Friday, 20th September 2024

ತಾಳ, ಲಯಗಳ ಲೋಕದ ರೂವಾರಿಗಳನ್ನು ಪರಿಚಯಿಸುತ್ತಿರುವ ರೂವರಿ

ಸಂಡೆ ಸಮಯ
ಸೌರಭ ರಾವ್, ಕವಯತ್ರಿ ಬರಹಗಾರ್ತಿ

ಆರ್ಕ್ಟಿಕ್ ಮಂಕೀಸ್ ಹಾಡುಗಳನ್ನು ಕೇಳಿಲ್ಲವಾ? ಹೊಸ ಕೋಲ್ಡ್ ಪ್ಲೇ ಹಾಡು ಕೇಳಿದೆಯಾ? ಕಳೆದ ದಶಕದಲ್ಲಿ ಐರನ್ ಮೇಡನ್
ಬೆಂಗಳೂರಿನಲ್ಲಿ ಕೊಟ್ಟ ಕಾನ್ಸರ್ಟ್ ಎಷ್ಟು ಅದ್ಭುತವಾಗಿತ್ತು ಅಲ್ಲವಾ? ಎನ್ನುವ ಪ್ರಶ್ನೆೆಗಳು ಸಲೀಸಾಗಿ ಕೇಳಸಿಗುವಷ್ಟು
ಇತ್ತೀಚೆಗೆ ಯಾರು ನುಡಿಸಿದ ಧರ್ಮವತಿ ರಾಗ ಕೇಳಿದೆ? ಫೋರ್ಟ್ ಹೈ ಸ್ಕೂಲ್ ಆವರಣದಲ್ಲಿ ಎರಡು ವರ್ಷ ಹಿಂದೆ ಯೇಸುದಾಸ್ ಕೊಟ್ಟ ಕಚೇರಿಯಲ್ಲಿ ಯಾವ ರಾಗದಲ್ಲಿ ಮಂದ್ರಷಡ್ಜಕ್ಕೆೆ ಇಳಿದಿದ್ದರು ನೆನಪಿದೆಯಾ? ಅಥವಾ ನಮ್ಮ ಮಿಶ್ರಛಾಪು ತಾಳ ಪಾಶ್ಚಾತ್ಯ ಸಂಗೀತದ ಯಾವ ಅಳತೆಗೆ ಸಮ? ಎಂಬ ಪ್ರಶ್ನೆೆಗಳು ಕೇಳಿಸುವುದಿಲ್ಲ.

ಇದಕ್ಕೆೆ ಕೆಲವು ಕಾರಣಗಳು ಶತಮಾನಗಳಷ್ಟು ಹಿಂದಕ್ಕೆೆ ಹೋಗಬಹುದು. ಆದರೆ ಪ್ರಪಂಚದ ಎಲ್ಲೆಡೆಯಿಂದ ಸಂಗೀತಗಾರರು ಸಹಯೋಗದಲ್ಲಿ ಎಲ್ಲ ಸೀಮೆಗಳನ್ನು ದಾಟಿ ಅದ್ಭುತ ಪ್ರಯೋಗಗಳನ್ನು ನಡೆಸುತ್ತಿರುವ ಇಂದಿನ ಕಾಲ ದಲ್ಲೂ ಶಾಸ್ತ್ರೀಯ ಸಂಗೀತದ ಬಗ್ಗೆೆ ಒಂದು ರೀತಿಯ ಅನಾಸಕ್ತಿ ಬೆಳೆಸಿಕೊಂಡವರು ಹೇರಳವಾಗಿ ಸಿಗುತ್ತಾರೆ. ಒಳ್ಳೆೆಯ ಬದಲಾವಣೆಗಳಿಗೆ ಕುರುಡಾಗಿ
ಕೇವಲ ಹುಳುಕುಗಳನ್ನೇ ಕೆದಕುತ್ತಾ ಸಮಯ ಕಳೆಯುವ ಸ್ಥಿತಿ. ಮುಕ್ತ ಮನಸ್ಸಿನಿಂದ ಒಂದು ಸಂಗೀತ ಶೈಲಿಯನ್ನು ಯಾವ ನಕಾರಾತ್ಮಕತೆಯೂ ತಾಗಲು ಬಿಡದೇ ಕೇವಲ ಸಂಗೀತದ ದೈವಿಕ ಶಕ್ತಿಯಲ್ಲಿ ಮುಳುಗಲು ಕನಿಷ್ಠ ಪ್ರಯತ್ನ ಮಾಡಲೂ ಉದಾಸೀನತೆ ತೋರುವ ವಿಚಿತ್ರ ಮನಸ್ಥಿತಿ ಅದು. ಎಲ್ಲ ಸಂಗೀತ ವ್ಯವಸ್ಥೆೆಗಳೂ ಅವುಗಳದ್ದೇ ವೈಶಿಷ್ಟ್ಯ, ಶಕ್ತಿ ಹೊಂದಿರುತ್ತವೆ,
ಯಾವುದೂ ಹೆಚ್ಚಲ್ಲ, ಯಾವುದೂ ಕಡಿಮೆಯಲ್ಲ. ಅರ್ಥವಾಗುವುದಿಲ್ಲ ಎನ್ನುವುದು ಒಂದು ಕಾರಣ ವಿರಬಹುದು, ಆದರೆ ಸಂಗೀತದ ಸೌಂದರ್ಯಕ್ಕೆೆ ತಲೆದೂಗಲು, ರಸಾಸ್ವಾದನೆಗೆ ಜ್ಞಾನದ ಮಿತಿಯಿದ್ದರೂ ತೊಂದರೆಯಿಲ್ಲವಲ್ಲ.

ಪಾಶ್ಚಾತ್ಯರಲ್ಲೂ ಕೇವಲ ಪಾಪ್, ರಾಕ್,ಮೆಟಲ್ ಮಾತ್ರವಲ್ಲ, ಶಾಸ್ತ್ರೀಯ ಸಂಗೀತವಿದೆ. ಮೋಟ್ಸಾರ್ಟ್, ಬೇಥೋವೆನ್, ಅಥವಾ ಬಾಖ್ ಸಂಯೋಜನೆಗಳನ್ನು ಕೇಳಿದರೆ ಸಂಗೀತದ ಜ್ಞಾನ ವಿಲ್ಲದಿದ್ದರೂ ಆನಂದ ಮನಸ್ಸನ್ನು ಆವರಿಸು ವುದಿಲ್ಲವೇ?
ಇರಲಿ, ಆ ಚರ್ಚೆ ಮತ್ತೊೊಂದು ದಿನಕ್ಕೆೆ. ಇಷ್ಟಕ್ಕೇ ಈಗಾಗಲೇ ಕೆಲವರ ಬುದ್ಧಿಯ ಬಲ ಅಥವಾ ಎಡ ಭಾಗದ ಅಲಾರ್ಮ್ ಹೊಡೆದು ಕೊಳ್ಳುತ್ತಿರಬಹುದು. ಪ್ರಪಂಚದ ಯಾವುದೇ ಮೂಲೆಯಲ್ಲಿ ಹುಟ್ಟಿದರೂ ಸಂಗೀತದಲ್ಲಿರುವುದು ಸಪ್ತಸ್ವರಗಳೇ.

ಇಷ್ಟು ಸರಳವಾದ  ವಾಸ್ತವದ ಆಧಾರದ ಮೇಲೆ ಯಾವ ಸಂಗೀತ ಪದ್ಧತಿಯ ಬಗ್ಗೆೆ ತಿಳಿದುಕೊಳ್ಳಲು ಹೊರಟರೂ ಅಪಾರ ಆನಂದ, ಸೌಂದರ್ಯ ತುಂಬಿರುವ ಜಗತ್ತುಗಳು ತೆರೆದು ಕೊಳ್ಳುತ್ತವೆ. ಯಾವ ಸಂಕುಚಿತ ಮನಸ್ಥಿತಿಗಳ ಗೊಡವೆಯೂ ಇಲ್ಲದೇ ಕೇವಲ ಕಲಿಯುವ ಕುತೂಹಲ ಮತ್ತು ತಾಳವಾದ್ಯಗಳ ಗೀಳು ಬೆಳೆಸಿಕೊಂಡು ಪ್ರಪಂಚ ಸುತ್ತುತ್ತಿದ್ದಾನೆ ರೂವರಿ ಗ್ಲಾಶೀನ್.
ಐರ್ಲೆಂಡಿನಲ್ಲಿ ಹುಟ್ಟಿ ಬೆಳೆದು ಈಗ ಲಂಡನ್ನಿನಲ್ಲಿ ನೆಲೆಸಿರುವ ರೂವರಿ, ನಾಲ್ಕನೇ ವಯಸ್ಸಿಗೇ ಬೌರಾನ್ ಎಂಬ ತಾಳವಾದ್ಯ ನುಡಿಸುವ ಗೀಳು ಬೆಳೆಸಿಕೊಂಡ.

ಸಂಗೀತದಲ್ಲಿ ಮುಳುಗಿ ಮತ್ತಷ್ಟು ತಾಳವಾದ್ಯಗಳ ಬಗ್ಗೆೆ ಆಸಕ್ತಿ ಬೆಳೆಸಿಕೊಳ್ಳಲು ಬೌರಾನ್ ಸ್ಫೂರ್ತಿಯಾಯಿತು. ನಾದದ ಹೊಸ ಲೋಕಗಳ, ಮತ್ತು ಅದರಿಂದ ಮನಸ್ಸಿನಲ್ಲಿ ಹೊಮ್ಮುವ ಹೊಸ ಬಣ್ಣಗಳಲ್ಲಿ ವಿಹರಿಸುವ ರೂವರಿಯ ಮನಸ್ಸು ಇಂದಿಗೂ ಮಕ್ಕಳ ಕುತೂಹಲವನ್ನು ಹಾಗೇ ಉಳಿಸಿಕೊಂಡಿದೆ. ತಾಳವಾದ್ಯಗಳ ಭಾಷೆ ಒಂದು ಕಡೆಯಾದರೆ, ಕ್ಯಾಮೆರಾದ ಮೂಲಕ ಕಥೆ ಹೇಳುವ ಅಭಿರುಚಿ, ಆಸಕ್ತಿಯೂ ಜೊತೆಯಾಯಿತು. ಅವನ ‘ಹಿಡನ್ ಡ್ರಮ್ಮರ್ಸ್ ಆಫ್ ಇರಾನ್’ ಮತ್ತು ‘ಹಿಡನ್ ಡ್ರಮ್ಮರ್ಸ್ ಆಫ್ ಇಂಡಿಯಾ’ ಎಂಬ ಸಾಕ್ಷ್ಯಚಿತ್ರಗಳನ್ನು ನೋಡಿದರೆ ನಿಮಗೂ ಕಲಿಯುವ ಹುಮ್ಮಸ್ಸು ಸೋಂಕದೇ ಬಿಡುವುದಿಲ್ಲ.

ಖಂಜಿರ ಸಾಧನೆಯಲ್ಲಿ ಚಿಕ್ಕವಯಸ್ಸಿನಿಂದ ತೊಡಗಿರುವ, ಯಾವಾಗ ಎಲ್ಲೇ ಸಿಕ್ಕರೂ ಚಂದವಾಗಿ, ಮುಕ್ತವಾಗಿ ಮಾತನಾಡುವ ಸುನಾದ ಆನೂರು ‘ಹಿಡನ್ ಡ್ರಮ್ಮರ್ಸ್ ಆಫ್ ಇಂಡಿಯಾ’ದ ಮೊದಲ ಭಾಗದಲ್ಲಿ ಖಂಜಿರದ ಪ್ರತಿನಿಧಿಯಾಗಿ ಕಾಣಿಸಿಕೊಂಡಾಗ ಈ ಸರಣಿಯ ಬಗ್ಗೆೆ ಮತ್ತಷ್ಟು ಕುತೂಹಲ ಬೆಳೆಯಿತು. ಪ್ರಪಂಚದ ಬೇರೆಬೇರೆ ಭಾಗಗಳ ತಾಳವಾದ್ಯಗಳ ವೈಶಿಷ್ಟ್ಯವನ್ನು ಮೊದಲು ಸಂಶೋಧಿಸಿ, ಅವುಗಳ ಸುತ್ತ ಒಂದು ಸುಂದರ ಕಥೆ ನೇಯ್ದು ಜನರಿಗೆ ತನ್ನ ಯೂಟ್ಯೂಬ್ ಮೂಲಕ ತಲುಪಿಸುತ್ತಿರುವ ಅವನ ಉತ್ಸುಕತೆ ಅವನ ಮಾತುಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

ರೂವರಿ ಹೇಳುತ್ತಾನೆ, ಇರಾನಿನ ತೋಮ್ಬಾಕ್ ತಾಳವಾದ್ಯದ ಬಗ್ಗೆೆ ಅಪಾರ ಅಚ್ಚರಿ ನನಗೆ. ಅದನ್ನು ಕಲಿಯಬೇಕೆಂಬ ಆಸೆಯಿದ್ದರೂ, ಸಂಗೀತದ ಬಹುದೊಡ್ಡ ಸಂಸ್ಕೃತಿಯಿರುವ ಲಂಡನ್ನಿನಲ್ಲೂ ಅವಕಾಶವಿರಲಿಲ್ಲ. ಆದದ್ದಾಗಲಿ, ಆ ವಾದ್ಯ ಕಲಿಯಲು ಇರಾನಿಗೇ ಹೋಗೋಣ ಎಂದು ನನ್ನ ಗೆಳೆಯನೊಬ್ಬನ ಜೊತೆ ಹೊರಟೇಬಿಟ್ಟೆೆ. ಅನೇಕ ರಾಜಕೀಯ ಗೊಂದಲ
ಗಳಿಂದ ಅದು ಸುಲಭದ ಮಾತಾಗಿರಲಿಲ್ಲ, ಆದರೂ ಏನಾಗುತ್ತದೆ ನೋಡೋಣ ಎಂದು ಹೊರಟೆವು. ಅಲ್ಲಿ ಸಾಕ್ಷ್ಯಚಿತ್ರ ಮಾಡುವ ಮೂಲಕ ಸಂಗೀತದ ಕಥೆಗಳನ್ನು ಬೇರೆಬೇರೆ ದೇಶಗಳಿಂದ ಹೇಳಬೇಕು ಎಂದು ನಿರ್ಧಾರ ಮಾಡಿದೆ. ನಂತರ ನನ್ನನ್ನು ಕಾಡಿದ್ದು
ಖಂಜಿರ. ಇದಕ್ಕಾಗಿ ಭಾರತಕ್ಕೆೆ ಬಂದೆ.

ಖಂಜಿರದ ಇತಿಹಾಸ, ಅದನ್ನು ನುಡಿಸುವ ಶೈಲಿ ಅರ್ಥ ಮಾಡಿಕೊಳ್ಳಲು ಬಂದ ನನಗೆ ಒಂದು ಹೊಸ ಜಗತ್ತೇ ತೆರೆದುಕೊಂಡಿತು. ತಾಳ, ಲಯ, ಮಿಡಿತ ಇವೆಲ್ಲವೂ ಇಡೀ ವಿಶ್ವವನ್ನೇ ಆವರಿಸಿಕೊಂಡಿವೆ. ನಮ್ಮ ಧ್ವನಿಯ ಮೂಲಕ ಹೊರಡುವ ಗಟ್ಟಿಯಾದ ಮತ್ತು ಕೋಮಲವಾದ ನಾದ, ಶಬ್ದಗಳೇ ಭಾಷೆ ಎನಿಸಿಕೊಳ್ಳುತ್ತವೆ. ನನಗೆ ತಾಳವಾದ್ಯಗಳು ಕೇವಲ ಮಾನಸಿಕ, ಭಾವನಾತ್ಮಕ ನಂಟಾಗಿ ಮಾತ್ರವಲ್ಲ, ಅವುಗಳನ್ನು ನುಡಿಸುವಾಗ ನಾವು ದೈಹಿಕವಾಗಿ ತೊಡಗಿಸಿ ಕೊಳ್ಳುವ ರೀತಿಯೂ ಬಹಳ ಇಷ್ಟ. ಒಂದು ಲಯ ವಿನ್ಯಾಸವನ್ನು ಹೊಸದಾಗಿ ಕಲಿತಾಗ ಸಿಗುವ ಆನಂದ ಅನನ್ಯವಾದದ್ದು.

ಇರಾನ್ ಮತ್ತು ಭಾರತದ ತಾಳವಾದ್ಯಗಳೇ ಅಲ್ಲದೇ ಇಟಲಿಯ ಟ್ಯಾಮ್ಬುರೆಲ್ಲೊ ಮತ್ತು ಟಮ್ಮೋರ ಕಲಿಯುತ್ತಾ ದಕ್ಷಿಣ
ಇಟಲಿಯಲ್ಲಿ 2016ರಲ್ಲಿ ಸ್ವಲ್ಪ ಸಮಯ ಕಳೆದಿದ್ದೆ. ಆ ವಾದ್ಯಗಳು ಖಂಜಿರಕ್ಕಿಿಂತಲೂ ಏಳೆಂಟು ಪಟ್ಟು ದೊಡ್ಡವು! ಜಪಾನೀಯರ ಟೇಯ್ಕೋ ವಾದ್ಯ ನುಡಿಸುವುದು ಹೇಗೆ ಎಂದು ಲಂಡನ್ನಿನಲ್ಲಿ ಕಲಿತಿದ್ದೇನೆ.

ಮುಂದೊಂದು ದಿನ ಅದರ ಪ್ರಾಚೀನ ಬೇರುಗಳನ್ನು ಹುಡುಕಿಕೊಂಡು ಜಪಾನಿಗೆ ಹೋಗಿ ಅಧ್ಯಯಿಸಬೇಕು, ಎಂದು ರೂವರಿ ಆಗಲೇ ಮತ್ತೊೊಂದು ಅನ್ವೇಷಣೆಯ ಕನಸು ಹಂಚಿಕೊಳ್ಳುತ್ತಾನೆ. ಹಿಡನ್ ಡ್ರಮ್ಮರ್ಸ್ ಸರಣಿಯ ಬಗ್ಗೆೆ ಮಾತು ಮುಂದುವರಿಸುತ್ತಾ, ನನ್ನ ಪಯಣದ ಪ್ರತಿ ಹೆಜ್ಜೆೆಯೂ ನನಗೆ ಹಬ್ಬದ ಹಾಗೆ: ಮೊದಲನೆಯದಾಗಿ ನಾನು ಅರಸಿ ಹೊರಡುವ ವಾದ್ಯ, ನಂತರ ಅದರ ಸುತ್ತ ಹೆಣೆದುಕೊಂಡಿರುವ ಪ್ರಾಚೀನ ಕಥೆಗಳು ಮತ್ತು ಅದು ಒಂದು ದೇಶದ ಸಂಸ್ಕೃತಿಯಲ್ಲಿ, ಒಂದು ಸಂಗೀತ ಶೈಲಿಯಲ್ಲಿ ಬೆಳೆದುಬಂದಿರುವ ರೀತಿ, ನಂತರ ನಾನು ಭೇಟಿಯಾಗುವ ಸಂಗೀತ ಕಲಾವಿದರು – ಅಷ್ಟು ಸಾಧನೆ
ಮಾಡಿದ್ದರೂ ನಮ್ರತೆ ಮೆರೆವ ಅವರ ಜೊತೆ ಮಾತುಕತೆ, ಅವರ ಸಂಗೀತ ಸಾಧನೆಯ ರೀತಿಗಳು ಇವೆಲ್ಲವನ್ನೂ
ಕಲಿಯುವುದು, ಅದನ್ನು ಕಥೆಯಾಗಿ ನಿರೂಪಿಸುವುದು ಒಂದು ದೊಡ್ಡ ಸಂಭ್ರಮ.

ನನ್ನ ಮನೆಗೆ ಮರಳಿ ಒಂದು ಸಾಕ್ಷ ್ಚತ್ರವನ್ನು ಪೂರ್ತಿ ಮಾಡುವಾಗ ಅದಕ್ಕೆೆ ಬೇಕಾದ ಶಿಸ್ತು ಇವೆಲ್ಲವೂ ನನ್ನ ಜೀವನವನ್ನು ಮತ್ತಷ್ಟು ರೋಚಕ ಗೊಳಿಸಿವೆ. ಕಲಾವಿದರಿಂದ ಕೇವಲ ಸಂಗೀತದ ಬಗ್ಗೆೆ ಮಾತ್ರವಲ್ಲ, ಸಂಗೀತದ ಮೂಲಕ ಅವರು ಕಂಡುಕೊಂಡಿರುವ ಜೀವನಪ್ರೀತಿ, ಅಧ್ಯಾತ್ಮಿಕ ಬೆಳಕು, ಮತ್ತು ಅವೆಲ್ಲವನ್ನೂ ಸ್ವಚ್ಛಂದವಾಗಿ ಹಂಚಿಕೊಳ್ಳುವ ಅವರ ಮುಕ್ತ ಮನಸ್ಥಿತಿ ಇವೆಲ್ಲಾ ನನಗೆ ಸ್ಫೂರ್ತಿ ಎನ್ನುತ್ತಾನೆ.

ಇರಾನ್ ಸರಣಿಗೆ ಹಣದ ಸಹಾಯ ಕಿಕ್ ಸ್ಟಾರ್ಟರ್ ಮೂಲಕ ದೊರೆತರೂ, ಭಾರತದ ಸರಣಿಗೆ ತನ್ನ ಹಣವನ್ನೇ ಬಂಡವಾಳ ಹೂಡಿ ಎಲ್ಲ ಹೊಣೆಯನ್ನೂ ರೂವರಿ ತಾನೇ ಹೊತ್ತುಕೊಂಡು ಕೆಲಸ ಮುಗಿಸಿದ್ದಾನೆ. ಸರಣಿಯ ಮೂರನೇ ಭಾಗದಲ್ಲಿ ಚೆನ್ನೈನ ಕೆಲವು ರಸ್ತೆೆಗಳಲ್ಲಿ ಅಡ್ಡಾಡುತ್ತಾ ಖಂಜಿರ ತೋರಿಸಿ ನಮ್ಮ ಜನರನ್ನು ಇದು ಯಾವ ವಾದ್ಯ ಗೊತ್ತಾ ಎಂದು ಕೇಳಿದಾಗ ಅವರು ಗುರುತಿಸಲು ಪರದಾಡುತ್ತಾರೆ.

ಒಬ್ಬ ಐರಿಷ್ ಮನುಷ್ಯ ತನ್ನ ಹಣ, ತನ್ನ ಸಮಯ ಮೀಸಲಿಟ್ಟು ನಮ್ಮ ವಾದ್ಯಗಳ ಬಗ್ಗೆೆ ಅಧ್ಯಯನ ನಡೆಸಲು ಆಸ್ಥೆೆ ತೋರಿಸುವಾಗ, ನಮ್ಮಲ್ಲಿ ಕೆಲವರು ಕಲಿಯುವ ಕುತೂಹಲವನ್ನೂ ತೋರದ ಮನಸ್ಥಿತಿಗೆ ಕನ್ನಡಿ ಹಿಡಿದಂತಾಗುತ್ತದೆ. ಆದರೆ ಪರಿಸ್ಥಿಿತಿ ಅಷ್ಟೂ ಹದಗೆಟ್ಟಿಲ್ಲ ಎಂದು ರೂವರಿ ಸರಣಿಯ ಮಿಕ್ಕ ಭಾಗಗಳಲ್ಲಿ ತೋರಿಸುತ್ತಾನೆ. ಆದಷ್ಟೂ ಜನರಿಗೆ ಖಂಜಿರದ ವೈಶಿಷ್ಟ್ಯವನ್ನು ತಲುಪಿಸಬೇಕು ಎಂದು ಹೊಸ ಹೊಸ ಪ್ರಯೋಗ ಗಳನ್ನು ಮಾಡುತ್ತಿರುವ ಯುವ ಪ್ರತಿಭೆಗಳನ್ನು ಆತ
ಸರಣಿಗಾಗಿ ಸಂದರ್ಶಿಸಿದ್ದಾನೆ.

ಸರಣಿಯಲ್ಲಿ ಖಂಜಿರ ನುಡಿಸಿರುವ ಕನ್ನಡದ ಯುವ ಪ್ರತಿಭೆ ಸುನಾದ ಆನೂರು, ಭಾರತದ ಸಂಗೀತಗಾರ ರಲ್ಲದೇ ಬೇರೆಬೇರೆ ದೇಶಗಳ ಕಲಾವಿದರ ಜೊತೆ ಒಡನಾಟ ಬೆಳೆದಾಗ, ಅವರ ಸಂಗೀತ ಪದ್ಧತಿ, ಶೈಲಿಗಳ ಬಗ್ಗೆೆ ಕಲಿಯುವಾಗ ಸಂಗೀತಕ್ಕೆೆ ನಮ್ಮೆಲ್ಲರನ್ನೂ  ಬೆಸೆಯುವ ಶಕ್ತಿ ಇರುವುದರ ಬಗ್ಗೆೆ ಮತ್ತಷ್ಟು ಸೋಜಿಗ, ಗೌರವ ಬೆಳೆಯುತ್ತದೆ. ಕಡೆಗೆ ಎಲ್ಲದಕ್ಕೂ ಅಡಿಪಾಯ
ಅವೇ ಸಪ್ತಸ್ವರಗಳೇ. ಖಂಜಿರ ಒಂದು ಅದ್ಭುತವಾದ ವಾದ್ಯ ಎಂದು ಆದಷ್ಟೂ ಜನರಿಗೆ ತೋರಿಸಿಕೊಡುವ ಆಸೆ ಮಾತ್ರವಲ್ಲ, ಜವಾಬ್ದಾರಿಯೂ ನನ್ನದು, ಎನ್ನುತ್ತಾನೆ.

ಕರ್ನಾಟಕ ಶಾಸ್ತ್ರೀಯ ಸಂಗೀತ ಇಡೀ ಪ್ರಪಂಚದಲ್ಲೇ ಅತ್ಯಂತ ವಿಸ್ತಾರವಾದ ಮತ್ತು ಸಂಕೀರ್ಣತೆಗಳುಳ್ಳ ಸುಂದರ ಪದ್ಧತಿ ಎನ್ನುತ್ತಾನೆ ರೂವರಿ. ಕೊನ್ನಕೋಲ್  ಮೇಲೆ ಕೂಡ ವಿಶಿಷ್ಟ ಆಸಕ್ತಿ ಬೆಳೆಸಿಕೊಂಡ ಆತ, ಒಂದು ತಾಳದ ಉದ್ದ ಅಗಲವನ್ನು ಕಲಾವಿದರು ತಮ್ಮ ತಮ್ಮ ಮನೋಧರ್ಮಗಳ ಪ್ರಕಾರ ಹೇಗೆ ಹಿಗ್ಗಿಸುತ್ತಾರೆ ಎಂದು ವಿಸ್ಮಯಗೊಳ್ಳುತ್ತಾನೆ. ವಾದ್ಯ ಮತ್ತು ಕಲಾವಿದರ ನಡುವೆ ಒಂದು ಅಧ್ಯಾತ್ಮಿಕ ಸಂಬಂಧ ಇರುವುದು ಇವರೆಲ್ಲರನ್ನೂ ನೋಡಿದಾಗ ತಿಳಿಯುತ್ತದೆ ಎನ್ನುತ್ತಾನೆ.

ಇಷ್ಟರಲ್ಲೇ ಇನ್ನೂ ಎರಡು ಹಿಡನ್ ಡ್ರಮ್ಮರ್ಸ್ ಸರಣಿಗಳ ತಯಾರಿಯಲ್ಲಿದ್ದಾನೆ ರೂವರಿ. ಲಂಡನ್ನಿನಲ್ಲಿ ಮತ್ತು ತನ್ನ
ಯೂಟ್ಯೂಬ್ ಮೂಲಕ ತಾನು ನುಡಿಸುವ ಬೌರಾನ್ ವಾದ್ಯದ ಮೇಲೆ ಪಾಠಗಳನ್ನೂ ಮಾಡುತ್ತಿದ್ದಾನೆ. ಈಗ ಸಾಮಾಜಿಕ ಜಾಲತಾಣಗಳ ಮೂಲಕ, ಅದರಲ್ಲೂ ಯೂಟ್ಯೂಬ್ ಮೂಲಕ ಹೆಸರು ಮಾಡುತ್ತಿರುವ, ಈಗಾಗಲೇ ವಿಶ್ವವಿಖ್ಯಾತರಾದ ಕೆಲವು
ಸಂಗೀತಗಾರರು ಜನರನ್ನು ತಲುಪುವ ಹೊಸ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅದು ಶಾಸ್ತ್ರೀಯ ಸಂಗೀತವನ್ನು ಎಲ್ಲರಿಗೂ ಮತ್ತಷ್ಟು ಆಪ್ತವಾಗುವಂತೆ ಮಾಡುತ್ತಿದೆ.

ಅರುಣಾ ಸಾಯಿರಾಂ, ರಂಜನಿ – ಗಾಯತ್ರಿ, ಜಯಂತಿ ಕುಮರೇಶ್, ಮುಂತಾದ ಪ್ರಖ್ಯಾತ ಕಲಾವಿದರೆಲ್ಲಾ ತಮ್ಮದೇ ಯೂಟ್ಯೂಬ್ ಚಾನೆಲ್ ಮೂಲಕ ಜನರ ಜೊತೆ ಸಂಪರ್ಕವಿಟ್ಟುಕೊಂಡಿದ್ದಾರೆ. ಕೇವಲ ಸಂಗೀತದ ರಾಗಗಳ, ವಿವರಗಳ ಪರಿಚಯವಷ್ಟೇ ಅಲ್ಲದೇ, ಅವರ ಅನುಭವಗಳು, ಬಾಲ್ಯದ ನೆನಪುಗಳು, ಸಂಗೀತಕ್ಕೆೆ ಸಂಬಂಧಪಟ್ಟ ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಳ್ಳುತ್ತಾ, ಆಗಾಗ ಲೈವ್ ಸೆಶನ್ ಮಾಡುತ್ತಾ ಜನರ ಪ್ರಶ್ನೆೆಗಳಿಗೂ ಉತ್ತರಿಸುತ್ತಾ ಸಂವಹನ ನಡೆಸುತ್ತಿದ್ದಾರೆ. ಇದು ಒಂದು ಚಂದದ ಹೊಸ ಸಂಸ್ಕೃತಿಯಾಗಿ ಬೆಳೆಯುತ್ತಿದೆ. ಅದರಲ್ಲೂ ಕೋವಿಡ್ ಪರಿಸ್ಥಿತಿಯಲ್ಲಿ ಮನೆಯಲ್ಲಿ ಕುಳಿತೇ ಅವರ ಸಂಗೀತ ಕೇಳುವ ಅವಕಾಶ ಸಿಕ್ಕಿದೆ.

ಹಿಡನ್ ಡ್ರಮ್ಮರ್ಸ್ ಸರಣಿಯ ಉದ್ದೇಶ, ಸಂಗೀತ ಮಾತ್ರ ಹುಟ್ಟುಹಾಕಬಲ್ಲ ವಿಶಿಷ್ಟ ಆನಂದವನ್ನು ಹಂಚುವುದು. ಸಾಧ್ಯವಾದರೆ ಸಮಯ ಮಾಡಿಕೊಂಡು ನೋಡಿ. ಸಂಗೀತದ ಶಕ್ತಿ ಎಲ್ಲ ನಕಾರಾತ್ಮಕತೆಗಳನ್ನು ಅಳಿಸಿಹಾಕಿ ಎಲ್ಲೆಡೆ ಸೌಂದರ್ಯ, ಸಂತೋಷ ಹಂಚಲಿ.