ತುಂಟರಗಾಳಿ
ಸಿನಿಗನ್ನಡ
ಸಾಮಾನ್ಯವಾಗಿ ಉಪೇಂದ್ರ ನಿರ್ದೇಶನದ ಚಿತ್ರ ಅಂದ್ರೆ ಅಲ್ಲಿ ತಲೆಗೆ ಹುಳ ಬಿಡೋ ಕೆಲಸ ಆಗಿರುತ್ತೆ. ಆದರೆ ಇಲ್ಲಿ
ಮನುಷ್ಯನ ತಲೆ ಒಳಗಿರೋ ವಿಷಯದ ಬಗ್ಗೆ ಉಪೇಂದ್ರ ಮಾತಾಡಿದ್ದಾರೆ. ಅದರ ಬಗ್ಗೆ ಯೋಚನೆ ಮಾಡಿ ಅಂತ
‘ಪ್ರವೋಕ್’ ಮಾಡಿ ಜನರನ್ನು ‘ಅವೇಕ್’ ಮಾಡಲು ಯತ್ನಿಸಿದ್ದಾರೆ.
ಅದು ಫುಡ್ ಫಾರ್ ಥಾಟ್. ಹುಳ ಅನ್ನೋದು ಫುಡ್ ಅಲ್ಲವಲ್ಲ. ಹಾಗಾಗಿ ಇದನ್ನು ತಲೆಗೆ ಹುಳ ಬಿಡೋ ಕೆಲಸ ಅನ್ನೋಕಾಗಲ್ಲ. ಸಾಮಾನ್ಯವಾಗಿ ಸಿನಿಮಾ ಮೇಕರ್ಸ್ ಒಂದು ಸಿನಿಮಾ ಮಾಡಿ ಅದರಲ್ಲಿ ಒಂದು ಮೆಸೇಜ್ ಇಟ್ಟಿರ್ತಾರೆ. ಆದರೆ ಇಲ್ಲಿ ಮೆಸೇಜೇ ಸಿನಿಮಾ ಆಗಿದೆ. ಇದರಲ್ಲಿ ಹೆಚ್ಚು ಮನರಂಜನೆ ಇಲ್ಲದಿರೋದ್ರಿಂದ ಇದು ಮಲ್ಟಿಮೀಡಿಯಾ ಮೆಸೇಜ್ ಆಗದೆ ಕೇವಲ ಪ್ಲೈನ್ ಎಸ್‌ಎಂಎಸ್ ಮೆಸೇಜ್ ಆಗಿದೆ ಅನ್ನಿಸಿದ್ರೆ ತಪ್ಪಿಲ್ಲ.
ಒಂದು ಲೆಕ್ಕದಲ್ಲಿದು ಉಪೇಂದ್ರ ಅವರ ಇದುವರೆಗಿನ ಅತಿ ಸ್ಟ್ರೇಟ್ ಚಿತ್ರ. ಇದರಲ್ಲಿ ಅರ್ಥವಾಗುವಂಥದ್ದು, ಆಗದಿರುವಂಥದ್ದು ಅನ್ನೋ ಕೆಟಗರಿನೇ ಇಲ್ಲ. ಯಾಕಂದ್ರೆ ಇಲ್ಲಿ ಮನರಂಜನೆಗೆ ಬ್ಯಾಕ್ ಸೀಟ್. ಹಾಗಾಗಿ ಪ್ರೇಕ್ಷಕ ನೂ ಸೀಟಿನಂಚಿನಲ್ಲಿ ಕೂರದೆ, ಬ್ಯಾಕ್ ಸೀಟಿಗೆ ಒರಗಿಕೊಂಡೇ ನೋಡುತ್ತಾನೆ. ಸೀಟಿನಲ್ಲಿ ರಿಲ್ಯಾಕ್ಸ್ ಆಗಿ ಕೂತ ಅವನಿಗೆ ಸೀಟಿ ಹೊಡೆಯುವ ಅವಕಾಶಗಳು ಕಮ್ಮಿ. ಇದಕ್ಕೆ ಸಿನಿಮಾದ ಸಂಭಾಷಣೆಗಳೂ ಕಾಣಿಕೆ ನೀಡಿವೆ. ಉಪೇಂದ್ರರ ರೆಗ್ಯುಲರ್ ಸಿನಿಮಾ ಅಂದ್ರೆ ಅಲ್ಲಿ ಡೈಲಾಗ್‌ಗಳ ಪ್ರವಾಹವೇ ಇರುತ್ತದೆ. ಆದರಿಲ್ಲಿ, ‘ಇಂಥ ಡೈಲಾಗ್‌ಗಳು ಎಲ್ಲಿ ಸಿಕ್ತವೆ ನಿಮಗೆ, ಹೊಡೀರಿ ಚಪ್ಪಾಳೆ’ ಅನ್ನಿಸುವಂಥ ಅವಕಾಶಗಳು ಕಮ್ಮಿ.
ಪ್ರೇಕ್ಷಕರನ್ನೇ ಯಾರಾದ್ರೂ ಬಯ್ತಾರಾ, ಬಯ್ಯೋನು ಒಬ್ಬನೇ ಉಪೇಂದ್ರ ಅನ್ನೋ ಟ್ರೆಂಡ್ ಇಲ್ಲೂ ಇದೆ. ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಗೆಟ್ ಔಟ್ ಆಗಿ ಅನ್ನೋ ಉಪೇಂದ್ರ ಈ ಸಿನಿಮಾ ನೋಡೋರು ದಡ್ಡರು ಅಂತ ಹೇಳಿ, ‘ಚಿತ್ರಮಂದಿರದಲ್ಲಿ ಇರಬೇಕಾ, ಎದ್ದು ಹೋಗ್ಬೇಕಾ’ ಅಂತ ಜನ ಯೋಚಿಸುವಾಗ ಮರು ಕ್ಷಣದ, ‘ಬುದ್ಧಿವಂತರು ಫುಲ್ ಥರ ಕಾಣಬಹುದು, ದಡ್ಡರು ಬುದ್ಧಿವಂತರ ಥರ ಪೋಸ್ ಕೊಡ್ತಾರೆ’ ಅಂತನೂ ಹೇಳಿ ಜಾರಿಕೊಂಡು ಜಾರಿಬಿದ್ದ ಜಾಣನ ಜಾಣತನ ತೋರಿಸಿದ್ದಾರೆ.
ಒಟ್ಟಾರೆ, ನಾನು ಮತ್ತು ನನ್ನೊಳಗಿರುವ ನಾನು ಬಗ್ಗೆ ಈ ಸಿನಿಮಾದಲ್ಲಿ ಉಪೇಂದ್ರ ಮಾತಾಡಿದ್ದಾರೆ. ಆದರೆ ಪ್ರೇಕ್ಷರಿಗೆ ಸಿನಿಮಾ ಇಷ್ಟ ಆಗೋದು ಕಷ್ಟ. ಜತೆಗೆ ಪ್ರಜೆಗಳು ಮತ್ತು ಪ್ರಭುಗಳ ನಡುವಿನ ಕಥೆಯೂ ಇಲ್ಲಿದೆ. ಆದರೆ ಅದು
‘ಪ್ರೇಕ್ಷಕ ಪ್ರಭು’ಗಳಿಗೆ ಇಷ್ಟ ಆಗೋದು ಕಷ್ಟ. ಆದರೆ, ಕೋಡ್, ಮೆಟಫರ್ ಅಂತ ಸಿನಿಮಾದಲ್ಲಿ ನಿರ್ದೇಶಕರಿಗೇ ಗೊತ್ತಿಲ್ಲದೇ ಇರೋದನ್ನೆಲ್ಲ ‘ಡಿ-ಕೋಡ್’ ಮಾಡ್ಕೊಂಡು ನೋಡಿ, ‘ನನಗೆ ಎರಡು ಕೋಡು, ಕೊಂಬು’ ಇದೆ ಅಂತ
ತೋರಿಸಿಕೊಳ್ಳೋರಿಗೆ ಈ ಸಿನಿಮಾ ಖಂಡಿತಾ ಇಷ್ಟ ಆಗುತ್ತೆ.
ಲೂಸ್ ಟಾಕ್ -ಹುಚ್ಚ ವೆಂಕಟ್
ವೆಂಕಟ್ ಅವ್ರೆ, ನೀವು ಎಷ್ಟೋ ವರ್ಷದ ಹಿಂದೆ ದೇವಸ್ಥಾನ ಕಟ್ಟಿಸಿದ್ರಿ. ಆದ್ರೆ ಅಲ್ಲಿಗೆ ಯಾರೂ ಬರ್ತಿಲ್ವಂತೆ?
ಹೌದು. ಜನ ತುಳಿದ್ರು ಅಂತ ದೇವಸ್ಥಾನ ಕಟ್ಟಿದ್ರೆ ದೇವರೂ ತುಳಿಯೋ ಹಂಗಾಯ್ತು. ನನ್ ಮೇಲ್ ಬ್ಯಾಡ,
ಅಟ್ಲೀ ದೇವರ ಮೇಲಾದ್ರೂ ಅಭಿಮಾನ ಬೇಡ್ವಾ? ದೇವಸ್ಥಾನ ಸರಿಯಿಲ್ಲ ಅಂದ್ರೆ, ‘ಅದ್ ಸರಿಯಿಲ್ಲ, ಇದ್ ಸರಿಯಿಲ್ಲ’ ಅಂತ ಕುತ್ತಿಗೆ ಹಿಡ್ಕೊಂಡ್ ಕೇಳಲಿ ಅಂತ… ನನ್ನನ್ನಲ್ಲ, ದೇವರನ್ನ.
ಬಡವರ ಮಕ್ಕಳನ್ನ ತುಳೀಬೇಕು ಅಂತಿದ್ದಾರಾ ಜನ? ಮತ್ತೇನ್ ಮಾಡ್ತೀರಾ ಈಗ?
ಈಗ ನನ್ ಎಕ್ಕಡನೂ ದೇವಸ್ಥಾನದೊಳಕ್ಕೆ ಹೋಗಲ್ಲ… ಹೆಂಗಿದ್ರೂ ದೇವಸ್ಥಾನದೊಳಕ್ಕೆ ಎಕ್ಕಡ ಹಾಕ್ಕೊಂಡ್ ಹೋಗಂಗಿಲ್ವಲ್ಲ.
ಹೋಗ್ಲಿ, ನಿಮ್ ದೇವಸ್ಥಾನಕ್ಕೆ ಜನ ಯಾಕ್ ಬರ್ತಾಯಿಲ್ಲ?
ಅದೇ ಗೊತ್ತಿಲ್ಲ. ಪಕ್ಕದ ಆ ದೇವಸ್ಥಾನಕ್, ಈ ದೇವಸ್ಥಾನಕ್ ಹೋಗ್ತಿರಾ. ಹೋಗ್ಬೇಡಿ ಅನ್ನಲ್ಲ. ನನ್ ದೇವಸ್ಥಾನಕ್ಕೂ ಬನ್ನಿ. ಯಾಕ್ ಬರಲ್ಲ? ಆದ್ರೂ ದೇಗುಲದ ಕಸ ಹೊಡೆಯೋಕೆ, ನೆಲ ಒರಸೋಕೆ ಅಂತ 4 ಜನ ಬರ್ತಾರಲ್ಲ, ಅವರೇ ನನ್ನ ಅಭಿಮಾನಿ ‘ದೇವರು’ಗಳು. ಅ ಸಾಕ್.
ಮತ್ತೇನ್ ಮಾಡ್ತೀರಾ, ದೇವಸ್ಥಾನ ಮುಚ್ಚೋ ಯೋಚನೆ ಮಾಡ್ತಾ ಇದೀರಾ?
ಛೇ. ನೆವರ್. ಇವು ಬರದೇ ಇದ್ರೆ ನಾನೇನ್ ದೇವಸ್ಥಾನದ ಮುಂದೆ ಭಿಕ್ಷೆ ಬೇಡ್ತಾ ಬೀದಿಗ್ ಬರಲ್ಲ.
ಯಾಕೋ ಡೌಟ್ ಆಗ್ತಾ ಇದೆ, ನೀವ್ ಕಟ್ಟಿಸಿರೋ ದೇವಸ್ಥಾನ ಯಾವ ದೇವ್ರದ್ದು?
ಹಾ? ನನ್ ಫೇವರಿಟ್ ಹೀರೋಯಿನ್ ರಮ್ಯಾ ಅವರದ್ದು…. ನಾನ್ ಶೋಕಿಗೋಸ್ಕರನೇ ದೇವಸ್ಥಾನ
ಕಟ್ಟಿರೋದು. ಏನಿವಾಗ?
(ಕಾಲ್ಪನಿಕ ಸಂದರ್ಶನ)
ನೆಟ್ ಫಿಕ್ಸ್
ಹೆಂಗಸೊಬ್ಬಳು ಡಾಕ್ಟರ್ ಖೇಮು ಹತ್ರ ಬಂದಳು. ನೋಡಿದರೆ ಅವಳನ್ನು ಯಾರೋ ಹಿಗ್ಗಾಮುಗ್ಗ ಥಳಿಸಿದಂತೆ ಕಾಣುತ್ತಿತ್ತು. ‘ಏನಾಯ್ತು?’ ಅಂತ ಖೇಮು ಕೇಳಿದ್ದಕ್ಕೆ ಆಕೆ ಹೇಳಿದಳು, ‘ಡಾಕ್ಟ್ರೇ ನನ್ನ ಗಂಡ ಪ್ರತಿದಿನ ಕುಡಿದು
ಬಂದಾಗ ನನ್ನ ಹಿಗ್ಗಾಮುಗ್ಗ ಹೊಡೀತಾನೆ, ನನಗಂತೂ ಅವನ ಹಿಂಸೆ ತಡೆಯೋಕಾಗಲ್ಲ. ಇದಕ್ಕೆ ಏನಾದ್ರೂ ಪರಿಹಾರ ಸೂಚಿಸಿ’. ಖೇಮು ಕೊಂಚ ಯೋಚಿಸಿ ಹೇಳಿದ, ‘ಒಂದ್ ಕೆಲ್ಸ ಮಾಡಿ. ಇನ್ಮೇಲೆ ನಿಮ್ ಗಂಡ ಕುಡಿದು
ಮನೆಗೆ ಬಂದ ಕೂಡಲೆ ನೀವು ಒಂದು ಲೋಟ ನೀರನ್ನು ಕುಡಿಯಿರಿ. ಆದರೆ ನೀರನ್ನು ನುಂಗದೆ ಬಾಯ ಇಟ್ಕೊಂಡಿರಿ.
ಗಂಡ ಹಾಸಿಗೆ ಮೇಲೆ ಮಲಗಿ ನಿದ್ರಿಸುತ್ತಿದ್ದಾನೆ ಅಂತ ಕನಫರ್ಮ್ ಆದಮೇಲೆ ನೀರನ್ನು ನುಂಗಿ’. ‘ಸರಿ’ ಅಂತ ಹೆಂಗಸು ಹೊರಟುಹೋದಳು. ವಾರದ ನಂತರ ಮತ್ತೆ ಬಂದ ಅವಳು, ‘ಡಾಕ್ಟರೇ ಎಂಥ ಬ್ರಿಲಿಯಂಟ್ ಐಡಿಯಾ ಕೊಟ್ರಿ. ನನ್ನ ಗಂಡ ಕುಡ್ಕೊಂಡು ಮನೆಗೆ ಬಂದಾಗಲೆಲ್ಲ ಒಂದು ಲೋಟ ನೀರನ್ನು ಅವನು ಮಲಗೋ ವರೆಗೂ ಬಾಯಲ್ಲಿ ಇಟ್ಕೋತಿದ್ದೀನಿ. ಈಗ ಅವನು ನನ್ನ ಟಚ್ ಕೂಡ ಮಾಡ್ತಿಲ್ಲ ಗೊತ್ತಾ?’ ಅಂತ ಖೇಮುವನ್ನು ಹೊಗಳಿ ದಳು. ಅದಕ್ಕೆ ಖೇಮು ಹೇಳಿದ ‘ನೋಡಿದ್ರಾ? ನೀವು ಬಾಯಿ ಮುಚ್ಚಿಕೊಂಡಿ ರೋದ್ರಿಂದ ಎಷ್ಟು ಹೆಲ್ಪ್ ಆಗುತ್ತೆ’.
*
ಲೈನ್ ಮ್ಯಾನ್
ಇಂಡಿಯಾ ವಿರುದ್ಧ ಯಾವಾಗ್ಲೂ ಮಿಂಚೋ ಟ್ರಾವಿಸ್ ‘ಹೆಡ್’ ಆಟ ನೋಡಿ ಕ್ರಿಕೆಟ್ ಮತ್ತು ಸಿನಿಮಾ
ಪ್ರೇಮಿಗಳು ಹೇಳಿದ್ದು
- ಈ ‘ತಲೆ’ ಉರುಳಿಸೋಕೆ ಭೈರತಿ ರಣಗ ಬರ್ಬೇಕು ಅನ್ಸುತ್ತೆ
- ‘ಯುಐ’ ಸಿನಿಮಾ ನೋಡೋಕೆ ಬರೋ ಪ್ರೇಕ್ಷಕರಿಗೆ ಉಪೇಂದ್ರ ಹೇಳ್ತಾ ಇರೋ ಮಾತು
- ಕೇಳ್ತೀರಾ ಇನ್ನೊಂದ್ಸಲ? ಡೈರೆಕ್ಷನ್ ಮಾಡಿ ಅಂತ!?
- ‘ಹುಚ್ಚ’ ಖ್ಯಾತಿಯ ಓಂಪ್ರಕಾಶ್, ಹುಚ್ಚ ವೆಂಕಟ್ ಜತೆ ಸಿನಿಮಾ ಮಾಡಿದ್ರೆ ಅದರ ಹೆಸರು
- ಹುಚ್ಚ: ಪಾರ್ಟ್ ಮೈನಸ್ ಒನ್
- ಹುಚ್ಚ ವೆಂಕಟ್ ಸಿನಿಮಾ ನೋಡಿದವರು ಹೇಳಿದ ಮಾತು
- ಹುಚ್ಚನ ಸಿನಿಮಾದಲ್ಲಿ ನಿದ್ದೆ ಮಾಡೋನೇ ಜಾಣ
- ಯುಟ್ಯೂಬ್ನಲ್ಲಿ ಹುಚ್ಚ ವೆಂಕಟನ ವಿಡಿಯೋ ನೋಡುವವರ ಮಾತು
- ಹೋದೆಯಾ ಥಿಯೇಟರ್‌ನಲ್ಲಿ ಅಂದ್ರೆ ಬಂದೆಯಾ ಯುಟ್ಯೂಬ್ನಲ್ಲಿ
- ಗೋಡ್ಸೆನ ದೇಶಭಕ್ತ ಅಂತಾರೆ ಕೆಲವರು
- ಇನ್ಮೇಲೆ ಸರಕಾರಿ ಕಚೇರಿಗಳಲ್ಲಿ ಗಾಂಧೀಜಿ ಬದಲು, ಗೋಡೆ ಮೇಲೆ ಗೋಡ್ಸೆ ಫೋಟೋನೇ ಹಾಕಿದ್ರೂ ಆಶ್ಚರ್ಯ ಇಲ್ಲ.
ಇದನ್ನೂ ಓದಿ: hari paraak column: ಕಂಗನಾ ಎಮರ್ಜೆನ್ಸಿ ಬ್ರೇಕ್