ಹಿಂದಿರುಗಿ ನೋಡಿದಾಗ
ಶಸ್ತ್ರವೈದ್ಯ ರಾಬರ್ಟ್ ಲಿಸ್ಟನ್ ಮಹಾ ಆತ್ಮವಿಶ್ವಾಸಿ, ಅಷ್ಟೇ ಸ್ವಾಭಿಮಾನಿ. ತಾನು ನಂಬಿದ್ದನ್ನು ನಡೆಸಿಯೇ ತೀರುವಂಥವನು. ಕೆಲವರ ದೃಷ್ಟಿಯಲ್ಲಿ ಅಹಂಕಾರಿ! ಈತ ಒಬ್ಬ ರೋಗಿಯ ಕಾಲನ್ನು ೩೦ ಸೆಕೆಂಡುಗಳಲ್ಲಿ ತುಂಡರಿಸುತ್ತಿದ್ದ ಎಂದರೆ, ಅದು ನಂಬಲು ಅಸಾಧ್ಯವಾದ ಮಾತು! ಆದರೆ ಇದರಲ್ಲಿ ಉತ್ಪ್ರೇಕ್ಷೆಯಿಲ್ಲ. ಯುರೋಪಿನ ಸಮಕಾಲೀನ ವೈದ್ಯಕೀಯ ವಲಯದಲ್ಲಿ ಈತನ ಸುತ್ತಲೂ ಹರಡಿದ್ದ ಕಥೆಗಳು ಅಸಂಖ್ಯ! ಅವುಗಳಲ್ಲಿ ಎಷ್ಟು ಸತ್ಯ-ಎಷ್ಟು ಮಿಥ್ಯ ಎಂದು ಬೇರ್ಪಡಿಸುವುದು ದುಸ್ತರ.
೧೯ನೆಯ ಶತಮಾನದ ಆರಂಭದಲ್ಲಿ ಯುರೋಪ್ ಮಾತ್ರವಲ್ಲ, ಜಗತ್ತಿನ ಯಾವುದೇ ದೇಶದಲ್ಲಿಯಾಗಲಿ ಶಸವೈದ್ಯಕೀಯವು ಇನ್ನೂ ಶೈಶವಾವಸ್ಥೆ ಯಲ್ಲಿತ್ತು. ಕೈಕಾಲುಗಳಿಗೆ ಆಗಿರುತ್ತಿದ್ದ ಗಾಯ, ಮೂಳೆಮುರಿತ ಅಥವಾ ಇತರ ಸಮಸ್ಯೆಗಳಿಗೆ ಯಾವುದೇ ಚಿಕಿತ್ಸೆ ಉಪಶಮನ ಕೊಡಲಾಗದು ಎನ್ನುವ ಸ್ಥಿತಿ ತಲುಪಿದಾಗ, ಹೀಗೇ ಬಿಟ್ಟರೆ ಕೆಲವೇ ದಿನಗಳಲ್ಲಿ ಅಂಗಕ್ಷಯ ತೀವ್ರವಾಗಿ ವ್ಯಕ್ತಿ ಸಾಯುವುದು ಖಚಿತ ಎಂದು ತೀರ್ಮಾನವಾದಾಗ, ವೈದ್ಯರು ಆತನ ಅಂಗವನ್ನು ತುಂಡರಿಸುವುದೊಂದೇ ಮಾರ್ಗ ಎಂಬ ತೀರ್ಮಾನಿಸುತ್ತಿದ್ದರು.
ಇದರಿಂದ ರೋಗಿಗೆ ಪ್ರತ್ಯಕ್ಷ ನರಕ ದರ್ಶನವಾಗುತ್ತಿತ್ತು. ಶಸ್ತ್ರವೈದ್ಯರು ತಮ್ಮ ಕೈಗಳನ್ನು ತೊಳೆಯುತ್ತಿರಲಿಲ್ಲ. ಯಾರ ಕೈಗಳು ಮತ್ತು ಉಡುಪು ಅತ್ಯಂತ ರಕ್ತಭರಿತವೋ, ಆ ಶಸ್ತ್ರವೈದ್ಯ ಹಿರಿಯ, ಅನುಭವಿ, ಯಶಸ್ವಿ ವೈದ್ಯ ಎಂದು ಹೆಸರಾಗಿದ್ದ. ಒಬ್ಬ ರೋಗಿಯ ಶಸಚಿಕಿತ್ಸೆ ಮುಗಿಸಿದ ನಂತರ ತನ್ನ ಕೈ ತೊಳೆಯದೆ, ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ. ಗಾಯವನ್ನು ಹೊಲಿಯಲು ಬಳಸುವ ದಾರವನ್ನು ತನ್ನ ಕೋಟಿನ ಕಾಜದೊಳಗೆ ತೂರಿಸಿಟ್ಟು ಕೊಳ್ಳುತ್ತಿದ್ದ. ಈ ದಾರ ದಿಂದ ಗಾಯಗಳನ್ನು ಹೊಲಿದಾಗ, ಅವು ಕೊಳೆಯುತ್ತಿದ್ದವು.
ಕೀವು-ರಕ್ತ ಸೋರುತ್ತಿದ್ದವು. ಕೀವು ಉತ್ಪಾದನೆಯಾಗುವುದು ‘ನಮ್ಮ ಒಳ್ಳೆಯದಕ್ಕೆ’ ಎಂಬ ನಂಬಿಕೆ ಅನಾದಿ ಕಾಲದಿಂದಲೂ ಪ್ರಚಲಿತದಲ್ಲಿತ್ತು. ಅಂದು ಪ್ರತಿಜೈವಿಕ ಔಷಧಗಳಿರಲಿಲ್ಲ. ಹಾಗಾಗಿ ಆ ಅಂಗವು ಅನಿವಾರ್ಯವಾಗಿ ಅಂಗಕ್ಷಯಕ್ಕೆ ಒಳಗಾಗುತ್ತಿತ್ತು. ಆಗ ಕೊಳೆತ ಕಾಲನ್ನು ಕತ್ತರಿಸಲೇ ಬೇಕಾಗು ತ್ತಿತ್ತು; ಇಲ್ಲವೇ ಸೋಂಕು ಉಲ್ಬಣಗೊಂಡು ವ್ಯಕ್ತಿ ಜೀವ ಕಳೆದುಕೊಳ್ಳಬೇಕಾಗುತ್ತಿತ್ತು. ಬದುಕಿದ್ದರೆ ಬಡಜೀವವು ಹೇಗಾದರೂ ಬದುಕನ್ನು ನಡೆಸಬಹು ದೆಂದು ರೋಗಿಗಳು ರೋದಿಸುತ್ತಲೇ ಅಂಗಛೇದನಕ್ಕೆ ಒಪ್ಪಿಗೆ ಕೊಡುತ್ತಿದ್ದರು.
ಅಂದು ಅರಿವಳಿಕೆ ಇನ್ನೂ ಬಂದಿರಲಿಲ್ಲ. ೨೦೦೦ ವರ್ಷಗಳ ಹಿಂದೆ ನಮ್ಮ ಪೂರ್ವಜರು ರೋಗಿಗಳಿಗೆ ಭಂಗಿ ಅಥವಾ ಅಫೀಮನ್ನು ತಿನ್ನಿಸುತ್ತಿದ್ದ ಹಾಗೆಯೇ ಇಲ್ಲಿಯೂ ತಿನ್ನಿಸುತ್ತಿದ್ದರು. ಭಂಗಿ ಬೇಡವೆನ್ನುವರಿಗೆ ರಮ್ ಕುಡಿಸುತ್ತಿದ್ದರು. ಮರದ ಬೆಣೆಗೆ ಕರವಸ ಸುತ್ತಿ, ಅದನ್ನು ರೋಗಿಯ ಬಾಯಲ್ಲಿ ಇಡುತ್ತಿದ್ದರು. ಅವನು ಪೂರ್ಣ ಇಲ್ಲವೇ ಅರೆಬರೆ ಎಚ್ಚರದಲ್ಲಿರುವಾಗಲೇ ಕಾಲನ್ನು ತುಂಡರಿಸಿ, ಮರದ ಹೊಟ್ಟು ತುಂಬಿದ ಬಕೆಟ್ಟಿನಲ್ಲಿ ಎಸೆಯುತ್ತಿದ್ದರು. ಮನರಂಜನೆ ವಿರಳವಾಗಿದ್ದ ಅಂದಿನ ದಿನಗಳಲ್ಲಿ ಜನರು ಈ ಅಂಗಛೇದನವನ್ನು ನೋಡಲು ನೆರೆಯುತ್ತಿದ್ದರು.
ಶಸ್ತ್ರವೈದ್ಯರು ಚಂದ್ರರಂಗದಲ್ಲಿ (ಆಂಫಿಥಿಯೇಟರ್) ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರು. ಚಂದ್ರರಂಗದ ನಡುವೆ ಒಂದು ಮೇಜು. ಅದರ ಹಿಂದೆ ಅರ್ಧ ಚಂದ್ರಾಕೃತಿಯ ಗ್ಯಾಲರಿ. ಗ್ಯಾಲರಿಯಲ್ಲಿ ಆಸನಗಳು. ಮೊದಲ ಸಾಲಿನ ಆಸನಗಳಿಗಿಂತ ಎರಡ ನೆಯ ಸಾಲಿನ ಆಸನಗಳು ಎತ್ತರದಲ್ಲಿರುತ್ತಿದ್ದವು. ಎತ್ತರವು ಪ್ರತಿ ಸಾಲಿಗೂ ಹೆಚ್ಚುತ್ತಲೇ ಇತ್ತು. ಏಕೆಂದರೆ ಅತ್ಯಂತ ಮೇಲುಗಡೆ ಕುಳಿತ ವೀಕ್ಷಕನಿಗೂ ಶಸ್ತ್ರಚಿಕಿತ್ಸೆಯ ವಿವರಗಳು ಕಾಣಬೇಕಿತ್ತು. ಮೊದಲ ಸಾಲಿನಲ್ಲಿ ಶಸ್ತ್ರವೈದ್ಯರ ಜತೆ ಕೆಲಸ ಮಾಡುವ ಆಸ್ಪತ್ರೆಯ ಸಹೋದ್ಯೋಗಿಗಳು ಕುಳಿತುಕೊಳ್ಳುತ್ತಿದ್ದರು.
ಎರಡನೆಯ ಸಾಲಿನಲ್ಲಿ ವೈದ್ಯ ವಿದ್ಯಾರ್ಥಿಗಳು ಹಾಗೂ ಮೂರನೆಯ ಸಾಲಿನಲ್ಲಿ ನಗರದ ಗಣ್ಯ ವ್ಯಕ್ತಿಗಳು ಕುಳಿತುಕೊಳ್ಳುತ್ತಿದ್ದರು. ನಂತರ ಆಸಕ್ತ ಜನರು ನೆರೆಯುತ್ತಿ ದ್ದರು. ರೋಗಿಯ ಚೀರಾಟ, ಚಿಮ್ಮುವ ರಕ್ತ, ಅಂಗಕ್ಷಯದ ಗಬ್ಬುವಾಸನೆ ಸಹಿಸಿಕೊಂಡು, ಅವರು ಹೇಗೆ ಮನರಂಜಿಸಿಕೊಳ್ಳುತ್ತಿದ್ದರು ಎಂಬುದು ಊಹಾತೀತ. ಇದು ಅಂದಿನ ಯುರೋಪಿನ ಎಲ್ಲ ದೇಶಗಳಲ್ಲಿ ಸಾಮಾನ್ಯವಾಗಿತ್ತು. ಏಕೆಂದರೆ ಪ್ರತಿ ಶಸವೈದ್ಯನಿಗೂ ‘ನಾನು ಈ ನಗರದ
ಸರ್ವಶ್ರೇಷ್ಠ ವೈದ್ಯ’ ಎಂದು ಜಾಹೀರು ಮಾಡುವ ಅನಿವಾರ್ಯತೆಯಿತ್ತು.
ರಾಬರ್ಟ್ ಲಿಸ್ಟನ್ ಸ್ಕಾಟ್ಲಂಡಿನ ಎಕ್ಲೆಸ್ಮ್ಯಾಶನ್ ಎಂಬಲ್ಲಿ ಹುಟ್ಟಿದ. ತಂದೆ ರೆವರೆಂಡ್ ಹೆನ್ರಿ ಲಿಸ್ಟನ್. ಈತ ಪಾದ್ರಿಯ ಕೆಲಸ ಮಾಡುತ್ತಲೇ ಪೈಪ್ ರ್ಗನ್ ವಾದ್ಯವನ್ನು ಸಂಶೋಧಿಸಿದ್ದ. ೧೪ನೇ ವಯಸ್ಸಿನಲ್ಲಿ ಎಡಿನ್ಬರೋ ವಿಶ್ವವಿದ್ಯಾಲಯ ಸೇರಿ ಜಾನ್ ಬಾರ್ಕ್ಲೆ ಎಂಬ ಅಂಗರಚನಾ ಶಾಸ್ತ್ರಜ್ಞನ ಕೈಕೆಳಗೆ ಕಲಿತ. ೨೦ನೇ ವಯಸ್ಸಿನಲ್ಲಿ ಎಡಿನ್ಬರೋದ ‘ರಾಯಲ್ ಇನ್ ಫಾರ್ಮರಿ’ ಆಸ್ಪತ್ರೆಯಲ್ಲಿ ಸ್ಥಾನೀಯ ಶಸ್ತ್ರವೈದ್ಯನಾಗಿ ಕೆಲಸವನ್ನಾರಂಭಿಸಿದ.
ಯಾವುದೋ ವಿಚಾರಕ್ಕೆ ಬಾರ್ಕ್ಲೆಯೊಂದಿಗೆ ಭಿನ್ನಾಭಿಪ್ರಾಯ ಬಂದು ಅವನನ್ನು ತೊರೆದು ಸ್ವಂತದ ಅಂಗರಚನಾ ತರಗತಿ ನಡೆಸಲಾರಂಭಿಸಿದ.
೨೨ನೇ ವಯಸ್ಸಿನಲ್ಲಿ ಲಂಡನ್ನಿನ ‘ರಾಯಲ್ ಕಾಲೇಜ್ ಆಫ್ ಸರ್ಜನ್ಸ್’ ಸೇರಿದ. ಎಡಿನ್ಬರೋದಲ್ಲಿನ ವೈದ್ಯರು, ಯಾವುದಾದರೊಂದು ಶಸ್ತ್ರವೈದ್ಯ ಕೀಯ ಪ್ರಕರಣ ಕ್ಲಿಷ್ಟವಾಗಿದ್ದು ರೋಗಿಯ ಜೀವಕ್ಕೆ ಅಪಾಯವಾಗಬಹುದು ಎಂದು ಭಾವಿಸಿದಾಗ, ಆತನಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದರು.
ಅಂಥ ವೇಳೆ ಲಿಸ್ಟನ್ ಅವರನ್ನು ಲಂಡನ್ನಿಗೆ ಆಹ್ವಾನಿಸಿ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ. ಹೀಗೆ ರಾಬರ್ಟ್ ಲಿಸ್ಟನ್ ವೈದ್ಯಕೀಯ ವಲಯದಲ್ಲಿ ಟೀಕೆಗೊಳ ಗಾದ. ವಿವಾದಾತ್ಮಕ ವ್ಯಕ್ತಿಯಾಗಿ ಅಹಂಕಾರಿ ನಡವಳಿಕೆಗೆ ಕುಪ್ರಸಿದ್ಧನಾದ. ಆದರೆ ರೋಗಿಗಳನ್ನು ಕರುಣೆಯಿಂದ ನೋಡಿಕೊಳ್ಳುತ್ತಿದ್ದ. ಬಡವರಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದ. ಹಾಗಾಗಿ ಜನಸಾಮಾನ್ಯರಲ್ಲಿ ಪ್ರಸಿದ್ಧನಾದ! ಈತ ೩೪ನೇ ವಯಸ್ಸಿಗೆ ಲಂಡನ್ನಿನ ಯೂನಿವರ್ಸಿಟಿ ಕಾಲೇಜ್ ಹಾಸ್ಪಿಟಲ್ ನಲ್ಲಿ ಪ್ರೊಫೆಸರ್ ಆಫ್ ಸರ್ಜರಿಯಾಗಿ ಆಯ್ಕೆಯಾಗಿ ಜೀವಮಾನದ ಅಂತ್ಯದವರೆಗೆ ಇದೇ ಹುದ್ದೆಯಲ್ಲಿ ಮುಂದುವರಿದ.
ಚಂದ್ರರಂಗವನ್ನು ಪ್ರವೇಶಿಸುತ್ತಿದ್ದ ಲಿಸ್ಟನ್ ಕೈಗಳನ್ನು ಚೆನ್ನಾಗಿ ತೊಳೆದುಕೊಂಡು ಹೊಸ ಏಪ್ರನ್ ಧರಿಸುತ್ತಿದ್ದ. ವೈದ್ಯ ವಿದ್ಯಾರ್ಥಿಯನ್ನು ಕರೆದು ತುಂಡರಿಸಬೇಕಾದ ಕಾಲನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಹೇಳುತ್ತಿದ್ದ. ಉಳಿದಿಬ್ಬರು ವಿದ್ಯಾರ್ಥಿಗಳು ರೋಗಿಯು ಅಲುಗದಂತೆ ಬಿಗಿಯಾಗಿ ಹಿಡಿದು ಕೊಳ್ಳುತ್ತಿದ್ದರು. ರೋಗಿಯ ಮತ್ತೊಂದು ಕಾಲನ್ನು ಮೇಜಿಗೆ ಕಟ್ಟಿ ಬಾಯಿಗೆ ಕರವಸಕಟ್ಟಿದ ಬೆಣೆಯನ್ನಿರಿಸುತ್ತಿದ್ದ. ಅಲ್ಪಸ್ವಲ್ಪ ಮಿಸುಕಲೂ ರೋಗಿಗೆ ಅವಕಾಶ ನೀಡುತ್ತಿರಲಿಲ್ಲ. ವೈದ್ಯ ವಿದ್ಯಾರ್ಥಿಗಳೆಡೆಗೆ ನೋಡುತ್ತ ‘ಟೈಮ್ ಮಿ ಜೆಂಟ್ಲ್ಮನ್ ಟೈಮ್ ಮಿ’ (ಲೆಕ್ಕಹಾಕಿ ಮಹನೀಯರೆ! ಸಮಯವನ್ನು ಲೆಕ್ಕ ಹಾಕಿ) ಎಂದು ಕೂಗುತ್ತಿದ್ದ. ಮರುಕ್ಷಣದಲ್ಲಿ ಮಿಂಚಿನ ವೇಗದಲ್ಲಿ ಶಸವು ರೋಗಿಯ ಕಾಲಿನ ಮೇಲೆರಗುತ್ತಿತ್ತು, ಮೂಳೆಯನ್ನು ಕತ್ತರಿಸುವ ಶಬ್ದ ಕೇಳಿಬರುತ್ತಿತ್ತು.
ಎರಡೂವರೆ ನಿಮಿಷಗಳಲ್ಲಿ ತುಂಡಾದ ಕಾಲು ಧೊಪ್ಪೆಂದು ಮರದಹೊಟ್ಟಿನ ಬಕೆಟ್ಟಿನಲ್ಲಿ ಬೀಳುತ್ತಿತ್ತು. ಅನೇಕ ಸಲ ಈ ತುಂಡರಿಕೆಯು ೩೦ ಸೆಕೆಂಡು ಗಳಲ್ಲಿ ಮುಗಿಯುತ್ತಿತ್ತು! ತೊಡೆಮೂಳೆಯನ್ನು ಕತ್ತರಿಸುವಾಗ ಲಿಸ್ಟನ್ ವಿಶಿಷ್ಟ ವಿಧಾನವನ್ನು ಬಳಸುತ್ತಿದ್ದ. ತೊಡೆಯ ಮೇಲಿನ ಮಾಂಸಲ ಭಾಗ ವನ್ನು ಉಳಿಸಿಕೊಂಡು, ಮೂಳೆಯನ್ನು ಕತ್ತರಿಸಿ ಆದಮೇಲೆ, ಆ ಮೊಂಡು ಮೂಳೆಯನ್ನು ಈ ಮಾಂಸಲ ಪದರದಿಂದ ಮುಚ್ಚಿ ಹೊಲಿಯುತ್ತಿದ್ದ. ಈ ತಂತ್ರ ಪರಿಣಾಮಕಾರಿಯಾಗಿ ಗಾಯವನ್ನು ಗುಣಪಡಿಸುತ್ತಿತ್ತು. ಶಸ್ತ್ರವನ್ನು ಹಲ್ಲುಗಳಲ್ಲಿ ಕಚ್ಚಿ ಹಿಡಿದು, ಎರಡೂ ಕೈಗಳಿಂದ ತೊಡೆ ವಿಚ್ಛೇದನ ಮಾಡುತ್ತಿದ್ದ ಲಿಸ್ಟನ್ನನ್ನು ನೋಡಲು ಎಂಟೆದೆ ಬೇಕಾಗುತ್ತಿತ್ತು.
ಅರಿವಳಿಕೆಯಿಲ್ಲದ ದಿನಗಳಲ್ಲಿ ಈ ಶಸ್ತ್ರಕ್ರಿಯೆ ಎಷ್ಟು ಯಾತನಾಮಯವಾಗಿದ್ದಿರಬಹುದು, ಊಹಿಸಿಕೊಳ್ಳಿ. ಆದರೆ ರೋಗಿಗಳಿಗೆ ನೋವಿನ ಅನುಭವವೇ ಆಗಬಾರದು ಎಂಬಂತೆ ಲಿಸ್ಟನ್, ಅರ್ಧ ನಿಮಿಷದಲ್ಲಿ ಅಂಗವನ್ನು ತುಂಡರಿಸುತ್ತಿದ್ದ. ಈ ವೇಗವನ್ನು ಸರಿಗಟ್ಟಲಾರದ ಸಮಕಾಲೀನ ಸಹೋದ್ಯೋಗಿ ಗಳು, ಇವನ ಬಗ್ಗೆ ಅನೇಕ ಕಥೆಗಳನ್ನು ಕಟ್ಟಿದರು. ಅವು ವಾಸ್ತವದಲ್ಲಿ ನಡೆಯಿತೇ ಅಥವಾ ಬೇಕೆಂದೇ ಹುಟ್ಟುಹಾಕಿದಂಥವೇ ಎನ್ನುವ ಬಗ್ಗೆ ಭಿನ್ನಾಭಿ ಪ್ರಾಯಗಳಿವೆ. ಅದೇನೇ ಇರಲಿ, ರಾಬರ್ಟ್ ಲಿಸ್ಟನ್ ತನ್ನ ಜೀವಿತಕಾಲದಲ್ಲೇ ದಂತಕಥೆಯಾದ ಎನ್ನುವುದಂತೂ ಸತ್ಯ. ರಾಬರ್ಟ್ ಲಿಸ್ಟನ್ ೧೮೩೫- ೧೮೪೦ರವರೆಗೆ ತೊಡೆಯನ್ನು ತುಂಡರಿಸುವ ೬೬ ಶಸಚಿಕಿತ್ಸೆಗಳನ್ನು ನಡೆಸಿದ. ಅವುಗಳಲ್ಲಿ ೧೦ ಜನರಷ್ಟೇ ಗ್ಯಾಂಗ್ರಿನ್ ಕಾರಣಕ್ಕೆ ಮರಣಿಸಿದ್ದರು. ಅಂದರೆ ಸಾವಿನ ಪ್ರಮಾಣ ಕೇವಲ ಶೇ.೬ರಷ್ಟಿತ್ತು.
ಹತ್ತಿರದ ಸೈಂಟ್ ಬಾರ್ಥಲೋಮಿಯೋ ಆಸ್ಪತ್ರೆಯಲ್ಲಿ ಶಸ್ತ್ರಕ್ರಿಯೆಗೆ ಒಳಗಾದ ಪ್ರತಿ ನಾಲ್ವರಲ್ಲಿ ಒಬ್ಬ ಖಚಿತವಾಗಿ ಸಾಯುತ್ತಿದ್ದರು! ಹಾಗಾಗಿ ರಾಬರ್ಟ್ ಲಿಸ್ಟನ್ ಮೇಲಿನ ಆರೋಪಗಳಲ್ಲಿ ಅಂಥ ಹುರುಳಿಲ್ಲ ಎನ್ನಬಹುದು. ರಾಬರ್ಟ್ ಲಿಸ್ಟನ್ ಕೈಗೊಂಡ ಸುಧಾರಣೆಗಳು ಗಮನೀಯವಾದವು. ೨೧ ಡಿಸೆಂಬರ್, ೧೮೪೬. ಚಂದ್ರರಂಗವು ಜನರಿಂದ ಕಿಕ್ಕಿರಿದಿತ್ತು. -ಡ್ರಿಕ್ ಚರ್ಚಿಲ್ ಎಂಬಾತನ ತೊಡೆಯನ್ನು ತುಂಡರಿಸಬೇಕಾಗಿತ್ತು. ಅವನ ಬಾಯಲ್ಲಿ ಕರವಸ್ತ್ರ ಸುತ್ತಿದ್ದ ಮರದ ಬೆಣೆಯನ್ನು ಇಡಲಿಲ್ಲ. ಬದಲಿಗೆ ಒಂದು ರಬ್ಬರ್ ಕೊಳವೆಯನ್ನು ಇಟ್ಟರು. ಉಸಿರನ್ನು ಒಳಗೆಳೆದುಕೊಳ್ಳುವಂತೆ ಸೂಚಿಸಿ ದರು.
ಲಿಸ್ಟನ್ ೩೦ ಸೆಕೆಂಡುಗಳಲ್ಲಿ ತೊಡೆಯನ್ನು ತುಂಡರಿಸಿದ. ಕೆಲ ನಿಮಿಷಗಳ ಹೊತ್ತಿಗೆ ಚರ್ಚಿಲ್ ‘ಎಷ್ಟು ಹೊತ್ತಿಗೆ ಶಸಚಿಕಿತ್ಸೆ ಆರಂಭಿಸುತ್ತೀರಿ’ ಎಂದು ಕೇಳಿದ. ಆಗ ವೈದ್ಯರು ಕೆಳಗೆ ಹೊಟ್ಟು ತುಂಬಿದ್ದ ಬಕೆಟ್ ನೋಡುವಂತೆ ಹೇಳಿದರು. ಅಲ್ಲಿ ಅವನ ಕಾಲು ತುಂಡರಿಸಿ ಬಿದ್ದಿತ್ತು. ಅಮೆರಿಕದ ಬಾಸ್ಟನ್ನಿ ನಲ್ಲಿ ವಿಲಿಯಂ ಮಾರ್ಟನ್, ಈಥರ್ ಬಳಸಿ ನೋವಿಲ್ಲದೆ ಹಲ್ಲನ್ನು ತೆಗೆದಿದ್ದ. ಅದೇ ಪ್ರಯೋಗವನ್ನು ಲಿಸ್ಟನ್ ಲಂಡನ್ನಿನಲ್ಲಿ ಪುನರಾವರ್ತಿಸಿದ. ಚರ್ಚಿಲ್ಲನಿಗೆ ಈಥರ್ ನೀಡಿ ಸ್ವಲ್ಪವೂ ನೋವಿಲ್ಲದೆ ಕಾಲನ್ನು ಛೇದಿಸಿದ್ದ. ಈ ಪವಾಡವು ಮೊದಲ ಬಾರಿಗೆ ಲಂಡನ್ನಿನಲ್ಲಿ ನಡೆದಿತ್ತು.
ಲಂಡನ್ನಿನ ಜನಸಾಮಾನ್ಯರ ದೃಷ್ಟಿಯಲ್ಲಿ ಲಿಸ್ಟನ್ ‘ಸಂತ’ ಪದವಿಗೇರಿದ. ಈತನ ಇಬ್ಬರು ಶಿಷ್ಯರು ಪ್ರಖ್ಯಾತರಾದರು. ಮೊದಲನೆಯವನು ಜೇಮ್ಸ್
ಸಿಂಪ್ಸನ್- ಕ್ಲೋರೋ-ರಂ ಅರಿವಳಿಕೆಯನ್ನು ಬಳಸಿ ಪ್ರಸವವನ್ನು ನೋವುರಹಿತವಾಗಿಸಿದ. ಎರಡನೆಯವನಾದ ಜೋಸೆಫ್ ಲಿಸ್ಟರ್ ಪೂತಿನಾಶಕ ದ್ರಾವಣವನ್ನು (ಆಂಟಿಸೆಪ್ಟಿಕ್) ರೂಪಿಸಿ, ಶಸವೈದ್ಯಕೀಯದಲ್ಲಿ ಹೊಸಯುಗವನ್ನೇ ಆರಂಭಿಸಿದ.
ರಾಬರ್ಟ್ ಲಿಸ್ಟನ್ ತನ್ನ ಕಾಲಮಾನಕ್ಕಿಂತ ಬಹಳ ಮುಂದಿದ್ದ. ಇವನು ಸ್ವಚ್ಛತೆಗೆ ಆದ್ಯತೆ ನೀಡಿದ. ಶಸ್ತ್ರಚಿಕಿತ್ಸೆ ನಡೆಸಬೇಕಾದ ಭಾಗವನ್ನು ಕ್ಷೌರ ಮಾಡಿ
ರೋಮರಹಿತವನ್ನಾಗಿಸುತ್ತಿದ್ದ. ಇವನು ಪಾರದರ್ಶಕ ಅಂಟುಪಟ್ಟಿಯನ್ನು (ಟ್ರಾನ್ಸ್ಪರೆಂಟ್ ಪ್ಲಾಸ್ಟರ್) ರೂಪಿಸಿದ. ‘ಬುಲ್ಡಾಗ್ ಫಾರ್ಸೆಪ್ಸ್’ ಎಂಬ ಇಕ್ಕಳವನ್ನು ರೂಪಿಸಿ ರಕ್ತಸ್ರಾವವನ್ನು ಪರಿಣಾಮಕಾರಿಯಾಗಿ ತಡೆಗಟ್ಟಿದ. ಕಾಲಿನ ಮೂಳೆ ಮುರಿತವನ್ನು ಗುಣಪಡಿಸಲು ದಬ್ಬೆಗಳನ್ನು (ಸ್ಪ್ಲಿಂಟ್ಸ್) ರೂಪಿಸಿದ. ಧೈರ್ಯ, ಸಾಹಸ, ಆತ್ಮವಿಶ್ವಾಸ ಹಾಗೂ ನೇರ ನಡವಳಿಕೆಗೆ ಹೆಸರುವಾಸಿಯಾಗಿದ್ದ ರಾಬರ್ಟ್ ಲಿಸ್ಟನ್ ೧೯ನೆಯ ಶತಮಾನದ ಅಪರೂಪದ ವೈದ್ಯನಾಗಿದ್ದ.