Monday, 25th November 2024

‌Hari Parak Column: ಪೊಲೀಸರೇ ಹೆಚ್ಚಾಗಿರುವ ಪ್ರದೇಶ- ಪೊಲೀಸ್‌ ಬೆಲ್ಟ್

ತುಂಟರಗಾಳಿ

ಸಿನಿಗನ್ನಡ

ಈ ವಾರ ಬಿಡುಗಡೆ ಆದ ‘ಭೈರಾದೇವಿ’ ಸಿನಿಮಾದಲ್ಲಿ 2000 ರುಪಾಯಿ ನೋಟುಗಳು ಚಲಾವಣೆಯಲ್ಲಿವೆ. ಇಲ್ಲಿ ದಿವಂಗತ ನಟ ಶಿವರಾಮ್ ಅಭಿನಯಿಸಿದ್ದಾರೆ. ಇನ್ನೊಬ್ಬ ದಿವಂಗತ ನಿರ್ದೇಶಕ ಡಿ.ರಾಜೇಂದ್ರಬಾಬು ಫೋಟೋದ ಮೇಲಿರೋ ಪಾತ್ರ ಆಗಿದ್ದಾರೆ.

ಬಾಲನಟಿಯಾಗಿ ಅಭಿನಯಿಸಿರೋ ಬೇಬಿ ಗ್ರೀಷ್ಮ ಈಗ ಹೆಚ್ಚು ಕಮ್ಮಿ ‘ಚೆಲುವಿನ ಚಿತ್ತಾರ’ ಥರದ ಸಿನಿಮಾದ ಹೀರೋಯಿನ್ ಆಗಬಹುದು ಅನ್ನುವಷ್ಟು ದೊಡ್ಡವಳಾಗಿದ್ದಾಳೆ. ಇದೆಲ್ಲ ಯಾಕೆ ಹೇಳ್ತಾ ಇದ್ದೀನಿ ಅಂದ್ರೆ ಇದು ತುಂಬಾ ವರ್ಷಗಳ ಹಿಂದೆ ಶುರುವಾದ ಸಿನಿಮಾ. ಹಾಗಾಗಿ ಈಗಿನ ಟ್ರೆಂಡ್‌ಗೆ ಸರಿಹೋಗುತ್ತಾ ಅನ್ನೋ
ಅನುಮಾನ ಸಹಜ. ಆದ್ರೆ ಈ ಚಿತ್ರದ ಕೊನೆಯಲ್ಲಿ ‘ಭೈರಾದೇವಿ 2’ ಬರುತ್ತೆ ಅಂತ ಹೇಳಿರೋದ್ರಿಂದ ಇದು ಈಗಿನ
ಟ್ರೆಂಡ್ ಪ್ರಕಾರದ ಸಿನಿಮಾ ಅಂತ ಹೇಳಬಹುದು. ಕಥೆ ವಿಷಯದಲ್ಲಿ ಇಲ್ಲಿ ಹೊಸತನ ಅಂತೇನೂ ಇಲ್ಲ. ಅನ್ಯಾಯ
ಕ್ಕೊಳಗಾದ ಹುಡುಗಿಯೊಬ್ಬಳು ಆತ್ಮವಾಗಿ, ತನ್ನ ಮೇಲೆ ಅನ್ಯಾಯ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳೋಕೆ
ಹೋಗೋ ಕಥೆ. ಆದರೆ ಅತೃಪ್ತ ಆತ್ಮದ ಕಥೆ ಇರೋ ಈ ಸಿನಿಮಾ ಪ್ರೇಕ್ಷಕರನ್ನು ತೃಪ್ತಿ ಪಡಿಸೋದು ಕಷ್ಟವೇ.

ಸಿನಿಮಾ ನೋಡೋಕೆ ಮುಂಚೆ ರಮೇಶ್ ಅರವಿಂದ್ ಅವರದ್ದು ಈ ಚಿತ್ರದಲ್ಲಿ ‘ಗೆ ಅಪಿಯರೆ’ ಇರಬಹುದು
ಅಂದ್ಕೊಂಡಿರ್ತೀರ. ಆದರೆ ಅವರು ಇಡೀ ಸಿನಿಮಾ ಇದ್ದಾರೆ. ಆದ್ರೆ ‘ಘೋ ಅಪಿಯರೆ’ ಪಾತ್ರದಲ್ಲಿ ರಾಧಿಕಾ ಇದ್ದಾರೆ ಅನ್ನೋದು ವಿಶೇಷ. ಅವರು ದೆವ್ವ ಮತ್ತು ದೆವ್ವ ಬಿಡಿಸೋ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಗ್ಲಾಮರ್ ದಿವಾ’ ಆಗಿಯೇ ನಾವು ಹೆಚ್ಚಾಗಿ ನೋಡಿರುವ ರಾಧಿಕಾ ಫಾರ್ -ಎ-ಚೇಂಜ್ ಇಲ್ಲಿ ‘ಗ್ಲಾಮರ್ ದೆವ್ವಾ’ ಆಗಿ ಕಾಣಿಸಿಕೊಂಡಿ ದ್ದಾರೆ.

ಒಟ್ಟಾರೆ ಹೇಳೋದಾದ್ರೆ ದೆವ್ವದ ಸಿನಿಮಾಗೆ ದೇವರ ಡಿವೈನ್ ಟಚ್ ಕೊಡೋ ಅದೇ ‘ಹಳೇ ವೈನ್ ಹೊಸ ಗ್ಲಾಸ್’ ಸಿನಿಮಾ ಇದು. ಆದ್ರೆ ರಾಧಿಕಾ ಅವರನ್ನ ತೆರೆಯ ಮೇಲೆ ನೋಡಿ ಬಹಳ ದಿನವಾಯ್ತು ಅನ್ನೋ ಬೇಸರ ಇದ್ದವರು ಒಂದ್ಸಲ ನೋಡಿಕೊಂಡು ಬರಬಹುದು.

ಕಾಮನ್ ಮ್ಯಾನ್ – ಲೂಸ್‌ ಟಾಕ್
ಸಿದ್ರಾಮಯ್ಯನವರ‌ ಆಡಳಿತದಲ್ಲಿ ಎಲ್ಲಾ ಅಯೋಮಯ ಆಗಿದೆ. ಸಿಎಂ ವಿರುದ್ಧ ಪ್ರತಿಭಟನೆ ಆಗ್ತಾ ಇದೆ. ಈ ವಿಧಾನಸೌಧದಲ್ಲಿ ಧರಣಿ ಮಾಡ್ತಾ, ಅಲ್ಲೇ ಮಲಕ್ಕೋತೀವಿ ಅನ್ನೋ ವಿಪಕ್ಷಗಳ ನಾಯಕರ ಬಗ್ಗೆ ನಿಮ್ಮಭಿಪ್ರಾಯ?

  • ಏನ್ ಮಾಡೋದು…ರಾಜ್ಯದಲ್ಲಿ ಹಾಸಿ ಹೊದ್ಕೊಳ್ಳೋವಷ್ಟು ಸಮಸ್ಯೆಗಳಿವೆ, ಇವ್ರು ಅವನ್ನೆಲ್ಲ ಬಿಟ್ಟು ಯಾವುದೋ ವಿಷ್ಯ ಇಟ್ಕೊಂಡು ವಿಧಾನಸಭೆಯ ಹಾಸಿ ಹೊದ್ಕೊಂಡ್ ಮಲಕ್ಕೊತಾರೆ.
  • ಸದನದಲ್ಲಿ ಅಂಥಾ ಪರಿಸ್ಥಿತಿ ಬಂದಾಗ, ದೇಶದ ಪ್ರಜೆಯಾಗಿ ನಿಮಗೆ ಏನನ್ನಿಸುತ್ತೆ?
  • ಏನೂ ಅನ್ಸಲ್ಲ.. ಸದಾನಂದ ಗೌಡರ ಥರ ಸುಮ್ನೆ ಸದನದ ಕಡೆ ನೋಡಿ ನಗ್ತಾ ಇರಬೇಕಷ್ಟೇ.

  • ಆದ್ರೂ, ವಿಧಾನಸೌಧದಲ್ಲಿ ಹಿಂಗೆ ಮಲಗೋರನ್ನ ನೋಡಿದ್ರೆ ನಿಮ್ಮಂಥ ಜನ ಏನಂದ್ಕೊಳ್ಳೊಲ್ಲ?
  • ಅಯ್ಯೋ, ಇವ್ರ್ ಆಡೋದ್ ನೋಡಿ, ಮೊನ್ನೆ ಯಾರೋ, ‘ಇಲ್ಲಿ ಹತ್ರ ಎದ್ರೂ ಒಳ್ಳೆ ಲಾಡ್ಜ್ ಇದೆಯಾ?’ ಅಂತ
    ಕೇಳಿದ್ದಕ್ಕೆ ‘ಇಲ್ಲೇ ಮುಂದೆ‌ ಹೋಗಿ ಲೆಫ್ಟ್ ತಗೊಂಡ್ರೆ ವಿಧಾನಸೌಧ ಬರುತ್ತೆ’ ಅಂತ‌ ಅಡ್ರೆಸ್ ಹೇಳಿದ್ರಂತೆ.
  • ಸರಿ, ಇಂಥ ಪ್ರತಿಭಟನೆ ಹಿಂದಿರೋ ಉದ್ದೇಶ ಏನು ಅಂತ ನಿಮ್ಮ ಅನಿಸಿಕೆ ?
  • ‘ಬಾವಿ’ಗೆ ಇಳಿದು ಪ್ರತಿಭಟನೆ ಮಾಡಿಬಿಟ್ಟರೆ ‘ಭಾವಿ’ ಮುಖ್ಯಮಂತ್ರಿ ಅನ್ನಿಸ್ಕೊತೀವಿ ಅಂದ್ಕೊಂಡಿರೋ ಕೆಲವರ ಪ್ಲ್ಯಾನ್ ಇದು.
  • ಹೋಗ್ಲಿ, ಸಿಎಂ ಆಗಿ ಸಿದ್ರಾಮಯ್ಯ ಅವರು ಮಾಡ್ತಾ ಇರೋ ಕೆಲಸದ ಬಗ್ಗೆ ನಿಮಗೆ ತೃಪ್ತಿ ಇದೆಯಾ?
  • ಇವರೆಲ್ಲ ಕೆಲಸ ಮಾಡೋಕೆ ಬಿಟ್ರೆ ತಾನೇ? ಹಿಂಗೇ ಆದ್ರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯನ್ನ ಇತಿಹಾಸ ‘ಶೂನ್ಯ ವೇಳೆ’ ಅಂತ ನೆನಪಿಟ್ಟುಕೊಳ್ಳುತ್ತೆ ಅಷ್ಟೇ.
  • (ಕಾಲ್ಪನಿಕ ಸಂದರ್ಶನ)

ನೆಟ್‌ ಪಿಕ್ಸ್

ಖೇಮು ಯಾವಾಗ್ಲೂ ಸಿಕ್ಕಾಪಟ್ಟೆ ಕುಡೀತಿದ್ದ. ಕುಡಿದರೆ ಅವನಿಗೆ‌ ಮೈಮೇಲೆ ಜ್ಞಾನವೇ ಇರುತ್ತಿರಲಿಲ್ಲ. ತನ್ನ ಸುತ್ತಮುತ್ತ ಅಷ್ಟೇ ಅಲ್ಲ, ತನಗೆ ಏನಾಗ್ತಾ ಇದೆ ಅನ್ನೋದೂ ಅವನಿಗೆ ಗೊತ್ತಾಗ್ತಾ ಇರಲಿಲ್ಲ. ಖೇಮು ಮನೆಯ ಕುಡಿಯುತ್ತಿದ್ದುದರಿಂದ ಖೇಮುಶ್ರೀಗೆ ಇದರ ಅನುಭವ ಹಲವಾರು ಬಾರಿ ಆಗಿತ್ತು. ಇದರಿಂದ ಬೇಸತ್ತು ಹೋಗಿದ್ಲು. ಆದರೆ ಖೇಮು ಅದನ್ನು ನಂಬುತ್ತಿರಲಿಲ್ಲ. ‘ನಾನೆಷ್ಟೇ ಕುಡಿದರೂ ಅಲರ್ಟ್ ಆಗಿರ್ತೀನಿ, ನಂಗೆ ಗೊತ್ತಾಗುತ್ತೆ’ ಅಂತನೇ ವಾದ ಮಾಡ್ತಾ ಇದ್ದ.

ಒಂದು ದಿನ ಖೇಮುಶ್ರೀ, ‘ಕುಡಿದ ಮೇಲೆ ನಿಮಗೆ ಮೈಮೇಲೆ eನ ಇರಲ್ಲ ಅನ್ನೋದನ್ನ ಇವತ್ತು ಪ್ರೂವ್ ಮಾಡೇ ಮಾಡ್ತೀನಿ’ ಅಂತ ಚಾಲೆಂಜ್ ಮಾಡಿದಳು. ಈ ಚಾಲೆಂಜಿಗೆ ಒಪ್ಪಿದ ಖೇಮು ೩ ಲಾರ್ಜ್ ವಿಸ್ಕಿ ಕುಡಿದು ಟೈಟಾದ. ಮನೆಯ ಎಣ್ಣೆ ಸ್ಟಾಕ್ ಇಟ್ಟಿರುತ್ತಿದ್ದುದರಿಂದ ಖೇಮುಶ್ರೀಗೆ ‘ಇನ್ನೊಂದು ಲಾರ್ಜ್ ವಿಸ್ಕಿ ತಗೊಂಬಾ’ ಅಂದ. ತಂದು ಕೊಟ್ಟ ಖೇಮುಶ್ರೀ, ಅದನ್ನು ಖೇಮು ಕುಡಿದ ನಂತರ ಮೊದಲೇ ಪ್ಲ್ಯಾನ್ ಮಾಡಿದಂತೆ ಅವನನ್ನು ಹಿಗ್ಗಾಮುಗ್ಗ ಬಾರಿಸತೊಡಗಿದಳು. ಖೇಮು ನೆಲದ ಮೇಲೆ ಬಿದ್ದು ಹೊರಳಾಡಿದ ನಂತರ ಎದ್ದು ಖೇಮುಶ್ರೀ ಮುಖ ನೋಡಿ, ಮತ್ತೆ ‘ಇನ್ನೊಂದು ಲಾರ್ಜ್ ವಿಸ್ಕಿ ತಗೊಂಡ್ ಬಾ’ ಅಂದ. ವಿಸ್ಕಿ ರಿಪೀಟ್ ಆದಂತೆ ಅದನ್ನು ಕುಡಿದ ನಂತರ ಖೇಮುಶ್ರೀ ಒದೆಯೂ ರಿಪೀಟ್ ಆಯ್ತು.

ಒದೆ ತಿಂದು ಬಿದ್ದು, ಮತ್ತೆ ಎದ್ದು ಹೆಂಡತಿ ಮುಖವನ್ನು ಗುರಾಯಿಸಿದ ಖೇಮು, ಮತ್ತೆ ಹೇಳಿದ ‘ಇನ್ನೊಂದು
ಲಾರ್ಜ್ ವಿಸ್ಕಿ ತಗೊಂಡ್ ಬಾ’. ‘ಓ, ಈಗ ನನ್ನ ಗಂಡನಿಗೆ ಎಷ್ಟು ಕುಡಿದರೂ ತನ್ನ ಸುತ್ತಮುತ್ತ ಏನಾಗ್ತಾ ಇದೆ ಅಂತ ಗೊತ್ತಾಗ್ತಿದೆಯಲ್ಲ ಸಾಕು’ ಅಂತ ಖೇಮುಶ್ರೀ ಖುಷಿಯಾಗಿ ಇನ್ನೊಂದು ತಗೊಂಡ್ ಬಂದ್ ಕೊಟ್ಳು. ಮತ್ತೆ ಏಟನ್ನೂ ಕೊಟ್ಟಳು. ಈ ಸಲ ಒದೆ ತಿಂದು ಕೆಳಗೆ ಬಿದ್ದು, ಹೆಂಡ್ತಿಯನ್ನು ಗುರಾಯಿಸಿದ ಖೇಮು ಹೇಳಿದ, ‘ಇನ್ನೊಂದ್ ಲಾರ್ಜ್ ರಮ್ ತಗೊಂಡ್ ಬಾ’. ಅದಕ್ಕೆ ಖೇಮುಶ್ರೀ, ‘ಅಲ್ಲರೀ, ನೀವು ಆವಾಗಿಂದ ವಿಸ್ಕಿ ಅಲ್ವಾ ಕುಡಿತಾ ಇದೋದು?’ ಅಂದ್ಳು. ಅದಕ್ಕೆ ಖೇಮು ಹೇಳಿದ, ‘ವಿಸ್ಕಿ ಕುಡಿತಾ ಇದ್ದೀನಿ ಅಂತ ನಂಗೊತ್ತು, ನಾನು ಅಲರ್ಟ್ ಆಗೇ ಇದ್ದೀನಿ; ಆದ್ರೆ, ವಿಸ್ಕಿ ಕುಡಿದ್ರೆ ಯಾಕೋ ಆವಾಗಿಂದ ಸಿಕ್ಕಾಪಟ್ಟೆ ಮೈ ಕೈ ನೋವಾಗ್ತಿದೆ. ಅದಕ್ಕೆ ಈ ಸಲ ರಮ್ ತಗೊಂಡ್ ಬಾ’.

ಲೈನ್‌ ಮ್ಯಾನ್

ಸದಾ ಅಭಿವೃದ್ಧಿಯ ಜಪ ಮಾಡೋ ದೇಶ

  • ಜಪಾನ್‌
  • ಸರ್ಕ್ಯುಲೇಶನ್ ಕಡಿಮೆ ಆಗಿರೋ ಡೈಲಿ ಪತ್ರಿಕೆ
    -‘ವೀಕ್’ಲಿ
  • ‘ಮೂಗು’ ಔಟ್ ಆಫ್ ಆರ್ಡರ್‌ ಆಗಿದ್ರೆ ಅದು
  • ‘ನಾಕ್’ ಔಟ್
  • ಮೂಗು ಕಟ್ಟಿಕೊಂಡ್ರೆ ಅದು
  • ‘ನಾಕಾ’ ಬಂದಿ
  • ನೀವು ಸರಿಯಾಗಿ ಯೋಚನೆ ಮಾಡ್ತಾ ಇಲ್ಲ ಅನ್ನೋದನ್ನು ಕಣ್ಣು, ಮೂಗು ಪದಗಳನ್ನ ಬಳಸಿ ಹೇಳುವಾಗ ಆಗುವ ವ್ಯತ್ಯಾಸ
  • ನೀವು ‘ವಕ್ರ’ದೃಷ್ಟಿ ಬೀರ್ತಾ ಇದ್ದೀರಿ.
  • ನೀವು ನಿಮ್ಮ ಮೂಗಿನ ‘ನೇರಕ್ಕೆ’ ಮಾತಾಡ್ತಾ ಇದ್ದೀರಿ.
    ಭಾಷಾ ಬಳಕೆ
  • ಕನ್ನಡ ಮಾತಾಡೋನಷ್ಟೇ ಅಲ್ಲ, ಕನ್ನಡಿ ಮಾರೋನೂ ಕನ್ನಡಿಗನೇ
    ಪೊಲೀಸರೇ ಹೆಚ್ಚಾಗಿರುವ ಪ್ರದೇಶ
  • ಪೊಲೀಸ್ ‘ಬೆಲ್ಟ್’‌
  • ಜನಸಂದಣಿಯಲ್ಲಿ ಸಮಯ ನೋಡಿ ಕಾದು ಹೊಂಚುಹಾಕಿ ಜನರ ಪರ್ಸ್, ಮೊಬೈಲ್ ಎತ್ತೋನು
  • ‘ವೆಯ್ಟ್’ ‘ಲಿಫ್ಟರ್’
  • ಬ್ಯಾಟ್ಸ್‌ಮನ್‌ಗಳು ರನೌಟ್ ಆಗ್ತಾ ಇರೋದನ್ನ ತಡೆಯಲಾಗದೆ ಕೈ ಚೆಲ್ಲಿ ಕೂತ ಕ್ಯಾಪ್ಟನ್ ಮಾತುಗಳು
  • ವಿ ಹ್ಯಾವ್ ರನ್ ಔಟ್ ಆಫ್‌ ಐಡಿಯಾಸ್
    ರಸ್ತೆ ಅಡವಿಟ್ಟು ಸಾಲ ಪಡೆದ ಪಾಕಿಸ್ತಾನ
  • ಜೀವ್ನ ರೋಡಿಗ್ ಬರೋದು ಅಂದ್ರೆ ಇದೇನಾ?