್ಪಿಸಿ ಓಡಿಸುವ ಚಾಕಚಕ್ಯತೆ ಉಸಿರು ಬಿಗಿಹಿಡಿಸಿ ಕೂರಿಸುತ್ತದೆ. ತಲೆಯೂ ಎತ್ತಲಾಗದಂತೆ ಬಾಗಿ ಕುಳಿತುಕೊಳ್ಳುವ ಅನಿವಾರ್ಯತೆಯಲ್ಲಿ ಸುತ್ತಲಿನ ಕಾಂಡ್ಲಾ ಕಾಡು ನೀರ ಮಧ್ಯದ ಗುಹೆಯಂತೆ ಭಾಸವಾಗುತ್ತಿದ್ದರೆ, ಅಂಡಮಾನಿನ ಸಮುದ್ರ ಹಿನ್ನೀರಲ್ಲಿ ತೆರೆದುಕೊಳ್ಳುವ ಅನೂಹ್ಯ ಲೋಕವೇ ಬೇರೆ. ಆಗೀಗ ಮೋಟಾರ್ ಬೋಟು ನೇತಾಡುತ್ತಾ ಕಾಮಾನಿನಂತೆ ಬಾಗಿಕೊಂಡಿರುವ ಕಾಂಡ್ಲದ ಹುಲುಸಾದ ಟೊಂಗೆಗಳಿಗೆ ತಾಕುತ್ತಲೇ ಚಲಿಸುತ್ತಿರುತ್ತದೆ.

ಆಚೆ ದಂಡೆಯಲ್ಲಿ ಒಂದು ಮುಕ್ಕಾಲು ತಾಸಿನ ಕಾಡು ಮತ್ತು ಗದ್ದೆಗಳ ಕಾಲು ದಾರಿಯಲ್ಲಿ ನಡೆದುಕೊಂಡು ಹೊರಟರೆ ಇದೆಂತಾ ಅಂಡಮಾನು ನಮ್ಮ ಸಿದ್ಧಾಪುರ,
ಯಲ್ಲಾಪುರ ಗದ್ದೆ ಬ್ಯಾಣ ಇದ್ದಗಿಂದೆ ಮಾರಾಯ ಎನ್ನುವುದೇ. ಅಲ್ಲಿ ಸಹಸ್ರಾರು ರ್ಷಗಳ ಹಿಂದೆ ಸಮುದ್ರ ನೀರಿನ ಒತ್ತಡ ಮತ್ತು ಸುಣ್ಣದ ಶಿಲಾ ಪದರುಗಳಿಗೆ ನೀರಿನ ಕೊರೆತದಲ್ಲಿ ಉಂಟಾದ ಚಿತ್ರ ವಿಚಿತ್ರಾಕಾರದ ರಚನೆಯ ಗುಹೆಯೊಂದು ನಮ್ಮೆದುರಿಗೆ ತೆರೆದುಕೊಳ್ಳುತ್ತದೆ. ಭೂಮಿಯ ಗುರುತ್ವಾಕಾರ್ಷಣೆಯ ನಿಯಮಕ್ಕೆ ವಿರುದ್ಧವಾಗಿ ಮೇಲ್ಭಾಗದಿಂದ ಉಲ್ಟಾ ಬೆಳೆಯುತ್ತ ಕೆಳಮುಖವಾಗಿ ಚಲಿಸುತ್ತಿರುವ ರಚನೆಯ ಅಂದವೇ ಬೇರೆ. ಸಂಪೂರ್ಣವಾಗಿ ಅದರ ಅಂದವನ್ನು ಸವಿಯಲು ಪ್ರಖರ ಬೆಳಕಿನ ವ್ಯವಸ್ಥೆಯನ್ನು ನಮ್ಮನ್ನು ಕರೆದೊಯ್ಯುವ ಗೈಡ್ ಮಾಡಿರುತ್ತಾನಾ ಇಲ್ಲವೇ ಎಂಬುವುದನ್ನು ಮೊದಲೇ ಗಮನಿಸಿಕೊಂಡಿದ್ದರೆ
ಅನುಕೂಲ ಜಾಸ್ತಿ. ಇಲ್ಲದಿದ್ದರೆ ಸರಿಯಾಗಿ ಶಿಲಾರಚನೆಯ ಅಂದ ಕೈಗೆ ದಕ್ಕುವುದೇ ಇಲ್ಲ.

ಅಪ್ಪಟ ಶ್ವೇತ ವರ್ಣದಿಂದ ಹಲವು ಹಸಿರಿನ, ಹಳದಿಯ ಅಲ್ಲಲ್ಲಿ ಕೆಂಪು ವರ್ಣದ ನಿಧಾನ ಪ್ರಕ್ರಿಯೆಯ ರಚನೆಯ ಅದ್ಭುತ ಕೇವಲ ಕಣ್ಣಿಗೆ ಮಾತ್ರ ದಕ್ಕುವ ಆಕರ್ಷಕ ವಿನ್ಯಾಸ. ಕ್ಯಾಮೆರಾದ ಕಣ್ಣಿಗೆ ಅದು ಅಷ್ಟಕಷ್ಟೆ. ಹಿಂದಿರುಗುವಾಗ ಸುಮಾರು ಅರ್ಧ ಕೀ.ಮೀ. ದೂರದವರೆಗೆ ಕಾಂಡ್ಲ ಕಾಡಿನ ಆಧಾರದ ಮೇಲೆ ಕಾಲು ಸೇತುವೆ ಯನ್ನು ನಿರ್ಮಿಸಿದ್ದು ನೀರ ಮೇಲಿನ ಕಾಡಿನಲ್ಲಿ ಅದರ ಮೇಲೆ ನಡೆದು ಬರುವ ಅನುಭೂತಿಯೇ ಬೇರೆ.

ಅದೇ ದಾರಿಯಲ್ಲಿ ನಿಲಾಂಬುರ್ ಜೆಟ್ಟಿಯ ಮೂಲಕ ಹಿಂದಿರುಗಿ, ಮತ್ತೆ ಬಾರ್ಜು ಹಿಡಿದು, ಮತ್ತದೆ ಕ್ಯಾನ್ವಾಯ್ ಗಾಗಿ ಕಾಯ್ದು, ಎಲ್ಲೂ ನಿಲ್ಲದ ಮರುಪಯಣ ಮಾಡುವ ಹೊತ್ತಿಗೆ ಅಪ್ಪಟ ಸಂಜೆಯ ಕತ್ತಲು ಐದು ಗಂಟೆಗೂ ಮೊದಲೇ ಅಡರುತ್ತಿರುತ್ತದೆ. ಇಲ್ಲಿ ಸಂಜೆ ಬಹು ಬೇಗ. ಎಂದರೆ ಕೆಲವೊಮ್ಮೆ ನಾಲ್ಕೂವರೆಗೆಲ್ಲಾ ಪ್ರಖರ ಬೀದಿ ದೀಪ ಬೆಳಗಲು ಆರಂಭಿಸುತ್ತದೆ. ಉಳಿದಂತೆ ಸಂಜೆಯ ಎಂಟಕ್ಕೆಲ್ಲಾ ದ್ವೀಪ ಸ್ಥಬ್ಧಗೊಳ್ಳುತ್ತದೆ. ಅಂಡಮಾನ್ ಸಂದರ್ಶಿಸುವವರಿಗೆ ಉಳಿದೆಲ್ಲಾ ಒಂದು ಅನುಭವವಾದರೆ ಬಾರಾಟಾಂಗು ನೀಡುವ ಅನುಭವವೇ ಬೇರೆ. ಹನುಮನ ದ್ವೀಪ ಹಂಡಮಾನ, ಹನ್ನೆರಡು ಕಾಲುಗಳ ಮೇಲೆ ನಿಂತ ದ್ವೀಪ ಕಲ್ಪವೇ
ಬಾರಾಟಾಂಗ್ ಆಗಿದೆ ಎನ್ನುವ ಕತೆಯೂ ಚಾಲ್ತಿಯಲ್ಲಿದೆ.

ನೀರಿಗಿಳಿದು ಹನ್ನೆರಡಲ್ಲ ಎರಡಾದರೂ ಸಿಕ್ಕಿತಾ ಎಂದು ಕಾಲು ಹುಡುಕುವ ಉಸಾಬರಿಗೆ ಹೋಗಲಿಲ್ಲ. ಅಂಡಮಾನ್ ಎಂಬ ಅಗಾಧ ಸೈಜಿನ ದ್ವೀಪ ಕಲ್ಪದಲ್ಲಿ
ಅನಾಮತ್ತಾಗಿ ಐನೂರ ಇಪ್ಪತ್ತೇಳು ದೊಡ್ಡ, ಸಣ್ಣ ಮಧ್ಯಮ ಎಂಬೆಲ್ಲಾ ಅಳತೆಯ ಹಲವು ದ್ವೀಪಗಳಿದ್ದು ಎಲ್ಲೆಲ್ಲೂ ಬೋಟು, ಬಾರ್ಜುಗಳದ್ದೆ ಕಾರುಬಾರು. ಚೈನ್ನೈ ನಿಂದ ಐವತ್ತಕ್ಕೂ ಹೆಚ್ಚು ಗಂಟೆ ಬೇಡುವ ಹಡಗಿನ ಪಯಣ ಮೊದಲು ಬೆರಗೆನ್ನಿಸಿದರೂ ಬೋರು ಹೊಡೆಸುವುದು ಗ್ಯಾರಂಟಿ. ವಿಮಾನಯಾನ ತುಟ್ಟಿ ಎನ್ನಿಸಿದರೂ ಸಮಯದ ದೃಷ್ಠಿಯಿಂದ ವಾಸಿ. ಎಲ್ಲವೂ ಕೊಂಚ ದುಬಾರಿ ಇಲ್ಲಿ.

ಕಾರಣ ಎಲ್ಲ ಈಚೆ ದಂಡೆಯಿಂದಲೇ ಹೊರಡಬೇಕು. ಹಾಗಾಗಿ ಅಂಡಮಾನ್ ಅದರಲ್ಲೂ ಕೇವಲ ದಕ್ಷಿಣ ಅಂಡಮಾನ್ ಮಾತ್ರ ಸುಲಭಕ್ಕೆ ನಮ್ಮ ಕೆಗೆಟುಕುತ್ತದೆ. ಅದರೆ ಉತ್ತರ ದ್ವೀಪ ಭಾಗ ಇನ್ನೂ ಸರಿಯಾಗಿ ಮೊಬೈಲು ಸಿಗ್ನಲ್ಲುಗಳಿಗೆ ತೆರೆದುಕೊಂಡಿಲ್ಲ. ಹಾಗಾಗಿ ಬಾಯೆಂದರ್ ನಾಚೆಗಿನ ರಂಗತ್, ದಿಗ್ಲಿಪುರ್, ನಿಕೋ ಬಾರ್ ಇತ್ಯಾದಿಗಳ ಪಯಣ ಕಷ್ಟಕಷ್ಟ.. ಉಳಿದಂತೆ ಪ್ರವಾಸೋದ್ಯಮ ಮತ್ತು ಮತ್ಸ್ಯೋದ್ಯಮವೇ ಮೂಲ ಆದಾಯ. ಕೊಂಚ ದುಬಾರಿ ಎನ್ನಬಹುದಾದ ಪ್ರವಾಸ ಆಗುತ್ತದೆಯಾದರೂ ಈಗೀಗ ಹಲವು ಸಂಸ್ಥೆಗಳು ಏರ್ಪಡಿಸುತ್ತಿರುವ ಯೋಜಿತ ಪ್ರವಾಸ ಸಾಕಷ್ಟು ಕೈಗೆಟುಕುವಂತಹದ್ದು.