ನಮ್ಮ ಪೂರ್ವಜರು ಇಂದಿನ ಮೆಡಿಟೇರೇನಿಯನ್ ಪ್ರದೇಶದ ಆಸುಪಾಸಿನಲ್ಲಿ ತಮ್ಮ ಮೊದಲ ನಾಗರಿಕತೆಯನ್ನು ಕಟ್ಟಿಕೊಂಡರು. ಗುಹಾವಾಸಿಗಳಾಗಿದ್ದ ಅವರೊಡನೆ ಇನ್ನೂ ಹಲವು ಜೀವಿಗಳು ವಾಸಿಸುತ್ತಿದ್ದು, ಅವುಗಳಲ್ಲಿ ಬಾವಲಿಗಳೂ ಸೇರಿದ್ದವು. ಈ ಬಾವಲಿಗಳ ಒಡಲಿನ ಮೇಲಿದ್ದ ಅವುಗಳ ರಕ್ತ ಹೀರಿ ಬದುಕುವ ತಿಗಣೆಗಳು ಗುಹೆಯಲ್ಲೇ ವಾಸವಾಗಿದ್ದ ಮನುಷ್ಯನ ಸಂಪರ್ಕಕ್ಕೆ ಬಂದವು. ಅವಕ್ಕೆ ಬಾವಲಿಗಳದ್ದಕ್ಕಿಂತ
ಮನುಷ್ಯನ ರಕ್ತವೇ ರುಚಿಯಾಗಿತ್ತೇನೋ? ಹಾಗಾಗಿ ಮನುಷ್ಯನ ಜತೆ ಉಳಿದು ಅವನ ಬಟ್ಟೆ, ಹಾಸಿಗೆ, ಅವನು ಮಲಗುವ ಸುತ್ತಮುತ್ತಲಿನ ಸಂದುಗೊಂದುಗಳಲ್ಲಿ ವಾಸಿಸತೊಡಗಿದವು. ಇವಕ್ಕೆ ಸೂರ್ಯನ ಬಿಸಿಲೆಂದರೆ ಆಗದು, ರಾತ್ರಿ ಮಾತ್ರವೇ ಹೊರಬರುತ್ತಿದ್ದವು. ಹೊಟ್ಟೆ ತುಂಬಾ ರಕ್ತ ಕುಡಿದು ತಮ್ಮ ನೆಲೆಗಳಿಗೆ ಹಿಂದಿರುಗುತ್ತಿದ್ದವು. ಹೀಗೆ ತಿಗಣೆಗಳು ನಮ್ಮ ಪೂರ್ವಜರ ಸಂಗಾತಿಯಾದವು.
ಅಲೆಮಾರಿಗಳಾಗಿದ್ದ ನಮ್ಮ ಪೂರ್ವಜರು ಒಂದೆಡೆ ನಿಲ್ಲುತ್ತಿರಲಿಲ್ಲ. ೫೦-೧೦೦ ಜನರ ಗುಂಪುಗಳಲ್ಲಿ ಆಹಾರ ದೊರೆಯುವ ಹೊಸ ಸ್ಥಳಗಳನ್ನು ಹುಡುಕಿ ವಲಸೆ ಹೋಗುತ್ತಿದ್ದ ಅವರ ಜತೆಯಲ್ಲೇ ತಿಗಣೆಗಳೂ ಪಯಣಿಸಿದವು, ಮೆಡಿಟೇರೇನಿಯನ್ ಪ್ರಾಂತದಿಂದ ಉಳಿದೆಡೆಗೂ ಹರಡಲಾರಂಭಿಸಿದವು. ಮನುಷ್ಯನು ಒಂದೆಡೆ ನಿಂತು ಹಳ್ಳಿ, ಪಟ್ಟಣ, ಸಾಮ್ರಾಜ್ಯಗಳನ್ನು ಕಟ್ಟತೊಡಗಿದಾಗ ಅವೂ ಜತೆಯಲ್ಲೇ ತಮ್ಮ ಸಾಮ್ರಾಜ್ಯ ವಿಸ್ತರಿಸುತ್ತಾ ಸ್ಥಿರ ಬದುಕನ್ನು ನಡೆಸಲಾರಂಭಿಸಿದವು. ಮನುಷ್ಯನ ಜತೆ ತಿಗಣೆಗಳು ವಾಸಿಸುತ್ತಿದ್ದ ಮೊದಲ ಪುರಾವೆಯು, ಕ್ರಿ.ಪೂ.೩೫೦೦ ವರ್ಷಗಳ ಈಜಿಪ್ಷಿಯನ್ ಸಂಸ್ಕೃತಿಗೆ ಸೇರಿದ ಮಮ್ಮಿಗಳಲ್ಲಿ ದೊರೆತಿವೆ. ಮಮ್ಮಿಗಳ ಉಡುಗೆ ತೊಡುಗೆಗಳಲ್ಲಿ ತಿಗಣೆಗಳೂ ಮಮ್ಮೀಕರಣಗೊಂಡಿವೆ. ಅಂದಿನ ಈಜಿಪ್ಷಿಯನ್ನರು ತಿಗಣೆಗಳನ್ನು ಉಪದ್ರವ ಕೀಟಗಳನ್ನಾಗಿ ಪರಿಗಣಿಸಿದರೂ, ಅವನ್ನು ಬಳಸಿ ಕೊಂಡು ಔಷಧಗಳನ್ನು ಸಿದ್ಧಪಡಿಸುತ್ತಿದ್ದರು. ಹಾವಿನ ವಿಷವನ್ನಿಳಿಸಲು ತಿಗಣೆಗಳ ‘ಕಾಕ್‌ಟೇಲ್’ ಬಳಸುತ್ತಿದ್ದರು ಎಂದು ಪ್ಲೀನಿಯ ಬರೆದಿದ್ದಾನೆ. ಗ್ರೀಕರು ಮತ್ತು ರೋಮನ್ನರು ಜಿಗಣೆಗಳ ಹಿಡಿತದಿಂದ ಪಾರಾಗಲು ಅವುಗಳ ಬಾಯಿಯ ಬಳಿ ತಿಗಣೆಗಳನ್ನು ಸುಡುತ್ತಿದ್ದರಂತೆ (ನಮ್ಮ ಚರ್ಮವನ್ನು ಕಚ್ಚಿ ಹಿಡಿದ ಜಿಗಣೆಯನ್ನು ಬಲವಂತಾಗಿ ಕೀಳಲು ಯತ್ನಿಸಬಾರದು. ಅದರ ಹಲ್ಲು ಚರ್ಮದಲ್ಲೇ ಉಳಿದು, ದೇಹ ಮಾತ್ರ ತುಂಡಾಗಬಹುದು. ಆಗ ರಕ್ತಸ್ರಾವ ನಿಲ್ಲುವುದಿಲ್ಲ. ಅದಕ್ಕಾಗಿ ಜಿಗಣೆಯೇ ಬಿಟ್ಟುಹೋಗುವಂತೆ ಮಾಡುವುದು ಒಳ್ಳೆಯ ಉಪಾಯ. ಸುಣ್ಣ/ನಶ್ಯ/ಬೆಳ್ಳುಳ್ಳಿ ರಸಗಳ ಘಾಟಿಗೆ ಅವು ಉದುರಿಬೀಳುತ್ತವೆ). ಅದರ ಘಾಟಿಗೆ ಜಿಗಣೆಗಳು ಕೆಳಗೆ ಬೀಳುತ್ತಿದ್ದವು.
ತಿಗಣೆಗಳು ನಾನಾ ಕಾಯಿಲೆಗಳನ್ನು ಗುಣಪಡಿಸುತ್ತವೆ ಎನ್ನುವ ನಂಬಿಕೆಯ ಮೇಲೆ ಅಂದಿನ ಜನರು ಅವನ್ನು ವೈನ್, ಬೀನ್ ಅಥವಾ ಮೊಟ್ಟೆಯ ಜತೆ ಹುರಿದು ತಿನ್ನುತ್ತಿದ್ದರು. ಇಂಥ ನಂಬಿಕೆಗಳು ೨೦ನೇ ಶತಮಾನದ ಆರಂಭದ ಯುರೋಪ್ ಮತ್ತು ಉತ್ತರ ಅಮೆರಿಕನ್ನರಲ್ಲಿ ಇದ್ದವು ಎಂದರೆ ಆಶ್ಚರ್ಯವಾಗುತ್ತದೆ. ೫ನೇ ಅಮೆರಿಕನ್ ಹೋಮಿಯೋಪಥಿಕ್ ಫಾರ್ಮಕೋಪಿಯದಲ್ಲಿ ‘ಸೈಮ್ಯಾಕ್ಸ್’ ಟಿಂಕ್ಚರ್ ನೀಡಿ ಮಲೇರಿಯವನ್ನು ಗುಣಪಡಿಸಬಹುದು ಎಂಬ ವಿವರವಿದೆ. ಸೈಮ್ಯಾಕ್ಸ್ ಎಂಬುದು ತಿಗಣೆಯ ವೈಜ್ಞಾನಿಕ ಹೆಸರು. ನಾಗರಿಕತೆಯ ಫಲವಾಗಿ ಮನುಷ್ಯ ಭೂಮಿಯ ಎಲ್ಲ ಭಾಗಗಳಲ್ಲಿ ನೆಲೆಸಲಾರಂಭಿಸಿದ. ಮೆಡಿಟೆರೇನಿಯನ್ ಪ್ರದೇಶದಿಂದ ಯುರೋಪ್ ಮತ್ತು ಏಷ್ಯಾಗಳಿಗೆ ವಲಸೆ ಹೊರಟಾಗ ಅವನ ಜತೆ ತಿಗಣೆಯೂ ಹೊರಟು, ಕ್ರಿ.ಶ.೭೭ರ ಆಸುಪಾಸಿನಲ್ಲಿ ಇಟಲಿ ತಲುಪಿತು. ಚೀನಾ ದೇಶಕ್ಕೆ ಕ್ರಿ.ಶ.೬೦೦ರಲ್ಲಿ, ಜರ್ಮನಿ ಮತ್ತು ಫ್ರಾನ್ಸ್ ದೇಶಗಳನ್ನು ೧೧ ಮತ್ತು ೧೩ನೆಯ ಶತಮಾನಗಳಲ್ಲಿ ತಲುಪಿತು. ತಿಗಣೆಗಳು ಬಡವ-ಬಲ್ಲಿದರೆಂಬ ಭೇದವಿಲ್ಲದೆ ಎಲ್ಲರ ರಕ್ತವನ್ನು ಹೀರುತ್ತಿದ್ದವು, ಆದರೆ ಅವುಗಳ ಕಾಟ ಬಡವರಿಗೇ ಅಧಿಕವಾಗಿತ್ತು. ಶ್ರೀಮಂತರು ಆಗಾಗ್ಗೆ ತಮ್ಮ ಹಾಸಿಗೆ-ಹೊದಿಕೆ ಬದಲಿಸುತ್ತಿದ್ದ ಕಾರಣ, ತಿಗಣೆಗಳೂ ಶ್ರೀಮಂತಿಕೆಯನ್ನು ಅನಿವಾರ್ಯವಾಗಿ ತೊರೆಯಬೇಕಾಗಿತ್ತು. ಆದರೆ ಬಡವರು ದೀರ್ಘಕಾಲ ಒಂದೇ ಹಾಸಿಗೆ-ಹೊದಿಕೆ ಬಳಸುತ್ತಿದ್ದುದರಿಂದ, (ಶ್ರೀಮಂತರ ಜತೆಯಲ್ಲಿ) ಬಡವರ ರಕ್ತವನ್ನು ಹೀರುತ್ತಾ ಅವರ ಮನೆಗಳಲ್ಲಿ ನೆಮ್ಮದಿಯಾಗಿದ್ದವು.
೧೫೮೩ರ ಹೊತ್ತಿಗೆ ಇಂಗ್ಲೆಂಡಿನಲ್ಲಿ ಮೊದಲ ಬಾರಿಗೆ ಕಂಡುಬಂದ ತಿಗಣೆ ೧೭-೧೮ನೇ ಶತಮಾನದ ಹೊತ್ತಿಗೆ ಸರ್ವವ್ಯಾಪಿಯಾಯಿತು. ಯುರೋಪಿಯನ್ನರು ಅಮೆರಿಕಕ್ಕೆ ವಲಸೆ ಹೋದಾಗ ತಿಗಣೆಗಳೂ ಜತೆಯಲ್ಲೇ ತೆರಳಿ, ನ್ಯೂಯಾರ್ಕ್, ಸ್ಯಾನ್-ನ್ಸಿಸ್ಕೋ, ಮಿಯಾಮಿಯಂಥ ಬಂದರು ನಗರಗಳಲ್ಲಿ ಅವುಗಳ ಕಾಟ ತೀವ್ರವಾಯಿತು. ೧೯೯೦ರ ದಶಕದಲ್ಲಿ ಅಮೆರಿಕಕ್ಕೆ ವಲಸೆ ಬಂದ ಜಗದ ಜನರು, ಹೊಸದಾಗಿ ತಿಗಣೆಗಳನ್ನು ತಮ್ಮೊಡನೆ ಅಮೆರಿಕಕ್ಕೆ ತಂದರು. ಅಮೆರಿಕದಲ್ಲಿ ಮತ್ತೊಮ್ಮೆ ತಿಗಣೆಗಳ ಸಾಮ್ರಾಜ್ಯ ಬೆಳೆಯಲಾರಂಭಿಸಿತು. ತಿಗಣೆಗಳು ಕೀಟಗಳು. ಇವುಗಳ ವೈಜ್ಞಾನಿಕ ನಾಮಧೇಯ ಸೈಮ್ಯಾಕ್ಸ್. ೨ ಪ್ರಭೇದಗಳಿವೆ. ಸೈಮ್ಯಾಕ್ಸ್ ಲೆಕ್ಟುಲಾರಿಯಸ್ ಮತ್ತು ಸೈಮ್ಯಾಕ್ಸ್ ಹೆಮಿಪ್ಟೆರಸ್. ಇವು ಮೂಲತಃ ಉಷ್ಣವಲಯದ ಜೀವಿಗಳು. ವಯಸ್ಕ ತಿಗಣೆಯು ಸುಮಾರು ೧-೭ ಎಂ.ಎಂ. ಉದ್ದ, ೨-೩ ಎಂ.ಎಂ. ಅಗಲವಿರುತ್ತದೆ. ನಸುಕಂದು ಬಣ್ಣದಿಂದ ಗಾಢಕಂದು ಬಣ್ಣದವರೆಗಿರುತ್ತದೆ. ದೇಹ ಚಪ್ಪಟೆಯಾಗಿದ್ದು ಅಂಡಾಕೃತಿಯಲ್ಲಿರುತ್ತದೆ.
ಮುಂದಿನ ರೆಕ್ಕೆಗಳು ಪಳೆಯುಳಿಕೆ ಮಾತ್ರ. ಹಿಂದಿನ ರೆಕ್ಕೆಗಳು ಸಂಪೂರ್ಣ ಮಾಯವಾಗಿವೆ. ಹಾಗಾಗಿ ತಿಗಣೆ ಹಾರಲಾರದು. ಹೆಣ್ಣು ದಿನಕ್ಕೆ ೧-೧೦ರಂತೆ ಜೀವಮಾನದಲ್ಲಿ ಸುಮಾರು ೨೦೦-೫೦೦ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಯೊಡೆದು ಬರುವ ಮರಿಹುಳು ೫ ಸಲ ಪೊರೆ ಕಳಚಿ ವಯಸ್ಕ ಹಂತವನ್ನು ತಲುಪುತ್ತದೆ. ಮರಿತಿಗಣೆಗಳು ಬಹುಪಾಲು ಪಾರದರ್ಶಕವಾಗಿದ್ದು ಲಘುವರ್ಣದಲ್ಲಿರುತ್ತವೆ. ಬಾಯಲ್ಲಿನ ಹರಿತವಾದ ‘ಹಲ್ಲು’ಗಳ ಸಾಲು ಗರಗಸದಂತೆ ನಮ್ಮ ಚರ್ಮ ಸೀಳಬಲ್ಲವು. ತಿಗಣೆಯ ಜೊಲ್ಲಿನಲ್ಲಿನ ಮೊದಲ ರಾಸಾಯನಿಕ ನೋವನ್ನು ತಡೆಗಟ್ಟಿದರೆ, ಎರಡನೆಯದು ರಕ್ತವು ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತದೆ. ಹಾಗಾಗಿ ತಿಗಣೆ
ಗಳು ನೆಮ್ಮದಿಯಾಗಿ ರಕ್ತವನ್ನು ಹೀರಬಲ್ಲವು. ತಿಗಣೆಗಳು ಸಂಘಜೀವಿಗಳಾಗಿದ್ದು ಎಲ್ಲ ವಯಸ್ಸಿನವೂ ಒಂದೆಡೆಯೇ ವಾಸಿಸುತ್ತವೆ. ಇವು ಪ್ರತಿದಿನದ ಬದಲಿಗೆ ೫-೭ ದಿನಕ್ಕೊಮ್ಮೆ ರಕ್ತವನ್ನು ಕುಡಿಯುತ್ತವೆ. ತಿಗಣೆ ಒಂದು ಸಲ ಹೊಟ್ಟೆ ತುಂಬಾ ರಕ್ತ ಕುಡಿಯಿತೆಂದರೆ, ೭೦ ದಿನಗಳವರೆಗೆ ಮತ್ತೊಂದು ಊಟವಿಲ್ಲದೆ ಬದುಕಬಲ್ಲುದು. ತಿಗಣೆ ಕಚ್ಚಿದ ಸ್ಥಳದಲ್ಲಿ ಗಂಧೆಗಳೇಳುತ್ತವೆ. ಉರಿ ಮತ್ತು ನವೆಯಾ ಬಹುದು. ಮಿಗಿಲಾಗಿ ನಿದ್ರೆ ತಪ್ಪಿದ ಕಿರಿಕಿರಿ.
ಅಪರೂಪಕ್ಕೆ ಕೆಲವರಲ್ಲಿ ಬೊಬ್ಬೆಗಳೇಳಬಹುದು, ವಿಪರೀತ ದಣಿವಾಗಿ ಜ್ವರ ಬರಬಹುದು. ಗಂಭೀರ ಅಲರ್ಜಿಯ ದುರ್ಲಕ್ಷಣಗಳು ಹಾಗೂ ಅಪರಕ್ಷಣೆಯು (ಅನಾ-ಲಾಕ್ಸಿಸ್) ತಲೆದೋರ ಬಹುದು. ತಿಗಣೆಗಳಲ್ಲಿ ಅನೇಕ ರೋಗಜನಕಗಳಿರುತ್ತವೆಯಾದರೂ, ಅವು ಯಾವುದೇ ಸೋಂಕನ್ನು ಒಬ್ಬರಿಂದ ಒಬ್ಬರಿಗೆ ಹರಡುತ್ತವೆ ಎನ್ನುವುದಕ್ಕೆ ಪುರಾವೆ ದೊರೆತಿಲ್ಲ. ಆದರೆ ಅವು ಕಚ್ಚಿದ ಸ್ಥಳಗಳಲ್ಲಿ ಬ್ಯಾಕ್ಟೀರಿಯ ಸೇರಿಕೊಂಡು
ಹುಣ್ಣಾಗಬಹುದು. ತಿಗಣೆಗಳು ಮನುಷ್ಯರ ರಕ್ತವನ್ನೇ ಇಷ್ಟಪಡುತ್ತದೆಯಾದರೂ, ಅನಿವಾರ್ಯ ಸಂದರ್ಭಗಳಲ್ಲಿ ಮನೆಯ ನಾಯಿ, ಬೆಕ್ಕು, ಇಲಿ, ಕೋಳಿ, ಬಾವಲಿಗಳ ರಕ್ತ ಹೀರಿಯೂ ಬದುಕಬಲ್ಲವು. ವಿಶೇಷ ತರಬೇತಿ ಪಡೆದ ನಾಯಿಗಳು, ತಿಗಣೆಗಳ ಇರವನ್ನು ಶೇ.೯೭.೫ರಷ್ಟು ಸಲ ಪತ್ತೆಹಚ್ಚಬಲ್ಲವಂತೆ. ತಿಗಣೆಗಳು ಮನುಷ್ಯನ ಶರೀರದಿಂದ ಹೊರಬರುವ ಕಾರ್ಬನ್ ಡೈ ಆಕ್ಸೈಡ್, ಲ್ಯಾಕ್ಟಿಕ್ ಆಸಿಡ್ ಮತ್ತು ಫೆರಮೋನುಗಳೆಂಬ ವಿಶೇಷ ರಾಸಾಯನಿಕಗಳ ಜಾಡು ಹಿಡಿದು ಅವನನ್ನು ಹುಡುಕಿ ಬರುತ್ತವೆ. ಹಾಗಾಗಿ ಈ ರಾಸಾಯನಿಕಗಳನ್ನು ಕೃತಕವಾಗಿ ಹರಿಸುವ ಸಾಧನಗಳನ್ನಿಟ್ಟು ತಿಗಣೆಗಳ ಇರವನ್ನು ಪತ್ತೆಹಚ್ಚಬಹುದು. ತಿಗಣೆಗಳನ್ನು ಕೊಂದು ತಿನ್ನುವ ಜೀವಿಗಳಲ್ಲಿ ಜಿರಲೆ, ಇರುವೆ, ಜೇಡ, ಲಕ್ಷ್ಮೀಚೇಳು ಮುಖ್ಯವಾದವು.
ಹಾಗಂತ ಇವನ್ನು ಸಾಕಿಕೊಳ್ಳುವುದು ಅಸಾಧ್ಯ. ಏಕೆಂದರೆ ಇವು ಅದಾಗಲೇ ನಮ್ಮ ಬದುಕನ್ನು ಅಸಹನೀಯಗೊಳಿಸಿವೆ. ನಾವು ಪ್ರಜ್ಞಾಪೂರ್ವಕವಾಗಿ ಈ ಜೀವಿಗಳನ್ನು ನಿವಾರಿಸುವ ಕಾರಣ, ತಿಗಣೆಗಳಿಗೆ ಶತ್ರುಗಳೇ ಇಲ್ಲಂದತಾಗಿದೆ. ಭಾರತ ಸೇರಿದಂತೆ ಜಗತ್ತಿನ ಎಲ್ಲ ಉಷ್ಣವಲಯದ ದೇಶಗಳಲ್ಲಿರುವ ತಿಗಣೆಗಳು ಜನವಸತಿ ಅಧಿಕವಿರುವ, ಹೋಟೆಲು, ಹಾಸ್ಟೆಲು, ಅನಾಥಾಶ್ರಮ, ಜೈಲುಗಳಲ್ಲಿ, ಬಸ್ಸು, ರೈಲು, ವಿಮಾನಗಳಲ್ಲೂ ಇರುತ್ತವೆ. ಹಾಗಾಗಿ ಪರವೂರುಗಳಲ್ಲಿ ಒಂದೆರಡು ದಿನ ತಂಗಿದ್ದವರು ಮನೆಗೆ ಬಂದಕೂಡಲೇ ತಮ್ಮ ಬಟ್ಟೆಗಳನ್ನು ನೇರವಾಗಿ ವಾಷಿಂಗ್ ಮಷಿನ್‌ಗೆ ಹಾಕಿ ಡ್ರೈಯರ್‌ನಲ್ಲಿ ಒಣಗಿಸಬೇಕು. ಇಲ್ಲದಿದ್ದರೆ ತಿಗಣೆಗಳು ಮನೆಯಲ್ಲಿ ಬೀಡುಬಿಡುತ್ತವೆ. ನಂತರ ಅವುಗಳ ನಿರ್ನಾಮ ಹೇಳುವಷ್ಟು ಸುಲಭವಾಗುವುದಿಲ್ಲ. ಹಾಗೆಯೇ ಸೆಕೆಂಡ್‌ಹ್ಯಾಂಡ್ ಫರ್ನೀಚರುಗಳನ್ನು ಕೊಂಡಮೇಲೆ ಮೊದಲು ಬಿಸಿಲಿನಲ್ಲಿಟ್ಟು, ಕ್ರಿಮಿನಾಶಕ ಸಿಂಪಡಿಸಿ ನಂತರ ಮನೆಯೊಳಗೆ ತರಬೇಕು. ೧೯೫೦ರಲ್ಲಿ ಡಿಡಿಟಿ ಕಂಡುಹಿಡಿದ ಮನುಷ್ಯ ಅದನ್ನು ಎಲ್ಲೆಡೆ ಬಳಸಲಾರಂಭಿಸಿದ್ದಕ್ಕೆ ಸೊಳ್ಳೆಗಳ ಜತೆ ತಿಗಣೆಗಳೂ ನಾಶವಾದವು. ಯುರೋಪ್, ಅಮೆರಿಕ ತಿಗಣೆಮುಕ್ತವಾದವು.
ಆದರೆ ಡಿಡಿಟಿಯಿಂದ ಪರಿಸರದ ಮೇಲೆ ದುಷ್ಪರಿಣಾಮವಾಗುತ್ತದೆ ಎಂಬುದು ತಿಳಿದಮೇಲೆ, ೧೯೭೨ರ ವೇಳೆಗೆ ಅದರ ಬಳಕೆಯನ್ನು ನಿಲ್ಲಿಸಬೇಕಾಯಿತು. ಇಷ್ಟುಹೊತ್ತಿಗೆ ಸೊಳ್ಳೆಗಳ ಜತೆಯಲ್ಲಿ ತಿಗಣೆಗಳೂ ಡಿಡಿಟಿಗೆ
ಪ್ರತಿರೋಧಕತೆಯನ್ನು ಬೆಳೆಸಿಕೊಂಡು, ಡಿಡಿಟಿಯನ್ನೇ ತಿಂದು ಬದುಕುವ ಕಲೆಯನ್ನು ಕರಗತಗೊಳಿಸಿಕೊಂಡಿದ್ದವು. ಹಾಗಾಗಿ ೧೯೯೦ರ ದಶಕದಲ್ಲಿ ತಿಗಣೆಗಳು ಮತ್ತೆ ಯುರೋಪ್ -ಅಮೆರಿಕಗಳನ್ನು ಕಾಡಿದಾಗ, ಅವನ್ನು ಕೊಲ್ಲಲು ಡಿಡಿಟಿ ಅಶಕ್ತವಾಯಿತು. ತಿಗಣೆಗಳು ಲಿಂಡೇನ್, ಮ್ಯಾಲಾಥಿಯಾನ್ ನಂಥ ಕೀಟನಾಶಕಗಳಿಗೆ ಪ್ರತಿರೋಧಕತೆ ಬೆಳೆಸಿಕೊಂಡ ಕಾರಣ ನಿರ್ನಾಮ ಅಸಾಧ್ಯವೆನಿಸಿತು. ಮನೆ, ಅಂಗಡಿ, ವಸತಿ ಪ್ರದೇಶಗಳನ್ನು ತಿಗಣೆ ಮುಕ್ತವಾಗಿ ಮಾಡುವ ಸಂಸ್ಥೆಗಳು ಹುಟ್ಟಿಕೊಂಡವು. ಇವು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ತೆಗೆದುಕೊಂಡು ಸಯನೇಡ್ ಹೊಗೆಯಂಥ ಅಪಾಯಕಾರಿ ರಾಸಾಯನಿಕಗಳನ್ನು ಬಳಸಿ ತಿಗಣೆಗಳ ನಿರ್ಮೂಲನಕ್ಕೆ ಮುಂದಾದವು. ಈ ಹಿನ್ನೆಲೆಯಲ್ಲಿ ಇಂದಿಗೂ ತಿಗಣೆಗಳನ್ನು ಸರ್ವನಾಶ ಮಾಡಬಲ್ಲ ಸುರಕ್ಷಿತ ಕೀಟನಾಶಕವಿಲ್ಲ ಎನ್ನಬಹುದು.
ತಿಗಣೆಗಳನ್ನು ನಿವಾರಿಸುವ ಸುರಕ್ಷಿತ ವಿಧಾನವೆಂದರೆ, ವ್ಯಾಕ್ಯೂಮ್ ಕ್ಲೀನರ್ ಮತ್ತು ಸೋಪುನೀರಿನ ಬಳಕೆ. ಮೊದಲು ತಿಗಣೆಗಳು ಇರಬಹುದಾದ ಎಲ್ಲ ಕುರ್ಚಿ, ಮಂಚ, ಮೇಜು ಹಾಗೂ ಗೋಡೆಯ ಬಿರುಕುಗಳನ್ನು
ನೋಡಿಕೊಂಡು ವ್ಯಾಕ್ಯೂಮ್ ಕ್ಲೀನರ್ ನೆರವಿನಿಂದ ಸ್ವಚ್ಛಗೊಳಿಸಬೇಕು. ನಂತರ ಸೋಪುನೀರನ್ನು ಸಿಂಪಡಿಸಬೇಕು. ಕರ್ಟನ್, ಹೊದಿಕೆ, ತಲೆದಿಂಬಿನ ಕವರ್‌ಗಳನ್ನು ಬಿಸಿಲಿಗೆ ಹಾಕಬೇಕು. ಸಾಧ್ಯವಾದರೆ ಅವನ್ನು ವಾಷಿಂಗ್ ಮಷಿನ್‌ಗೆ ಹಾಕಿ, ಡ್ರೈಯರಿನಲ್ಲಿ ಒಣಗಿಸಿ ಬಿಸಿಲಿಗೆ ಹಾಕಬೇಕು. ಬೆಡ್‌ಶೀಟ್, ದಿಂಬಿನ ಕವರನ್ನು ಇಸಿ ಮಾಡಿಬಳಸುವುದು ಒಳ್ಳೆಯದು. ೧೫ ದಿನಗಳ ನಂತರ ಮತ್ತೆ ಸ್ವಚ್ಛಗೊಳಿಸುವುದು ಅಗತ್ಯ. ತಿಗಣೆಯ ಒಡಲಲ್ಲಿ ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಬೆಳೆಯಲಾರವು. ಬೆಳೆಯದಂತೆ ನಿಗ್ರಹಿಸುವ ರಾಸಾಯನಿಕಗಳನ್ನು ತಿಗಣೆ ಉತ್ಪಾದಿಸುತ್ತದೆ. ಹಾಗಾಗಿ ತಿಗಣೆಯನ್ನು ಅಧ್ಯಯನ ಮಾಡುತ್ತಿರುವ ವಿಜ್ಞಾನಿಗಳು, ನಾಳೆ ಹೊಸ ತಿಗಣೆ ಪ್ರತಿಜೈವಿಕ ಔಷಧಗಳನ್ನು ಸೃಜಿಸಿದರೆ ಅಚ್ಚರಿಪಡಬೇಕಾಗಿಲ್ಲ.