Sunday, 8th September 2024

ಭರವಸೆಯೊಂದಿಗೆ ಜೀವಿಸುವುದೇ ಬದುಕಿನ ಹ್ಯಾಪಿನೆಸ್ಸು

ಭರವಸೆ ಎಂಬುದು ಹತಾಶೆಯಿಂದ ನಮ್ಮನ್ನು ತಕ್ಷಣವೇ ಪಾರುಮಾಡಿಬಿಡುವ ಮಹತ್ತರ ಸಂಗತಿ. ಭರವಸೆ ನಮ್ಮಲ್ಲಿ ಹರ್ಷವನ್ನು, ಖುಷಿಯನ್ನು ತುಂಬುತ್ತದೆ. ಈ ಖುಷಿಗಳು ನಮ್ಮ ಮುಖದ ಹೊಳಪನ್ನು, ಕಂಗಳ ಕಾಂತಿಯನ್ನು ಹೆಚ್ಚಿಸುತ್ತವೆ. ಭರವಸೆ ಯಾರ ಬದುಕಲ್ಲೂ ಎಂದಿಗೂ ತಪ್ಪಾಗಿಲ್ಲ. ಯಾರಿಗೆ ಮನದಾಳದಲ್ಲಿ ಭರವಸೆ ಗಟ್ಟಿಯಾಗಿರುತ್ತದೆಯೋ, ಅವರಿಗೆ ಅದ್ಭುತಗಳು ಉಡುಗೊರೆಗಳಾಗಿ ಸದಾ ದೊರೆಯುತ್ತಲೇ ಇರುತ್ತವೆ.

ಸಂಬಂಧಗಳೇ ಹಾಗೆ, ಮುಗುಳುನಗೆಯಿಂದ ಶುರುವಾಗಿ ಬದುಕಿನ ಭಾಗವೇ ಆಗಿಬಿಡುತ್ತವೆ. ಸ್ಮಿತಾ ಹೆಸರಿಗೆ ತಕ್ಕ ಹಾಗೆ ಸದಾ ಮಂದಹಾಸದಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದ ವ್ಯಕ್ತಿ-ವ್ಯಕ್ತಿತ್ವ. ಕಳೆದ ವರ್ಷ ಆಕೆಯ ಜತೆ ಕಾರವಾರದ ಕಡಲ ಕಿನಾರೆಯಲ್ಲಿ ಕಳೆದ ದಿನಗಳು ನನ್ನ ಬದುಕಿನ ಅತ್ಯುತ್ತಮ, ಅದ್ಭುತ ಕ್ಷಣಗಳು. ಕಾರವಾರಕ್ಕೆ ಹೊರಡುವ ಕೆಲವೇ ತಿಂಗಳ ಮುಂಚೆ, ‘ಸ್ಮಿತಾ ಬದುಕುವುದು ಕೆಲ ದಿನಗಳು ಮಾತ್ರ’ ಎಂದು ವೈದ್ಯರು ಘೋಷಿಸಿದ್ದರು. ಕ್ಯಾನ್ಸರ್ ಆಕೆಯ ದೇಹದ ಎಲ್ಲಾ ಭಾಗವನ್ನು ಹರಡಿತ್ತು. ಮುಂಚೆ ನೀಳಗೂದಲಿನ ಒಡತಿಯಾಗಿದ್ದಾಕೆ ಸ್ಮಿತಾ; ಆದರೀಗ ಆಕೆಯ ಕೇಶರಾಶಿಯ ಜಾಗದಲ್ಲಿ ಸ್ಕಾರ್ಫ್ ಕುಳಿತಿತ್ತು…
ಸ್ಮಿತಾಳ ಪರಿಚಯ ನನಗಾದದ್ದು ವಿಶ್ವವಿದ್ಯಾಲಯದ ಮೌಲ್ಯಮಾಪನ ಕೇಂದ್ರದಲ್ಲಿ. ಆಕೆ ಬೋಧಿಸುತ್ತಿದ್ದುದೂ ಮನಶ್ಶಾಸವನ್ನೇ, ಆದರೆ ಯಲಹಂಕದ ಮತ್ತೊಂದು ಕಾಲೇಜಿನಲ್ಲಿ. ನಾವೆಲ್ಲ ಸಹೋದ್ಯೋಗಿಗಳು ಸೇರಿ ಕೊನೆಯ ದಿನಗಳಲ್ಲಿ ಆಕೆಯನ್ನು ಎಷ್ಟು ಖುಷಿಯಾಗಿರಿಸಲು ಸಾಧ್ಯವೋ, ಮೋಟಿವೇಟ್ ಮಾಡಲು ಸಾಧ್ಯವೋ ಪ್ರಯತ್ನಿಸೋಣ ಎಂದು ಸಂಕಲ್ಪಿಸಿದ್ದರ ಫಲವೇ ಈ ಕಾರವಾರ ಪ್ರವಾಸ. ಆದರೆ, ಆಕೆಯ ಲವಲವಿಕೆ, ಉತ್ಸಾಹ ನೋಡಿ ನಾವೇ ಮೋಟಿವೇಟ್ ಆದದ್ದು ಹೆಚ್ಚು! ತನ್ನ ಜೀವಿತದ ೪೧ ವರ್ಷಾವಧಿಯುದ್ದಕ್ಕೂ ಸ್ಮಿತಾಳದ್ದು ಹೋರಾಟದ ಬದುಕೇ ಆದರೂ, ಆಕೆ ಬದುಕಿನೆದುರು ಎಂದೂ ಸೋತು ನಿಲ್ಲಲಿಲ್ಲ,
ಭರವಸೆ ಕಳೆದುಕೊಳ್ಳಲಿಲ್ಲ, ಹತಾಶಳಾಗಲಿಲ್ಲ.

ಪ್ರೀತಿಸಿ ಮದುವೆಯಾದ ಹುಡುಗ ತನ್ನನ್ನು ತೊರೆದು ಬೇರೊಂದು ಮದುವೆಯಾದದ್ದು, ಸ್ವಂತ ಮಗನೇ ತನ್ನಿಂದ ಬೇರೆ ಯಾದದ್ದು ಸ್ಮಿತಾಳನ್ನು ಎಂದೂ ಕಂಗೆಡಿಸಲಿಲ್ಲ. ಈಗ ಕ್ಯಾನ್ಸರ್. ನಗುನಗುತ್ತಲೇ ಅದನ್ನು ಒಪ್ಪಿಕೊಂಡು, ಇರುವಷ್ಟು ದಿನ ಖುಷಿಯಾಗಿ ಬದುಕಿಬಿಡುವ ಹೊಸ ಹೊಸ ಸಂತಸದ ದಾರಿಗಳನ್ನು ಕಂಡುಕೊಂಡಿದ್ದಳು. ಕಡಲಿಗೆ ಮುಖಾಮುಖಿಯಾಗಿ ಕುಳಿತಿದ್ದ ಆಕೆಯನ್ನು ನಾನು ಕೇಳಿದೆ: ‘ಸ್ಮಿತಾ, ಬದುಕಿನ ಇಷ್ಟೆಲ್ಲ ಹೊಡೆತಗಳನ್ನು ತಡೆದು ಮ್ಯಾನೇಜ್ ಮಾಡಲು ನಿನಗೆ ಹೇಗೆ ಸಾಧ್ಯ ವಾಯಿತು?’. ಮುಗುಳುನಕ್ಕ ಅವಳು ಪಕ್ಕದಲ್ಲೇ ಇದ್ದ ತನ್ನ ವ್ಯಾನಿಟಿ ಬ್ಯಾಗ್‌ನಿಂದ ಚೆಂದದ ಡೈರಿಯೊಂದನ್ನು ಹೊರತೆಗೆದಳು. ತನ್ನಿಡೀ ಬದುಕಲ್ಲಿ ಸಿಕ್ಕ ಜೀವನಪಾಠಗಳು, ಪ್ರೇರಣಾದಾಯಿ ಸೂಕ್ತಿಗಳು, ಸಕಾರಾತ್ಮಕ ಸಾರೋಕ್ತಿಗಳನ್ನು ಅದರಲ್ಲಿ ಆಕೆ ದಾಖಲಿಸಿದ್ದಳು. ಡೈರಿಯ ಪುಟಗಳ ನಡುವಿನಿಂದ ಇಣುಕುತ್ತಿದ್ದ ಪತ್ರವೊಂದನ್ನು ನನ್ನ ಕೈಗಿತ್ತು ನೋಡಲು ಹೇಳಿದಳು. ಅದು ಸ್ಮಿತಾಳ ಪ್ರಾಥಮಿಕ ಶಾಲೆಯ ಟೀಚರ್ ಆಕೆಗೆ ಬರೆದಿದ್ದ ಪತ್ರ. ಅದರ ಪುಟ್ಟ ಒಕ್ಕಣೆ ಹೀಗಿತ್ತು: ‘ಡಿಯರ್ ಸ್ಮಿತಾ, ಎಷ್ಟೇ ಒದ್ದಾಟಗಳಿರಲಿ ಭರವಸೆ ಕಳೆದುಕೊಳ್ಳಬೇಡ. ಶಾಂತಿಯ ಆಲೋಚನೆ, ಭರವಸೆ, ಖುಷಿಗಳಷ್ಟೇ ನಿನ್ನ ಮನಸ್ಸನ್ನು ತುಂಬಲಿ. Never give up until god calls you…’

ನಮ್ಮೆಲ್ಲರ ಕಣ್ಣಂಚಲಿ ನೀರಿದ್ದರೆ, ಸ್ಮಿತಾಳ ಮುಖದಲ್ಲಿ ಪುಟಿದೇಳುವ ಭರವಸೆ, ಬದುಕನ್ನು ಮತ್ತೆ ಮತ್ತೆ ಬದುಕುವ ಉತ್ಸಾಹ, ತುಂಬು ಜೀವನಪ್ರೀತಿ. ಕ್ಯಾನ್ಸರ್ ಜತೆ ಹೋರಾಡುತ್ತಲೇ ‘ಲೈಫ್ ಸ್ಕಿಲ್ಸ್ ಆಂಡ್ ಮೋಟಿವೇಷನ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್’ ಕಟ್ಟಿ, ಕರ್ನಾಟಕದ ಅನೇಕ ವಿದ್ಯಾರ್ಥಿಗಳ ಬದುಕಲ್ಲಿ ಬದಲಾವಣೆ ತಂದಳು. ತನ್ನಂತೆಯೇ ಕ್ಯಾನ್ಸರ್‌ಗೆ ಒಳಗಾಗಿದ್ದವರಿಗೆ ಚೈತನ್ಯ ತುಂಬಲು ‘ಹೇರ್ ಡೊನೇಷನ್ ಕ್ಯಾಂಪ್’ ಶುರುಮಾಡಿ ಕೂದಲು ಸಂಗ್ರಹಿಸಿ ವಿಗ್ ತಯಾರಿಸಿ, ಅವರಲ್ಲಿ ಮತ್ತೆ ಭರವಸೆ ತುಂಬುವ ಕೆಲಸ ಮಾಡಿದಳು. ಅವಳ ಖುಷಿಗಳಿಗೆ ಕೊನೆಯಿರಲಿಲ್ಲ. ಮತ್ತೆ ಪಾಂಡಿಚೆರಿ ಕಡಲತೀರಕ್ಕೆ ಹೋಗಬೇಕೆಂದಿದ್ದಳು. ಇದಾಗಿ ಎರಡೇ ತಿಂಗಳಲ್ಲಿ ಸದ್ದಿಲ್ಲದೆ ನಮ್ಮನ್ನು ಬಿಟ್ಟು ನಡೆದಿದ್ದಳು. ಕೊರೆವ ಚಳಿಯ ಮಧ್ಯೆ ನೂರಾರು ಸ್ನೇಹಿತರು, ವಿದ್ಯಾರ್ಥಿಗಳು ಅವಳನ್ನು ಬೀಳ್ಕೊಟ್ಟಿದ್ದರು. ನನ್ನ ಪ್ರಕಾರ, ಉಸಿರಿನ ಕಡೆಯವರೆಗೂ ಸ್ಮಿತಾಳಲ್ಲಿದ್ದ ಭರವಸೆ ಸಂಪೂರ್ಣ ವಾಯಿತೋ ಇಲ್ಲವೋ, ಆದರೆ ವ್ಯರ್ಥವಂತೂ ಆಗಲಿಲ್ಲ. ಏಕೆಂದರೆ ಸ್ಮಿತಾ ನಿನ್ನೆಗಳಲ್ಲಿ ಬದುಕಲಿಲ್ಲ ಅಥವಾ ನಾಳೆಗಳ ಬಗ್ಗೆ ಚಿಂತಿಸಲಿಲ್ಲ; ಭರವಸೆಯೊಂದಿಗೆ ವರ್ತಮಾನದ ಕ್ಷಣಗಳಿಗೆ ಹರ್ಷೋಲ್ಲಾಸವನ್ನು ತುಂಬುತ್ತಾ ಹೋದಳು.

ಭರವಸೆ ಎಂಬುದು ಹತಾಶೆಯಿಂದ ನಮ್ಮನ್ನು ತಕ್ಷಣವೇ ಪಾರುಮಾಡಿಬಿಡುವ ಮಹತ್ತರ ಸಂಗತಿ. ನಾವೆಲ್ಲಾ ತುಂಬಾ ‘ಕಾನಿಡೆಂಟ್’ ಆಗಿರುವುದು ಈ ಕ್ಷಣದಲ್ಲಿ. ನಮ್ಮಯ ಈ ಕ್ಷಣದ ರಿವಾರ್ಡೇ ಈ ಭರವಸೆ ಅಥವಾ
ಹೋಪ್. ಭರವಸೆ ನಮ್ಮಲ್ಲಿ ಹರ್ಷವನ್ನು, ಖುಷಿಯನ್ನು ತುಂಬುತ್ತದೆ. ಈ ಖುಷಿಗಳು ನಮ್ಮ ಮುಖದ ಹೊಳಪನ್ನು, ಕಂಗಳ ಕಾಂತಿಯನ್ನು ಹೆಚ್ಚಿಸುತ್ತವೆ. ಭರವಸೆ ಯಾರ ಬದುಕಲ್ಲೂ ಎಂದಿಗೂ ತಪ್ಪಾಗಿಲ್ಲ. ನನಗನಿಸುತ್ತಿರುವುದು, ಸ್ಮಿತಾ ಸತ್ತಿಲ್ಲ ಬದಲಿಗೆ ಭರವಸೆಯೊಂದಿಗೆ ಬದುಕಿನ ಜತೆ ಹೋರಾಡುವ ಪಾಠವಾಗಿ ಸದಾ ನಮ್ಮ ಜತೆ ಜೀವಂತವಾಗಿದ್ದಾಳೆಂದು. ಒಂದು ಜಗತ್ತಿಗೆ ಆಕೆ ಇನ್ನಿಲ್ಲವಾಗಿರ ಬಹುದು, ಆದರೆ ಮತ್ತೊಂದು ಜಗತ್ತಿನಲ್ಲಿ ಆಕೆ ನಿರಂತರವಾಗಿದ್ದಾಳೆ. ಪ್ರತಿಕ್ಷಣವೂ ಹೊಸ ಸಾಧ್ಯತೆ, ಖುಷಿ, ಭರವಸೆಗಳೊಂದಿಗೆ ಬದುಕುವುದೇ ನಾವೆಲ್ಲರೂ ಪಡೆದುಕೊಳ್ಳಬಹುದಾದ ನಿಜವಾದ ಮೋಕ್ಷ. ನಮ್ಮ ಜಾಡ್ಯದ ಮನಸ್ಥಿತಿಗೆ
ಪ್ರೇರಣೆ ತುಂಬುವುದೇ ಭರವಸೆ. ಆದರೆ ಇದಕ್ಕಾಗಿ, ಒಂದರ ಬದಲಿಗೆ ಮತ್ತೊಂದನ್ನು ರೀಪ್ಲೇಸ್ ಮಾಡಿಕೊಳ್ಳುವುದಕ್ಕೆ ನಾವು ಸಿದ್ಧರಿರಬೇಕು. ನಮ್ಮ ಸಿನಿಕತೆಗಳನ್ನು ಹೊಸ ಸಾಧ್ಯತೆಗಳನ್ನಾಗಿ ಬದಲಾಯಿಸಿಕೊಳ್ಳಬೇಕು. ಅಂತೆಯೇ, ಕುರುಡು ಅನುಮಾನಗಳನ್ನು ಕಣ್ತೆರೆಸುವ ನಂಬಿಕೆಗಳಿಂದ, ರಕ್ಷಣಾತ್ಮಕ ಭಯಗಳನ್ನು ಗ್ರಹಿಕೆಯ ಪ್ರೀತಿಯಿಂದ, ಅಪ್ರಾಮಾಣಿಕ ನಿರಾಕರಣೆಗಳನ್ನು ಪ್ರಾಮಾಣಿಕ ತಪ್ಪೊಪ್ಪಿಗೆ ಗಳಿಂದ, ಅಪರಾಧಿ ಮನೋಭಾವನೆಯನ್ನು ಕ್ಷಮೆಯಿಂದ, ತೆಗಳುವಿಕೆಯನ್ನು ಹೊಗಳುವಿಕೆಯಿಂದ ಬದಲಾಯಿಸಿಕೊಳ್ಳೋಣ. ಒಂಟಿತನವನ್ನು ಒಗ್ಗಟ್ಟಿನ ಮೂಲಕ ಬಲಗೊಳಿಸೋಣ. ಅಹಮಿಕೆಯು ಆತ್ಮಗೌರವವಾಗಿ ಬದಲಾಗಲಿ. ಈ ಬದಲಾವಣೆಗಳು ನಮ್ಮ ಮನಸ್ಸಲ್ಲಿ ಹೊಸ ಖುಷಿಗಳನ್ನು, ಕನಸುಗಳನ್ನು ತುಂಬುತ್ತವೆ.

ಮುಗಿಸುವ ಮುನ್ನ:
ಒಂದೂರಲ್ಲೊಬ್ಬ ವ್ಯಾಪಾರಿಯಿದ್ದ. ಆತ ದಿನೇದಿನೆ ತನ್ನ ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸುತ್ತಿದ್ದ. ಈ ನಷ್ಟವನ್ನು ಸರಿದೂಗಿಸಲು ತನ್ನ ಬಳಿಯಿದ್ದ ಎಲ್ಲವನ್ನೂ ಮಾರಾಟ ಮಾಡುತ್ತಲಿದ್ದ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಅವನ ಮಗ ತಂದೆಯ ಬಳಿಬಂದು, ‘ಮನೆಯಲ್ಲಿರುವ ವಸ್ತುಗಳನ್ನೆಲ್ಲ ಮಾರಿ ನಷ್ಟವನ್ನು ಸರಿದೂಗಿಸುವ ಬದಲು, ವ್ಯಾಪಾರವನ್ನೇ ನಿಲ್ಲಿಸಿ ಬೇರೇನನ್ನಾದರೂ ಮಾಡಬಾರದೇಕೆ?’ ಎಂದು ಪ್ರಶ್ನಿಸಿದ. ಆಗ ವ್ಯಾಪಾರಿ ಮುಗುಳ್ನಗುತ್ತಾ, ‘ಮಗನೇ, ಬದುಕಲ್ಲಿ ಅನೇಕ ಸವಾಲುಗಳು ನಮ್ಮೆದುರಿಗೆ ಬಂದು ನಿಲ್ಲುತ್ತವೆ. ಆಗ ನಾವು ನಂಬಿಕೆಯನ್ನು, ಭರವಸೆಯನ್ನು ಕಳೆದುಕೊಳ್ಳದೆ ಆ ಸವಾಲುಗಳನ್ನು ಎದುರಿಸಬೇಕು’ ಎಂದು ಉತ್ತರಿಸಿದ. ಆಗ ಮಗ, ‘ಭರವಸೆ ನಮಗೆ ಯಾವ ರೀತಿಯಲ್ಲಿ ಸಹಾಯ ಮಾಡುತ್ತದೆ’ ಎಂದು ತಂದೆಯನ್ನು ಮರುಪ್ರಶ್ನಿಸಿದ. ‘ಇದನ್ನು ವಿವರಿಸುವುದಕ್ಕಿಂತ ನಿನ್ನ ಅನುಭವಕ್ಕೆ ಬರುವಂತೆ ಮಾಡುತ್ತೇನೆ’ ಎಂದ ವ್ಯಾಪಾರಿ ತನ್ನ ಮಗನನ್ನು ಬಾವಿಯೊಂದರ ಬಳಿಗೆ ಕರೆದೊಯ್ದ. ಮಗನಿಗೆ ಈಜು ಬರುತ್ತಿರಲಿಲ್ಲ. ಇದನ್ನು ತಿಳಿದಿದ್ದ ವ್ಯಾಪಾರಿ, ಮಗನಿಗೆ ಅರಿವಾಗದ ರೀತಿಯಲ್ಲಿ ಅಥವಾ ಅನಿರೀಕ್ಷಿತ ಎನಿಸುವಂತೆ ಅವನನ್ನು ನೀರಿಗೆ ತಳ್ಳಿಬಿಟ್ಟ.

ಜತೆಗೆ ಮಗ ಏನು ಮಾಡಬಹುದೆಂದು ಅಲ್ಲಿಯೇ ಅವಿತು ಕುಳಿತು ನೋಡತೊಡಗಿದ. ಭಯಗೊಂಡ ಮಗ, ಬಾವಿಯ ನೀರಿನಲ್ಲಿ ೫ ನಿಮಿಷಗಳ ಕಾಲ ಕೈಕಾಲುಗಳನ್ನು ಬಡಿದು ತನ್ನನ್ನು ತಾನು ಬದುಕಿಸಿಕೊಳ್ಳಲು ಪ್ರಯತ್ನಿಸಿದ. ಇನ್ನೇನು ಆತ ಸಂಪೂರ್ಣ ಮುಳುಗಿಹೋಗಬೇಕು, ಅಷ್ಟರಲ್ಲಿ ವ್ಯಾಪಾರಿ ಬಾವಿಗೆ ಜಿಗಿದು ಮಗನನ್ನು ರಕ್ಷಿಸಿದ. ಮಾರನೆಯ ದಿನ ವ್ಯಾಪಾರಿ ಮತ್ತೆ ಮಗನನ್ನು ಬಾವಿಯ ಬಳಿ ಕರೆದುಕೊಂಡು ಹೋದ, ಮತ್ತೊಮ್ಮೆ ಅದರೊಳಕ್ಕೆ ತಳ್ಳಿದ. ಈ ದಿನ ಮಗ ೧೫ ನಿಮಿಷಗಳ ಕಾಲ ತನ್ನ ಹೋರಾಟವನ್ನು ಮಂದುವರಿಸಿದ; ಇನ್ನೇನು ಮಗ ಮುಳುಗಿಹೋಗುತ್ತಾನೆ ಎನ್ನುವಾಗ ವ್ಯಾಪಾರಿ ಬಾವಿಗೆ ಮತ್ತೆ ಜಿಗಿದು ಮಗನನ್ನು ರಕ್ಷಿಸಿದ. ಬಾವಿಯಿಂದ ಮೇಲೆ ಬಂದ ನಂತರ ಮಗನನ್ನು ವ್ಯಾಪಾರಿ, ‘ಬದುಕುಳಿಯುವ ನಿಟ್ಟಿನಲ್ಲಿ ನೀನು ನಿನ್ನೆಗಿಂತ ಹೆಚ್ಚು ಅವಧಿಯವರೆಗೆ ಹೇಗೆ ಪ್ರಯತ್ನಿಸಿದೆ?’ ಎಂದು ಕೇಳಿದ.

ಅದಕ್ಕೆ ಮಗ, ‘ನಿನ್ನೆ ನೀನು ಬಂದು ನನ್ನನ್ನು ರಕ್ಷಿಸುವೆ ಎಂಬುದು ನನಗೆ ತಿಳಿದರಲಿಲ್ಲ, ಹೀಗಾಗಿ ಹೆಚ್ಚು ಭಯವಿತ್ತು. ಆದರೆ ಇವತ್ತು ನೀನು ಖಂಡಿತ ಬಂದು ನನ್ನನ್ನು ರಕ್ಷಿಸುತ್ತೀಯ ಎಂಬ ನಂಬಿಕೆ, ಭರವಸೆ
ನನಗಿತ್ತು. ಹಾಗಾಗಿ ನನ್ನನ್ನು ನಾನು ಬದುಕಿಸಿಕೊಳ್ಳಲು ಹೆಚ್ಚು ಪ್ರಯತ್ನ ಪಡಲು ಸಾಧ್ಯವಾಯಿತು’ ಎಂದ. ಆಗ ವ್ಯಾಪಾರಿ ಮಗನಿಗೆ ಹೇಳಿದ: ‘ಇದೇ ಬದುಕಿನ ಭರವಸೆಯ, ನಂಬಿಕೆಯ ಪಾಠವೂ ಹೌದು. ನಾವು ಹೆಚ್ಚು ಹೆಚ್ಚು ಪ್ರಯತ್ನಿಸಿದಷ್ಟೂ ಆ ಪ್ರಯತ್ನ ನಮ್ಮ ಕೈಹಿಡಿದು ನಮ್ಮನ್ನು ಮೇಲಕ್ಕೆತ್ತುತ್ತದೆ, ದಡ ಸೇರಿಸುತ್ತದೆ. ಭರವಸೆಯು ಖುಷಿಯ ಸಂಗಾತಿ, ಯಶಸ್ಸಿನ ತಾಯಿ. ಯಾರಿಗೆ ಮನದಾಳದಲ್ಲಿ ಭರವಸೆ ಗಟ್ಟಿಯಾಗಿ
ರುತ್ತದೆಯೋ, ಅವರಿಗೆ ಅದ್ಭುತಗಳು ಉಡುಗೊರೆಗಳಾಗಿ ಸದಾ ದೊರೆಯುತ್ತಲೇ ಇರುತ್ತವೆ!’.

Leave a Reply

Your email address will not be published. Required fields are marked *

error: Content is protected !!