-ಎಸ್.ಜಿ.ಹೆಗಡೆ
ನಿರ್ಯಾತ ಹೆಚ್ಚಿಸಿ ವಿದೇಶಿ ಕರೆನ್ಸಿ ಗಳಿಸುವುದು ಅರ್ಥವ್ಯವಸ್ಥೆಯ ಅತಿಮುಖ್ಯ ಭಾಗವಾಗಿರುವಾಗ, ಅಕ್ಕಿ ನಿರ್ಯಾತವನ್ನು ನಿರ್ಬಂಧಿಸಿದ್ದೇಕೆ ಎಂಬ ಪ್ರಶ್ನೆ ಕೆಲವರಲ್ಲಿ ಮೂಡಬಹುದು. ಭಾರತದಲ್ಲಿನ ಅಕ್ಕಿ ಸಂಗ್ರಹವನ್ನು ನಮ್ಮ ಬಳಕೆಗಾಗಿ ಕಾಯ್ದಿರಿಸುವುದು ಸರಕಾರದ ಮುಖ್ಯ ಉದ್ದೇಶ.
ಕಇತ್ತೀಚೆಗೆ ಭಾರತ ಸರಕಾರವು ಅಕ್ಕಿ ನಿರ್ಯಾತವನ್ನು ನಿಷೇಧಿಸಿದೆ. ಸುದ್ದಿ ಸಿಕ್ಕಾಗ ನಾನು ಅಮೆರಿಕ ಪ್ರಯಾಣದ ಮಾರ್ಗದಲ್ಲಿ ಲಂಡನ್‌ನ ಹೀಥ್ರೊ ವಿಮಾನ ನಿಲ್ದಾಣದಲ್ಲಿದ್ದೆ. ಅಲ್ಲಿ ಸೇರಿದ್ದ ಭಾರತೀಯ ಪ್ರವಾಸಿಗರ
ಗುಂಪೊಂದು ಈ ನಿರ್ಬಂಧದ ಕುರಿತಾಗಿ ಚರ್ಚೆ ನಡೆಸಿತ್ತು. ಸುದ್ದಿ ದಟ್ಟವಾಗಿ ಸಿಕ್ಕಿದ್ದು ಅಮೆರಿಕದ ಡಲ್ಲಾಸ್ ವಿಮಾನ ನಿಲ್ದಾಣದಲ್ಲಿ ಮುಂದಿನ ಪಯಣಕ್ಕೆಂದು ಕಾದು ಕುಳಿತಾಗ. ಅಲ್ಲಿಂದ ಅಮೆರಿಕದ ವಿವಿಧ ಭಾಗಕ್ಕೆ ಹೊರಟು ನಿಂತ ಭಾರತೀಯ ಮೂಲದ ಜನರು ಕಳವಳಗೊಂಡು, ಸಿಕ್ಕಷ್ಟು ಅಕ್ಕಿ ಖರೀದಿಸಿಡುವಂತೆ ಸಂಬಂಧಿಗಳಿಗೆ ಫೋನ್ ಮೂಲಕ ಸೂಚಿಸುತ್ತಿದ್ದರು. ನನ್ನಂತೆ ಅನೇಕರು ಅಮೆರಿಕದಲ್ಲಿ ಕೆಲ ತಿಂಗಳು ಉಳಿಯಲು ಹೊರಟಿದ್ದರು. ಹೀಗಾಗಿ ಅಲ್ಲಿ ಭಾರತ ಮೂಲದ ಅಕ್ಕಿ ಸಿಗುವ ಕುರಿತ ಆತಂಕ ಅವರಲ್ಲಿ ಕೆನೆಗಟ್ಟಿತ್ತು. ಅಮೆರಿಕದಲ್ಲಿ ಭಾರತೀಯ ಮೂಲದ ಅಕ್ಕಿ ಕೊರತೆಯ ಬಗ್ಗೆ ಗಾಬರಿ ಮೂಡಿದ್ದು ನಿಜ. ನಾನು
ಕಾನ್ಸಾಸ್ ತಲುಪಿದ ಮರುದಿನ ಮಧ್ಯಾಹ್ನದ ಊಟಕ್ಕೆ ಮನೆಯಲ್ಲಿ ಭಾರತೀಯ ಮೂಲದ ಅನೇಕರು ಸೇರಿದ್ದರು. ಅಂದು ಅಕ್ಕಿಯಿಂದ ತಯಾರಾಗಬೇಕಿದ್ದ ಅಡುಗೆಯನ್ನು ಖಾದ್ಯಪಟ್ಟಿಯಿಂದ ತೆಗೆಯಲಾಗಿತ್ತು. ಕಾರಣ ಅದಾಗಲೇ ಅಲ್ಲಿ ಅಕ್ಕಿಯ ಮೇಲಿನ ನಿಷೇಧದ ಬಿಸಿ ತಟ್ಟಿತ್ತು. ಅಂದಿನ ಮಾತುಕತೆಯ ಮುಖ್ಯ ವಿಷಯವೂ ಅದೇ ಆಗಿತ್ತು! ಅಮೆರಿಕದ ಶಿಕಾಗೊ, ಟೆಕ್ಸಾಸ್, ಆಂಟಾರಿಯೋ, ಡಲ್ಲಾಸ್, ಸ್ಯಾನ್-ನ್ಸಿಸ್ಕೊ ಮುಂತಾ
ದೆಡೆಯ ಅಂಗಡಿಗಳಲ್ಲಿ ಭಾರತೀಯ ಮೂಲದ ಅಕ್ಕಿ ಖಾಲಿಯಾಗುತ್ತಿರುವ ಸುದ್ದಿ ಹರಡಿತ್ತು.
ಅಂದೇ ನಾವು ಅಂಗಡಿಗಳಿಗೆ ಹೋದಾಗ, ಸೋನಾಮಸೂರಿ, ಬಿಳಿ ಇಂಡಿಕಾ ಮುಂತಾದ ಜನಪ್ರಿಯ ಅಕ್ಕಿ ಪ್ರಭೇದಗಳು ಸಿಗದಂತಾಗಿದ್ದು ನಿಜ. ಆಫ್ರಿಕಾ, ಯುರೋಪ್ ಮತ್ತಿತರ ಕಡೆಗಳಲ್ಲೂ ಅಕ್ಕಿಯ ‘ತುಟಾಗ್ರತೆ’ ಎದುರಾಯಿತು. ನಂತರ ಕೆಲ ದಿನಗಳಲ್ಲಿ ಆಗಾಗ ಅಕ್ಕಿಯು ಮಳಿಗೆಗಳಿಗೆ ಬಂದು ಕೂಡಲೇ ಖಾಲಿಯಾಗುತ್ತಿದೆ. ಏಕೆಂದರೆ, ಭಾರತ ದಿಂದ ಜುಲೈ ೨೦ರ ತನಕದ ನಿರ್ಧಾರಿತ ನಿರ್ಯಾತದ ಅಕ್ಕಿಯ ಸರಕನ್ನು ಕ್ಲಿಯರ್ ಮಾಡುವಂತೆ ವಿದೇಶ ವ್ಯಾಪಾರದ ನಿರ್ದೇಶನಾ ಸಂಸ್ಥೆ (ಡಿಜಿಎಫ್ ಟಿ) ಸೂಚಿಸಿದೆ. ಅಲ್ಲದೆ, ಆಗಲೇ ನಿರ್ಯಾತವಾಗಿ ಹಡಗಿನಲ್ಲಿದ್ದ ಅಕ್ಕಿಯೂ ಜಗತ್ತಿನ ವಿವಿಧ ಭಾಗವನ್ನು ತಲುಪುತ್ತಿರುವುದರಿಂದ, ಅಕ್ಕಿಯ ಕೊರತೆಯ ಹಾಹಾಕಾರ ಇನ್ನೂ ಉಂಟಾಗಿಲ್ಲ. ಆದರೆ ಈಗಿನ ನಿಯಮಾವಳಿ ಮುಂದುವರಿದಲ್ಲಿ, ಜಾಗತಿಕ ಮಾರುಕಟ್ಟೆಯಲ್ಲಿ ಅಕ್ಕಿಯ ಸ್ಥಿತಿ ಗಂಭೀರವಾಗಲಿದೆ. ಜು.೨೦ರಂದು ನಿರ್ಯಾತದ ಮೇಲೆ ವಿಧಿಸಿದ್ದ
ನಿಷೇಧದ ಪಟ್ಟಿಯಲ್ಲಿ ಪರಿಮಳಭರಿತ ಬಾಸಮತಿ ಮತ್ತು ಬೇಯಿಸಿದ ಅಕ್ಕಿ ಸೇರಿರಲಿಲ್ಲ. ನಿಷೇಧದ ಪರಿಣಾಮವು ಜಾಗತಿಕವಾಗಿ ಕಳವಳ ಮೂಡಿಸುತ್ತಿದ್ದಂತೆಯೇ, ಇತ್ತೀಚೆಗೆ ಭಾರತ ಸರಕಾರವು ಬೇಯಿಸಿದ ಅಕ್ಕಿಯ ಮೇಲೂ ಕಟ್ಟಳೆ ಹೇರಿದೆ, ಅದರ ಮೇಲೆ ಶೇ.೨೦ರಷ್ಟು ಕಂದಾಯ ಸುಂಕ ಹೇರಲಾಗಿದೆ. ಬಾಸಮತಿ ಅಕ್ಕಿಯ ಕಡಿಮೆ ನಿರ್ಯಾತ ದರವನ್ನು (ಎಂಇಪಿ) ಪ್ರತಿ ಟನ್ನಿಗೆ ೧೨೦೦ ಡಾಲರ್ ಅಥವಾ ೯೯,೦೦೦ ರುಪಾಯಿ ಎಂದು ನಿಗದಿಪಡಿಸಿದೆ.
ಬಾಸಮತಿ ಮೇಲೆ ಸುಂಕ ವಿಧಿಸಿದ ನಂತರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದ್ದು, ರಫ್ತಿನ ಪ್ರಮಾಣದಲ್ಲಿ ಥಟ್ಟನೆ ಭಾರಿ ಕುಸಿತವಾಗಿದೆ. ಕಳೆದ ೫ ವರ್ಷಗಳ ಬಾಸಮತಿ ಅಕ್ಕಿಯ ಸರಾಸರಿ ರಫ್ತು ಬೆಲೆಯು ೯೭೫ ಡಾಲರ್ ಇದ್ದು, ಥಟ್ಟನೆ ಏರಿದ ಬೆಲೆಯನ್ನು ಮಾರುಕಟ್ಟೆ ಕೂಡಲೇ ಸ್ವೀಕರಿಸುತ್ತಿಲ್ಲ. ಭಾರತದಲ್ಲಿ ಕಾರ್ಯಗತವಾದ ಅಕ್ಕಿ ನಿರ್ಯಾತ ನಿಷೇಧವು ಜಾಗತಿಕವಾಗಿ ತೀವ್ರ ಪರಿಣಾಮ ಬೀರಿದೆ. ಜಗತ್ತಿನೆಲ್ಲೆಡೆ ನೆಲೆಸಿರುವ ಭಾರತೀಯರಿಗೆ ದೇಶೀ ಅಡುಗೆ ಬೇಕೇ ಬೇಕು. ಅದರಲ್ಲೂ ಬಹುತೇಕ ದಕ್ಷಿಣ ಭಾರತೀಯ ಖಾದ್ಯಗಳ ತಯಾರಿಕೆಗೆ ನಮ್ಮ ಅಕ್ಕಿಯೇ ಆಗಬೇಕು. ಖಾದ್ಯಗಳ ವಿಷಯದಲ್ಲಿ ಭಾರತೀಯ ಮೂಲದವರು ಮತ್ತು ಪ್ರಯಾ
ಣಿಕರು ದೇಶೀ ಬಗೆಯ ಅಡುಗೆಯನ್ನೇ ಬಯಸುತ್ತಾರೆ. ಹೀಗಾಗಿ ಥಾಯ್, ವಿಯೆಟ್ನಾಂ ಅಥವಾ ಇತರ ಪ್ರದೇಶಗಳಿಂದ ಬರುವ ಅಕ್ಕಿಯ ರುಚಿ ಕೂಡಲೇ ಒಗ್ಗುವುದಿಲ್ಲ. ಹಠಾತ್ ನಿಷೇಧದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅಕ್ಕಿಯ ದರವು ಶೇ.೨೦ರಷ್ಟು ಏರಿಕೆಯಾಗಿದ್ದು, ಕಳೆದ ೧೨ ವರ್ಷಗಳಲ್ಲಿನ ಅತಿಹೆಚ್ಚಿನ ಮಟ್ಟ ತಲುಪಿದೆ. ಇನ್ನೊಂದು ಮಹತ್ವದ ಕಾರಣವೆಂದರೆ ಅಕ್ಕಿಯ ನಿರ್ಯಾತದಲ್ಲಿ ಭಾರತ ಅಗ್ರಗಣ್ಯನಾಗಿದ್ದು, ಜಗತ್ತಿನ ಮಾರುಕಟ್ಟೆಯ ಶೇ.೪೦ರಷ್ಟು ಬಳಕೆ ನಮ್ಮ ಅಕ್ಕಿಯದೇ ಮತ್ತು ಒಟ್ಟು ಅಕ್ಕಿ ನಿರ್ಯಾತದಲ್ಲಿ ಶೇ.೮೦ರಷ್ಟು ಬಾಸಮತಿ ಹೊರತಾದ ಅಕ್ಕಿಯದು.
ಅಕ್ಕಿ ಬೆಳೆಯುವ ಇತರ ಮುಖ್ಯದೇಶಗಳಾದ ಫಿಲಿಪೈನ್ಸ್‌ನಲ್ಲಿ ನೆರೆಹಾವಳಿಯಿಂದ ಬೆಳೆಹಾನಿಯಾಗಿದ್ದರೆ, ಪಾಕಿಸ್ತಾನದಲ್ಲೂ ಹಿಂದಿನ ಬೆಳೆಯ ಅವಸ್ಥೆ ಅದೇ. ಮ್ಯಾನ್ಮಾರ್ ಕೂಡ ಅಕ್ಕಿಯ ನಿರ್ಯಾತ ನಿಯಂತ್ರಣವನ್ನು ಪರಿಗಣಿಸುತ್ತಿದ್ದರೆ, ನೀರಿನ ಉಳಿತಾಯದ ಕಾರಣದಿಂದ ಸದ್ಯದ ಸ್ಥಿತಿಯಲ್ಲಿ ಥೈಲ್ಯಾಂಡ್ ಅಕ್ಕಿ ಬೆಳೆಯನ್ನು ನಿಯಂತ್ರಿಸುವ ವಿಚಾರದಲ್ಲಿ ತೊಡಗಿದೆ. ಈ ಎಲ್ಲ ಕಾರಣಗಳಿಂದ ಮುಂದಿನ ದಿನಗಳಲ್ಲಿ ಜಗತ್ತು ಅಕ್ಕಿಯ ತೀವ್ರ ಕೊರತೆ ಎದುರಿಸಬೇಕಾಗಬಹುದು, ಬೆಲೆಯೂ ಗಗನಕ್ಕೇರಬಹುದು. ಅಕ್ಕಿಯು ಆಹಾರಧಾನ್ಯಗಳಲ್ಲಿ ಪ್ರಧಾನವಾಗಿದ್ದು, ಜಗತ್ತಿನ ಅರ್ಧದಷ್ಟು ಜನಸಂಖ್ಯೆಗೆ ಇದೇ ಮೂಲಾಧಾರವಾಗಿದೆ. ಪ್ರತಿವರ್ಷ ಒಟ್ಟಾರೆ
ಸುಮಾರು ೫೦೦ ದಶಲಕ್ಷ ಮೆಟ್ರಿಕ್ ಟನ್‌ಗಳಷ್ಟು ಅಕ್ಕಿಯನ್ನು ಬೆಳೆಯಲಾಗುತ್ತಿದೆ. ಕಳೆದ ವರ್ಷ ಸುಮಾರು ೨೨ ದಶಲಕ್ಷ ಟನ್ ಅಕ್ಕಿಯನ್ನು ಭಾರತವೇ ನಿರ್ಯಾತ ಮಾಡಿದೆ. ನಂತರ ಕ್ರಮಾಂಕಗಳು ಥೈಲ್ಯಾಂಡ್ ಮತ್ತು ವಿಯೆಟ್ನಾಂನವು. ಆದರೆ ಅವು ಪ್ರಮಾಣದಲ್ಲಿ ಭಾರಿ ಹಿಂದಿವೆ. ಭಾರತೀಯ ಅಕ್ಕಿಯ ಕೊರತೆಯಿಂದ ಜಗತ್ತು ಎಷ್ಟು ಹಸಿವು ಕಾಣಬಹುದೆಂಬುದನ್ನು ಇದರಿಂದ ತಿಳಿಯಬಹುದು.
ನಿರ್ಯಾತ ಹೆಚ್ಚಿಸಿ ವಿದೇಶಿ ಕರೆನ್ಸಿ ಗಳಿಸುವುದು ಸರಕಾರದ ಅರ್ಥವ್ಯವಸ್ಥೆಯ ಅತಿಮುಖ್ಯ ಭಾಗವಾಗಿರುವಾಗ, ನಿರ್ಯಾತದ ಮೇಲೆ ಕಡಿತ ವಿಧಿಸಿದ್ದೇಕೆ ಎಂಬ ಪ್ರಶ್ನೆ ಕೆಲವರಲ್ಲಿ ಮೂಡಬಹುದು. ಭಾರತದಲ್ಲಿನ ಅಕ್ಕಿ ಸಂಗ್ರಹವನ್ನು ನಮ್ಮ ಬಳಕೆಗಾಗಿ ಕಾಯ್ದಿರಿಸುವುದು ಸರಕಾರದ ಮುಖ್ಯ ಉದ್ದೇಶ. ಭಾರತದಲ್ಲೂ ಅಕ್ಕಿಬೆಲೆ ನಿರಂತರವಾಗಿ ಏರುತ್ತಿದ್ದು, ಕಳೆದ ಜೂನ್‌ನಿಂದ ಸುಮಾರು ಶೇ.೧೨ರಷ್ಟು ಹೆಚ್ಚಾದ ಅಂಕಿ-ಅಂಶಗಳಿವೆ. ೨೦೨೪ರ ಲೋಕ ಸಭಾ ಚುನಾವಣೆ ಸನ್ನಿಹಿತವಾಗುತ್ತಿರುವಾಗ ಊಟದ ದಿನಸಿಗಳು ನಮ್ಮಲ್ಲಿ ತುಟ್ಟಿಯಾಗುವ ರಿಸ್ಕನ್ನು ಸರಕಾರ ತೆಗೆದುಕೊಳ್ಳುವಂತಿಲ್ಲ. ಪ್ರಧಾನಿಯವರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಅಗತ್ಯ ವಸ್ತುಗಳ ಬೆಲೆಯ ಹತೋಟಿಯ ಕುರಿತು ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು. ಅಕ್ಕಿಯ ನಿರ್ಯಾತವನ್ನು ನಿರ್ಬಂಧಿಸಿರುವುದಕ್ಕೆ ಮತ್ತೊಂದು ಕಾರಣವೆಂದರೆ, ಸದರಿ ವರ್ಷದಲ್ಲಿನ ಅಕ್ಕಿಯ ಬೆಳೆಯ ಕುರಿತಾದ ಅನಿಶ್ಚಿತತೆ. ಅಕ್ಕಿ ಬೆಳೆಯುವ ಉತ್ತರ ಭಾರತದ ಅನೇಕ ಕಡೆ ನೆರೆಹಾವಳಿಯಾಗಿದ್ದು, ದಕ್ಷಿಣ ಭಾರತದಲ್ಲಿ ಕರ್ನಾಟಕ ಸೇರಿದಂತೆ ಹಲವು ಕಡೆ ಮಳೆ ಸಾಲದೆ ನೀರಿನ ಕೊರತೆಯಾಗಿದೆ. ಜಲಾಶಯಗಳಲ್ಲಿನ ನೀರಿನ
ಮಟ್ಟವೂ ಕಳವಳಕಾರಿಯಾಗಿದೆ.
ಮಳೆ ಮತ್ತು ಬೆಳೆಯ ಪಕ್ಕಾ ಅಂದಾಜು ಪಡೆದು ಸರಕಾರವು ಒಟ್ಟಾರೆ ನೀತಿಯನ್ನು ಮರುಪರಿಶೀಲಿಸುವುದು ನಿಶ್ಚಿತ. ಈ ಮಧ್ಯೆ ಸರಕಾರವು ಬಡವರಿಗೆ ಪುಕ್ಕಟೆ ಮತ್ತು ಕಡಿಮೆ ದರದ ಅಕ್ಕಿಯನ್ನು ಪೂರೈಸಬೇಕು.
೨೦೨೩-೨೪ರ ಸಾಲಿನಲ್ಲಿ, ಇಂಧನದಲ್ಲಿ ಶೇ.೨೦ರಷ್ಟು ಎಥನಾಲ್ ಬಳಸುವ ಯೋಜನೆಗೂ ಅಕ್ಕಿ ಬಳಸಲಾಗಿದ್ದು, ಇಲ್ಲಿ ಪ್ರತಿ ಕೆ.ಜಿ.ಗೆ ತುಂಬಾ ಕಮ್ಮಿ ದರದಲ್ಲಿ ನೀಡಲಾಗುತ್ತಿದೆ. ಕಡಿಮೆ ದರದಲ್ಲಿ ನೀಡಿದ ಅಕ್ಕಿಯಲ್ಲಾದ ನಷ್ಟವನ್ನು ಇಂಧನ ಆಮದು ತಗ್ಗಿಸುವ ಮೂಲಕ ಸರಿದೂಗಿಸುವ, ಲಾಭ ಪಡೆಯುವ ಉದ್ದೇಶವಿದೆ. ‘Where comes opportunity there comes business, what goes short, that gives long’ ಎಂಬುದು ವ್ಯಾಪಾರಿ ಜಗತ್ತಿನ ‘ಬೇಸಿಕ್ ಫಂಡಾ’. ಕನ್ನಡದಲ್ಲಿ ಇದನ್ನು ‘ಕೊರತೆಯಿರುವಲ್ಲಿ ಒರತೆ’ ಎನ್ನಬಹುದು. ಎಲ್ಲಿ ಕೊರತೆಯಿದೆ ಎಂದು ಅರಸುವಲ್ಲಿ ವ್ಯಾಪಾರಿ ಜಗತ್ತು ನಿರತವಾಗಿರುತ್ತದೆ, ಅವಕಾಶವನ್ನು ಉಪಯೋಗಿಸುವಲ್ಲಿ ಮುಗಿಬೀಳುತ್ತದೆ. ಅಕ್ಕಿಗೆ ಈಗ ಬಂದಿರುವುದು ಅದೇ ಸ್ಥಿತಿ. ಜಗತ್ತು ಇತ್ತೀಚೆಗೆ ಅಕ್ಕಿಯ ತೀವ್ರಕೊರತೆಯತ್ತ ಸಾಗುತ್ತಿದೆ. ಹಾಗಂತ ಅಕ್ಕಿಯನ್ನು ವ್ಯಾಪಾರಿ ಸಂಸ್ಥೆಗಳು ಕಾರ್ಖಾನೆಯಲ್ಲಿ ಸೃಷ್ಟಿಸಲಾಗದು. ಅಕ್ಕಿಯ ಸೃಷ್ಟಿಕರ್ತ ಪ್ರಕೃತಿಯೇ. ಕೈಗಾರಿಕಾ ದೃಷ್ಟಿಯಿಂದ ಅಕ್ಕಿಯನ್ನು ಸಂಸ್ಕರಿಸಿ, ಸೂಕ್ತವಾಗಿ ಮೂಟೆಮಾಡಿ ಮಾರಬಹುದಷ್ಟೇ, ಹಾಗೇ ಮಾಡಲಾಗುತ್ತಿದೆ. ಭಾರತದ ಅನೇಕ ವ್ಯಾಪಾರಿ ಸಂಸ್ಥೆಗಳು ಸಂಸ್ಕರಣ ಮತ್ತು ಮಾರಾಟದಲ್ಲಿ ತೊಡಗಿದ್ದರೂ, ದವಸ-ಧಾನ್ಯಗಳನ್ನು ಬೆಳೆಯುವುದು ಅವುಗಳ ಹಿಡಿತದಲ್ಲಿಲ್ಲ. ಅದನ್ನು ನೀಗಿಸುವ ಶಕ್ತಿ ಪ್ರಕೃತಿಗಿದೆ. ಅಕ್ಕಿ ಬೆಳೆವ ಜಗತ್ತಿನ ದೇಶಗಳಲ್ಲಿ ಭಾರತವು ಬೆಳೆಯ ಪ್ರಮಾಣದಲ್ಲಿ ೨ನೇ ಕ್ರಮಾಂಕದಲ್ಲಿದ್ದು ನಿರ್ಯಾತದಲ್ಲಿ ಮೊದಲ ಸ್ಥಾನದಲ್ಲಿದೆ.
ಮತ್ತಿತರ ದವಸ-ಧಾನ್ಯಗಳ ನಿರ್ಯಾತದಲ್ಲೂ ದೇಶದ ಕೊಡುಗೆ ಉನ್ನತವಾಗಿದೆ. ಅಕ್ಕಿಯೂ ಸೇರಿದಂತೆ ದವಸ-ಧಾನ್ಯಗಳನ್ನು ಸೂಕ್ತ ದರದಲ್ಲಿ ನೀಡಿ ಜಾಗತಿಕ ಹಸಿವನ್ನು ನೀಗುವಲ್ಲಿ ಭಾರತವು ಜವಾ ಬ್ದಾರಿಯುತ ಸ್ಥಾನದಲ್ಲಿದೆ. ಈ ಜವಾಬ್ದಾರಿ ಮತ್ತು ಅನಿವಾರ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರಕಾರವು ಸಿಂಗಾಪುರ, ಭೂತಾನ್ ಮತ್ತು ಮಾರಿಷಸ್‌ಗೆ ನಿರ್ಯಾತ ನಿರ್ಬಂಧವನ್ನು ಸಡಿಲಗೊಳಿಸಿ, ಅಕ್ಕಿಯ ನೆರವು ನೀಡಲು ಒಪ್ಪಿದೆ. ಇನ್ನೂ ಹಲವು ದೇಶಗಳು ಈ ನಿಟ್ಟಿನಲ್ಲಿ ಭಾರತ ಸರಕಾರಕ್ಕೆ ವಿನಂತಿಸುವ ಸಾಧ್ಯತೆಯಿದೆ. ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮ ಅಕ್ಕಿಯ ಬೇಡಿಕೆಯನ್ನು ನಿಭಾಯಿಸಲು, ಒಟ್ಟಾರೆ ಉತ್ಪನ್ನ
ವನ್ನು ಇನ್ನೂ ಹೆಚ್ಚಿಸುವ ನವೀನಮಾರ್ಗ ತುಳಿಯುವತ್ತ ಭಾರತ ದಾಪುಗಾಲು ಹಾಕಬೇಕಿದೆ. ಹೆಚ್ಚಿನ ಮಟ್ಟ ಸಾಧಿಸಲು ನಮ್ಮ ಭೂಮಿ ಮತ್ತು ಬೆಳೆಯ ರಾಶಿಯ ಅನುಪಾತದಲ್ಲಿ ಹೆಚ್ಚಿನ ಸಾಧನೆ ಬೇಕೇ
ಬೇಕು.
ಹೆಚ್ಚಿನ ಭೂಮಿಯೂ ಬೆಳೆಯಲ್ಲಿ ತೊಡಗಬೇಕು. ವಿಧಾನವು ಇನ್ನೂ ನೂತನವಾಗಬೇಕು. ಸಣ್ಣ ಸಣ್ಣ ಹಿಡುವಳಿ ಭೂಮಿಗಳನ್ನು ಜತೆಗೂಡಿಸಿ ವಿಸ್ತರಿಸಿಕೊಂಡು ಹೆಚ್ಚಿನ ಬೆಳೆ ಸಾಧಿಸುವ ಮಾರ್ಗ ಮತ್ತು ಜವಾಬ್ದಾರಿಯನ್ನು ಆಡಳಿತಾಂಗ ತನ್ನ ಅಧಿನದಲ್ಲಿ ತಂದರೆ ಇಂಥ ಸಾಧನೆ ಸಾಧ್ಯವಾಗಬಹುದು. ಇಂಥ ರೀತಿಯು ಚೀನಾ ಕೃಷಿಕ್ರಾಂತಿಗೆ ಕಾರಣವಾಗಿದ್ದಿದೆ. ನಮ್ಮಲ್ಲಿ ಸಾಕಷ್ಟು ಧಾನ್ಯಸಂಗ್ರಹವಾದಾಗ ನಮ್ಮ ಬಳಕೆ ಮತ್ತು ನಿರ್ಯಾತವನ್ನು ನಿರಂತರ ನಿಭಾಯಿಸಬಹುದು. ಸದ್ಯದ ನಮ್ಮ ಆಂತರಿಕ ಸ್ಥಿತಿಯನ್ನು ಗ್ರಹಿಸಿದಾಗ, ಅಕ್ಕಿಯ ನಿರ್ಯಾತದ ಮೇಲೆ ವಿಧಿಸಿದ ಕಟ್ಟಳೆಯಿಂದ ಬೇಗ ಮುಕ್ತಿ ಸಿಗಲಾರದೆಂಬುದೇ ಜಾಗತಿಕ ಸಮಾಜ ಮತ್ತು ರಫ್ತುದಾರರ ಚಿಂತೆಯಾಗಿದೆ.
(ಲೇಖಕರು ಮುಂಬೈನ ಲಾಸಾ ಸೂಪರ್ ಜನೆರಿಕ್ಸ್ ಲಿಮಿಟೆಡ್‌ನ ನಿರ್ದೇಶಕರು)