ಪ್ರತಿಸ್ಪಂದನ
ಬೆಳ್ಳೆ ಚಂದ್ರಶೇಖರ ಶೆಟ್ಟಿ
ಲೋಕೇಶ್ ಕಾಯರ್ಗ ಅವರ ‘ಗೌಡಾಗೆ ಗೌರವಸ್ಥರು ಬೇಕಾಗಿದ್ದಾರೆ’ ಎಂಬ ಅಂಕಣ ಬರಹವನ್ನು (ವಿಶ್ವವಾಣಿ ಅ.೧೬) ಅವಲೋಕಿಸಿದಾಗ, ನನ್ನ ಪದವಿ ತರಗತಿಯಲ್ಲಿ ಓದಿದ ‘ಸ್ನಾಬೆರಿ’ (Snobber) ಪಾಠದ ನೆನಪಾಯಿತು. ಕನ್ನಡದಲ್ಲಿ ಪ್ರತಿಷ್ಠೆ, ಗೌರವಾತ್ಮಕ ಅಥವಾ ಒಣಜಂಭ ಮೊದಲಾದ ಅರ್ಥದಲ್ಲಿ ಬಳಸಲಾಗುವ ಪದವಿದು. ಇದು ಯಾವ ರೀತಿಯಲ್ಲಿ ದುರುಪಯೋಗಗೊಂಡು ತನ್ನ ಮೂಲಾರ್ಥವನ್ನೇ ಕಳೆದುಕೊಳ್ಳುತ್ತದೆ ಎಂಬುದನ್ನು ವಿವರಿಸಲು ಇಂಗ್ಲಿಷಿನ ‘ಆನರಬಲ್’ (Honourable) ಪದವನ್ನು ಜಪಾನಿನಲ್ಲಿ ಉಪಯೋಗಿಸಿದ ಪರಿಯನ್ನು ಉದಾಹರಣೆಯಾಗಿ ತಿಳಿಸುವ ಪಾಠವಿದು. ಅಲ್ಲಿ ವ್ಯಕ್ತಿಗಳಿಗೆ ಗೌರವಸೂಚಕವಾಗಿ ಬಳಸುವ ‘ಆನರಬಲ್’ ಪದವನ್ನು ಬರುಬರುತ್ತ ‘My honourable umbrella, honourable umbrella stand, honourable shoe,
honourable shoelace ’ ಎಂದೆಲ್ಲಾ ಬಳಸುತ್ತಾ ಹೋದರಂತೆ!
ಲೋಕೇಶ್ ಕಾಯರ್ಗ ಅವರು ಉಲ್ಲೇಖಿಸಿರುವ ‘ಗೌರವ ಡಾಕ್ಟರೇಟ್’ (‘ಗೌಡಾ’) ಎಂಬ ಪದವೂ ಅದೇ ಹಾದಿಯಲ್ಲಿ
ಸಾಗುತ್ತ ತನ್ನ ಅರ್ಥವನ್ನು ಕಳೆದುಕೊಂಡು, ‘ಡಾಕ್ಟರೇಟ್’ ಎಂಬುದು ‘ಡಾಗ್-ರೇಟ್’ ಅಂತ ಆದರೂ ಅಚ್ಚರಿ ಯಿಲ್ಲ. ಅಂಕಣ ದಲ್ಲಿ ತಿಳಿಸಿರುವಂತೆ ವಿಶ್ವವಿದ್ಯಾಲಯಗಳಿಂದ ಹೀಗೆ ಗೌರವಿಸಲ್ಪಡುವ ಬಹುತೇಕ ಸಾಧಕರನ್ನು ಗಮನಿಸಿದಾಗ ಅಚ್ಚರಿಯೊಂದಿಗೆ ಅಸಹ್ಯವೂ ಮೂಡುವುದರ ಜತೆಗೆ, ‘ಗೌಡಾ’ ಪದವಿ ಈ ಮಟ್ಟಕ್ಕೆ ಇಳಿಯ ಬಾರದಿತ್ತು ಎನಿಸುತ್ತದೆ.
‘ಗೌಡಾ’ ಅನ್ನು ‘ದಕ್ಕಿಸಿಕೊಳ್ಳುವ’ ಅನೇಕರಿಗೆ, ಈ ಗೌರವ ಪದವಿಯನ್ನು ಎಲ್ಲಿ ಬಳಸಬಾರದು ಎಂಬ ಬಗ್ಗೆ ಟಿಪ್ಪಣಿ
ನೀಡಬೇಕು ಎಂಬ ಸಲಹೆಯೂ ಸೂಕ್ತವಾಗಿದೆ. ಅನೇಕ ವಿಶ್ವವಿದ್ಯಾಲಯಗಳಿಂದ ಸಾಕಷ್ಟು ಗೌರವ ಡಾಕ್ಟರೇಟ್
ಪದವಿಗಳಿಗೆ ಭಾಜನರಾಗಿರುವ ನ್ಯಾ.ಸಂತೋಷ್ ಹೆಗ್ಡೆಯವರು ಈ ‘ಪದಬಳಕೆ’ಯ ಬಗ್ಗೆ ಮಾತನಾಡುತ್ತಾ
(ಲೇಖನದಲ್ಲಿ ಉಲ್ಲೇಖಿಸಿ ರುವಂತೆ), ‘ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನುಸಾರ ಗೌರವ ಡಾಕ್ಟರೇಟ್
ಅನ್ನು ಹೆಸರಿನೊಂದಿಗೆ ಸೇರಿಸಿಕೊಳ್ಳುವುದು ಸರಿಯಲ್ಲ’ ಎಂಬ ಅಭಿಪ್ರಾಯವನ್ನು ಅನೇಕ ಸಲ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ, ಇಂಗ್ಲಿಷ್‌ನ ‘ಪಿಎಚ್‌ಡಿ’ ಪದದ ಬದಲಿಗೆ ‘ತಜ್ಞಶ್ರೀ’ ಅಥವಾ ‘ವಿಷಯತಜ್ಞ’ ಹಾಗೂ ಗೌರವ ಡಾಕ್ಟರೇಟ್ ಪದಕ್ಕೆ ಬದಲಾಗಿ ‘ಗೌರವಶ್ರೀ’ ಮುಂತಾದ ಪದವನ್ನು ಬಳಸುವುದು ಸೂಕ್ತವೆಂಬ ನನ್ನ ಸಲಹೆ ಅನೇಕ
ವರ್ಷಗಳ ಹಿಂದೆ ‘ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು.
(ಲೇಖಕರು ಹವ್ಯಾಸಿ ಬರಹಗಾರರು)
ಇದನ್ನೂ ಓದಿ: Lokesh Kayarga Column: ತಿರಸ್ಕರಿಸುವುದು ಸುಲಭ, ಮುಂದೇನು ?