ವೈದ್ಯ ವೈವಿಧ್ಯ
drhsmohan@gmail.com
ಚಿಕಿತ್ಸೆ ಸರಿಯಾಗಿ ನೀಡಲಿಲ್ಲ ಎಂದು ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ಮಾಡಿ ಅವರ ಪ್ರಾಣವನ್ನೇ ತೆಗೆದ ಘಟನೆ ಕಳೆದ ವರ್ಷ ಅಸ್ಸಾಂನಿಂದ ವರದಿಯಾಗಿತ್ತು.
ಪಶ್ಚಿಮ ಬಂಗಾಳ, ಮುಂಬಯಿ, ಹೈದರಾಬಾದ್ ಹಾಗೂ ಭಾರತದ ಹಲವು ಭಾಗಗಳಲ್ಲಿ ವೈದ್ಯರ ಮೇಲೆ ಹಲ್ಲೆ, ಹಿಂಸೆ ಹಾಗೂ ಆಸ್ಪತ್ರೆಗಳನ್ನು ಧ್ವಂಸ ಮಾಡಿದ ಘಟನೆಗಳು ಕಳೆದ ೩-೪ ವರ್ಷಗಳಲ್ಲಿ ಬಹಳಷ್ಟು ವರದಿಯಾಗಿವೆ. ಈ ಬಗೆಗೆ ವೈದ್ಯರಾದ
ನಾವು ಒಂದು ರೀತಿಯಲ್ಲಿ ಯೋಚಿಸಿ ಪ್ರತಿಕ್ರಿಯಿಸಿದರೆ, ಭಾರತದ ಖ್ಯಾತ ಲೇಖಕ, ಕಾದಂಬರಿಕಾರ, ಚಿತ್ರರಂಗದ ಸಾಹಿತಿ ಚೇತನ್ ಭಗತ್‌ರು ಇತ್ತೀಚೆಗೆ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯಲ್ಲಿ ಪ್ರಕಟಿಸಿದ ಒಂದು ಲೇಖನ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿದೆ, ಪ್ರಚಲಿತ ಗೊಂಡಿದೆ.
ಇದರಲ್ಲಿ ಅವರು ತಿಳಿಸಿದ ವಿಷಯಗಳು ಹೆಚ್ಚು ಸತ್ಯವನ್ನೊಳಗೊಂಡಿದೆ ಎಂಬ ಅನಿಸಿಕೆಯಲ್ಲಿ ಅದರ ಭಾವಾನುವಾದ ಈ ಕೆಳಗೆ ಮಾಡಿದ್ದೇನೆ. ಅದನ್ನು ಓದಿ, ನಂತರ ಆ ಬಗ್ಗೆ ಸ್ವಲ್ಪ ವಿಶ್ಲೇಷಿಸೋಣ.
ವೈದ್ಯರನ್ನು ಹೊಣೆಯಾಗಿಸಬೇಡಿ: ನಾನು ಶಾಲೆಗೆ ಹೋಗುವಾಗ ನನ್ನ ಹಲವಾರು ಸ್ನೇಹಿತರು ಪ್ರವೇಶ ಪರೀಕ್ಷೆಗೆ ಸಿದ್ಧತೆ ಆರಂಭಿಸುತ್ತಿದ್ದರು. ವಿeನದ ವಿದ್ಯಾರ್ಥಿಗಳಿಗೆ ಆಗ ಪ್ರಾಯಶಃ ಈಗಲೂ ವೈದ್ಯಕೀಯ ಮತ್ತು ಎಂಜಿನಿಯ ರಿಂಗ್ – ಈ ಎರಡು ತುಂಬಾ ಜನಪ್ರಿಯ ಆಯ್ಕೆಗಳು. ನಾನು ಎಂಜಿನಿಯರಿಂಗ್ ಆಯ್ದುಕೊಂಡೆ. ಪ್ರಸ್ತುತ ನಮ್ಮ ದೇಶದಲ್ಲಿ ಡಾಕ್ಟರುಗಳ ಪರಿಸ್ಥಿತಿ ನೋಡಿದಾಗ ನಾನು ವೈದ್ಯನಾಗಲಿಲ್ಲವಲ್ಲ ಎಂದು ನನಗೇ ನಾನು ಅಭಿನಂದಿಸಿಕೊಳ್ಳುತ್ತಿದ್ದೇನೆ.
ಭಾರತದಲ್ಲಿ ಡಾಕ್ಟರುಗಳು ಈ ಎಲ್ಲ ಆಗಬೇಕು ಎಂದು ನಾವು ನಿರೀಕ್ಷೆ ಮಾಡುತ್ತೇವೆ. – ಅವರು ಬಹಳ ಬುದ್ಧಿವಂತರಾಗಿರ ಬೇಕು, ೧೦-೧೨ ವರ್ಷಗಳ ಕಾಲ ವ್ಯಾಸಂಗ ಮಾಡಲು ಸಿದ್ಧರಿರಬೇಕು, ಪ್ರತಿಕೂಲ ಪರಿಸ್ಥಿತಿಯಲ್ಲಿ ಕೆಲಸ ಮಾಡಲು ತಯಾರಿರಬೇಕು (ಗ್ರಾಮೀಣ ಭಾಗದಲ್ಲಿ ಸೇವೆ ಮಾಡುವುದೂ ಸೇರಿ), ಹಣಗಳಿಸುತ್ತಿರುವುದರ ಬಗ್ಗೆ ತಪ್ಪಿತಸ್ಥ ಮನೋಭಾವ ಹೊಂದಿರಬೇಕು, ಚಿಕಿತ್ಸೆಯ ಸಂದರ್ಭದಲ್ಲಿ ಏನೇ ತೊಂದರೆ ಬಂದರೂ ತಾವೇ ಜವಾಬ್ದಾರರಾಗಬೇಕು.
ರೊಚ್ಚಿಗೆದ್ದ ಗುಂಪಿನಿಂದ (ರೋಗಿಗಳ ಸಂಬಂಧಿಕರು ಹಾಗೂ ಇತರರು) ಆಗಾಗ ಹಗೆ ಒಳಗಾಗಲು ತಯಾರಿರಬೇಕು.
ನಮ್ಮ ಜೀವಗಳನ್ನು ಬಹಳಷ್ಟು ಬಾರಿ ಉಳಿಸುವ ವ್ಯಕ್ತಿಗಳಿಗೆ ನಾವು ಪ್ರತಿಕ್ರಿಯಿಸುವ ರೀತಿಯೇ ಇದು ? ನಮ್ಮ ದೇಶದ ರಾಷ್ಟ್ರೀಯತೆಯ ಮಂತ್ರ ಉಚ್ಚಮಟ್ಟದಲ್ಲಿ ಹರಿಯುತ್ತಿರುವ ಈ ಸಂದರ್ಭದಲ್ಲಿ ಇವೆಲ್ಲ ಆಗುತ್ತಿವೆ. ಚಲನಚಿತ್ರಗಳಲ್ಲಿ, ಟಿವಿ ಕಾರ್ಯಕ್ರಮಗಳಲ್ಲಿ ನಮ್ಮ ಸೈನಿಕರನ್ನು ಹಾಡಿ ಹೊಗಳಲಾಗುತ್ತಿದೆ.
ಹೌದು, ಸೈನಿಕರು ಮುಖ್ಯರೇ. ಅವರು ನಮ್ಮ ನಾಡಿನ ಗಡಿ ಪ್ರದೇಶಗಳನ್ನು ಸತತವಾಗಿ ಕಾದು ನಮ್ಮನ್ನು ರಕ್ಷಿಸುತ್ತಿದ್ದಾರೆ. ಆದರೆ ಅದು ಎಲ್ಲ ಸಮಯಗಳಲ್ಲಿ ಅಲ್ಲ. ಯುದ್ಧದ ಸಮಯಗಳಲ್ಲಿ, ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ತಮ್ಮ ಈ
ಕೆಲಸ ಮಾಡುತ್ತಾರೆ. ಆದರೆ ವೈದ್ಯರು ಹಾಗಲ್ಲ. ಪ್ರತಿದಿನ ನಮ್ಮ ಜೀವನದಲ್ಲಿ ಮುಖ್ಯರಾಗುತ್ತಾರೆ. ಹಲವರ ಪ್ರಾಣ ಉಳಿಸಲು ಶ್ರಮಿಸುತ್ತಿರುತ್ತಾರೆ. ಆದರೆ ನಾವೇಕೆ ಅವರನ್ನು ಥಳಿಸುತ್ತಿದ್ದೇವೆ, ಹಿಂಸಿಸುತ್ತಿದ್ದೇವೆ? ಮಾನವನಿಗೆ ಗೊತ್ತಿರುವ ವೃತ್ತಿಗಳಲ್ಲಿ ಗೌರವಾನ್ವಿತ ವೃತ್ತಿಯಾದ ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ನಾವು ಹೀಗೆ ಮಾಡುವುದು ಸರಿಯೇ ? ಇದಕ್ಕೆ ಬಹಳಷ್ಟು ಕಾರಣಗಳಿವೆ.
ನಮ್ಮ ದೇಶದ ಶಿಥಿಲ ಅಥವಾ ಹಾಳಾದ ಆರೋಗ್ಯ ವ್ಯವಸ್ಥೆಗೆ ನಮಗೆ ಒಬ್ಬರು ಹರಕೆಯ ಕುರಿ ಬೇಕಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ನಮ್ಮದು ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶ, ತೃತೀಯ ಜಗತ್ತಿನ ದೇಶ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. ಹಾಗಾಗಿ ಆ ದೇಶಗಳಿಗಿಂತ ನಮ್ಮಲ್ಲಿ ಹಣಬಲ ಎಷ್ಟೆಂದರೂ ಕಡಿಮೆಯೇ. ಅದು ಬದಲಾದ ಹೊರತು ಕೋಟ್ಯಂತರ ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ವ್ಯವಸ್ಥಿತವಾದ ಆರೋಗ್ಯ ಅಥವಾ ವೈದ್ಯಕೀಯ ವ್ಯವಸ್ಥೆ ಇನ್ನೂ ಮರೀಚಿಕೆಯೇ ಸರಿ.
ಆಸ್ಪತ್ರೆಗಳನ್ನು ನಡೆಸುವುದು, ಹಲವಾರು ಪರೀಕ್ಷೆಗಳನ್ನು ಕೈಗೊಳ್ಳುವುದು, ಅಮೂಲಾಗ್ರ ಚಿಕಿತ್ಸೆ ಗೈಯುವುದು, ದುಬಾರಿ ಔಷಧಗಳ ಉಪಯೋಗ, ಶಸಚಿಕಿತ್ಸೆ ಮಾಡುವುದು – ಈ ಎಲ್ಲದಕ್ಕೂ ಬಹಳಷ್ಟು ಹಣ ಬೇಕೇ ಬೇಕು. ಇದರಲ್ಲಿ ಎಲ್ಲ ಒಳ್ಳೆಯ ಗುಣಮಟ್ಟದ್ದು ಬೇಕು ಎಂದರೆ ಅದು ದುಬಾರಿ ಅಥವಾ ಹೆಚ್ಚು ಬೆಲೆಯುಳ್ಳದ್ದು ಆಗಿಯೇ ಆಗುತ್ತದೆ. ಅಲ್ಲದೆ ನಿಮ್ಮನ್ನು ಚಿಕಿತ್ಸೆ ಮಾಡುತ್ತಿರುವ ವೈದ್ಯರು ಒಂದು ಉತ್ತಮ ಗುಣಮಟ್ಟದವರಾಗಿರಬೇಕು.
ಹೀಗೆ ಉತ್ತಮ ಗುಣಮಟ್ಟದವರಾಗಿರಬೇಕು ಎಂದಾದಾಗ ಈ ವೃತ್ತಿಗೆ ಉನ್ನತ ಪ್ರತಿಭೆಯ ವ್ಯಕ್ತಿಗಳು ಬರುವಂತಿರಬೇಕು. ಹಾಗಿದ್ದಾಗ ಈ ಉನ್ನತ ಪ್ರತಿಭೆಯನ್ನು ಗೌರವಿಸಬೇಕು. ಅದನ್ನು ಸರಿಯಾಗಿ ಬೆಳೆಸಬೇಕು, ಇದರಲ್ಲಿ ಯಾವುದೇ ರೀತಿಯ ಇಸಂ ಮತ್ತು ರಾಜಕೀಯ ಬೆರೆಸಬಾರದು. ಆದರೆ ನಾವು ಅದರ ವಿರುದ್ಧವಾದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೇವೆ. ಒಬ್ಬ ಪ್ರತಿಭಾವಂತ ಯುವಕ ಈ ದೇಶದಲ್ಲಿ ಡಾಕ್ಟರ್ ಆಗುವ ತಪ್ಪು ಮಾಡಿದರೆ ಆತ ಎಲ್ಲರನ್ನೂ ರಕ್ಷಿಸಬೇಕೆಂದು ನಿರೀಕ್ಷೆ ಮಾಡುತ್ತೇವೆ. ತನ್ನದೇ ರೀತಿಯ ಬೇರೆ ವೃತ್ತಿಯಲ್ಲಿರುವವರಿಗಿಂತ ಕಡಿಮೆ ಫೀಸ್ ತೆಗೆದುಕೊಳ್ಳಬೇಕು.
ತಮ್ಮ ವೃತ್ತಿಯಲ್ಲಿ ಸುರಕ್ಷತೆಯೇ ಇಲ್ಲ ಎನ್ನುವ ರೀತಿಯ ವಾತಾವರಣ ಬಂದರೂ ಸಹಿಸಿಕೊಂಡಿರಬೇಕು. ಹೀಗೆ ಎಲ್ಲ ಋಣಾತ್ಮಕ ರೀತಿಯ ವರ್ತನೆಗಳಿಗೆ ಹೊಂದಿಕೊಳ್ಳಬೇಕು. ಈ ರೀತಿಯ ವರ್ತನೆ ಸರಿಯಿಲ್ಲ ಎಂದು ಡಾಕ್ಟರುಗಳು ಪ್ರತಿರೋಧ
ತೋರಿಸಿದರೆ ವೈದ್ಯ ವೃತ್ತಿ ತುಂಬಾ ಸೇವೆಗೈಯ್ಯುವ ವೃತ್ತಿ, ಹಾಗಿದ್ದರೆ ನೀವೇಕೆ ಡಾಕ್ಟರ್ ಆದಿರಿ? ಎಂದು ಅವರನ್ನೇ ಪ್ರಶ್ನೆ ಮಾಡುತ್ತೇವೆ. ಹೀಗೆಲ್ಲ ಪ್ರತಿಕೂಲ ವಾತಾವರಣ ನಮ್ಮ ದೇಶದಲ್ಲಿರುವಾಗ ನಮ್ಮಲ್ಲಿನ ಉತ್ತಮ ಡಾಕ್ಟರುಗಳು ವಿದೇಶಕ್ಕೆ
ಪಲಾಯನಗೈಯ್ಯುತ್ತಾರೆ – ಇದು ಒಂದು ರೀತಿ.
ಇನ್ನು ಯುವಕರು ವೈದ್ಯಕೀಯ ವೃತ್ತಿಗೇ ಬರದೆ ಬೇರೆ ವೃತ್ತಿಯನ್ನು ಆಯ್ದುಕೊಳ್ಳುತ್ತಿದ್ದಾರೆ. ಭಾರತದಲ್ಲಿ ಒಂದು ಕೆಟ್ಟ ಪ್ರವೃತ್ತಿ ಬೆಳೆದು ಬಂದಿದೆ. ಯಾವುದಾದರೂ ಒಂದು ಒಳ್ಳೆಯ ವಿಚಾರವಿದ್ದರೆ ಯಾವುದೋ ಒಂದು ರಾಜಕೀಯ ಬೆರೆಸಿ ಅದನ್ನು ಹಾಳುಗೆಡವಿ ಬಿಡುವುದು. ಎಷ್ಟೆಂದರೂ ಈ ರಾಜಕೀಯ ಎಂದರೆ ಜನರ ಹೇಳಿಕೆ ಎಂದು ಅರ್ಥೈಸುತ್ತಾರೆ. ನಮ್ಮಲ್ಲಿ ಒಳ್ಳೆಯ
ಶಾಲೆಗಳಿದ್ದರೆ ಅವಕ್ಕೆ ಒಂದು ಸಾವಿರ ಕಾನೂನು, ಕಟ್ಟಳೆ ಹೇರಿಬಿಡುವುದು. ನಮ್ಮಲ್ಲಿ ಮೆಟ್ರೋ ರೈಲು ಒಳ್ಳೆಯದಾಗಿ ಬೆಳವಣಿಗೆಯಾಗಿದೆ, ಸರಿಯಾಗಿ ನಡೆಯುತ್ತಿದೆ ಅಂತ ಭಾವಿಸಿ.
ಅದರಲ್ಲಿ ಮಹಿಳೆಯರಿಗೆ ಉಚಿತ – ಎಂದು ಕಾನೂನು ಮಾಡಿ ಆ ಮೆಟ್ರೋ ನಷ್ಟದಲ್ಲಿ ನಡೆಯುವ ಹಾಗೆ ಮಾಡಿಬಿಡುತ್ತಾರೆ. ಇದರಲ್ಲಿ ನಾವು ಒಂದು ಸತ್ಯವನ್ನು ಮನಗಾಣುತ್ತಿಲ್ಲ. ಶಾಲೆಗಳ ಮೇಲೆ ಅನಗತ್ಯ ಕಾನೂನು ಕಟ್ಟಳೆ ಹಾಕಿದರೆ, ಮೆಟ್ರೋಗಳು ಸರಿಯಾಗಿ ನಡೆಯದ ರೀತಿ ಆದಾಗ, ಒಳ್ಳೆಯ ಶಾಲೆಗಳು ಮತ್ತು ಹೆಚ್ಚಿನ ಮೆಟ್ರೋಗಳು ಬರುವುದು ಸ್ಥಗಿತಗೊಳ್ಳುತ್ತದೆ.
ಹಾಗೆಯೇ ವೈದ್ಯರನ್ನು ಈ ರೀತಿ ಹಿಂಸಿಸಿದರೆ ಸಮಾಜದ ಒಳ್ಳೆಯ ಪ್ರತಿಭೆ ಈ ವೃತ್ತಿಗೇ ಬರುವುದಿಲ್ಲ.
ವೈದ್ಯರುಗಳು ನಿಸ್ವಾರ್ಥಿಗಳಾಗಿರಬೇಕು ಎಂದು ನಾವು ನಿರೀಕ್ಷಿಸುತ್ತೇವೆ. ಅವರು ತಮ್ಮ ಎಲ್ಲ ವೈಯಕ್ತಿಕ ವಿಚಾರಗಳನ್ನು ಬದಿಗಿಟ್ಟು ದಿವಸದ ೨೦ ಗಂಟೆಗಳಾದರೂ ಜನರನ್ನು ಚಿಕಿತ್ಸೆ ಮಾಡಬೇಕು, ಹಾಗೆಯೇ ಅವರು ಹಣ ಗಳಿಸಬಾರದೆಂದು
ಹೆಚ್ಚಿನ ಜನರ ಅಪೇಕ್ಷೆ. ಇದು ಸರಿಯೇ? ಖಂಡಿತಾ ಸರಿಯಲ್ಲ. ಹೌದು, ವೈದ್ಯರು ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತಿದ್ದಾರೆ,
ಹಾಗೆಂದು ಅವರು ತಮ್ಮ ಲಾಭವನ್ನು ನಿರೀಕ್ಷಿಸುವುದು ತಪ್ಪು, ಅವರ ಅಗತ್ಯ ಮತ್ತು ಸುಖಗಳನ್ನು ನಿರ್ಲಕ್ಷ ಮಾಡಬೇಕು ಎಂದು ಹೇಳಲು ಬರುವುದಿಲ್ಲ.
ಹೌದು, ಜಗತ್ತಿನಲ್ಲಿ ಸಮಾಜಕ್ಕೆ ಬಹಳ ಒಳ್ಳೆಯದು ಮಾಡಿ ತಾವು ಏನೂ ನಿರೀಕ್ಷೆ ಮಾಡದ ಅಪರೂಪದ ಜನರು ಕೆಲವರು ಇದ್ದಾರೆ. ಉದಾಹರಣೆಗೆ ಮದರ್ ತೆರೆಸಾ ಮತ್ತು ಅಣ್ಣಾ ಹಜಾರೆ – ರೀತಿಯವರು. ಆದರೆ ಅಂತಹಾ ಜನರು ವಿರಳಾತಿವಿರಳ.
ಸಮಾಜಕ್ಕೆ ಒಳ್ಳೆಯದು ಮಾಡುವ ಇನ್ನೊಂದು ವರ್ಗವಿದೆ. ಅವರು ಸಮಾಜಕ್ಕೆ ಒಳ್ಳೆಯದು ಮಾಡುತ್ತ ತಮ್ಮ ವೈಯಕ್ತಿಕ ಬದುಕನ್ನು ಶ್ರೀಮಂತಗೊಳಿಸಿಕೊಳ್ಳುತ್ತಾರೆ. ಅವರೆಲ್ಲ ಮದರ್ ತೆರೇಸಾ ಮತ್ತು ಅಣ್ಣಾ ಹಜಾರೆ ತರಹ ಅತ್ಯುನ್ನತ ವ್ಯಕ್ತಿಗಳೇನಲ್ಲ. ನಾನೂ ಅಲ್ಲ, ನೀವೂ ಅಲ್ಲ. ನಮ್ಮಲ್ಲಿ ಹೆಚ್ಚಿನವರು ಸಮಾಜಕ್ಕೆ ಒಳ್ಳೆಯದು ಮಾಡಲು ಇಷ್ಟಪಡುತ್ತೇವೆ, ಹಾಗೆಯೇ ನಮ್ಮ ಬದುಕು ಸಹ ಒಳ್ಳೆಯದಾಗಿರಬೇಕೆಂದು ಬಯಸುತ್ತೇವೆ.
ಇದರಲ್ಲಿ ಏನೂ ತಪ್ಪಿಲ್ಲ. ವಸ್ತುಸ್ಥಿತಿ ಏನೆಂದರೆ ಈ ರೀತಿಯ ಜನರೇ ಸಮಾಜಕ್ಕೆ ಬೇಕು. ಒಬ್ಬ ಉದ್ಯಮಿ ದೊಡ್ಡ ಉದ್ಯಮ ಸ್ಥಾಪಿಸಿ ತಾನೂ ಹಣ ಗಳಿಸುತ್ತಾನೆ. ಹಾಗೆಯೇ ಬಹಳಷ್ಟು ಜನರಿಗೆ ಉದ್ಯೋಗ ಸೃಷ್ಟಿ ಮಾಡುತ್ತಾನೆ. ಹಾಗೆಯೇ
ಸರಕಾರಕ್ಕೆ ತೆರಿಗೆ ಸಹಿತ ಕಟ್ಟುತ್ತಾನೆ. ಈತ ಸಮಾಜಕ್ಕೆ ಒಳ್ಳೆಯದನ್ನು ಮಾಡಿದ ಹಾಗೆಯೇ ಸರಿ. ತನ್ನ ಗಳಿಕೆಯಲ್ಲಿ ಆತ ತುಂಬಾ ಬೆಲೆಬಾಳುವ ಕಾರಿನಲ್ಲಿ ತಿರುಗಾಡುತ್ತಾನೆ ಎಂಬುದು ಇಲ್ಲಿ ಗೌಣ.
ಹಾಗೆಯೇ ಜನರಿಗೆ ನ್ಯಾಯ ಮಾರ್ಗದಲ್ಲಿ ಚಿಕಿತ್ಸೆ ನೀಡಿ, ತನ್ನ ಜೀವನವನ್ನು ಒಳ್ಳೆಯದಾಗಿ ಮಾಡಿಕೊಂಡರೆ ಡಾಕ್ಟರ್ ಸಹಿತ ಸಮಾಜಕ್ಕೆ ಒಳ್ಳೆಯದನ್ನು ಮಾಡಿದಂತೆಯೇ ಸರಿ. ಒಳ್ಳೆಯ ಜನರು ಬಡವರಾಗಿರಬೇಕು, ಅವರಿಗೆ ಅವರದ್ದೇ ಆದ ಉತ್ತಮ ಜೀವನ ಇರಬಾರದು ಎಂಬ ಭಾರತೀಯ ಕಲ್ಪನೆ ಖಂಡಿತಾ ಸರಿಯಲ್ಲ. ಇದು ಬೂಟಾಟಿಕೆಗೆ, ಅನೀತಿಗೆ, ಅಸಾಧಾರಣ ನಿರೀಕ್ಷೆಗೆ ಕಾರಣವಾಗಿ ವೈದ್ಯರ ಮೇಲೆ ಅನಗತ್ಯ ದ್ವೇಷ ಹುಟ್ಟಲು ಕಾರಣವಾಗುತ್ತದೆ.
ದಯವಿಟ್ಟು ಅರ್ಥಮಾಡಿಕೊಳ್ಳಿ, ಪ್ರತಿಭಾವಂತರು, ಬುದ್ಧಿವಂತರು ವೈದ್ಯರಾಗಬೇಕು. ನಮ್ಮ ದೇಶದಲ್ಲಿರುವ ಈ
ಅಸಮರ್ಪಕ ಆರೋಗ್ಯ ವ್ಯವಸ್ಥೆಯಿಂದ ವೈದ್ಯರು ಬಹಳಷ್ಟು ಒತ್ತಡದಲ್ಲಿದ್ದಾರೆ. ಹಾಗಾಗಿ ತಮ್ಮ ಅಮೂಲ್ಯ ಸಮಯವನ್ನು ನಮಗೆ ಮೀಸಲಾಗಿಟ್ಟು ನಮ್ಮ ಜೀವವನ್ನು ರಕ್ಷಿಸುವ ಅಂತಹಾ ಸಮುದಾಯಕ್ಕೆ ಹೆಚ್ಚು ಗೌರವ ಕೊಡಿ, ಅವರ ಬಗ್ಗೆ ಸಹಾನುಭೂತಿ ಇರಲಿ. ನಮ್ಮನ್ನೆಲ್ಲ ಆರೋಗ್ಯವಂತರಾಗಿ, ಸುರಕ್ಷಿತವಾಗಿ ನೋಡಿಕೊಳ್ಳುತ್ತಿರುವ ಭಾರತೀಯ ವೈದ್ಯರ ಜೊತೆ
ಸಹಕರಿಸಿ, ಅವರ ಪರವಾಗಿರಿ.
ಮೇಲಿನವು ಚೇತನ್ ಭಗತ್‌ರ ಲೇಖನದ ಸಾಲುಗಳು. ಹೌದು, ಅವರು ಅಭಿಪ್ರಾಯಪಟ್ಟಂತೆ ಭಾರತೀಯ ವೈದ್ಯರು
ಬಹಳಷ್ಟು ಒತ್ತಡದಲ್ಲಿzರೆ. ವೈದ್ಯನಾಗಿ ಕಳೆದ ೪೪ ವರ್ಷಗಳಲ್ಲಿ ನನ್ನ ಅನುಭವಕ್ಕೆ ಬಂದ ವಿಚಾರಗಳು ಹೀಗಿವೆ. ಹಲವು ರೋಗಿಗಳು ಕಾಯಿಲೆಯ ಆರಂಭದಲ್ಲಿ ವೈದ್ಯರನ್ನು ಸಂಪರ್ಕಿಸದೇ ಕಾಯಿಲೆ ತೀರಾ ಉಲ್ಬಣಗೊಂಡಂತಹ ಪರಿಸ್ಥಿತಿಯಲ್ಲಿ ಬಂದು ಎಲ್ಲವೂ ಕೆಲವೇ ದಿನಗಳಲ್ಲಿ ಗುಣವಾಗಬೇಕು, ಮೊದಲಿನ ಹಾಗೆಯೇ ಆಗಬೇಕು ಎಂದು ನಿರೀಕ್ಷಿಸುತ್ತಾರೆ.
ಹಾಗೆಯೇ ವೈದ್ಯರು ಸಲಹೆ ಮಾಡಿದ ಔಷಧಗಳನ್ನು ನಿಯಮಿತವಾಗಿ ಸೇವಿಸದೆ ಕಾಯಿಲೆ ವಾಸಿಯಾಗಬೇಕೆಂದು
ಬಯಸುತ್ತಾರೆ. ಬೆಂಗಳೂರಿನ ಪ್ರಸಿದ್ಧ ಆಸ್ಪತ್ರೆ ಜಯದೇವದ ನಿರ್ದೇಶಕ ಡಾ ಸಿ ಎನ್ ಮಂಜುನಾಥ್ ಅವರು ಇತ್ತೀಚಿನ ‘ಈಡಿಯಟ್ ಸಿಂಡ್ರೋಮ’ (ಇಂಟರ್ನೆಟ್ ಡಿರೈವ್ಡ್ ಇನರ್ಮೇಶನ್ ಅಬ್ ಸ್ಟ್ರಕ್ಟಿಂಗ್ ಟ್ರೀಟ್ ಮೆಂಟ್) ದೆಸೆಯಿಂದ ಶಿಕ್ಷಿತ ಸಮುದಾಯವನ್ನು ಚಿಕಿತ್ಸೆ ಮಾಡುವುದು ತುಂಬಾ ಕಷ್ಟವಾಗುತ್ತಿದೆ ಎಂದು ಇತ್ತೀಚೆಗೆ ಅಭಿಪ್ರಾಯಪಟ್ಟರು. ಅಂದರೆ ಶಿಕ್ಷಿತ
ಸಮುದಾಯ ಇಂಟರ್ನೆಟ್ ನೋಡಿಕೊಂಡು ಅದರಲ್ಲಿರುವ ಎಲ್ಲ ಮಾಹಿತಿಗಳನ್ನು ತಮಗೇ ಅನ್ವಯಿಸಿಕೊಂಡುಅರ್ಧಂಬರ್ಧ ಚಿಕಿತ್ಸೆಯನ್ನು ಕೈಗೊಳ್ಳುತ್ತಾರೆ -ಎಂದು.
ಹಾಗಾಗಿ ವೈದ್ಯರ ಪ್ರಾಮಾಣಿಕ ಚಿಕಿತ್ಸಾ ಕ್ರಮಗಳಿಗೆ ಸ್ಪಂದಿಸಿ, ಅವರ ಚಿಕಿತ್ಸೆಗೆ ಸಹಕರಿಸಿ.