Surendra Pai Column: ಪುಣ್ಯಕೋಟಿ ಗೋವಿನ ಹಾಡನ್ನು ಮರೆತರೆ ಹೇಗೆ ?
ಅಂದು ಹಸಿದ ವ್ಯಾಘ್ರದ ಬಾಯಿಗೆ ಆಹಾರವಾಗಬೇಕಾದ ಗೋವಿನ ಸತ್ಯ ವಾಕ್ಯದ ಪರಿಪಾಲನೆ ಯನ್ನು ಕಂಡು, ತಾನೇ ಸ್ವತಃ ಪಶ್ಚಾತ್ತಾಪ ಪಟ್ಟು ಬೆಟ್ಟದ ಮೇಲಿಂದ ಹಾರಿ ಪ್ರಾಣ ಕಳೆದು ಕೊಂಡಂತಹ ವ್ಯಾಘ್ರನ ಜೀವನವು ಸಹ, ಗೋವಿನ ಸತ್ಯದ ನಡೆಯ ಜೊತೆ ನಮಗೆ ಸದಾ ಮಾದರಿ ಯಾಗಬೇಕಿತ್ತು. ಆದರೆ ಸಮಾಜದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಮಾನವ ಪೈಶಾಚಿಕ ಹೇಯ ಕೃತ್ಯಗಳನ್ನು ನೋಡು ತ್ತಿದ್ದಾಗ ಮತ್ತೆ ಗೋವು ಹಾಗೂ ವ್ಯಾಘ್ರಗಳು ಅದೇಕೋ ಮತ್ತೆ ಮತ್ತೆ ಕಾಡಲಾರಂಭಿಸಿದವು.


ನೋವಿನ ಹಾಡು
ಸುರೇಂದ್ರ ಪೈ, ಭಟ್ಕಳ
ನಾವೆಲ್ಲರೂ ಬಾಲ್ಯದಲ್ಲಿ ’ಧರಣಿ ಮಂಡಲ ಮಧ್ಯದೊಳಗೆ...’ ಎಂಬ ಸಾಲಿನಿಂದ ಪ್ರಾರಂಭವಾಗುವ ’ಪುಣ್ಯಕೋಟಿ’ ಎಂಬ ಗೋವಿನ ಹಾಡನ್ನು ಕೇಳುತ್ತಾ ಬೆಳೆದವರು. ಗೋವು ಹಾಗೂ ವ್ಯಾಘ್ರನ ನಡು ವಿನ ಸಂಭಾಷಣೆಯನ್ನು ಕಥಾನಕದ ಮೂಲಕ ಜನಪದರು ಕಟ್ಟಿಕೊಟ್ಟ ಆ ಹಾಡು, ಸತ್ಯದ ಕುರಿತಂತೆ ಕಲಿಸಿದ ಮೌಲ್ಯಗಳನ್ನು ನಾವು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಇಂದು ಸಹ ನಮ್ಮ ಮಕ್ಕಳಿಗೆ ಆ ಪುಣ್ಯಕೋಟಿ ಕಥೆಯನ್ನು ಹೇಳುತ್ತೇವೆ.
ಅಂದು ಹಸಿದ ವ್ಯಾಘ್ರದ ಬಾಯಿಗೆ ಆಹಾರವಾಗಬೇಕಾದ ಗೋವಿನ ಸತ್ಯ ವಾಕ್ಯದ ಪರಿಪಾಲನೆ ಯನ್ನು ಕಂಡು, ತಾನೇ ಸ್ವತಃ ಪಶ್ಚಾತ್ತಾಪ ಪಟ್ಟು ಬೆಟ್ಟದ ಮೇಲಿಂದ ಹಾರಿ ಪ್ರಾಣ ಕಳೆದು ಕೊಂಡಂತಹ ವ್ಯಾಘ್ರನ ಜೀವನವು ಸಹ, ಗೋವಿನ ಸತ್ಯದ ನಡೆಯ ಜೊತೆ ನಮಗೆ ಸದಾ ಮಾದರಿ ಯಾಗಬೇಕಿತ್ತು. ಆದರೆ ಸಮಾಜದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಮಾನವ ಪೈಶಾಚಿಕ ಹೇಯ ಕೃತ್ಯಗಳನ್ನು ನೋಡುತ್ತಿದ್ದಾಗ ಮತ್ತೆ ಗೋವು ಹಾಗೂ ವ್ಯಾಘ್ರಗಳು ಅದೇಕೋ ಮತ್ತೆ ಮತ್ತೆ ಕಾಡಲಾ ರಂಭಿಸಿದವು.
2025 ಹೊಸ ವರ್ಷಕ್ಕೆ ಕಾಲಿಟ್ಟ ಹೊಸತರ ಗೋವುಗಳ ಮೇಲೆ ವಿಕೃತ ದಾಳಿಗಳು ಸಾಲು ಸಾಲಾಗಿ ನಡೆಯಲಾರಂಭಿಸಿದವು. ಹಾಗಂತ ಇದಕ್ಕೂ ಮೊದಲು ಗೋವುಗಳನ್ನು ಮಾಂಸಕ್ಕಾಗಿ ಕದ್ದು ಸಾಗಿಸುತ್ತಿದ್ದ ಅನೇಕ ಘಟನೆಗಳು ವರದಿಯಾಗಿವೆ. ಆದರೆ ಇತ್ತಿಚೇಗೆ ಗೋವುಗಳ ಮೇಲೆ ನಡೆಯುವ ಹಯು ಮಾನವನ ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸುವಂತಿದೆ.
ಇದನ್ನೂ ಓದಿ: Surendra Pai Column: ಇದು ಆತ್ಮವಿಶ್ವಾಸದ ಕೊರತೆಯೋ, ಮೈಗಳ್ಳತನವೋ ?
ಅಂದು ಜನವರಿ 12, ಬೆಂಗಳೂರಿನ ಚಾಮರಾಜಪೇಟೆಯಲ್ಲಿ 3 ಹಸುಗಳ ಕೆಚ್ಚಲು ಕೊಯ್ದ ಘಟನೆ ಯಿಂದ ರಾಜ್ಯದಲ್ಲಿ ಗೋವಿನ ಕೆಚ್ಚಲನ್ನು ಕತ್ತರಿಸುವಂತಹ ಕೃತ್ಯವನ್ನೆಸಗಲು ಪ್ರಾರಂಭ ವಾಯಿತು. ಅದರ ಬೆನ್ನಲೇ ರಾಜ್ಯದಲ್ಲಿ ಒಂದೊಂದೆ ಪ್ರಕರಣಗಳು ಹೆಚ್ಚುತ್ತಾ ಸಾಗಿದವು. ಮೊನ್ನೆಯಷ್ಟೇ ಹೊಸನಗರದಲ್ಲಿ ಹಸುವಿನ ಕೆಚ್ಚಲು ಕತ್ತರಿಸಿದ ಘಟನೆಯಾಗಿರಬಹುದು, ಭಟ್ಕಳ ದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ ಎಮ್ಮೆ ಕzಯ್ದು ವಿಕೃತವಾಗಿ ವಧೆ ಮಾಡಿದ್ದಿರಬಹುದು, ಬ್ರಹ್ಮಾವರ ದಲ್ಲಿ ದನವನ್ನು ಕತ್ತರಿಸಿ ಮಾಂಸಕ್ಕಾಗಿ ಸಾಗಿಸುವ ವೇಳೆಯಲ್ಲಿ ರುಂಡವು ರಸ್ತೆಯ ಪತ್ತೆಯಾದ ಘಟನೆಯಾಗಿರಬಹುದು ಹೀಗೆ ಹತ್ತಾರು ಪೈಶಾಚಿಕ ಘಟನೆಗಳು ಜನತೆಯನ್ನು ತಲ್ಲಣಗೊಳಿಸಿದ್ದು ಒಂದು ಕಡೆ.
ಇನ್ನೊಂದೆಡೆ ಚಾಮರಾಜನಗರ ಜಿಲ್ಲೆಯ ಹೂಗ್ಯಂ ವನ್ಯಜೀವಿ ವಲಯದ ಮೀಣ್ಯಂನ ಕಾಡಿನಲ್ಲಿ ಸಂಭವಿಸಿರುವ ಐದು ಹುಲಿಗಳ ಸಾವು ಮಾನವನ ಹೇಯ ಕೃತ್ಯಕ್ಕೆ ಜ್ವಲಂತ ಸಾಕ್ಷಿಯಾಯಿತು. ಒಂದು ತಾಯಿ ಹುಲಿಯ ಜೊತೆ ನಾಲ್ಕು ಮರಿ ಹುಲಿಗಳು ವಿಷ ಬೆರೆಸಿದ್ದ ಜಾನುವಾರುವಿನ ಕಳೇಬರ ತಿಂದು ದುರ್ಮರಣಕ್ಕೆ ಒಳಗಾಗಿದ್ದು ಮನಕಲುಕುವ ದೃಶ್ಯವಾಗಿತ್ತು.
ಬಾಲ್ಯದಲ್ಲಿ ಯಾವ ಪುಣ್ಯಕೋಟಿಯ ಕಥೆಯು ನಮ್ಮಯ ಮನದಲ್ಲಿ ಅಚ್ಚಳಿಯದೆ ಉಳಿದಿತ್ತೋ, ಯಾವ ಗೋವು ಹಾಗೂ ವ್ಯಾಘ್ರಗಳು ನಮಗೊಂದು ನೀತಿಯ ಪಾಠವನ್ನು ಕಲಿಸಿ ಬದುಕನ್ನು ಹಸನಾಗಿಸಿಕೊಳ್ಳುವ ದಾರಿ ತೋರಿಸಿದ್ದವೋ, ಅವುಗಳಿಗೆ ನಮ್ಮಿಂದ ಇಂತಹ ದುರ್ಗತಿ ಇಂದು ಬಂದೊದಗಿದೆ.
ವಿಶ್ವದ ಹೆಚ್ಚು ಹುಲಿಗಳನ್ನು ಹೊಂದಿದ ದೇಶ ನಮ್ಮದು. ವಿಶ್ವದ ಒಟ್ಟು ಹುಲಿಗಳಲ್ಲಿ ಶೇ 75 ರಷ್ಟು ಭಾರತದಲ್ಲಿವೆ. ನಮ್ಮಲ್ಲಿ 2006ರಲ್ಲಿ 1411 ಇದ್ದ ಹುಲಿಗಳ ಸಂಖ್ಯೆಯೂ ಏರುಗತಿಯಲ್ಲಿ ಸಾಗಿದ್ದು 2022ರ ಹುಲಿ ಗಣತಿಯ ಪ್ರಕಾರ ಒಟ್ಟು 3682 ಹುಲಿಗಳಿವೆ. ಅದರಲ್ಲೂ ಕರ್ನಾಟಕ 563 ಹುಲಿ ಗಳನ್ನು ಹೊಂದಿದ್ದು ದ್ವಿತೀಯ ಸ್ಥಾನದಲ್ಲಿದ್ದ ಹೆಮ್ಮೆ ನಮ್ಮದಾಗಿತ್ತು.
ಈ ಸಂತಸದ ಸುದ್ದಿಯ ನಡುವೆ 2022ರಿಂದ 2025 ಜೂನ್ ವರೆಗಿನ ಅವಧಿಯಲ್ಲಿ 1519 ಹುಲಿಗಳು ಸಾವನಪ್ಪಿರುವ ಘಟನೆ ಆಘಾತಕಾರಿ. ಅಧಿಕೃತ ಮೂಲಗಳ ಪ್ರಕಾರ ಮಧ್ಯಪ್ರದೇಶದಲ್ಲಿ 392, ಮಹಾರಾಷ್ಟ್ರದಲ್ಲಿ 321 ಬಿಟ್ಟರೆ ಕರ್ನಾಟಕ 189 ಹುಲಿಗಳು ಮೃತಪಟ್ಟಿವೆ.
ಬಹುಶಃ ಗೋವುಗಳ ಸಂಖ್ಯೆಯನ್ನು ಹುಲಿಗಳ ಸಂಖ್ಯಾ ಪ್ರಮಾಣದೊಂದಿಗೆ ಹೋಲಿಸಿದರೆ ಅವೆರಡರ ಸಾವಿನ ಸರಾಸರಿ ಪ್ರಮಾಣವು ಒಂದೇ ಎನ್ನಬಹುದು. ಇಂದು ಗೋ ರಕ್ಷಣೆಗೆ ಕುರಿತಾದ ಕಠಿಣ ಕಾನೂನುಗಳಿದ್ದರೂ ಸಹ ಅವುಗಳನ್ನು ಮಾಂಸಕ್ಕಾಗಿ ಕದ್ದು ಸಾಗಿಸಿ ಹತ್ಯೆ ಮಾಡುವ ಪ್ರಕರಣಗಳಲ್ಲಿ ಇಳಿಕೆ ಕಂಡಿಲ್ಲ. ಅದೇ ರೀತಿ
ವನ್ಯಜೀವಿಯಾದ ಹುಲಿಯ ಸಂರಕ್ಷಣೆಗಾಗಿ ‘ಹುಲಿ ಸಂರಕ್ಷಣಾ ಕಾಯಿದೆ’ ಇದ್ದರೂ, ದೇಶಾದ್ಯಂತ 58 ಹುಲಿ ಸಂರಕ್ಷಣಾ ಪ್ರದೇಶಗಳಿದ್ದರೂ ಸಹ ದಟ್ಟ ಅಡವಿಯಲ್ಲಿ ಹೆಬ್ಬುಲಿಯನ್ನೇ ಬೇಟೆಯಾಡಿ ಕೊಲ್ಲುವ ಪ್ರಕರಣದಲ್ಲೂ ಯಾವ ಇಳಿತವು ಕಾಣುತ್ತಿಲ್ಲ. ಕಾಮಧೇನು, ವ್ಯಾಘ್ರ ಸೇರಿದಂತೆ ಇನ್ನಿತರ ಯಾವುದೇ ವನ್ಯಜೀವಿಗಳಾಗಲಿ, ಜೀವವೈವಿಧ್ಯದ ಯಾವುದೇ ಜೀವಿಯಾಗಿರಲಿ ಸಹಜ ಸಾವನ್ನು ಪಡೆಯುವ ಬದಲಾಗಿ ವಿಷಪ್ರಾಶನ, ವಿದ್ಯುತ್ ತಂತಿ ಸ್ಪರ್ಶ, ಅವಾಸಸ್ಥಾನಕ್ಕಾಗಿ ಕಾದಾಟ, ಚರ್ಮ, ಎಲುಬು, ಹಲ್ಲು, ಮಾಂಸ ಇತ್ಯಾದಿಗಳಿಗಾಗಿ ಬೇಟೆಯಾಡುವುದರಿಂದ, ಇಂದಿನ ಬದಲಾಗುತ್ತಿರುವ ವಾತಾವರಣ ಹಾಗೂ ಹೆಚ್ಚುತ್ತಿರುವ ತಾಪಮಾನ, ವಿವಿಧ ಪ್ರಕಾರದ ಮಾಲಿನ್ಯದಿಂದಾಗಿ, ನಿರಂತರ ಯುದ್ಧ, ನಗರೀಕರಣ, ಕೈಗಾರೀಕರಣವೇ ನಿಜವಾದ ಅಭಿವೃದ್ಧಿ ಎಂದು ತಿಳಿದು ಹೆಚ್ಚುತ್ತಿರುವ ಭೂ ಕಬಳಿಕೆಯಂತಹ ಮಾನವನ ನಿರಂತರ ಹಸ್ತಕ್ಷೇಪದಿಂದಾಗಿ ಇವು ತಮ್ಮ ಅಸ್ತಿತ್ವವನ್ನು ಕಳೆದು ಕೊಂಡು ಅಸಹಜ ರೀತಿಯಲ್ಲಿ ಸಾವನ್ನೊಪ್ಪುತ್ತಿವೆ.
ಮಾನವ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಜೀವವೈವಿಧ್ಯ ನಾಶಕ್ಕೆ ನೇರವಾಗಿ ಕೈಹಾಕಿzನೆ. ಇದರ ಪರಿಣಾಮವಾಗಿ ಇಂದು ಎಲ್ಲಾ ಹಂತದಲ್ಲೂ ಮಾನವ ಮತ್ತು ವನ್ಯಜೀವಿಗಳ ನಡುವನ ಸಂಘರ್ಷ ನಿರಂತರವಾಗಿ ನಡೆಯುತ್ತಿರುವುದು ಅವುಗಳ ಅಳಿವಿಗೆ ಕಾರಣವಾಗಿದೆ. ಹಾಗಂತ ಇವೆಲ್ಲವೂ ಗಳನ್ನು ತಡೆಗಟ್ಟಲು ನಮ್ಮಲ್ಲಿ ಕಾನೂನುಗಳಿಲ್ಲ ಎಂದಲ್ಲ.
ನಮ್ಮಲ್ಲಿ ಎಲ್ಲದಕ್ಕೂ ಸಾಕಷ್ಟು ಕಾನೂನುಗಳಿವೆ ನಿಜ. ಆದರೆ ಅದನ್ನು ಪಾಲಿಸುವಲ್ಲಿ, ಅನುಷ್ಠಾನ ಗೊಳಿಸುವಲ್ಲಿ ನಾವೆಷ್ಟರ ಮಟ್ಟಿಗೆ ಶಕ್ತರಾಗಿದ್ದೇವೆ, ಯಶಸ್ಸು ಕಂಡಿದ್ದೇವೆ ಎಂಬುದೇ ಪ್ರಶ್ನೆ. ಮೊನ್ನೆ ನಡೆದ ಹುಲಿಗೆ ವಿಷಪ್ರಾಶನ ಮಾಡಿದ ಘಟನೆಯನ್ನೇ ತೆಗೆದುಕೊಂಡರೆ, ಹುಲಿಗಳ ಸಾವಿನ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಹಾಗೂ ಸರಕಾರದ ಪಾತ್ರವೂ ಇದೆ.
ಬಹುತೇಕ ಅರಣ್ಯ ಸಂರಕ್ಷಣೆಯಲ್ಲಿ ಹೊರಗುತ್ತಿಗೆ ವಾಚರ್ ಗಳು ನೇಮಕ ಮಾಡಲಾಗಿದೆ. ಹಾಗೆಯೇ ಮಲೆಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಕಾರ್ಯನಿರ್ವಹಿಸುವ 65ಕ್ಕೂ ಹೆಚ್ಚು ಹೊರಗುತ್ತಿಗೆ ವಾಚರ್ ಗಳಿಗೆ ಕಳೆದ ಐದು ತಿಂಗಳಿಂದ ವೇತನ ದೊರತಿಲ್ಲ. ಸರಿಯಾಗಿ ಸಂಬಳ ಸಿಗದ ವಾಚರ್ ಗಳು ಸಾಮಾನ್ಯವಾಗಿ ತಮ್ಮ ಕೆಲಸದಲ್ಲಿ ಉತ್ಸಾಹ ಕಳೆದುಕೊಂಡಿದ್ದಾರೆ.
ಇನ್ನೂ ಮಲೆ ಮಹದೇಶ್ವರ ವಿಭಾಗವನ್ನು ‘ಹುಲಿ ಸಂರಕ್ಷಿತ ವಲಯ’ ಎಂದು ಘೋಷಿಸದಿರುವುದು ಕೂಡ ಇಂತಹ ಕೃತ್ಯಗಳಿಗೆ ಪುಷ್ಟಿ ನೀಡಿದಂತಾಗಿದೆ. ‘ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ’ ಹಸಿರು ನಿಶಾನೆ ತೋರಿಸಿ ವರ್ಷಗಳೇ ಕಳೆದಿದ್ದರೂ ಸರಕಾರ ಅದನ್ನು ಘೋಷಿಸಲು ಮುಂದಾಗಿಲ್ಲ. ಇವುಗಳ ಹೊರತಾಗಿಯೂ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ವಿಚಾರದಲ್ಲಿ ವಿವಿಧ ಲಾಬಿಗಳಿಗೆ ಮಣಿಯುವ ಸರಕಾರಗಳು, ಸಂರಕ್ಷಣಾ ಕ್ರಮಗಳನ್ನು ಅನುಸರಿಸುವಲ್ಲಿ ವಿಳಂಬ, ಜೀವವೈವಿಧ್ಯ ಹಾಗೂ ಪರಿಸರದ ನಡುವಿನ ಸಂಬಂಧದ ಬಗ್ಗೆ ನಮ್ಮಲ್ಲಿ ಜ್ಞಾನ ಇಲ್ಲದಿರುವಿಕೆ, ಇವೆಲ್ಲವೂ ಸಹ ಮೂಕ ಜೀವಿಗಳ ಕಣ್ಮರೆಗೆ ಕಾರಣ.
ಬಹುಶಃ ಮಾನವನಿಗೆ ಅಭಿವೃದ್ಧಿಯ ಎಂಬ ಪದದ ನಿಜಾರ್ಥ ತಿಳಿದಂತೆ ಕಾಣುತ್ತಿಲ್ಲ. ಅದೊಂದು ಕಾಲವಿತ್ತು. ಗೋವುಗಳನ್ನು ಹೊಂದಿರುವುದರ ಆಧಾರದ ಮೇಲೆ ಸಾಮಾಜಿಕ ಸ್ಥಾನಮಾನಗಳು, ಶ್ರೀಮಂತ, ಬಡವ ಎಂಬುದು ನಿರ್ಣಯಿಸಲಾಗುತ್ತಿತ್ತು. 70ರ ದಶಕದ ತನಕವೂ ಎಲ್ಲರ ಮನೆ ಯಲ್ಲೂ ಗೋವುಗಳಿದ್ದವು.
ಈಗ ಮಕ್ಕಳ ಕೈಗೆ ಮಣ್ಣು ತಾಕದಂತೆ ನೋಡಿಕೊಳ್ಳುವ ನಾವು ಸಗಣಿಯನ್ನು ಬಾಚುವುದು ಕನಸಿನ ಮಾತೇ ಸರಿ. ಹಾಗಾಗಿ ಕೊಟ್ಟಿಗೆ ಇದ್ದ ಜಾಗದಲ್ಲಿ ಬಹುಮಹಡಿಯ ಕಟ್ಟಡಗಳು ತಲೆಯೆತ್ತಿವೆ. ನಾವು ಈ ಪರಿಸರ ವ್ಯವಸ್ಥೆಯ ಒಂದು ಸಣ್ಣ ಅಂಗವೆಂಬ ಸತ್ಯ ಅರಿವಾಗಬೇಕಿದೆ. ನಾವು ಸಹ ಈ ಆಹಾರ ಜಾಲದ ಒಂದು ಕೊಂಡಿ ಎಂಬುದನ್ನು ಮರೆಯಬಾರದು.
ಶಾಲೆಯಲ್ಲಿ ಕಲಿಸಿದ ‘ಫುಡ್ ಚೈನ್ ಹಾಗೂ ಫುಡ್ ವೆಬ್’ ಬಗ್ಗೆ ನಾವು ಓದಿದ್ದು ನೆನಪಿಸಿಕೊಳ್ಳಬೇಕು. ಹೇಗೆ ಹುಲ್ಲನ್ನು ತಿಂದು ಮಿಡತೆ, ಮಿಡತೆ ತಿಂದು ಕಪ್ಪೆ, ಕಪ್ಪೆ ತಿಂದು ಹಾವು, ಹಾವನ್ನು ಹದ್ದುಗಳು ಭಕ್ಷಿಸುವ ಆಹಾರ ಜಾಲ ಇತ್ತೋ ಹಾಗೇ ಮಾನವನು ಸಹ. ಎಂದು ಈ ಆಹಾರ ಜಾಲದ ಒಂದೊಂದೇ ಕೊಂಡಿ ಕಳಚುತ್ತಾ ಸಾಗುತ್ತದೆಯೋ, ಹುಲಿ, ಚಿರತೆಗಳು ನಾಡಿಗೆ ಬಂದು ಕೊಟ್ಟಿಗೆ ಯಲ್ಲಿದ್ದ ಹಸು, ಕರು, ಕುರಿ, ಮೇಕೆಗಳನ್ನು, ಅಂಗಳದಲ್ಲಿ ಆಟವಾಡುತ್ತಿದ್ದ ಕಂದಮ್ಮಗಳನ್ನು, ಹೊಲದಲ್ಲಿ ಕೆಲಸ ಮಾಡುತ್ತಿದ್ದ ಜನರನ್ನು ಬೇಟೆಯಾಡಿ ಕೊಂದು ತಿನ್ನಲು ಧಾವಿಸುತ್ತವೆ.
ಮಾನವ ಸಹ ಹಾಗೆಯೇ ಅಲ್ಲವೇ? ನಮ್ಮ ಪಾಲಿನದ್ದನ್ನು ಬೇರೆಯವರು ಕಸಿದುಕೊಂಡಾಗ, ನಾವು ಇನ್ನೊಬ್ಬರದ್ದನ್ನು ಕಸಿದುಕೊಳ್ಳಲು ತವಕಿಸುತ್ತೇವೆ. ಅಂತೆಯೇ ಜೀವವೈವಿಧ್ಯ ಕೊಂಡಿ ಈಗಾಗಲೇ ನಿಧಾನವಾಗಿ ಒಂದೊಂದಾಗಿ ಕಣ್ಮರೆಯಾಗುತ್ತಿವೆ. ಇವುಗಳ ಅನುಪಸ್ಥಿತಿಯು ಬಿಸಿ ಇನ್ನು ಮಾನವ ನಿಗೆ ತಟ್ಟಿಲ್ಲ. ತಲೆತಲಾಂತರದಿಂದ ಬಂದ ಗದ್ದೆಯನ್ನು ಮಾರಾಟ ಮಾಡಿ ವಾಣಿಜ್ಯೀ ಕರಣಕ್ಕಾಗಿ ಬಳಸಿಕೊಂಡ ನಮ್ಮಲ್ಲಿ ಕೈ ತುಂಬಾ ಹಣವಿದೆ ಎಂಬ ಅಹಂ ತುಂಬಿದೆ. ಆದರೆ ಹೊಟ್ಟೆ ತುಂಬಿಸಿ ಕೊಳ್ಳಲು, ಆರೋಗ್ಯಯುತ ಜೀವನ ಮಾಡಲು ಜೀವವೈವಿಧ್ಯದ ಸಹಕಾರ ಬೇಕು ಎಂಬ ಪ್ರಜ್ಞೆ ಇನ್ನು ಬಂದಿಲ್ಲ.
ಆದರೆ ಇದರ ಬಗ್ಗೆ ಪರಿಸರ ವಿಜ್ಞಾನಿಗಳು ಸೇರಿದಂತೆ ಪಾಶ್ಚಾತ್ಯ ದೇಶದ ಜೀವವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದು, ಭೂಮಿಯಿಂದ ಅಳಿದು ಹೋದ ಜೀವವೈವಿಧ್ಯವನ್ನು ಮರುಸೃಷ್ಟಿಸಿ ಮತ್ತೆ ಪರಿಸರ ಸಮತೋಲನ ಏರ್ಪಡಿಸಬೇಕೆಂದು ತಮ್ಮ ಪ್ರಯೋಗಾಲಯದಲ್ಲಿ ಜೀನ್ ಎಡಿಟಿಂಗ್ ನಂತಹ ತಂತ್ರಜ್ಞಾನದಿಂದ ನಿರಂತರ ಶ್ರಮ ವಹಿಸುತ್ತಿದ್ದಾರೆ. ಪರಿಸರ ವ್ಯವಸ್ಥೆಯಲ್ಲಿ ಜೀವಿಗಳ ಮರುಸೃಷ್ಟಿ ನಾವಂದುಕೊಂಡಂತೆ ಸಾಧ್ಯವಿಲ್ಲ.
ಆದರೆ ಪ್ರಸುತ್ತ ನಮ್ಮೊಂದಿಗೆ ಒಂದೇ ಭೂಮಿಯನ್ನು ಹಂಚಿಕೊಂಡು ಬದುಕುತ್ತಿರುವ ಕೋಟ್ಯಂತರ ಜೀವ ವೈವಿಧ್ಯ ವನ್ನು ನಮ್ಮ ಸಾಕ್ಷಿಪ್ರಜ್ಞೆಯಿಂದಾಗಿ ಉಳಿಸಿಕೊಂಡು ಹೋಗುವ ಅವಕಾಶ ಇನ್ನು ನಮ್ಮ ಪಾಲಿಗಿದೆ. ಕೊನೆಯದಾಗಿ ಸತ್ತು ಬಿದ್ದ ತಾಯಿ ಹುಲಿ ಹಾಗೂ ನಾಲ್ಕು ಮರಿ ಹುಲಿಗಳ ಚಿತ್ರಣ ಕಣ್ಣ ಮುಂದೆ ಸುಳಿದಾಗ, ಅದೇ ಪುಣ್ಯಕೋಟಿಯ ‘ಆರ ಮೊಲೆಯನು ಕುಡಿಯಲಮ್ಮ? ಆರ ಸೇರಿ ಬದುಕಲಮ್ಮ? ಆರ ಬಳಿಯಲಿ ಮಲಗಲಮ್ಮ? ಆರು ನನಗೆ ಹಿತವರು? ಎಂಬ ಕಂದಮ್ಮಗಳ ಮಾತು ನೆನಪಾಗಿ ಮಾತು ಹೊರಡದಂತಾಗುತ್ತದೆ.
ಕೊನೆಯ ಪಕ್ಷ ಮೂಕ ಪ್ರಾಣಿಗಳನ್ನು ಸಾಯಿಸುವ ಮುನ್ನ ಅದೇ ಗೋವಿನ ಹಾಡಿನ ಕೊನೆಯಲ್ಲಿ ‘ಪುಣ್ಯಕೋಟಿಯ ಮಾತ ಕೇಳಿ, ಕಣ್ಣ ನೀರನು ಸುರಿಸಿ ನೊಂದು, ಕನ್ನೆಯಿವಳನು ಕೊಂಡು ತಿಂದರೆ , ಮೆಚ್ಚನಾ ಪರಮಾತ್ಮನು’ ಎಂದು ತಾನೇ ಪಶ್ಚಾತ್ತಾಪ ಪಡುತ್ತಾ ಬೆಟ್ಟದ ಮೇಲಿಂದ ಹಾರಿ ಪ್ರಾಣ ತೆತ್ತ ವ್ಯಾಘ್ರನ ಮಾತನ್ನಾದರೂ ನೆನಪಿಸಿಕೊಂಡರೂ ಸಾಕು ನಾವು ಬದಲಾಗಬಹುದಲ್ಲವೇ?
(ಶಿಕ್ಷಕರು, ಹವ್ಯಾಸಿ ಬರಹಗಾರರು)