ತಿಳಿರು ತೋರಣ
ಶ್ರೀವತ್ಸ ಜೋಶಿ
srivathsajoshi@yahoo.com
ಅಶ್ಲೀಲವೆಂದು ಪರಿಗಣಿಸಲ್ಪಟ್ಟಿಲ್ಲ ಅಂತ ಸ್ವತಃ ಪಾ.ವೆಂ.ಆಚಾರ್ಯರೇ ಶಿಫಾರಸು ಮಾಡಿ ‘ಯು’ ಸರ್ಟಿಫಿಕೇಟ್ ಕೊಟ್ಟಿರುವ, ಹಾಗಾಗಿ ಇಲ್ಲಿಯೂ ಧಾರಾಳವಾಗಿ ಉಲ್ಲೇಖಿಸಬಹುದಾದ, ಒಂದು ಆಸಕ್ತಿಕರ ವಿವರಣೆ ಇದೆ, ಆಚಾರ್ಯರ ಪದಾರ್ಥ ಚಿಂತಾಮಣಿ ಗ್ರಂಥದಲ್ಲಿ. ಅದು ಹೀಗಿದೆ: “ತೆಂಗಿನ ಕಾಯಿಯನ್ನು ಒಡೆದರೆ ಎರಡು ಹೋಳಾಗುತ್ತದೆ. ಅವುಗಳಲ್ಲಿ ಒಂದು ಹೆಣ್ಣು ಹೋಳು; ಇನ್ನೊಂದು ಸ್ವಾಭಾವಿಕವಾಗಿ ಗಂಡು ಹೋಳು. ಈ ಹೆಸರುಗಳು ಸುಮ್ಮನೆ ಬಂದಿಲ್ಲ. ಕಾಯಿಯಲ್ಲಿ ಕಣ್ಣು ಅಥವಾ ತೂತು ಇರುವ ಭಾಗ ಹೆಣ್ಣು. ನಾವು ಎಷ್ಟೇ ಲೈಂಗಿಕ ಮಡಿವಂತಿಕೆಯನ್ನು ಆಚರಿಸಿದರೂ ಭಾಷೆಯಿಂದ ಲೈಂಗಿಕತೆಯನ್ನು ಉಚ್ಚಾಟನೆ ಮಾಡಲಾಗುವುದಿಲ್ಲ. ಗ್ರಾಮ್ಯದಲ್ಲಿ ಮಾತ್ರವಲ್ಲ ನಾಗರಿಕ ಮಾತಿನಲ್ಲಿ ಕೂಡ ಅದು ನುಸುಳಿಯೇ ನುಸುಳುತ್ತದೆ.
ತೂತು ಇರುವುದು ಹೆಣ್ಣು ಎಂಬುದು ಶರೀರ ರಚನೆಯಲ್ಲಿ ಪ್ರತ್ಯಕ್ಷವಾದ ತಥ್ಯ. ಅದು ತೆಂಗಿನ ಕಾಯಿಯ ಹೋಳಿಗೆ ಅನ್ವಯಿಸಿದಾಗ ಅದರ ಮೂಲ ಅಶ್ಲೀಲತ್ವ ನಮ್ಮ ಗಮನಕ್ಕೆ ಬಾರದಷ್ಟು ಆಳಕ್ಕೆ ಹುಗಿಯಲ್ಪಟ್ಟಿದೆ. ನಮ್ಮ ಮಡಿವಂತ ಮನೆಯಲ್ಲಿ ಬಲು ಔಚಿತ್ಯ ಪ್ರಜ್ಞೆಯ ನನ್ನ ತರುಣ ಅಕ್ಕಂದಿರು ಕಿವಿಯ ಆಭರಣಗಳನ್ನು ತೊಳೆಯು ವಾಗ ಕೊಪ್ಪಿನ ಗಂಡು ತಿರುಗಣಿ ಸವೆದುಹೋಗಿದೆ ಎನ್ನುತ್ತಿದ್ದರು.
ತಿರುಗಣಿಯಲ್ಲಿ ತೂತಿನೊಳಗೆ ಅಥವಾ ಆಂಡೆಯೊಳಗೆ ಹೋಗಿ ಕೂಡ್ರುವ ಭಾಗ ಗಂಡು. ಈ ಆಭರಣಗಳ ಗಂಡು-ಹೆಣ್ಣು ಭಾಗಗಳನ್ನು ಹೇಳುವಾಗ ಕೇವಲ ಗಂಡು-ಹೆಣ್ಣಿನ ಅಂಗ ವೈಶಿಷ್ಟ್ಯಗಳನ್ನು ಕುರಿಯುವುದಿಲ್ಲ. ಗುಪ್ತವಾದ ಲೈಂಗಿಕ ಸಂಭೋಗಕ್ರಿಯೆಯನ್ನೂ ಸೂಚಿಸುತ್ತಿದ್ದೇವೆ ಎಂದು ಅವರಿಗೆ ಹೊಳೆಯುತ್ತಿರಲೇ ಇಲ್ಲ. ಯಾವುದಾದರೂ ಚಿಕಿತ್ಸಕ ಬುದ್ಧಿಯ ಮಗು ಈ ಆಂಡೆ ತಿರುಗಣಿಗಳಿಗೆ ಗಂಡು-ಹೆಣ್ಣೆಂಬ ಹೆಸರು ಯಾಕೆ ಎಂದು ಕೇಳಿದ್ದರೆ ಅವರು ತುಂಬ ಪೇಚಿಗೆ ಸಿಕ್ಕಿಕೊಳ್ಳಬಹುದಿತ್ತು. ಇದು ನಮ್ಮ ಕನ್ನಡ ಭಾಷೆಗಷ್ಟೇ ಸೀಮಿತವಲ್ಲ ಎನ್ನುವುದನ್ನು ಯಾವುದೇ ಒಳ್ಳೆಯ ಇಂಗ್ಲಿಷ್ ಶಬ್ದಕೋಶದಲ್ಲಿ ನೀವು screw ಎಂಬ ಶಬ್ದದ ಕೆಳಗೆ ನೋಡಿ ಕಂಡುಕೊಳ್ಳುವಿರಿ.
ಅಲ್ಲಿಯೂ male screw ಮತ್ತು female screw ಇವೆ. ಆಂಡೆಯೊಳಗೆ ಹೋಗಿ ಕೂಡ್ರುವ ಭಾಗ ಗಂಡು. ಯಾವುದೇ
ಯಂತ್ರಭಾಗದಲ್ಲಿ ಸ್ಕ್ರೂ ಕೂಡಿಸಲು ಮಾಡಿದ ತಿರುಗಣಿ (ಥ್ರೆಡ್) ಉಳ್ಳ ತೂತು ಹೆಣ್ಣು ಸ್ಕ್ರೂ”. ‘ಪಾವೆಂ’ ಅವರ ಸಂಶೋಧನಾತ್ಮಕ ವಿವರಣೆ ಸ್ವಾರಸ್ಯಕರವಷ್ಟೇ ಅಲ್ಲ ಸಮಂಜಸವಾಗಿಯೂ ಇದೆ. ಆದರೆ ಸ್ಕ್ರೂ, ನಟ್-ಬೋಲ್ಟ್,
ಇಲೆಕ್ಟ್ರಿಕ್ ಪ್ಲಗ್ ಮತ್ತು ತೆಂಗಿನಕಾಯಿಯ ಹೋಳಿಗೆ ಇದನ್ನು ಅನ್ವಯಿಸಿದ್ದಕ್ಕಿಂತಲೂ ‘ಪಾವೆಂ’ ಮುಂದುವರಿಸಿ ಇದೇ ಥಿಯರಿ ಯನ್ನು ಹೋಳಿಗೆಗೂ ವಿಸ್ತರಿಸಿದ್ದು ಮತ್ತಷ್ಟು ರುಚಿಕರವಾಗಿ ಇದೆ!
ಈಗ ನವರಾತ್ರಿ ಹಬ್ಬದ ಸೀಸನ್ ಬೇರೆ. ನಾವೆಲ್ಲ ಹೋಳಿಗೆಯ ಉಲ್ಲೇಖವನ್ನು ಎಲ್ಲಾದರೂ ತಪ್ಪಿಸಿಕೊಳ್ಳ ಲಿಕ್ಕುಂಟೇ? ಅದನ್ನೂ ಓದಿಯೇಬಿಡೋಣ. ‘ಪಾವೆಂ’ ಹೀಗೆ ಬರೆದಿದ್ದಾರೆ: “ಹೋಳಿಗೆ ಮಾಡುವುದಕ್ಕೆ ಕಣಕ ಮತ್ತು ಹೂರಣ ಬೇಕಾಗುತ್ತವಲ್ಲ, ಎರ ಡನ್ನೂ ಅಂದಾಜಿನ ಅಳತೆಯಿಂದ ಬೇರೆಬೇರೆ ಅಣಿಗೊಳಿಸುತ್ತಾರೆ. ಹೋಳಿಗೆ ಮಾಡಿ ಮುಗಿಸಿದಾಗ ಒಂದೋ ಸ್ವಲ್ಪ ಕಣಕವಾದರೂ ಮಿಕ್ಕುಳಿಯುತ್ತದೆ ಅಥವಾ ಹೂರಣವಾದರೂ ಉಳಿದು ಬಿಡುತ್ತದೆ. ಮನೆಯಲ್ಲಿ ಯಾರಾದರೂ ಬಸುರಿ ಇದ್ದರೆ ಹೋಳಿಗೆ ಶಕುನ ಪ್ರಕಾರ ಅಜ್ಜಮ್ಮ ಭವಿಷ್ಯ ಹೇಳುತ್ತಾರೆ- ಹೂರಣ ಉಳಿದರೆ ಗಂಡು, ಕಣಕ ಉಳಿದರೆ ಹೆಣ್ಣು ಮಗು ಹುಟ್ಟುತ್ತದೆ ಎಂದು.
ಹೂರಣ ಕಣಕದ ಒಳಗೆ ಹೋಗುವುದರಿಂದ (ಹೂರಣ ಎಂಬ ಪದ ಬಂದಿರುವುದೇ ಸಂಸ್ಕೃತದ ‘ಪೂರಣ’ದಿಂದ,
ತುಂಬಿಸುವುದು ಎಂಬ ಅರ್ಥದಿಂದ) ಅದು ಗಂಡು. ಕಣಕವು ಹೂರಣವನ್ನು ಒಳಗೆ ತೆಗೆದುಕೊಳ್ಳುವುದರಿಂದ ಅದು ಹೆಣ್ಣು. ಲೈಂಗಿಕ ಕ್ರಿಯೆಯನ್ನೇ ಆಧರಿಸಿದ ಶಕುನವಿದು, ಅಶ್ಲೀಲವೆಂದು ಪರಿಗಣಿಸಲ್ಪಟ್ಟಿಲ್ಲ!”.
ಹೌದಲ್ಲ! ಪಾ.ವೆಂ.ಆಚಾರ್ಯರು ವಿವರಿಸಿದ ಹೋಳಿಗೆ ಶಕುನವನ್ನು ನಾವು ಮೋದಕ, ಕರಜಿಕಾಯಿ, ಸುಕ್ಕಿನುಂಡೆ ಇತ್ಯಾದಿಗೂ ವಿಸ್ತರಿಸಬಹುದು. ಬಾಳೆಕಾಯಿ ಪೋಡಿ, ಮಿರ್ಚಿಬಜ್ಜಿ, ಆಲೂ ಬೋಂಡಾ ಮುಂತಾದವುಗಳಿಗೂ ಸರಿದೂಗಿಸಬಹುದು. ಹೊರಗೊಂದು ಕವಚ, ಒಳಗೆ ಸ್ಟಫಿಂಗ್ ಇರುವ ಯಾವ ತಿನಿಸಾದರೂ ಸರಿಯೇ. ಸಮೋಸ, ಸ್ಟ- ಪರೋಟಾ ಅಥವಾ ಈಗೀಗ ನಗರವಾಸಿ ಭಾರತೀಯರಿಗೂ ಪರಿಚಯವಾಗಿರುವ ಮೋಮೋಸ್(ಚೈನೀಸ್ ಡಂಪ್ಲಿಂಗ್ಸ್) ಮುಂತಾದವಕ್ಕೂ ಅನ್ವಯಿಸಬಹುದು. ಇಲ್ಲೆಲ್ಲ ಪ್ರಕೃತಿ-ಪುರುಷ ತತ್ತ್ವವೇ ತಾನೆ ಪಾಲನೆ ಆಗಿರುವುದು? ಆದರೆ ಹೋಳಿಗೆಗಿರುವ ಖದರು, ಗತ್ತು, ಹಬ್ಬದಾಚರಣೆಗೆ ಮಾಡುವ ವಿಶೇಷ ಭಕ್ಷ್ಯ ಎಂದು ತುಸು ಹೆಚ್ಚೇ ಪೂಜ್ಯ-ಪವಿತ್ರ ಭಾವನೆ ಬೇರೆಲ್ಲ ತಿನಿಸುಗಳಿಗೆಲ್ಲಿ ಬರಬೇಕು? ಎಷ್ಟೆಂದರೂ ಹೋಳಿಗೆಯ ಶ್ರೇಷ್ಠತೆಯೇ ಬೇರೆ. ಅದು ಸಾಂಪ್ರದಾಯಿಕ ಬೇಳೆ ಹೋಳಿಗೆಯೇ ಇರಲಿ, ಕಾಯಿಹೋಳಿಗೆಯಿರಲಿ, ಉತ್ತರ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯವಾಗಿರುವ ಶೇಂಗಾ ಹೋಳಿಗೆಯಾದರೂ ಇರಲಿ ಅಥವಾ ಈಗ ಬೆಂಗಳೂರಲ್ಲಿ ತಲೆಯೆತ್ತಿರುವ ‘ಹೋಳಿಗೆ ಮನೆ’ಗಳಲ್ಲಿ ಸಿಗುವ ಛಪ್ಪನ್ನೈ ವತ್ತಾರು ತರಹೇವಾರಿ ಹೋಳಿಗೆಗಳೇ ಇರಲಿ. ಗಾದೆಮಾತೇ ಹೇಳುವಂತೆ- ಶಬ್ದದ ಅರ್ಥ ತಿಳಿಯದಿದ್ದರೂ ಹಬ್ಬದ ಹೋಳಿಗೆ ತಿನ್ನಲಿಕ್ಕೆ ಕಡಿಮೆ ಇಲ್ಲ.
ಇಂತಿರುವ ಹೋಳಿಗೆ ತತ್ತ ವನ್ನು ರಸಋಷಿ ಕುವೆಂಪು ತಮ್ಮದೊಂದು ಕವಿತೆಯಲ್ಲಿ ರಸವತ್ತಾಗಿ ಚಿತ್ರಿಸಿದ್ದಾರೆ. ಗಮನಾರ್ಹ ವ್ಯತ್ಯಾಸವೇನೆಂದರೆ ಇಲ್ಲಿ ಕಣಕವೆಂದರೆ ಗಂಡು, ಹೂರಣ ವೆಂದರೆ ಹೆಣ್ಣು! 1954ರಲ್ಲಿ ಪ್ರಕಟವಾದ ‘ಚಂದ್ರಮಂಚಕೆ ಬಾ, ಚಕೋರಿ!’ ಕವನಸಂಕಲನದಲ್ಲಿದೆ ಈ ಕವಿತೆ. ಇದರ ಶೀರ್ಷಿಕೆ ‘ದಂಪತಿ’ ಎಂದು. ‘ಗೌರಿಹಬ್ಬಕ್ಕೆ ಕಬ್ಬಗಾಣಿಕೆ’ ಅಂತೊಂದು ಉಪಶೀರ್ಷಿಕೆಯೂ ಆವರಣದಲ್ಲಿದೆ. ಬಹುಶಃ ಗೌರಿ-ಗಣೇಶ ಹಬ್ಬಕ್ಕೆಂದು ಮನೆಯಲ್ಲಿ ಹೋಳಿಗೆ ತಯಾರಿಸುತ್ತಿದ್ದಾಗ ಕುವೆಂಪುಗೆ ಈ ಕವಿತೆ ಹೊಳೆದದ್ದಿರಬಹುದು. “ನಮ್ಮ ಬಾಳಿಗೆ ಸಾಕ್ಷಿ ಹೋಳಿಗೆ! ನಾನು ಕಣಕ, ನೀನು ಹೂರ್ಣ; ನಿನ್ನನಪ್ಪೆ ನಾನು ಪೂರ್ಣ! ನಾನಿಲ್ಲದೆ ನೀನು ಚೂರ್ಣ; ನೀನಿಲ್ಲದೆ ನಾನು ಶೀರ್ಣ!
ಎರಡು ಹೆಸರು, ಒಂದೆ ಉಸಿರು; ನಾನು ಪತಿ, ನೀನು ಸತಿ; ಒಂದೆ ದಂಪತಿ!” ಎಂದು ಕವಿತೆಯ ಮೊದಲ ಚರಣ. “ನಿನ್ನ ವಿನಾ ನಾನು ಶೂನ್ಯ; ತೊರೆಯೆ ನೀನು ನಾ ಜಘನ್ಯ. ನಿನ್ನ ತಪ್ಪಿ ನಾನು ರಿಕ್ತ; ನಿನ್ನನೊಪ್ಪಿ ನಾ ಸುಶಕ್ತ. ನೀ ಬಂಽಸೆ ನಾ ವಿಮುಕ್ತ; ಆಲಿಂಗಿಸೆ ಯೋಗಮುಕ್ತ! ಎರಡು ಹೆಸರಿಗೊಂದೆ ಉಸಿರು: ನಾನು ಪತಿ, ನೀನು ಸತಿ, ಒಂದೆ ದಂಪತಿ!”- ಇದು ಎರಡನೆಯ ಚರಣ.
ಹೋಳಿಗೆ ಉತ್ಕೃಷ್ಟ ಮಟ್ಟದ್ದಾಗಬೇಕಿದ್ದರೆ ಕಣಕ ಮತ್ತು ಹೂರಣಗಳ ಪ್ರಮಾಣ, ಅನುಪಾತ ಎಲ್ಲವೂ ಸರಿಯಾಗಿರಬೇಕು. ಕಣಕವೇ ಹೆಚ್ಚಾದರೆ ಹೋಳಿಗೆ ಹಸನಾಗಿ ಬಾರದೆ ಒಣಕಲು ರೊಟ್ಟಿಯಂತಾದೀತು. ಹೂರಣ ಹೆಚ್ಚಾದರೆ ಕಣಕವೆಲ್ಲ ಹರಿದುಹೋಗಿ ಹೋಳಿಗೆ ಛಿದ್ರವಿಚ್ಛಿದ್ರವಾದೀತು. “ಎರಡು ಗಾಲಿ ಬೇಕೇಬೇಕು ಬಂಡಿ ಓಡಲು… ಉರುಳದೆಂದು ಒಂದು ಗಾಲಿ ಚಿಕ್ಕದಾಗಲು…” ಎಂಬ ಚಿತ್ರಗೀತೆ ಸಾಲಿನಂತೆಯೇ ಸಂಸಾರವೆಂಬ ಹೋಳಿಗೆಯ ಸಮತೋಲನ ಕೂಡ. ಕವಿತೆಯಲ್ಲಿ ಕುವೆಂಪು ಅದನ್ನು ಸಮರ್ಥವಾಗಿ ಪ್ರತಿಬಿಂಬಿಸಿದ್ದಾರೆ. ಆದರೆ
ತನ್ನನ್ನು ಕಣಕಕ್ಕೂ, ಮನದನ್ನೆಯನ್ನು ಹೂರಣಕ್ಕೂ ಸಮೀಕರಿಸಿದ್ದೇಕಿರಬಹುದು? ಕಣಕ ಹೊರಗಿನ ಕವಚ, ರಕ್ಷಣೆಯ ಹೊಣೆ ಹೊತ್ತಿರುವಂಥದು, ಪ್ರಾಪಂಚಿಕ ಒತ್ತಡಗಳಿಗೆ ಒಡ್ಡಿಕೊಂಡಿರುವಂಥದು; ಹೂರಣ ಮನೆಯೊಳ ಗಿನದು, ಅಂತರಂಗದ ಮಾಧುರ್ಯ, ಮನೆವಾಳ್ತೆಯ ಕೇಂದ್ರಬಿಂದು… ಎಂಬ ತರ್ಕದಿಂದಿರಬಹುದು. ಇದು ಕೂಡ ಅತ್ಯಂತ ಸಮಂಜಸವೇ.
‘ಚಂದ್ರಮಂಚಕೆ ಬಾ, ಚಕೋರಿ!’ ಕವನಸಂಕಲನವನ್ನು ಕುವೆಂಪು ಅವರು ಪತ್ನಿ ಹೇಮಾವತಿ ಅವರಿಗೆ ಅರ್ಪಣೆ ಮಾಡಿರುವ ರೀತಿ ಯನ್ನು ಗಮನಿಸಿದರೆ ನಮಗಿದು ಅರ್ಥವಾಗುತ್ತದೆ: “ನನ್ನ ಜೀವನ ಲಕ್ಷ್ಮಿಗೆ ನನ್ನ ಹೃದಯದ ವಾಣಿಗೆ; ಪ್ರೇಮದೀ ಕೃತಿ ಕಾಣಿಕೆ ಚೆಲುವಿನೊಲವಿನ ರಾಣಿಗೆ! ಆನಂದದೀ ಕೇಂದ್ರಕೆ ಸೌಂದರ್ಯದೀ ನೇಮಿಗೆ; ರಸತಪಸ್ಯೆಯ ಕಾಣಿಕೆ ಗೃಹತಪಸ್ವಿನಿ ಹೇಮಿಗೆ!”.
ಹೋಳಿಗೆ ಹರಟೆಯಲ್ಲಿ ಕುವೆಂಪು ನೆನಪಾಗಿರುವುದರಿಂದ, ಅವರ ‘ಹೋಳಿಗೆ ಪ್ರತಿಜ್ಞೆ’ ಕಥೆಯನ್ನೂ ಇಲ್ಲಿ ಪ್ರಸ್ತಾವಿಸಬೇಕು. ‘ಸನ್ಯಾಸಿ ಮತ್ತು ಇತರ ಕತೆಗಳು’ ಸಂಕಲನದಲ್ಲಿರುವ ಕಥೆಯದು. ಅದರಲ್ಲಿ ಕಣಕ-ಹೂರಣಗಳ ವಿಶ್ಲೇಷಣೆಯೇನೂ ಬರುವುದಿಲ್ಲ, ಅಥವಾ ಹೋಳಿಗೆ ಬಗ್ಗೆ ಪ್ರತಿಜ್ಞೆ ಮಾಡಿದ್ದು ಕೂಡ ಕುವೆಂಪು ಏನಲ್ಲ. ಆದರೂ ಕಥೆ ತುಂಬ ಮಾರ್ಮಿಕವಾಗಿದೆ, ವಿಚಾರಪ್ರಚೋದಕವಾಗಿದೆ. ಬಾಲ್ಯದ ಆಟ ಆ ಹುಡುಗಾಟ ಎಂಬಂತೆ
ಶಾಲೆಗೆ ಹೋಗುವಾಗ ಜೇಬಿನಲ್ಲಿ ಹೋಳಿಗೆ ತುಂಬಿಸಿಕೊಂಡು ಹೋಗಿ ಅಲ್ಲಿ ಅದು ಗುಂಡಪ್ಪ ಮೇಷ್ಟ್ರಿಗೆ ಗೊತ್ತಾಗಿ ದೊಡ್ಡ ರಾದ್ಧಾಂತವಾದದ್ದು, ಕಥೆಗಾರರ (ಕುವೆಂಪು ಅವರ ಅಂತಲೇ ಅಂದುಕೊಳ್ಳೋಣ) ಮಿತ್ರರೊಬ್ಬರು ಆ ಪ್ರಸಂಗದಲ್ಲಿದ್ದದ್ದು, ಆಮೇಲೆ ಜನ್ಮೇಪಿ ಹೋಳಿಗೆ ತಿನ್ನುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದು, ಅಷ್ಟೇ ಸೀರಿಯಸ್ಸಾಗಿ ಅದನ್ನು ಪಾಲಿಸಿಕೊಂಡು ಬಂದದ್ದು ಇತ್ಯಾದಿ ವಿವರಣೆ. ಕಥೆಗಾರನಿಗೋ ಅಚ್ಚರಿ.
ಚಿಕ್ಕ ವಯಸ್ಸಿನಲ್ಲಿ ಹುಡುಗಾಟದಿಂದ ಮಾಡಿದ್ದ ಪ್ರತಿಜ್ಞೆಯಿಂದ ಆದ ಪ್ರಯೋಜನವಾದರೂ ಏನು? ಅದನ್ನು ಪಾಲಿಸಿಕೊಂಡು ಬರಬೇಕಾದ ಅಗತ್ಯವಾದರೂ ಏನು? ಆಗ ಆ ಮಿತ್ರರು ಹೇಳುವ ಮಾತು ನಿಜಕ್ಕೂ ಚಿಂತನಾರ್ಹವಾದುದು. “ಹೋಳಿಗೆ ತಿನ್ನುವುದು ಬಿಡುವುದರಲ್ಲಿ ಯಾವ ಮಹತ್ತೂ ಇಲ್ಲ. ಆದರೆ ಇಂದಿನವರೆಗೆ ಪ್ರತಿಜ್ಞೆಯನ್ನು ಪಾಲಿಸಿರುವೆನೆಂಬ ಮನೋಭಾವ ನನ್ನ ಧರ್ಮಬುದ್ಧಿಗೆ ಬಲಕಾರಿಯಾಗಿರುತ್ತದೆ, ನನ್ನ ಚಿತ್ತಶುದ್ಧಿಗೆ ಸಹಕಾರಿಯಾಗಿರುತ್ತದೆ. ದೊಡ್ಡ ಮನಸ್ಸಿನಿಂದ ಮಾಡಿದ ಸಣ್ಣ ಕಾರ್ಯಗಳು ಸಣ್ಣ ಮನಸ್ಸಿನಿಂದ ಮಾಡಿದ ದೊಡ್ಡ ಕಾರ್ಯಗಳಿಗಿಂತಲೂ ಎಷ್ಟೋ ಶ್ರೇಷ್ಠವಾದವುಗಳೆಂದು ನನ್ನ ನಿಶ್ಚಲವಾದ ಅಭಿಪ್ರಾಯ.
ಮಹಿಮೆ ಕಾರ್ಯಗಳಲ್ಲಿಲ್ಲ, ಕಾರ್ಯ ಮಾಡಿರುವ ಚಿತ್ತವೃತ್ತಿಯಲ್ಲಿದೆ”. ಅಬ್ಬಾ, ಎಂಥದೊಂದು ಜೀವನಪಾಠ!
ಸರಿ, ಕುವೆಂಪು ಅವರಿಂದ ವಿದಾಯ ಪಡೆದು ಮತ್ತೆ ನಾವೀಗ ‘ಪಾವೆಂ’ರ ‘ಪದಾರ್ಥ ಚಿಂತಾಮಣಿ’ಯತ್ತ ಗಮನ ಹರಿಸೋಣ.
ಹೋಳಿಗೆ ಎಂಬ ಪದದ ವ್ಯುತ್ಪತ್ತಿಯ ಬಗೆಗೂ ‘ಪಾವೆಂ’ ಪಾಂಡಿತ್ಯಪೂರ್ಣ ವಿವರಣೆ ನೀಡಿದ್ದಾರೆ. “ಹೋಳಿಗೆ ಕನ್ನಡಿಗರಿಗೆ ಎಷ್ಟು ಇಷ್ಟ ಮತ್ತು ಪರಿಚಿತವಾಗಿದೆಯೆಂದರೆ ಅದರ ವಂಶಾನುಕ್ರಮದ ಪ್ರಶ್ನೆಯೇ ಅವರ ತಲೆಗಳಲ್ಲಿ ಮೂಡದು. ಆದರೆ ಅದರ ಲಿಖಿತ ದಾಖಲೆ ೧೨ನೆಯ ಶತಮಾನಕ್ಕಿಂತ ಹಿಂದೆ ಹೋಗುವುದಿಲ್ಲ. ವಾಸ್ತವಿಕವಾಗಿ ಹಳೆಯ ಕೋಶಗಳಲ್ಲಿ ಹೋಳಿಗೆ ಪದಕ್ಕಿರುವ ಅರ್ಥ ಮೈಯಲ್ಲಿ ಏಳುವ ಗುಳ್ಳೆ, ಹುಗುಳು ಎಂದಲ್ಲದೆ ಸಿಹಿತಿಂಡಿಯೆಂದಲ್ಲ. ಚನ್ನಬಸವಣ್ಣನ ಒಂದು ವಚನದಲ್ಲಿ ಕಡುಬು, ಕಜ್ಜಾಯಗಳೊಡನೆ ಹೋಳಿಗೆಯೂ ಪ್ರಸ್ತಾವಿಸಲ್ಪಟ್ಟಿದೆ.
ಆದ್ದರಿಂದ ೧೨ನೆಯ ಶತಮಾನದಲ್ಲಿ ಅದು ಪ್ರಚಲಿತ ಖಾದ್ಯವಾಗಿತ್ತೆಂದು ವಿದಿತವಾಗುತ್ತದೆ. ೧೩ನೆಯ ಶತಮಾನದ
ಜೈನಕಾವ್ಯ ‘ಶಾಂತೀಶ್ವರ ಪುರಾಣ’ದಲ್ಲಿ ಅಂಗಾರ ಹೋಳಿಗೆಯ ಉಲ್ಲೇಖವಿದೆ. ಅಂಗಾರವೋಳಿಗೆ, ಅಂಗರವಳಿಗೆ, ಅಂಗರೋಳಿಗೆ ಎಂಬ ರೂಪಗಳೂ ಇವೆ. ಸಂಸ್ಕೃತರೂಪ ‘ಅಂಗಾರ ಸ್ಪೋಟಿಕಾ’. ಅಂದರೆ ಕೆಂಡದಲ್ಲಿ ಸುಟ್ಟ ಉಬ್ಬುರೊಟ್ಟಿ. ಸಂಸ್ಕೃತ ಕೋಶಗಳಲ್ಲಿ ಅಂಗಾರ ಸ್ಪೋಟಿಕಾ ಎಂಬ ತಿಂಡಿಯ ಸುದ್ದಿಯಿಲ್ಲ.
ಅಲ್ಲಿ ಕೂಡ ಸ್ಪೋಟಿಕಾ ಎಂದರೆ ಗುಳ್ಳೆ ಎಂದೇ ಅರ್ಥ. ಅಂಗಾರಸೋಟಿಕೆ ಅಥವಾ ಅಂಗರೋಳಿಗೆ ಈಗಿನ ಹೂರಣದ ಸಿಹಿ ತಿಂಡಿಯೇ ಆಗಿತ್ತೋ ಬರೀ ಉಬ್ಬುರೊಟ್ಟಿಯೋ ತಿಳಿಯದು. ಹುಣ್ಣಿಮೆಯ ಚಂದ್ರನಂತೆ ಅದು ಬೆಳ್ಳಗೆ ಮತ್ತು ದುಂಡಾಗಿತ್ತೆಂಬುದು ಶಾಂತೀಶ್ವರ ಪುರಾಣದ ಹೇಳಿಕೆ. ಚನ್ನಬಸವಣ್ಣನ ಹೇಳಿಕೆಯಿಂದ ತಾನೇ ಅದು ಸಿಹಿಭಕ್ಷ್ಯವೆಂದು ಊಹಿಸಬರುತ್ತದೆ”. ‘ಪಾವೆಂ’ ಅವರ ಸತಾರ್ಕಿಕ ಪದಶೋಧನೆಯ ಬಗೆಗೆ ನನಗೆ ಯಾವತ್ತಿಗೂ ಗೌರವಪೂರಿತ ಬೆರಗು. ನಮ್ಮ ಹಾಗೆ ಗೂಗಲ್‌ನ ಅಂಧ ಅವಲಂಬಿಯಾಗಿರದೆ ವಿವಿಧ ಗ್ರಂಥಗಳ, ವಿವಿಧ
ಕೋಶಗಳ ಆಳವಾದ ಅಧ್ಯಯನದಿಂದಲೇ ಅವರು ಪದಗಳ ಬೆನ್ನು ಹತ್ತಿದರು. ಇಷ್ಟೆಲ್ಲ ವಿಚಾರಗಳನ್ನು ತಿಳಿದುಕೊಂಡರು. ಹೋಳಿಗೆಯನ್ನೂ ಅವರು ಅಷ್ಟಕ್ಕೇ ಬಿಟ್ಟುಬಿಡುವುದಿಲ್ಲ. ಜಿಜ್ಞಾಸೆಯೆಂಬ ಹಾಲಲ್ಲದ್ದಿ ಚಪ್ಪರಿಸುತ್ತಾರೆ. ಮುಂದುವರಿಸುತ್ತ “ಸ್ಪೋಟಿಕಾ ಅಂದರೆ ಉಬ್ಬಲು, ಸುಟ್ಟು ಅಥವಾ ಕಾದು ಉಬ್ಬಿದ್ದು. ಅದೇ ಪೋಳಿಗೆ ಅಥವಾ ಹೋಳಿಗೆ.
ಹೀಗೆ ಅದು ಮರಾಠಿಯ ಪೋಳಿ (ಉದಾ: ಶಂಕರ ಪೋಳಿ, ಸಾಖರ ಪೋಳಿ), ಪೋಡಿ (ಬಜ್ಜಿ) ಇತ್ಯಾದಿಗಳ ಸಗೋತ್ರದ್ದು. ಬಂಗಾಲಿಯಲ್ಲಿ ಪೋಡಾ = ಸುಟ್ಟದ್ದು. ನಾದಿದ ಹಿಟ್ಟಿನ ಉಂಡೆಯೊಳಗೆ ಹೂರಣ ತುಂಬಿಸಿ ಲಟ್ಟಿಸಿ ಅಥವಾ ತಟ್ಟಿ ಹಂಚಿನಲ್ಲಿ ಬೇಯಿಸುವ ಉಪಾಯ ಎಂದೋ ಆಮೇಲೆ ಸೇರಿಕೊಂಡದ್ದು. ಹೂರಣ ಅಂದರೆ ಸಂಸ್ಕೃತದಲ್ಲಿ ಪೂರಣ ( = ತುಂಬುವುದು). ಈ ಹೂರಣ ಎಳ್ಳು, ಸಕ್ಕರೆ, ಕಡಲೆ ಅಥವಾ ಹೆಸರು ಬೇಳೆಯದು.
ರವಾಶಿರಾ, ಬೆಲ್ಲ ಕಲಸಿದ ತೆಂಗಿನ ತುರಿ ಇತ್ಯಾದಿ ಯಾವುದೇ ಆಗಬಹುದೆಂದು ಆಧುನಿಕ ಪಾಕಶಾಸ್ತ್ರಜ್ಞರ ಆವಿಷ್ಕಾರ. ಹೋಳಿಗೆಗೆ ಸಂಬಂಽಸಿದ ಶಬ್ದಗಳು ಸಂಸ್ಕೃತ-ಪ್ರಾಕೃತ ಮೂಲ ದವಾಗಿದ್ದರೂ ಅದರ ಬೆಳವಣಿಗೆಯೆಲ್ಲ ಕರ್ನಾಟಕದಲ್ಲಿ ಆದಂತೆ ಕಾಣುತ್ತದೆ. ತೆಲುಗು-ತಮಿಳು ಭಾಷೆಗಳಿಗೂ ಪೋಳಿ ಹೋಗಿದೆ” ಎನ್ನುತ್ತಾರೆ.
ತಮಿಳಿಗೂ ಪೋಳಿ ಹೋಗಿದೆ ಎಂದಾಗ ನನಗೊಂದು ತಮಾಷೆ ನೆನಪಾಗುತ್ತಿದೆ.
ತಮಿಳಿನಲ್ಲಿ ‘ಪ’ ಮತ್ತು ‘ಬ’ ಒಂದೇ ಆದ್ದರಿಂದ ಅಲ್ಲಿ ಅದು ‘ಬೋಳಿ’ ಆಗಿದೆ. “ಬೋಳಿ ಅಂಗಡೀಲಿ ಇದ್ದೀನಿ
ಏನಾದ್ರೂ ತರಲಾ ಅಂತ ಮಾವ ಫೋನ್ ಮಾಡಿದ್ರು. ಒಂದ್ ಸೆಕೆಂಡ್ ಗಾಬರಿಬಿದ್ದೆ. ಏನಿದು ಈ ಥರ ಎಲ್ಲ ಮಾತಾಡ್ತಾರಲ್ಲ ಅಂತ. ಬೋಳಿ ಅಂಗಡೀಲಿ ಪದಾರ್ಥ ಬಹಳ ರುಚಿ. ಬೋಂಡಾ ತನ್ನಿ ಅಂದ್ರು ಅತ್ತೆ. ಇವರೂ ಹೀಗಂತಾರಲ್ಲ ಅಂತ ಗಾಬರಿ ಆಯ್ತು. ಕನ್ನಡ ಅಲ್ಲ ತಮಿಳು ಬೋಳಿ ಅದು, ಪೋಳಿ ಅಲಿ ಯಾಸ್ ಬೋಳಿ ಅಂದ್ರೆ ಹೋಳಿಗೆ ಅಂತ ರಿಯಲೈಜ್ ಆಗೋ ಅಷ್ಟರಲ್ಲಿ ಉಫ್… ಅಂದಹಾಗೆ ಬೋಳಿ ಮತ್ತು ಬೋಂಡಾ ಬಹಳ ರುಚಿಯಾಗಿತ್ತು.
ಈ ಕಡೆ ಬಂದರೆ ತಪ್ಪದೆ ತಿನ್ನಿ” ಎಂದು ಸ್ನೇಹಿತೆ ಧರ್ಮಶ್ರೀ ಐಯಂಗಾರ್ ಒಮ್ಮೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಮದುವೆಯಾದ ಹೊಸತರಲ್ಲಿ, ಗಂಡನೊಂದಿಗೆ ಕೆನಡಾಕ್ಕೆ ವಲಸೆ ಹೋಗುವ ಮೊದಲು ಅವರು
ಒಂದಷ್ಟು ದಿನ ಚೆನ್ನೈಯಲ್ಲಿ ಅತ್ತೆ-ಮಾವರ ಮನೆಯಲ್ಲಿದ್ದಾಗಿನ ಪ್ರಸಂಗವದು, ಎರಡು ವರ್ಷಗಳ ಹಿಂದಿನದು. ತಮಿಳರಿಗೆ ಪರೋಟಾ ಮತ್ತು ಬರೋಡಾ ಒಂದೇ, ಗಾಂಧಿ ಮತ್ತು ಕಾಂತಿ ಒಂದೇ… ಅಂತೆಲ್ಲ ಜೋಕುಗಳು ಗೊತ್ತಿದ್ದ ನನಗೆ ಈ ಪೋಳಿ-ಬೋಳಿ ಆಭಾಸದ ಅಂದಾಜಿರಲಿಲ್ಲ. ಧರ್ಮಶ್ರೀಯವರ ಪೋಸ್ಟ್ ಓದುವವರೆಗೂ.
ಇರಲಿ, ಕಣಕ-ಹೂರಣಗಳಿಂದ ಆರಂಭಿಸಿದ ಇಂದಿನ ಅಂಕಣಬರಹಕ್ಕೆ ಮುಚ್ಚಿಗೆ (ಮುಕ್ತಾಯ) ಕೂಡ ಕಣಕದ್ದೇ
ಇರಲಿ. ಪುರಂದರ ದಾಸರ ಜನಪ್ರಿಯ ಗೀತೆ ‘ಡೊಂಕು ಬಾಲದ ನಾಯಕರೆ, ನೀವೇನೂಟವ ಮಾಡಿದಿರಿ?’ ಇದನ್ನು ನೀವು ಕೇಳಿಯೇ ಇರುತ್ತೀರಿ. ಇದರ ಮೊದಲ ಚರಣದಲ್ಲಿ “ಕಣಕ ಕುಟ್ಟೋವಲ್ಲಿಗೆ ಹೋಗಿ, ಹಣಿಕೀ ಹಣಿಕೀ ನೋಡುವಿರಿ; ಕಣಕವ ಕುಟ್ಟುವ ಒನಕೆಲಿ ಹೊಡೆದರೆ ಕುಂಯ್ ಕುಂಯ್ ರಾಗವ ಮಾಡುವಿರಿ!” ಎಂದು ಬರುತ್ತದೆ. ಈ ಗೀತೆಯಲ್ಲಿ ದಾಸರು ಮನುಷ್ಯನ ಮನಸ್ಸನ್ನು ನಾಯಿಯ ಡೊಂಕು ಬಾಲಕ್ಕೆ ಹೋಲಿಸಿದ್ದಾರೆ. ನಾಯಿಯ ಬಾಲ ನಳಿಕೆಯಲ್ಲಿಟ್ಟಾಗಷ್ಟೇ ನೇರವಾದೀತು, ಹೊರತೆಗೆದರೆ ಡೊಂಕೇ ಎಂಬುದು ಲೋಕನೀತಿ. “ಮನುಷ್ಯನ
ಮನಸ್ಸು ಕೂಡ ಮತ್ತೆಮತ್ತೆ ವಿಷಯಭೋಗಗಳ ಕಡೆಗೇ ಹರಿಯುತ್ತದೆ.
ಕಣಕದ ಅಥವಾ ಹುಗ್ಗಿಯ ವಾಸನೆಯನ್ನು ಹಿಡಿದುಹೋದ ನಾಯಿಗೆ ಒನಕೆಯ ಅಥವಾ ಸೌಟಿನ ಪೆಟ್ಟು
ತಪ್ಪಿದ್ದಲ್ಲ. ಅದೇರೀತಿ ವಿಷಯವಾಸನೆಯನ್ನು ಹಿಡಿದು ಹೋಗುವ ಮನುಷ್ಯನಿಗೂ ವಿಧಿಯ ಪೆಟ್ಟು ತಪ್ಪಿದ್ದಲ್ಲ. ಈ ಪೆಟ್ಟೇ ಮನುಷ್ಯನಿಗೆ ಸಿಗುವ ಊಟ ಅಥವಾ ಕರ್ಮಫಲ!” ಎಂದು ವಿದ್ವಾಂಸರು ಈ ಪದ್ಯದ ಪಾರಮಾರ್ಥಿಕ ವ್ಯಾಖ್ಯಾನ ಮಾಡುತ್ತಾರೆ. ಇಲ್ಲಿ ನಾಯಕರೇ ಎಂಬ ಸಂಬೋಧನೆ ನಾಯಿಗೆ ಅಂತ ನಮಗನಿಸುತ್ತದೆ.
ಪುರಂದರದಾಸರು ಪೂರ್ವಾಶ್ರಮದಲ್ಲಿ ಶ್ರೀನಿವಾಸ ನಾಯಕ ಆಗಿದ್ದವರು. ಅಂದರೆ ತಮ್ಮನ್ನೇ ಸಂಬೋಧಿಸಿ ಕೊಂಡದ್ದೂ ಇರಬಹುದು! ಹಾಗೆಯೇ, ಅವರ ಪೂರ್ವಾಶ್ರಮ ವೃತ್ತಿ ಚಿನ್ನದ ವ್ಯಾಪಾರ. ಅವರೇನೂ ಅಕ್ಕಸಾಲಿಗ ನಲ್ಲವಾದರೂ ವ್ಯಾಪಾರಕ್ಕಾಗಿ ಚಿನ್ನವನ್ನು ಮುಟ್ಟಿ-ತಟ್ಟಿ-ಕುಟ್ಟಿ ನೋಡುತ್ತಿದ್ದವರೇ. ಅದನ್ನೇ ಸೂಚ್ಯವಾಗಿ ‘ಕನಕ’ ಕುಟ್ಟೋವಲ್ಲಿಗೆ ಹೋಗಿ ಹಣಿಕೀ ಹಣಿಕೀ ನೋಡುವಿರಿ ಎಂದರೇ? ಪದ್ಯದಲ್ಲಿ ಮೇಲ್ನೋಟಕ್ಕೆ ಕಣಕ; ಗೂಢಾರ್ಥ ದಲ್ಲಿ ಕನಕ. ಹೋಳಿಗೆ ಯಲ್ಲಾದರೂ ಅಷ್ಟೇ: ಮೇಲ್ಪದರವಾಗಿ ಕಣಕ; ಒಳಗಡೆ ಸ್ವರ್ಣಸದೃಶ ಸಿಹಿಹೂರಣ.
ಹಾಗಿದ್ದರೆ, ಪಾ.ವೆಂ.ಆಚಾರ್ಯರು ವಿವರಿಸಿದಂತೆ ಕಣಕ ಹೆಣ್ಣು, ಹೂರಣ ಗಂಡು ಎಂದುಕೊಳ್ಳೋಣವೇ? ಅಥವಾ,
ಕುವೆಂಪು ಬಣ್ಣಿಸಿದಂತೆ ಕಣಕ ಗಂಡು, ಹೂರಣ ಹೆಣ್ಣು ಎಂದುಕೊಳ್ಳೋಣವೇ? ಇಂತು, ನವರಾತ್ರಿ ಸ್ಪೆಷಲ್ ಎಂದು ನಿಮ್ಮ ಬಾಯಿಗೆ ಅಲ್ಲ ತಲೆಗೆ ಹೋಳಿಗೆ ಬಡಿಸಿದ್ದೇನೆ!
ಇದನ್ನೂ ಓದಿ: Srivathsa joshi Column: ಮಾತ್ರೆಗಳ ಲೆಕ್ಕವನ್ನು ಮಾತ್ರೆಗಳ ಲೆಕ್ಕದಿಂದಲೇ ಬಿಡಿಸಿದವರು !