ವಿದ್ಯಮಾನ
ವಿನಾಯಕ ವೆಂ. ಭಟ್ಟ, ಅಂಬ್ಲಿಹೊಂಡ
ಭಾರತದೊಳಗಿನ ಹುಳುಕುಗಳ ಕುರಿತು ವಿದೇಶಗಳಲ್ಲಿ ಮಾತಾಡುವ ಚಾಳಿಯನ್ನು ರೂಢಿಸಿಕೊಂಡಿರು ವವರು ರಾಹುಲ್ ಮಾತ್ರವೇ ಅಲ್ಲ; ಇಂಥ ಅತಿ ಬುದ್ಧಿವಂತರ ಪಡೆ ಭಾರತದಲ್ಲಿ ಹಿಂದೆಯೂ ಇತ್ತು, ಈಗಲೂ ಇದೆ. ಭಾರತದ ಬಡತನ, ಕೊಳೆಗೇರಿಗಳು, ಜಾತಿವ್ಯವಸ್ಥೆ ಕುರಿತು ತಪ್ಪಾಗಿ ಅರ್ಥೈಸುವುದು ಕೆಲವರಿಗೆ ಹವ್ಯಾಸವಾಗಿಬಿಟ್ಟಂತೆ ಕಾಣುತ್ತದೆ.
ತುರ್ತು ಪರಿಸ್ಥಿತಿಯ ಹೇರಿಕೆಯ ನಂತರ ನಡೆದ ಚುನಾವಣೆಯಲ್ಲಿ ಮೊರಾರ್ಜಿ ದೇಸಾಯಿಯವರ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಇಂದಿರಾ ಗಾಂಧಿಯವರನ್ನು ಬಂಧಿಸಿ ಜೈಲಿಗೆ ಕಳಿಸಲಾಗಿತ್ತು. ಅವರು ಜೈಲಿನಿಂದ ಬಿಡುಗಡೆಯಾದ ನಂತರ ಬ್ರಿಟನ್ ಪ್ರವಾಸದಲ್ಲಿದ್ದಾಗ ಅಲ್ಲಿನ ಪತ್ರಕರ್ತರೊಬ್ಬರು, “ಭಾರತದ ಜೈಲುಗಳ ಪರಿಸ್ಥಿತಿ ಹೇಗಿದೆ? ನಿಮ್ಮ ಜೈಲುವಾಸದ ಅನುಭವ ಹೇಗಿತ್ತು?” ಎಂದು ಕೇಳಿದರು.
ಆಗ ಇಂದಿರಾ, “ನನ್ನ ದೇಶದ ಕುರಿತು ನನ್ನಿಂದ ಕೆಟ್ಟ ಅಭಿಪ್ರಾಯವನ್ನು ನಿರೀಕ್ಷಿಸಬೇಡಿ” ಎಂದು ನೇರವಾಗಿ ಉತ್ತರಿಸಿ, ಭಾರತದ ಕುರಿತು ನಕಾರಾತ್ಮಕ ಪ್ರತಿಕ್ರಿಯೆಯನ್ನು ಬಯಸಿದ್ದ ಆ ಪತ್ರಕರ್ತರಿಗೆ ನಿರಾಶೆ ಉಂಟು ಮಾಡಿದ್ದರು. ಕೆಲ ವರ್ಷದ ಹಿಂದಿನ ತಮ್ಮ ವಿದೇಶ ಪ್ರವಾಸವೊಂದರಲ್ಲಿ ಭಾರತದ ಬಗ್ಗೆ ಎಂದಿನಂತೆ ಕೆಟ್ಟದಾಗಿ ಮಾತನಾಡಿದ್ದ ರಾಹುಲ್ ಗಾಂಧಿಯವರಿಗೆ ಅಲ್ಲಿನ ಹಿರಿಯ ಪತ್ರಕರ್ತರೊಬ್ಬರು ಈ ವಿಷಯವನ್ನು ತಿಳಿಸುತ್ತಾ, “ನೀವು ನಿಮ್ಮ ಅಜ್ಜಿಯ ಆದರ್ಶದಿಂದಲಾದರೂ ಪಾಠ ಕಲಿಯುತ್ತೀರಿ ಎಂದು ಭಾವಿಸುತ್ತೇನೆ” ಎಂದು ನಯವಾಗಿ ತಿಳಿಸಿ, ರಾಹುಲ್ ಕಕ್ಕಾಬಿಕ್ಕಿಯಾಗುವಂತೆ ಮಾಡಿದ್ದರು.
ರಾಹುಲರ ಇತ್ತೀಚಿನ ಅಮೆರಿಕ ಭೇಟಿಯವರೆಗಿನ ಬಹುತೇಕ ವಿದೇಶ ಪ್ರವಾಸಗಳಲ್ಲಿ ಅವರಾಡಿದ ಭಾರತ-ವಿರೋಽ ಮಾತುಗಳನ್ನು ಕೇಳಿದಾಗ, ಅವರು ಪಾಠ ಕಲಿತಂತೇನೂ ಕಾಣುತ್ತಿಲ್ಲ ಬಿಡಿ! ಹೀಗೆ, ಭಾರತದೊಳಗಿನ ಹುಳುಕುಗಳ ಕುರಿತು ವಿದೇಶಗಳಲ್ಲಿ ಮಾತಾಡುವ ಚಾಳಿಯನ್ನು ರೂಢಿಸಿಕೊಂಡಿರುವವರು ರಾಹುಲ್ ಮಾತ್ರವೇ ಅಲ್ಲ; ದೇಶದ ಕುರಿತು ಅವಹೇಳನಕಾರಿಯಾಗಿ ವಕ್ತವ್ಯ ನೀಡುವ ಅತಿಬುದ್ಧಿವಂತರ ಪಡೆ ಭಾರತದಲ್ಲಿ ಹಿಂದೆಯೂ ಇತ್ತು, ಈಗಲೂ ಇದೆ.
ಭಾರತದ ಬಡತನ, ಕೊಳೆಗೇರಿಗಳು, ಜಾತಿವ್ಯವಸ್ಥೆ, ಧರ್ಮ ಅಸಹಿಷ್ಣುತೆ, ಕೋಮುವಾದ ಮತ್ತು ಇಲ್ಲಿನ ಪ್ರಾಚೀನ ನಂಬಿಕೆಗಳ ಕುರಿತು ತಪ್ಪಾಗಿ ಅರ್ಥೈಸಿ, ಸಿನಿಮಾಗಳನ್ನು ಮಾಡಿ ಪ್ರಶಸ್ತಿ ಗಳಿಸಿಕೊಳ್ಳುವುದು ಅಥವಾ ಅಲ್ಲಿನ ಮಾಧ್ಯಮ ಸಂವಾದಗಳಲ್ಲಿ ಕುಳಿತು ಕಥೆ ಹೇಳುವುದು ಕೆಲವರಿಗೆ ಹವ್ಯಾಸವಾಗಿ ಬಿಟ್ಟಂತೆ ಕಾಣುತ್ತದೆ. ಇದು ಇಂಥವರ ಮನಸ್ಥಿತಿಯ ಮತ್ತು ಸಂಸ್ಕಾರದ ಸಮಸ್ಯೆಯೇ ಹೊರತು ಮತ್ತೇನಲ್ಲ. ಭಾರತ ಅಂತಲ್ಲ, ಎಲ್ಲ ದೇಶ ಗಳಲ್ಲೂ ಹುಳುಕು- ಕೊಳಕು ಇದ್ದೇ ಇರುತ್ತವೆ; ಆದರೆ ಅವನ್ನು ಎಲ್ಲಿ ಹೇಳಬೇಕೆನ್ನುವುದು ಪ್ರಶ್ನೆ. ಇಂಥ
ನ್ಯೂನತೆ ಗಳ ಕುರಿತು ಅವರವರ ದೇಶದಲ್ಲಿ ಪ್ರಚುರಪಡಿಸಿ, ಜನಾಭಿಪ್ರಾಯ ಮೂಡಿಸಿ ಆಳುಗರ ಗಮನ ಸೆಳೆದು ಸರಿಪಡಿಸಿಕೊಳ್ಳಬೇಕಿರುವುದು ಸರಿಯಾದ ಮಾರ್ಗ. ಅದನ್ನು ಬಿಟ್ಟು, ಭಾರತದ ಜನನಾಯಕನೊಬ್ಬ ಅಮೆರಿಕದ ನೆಲದಲ್ಲಿ ನಿಂತು, “ಭಾರತದ ಆದಿವಾಸಿಗಳು ಮುಖ್ಯವಾಹಿನಿಯಲ್ಲಿ ಇನ್ನೂ ಸ್ಥಾನ ಪಡೆದಿಲ್ಲ; ‘ಮಿಸ್ ಇಂಡಿಯಾ’ ಪಟ್ಟಿಯಲ್ಲಿ ಹಿಂದುಳಿದ ವರ್ಗದವರು ಕಾಣಸಿಗುವುದಿಲ್ಲ” ಎಂದರೆ, ಪಾಪ!
ಅಮೆರಿಕದವರು ಅಥವಾ ಅಮೆರಿಕದಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರು ಏನು ಮಾಡಲಾದೀತು ಹೇಳಿ? ನಮ್ಮ ಮನೆಯ ಜಗಳವನ್ನು ಪಕ್ಕದ ಮನೆಯವರ ಮುಂದೆ ಹೇಳಿಕೊಂಡು ಅತ್ತರೆ, ನಮ್ಮ ಮನೆಯ ಮರ್ಯಾದೆ ಬೀದಿಪಾಲಾಗುವುದಲ್ಲದೆ, ಪಕ್ಕದ ಮನೆಯವರು ಅದನ್ನು ದುರುಪಯೋಗಪಡಿಸಿಕೊಳ್ಳುವ ಸಂಭವವಿರುತ್ತದೆ ಎಂಬ ಕನಿಷ್ಠ ಜ್ಞಾನವಾದರೂ ಇಂಥವರಿಗೆ ಇರಬೇಕಲ್ಲವೇ? ದೇಶದ ರಾಜಕೀಯ, ಸಾಮಾಜಿಕ ಅಥವಾ ಆರ್ಥಿಕ ವಲಯಗಳಲ್ಲಿ ನೂರಾರು ಕೊರತೆಗಳಿದ್ದರೂ, ಹೇಳುವ ಮನಸ್ಸಿದ್ದರೆ ಒಳ್ಳೆಯ ಸಾವಿರಾರು ವಿಷಯಗಳೂ
ಇರು ತ್ತವೆ. ವಿದೇಶಗಳಲ್ಲಿ ನಾವು ಹೇಳಬೇಕಾದ್ದು ನಮ್ಮ ಸಾಹಸ-ಸಾಧನೆಗಳ ಕಥೆಯನ್ನು ಮಾತ್ರ; ಅದರಿಂದ
ಹೇಳುವವನಿಗೂ, ಅವನ ದೇಶಕ್ಕೂ ಗೌರವ. ಹಾಗೆ, ಆಧುನಿಕ ಭಾರತದ ಸಾಧನೆಗಳ ಕುರಿತು ಅಂಕಿ-ಅಂಶ ಗಳೊಂದಿಗೆ, ಅಭಿಮಾನ-ಹೆಮ್ಮೆಗಳಿಂದ ವಿದೇಶಿ ವೇದಿಕೆಗಳಲ್ಲಿ ನಿರರ್ಗಳವಾಗಿ ಹೇಳುವ ಪಾಲ್ಕಿ ಶರ್ಮಾ
ಉಪಾಧ್ಯಾಯರಂಥವರೂ ದೇಶದಲ್ಲಿರುವುದು ಸಮಾಧಾನದ ಸಂಗತಿ.
ದೇಶದ ವಸ್ತುನಿಷ್ಠ ಪತ್ರಕರ್ತರಲ್ಲೊಬ್ಬರಾದ ಈಕೆ ಪ್ರತಿಷ್ಠಿತ ‘ಆಕ್ಸ್ ಫರ್ಡ್ ಯೂನಿಯನ್’ ಚರ್ಚೆಯೊಂದರಲ್ಲಿ ಪಾಲ್ಗೊಂಡು, ಬದಲಾಗುತ್ತಿರುವ ಭಾರತದ ವರ್ತಮಾನ ಮತ್ತು ಭವಿಷ್ಯದ ದಿಕ್ಕನ್ನು ಬದಲಾಯಿಸುವ ನಿರ್ಧಾರಗಳ ಕುರಿತು ತಮ್ಮ ಭಾಷಣದಲ್ಲಿ ಪ್ರಖರವಾಗಿ ಪ್ರಸ್ತಾಪಿಸಿರುವುದು ಪ್ರಧಾನಿ ಮೋದಿಯವರೂ ಸೇರಿದಂತೆ ಅನೇಕ ದೇಶಪ್ರೇಮಿಗಳ ಪ್ರಶಂಸೆಗೆ ಪಾತ್ರವಾಗಿದೆ. ಹಣಕಾಸು ವಲಯದ ಬೆಳವಣಿಗೆ, ಡಿಜಿಟಲ್ ಕ್ರಾಂತಿ, ಜಾಗತಿಕ ರಾಜತಾಂತ್ರಿಕತೆಯ ಗಮನಾರ್ಹ ಪ್ರಗತಿ ಮುಂತಾದ ಸಕಾರಾತ್ಮಕ ವಿಷಯಗಳನ್ನು ಶರ್ಮಾ ಅವರು ಅಲ್ಲಿ ಅಭಿಮಾನದಿಂದ ಚರ್ಚಿಸುತ್ತಾರೆ, ವಿಶ್ವವೇದಿಕೆಯಲ್ಲಿ ಹೆಚ್ಚಿದ ಭಾರತದ ವಿಶ್ವಾಸಾರ್ಹತೆಯನ್ನು ಎತ್ತಿ ತೋರಿಸು ತ್ತಾರೆ, ದೇಶದ ಮುಂದಿರುವ ಸವಾಲುಗಳು ಮತ್ತು ಅವಕಾಶಗಳನ್ನೂ ಸಮರ್ಥವಾಗಿ ವ್ಯಾಖ್ಯಾನಿಸುತ್ತಾರೆ.
೨೦೧೪ರಿಂದೀಚೆಗೆ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತವು ‘ವಿಶ್ವಗುರು’ ಪಟ್ಟಕ್ಕೇರುತ್ತಿದೆ ಮತ್ತು ತನ್ನ ಉತ್ಕರ್ಷವನ್ನು ಬಯಸುತ್ತಿದೆ ಎನ್ನುತ್ತಾರೆ, ಭಾರತದ ಪ್ರಗತಿಯ ಸ್ಪಷ್ಟ ಚಿತ್ರಣವನ್ನು ಚಿತ್ರಿಸುತ್ತಾರೆ.
ರಸ್ತೆಬದಿಯ ವ್ಯಾಪಾರಿಗಳು ಡಿಜಿಟಲ್ ಪಾವತಿಗಳಿಗಾಗಿ ‘ಕ್ಯೂಆರ್ ಕೋಡ್’ಗಳನ್ನು ಬಳಸುವುದರಿಂದ ಮೊದಲ್ಗೊಂಡು ಇತರ ಅಭಿವೃದ್ಧಿ ಸಾಧನೆಗಳನ್ನು ಆಳವಾಗಿ ಅವಲೋಕಿಸುತ್ತಾ, ಭಾರತದ ಬೆಳವಣಿಗೆಯ ನಿರ್ಣಾಯಕ ಅಂಶಗಳನ್ನು ಎತ್ತಿ ತೋರಿಸುತ್ತಾರೆ. “ಡಿಜಿಟಲ್ ಪಾವತಿಗಳ ವ್ಯಾಪಕ ಅಳವಡಿಕೆಯು ಆರ್ಥಿಕ ಸೇರ್ಪಡೆಯಲ್ಲಿ ಭಾರತ ಸಾಧಿಸಿದ ಗಮನಾರ್ಹ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ; ಮೊಬೈಲ್ ಬ್ಯಾಂಕಿಂಗ್
ಲಕ್ಷಾಂತರ ಜನರಿಗೆ ಲಭ್ಯವಾಗುವುದರೊಂದಿಗೆ, ಬೀದಿಬದಿಯ ವ್ಯಾಪಾರಿಗಳೂ ಈಗ ಔಪಚಾರಿಕ ಆರ್ಥಿಕತೆಯ
ಭಾಗವಾಗಿದ್ದಾರೆ. ದೇಶದಲ್ಲಿನ ಇಂಟರ್‌ನೆಟ್ ಕ್ರಾಂತಿಯು ಬಳಕೆದಾರರ ಸಂಖ್ಯೆಯನ್ನು ಕೇವಲ 10 ವರ್ಷಗಳಲ್ಲಿ
ಶೇ.15 ರಿಂದ 48ಕ್ಕೆ ಏರಿಸಿದ್ದು, ಇದು ನಾಗರಿಕ ಮಾಹಿತಿ ಮತ್ತು ಸೇವೆಗಳನ್ನು ಅಭೂತಪೂರ್ವವಾಗಿ ಸಶಕ್ತ ಗೊಳಿಸುತ್ತದೆ” ಎಂದು ಶರ್ಮಾ ಹೇಳುತ್ತಾರೆ. ಮಾತ್ರವಲ್ಲದೆ, ವಿಮಾನ ನಿಲ್ದಾಣ, ಸಂಚಾರ ಮತ್ತು ಮೂಲಸೌಕರ್ಯ ಗಳಲ್ಲಿನ ಅಭಿವೃದ್ಧಿಯ ಹೆಚ್ಚಳವು, ಬೆಳೆಯುತ್ತಿರುವ ಭಾರತದ ಸಂಪರ್ಕ ಮತ್ತು ನಗರ-ಗ್ರಾಮೀಣ ಪ್ರದೇಶಗಳ ಅಂತರವನ್ನು ತಗ್ಗಿಸುವುದರ ದ್ಯೋತಕವಾಗಿದೆ ಎನ್ನುತ್ತಾರೆ.
ಈ ಪ್ರಗತಿಗಳು ಜಾಗತಿಕವಾಗಿ ಭಾರತದ ಗುರುತನ್ನು ಹೇಗೆ ಮರುರೂಪಿಸುತ್ತಿವೆ, ಜಾಗತಿಕ ನಾಯಕತ್ವಕ್ಕೆ ಸಿದ್ಧವಾಗಿರುವ ಆತ್ಮವಿಶ್ವಾಸ ಮತ್ತು ಸ್ಥಿತಿಸ್ಥಾಪಕ ರಾಷ್ಟ್ರವಾಗಿ ಭಾರತ ಹೇಗೆ ರೂಪಾಂತರಗೊಳ್ಳುತ್ತಿದೆ ಎಂದು ಬಿಡಿಸಿ ಬಿಡಿಸಿ ಹೇಳುತ್ತಾರೆ. ಪಾಲ್ಕಿ ಶರ್ಮಾರ ಈ ಭಾಷಣವು ಭಾರತದ ಗಡಿಗಳನ್ನು ಮೀರಿ ದೇಶವು ಪ್ರತಿನಿಽಸುವ ಹಲವು ಪ್ರಮುಖ ವಿಷಯಗಳನ್ನು ಎತ್ತಿ ತೋರಿಸಿದೆ. ಅವರು, “ಭಾರತದ ಬೆಳವಣಿಗೆಯ ವಿಧಾನವು ಆರ್ಥಿಕ ಸೂಚಕಗಳಿಗಷ್ಟೇ ಸೀಮಿತವಾಗಿಲ್ಲ, ಅದು ಪ್ರತಿ ವ್ಯಕ್ತಿ ಮತ್ತು ಸಮುದಾಯಗಳನ್ನು ಸಬಲೀಕರಿಸುವ ಬಗ್ಗೆ ಗುರಿಯಿಟ್ಟಿದೆ. ಹಣಕಾಸು ಸೇವೆಗಳು ಮತ್ತು ಡಿಜಿಟಲ್ ಸಾಧನಗಳಿಗೆ ಸರ್ವರಿಗೂ ಅವಕಾಶ ನೀಡುವ ಮೂಲಕ ಭಾರತವು ತನ್ನ ನಾಗರಿಕರಿಗೆ ರಾಷ್ಟ್ರದ ಪ್ರಗತಿಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಅನುವುಮಾಡಿಕೊಡುತ್ತಿದೆ”
ಎನ್ನುತ್ತಾರೆ. ಸಂಪ್ರದಾಯ ಮತ್ತು ಆಧುನಿಕತೆಯನ್ನು ಸಮೀಕರಿಸಿ, ಭಾರತದ ಅಭಿವೃದ್ಧಿಯ ಪಯಣದಲ್ಲಿ ಸಂಪ್ರದಾಯವನ್ನು ಆಧುನಿಕತೆಯೊಂದಿಗೆ ಸಮತೋಲನಗೊಳಿಸುವುದಕ್ಕಿರುವ ಮಹತ್ವವನ್ನು ಒತ್ತಿಹೇಳುತ್ತಾರೆ.
ತಾಂತ್ರಿಕ ಪ್ರಗತಿಯನ್ನು ಅಪ್ಪುವಾಗ ದೇಶವು ತನ್ನ ಸಾಂಸ್ಕೃತಿಕ ಪರಂಪರೆಯನ್ನು ಮರೆಯಬಾರದು ಮತ್ತು ವೈವಿಧ್ಯವನ್ನು ಹೇಗೆ ಒಂದು ಶಕ್ತಿಯಾಗಿ ಬಳಸಿಕೊಳ್ಳುತ್ತಿದ್ದೇವೆ ಎಂಬುದನ್ನು ಸುಂದರವಾಗಿ ವಿವರಿಸುತ್ತಾರೆ. ಭಾರತದ ರಾಜತಾಂತ್ರಿಕ ಪ್ರಯತ್ನಗಳನ್ನು ಶ್ಲಾಘಿಸುತ್ತಾ, “ಜಗತ್ತಿನ ಪಾಶ್ಚಿಮಾತ್ಯ ಮತ್ತು ದಕ್ಷಿಣ ಭಾಗದ ಎರಡೂ ದೇಶಗಳೊಂದಿಗೆ ಬಲವಾದ ಸಂಬಂಧವನ್ನು ಕಾಪಾಡಿಕೊಳ್ಳುವ ಭಾರತದ ಸಾಮರ್ಥ್ಯವು ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿನ ವಿಚಕ್ಷಣತೆಗೆ ಮತ್ತು ಅದರ ಸೂಕ್ಷ್ಮ ಕಾರ್ಯವಿಧಾನಕ್ಕೆ ಉದಾಹರಣೆಯಾಗಿದೆ” ಎನ್ನುತ್ತಾರೆ.
ಬದ್ಧವೈರಿಗಳಾದ ಅಮೆರಿಕ ಮತ್ತು ರಷ್ಯಾ ಎರಡೂ ದೇಶಗಳೊಂದಿಗೆ ಸೌಹಾರ್ದ ಸಂಬಂಧವನ್ನು ಸಾಧಿಸಿರುವುದು ಸಣ್ಣ ವಿಷಯವಲ್ಲ. ಇತ್ತೀಚಿನ ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ತಟಸ್ಥ ನಿಲುವನ್ನು ತಳೆದಿದ್ದ ಭಾರತ ವನ್ನು ಈಗ ಎರಡೂ ದೇಶಗಳು ಸಂಧಾನಕ್ಕಾಗಿ ಪ್ರಾರ್ಥಿಸುತ್ತಿರುವುದು, ನಮ್ಮ ದೇಶದ ನಾಯಕತ್ವದ ಮೇಲೆ ಅವು ಇಟ್ಟಿರುವ ವಿಶ್ವಾಸವನ್ನು ತೋರಿಸುತ್ತವೆ ಎಂದು ಅಭಿಪ್ರಾಯಪಡುತ್ತಾರೆ.
ಆಧುನಿಕ ಭಾರತದ ಸಾಧನೆಗಳನ್ನು ಹೊಗಳುವುದರ ಜತೆಜತೆಗೆ, ಮೋದಿ ನೇತೃತ್ವದ ಆಡಳಿತವು ಎದುರಿಸುತ್ತಿರುವ
ಟೀಕೆಗಳನ್ನು, ವಿಶೇಷವಾಗಿ ಕೃಷಿ ಕ್ಷೇತ್ರ, ಧಾರ್ಮಿಕ ಉದ್ವಿಗ್ನತೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿನ ಸವಾಲುಗಳನ್ನು ಶರ್ಮಾ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುತ್ತಾರೆ. “ಭಾರತೀಯರು ಡಿಜಿಟಲ್ ಸಾಧನಗಳನ್ನು ಅಳವಡಿಸಿಕೊಳ್ಳುವ, ಸವಾಲುಗಳನ್ನು ಜಯಿಸುವ ಮತ್ತು ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುವ ಕಥೆಗಳು, ರಾಷ್ಟ್ರದ ಶಾಶ್ವತ ಶಕ್ತಿ ಮತ್ತು ಸ್ಪೂರ್ತಿಗೆ ಉದಾಹರಣೆಯಾಗಿವೆ; ಭಾರತವು ಸತತವಾಗಿ ವಿಕಸನಗೊಳ್ಳುತ್ತಲೇ ಇರುವಾಗ, ಭರವಸೆ ಮತ್ತು ಪ್ರಗತಿಯನ್ನು ಪ್ರೇರೇಪಿಸುವ ಸಾಧನೆಗಳನ್ನು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ ಅದು ತನ್ನ ನ್ಯೂನತೆಗಳನ್ನೂ ಪರಿಹರಿಸಿಕೊಳ್ಳಬೇಕಿದೆ” ಎನ್ನುತ್ತಾ ತಮ್ಮ ಭಾಷಣವನ್ನು ಮುಗಿಸುತ್ತಾರೆ.
ಅಂತೂ, ವಿದೇಶಿ ನೆಲದಲ್ಲಿ ನಿಂತು ಭಾರತದ ಬಗ್ಗೆ ಮಾತನಾಡುವಾಗ, ರಾಜಕೀಯ ಸಿದ್ಧಾಂತ, ಭಾಷೆ, ಜಾತಿ,
ಧರ್ಮಗಳ ನೆಲೆಗಟ್ಟನ್ನು ಮೀರಿ, ದೇಶದ ಕುರಿತು ಹೆಮ್ಮೆಯಿಂದ ಹೇಳಲಿಕ್ಕಿರುವುದನ್ನು ಮತ್ತು ಹೇಳಲೇ ಬೇಕಾಗಿ ರುವುದನ್ನು ಹೇಗೆ ಪ್ರಸ್ತುತಪಡಿಸಬೇಕು ಎಂಬುದಕ್ಕೆ ಪಾಲ್ಕಿ ಶರ್ಮಾರ ಭಾಷಣ ದೇಶದೊಳಗಣ ಕುಹಕಿಗಳಿಗೆ ಮಾದರಿಯಾಗಬೇಕಿದೆ.
130 ವರ್ಷಗಳ ಹಿಂದೆ ಶಿಕಾಗೋದಲ್ಲಿ ನಡೆದ ವಿಶ್ವದ ಸರ್ವಧರ್ಮಗಳ ಸಂಸತ್ತಿನಲ್ಲಿ ಮಾಡಿದ ಅದ್ಭುತ ಭಾಷಣ
ದಿಂದಾಗಿ ಸ್ವಾಮಿ ವಿವೇಕಾನಂದರು ಇಂದು ವಿಶ್ವಖ್ಯಾತರಾಗಿದ್ದಾರೆ ಎಂಬುದು ತಿಳಿದ ವಿಷಯವೇ. ತಮ್ಮ ಆ ಸಣ್ಣ
ಭಾಷಣದಲ್ಲಿ ಅವರು ನಿಜವಾದ ಭಾರತೀಯ ಸಂಸ್ಕೃತಿಯನ್ನೂ, ಸನಾತನ ಹಿಂದೂಧರ್ಮವನ್ನೂ ಅಮೆರಿಕಕ್ಕೆ ಹೆಮ್ಮೆಯಿಂದ ಪರಿಚಯಿಸಿದ್ದರು. ಹಾಗಾಗಿ ವಿವೇಕಾನಂದರನ್ನು, ಭಾರತದ ಪ್ರಾಚೀನ ವೇದಾಂತ ಮತ್ತು ಯೋಗ ವನ್ನು ಪಾಶ್ಚಾತ್ಯರಿಗೆ ಸುಲಭವಾಗಿ ಅರ್ಥವಾಗುವಂತೆ ಪರಿಚಯಿಸಿದವರಲ್ಲಿ ಪ್ರಮುಖರು ಎಂದು ಇಂದಿಗೂ ಪರಿಗಣಿಸಲಾಗುತ್ತದೆ ಮತ್ತು ಹಿಂದೂಧರ್ಮದ ‘ಪ್ರೊಫೈಲ್’ ಅನ್ನು ವಿಶ್ವಮಟ್ಟಕ್ಕೆ ಏರಿಸಿದ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ. ವಿವೇಕಾನಂದರು ಆ ಸಮ್ಮೇಳನದಲ್ಲಿ, “ದೂರದ ದೇಶಗಳಿಂದ ಈ ಸಮ್ಮೇಳನಕ್ಕೆ ಬಂದಿರುವ ಅನೇಕ ಪ್ರತಿನಿಧಿಗಳು, ತಮ್ಮ ದೇಶದ ಸಹಿ ಷ್ಣುತೆಯ ಕಲ್ಪನೆಯನ್ನು ಬೇರೆ ಬೇರೆ ದೇಶಗಳಿಗೆ ಕೊಂಡೊಯ್ಯುವ ಗೌರವವನ್ನು ಪಡೆದಿರಬಹುದು; ಆದರೆ, ಜಗತ್ತಿಗೆ ಸಹಿಷ್ಣುತೆ ಮತ್ತು ಸಾರ್ವತ್ರಿಕ ಸ್ವೀಕಾರದ ಮನೋಭಾವ
ಎರಡನ್ನೂ ಕಲಿಸಿದ ದೇಶಕ್ಕೆ ಮತ್ತು ಧರ್ಮಕ್ಕೆ ಸೇರಿದವನು ನಾನು ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ” ಎನ್ನುತ್ತಾ, “ನಾವು ಸಾರ್ವತ್ರಿಕ ಸಹಿಷ್ಣುತೆಯನ್ನಷ್ಟೇ ಪಾಲಿಸದೇ, ಎಲ್ಲಾ ಧರ್ಮಗಳನ್ನೂ ಸತ್ಯವೆಂದು ಒಪ್ಪಿಕೊಳ್ಳುವ ಜನಾಂಗಕ್ಕೆ ಸೇರಿದವರಾಗಿದ್ದೇವೆ” ಎಂದು ಎದೆಯುಬ್ಬಿಸಿ ಹೇಳುತ್ತಾರೆ.
“ಎಲ್ಲಾ ಧರ್ಮಗಳ ಮತ್ತು ಭೂಮಿಯ ಮೇಲಿನ ಎಲ್ಲಾ ರಾಷ್ಟ್ರಗಳ ನಿರಾಶ್ರಿತರಿಗೆ ಅತ್ಯಂತ ಪ್ರಾಂಜಲ ಮನಸ್ಸಿನಿಂದ
ಆಶ್ರಯ ನೀಡಿದ ರಾಷ್ಟ್ರಕ್ಕೆ ಸೇರಿದವನು ನಾನು ಎಂದು ಹೆಮ್ಮೆಪಡುತ್ತೇನೆ. ರೋಮನ್ ದಬ್ಬಾಳಿಕೆಯಿಂದ ನಮ್ಮ
ಪವಿತ್ರ ದೇವಾಲಯವು ಛಿದ್ರಗೊಂಡ ವರ್ಷವೇ ದಕ್ಷಿಣ ಭಾರತಕ್ಕೆ ಬಂದು ನಮ್ಮೊಂದಿಗೆ ಆಶ್ರಯ ಪಡೆದ ಇಸ್ರೇಲಿಗರ
ಅತ್ಯಂತ ಪವಿತ್ರ ಅವಶೇಷಗಳನ್ನು ನಮ್ಮ ಮಡಿಲಲ್ಲಿ ಇಂದಿಗೂ ಒಟ್ಟುಗೂಡಿಸಿಕೊಂಡಿದ್ದೇವೆ; ಭವ್ಯವಾದ
ಜೊರಾಸ್ಟ್ರಿ ಯನ್ ಅವಶೇಷಗಳಿಗೆ ಆಶ್ರಯ ನೀಡಿ ಪೋಷಿಸುತ್ತಿರುವ ಧರ್ಮಕ್ಕೆ ಸೇರಿದವನು ನಾನು ಎನ್ನಲು
ಹೆಮ್ಮೆಪಡುತ್ತೇನೆ” ಎನ್ನುತ್ತಾರೆ. ವಿದೇಶದಲ್ಲಿ ನಿಂತು ದೇಶದ ಕೀರ್ತಿಪತಾಕೆ ಹಾರಿಸಿ, ಭಾರತದ ಕಡೆಗೆ ಜಗತ್ತಿನ ಗಮನ
ತಿರುಗುವಂತೆ ಮಾಡಿದ ಅವರ ಭಾಷಣವು ಇಂದಿನ ಛಿದ್ರಾಕಾಂಕ್ಷಿಗಳಿಗೆ ಒಂದು ಪಾಠವಾಗಬೇಕಿದೆ. ಸ್ವಾಮಿ ವಿವೇಕಾ
ನಂದರ ಕಾಲದಲ್ಲಿನ ಭಾರತವು ಬ್ರಿಟಿಷರ ಆಳ್ವಿಕೆಯಲ್ಲಿ ದಾಸ್ಯದಲ್ಲಿ ದಿನದೂಡುತ್ತಿತ್ತು, ಆಗ ಎಲ್ಲವೂ ಸರಿಯಿರಲಿಲ್ಲ.
ಹಾಗೆ ನೋಡಿದರೆ, ಭಾರತವು ಒಂದು ಏಕೀಕೃತ ದೇಶವಾಗಿ ಜಗತ್ತಿಗೆ ಕಾಣಿಸುತ್ತಿರಲಿಲ್ಲ. ಆದಾಗ್ಯೂ ವಿವೇಕಾನಂದರು,
ತಮ್ಮ ಮಾತೃಭೂಮಿಯ ಇತಿಹಾಸ, ಸಂಸ್ಕೃತಿಯ ಕುರಿತು ಹೆಮ್ಮೆಯಿಂದ ಹೇಳಲೇಬೇಕಾದ ಸತ್ಯಗಳನ್ನಷ್ಟೇ ಹೇಳಿ ತಮ್ಮ ಗೌರವವನ್ನು ಹೆಚ್ಚಿಸಿಕೊಂಡಿದ್ದರ ಜತೆಗೆ ಜಗತ್ತಿನ ಸಮ್ಮುಖದಲ್ಲಿ ದೇಶದ ಘನತೆಯನ್ನೂ ನೂರ್ಮಡಿ ಗೊಳಿಸಿದ್ದರು. ಇಂದು, ಸ್ವತಂತ್ರ ಭಾರತದ ಸವಲತ್ತುಗಳನ್ನು ಅನುಭವಿಸುತ್ತಿರುವ ನಾವು, ಅನ್ಯದೇಶದ ನೆಲದಲ್ಲಿ ನಿಂತು ಅಪಪ್ರಚಾರಕ್ಕೆ ತೊಡಗಿದರೆ, ಉಂಡಮನೆಯ ಗಳುವನ್ನು ಎಣಿಸಿದಂತಾಗುವುದಿಲ್ಲವೇ?
ಎಲ್ಲಕ್ಕೂ ಮಿಗಿಲಾಗಿ, ಕಾರಣಾಂತರದಿಂದ ವಿದೇಶದಲ್ಲಿ ನೆಲೆಸಿದ್ದರೂ ಮಾತೃಭೂಮಿಯ ಜತೆಗೆ ಕರುಳುಬಳ್ಳಿಯ
ಬಾಂಧವ್ಯ ಹೊಂದಿರುವ ಅಲ್ಲಿನ ಭಾರತೀಯ ಮೂಲದ ಜನರು, ಭಾರತದಿಂದ ಬರುವ ರಾಜಕೀಯ, ಧಾರ್ಮಿಕ
ಮತ್ತು ಸಾಮಾಜಿಕ ಧುರೀಣರುಗಳಿಂದ ದೇಶದ ಕುರಿತು ಒಳ್ಳೆಯ ಮಾತನ್ನು ಕೇಳಲು ಇಚ್ಛಿಸುತ್ತಾರೆ. ಅಮೆರಿಕ ಮುಂತಾದ ದೇಶಗಳಲ್ಲಿ, ಭಾರತದ ಯಶೋಗಾಥೆಗಳನ್ನು ಸಾರುವ ಪ್ರಧಾನಿ ಮೋದಿಯವರ ಭಾಷಣಗಳನ್ನು ಕೇಳಲು ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವುದು ಇದಕ್ಕೆ ಪ್ರತ್ಯಕ್ಷ ಸಾಕ್ಷಿ.
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)
ಇದನ್ನೂ ಓದಿ: Vinayaka M Bhatta, Amblihonda Column: ಹೊಸಚಿಗುರು ಎನ್ನುವುದು ಹಳೆಬೇರಿನ ವ್ಯಾಖ್ಯಾನ ಮಾತ್ರ..