Friday, 20th September 2024

ಸ್ವ-ಪ್ರಸ್ತಾವವನ್ನು ಬಣ್ಣಿಸುವ ಲೇಖನದ ತಲೆಬರಹ

ತಿಳಿರು ತೋರಣ

ಶ್ರೀವತ್ಸ ಜೋಶಿ

srivathsajoshi@yahoo.com

ಅಹಂಭಾವ, ಅಹಂಕಾರ, ಆತ್ಮರತಿ ಇವೆಲ್ಲ ಯಾವತ್ತಿಗೂ ಒಳ್ಳೆಯದಲ್ಲ ಎನ್ನುತ್ತಾರೆ ಅನುಭಾವಿಗಳು. ತನ್ನ ಬಣ್ಣಿಸಬೇಡ ಎಂದು ಬಸವಣ್ಣನವರು ಹೇಳಿದ್ದೂ
ಅದನ್ನೇ. ಉಸಿರಾಡುವ ತನಕ ನಾನು ನನದೆಂಬ ಮಮಕಾರ… ನಿಂತ ಮರುಘಳಿಗೆಯೇ ಮಸಣದಿ ಸಂಸ್ಕಾರ… ಎಂದು ಭಕ್ತಕುಂಬಾರ ಲೇವಡಿ ಮಾಡಿದ್ದೂ ಅದನ್ನೇ. ಅಷ್ಟಾಗಿಯೂ ನಾವೆಲ್ಲ ಸಂದರ್ಭ ಸಿಕ್ಕಾಗಲೆಲ್ಲ, ಈಗ ಸೋಷಿಯಲ್ ಮೀಡಿಯಾ ಜಮಾನಾದಲ್ಲಂತೂ ಮತ್ತಷ್ಟು ಹೆಚ್ಚಾಗಿ, ನಾನು ನನ್ನದು… ನಾನೇ ಎಲ್ಲ ನನ್ನಿಂದಲೇ ಎಲ್ಲ… ನಾನಿಲ್ಲದಿದ್ದರೆ ಏನೂ ಇಲ್ಲ… ಎಂದು ಒಂದೇಸಮನೆ ‘ಐ ಸ್ಪೆಷಲಿಸ್ಟ್’ಗಳಾಗಿಯೇ ಇರುತ್ತೇವೆ.

ಮಾತುಮಾತಿಗೂ ನಮ್ಮ ಬಗ್ಗೆಯೇ ಹೇಳಿಕೊಳ್ಳುತ್ತ ನಮ್ಮ ತುತ್ತೂರಿ ನಾವೇ ಊದುತ್ತ ಅಹಂ ಬ್ರಹ್ಮಾಸ್ಮಿ ಆಗಿರುತ್ತೇವೆ. ಮನುಷ್ಯಸ್ವಭಾವವೇ ಹಾಗೆ. ಬಹಳ ಕೆಟ್ಟದು. ಸ್ವಾಭಿಮಾನದ ರೂಪದಲ್ಲಷ್ಟೇ ಇದ್ದರೆ ಸರಿ, ಆದರೆ ಹೆಚ್ಚಾಗಿ ಅಹಂಕಾರ ಆತ್ಮರತಿಗಳ ರೂಪದಲ್ಲೇ ಎಲ್ಲೆಲ್ಲೂ ಕಂಡುಬರುವುದು. ಅದಕ್ಕಾಗಿಯೇ ಕನಕ ದಾಸರೆಂದರು- ‘ನಾನು’ ಹೋದರೆ ಮಾತ್ರ ಸ್ವರ್ಗಕ್ಕೆ ಹೋದೇನು!

ಆದರೆ ಅಹಂಕಾರವೆಂದಾಗಲೀ ಆತ್ಮಪ್ರಶಂಸೆಯೆಂದಾಗಲೀ ಅನಿಸಿಕೊಳ್ಳದ, ಹಾಗಾಗಿ ಕೆಟ್ಟದಲ್ಲದ, ‘ಸ್ವ-ಪ್ರಸ್ತಾವ’ ಎಂಬೊಂದು ಪ್ರಕಾರವಿದೆ. ಇಂಗ್ಲಿಷ್‌ನಲ್ಲಿ Self-reference ಎಂದು ಹೇಳುತ್ತಾರೆ. ಇದನ್ನು ಮನುಷ್ಯರಿಗಿಂತ ಹೆಚ್ಚಾಗಿ ನಿರ್ಜೀವ ವಸ್ತುಗಳು ಮಾಡುತ್ತವೆ ಎಂದರೆ ನೀವು ನಂಬಲೇಬೇಕು! ಇಲ್ಲೂ ಅಷ್ಟೇ, ತಮ್ಮ ಬಗ್ಗೆಯೇ ಹೇಳಿಕೊಳ್ಳುತ್ತಿವೆಯೇನೋ, ತಮ್ಮನ್ನೇ ಬಣ್ಣಿಸುತ್ತಿವೆಯೇನೋ ಎಂದು ಅನಿಸುತ್ತದೆ, ಆದರೆ ಅದು ಆತ್ಮಪ್ರಶಂಸೆಯಲ್ಲ, ಹಾಗಾಗಿ ರೇಜಿಗೆ ಯೆನಿಸುವುದಿಲ್ಲ. ಮಾತ್ರವಲ್ಲ ಯೋಚಿಸಿದಂತೆಲ್ಲ ಮತ್ತಷ್ಟು ಕುತೂಹಲಕಾರಿ ಆಗುತ್ತದೆ.

ಭಾಷೆಯಲ್ಲಿ, ತರ್ಕಶಾಸ್ತ್ರದಲ್ಲಿ, ಗಣಿತದಲ್ಲಿ, ಕಲೆಯಲ್ಲಿ, ಕಂಪ್ಯೂಟರ್ ಪ್ರೊಗ್ರಾಮಿಂಗ್‌ನಲ್ಲಿ… ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸ್ವ-ಪ್ರಸ್ತಾವಗಳದೊಂದು ಅದ್ಭುತರಮ್ಯ ಲೋಕವೇ ಇದೆ. ಸ್ವಾರಸ್ಯಕರವಾಗಿರುವ ಒಂದಿಷ್ಟನ್ನು ಇಲ್ಲಿ ಉದಾಹರಿಸುವ ಮೂಲಕ ಇಂದು ನಿಮ್ಮ ತಲೆಯೊಳಗೆ ಬಿಡಲಾಗುತ್ತಿದೆ ಸ್ವ-ಪ್ರಸ್ತಾವಗಳ ಗುಂಗಿ ಹುಳ. ಕಳೆದ ವಾರದ ಅಂಕಣದಲ್ಲಿ ಮೂರಕ್ಷರ ಹ್ರಸ್ವ ರೂಪಗಳ ಬಗ್ಗೆ ಬರೆದಿದ್ದೆನಷ್ಟೆ? ಕ್ಯಾಲಿಫೋರ್ನಿಯಾದಲ್ಲಿರುವ ಮಿತ್ರ ಹಂ.ಕ. ಕೃಷ್ಣಪ್ರಿಯನ್ ಅವರು ಲೇಖನವನ್ನೋದಿ ಒಂದು ಮೂರಕ್ಷರ ಹ್ರಸ್ವ ರೂಪವನ್ನು ನೆನಪಿಸಿದರು, ‘ಗಪ್ರಗ’ ಎಂದು.

ಅದು, ಎಡದಿಂದ ಬಲಕ್ಕೂ ಬಲದಿಂದ ಎಡಕ್ಕೂ ಒಂದೇ ರೀತಿ ಓದಲಾಗುವ ಪದ ಅಥವಾ ವಾಕ್ಯಗಳಿಗೆ (ಕನಕ, ಜಲಜ, ವಿಕಟಕವಿ, ಮದ್ರಾಸಿನ ಸಿದ್ರಾಮ, ಕುಬೇರನಿಗೇನಿರಬೇಕು ಇತ್ಯಾದಿ) ಸಂಸ್ಕೃತದಲ್ಲಿರುವ ‘ಗತಪ್ರತ್ಯಾಗತ’ ಎಂಬ ಹೆಸರಿನ ಮೂರಕ್ಷರ ಹ್ರಸ್ವ ರೂಪ. ಕೆಲ ವರ್ಷಗಳ ಹಿಂದೆ ಕೃಷ್ಣಪ್ರಿಯನ್
ನೇತೃತ್ವದಲ್ಲಿ ನಾವೊಂದಿಷ್ಟು ಜನ ಪದವಿನೋದಪ್ರಿಯ ಸ್ನೇಹಿತರು ಸೇರಿ ಕನ್ನಡದಲ್ಲಿ ಗತಪ್ರತ್ಯಾಗತಗಳ ಬೃಹತ್ ಸಂಕಲನವೊಂದನ್ನು ಮಾಡಿದ್ದೆವು. ನಮ್ಮ ಇಮೇಲ್ ವಿನಿಮಯಗಳಲ್ಲಿ ಗಪ್ರಗ ಎಂಬ ಹ್ರಸ್ವ ರೂಪವನ್ನೇ ಬಳಸುತ್ತಿದ್ದೆವು.

ಸ್ವಾರಸ್ಯವೆಂದರೆ ‘ಗಪ್ರಗ’ ಎಂಬುದೂ ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಒಂದೇರೀತಿ ಓದಲಾಗುವ ಪದ! ಅಂದರೆ ಅದು ಯಾವುದರ ಬಗ್ಗೆ ವಿವರಿಸು ತ್ತದಯೋ ತಾನೂ ಅದೇ ಆಗಿದೆ! ಸ್ವ-ಪ್ರಸ್ತಾವಕ್ಕೆ ಒಳ್ಳೆಯ ಉದಾಹರಣೆಯಾಗಿದೆ. ಸಂಸ್ಕೃತದಲ್ಲಿ ‘ಅನುಷ್ಟುಪ್’ ಛಂದಸ್ಸಿನ ಹೆಸರನ್ನು ನೀವು ಕೇಳಿರಲೂಬಹುದು. ರಾಮಾಯಣ-ಮಹಾಭಾರತಗಳೂ ಸೇರಿದಂತೆ ಬಹುತೇಕ ಗ್ರಂಥಗಳಲ್ಲಿನ ಶ್ಲೋಕಗಳು, ಶ್ರೀ ರಾಮರಕ್ಷಾ ಮುಂತಾದ ಜನಪ್ರಿಯ ಸ್ತೋತ್ರಗಳು, ಸುಭಾಷಿತಗಳು ಅನುಷ್ಟುಪ್ ಛಂದಸ್ಸಿನಲ್ಲೇ ಇರುತ್ತವೆ.

ಅನುಷ್ಟುಪ್ ಛಂದಸ್ಸನ್ನು ಪದ್ಯರಾಜ, ಶ್ಲೋಕರಾಜ, ಛಂದೋರಾಜ ಅಂತೆಲ್ಲ ಹೊಗಳುವುದೂ ಇದೆ. ಸರಿ, ಈ ಅನುಷ್ಟುಪ್ ಛಂದಸ್ಸಿನ ಲಕ್ಷಣಗಳೇನು ಎಂದು ವಿವರಿಸುವ ಶ್ಲೋಕವೊಂದಿದೆ, ಹೀಗೆ: ‘ಪಂಚಮಂ ಲಘು ಸರ್ವತ್ರ| ಸಪ್ತಮಂ ದ್ವಿಚತುರ್ಥಯೋಃ| ಗುರು ಷಷ್ಠಂ ಚ ಪಾದಾನಾಂ| ಚತುರ್ಣಾಂಸ್ಯಾದನುಷ್ಟುಭಿಃ||’ ಸ್ವಾರಸ್ಯವೇನೆಂದರೆ ಈ ಶ್ಲೋಕವೂ ಅನುಷ್ಟುಪ್ ಛಂದಸ್ಸಿನಲ್ಲೇ ಇದೆ! ಶ್ಲೋಕ ಏನು ಹೇಳುತ್ತಿದೆಯೆಂದರೆ ಅನುಷ್ಟುಪ್ ಛಂದಸ್ಸಿನ ಪದ್ಯದಲ್ಲಿ ತಲಾ ಎಂಟು ಅಕ್ಷರಗಳ ಒಟ್ಟು ನಾಲ್ಕು ಪಾದಗಳು ಇರುತ್ತವೆ.

ಪ್ರತಿಯೊಂದು ಪಾದದ ಐದನೆಯ ಅಕ್ಷರ ಲಘು. ಎರಡನೆಯ ಮತ್ತು ನಾಲ್ಕನೆಯ ಪಾದಗಳ ಏಳನೆಯ ಅಕ್ಷರಗಳೂ ಲಘು. ನಾಲ್ಕೂ ಪಾದಗಳ ಆರನೆಯ ಅಕ್ಷರ ಗುರು. ಮೇಲಿನ ‘ನಿಯಮಶ್ಲೋಕ’ದಲ್ಲಿಯೂ ಈ ನಿಯಮ ಚಾಚೂ ತಪ್ಪದೆ ಪಾಲನೆಯಾಗಿದೆ. ಅಂದರೆ ಶ್ಲೋಕವು ಯಾವುದನ್ನು ವಿವರಿಸುತ್ತಿದೆಯೋ ತಾನೂ ಅದೇ ಆಗಿದೆ; ಸ್ವ-ಪ್ರಸ್ತಾವಕ್ಕೆ ಇನ್ನೊಂದು ಒಳ್ಳೆಯ ಉದಾಹರಣೆಯಾಗಿದೆ. ‘ಛಂದೋಮಿತ್ರ’ ಪುಸ್ತಕದಲ್ಲಿ ಪ್ರೊ.ಅ.ರಾ.ಮಿತ್ರ ಅವರು ಕನ್ನಡದ ಛಂದಸ್ಸಿನ ವಿವರಣೆಗೂ ಇದೇ ತಂತ್ರವನ್ನು ಬಳಸಿದ್ದಾರೆ.

ಉತ್ಪಲಮಾಲಾ, ಚಂಪಕಮಾಲಾ, ಶಾರ್ದೂಲವಿಕ್ರೀಡಿತ, ಮತ್ತೇಭವಿಕ್ರೀಡಿತ, ಸ್ರಗ್ಧರಾ, ಮಂದಾಕ್ರಾಂತಾ ಮುಂತಾದ ವೃತ್ತಲಕ್ಷಣಗಳನ್ನು ನೆನಪಿಟ್ಟುಕೊಳ್ಳಲು ಪದ್ಯಗಳನ್ನು ಆಯಾ ವೃತ್ತಗಳಲ್ಲೇ ಬರೆದಿಟ್ಟಿದ್ದಾರೆ. ಅಂತೆಯೇ ಶರ ಕುಸುಮ ಭೋಗ ಭಾಮಿನೀ ಪರಿವಽನೀ ವಾರ್ಧಕ ಷಟ್ಪದಿಗಳ ಲಕ್ಷಣಗಳನ್ನು ನೆನಪಿಟ್ಟು ಕೊಳ್ಳಲು ಆಯಾ ವೃತ್ತಗಳಲ್ಲೇ ಷಟ್ಪದಿಗಳನ್ನು ಹೊಸೆದಿದ್ದಾರೆ.

‘ಮೂರು ಮಾತ್ರೆಯಳತೆಯಿರಲು| ಆರು ಸಾಲಿನೋಟವಿರಲು| ಸಾರಿಸಾರಿ ಪೇಳ್ವರಿದುವೆ ಭೋಗಷಟ್ಪದಿ|| ಮೂರು ಆರು ಸಾಲಿನಲ್ಲಿ| ಆರು ಗಣವು ಕೊನೆಗೆ ಗುರುವು| ಬೇರೆ ನಾಲ್ಕು ಸಾಲುಗಳಿಗೆ ನಾಲ್ಕು ಗಣಗಳು||’ ಎಂದು ಭೋಗಷಟ್ಪದಿಯಲ್ಲೇ ಭೋಗಷಟ್ಪದಿಯ ಸೂತ್ರ. ‘ಇವಗೆ ಭಾಮಿನಿ ಹುಚ್ಚು ಒಂದೇ| ಸಮನೆ ಮಾತ್ರೆಗಳೇಳ ಕೊಡುತಿರಿ| ಕ್ರಮವ ತಪ್ಪದೆ ಮೂರು ನಾಲ್ಕರ ತೆರದಿ ಏಳು ಸಲ|| ಸವೆಯದಿರೆ ಮತ್ತೊಂದು ಮಂಡಲ| ಹವಣಿಸುತ ಬರೆ ಲೇಸು ಕೇಳಿರಿ|
ಬೆವರಬೇಡಿರಿ ಕೊನೆಗೆ ಗುರುಕೃಪೆಯಿರಲುಬದುಕುವನು||’ ಎಂದು ಭಾಮಿನೀ ಷಟ್ಪದಿಯಲ್ಲೇ ಹಾಸ್ಯ ಮಾಡುತ್ತ ಭಾಮಿನೀ ಷಟ್ಪದಿಯ ಸೂತ್ರ. ಛಂದಕ್ಕೂ ಚಂದದ ಸ್ವ-ಪ್ರಸ್ತಾವ ಉಡುಗೆ ಮಿತ್ರರಿಂದ.

ಸ್ವ-ಪ್ರಸ್ತಾವದ ವಾಕ್ಯಗಳನ್ನು ರಚಿಸಿ ಭಾಷಾ ಚಮತ್ಕಾರ ಮಾಡಲಿಕ್ಕೂ ಆಗುತ್ತದೆ. ‘ಇದರಲ್ಲಿ ಒಟ್ಟು ಹದಿನಾರು ಅಕ್ಷರಗಳಿವೆ’ ಎಂಬ ವಾಕ್ಯವನ್ನು ಒಮ್ಮೆ ಗಮನವಿಟ್ಟು ನೋಡಿ. ಅಕ್ಷರಗಳನ್ನು ಲೆಕ್ಕ ಮಾಡಿ, ಬರೋಬ್ಬರಿ ಹದಿನಾರು! ‘ಈ ವಾಕ್ಯದಲ್ಲಿ ಆರು ಪದಗಳು ಕಡಿಮೆ ಇರುತ್ತಿದ್ದರೆ ಇದೊಂದು ಒಟ್ಟು ಏಳು ಪದಗಳು ಇರುವ ವಾಕ್ಯ ಆಗುತ್ತಿತ್ತು’ ಎಂಬ ವಾಕ್ಯವನ್ನು ಗಮನಿಸಿ. ಪದಗಳನ್ನು ಲೆಕ್ಕ ಮಾಡಿ. ಆರು ಪದಗಳು ಕಡಿಮೆಯಿರುತ್ತಿದ್ದರೆ ಏಳು ಪದಗಳ ವಾಕ್ಯ ಆಗುತ್ತಿದ್ದದ್ದು ಹೌದು ಎಂದು ದೃಢಪಡಿಸಿಕೊಳ್ಳಿ. ಹಾಗೆಯೇ ‘.ಕ್ಯವಾ ವರುದಿರೆಬ ಗಾರುಮುಗಾರುತಿ ದುಇ’ – ಇದೇನೆಂದು ಹೇಳಿನೋಡೋಣ? ಒಂದೆರಡು ಇಂಗ್ಲಿಷ್‌ನವೂ ಇರಲಿ.

How many consonants are there in the following words? One, Two, Three.. ಇನ್ನೊಂದು ದೊಡ್ಡ ಪ್ಯಾರಗ್ರಾಫ್‌ನಷ್ಟಿರುವ ವಾಕ್ಯ ಓದಿನೋಡಿ: In this sentence the word ‘and’ occurs twice, the word ‘eight’ occurs twice, the word ‘four’ occurs twice, the word ‘fourteen’ occurs four times, the word ‘in’ occurs twice, the word ‘occurs’ occurs fourteen times, the word ‘sentence’ occurs twice, the word ‘seven’ occurs twice, the word ‘the’ occurs fourteen times, the word ‘this’ occurs
twice, the word ‘times’ occurs seven times, the word ‘twice’ occurs eight times, and the word ‘word’ occurs fourteen
times! ಬೇಕಿದ್ದರೆ ಎಲ್ಲವನ್ನೂ ಲೆಕ್ಕ ಮಾಡಿನೋಡಿ.

ಕೆಲವರಿಗೆ ಒಂದು ಅಭ್ಯಾಸವಿರುತ್ತದೆ, ಯಾರಲ್ಲೇ ಆದರೂ ಪ್ರಶ್ನೆ ಕೇಳುವ ಮೊದಲು ‘ಒಂದು ಪ್ರಶ್ನೆ ಕೇಳ್ಲಾ?’ ಎಂದು ಅನುಮತಿ ಕೇಳಿಕೊಳ್ಳುತ್ತಾರೆ. ಆದರೆ ‘ಒಂದು ಪ್ರಶ್ನೆ ಕೇಳ್ಲಾ?’ ಎಂದು ಅನುಮತಿಗೆಂದು ಆ ಪ್ರಶ್ನೆ ಕೇಳಿದಾಗಲೇ ಒಂದು ಪ್ರಶ್ನೆ ಕೇಳಿದಂತಾಯ್ತಲ್ಲ!? ಅಂದರೆ ಆ ಪ್ರಶ್ನೆ ಸ್ವ-ಪ್ರಸ್ತಾವ ಮಾಡಿಕೊಂಡಿತು! ರೇಡಿಯೊದಲ್ಲಿ ಹಿಂದೀ ಉದ್ಘೋಷಕರು ‘ಸಬ್‌ಸೇ ಪೆಹಲೇ ಸುನಿಯೇ ಯೇ ಗಾನಾ…’ ಎಂದು ಹೇಳುವುದರಲ್ಲೂ ಅದೇ ವಿರೋಧಾಭಾಸ. ಆ ಗಾನಾ ಎಲ್ಲ ಗಾನಾಗಳ ಪಟ್ಟಿಯಿಂದಲೇ ಎತ್ತಿದ್ದಾದರೆ ಅದು ಸಬ್‌ಸೇ ಪೆಹಲೇ ಆಗುವುದು ಹೇಗೆ? ‘ಕ್ರೀಟ್‌ನವರೆಲ್ಲ ಸುಳ್ಳುಗಾರರು’ ಎಂದಿದ್ದನಂತೆ ಕ್ರಿ.ಪೂ 6ನೆಯ ಶತಮಾನ ದಲ್ಲಿ ಬದುಕಿದ್ದ ಗ್ರೀಕ್ ಸಂತ ಎಪಿಮೆನಿಡೆಸ್.

ಈ ಹೇಳಿಕೆ ಸ್ವ-ಪ್ರಸ್ತಾವದ ಅತ್ಯಂತ ಪ್ರಾಚೀನ ಉದಾಹರಣೆ ಎನ್ನಲಾಗಿದೆ. ಇದಕ್ಕೆ ಸುಳ್ಳುಗಾರರ ವಿರೋಧಾಭಾಸ (Liar’s paradox) ಎಂಬ ಖ್ಯಾತಿಯೂ
ಇದೆ. ಕ್ರೀಟ್ ಎನ್ನುವುದು ಗ್ರೀಸ್ ದೇಶಕ್ಕೆ ಸೇರಿದ ಒಂದು ದ್ವೀಪದ ಹೆಸರು. ಎಪಿಮೆನಿಡೆಸ್ ಆ ದ್ವೀಪದ ನಿವಾಸಿ. ಅವನ ಈ ಹೇಳಿಕೆ ನಿಜವೆಂದಾದರೆ ಕ್ರೀಟ್-ನಿವಾಸಿಯಾದ ಅವನೇ ಸುಳ್ಳುಗಾರನಲ್ಲ ಎಂದಾಯಿತು. ಒಂದುವೇಳೆ ಅವನ ಹೇಳಿಕೆ ಸುಳ್ಳಾದರೆ ಅದರ ಪ್ರಕಾರ ಕ್ರೀಟ್-ನಿವಾಸಿಗಳೆಲ್ಲ ಸುಳ್ಳುಗಾರರಲ್ಲ ಎಂದಾಗುತ್ತದೆ!

ಬರ್ಟ್ರಾಂಡ್ ರಸೆಲ್‌ನ ಕ್ಷೌರಿಕನ ಕಥೆ ಸಹ ಇಂಥದ್ದೇ ಒಂದು ಸ್ವ-ಪ್ರಸ್ತಾವದ ವಿರೋಧಾಭಾಸ. ಒಂದು ಸಣ್ಣ ಪಟ್ಟಣದಲ್ಲಿ ಒಬ್ಬನೇ ಒಬ್ಬ ಕ್ಷೌರಿಕನಿದ್ದ. ಆ ಕ್ಷೌರಿಕನ ಹೇಳಿಕೆಯೇನೆಂದರೆ, ‘ಈ ಪಟ್ಟಣದ ಗಂಡಸರಲ್ಲಿ ಯಾರು ತಾವೇ ಗಡ್ಡ ಬೋಳಿಸಿಕೊಳ್ಳುವುದಿಲ್ಲವೋ ಅವರ ಗಡ್ಡವನ್ನು ನಾನು ಬೋಳಿಸುತ್ತೇನೆ. ತಾವೇ ಬೋಳಿ ಸಿಕೊಳ್ಳುವವರ ತಂಟೆಗೆ ಹೋಗುವುದಿಲ್ಲ’ ಎಂದು. ಅದರಲ್ಲೇನು ವಿಶೇಷ ಅಂತ ನಿಮಗನಿಸಬಹುದು. ಆದರೆ ಅದೇ ಕ್ಷೌರಿಕ, ತಾನೇ ಶೇವ್ ಮಾಡಿ ಕೊಳ್ಳುವ ಸಂದರ್ಭವನ್ನು ಊಹಿಸಿ. ಆಗ ಅವನ ಹೇಳಿಕೆ ವಿರೋಧಾಭಾಸವಾಗಲಿಲ್ಲವೇ? ಯಾರು ತನ್ನ ಗಡ್ಡವನ್ನು ತಾನೇ ಬೋಳಿಸಿಕೊಳ್ಳುವುದಿಲ್ಲವೋ ಅವರ ಗಡ್ಡ ತೆಗೆಯುತ್ತೇನೆ; ಯಾರು ತನ್ನ ಗಡ್ಡವನ್ನು ತಾನೇ ತೆಗೆದುಕೊಳ್ಳುತ್ತಾರೊ ಅವರ ಗಡ್ಡವನ್ನು ನಾನು ಬೋಳಿಸುವುದಿಲ್ಲ ಎಂದಲ್ಲವೇ ಆತ ಹೇಳಿದ್ದು? ಈಗ ಅವನು ಸ್ವತಃ ಗಡ್ಡ ತೆಗೆಯಲಿಕ್ಕೆ ಕುಳಿತಾಗ ಏನಾಯ್ತು? ಗ್ರೀಸ್‌ನದೇ ಇನ್ನೊಂದು ಕಥೆಯಿದೆ, ಚೋರ ಗುರು ಚಂಡಾಲ ಶಿಷ್ಯ ಮಾದರಿಯದು.

ಪ್ರಾಚೀನ ಗ್ರೀಸ್ ದೇಶದಲ್ಲಿ ಪ್ರೊಟಾಗರಸ್ ಎಂಬೊಬ್ಬ ವಕೀಲನಿಗೆ ಯೂತ್ಲಸ್ ಎನ್ನುವ ಹೆಸರಿನ ಶಿಷ್ಯನಿದ್ದ. ಗುರು ತನ್ನ ವಿದ್ಯೆಯನ್ನು ಶಿಷ್ಯನಿಗೆ ಧಾರೆಯೆರೆದ, ಆದರೆ ಟ್ಯೂಷನ್ ಫೀಸ್ ಏನೂ ತೆಗೆದುಕೊಳ್ಳದೆ ‘ನೀನು ಮೊತ್ತಮೊದಲ ಕೇಸ್‌ನಲ್ಲಿ ಜಯಗಳಿಸಿದ ಮೇಲಷ್ಟೇ ಅದನ್ನು ನನಗೆ ಪಾವತಿಸು’ ಎಂದ. ಈ ಶಿಷ್ಯೋ ತ್ತಮ ಪದವಿ ಗಳಿಸಿ ಸುಮಾರು ದಿನಗಳೇ ಸಂದರೂ ಯಾವುದೇ ಖಟ್ಲೆಯನ್ನು ಕೈಗೆತ್ತಿಕೊಳ್ಳಲಿಲ್ಲ. ಫೀಸ್ ಪಾವತಿಯ ಯೋಚನೆಯನ್ನೂ ಮಾಡಲಿಲ್ಲ. ಪ್ರೊಟಾ ಗರಸ್ ಸಿಟ್ಟಾದ. ಯೂತ್ಲಸ್ ವಿರುದ್ಧವೇ ದಾವೆ ಹೂಡಿದ.

ಅವನು ಹೇಳುವುದೇನೆಂದರೆ ಈ ಕೇಸ್‌ನಲ್ಲಿ ಅವನು ಜಯಗಳಿಸಿದರೆ ಯೂತ್ಲಸ್ ಅವನಿಗೆ ದುಡ್ಡು ಕೊಡಬೇಕು. ಒಂದೊಮ್ಮೆ ಯೂತ್ಲಸ್ ಜಯಗಳಿಸಿದರೂ
ಮೊದಲ ಕರಾರಿನಂತೆ ಪ್ರೊಟಾಗರಸ್‌ನಿಗೆ ದುಡ್ಡು ಸಲ್ಲಬೇಕು. ಯೂತ್ಲಸ್ ಹೇಳುವುದೇನೆಂದರೆ, ಕೇಸ್‌ನಲ್ಲಿ ತಾನು ಗೆದ್ದರೆ ನ್ಯಾಯಾಲಯದ ತೀರ್ಪಿನ ಪ್ರಕಾರ ತಾನು ದುಡ್ಡು ಕೊಡಬೇಕಿಲ್ಲ. ತಾನು ಸೋತರೂ, ಗುರುವಿನೊಂದಿಗೆ ಮಾಡಿದ್ದ ಕರಾರಿನಂತೆ ದುಡ್ಡು ಕೊಡಬೇಕಿಲ್ಲ! ಎಂಥ ವಿರೋಧಾಭಾಸ! ಆದರೆ ಸ್ವ-ಪ್ರಸ್ತಾವದ ಹೇಳಿಕೆಗಳು ಯಾವಾಗಲೂ ವಿರೋಧಾಭಾಸದವೇ ಆಗಿರಬೇಕೆಂದೇನಿಲ್ಲ.

ಹಾಗಿರುತ್ತಿದ್ದರೆ ನಾನು/ನನ್ನದು ಇತ್ಯಾದಿ ಉತ್ತಮಪುರುಷ ಸರ್ವನಾಮ ಬಳಸಿದ ವಾಕ್ಯಗಳೆಲ್ಲ ವಿರೋಧಾಭಾಸಗಳಾಗುತ್ತಿದ್ದುವು. ಧೂಳು ಹಿಡಿದ ಗುಜರಿ ಕಾರಿನ ಮೇಲೆ ಯಾರೋ ತರಲೆ ಹುಡುಗರು ಗೀಚಿದ ‘ನನ್ನನ್ನು ಸ್ವಚ್ಛಗೊಳಿಸಿ’ ಎಂಬ ವಾಕ್ಯವಿರುತ್ತದೆ ಎಂದುಕೊಳ್ಳಿ. ಅದನ್ನು ಏನೆಂದು ಅರ್ಥಮಾಡಿಕೊಳ್ಳುವಿರಿ? ಕಾರು ತನ್ನನ್ನು ಕ್ಲೀನ್ ಮಾಡಿ ಎನ್ನುತ್ತಿದೆಯೇ? ಕಾರಿನ ಧೂಳನ್ನು ತಾಗಿಸಿಕೊಂಡ ಆ ಬರಹಗಾರನನ್ನು ಶುಚಿಗೊಳಿಸಬೇಕೆಂದೇ? ಅಥವಾ ಕಾರಿನ ಮೇಲಿನ ಧೂಳೇ ತನ್ನನ್ನು ಝಾಡಿಸಿ ತೆಗೆಯಿರಿ ಎನ್ನುತ್ತಿದೆಯೇ? ಅಥವಾ ಸೊಟ್ಟ ಅಕ್ಷರಗಳಲ್ಲಿ ಬರೆದ ಆ ವಾಕ್ಯವೇ ತನ್ನನ್ನು ಸುಂದರವಾಗಿ ಸವಿನಯವಾಗಿ ಬರೆದ ವಾಕ್ಯ ವಾಗಿಸುವಂತೆ (ಉದಾಹರಣೆಗೆ ‘ದಯವಿಟ್ಟು ನನ್ನನ್ನು ಸ್ವಚ್ಛಗೊಳಿಸುತ್ತೀರಾ?’) ಬೇಡುತ್ತಿದೆಯೇ? ಅಂದರೆ, ವಾಕ್ಯದಲ್ಲಿರುವ ‘ನಾನು’ ಯಾವುದರ ರೆಫರೆನ್ಸ್?
ಇನ್ನೊಬ್ಬ ಲೇಖಕಮಹಾಶಯ ಒಂದು ಪುಸ್ತಕ ಬರೆದು ಪ್ರಕಟಿಸುತ್ತಾನೆ.

ಅದರಲ್ಲಿ ಅರ್ಪಣೆ ಹೀಗಿರುತ್ತದೆ- ‘ಅರ್ಪಣೆ: ನನ್ನ ಹೆಂಡತಿಗೆ. ಈ ಪುಸ್ತಕದ ರಚನೆಯಲ್ಲಿ ಅರ್ಪಣೆ ಬರೆದುಕೊಟ್ಟದ್ದೂ ಸೇರಿದಂತೆ ಅವಳು ನೀಡಿರುವ ಸಕಲ
ಸಹಕಾರಕ್ಕೆ.’ ಅಷ್ಟಾಗಿ ಅವನು ಬರೆದ ಪುಸ್ತಕದ ಶೀರ್ಷಿಕೆ ಏನು ಗೊತ್ತೇ?  How to write a How-to Book. ಪುಸ್ತಕ ಪ್ರಕಟಣೆಗೆ ಸಂಬಂಧಿಸಿದ್ದೇ ಇನ್ನೊಂದು: ‘ಸೊ ಏಂಡ್ ಸೊ ಅವರ ಅಪ್ರಕಟಿತ ಕೃತಿಗಳ ಸಂಕಲನ’ ಎಂಬ ಹಣೆಪಟ್ಟಿಯ ಪುಸ್ತಕಗಳನ್ನು ನೀವು ನೋಡಿದ್ದಿರಬಹುದು. ಪುಸ್ತಕರೂಪದಲ್ಲಿ
ಬಂದಮೇಲೆ ಅವು ಅಪ್ರಕಟಿತ ಕೃತಿಗಳಾಗುವುದು ಹೇಗೆ? ‘ಇದುವರೆಗೆ ಅಪ್ರಕಟಿತವಾಗಿದ್ದ ಕೃತಿಗಳು…’ ಎನ್ನುತ್ತೀರಾದರೆ ಇದುವರೆಗೆ ಪ್ರಿಂಟಾಗಿರುವ ಪ್ರತಿಯೊಂದು ಪುಸ್ತಕವೂ ಅದುವರೆಗೆ ಅಪ್ರಕಟಿತವಾಗಿಯೇ ಇದ್ದ ಕೃತಿಯಲ್ಲವೇ? ಖಾಲಿ ಪುಟದ ವಿರೋಧಾಭಾಸ ಅಂತ ಇನ್ನೊಂದಿದೆ.

ಕೆಲವು ಪುಸ್ತಕಗಳಲ್ಲಿ, ಕಡತಗಳಲ್ಲಿ, ಪುಸ್ತಕರೂಪದ ಪ್ರಶ್ನೆಪತ್ರಿಕೆಗಳಲ್ಲಿ ಬೇಕಂತಲೇ ಕೆಲವು ಖಾಲಿ ಪುಟಗಳನ್ನು ಸೇರಿಸುವುದಿದೆ. ಟಿಪ್ಪಣಿ ಮಾಡಿಕೊಳ್ಳಲು ಅಥವಾ ಬೇರಾವುದೇ ಉದ್ದೇಶಕ್ಕಾದರೂ ಇರಲೆಂದು. ಆ ಖಾಲಿ ಪುಟಗಳಲ್ಲಿ ಕೆಳಗೆ ಸಣ್ಣ ಪ್ರಿಂಟ್‌ನಲ್ಲಿ This page is intentionally left blank ಎಂದು ಮುದ್ರಿಸಿದ್ದರೆ ಅದನ್ನು ನಿಜಕ್ಕೂ ಖಾಲಿ ಪುಟ ಎಂದು ಪರಿಗಣಿಸಬೇಕೆ? ಅದೊಂದು ವಾಕ್ಯ ಅಚ್ಚಾಗಿದೆಯೆಂದ ಮೇಲೆ ಖಾಲಿ ಪುಟ ಅಲ್ಲ ತಾನೆ? ಎರಡನೆಯ ಪ್ರಪಂಚಯುದ್ಧದ ನಂತರ ಸ್ಟೀಫನ್ ಬರ್ಗ್ ಮನ್ ಎಂಬ ರಷ್ಯನ್ ಸೈನಿಕ ಫ್ರಾನ್ಸ್‌ನಲ್ಲಿ ಉಳಿದುಬಿಟ್ಟ.

ಆತನದು ಸಂದಿಗ್ಧ ಪರಿಸ್ಥಿತಿ. ಯಾವುದೇ ದಾಖಲೆಪತ್ರಗಳಿಲ್ಲದೆ ಬರಿಗೈಯವನಾಗಿದ್ದ ಅವನಿಗೆ ರೇಷನ್ ಕಾರ್ಡ್ ಸಹ ಸಿಗುವಂತಿರಲಿಲ್ಲ. ಬರ್ಗ್‌ಮನ್ ಒಂದು ಉಪಾಯ ಹೂಡಿದ. ಪ್ಯಾರಿಸ್‌ಗೆ ಸಮೀಪದ ಒಂದು ಪಟ್ಟಣದ ಮೇಯರ್‌ನ ಹತ್ತಿರ ಹೋಗಿ ಒಂದು ಸರ್ಟಿಫಿಕೇಟ್ ಕೊಡಿಸಿಕೊಳ್ಳುವುದರಲ್ಲಿ ಯಶಸ್ವಿಯಾದ. ಆ ಸರ್ಟಿಫಿಕೇಟ್‌ನ ಒಕ್ಕಣೆ ಏನೆಂದರೆ ‘ಈ ಮನುಷ್ಯನ ಹತ್ತಿರ ಯಾವುದೇ ಸರ್ಟಿಫಿಕೇಟ್‌ಗಳಿಲ್ಲ ಎಂದು ಪ್ರಮಾಣೀಕರಿಸಲಾಗಿದೆ’! ಇಲ್ಲದ ಸರ್ಟಿಫಿಕೇಟ್ ಉಳ್ಳವ ನಾಗಿ ಸ್ಟೀಫನ್ ಬರ್ಗ್‌ಮನ್ ಫ್ರಾನ್ಸ್‌ನಲ್ಲಿ ತನಗೊಂದು ರೇಷನ್ ಕಾರ್ಡ್ ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾದ!

ಈಗ ಭಾಷೆಯಿಂದ ಚಿತ್ರಕಲೆಗೆ ಬರೋಣ. ರೀನ್ ಮಾಗ್ರಿಟ್ಟ್ ಎಂಬ ಕಲಾವಿದ ಹುಕ್ಕಾ ಚಿತ್ರವನ್ನು ಬಿಡಿಸಿ ಅದರ ಕೆಳಗೆ ಫ್ರೆಂಚ್ ನಲ್ಲಿ ‘ಇದು ಹುಕ್ಕಾ ಅಲ್ಲ’ ಎಂದು ಅರ್ಥ ಬರುವ ವಾಕ್ಯ ಬರೆದ ಕಲಾಕೃತಿ ತುಂಬ ಪ್ರಸಿದ್ಧವಾದುದು. ಒಂದರ್ಥದಲ್ಲಿ ನಿಜ, ಅದು ಹುಕ್ಕಾ ಅಲ್ಲ; ಹುಕ್ಕಾದ ಚಿತ್ರ ಅಷ್ಟೇ! ಮೌರಿಟ್ಸ್ ಎಷರ್ ಎಂಬ ಡಚ್ ಚಿತ್ರಗಾರನ ಕಲಾಕೃತಿಗಳಲ್ಲಿ ಹೆಚ್ಚಿನವೆಲ್ಲ ಸ್ವ-ಪ್ರಸ್ತಾವಕ್ಕೆ ಖ್ಯಾತಿಯಾದವುಗಳು. ಇಲ್ಲಿ ಸ್ವ-ಪ್ರಸ್ತಾವವೆಂದರೆ ಕಲಾವಿದನ ಪ್ರಸ್ತಾವವಲ್ಲ, ಕಲಾಕೃತಿಯಲ್ಲಿ ಅದೇ ಕಲಾಕೃತಿಯ ರೆಫರೆನ್ಸ್! ‘ಪರಸ್ಪರ ಚಿತ್ರ ಬಿಡಿಸಿಕೊಳ್ಳುತ್ತಿರುವ ಕೈಗಳು’ ಅಂಥದೊಂದು ಕಲಾಕೃತಿ.

ಆ ಚಿತ್ರದಲ್ಲಿ ಒಂದು ಕೈ ಪೆನ್ಸಿಲ್ ಹಿಡಿದುಕೊಂಡು ಚಿತ್ರ ರಚಿಸುತ್ತಿದೆ, ಅದು ಬಿಡಿಸುತ್ತಿರುವ ಚಿತ್ರವೆಂದರೆ ಚಿತ್ರರಚನೆಯಲ್ಲಿ ತೊಡಗಿರುವ ಕೈಯದು! ಎಷರ್‌ನ ಇನ್ನೊಂದು ಜನಪ್ರಿಯ ರಚನೆ ‘ಪ್ರಿಂಟ್ ಗ್ಯಾಲರಿ’ ಎಂಬ ಕಲಾಕೃತಿ. ಅದರಲ್ಲಿ ಚಿತ್ರದ ಕೆಳಭಾಗದಲ್ಲಿ ಹುಡುಗನೊಬ್ಬ ಒಂದು ಕಲಾಕೃತಿಯನ್ನು ನೋಡುತ್ತ
ನಿಂತಿದ್ದಾನೆ. ಅವನು ನೋಡುತ್ತಿರುವ ಚಿತ್ರದಲ್ಲಿ ಒಂದು ಹಡಗು ಬಂದರಿನತ್ತ ಬರುತ್ತಿದೆ, ಬಂದರುಪಟ್ಟಣದ ಕಟ್ಟಡಗಳೆಲ್ಲ ಕಾಣುತ್ತಿವೆ, ಅಂತಹ ಕಟ್ಟಡವೊಂದರ ಮೇಲಂತಸ್ತಿನಲ್ಲಿ ನಿಂತ ಒಬ್ಬ ಮಹಿಳೆ ಕಿಟಿಕಿಯಿಂದ ಕೆಳಗೆ ನೋಡುತ್ತಿದ್ದಾಳೆ, ಅವಳು ನೋಡುತ್ತಿರುವುದು ಎದುರಿನ ಕಟ್ಟಡದ ಕೆಳ ಅಂತಸ್ತಿನಲ್ಲಿರುವ ಕಲಾ ಪ್ರದರ್ಶನ ಮಳಿಗೆ.

ಆ ಮಳಿಗೆಯಲ್ಲಿ ಕಲಾಕೃತಿಯನ್ನು ನೋಡುತ್ತಿರುವ ಅದೇ ಹುಡುಗ! ನಾವು ಕನ್ನಡಿಯ ಮುಂದೆ ನಿಂತು ನೋಡುವಾಗ ನಮ್ಮ ಹಿಂದಿನಿಂದಲೂ ಒಂದು ಕನ್ನಡಿ
ಇದ್ದರೆ ಬಿಂಬಗಳದೇ ಬಿಂಬಗಳು ಅನಂತವಾಗಿ ಕಾಣುವಂತಾಗುತ್ತದಲ್ಲ ಹಾಗೆಯೇ ಇದು ಕೂಡ. ಚಿತ್ರದ್ದೇ ಚಿತ್ರ. ಈಗ, ಇಂದಿನ ಲೇಖನದ ತಲೆಬರಹವನ್ನು ಇನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ. ‘ಸ್ವ-ಪ್ರಸ್ತಾವವನ್ನು ಬಣ್ಣಿಸುವ ಲೇಖನದ ತಲೆಬರಹ’ ಯಾವುದು? ಅದೇ!