Saturday, 21st September 2024

ಹೇಳೋದು ಆಚಾರ, ಬರೆಯೋದು ಬದನೆಕಾಯಿ ವಿಚಾರ

ತಿಳಿರು ತೋರಣ

ಶ್ರೀವತ್ಸ ಜೋಶಿ

srivathsajoshi@yahoo.com

‘ಅಡುಗೆ ಮನೆಯಲ್ಲೊಂದು ದಿನ ಫಂಕ್ಷನ್ ನಡೆದಿತ್ತು… ಸೊಪ್ಪುಗಳೆಲ್ಲ ಸೇರಿಕೊಂಡು ಚಪ್ಪರ ಹಾಕಿತ್ತು…’ ಅಂತೊಂದು ಶಿಶುಗೀತೆ ಇದೆ, ನೀವೂ ಕೇಳಿರಬಹುದು. ಬರೆದವರಾರು ಎಂದು ನನಗೆ ಗೊತ್ತಿಲ್ಲ, ಆದರೆ ಬಹಳ ಚೆನ್ನಾಗಿದೆ. ನಮ್ಮ ಕಾರ್ಕಳದವರೇ ಆದ ವಂದನಾ ರೈ ಎಂಬುವವರು ಯುಟ್ಯೂಬ್ ವಿಡಿಯೊದಲ್ಲಿ, ವಿಧವಿಧ ತರಕಾರಿಗಳನ್ನು ತೋರಿಸುತ್ತ ಅಭಿನಯಗೀತೆಯಾಗಿ ಪ್ರಸ್ತುತಪಡಿಸಿರುವುದನ್ನು ನೋಡಿಯಷ್ಟೇ ನನಗದರ ಬಗ್ಗೆ ಗೊತ್ತಾದದ್ದು.

‘ದಂಡಿನ ಸೊಪ್ಪು ತಾನೇ ನಿಂತು ತೋರಣ ಮಾಡಿತ್ತು… ಕುಂಬಳಕಾಯಿ ಕುರ್ಚಿಲಿ ಕೂತು ಅಧ್ಯಕ್ಷನಾಗಿತ್ತು… ಹಾರಿ ಬಂದ ಹೀರೆಕಾಯಿ ವಾಲಗ ಊದಿತ್ತು… ನುಗ್ಗಿ ಬಂದ ನುಗ್ಗೇಕಾಯಿ ಡೋಲು ಬಾರ್ಸಿತ್ತು…’ ಹೀಗೆ ಸಾಗುತ್ತದೆ ಒಂದೊಂದೇ ತರಕಾರಿಯ ಬಣ್ಣನೆ. ಆಮೇಲೆ ಸೌತೆಕಾಯಿ ಸ್ವಾಗತ ಕೋರಿತ್ತಂತೆ; ಟೊಮೆಟೊ ತಾಂಬೂಲ ಹಂಚಿತ್ತಂತೆ; ಜೀನ್ಸ್ ತೊಟ್ಟ ಬೀನ್ಸ್ ಬಂದು ಡ್ಯಾನ್ಸ್ ಮಾಡಿತ್ತಂತೆ! ಪುಟ್ಟಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಮುದನೀಡುವ ಸಾಲುಗಳು. ಇಷ್ಟೆಲ್ಲ ಬಗೆಬಗೆಯ ತರಕಾರಿಗಳಲ್ಲಿ ಬದನೆಯ ಸುದ್ದಿಯೇ ಇಲ್ಲವಲ್ಲ ಎಂದುಕೊಳ್ಳುವಷ್ಟರಲ್ಲಿ ಹಾಡಿನ ಕೊನೆಯ ಸಾಲು- ‘ಬದನೆಕಾಯಿ ಬಂದೋರ್ಗೆಲ್ಲ ವಂದನೆ ಹೇಳಿತ್ತು!’  ಅದರೊಂದಿಗೆ ಅಡುಗೆಮನೆ ಫಂಕ್ಷನ್‌ಗೆ ಭಾವಪೂರ್ಣ ಮುಕ್ತಾಯ.

ಚಂದದ ಹಾಡು, ನೆನಪುಳಿಯುವಂಥದು. ಆ ಹಾಡಿನಲ್ಲಿ ಧನ್ಯವಾದ ಸಮರ್ಪಣೆಗೆ ಬದನೆಯನ್ನು ಆಯ್ದು ಕೊಂಡದ್ದು ಸೂಕ್ತವೇ ಆಗಿದೆ ಎಂದು ನನಗನಿಸಿತು. ಯಾಕೆ ಗೊತ್ತೇ? ಸಾಮಾನ್ಯವಾಗಿ ಸಮಾರಂಭಗಳಲ್ಲೆಲ್ಲ ವೋಟ್ ಆಫ್ ಥ್ಯಾಂಕ್ಸ್ ಹೇಳುವ ಹೊತ್ತಿಗೆ ಸಭೆ ಅರ್ಧದಷ್ಟು ಖಾಲಿ ಆಗಿರುತ್ತದೆ. ವೇದಿಕೆಯ ಮೇಲೆ ಪ್ರಮುಖರ ಮತ್ತು ಹಪಹಪಿಗಳ ಮಿಂಚೋಣ ಎಲ್ಲ ಮುಗಿದಮೇಲೆ ಯಾರೋ ಪಾಪದವರಿಂದ ಧನ್ಯವಾದ ಸಮರ್ಪಣೆ ನಡೆಯುತ್ತದೆ. ಕೇಳಿಸಿಕೊಳ್ಳುವವರಾರೂ ಸಭೆಯಲ್ಲಿ ರುವುದಿಲ್ಲ. ತರಕಾರಿಗಳ ಪೈಕಿ ಬದನೆಯ ಪಾಡೂ ಹೀಗೆಯೇ. ಬದನೆ ಸೇರೋದಿಲ್ಲವೆಂದು ಮೂಗುಮುರಿವವರ ಸಂಖ್ಯೆ ದೊಡ್ಡದಿದೆ. ಬದನೆ ಒಂದು ಅಭೋಜ್ಯ (ತಿನ್ನಬಾರದ) ವಸ್ತು ಎನ್ನುವ ಮಡಿವಂತರೂ ಇದ್ದಾರೆ.

‘ಪುಸ್ತಕದ ಬದನೆಕಾಯಿ’, ‘ಹೇಳೋದು ಶಾಸ್ತ್ರ, ತಿನ್ನೋದು ಬದನೆಕಾಯಿ’ ಮುಂತಾದ ನುಡಿಗಟ್ಟುಗಳಲ್ಲೂ ಬದನೆಕಾಯಿಯನ್ನು ಕೀಳಾಗಿಯೇ ಕಾಣಲಾಗಿದೆ. ಇರಲಿ, ನಾನಂತೂ ಅಂಥವನಲ್ಲ. ನನಗೆ ಬದನೆ ಬಲು ಇಷ್ಟವೇ. ಬೈಂಗನ್‌ಭರ್ತಾವನ್ನೂ ನಾನು ‘ಸುಖಕರ್ತಾ ದುಃಖಹರ್ತಾ ಬೈಂಗನ್-ಕಾ-ಭರ್ತಾ’ ಎಂದು ಕೊಂಡಾಡುವವನು. ಆದ್ದರಿಂದ ಇಂದಿನ ಈ ಹರಟೆಯಲ್ಲಿ ಯಾವುದೇ ಥರದ ಬದನೆದ್ವೇಷ ಇಲ್ಲ. ಬೈಗುಳದ ಸಹಸ್ರನಾಮ ಇಲ್ಲ. ಬದಲಿಗೆ, ಬದನೆ ನಾಮಾ ವಳಿಯೂ ಸೇರಿದಂತೆ ಒಂದಿಷ್ಟು ಸ್ವಾರಸ್ಯಕರ ಮಾಹಿತಿ.

ಬದನೆಕಾಯಿಗೆ ಇಂಗ್ಲಿಷ್‌ನಲ್ಲಿ ಏನೆನ್ನುತ್ತಾರೆ? ಈ ಪ್ರಶ್ನೆಗೆ ನೀವು Brinjal ಎಂಬ ಉತ್ತರ ಕೊಟ್ಟರೆ ಅದು ಭಾರತ ಮತ್ತು ಏಷ್ಯಾದ ಕೆಲವು ದೇಶಗಳಲ್ಲಷ್ಟೇ ಸರಿಯುತ್ತರ ಆದೀತು. ಇಂಗ್ಲಿಷನ್ನೇ ಮಾತನಾಡುವ ಬ್ರಿಟಿಷರನ್ನು ಕೇಳಿನೋಡಿ. ಅವರಿಗೆ ಬ್ರಿಂಜಾಲ್ ಗೊತ್ತೇ ಇಲ್ಲ! ಏಕೆಂದರೆ ಅವರು ಬದನೆಯನ್ನು Aubergine ಎನ್ನುತ್ತಾರೆ (‘ಔಬರ್‌ಜೀನ್’ ಎಂದು ಈ ಪದದ ಉಚ್ಚಾರ). ಮತ್ತೆ ಅಮೆರಿಕನ್ನರಿಗೆ, ಆಸ್ಟ್ರೇಲಿಯನ್ನರಿಗೆ ಔಬರ್‌ಜೀನ್ ಕೂಡ ಗೊತ್ತಿಲ್ಲ. ಹಾಗಂತ ಅಮೆರಿಕದಲ್ಲಿ ಬದನೆಯೇ ಇಲ್ಲವೆಂದಲ್ಲ. ಬದನೆ ಇಲ್ಲಿಯೂ ಸಿಕ್ಕಾಪಟ್ಟೆ ಪಾಪ್ಯುಲರ್ ತರಕಾರಿ.

ವಿವಿಧ ಬಣ್ಣ ಮತ್ತು ಆಕಾರಗಳಲ್ಲಿ ಸಿಗುತ್ತದೆ. ವಿವಿಧ ಪಾಕಪದಾರ್ಥಗಳಲ್ಲಿ ಯಥೇಷ್ಟ ಬಳಕೆ ಆಗುತ್ತದೆ. ಆದರೆ ಇಲ್ಲಿ ಬದನೆಗೆ ಬೇರೆಯದೇ ಒಂದು ಹೆಸರಿದೆ,
Eggplant ಎಂದು! ಅಂತೂ ಇಂಗ್ಲಿಷ್ ಒಂದೇ ಭಾಷೆಯಲ್ಲಿ ಬದನೆಗೆ ಮೂರು ಬೇರೆಬೇರೆ ಹೆಸರುಗಳಿವೆ ಎಂದಾಯ್ತು. ಇದರ ಪೈಕಿ ‘ಎಗ್‌ಪ್ಲಾಂಟ್’ ಎಂಬ ಹೆಸರು ಬರಲಿಕ್ಕೆ ಕಾರಣ ಸರಳ. ಆಕಾರದಲ್ಲಿ ಬಹುಮಟ್ಟಿಗೆ ಕೋಳಿಮೊಟ್ಟೆಯನ್ನೇ ಹೋಲುವ, ಬಿಳಿ ಬಣ್ಣದ ಒಂದು ಬದನೆ ತಳಿ. ಗಿಡಗಳಲ್ಲಿ ಕಾಯಿ ಬಿಟ್ಟಾಗ ಥೇಟ್ ಮೊಟ್ಟೆ ಗಳಂತೇ ಕಾಣುವುದರಿಂದ ಆ ಹೆಸರಿಟ್ಟಿರಬಹುದು. ಅಂದಮಾತ್ರಕ್ಕೇ ಅಮೆರಿಕದಲ್ಲಿ ಸಿಗುವುದು ಆ ತಳಿಯದೊಂದೇ ಬದನೆ ಅಂತೇನಿಲ್ಲ.

ನೇರಳೆ ಬಣ್ಣದ ಉದ್ದುದ್ದ ಬದನೆಗೇ ಇಲ್ಲಿ ಭರ್ಜರಿ ಬೇಡಿಕೆ. ಅದಕ್ಕೂ ಎಗ್ ಪ್ಲಾಂಟ್ ಎಂದೇ ಹೆಸರು- ಭೂಮಿಯ ಮೇಲಿನ ಯಾವ ಜೀವಿಯ ಮೊಟ್ಟೆಯೂ ಆ ಆಕಾರ/ಗಾತ್ರ/ಬಣ್ಣದ್ದು ಇರಲಿಕ್ಕಿಲ್ಲವಾದರೂ. ಅಮೆರಿಕನ್ನರು ಬದನೆಯನ್ನು ಇಷ್ಟಪಡುವುದು ಅದು ಮಾಂಸಕ್ಕೆ ಒಳ್ಳೆಯ ಸಬ್‌ಸ್ಟಿಟ್ಯೂಟ್ ಎಂಬ ಕಾರಣಕ್ಕೆ. ಅಲ್ಲದೇ ಈಗೀಗ ಹೆಚ್ಚು ಜನರು ಸಸ್ಯಾಹಾರಿಗಳಾಗುತ್ತಿರುವುದೂ ಬದನೆಗೆ ಶುಕ್ರದೆಸೆ. ಸರಿ, ಎಗ್ ಪ್ಲಾಂಟ್‌ನ ಬಗ್ಗೆಯಾದರೂ ಇನ್ನೇನೂ ವಿಶೇಷ ತಿಳಿದು ಕೊಳ್ಳುವಂಥದ್ದಿಲ್ಲ. ಆದರೆ ಬದನೆಯ ಉಳಿದೆರಡು ಇಂಗ್ಲಿಷ್ ಹೆಸರುಗಳಿವೆಯಲ್ಲ, ಬ್ರಿಂಜಾಲ್ ಮತ್ತು ಔಬರ್ ಜೀನ್ ಅಂತ? ಸ್ವಾರಸ್ಯವಿರುವುದು ಈ ಹೆಸರುಗಳ ವ್ಯುತ್ಪತ್ತಿ (ಎಟಿಮಾಲಜಿ)ಯಲ್ಲಿ.

ಬಹುಶಃ ಬದನೆ ಸೇರದವರೂ ಇದು ಅತ್ಯಂತ ಕುತೂಹಲಕಾರಿ ವಿಷಯವೆಂದು ಚಪ್ಪರಿಸಬಲ್ಲರು. ಒಂದು ಅಂದಾಜಿನ ಪ್ರಕಾರ ಬದನೆಯ ತವರೂರು ಭಾರತದ
ಪೂರ್ವಭಾಗ, ಈ ಹಿಂದಿನ ಬರ್ಮಾ ಸುತ್ತಮುತ್ತಲಿನ ಪ್ರದೇಶ. ಅಲ್ಲಿಯ ‘ಮುಂಡ’ ಜನಾಂಗದವರು, ಕಾಡುತ್ಪತ್ತಿಯಾಗಿದ್ದ ಮತ್ತು ಮುಳ್ಳುಕಂಟಿಯಲ್ಲಿ ಬೆಳೆಯುತ್ತಿದ್ದ ಬದನೆಯನ್ನು ನಾಡಿನ ಜನರ ಆಹಾರಪದಾರ್ಥವಾಗಿಯೂ ಯೋಗ್ಯ ಎಂದು ಕಂಡುಕೊಂಡರು. ಸಂಸ್ಕೃತದಲ್ಲಿ ಬದನೆಗೆ ಇರುವ ‘ವೃಂತಾಕ’ ಎಂಬ ಹೆಸರು ಮುಂಡ ಜನರ ಭಾಷೆಯಿಂದಲೇ ಬಂದದ್ದು ಎನ್ನಲಾಗಿದೆ.

ಸಸ್ಯಶಾಸ್ತ್ರೀಯವಾಗಿ ಬದನೆ ಮತ್ತು ಟೊಮೆಟೊ ಇವೆರಡೂ ಒಂದೇ ಪ್ರವರ್ಗದವು ಎಂದು ಬಹುಶಃ ಮುಂಡ ಜನಾಂಗಕ್ಕೂ ಗೊತ್ತಿತ್ತು. ಆದ್ದರಿಂದಲೇ ಅವುಗಳನ್ನು
ಅನುಕ್ರಮವಾಗಿ ಕಂಟವೃಂತಾಕ (ಮುಳ್ಳುಗಳಿರುವಂಥದ್ದು) ಮತ್ತು ರಕ್ತವೃಂತಾಕ (ಕೆಂಪು ಬಣ್ಣದ್ದು) ಎಂದು ಕರೆದರು. ಸಂಸ್ಕೃತ ನಿಘಂಟು ತೆರೆದು ನೋಡಿದರೆ ‘ವೃಂತಾಕ’ ಪದಕ್ಕೆ ಬದನೆ ಎಂಬ ಅರ್ಥವನ್ನೇ ಕೊಟ್ಟಿರುವುದು ಗೊತ್ತಾಗುತ್ತದೆ. ಬಹುಶಃ ದೇಶವ್ಯಾಪಿಯಾಗಿ ಆ ಹೆಸರು ಜನರಿಗೆ ಪರಿಚಯವಿತ್ತು. ಏಕೆಂದರೆ ಕನ್ನಡದ ಮೊತ್ತಮೊದಲ ಪರಿಪೂರ್ಣ ಅಡುಗೆ ಪುಸ್ತಕವೆಂಬ ಖ್ಯಾತಿಯ ‘ಮಂಗರಸನ ಸೂಪಶಾಸ್ತ್ರ’ದಲ್ಲಿ ಶಾಕಪಾಕಾಧ್ಯಾಯದ ಮೊದಲ ಭಾಗದಲ್ಲಿ ಬದನೆ ಮತ್ತು ಬಾಳೆಹೂವಿನಿಂದ ಮಾಡಿದ ವಿವಿಧ ರೆಸಿಪಿಗಳ ಬಗ್ಗೆ ಪದ್ಯಗಳಿವೆ.

ಮಧುರವೃಂತಾಕ, ಭುಕ್ತವೃಂತಾಕ, ದುಗ್ಧವೃಂತಾಕ, ಪೂರಣಪಾತವೃಂತಾಕ, ವೃಂತಾಕ ರಂಭಾಕುಸುಮಪಾಕ ಮುಂತಾಗಿ ಅತ್ಯಾಕರ್ಷಕ ಹೆಸರುಗಳು ಆ
ತಿನಸುಗಳಿಗೆ ಇದೆ. ಮಾಡುವ ವಿಧಾನವನ್ನು ವಿವರಿಸುವಾಗ ಬದನೆ ಎಂದು ಕನ್ನಡದ ಹೆಸರನ್ನೂ ಪದ್ಯಗಳಲ್ಲಿ ಬಳಸಲಾಗಿದೆಯಾದರೂ ಅಧ್ಯಾಯದ ಆರಂಭ ದಲ್ಲೇ ‘ಭೂಕಾಂತರಂ ಮನಂಗೊಳಿಪ ಸವಿವಡೆದ ವೃಂ| ತಾಕಫಲಪಾಕ ಕದಳೀನಾಳ ಕುಸುಮಫಲ| ಪಾಕಮಂ ಪಲ್ಲವಾಧರೆಯರರಿವಂದಮಂ ಪೇಳ್ವೆನೆನ್ನರಿವ ನಿತನು||’ ಎಂದು ಬರೆದದ್ದಿದೆ.

ಸಂಸ್ಕೃತ ನಿಘಂಟಿನಲ್ಲಿ ಬದನೆಗೆ ವೃಂತಾಕ ಎಂದಲ್ಲದೆ ಇನ್ನೂ ಒಂದು ಹೆಸರಿದೆ ‘ವಾತಿಂಗಣ’ ಎಂದು. ಇದೊಂಥರದಲ್ಲಿ ಅನ್ವರ್ಥನಾಮ. ವಾತ ಅಂದರೆ ವಾಯು. ದೇಹದಲ್ಲಿ ವಾಯುವಿನ ಸಮತೋಲನ ಕಾಪಾಡುವ ಕೆಲಸವನ್ನು ಬದನೆ ಚೆನ್ನಾಗಿ ಮಾಡುತ್ತದಂತೆ, ಹಾಗಾಗಿ ‘ವಾತಿಂಗಣ’ ಎಂಬ ಹೆಸರು. ಅತ್ಯಾಶ್ಚರ್ಯದ ಮತ್ತು ಬದನೆಪ್ರಿಯರು ಹೆಮ್ಮೆ ಪಡಬಹುದಾದ ವಿಚಾರವೆಂದರೆ ಪ್ರಪಂಚದ ಅನೇಕ ಭಾಷೆಗಳಲ್ಲಿ ಬದನೆಯ ಹೆಸರು ಮೂಲತಃ ಈ
‘ವಾತಿಂಗಣ’ ದಿಂದಲೇ ಬಂದದ್ದು. ಹಿಂದೀ ಭಾಷೆಯ ‘ಬೈಂಗನ್’, ಬಂಗಾಳಿಯ ‘ಬೆಗನ್’, ಮರಾಠಿಯ ‘ವಾಂಗಿ’, ಸಿಂಧಿಯ ‘ವಂಗನ್’, ತೆಲುಗಿನ ‘ವಂಕಾಯ’, ಕನ್ನಡದ ‘ಬದನೆಕಾಯಿ’ ಮತ್ತು ಇವೆಲ್ಲಕ್ಕಿಂತ ಹೆಚ್ಚಾಗಿ ಮಲಯಾಳಂನ ‘ವಾಳುತನಂಗ’ ಹೆಸರುಗಳು ವಾತಿಂಗಣದ ಮಕ್ಕಳೇ.

ಭಾರತೀಯ ಭಾಷೆಗಳ ಪದಗಳಲ್ಲಿ ಸಂಸ್ಕೃತ ಅಥವಾ ಪ್ರಾಕೃತ ಭಾಷೆಯ ಛಾಯೆ ಅಷ್ಟಿಷ್ಟು ಕಂಡುಬರುವುದು ಗೊತ್ತಿದ್ದದ್ದೇ. ಆದರೆ ಬದನೆಯ ವಿಷಯದಲ್ಲಿ ಸಂಸ್ಕೃತದ ವಾತಿಂಗಣವು ಹೊರದೇಶಗಳ ಭಾಷೆಗಳಲ್ಲಿ ಅಪಭ್ರಂಶಗೊಂಡ ಪರಿ ನಿಜಕ್ಕೂ ಅಚ್ಚರಿ ಮೂಡಿಸುವಂಥದ್ದು. ಇದಕ್ಕೆ ಮುಖ್ಯ ಕಾರಣ ಪರ್ಷಿಯನ್ ಅಡುಗೆಯವರು. ಅವರು ವಾತಿಂಗಣವನ್ನು ‘ಬಾದೆಂಜನ’ ಎಂದು ಕರೆದರು. ಇರಾನ್‌ನ ಕೆಲವು ಉಪಭಾಷೆಗಳಲ್ಲಿ ಈಗಲೂ ಬದನೆಗೆ ಬಾದೆಂಗನ್, ಪಾಟೆಂಜನ್,
ವಾಂಗನ್, ವಾಯೆಂಜನ್ ಮುಂತಾದ ಪದಗಳಿವೆಯಂತೆ.

ಅಫ್ಘಾನಿಸ್ಥಾನದಲ್ಲೂ ಅದು ಬಾದೆಮ್ಜನ್ ಅಂತ ಆಗಿದೆ. ಪರ್ಷಿಯನ್ನರು ಬದನೆಯನ್ನು ಧಾರಾಳವಾಗಿ ಉಪಯೋಗಿಸುತ್ತಿದ್ದರಾದರೂ ಅದರಲ್ಲಿ ಟಾಕ್ಸಿನ್‌ ಗಳಿರುತ್ತವೆ, ಅತಿಯಾದ ಸೇವನೆಯಿಂದ ಕೃಷ್ಣವಾತವೇ ಮೊದಲಾದ ರೋಗಗಳು ಬರುವ ಅಪಾಯವಿದೆ ಎಂಬ ಎಚ್ಚರಿಕೆಯೂ, ಬದನೆ ಹೋಳುಗಳಿಗೆ ಉಪ್ಪು ಸವರಿ ವಿಷದ ತೀವ್ರತೆ ತಗ್ಗಿಸಿ ತಿನ್ನಬೇಕೆಂಬ ಸಲಹೆಗಳೂ ಅವರ ಅಡುಗೆಪುಸ್ತಕಗಳಲ್ಲಿರುತ್ತಿತ್ತಂತೆ. ಬದನೆ ನಂಜು ಎಂದು ಈಗಲೂ ಹೇಳುತ್ತೇವಲ್ಲ? ಕ್ರಿ.ಶ. ಏಳನೆಯ ಶತಮಾನದ ಕಾಲಕ್ಕೆ ಪರ್ಷಿಯನ್ ಪ್ರದೇಶಗಳನ್ನೆಲ್ಲ ಅರಬರು ವಶಪಡಿಸಿಕೊಂಡರು.

ಬಾಗ್ದಾದ್ ಕೇಂದ್ರಿತ ಅರಬ್ ಸಾಮ್ರಾಜ್ಯ ಬೆಳೆಯಿತು. ಅರಬರು ಪರ್ಷಿಯನ್ ಅಡುಗೆ ವಿಧಾನಗಳನ್ನೂ ಅಳವಡಿಸಿಕೊಂಡರು. ಅದರಲ್ಲಿ ಬದನೆಯ ಖಾದ್ಯಗಳೂ ಸೇರಿದ್ದವು. ಬಾದೆಂಜನ್ ಎಂಬ ಪರ್ಷಿಯನ್ ಹೆಸರನ್ನು ಅವರು ಆಲ್-ಬದಿಂಜನ್ ಎಂದು ಮಾಡಿದರು. ಅರಬ್ಬೀ ಭಾಷೆಯಲ್ಲಿ ವಸ್ತುಗಳ ಹೆಸರಿಗೆ ‘ಆಲ್’ ಎಂಬ ಪ್ರಿಫಿಕ್ಸ್ ಸಾಮಾನ್ಯವಾಗಿ ಇರುತ್ತದೆ, ಆಲ್ -ಕೈದಾ ಕೂಡ ಒಂದು ಉದಾಹರಣೆ. ಅರಬರ ಸಾಮ್ರಾಜ್ಯ ಮೆಡಿಟರೇನಿಯನ್ ಸಮುದ್ರದಾಚೆ ಸ್ಪೇನ್‌ವರೆಗೂ ಹರಡಿದಾಗ ಅಲ್ಲಿಯವರು ‘ಆಲ್-ಬದಿಂಜನ್’ನಲ್ಲಿ ‘ಆಲ್’ ತೆಗೆದುಹಾಕಿ ‘ಬೆರಿಂಜೆನಾ’ ಎಂದರು.

ಪೋರ್ಚುಗೀಸರು ಅದನ್ನೇ ‘ಬೆರಿಂಜೆಲಾ’ ಎಂದರು. ಕ್ಯಾಟಲಾನ್ ಪ್ರದೇಶದವರು ಮಾತ್ರ ಅರಬರ ‘ಆಲ್’ವನ್ನೂ ಉಳಿಸಿಕೊಂಡು ಬದನೆಗೆ ‘ಆಲ್ ಬೆರ್ಜಿನಿಯಾ’ ಎಂದು ನಾಮಕರಣ ಮಾಡಿದರು. ಕ್ಯಾಟಲಾನ್ ಪ್ರದೇಶಕ್ಕೆ ತಾಗಿಕೊಂಡ ಫ್ರೆಂಚರಿಗೆ ಬದನೆಯ ಆ ಹೆಸರನ್ನು ಉಚ್ಚರಿಸುವುದು ತುಸು ಕಷ್ಟವೆನಿಸಿದ್ದರಿಂದ ಅವರು ತಮ್ಮ ಭಾಷೆಯಲ್ಲಿ ಅದನ್ನು ಔಬರ್‌ಜೀನ್ ಎಂದರು. ಫ್ರೆಂಚರಿಗೂ ಬ್ರಿಟಿಷರಿಗೂ ಯಾವತ್ತಿಗೂ ಬದ್ಧವೈರ. ಆದರೆ ಬದನೆಯ ವಿಚಾರದಲ್ಲಿ ಮಾತ್ರ ಫ್ರೆಂಚರನ್ನೇ ಅನುಸರಿಸಿದ ಬ್ರಿಟಿಷರು ಇಂಗ್ಲಿಷ್‌ನಲ್ಲೂ ಔಬರ್‌ಜೀನ್ ಎಂದೇ ಕರೆಯತೊಡಗಿದರು.

ಮೆಡಿಟರೇನಿಯನ್‌ನ ಪೂರ್ವಕ್ಕೆ ಅರಬರ ಪ್ರಭಾವದಿಂದಲೇ ಟರ್ಕಿಯಲ್ಲಿ ಬದನೆಯು ‘ಪತಿಂಗೆನ್’ ಅಂತಲೂ, ರಷ್ಯನ್‌ನಲ್ಲಿ ‘ಪತಿಂಜನ್’ ಅಂತಲೂ, ಜಾರ್ಜಿಯನ್‌ ನಲ್ಲಿ ‘ಬಡಿಂಜನ್’ ಅಂತಲೂ ಕರೆಯಲ್ಪಟ್ಟಿತು. ಅಲ್ಲಿಂದ ಗ್ರೀಕ್‌ಗೆ ಹೋಗಿ ‘ಮೆಲಿಟ್ಜಾನಾ’ ಆಯ್ತು, ಲ್ಯಾಟಿನ್‌ನಲ್ಲಿ ‘ಮೆಲೊಂಜೆನಾ’ ಎಂದಾಯ್ತು. ಬದನೆಯ ಸಸ್ಯಶಾಸ್ತ್ರೀಯ ಹೆಸರು ‘ಸೊಲಾನಮ್ ಮೆಲೊಂಜೆನಾ’ ಎಂದಾದದ್ದು ಹೀಗೆಯೇ. ಲ್ಯಾಟಿನ್‌ನ ಮೆಲೊಂಜೆನಾವನ್ನು ಕೆಲ ಇಂಗ್ಲಿಷರು ‘ಮೆಲಾ ಇನ್ಸಾನಾ’ ಇರಬಹುದೆಂದುಕೊಂಡು ಆ ಪದಗಳನ್ನು ಇಂಗ್ಲಿಷ್ ಗೆ ತರ್ಜುಮೆಗೊಳಿಸಿ ಬದನೆಯನ್ನು ‘ಮ್ಯಾಡ್ ಆಪಲ್’ ಎಂದದ್ದೂ ಇದೆ. ಹಾಗೆಯೇ ಪೋರ್ಚುಗೀಸ್‌ನ ‘ಬೆರಿಂಜೆಲಾ’ವನ್ನೂ ಕೆಲ ಇಂಗ್ಲಿಷರು ‘ಬ್ರೌನ್ ಜೆಲ್ಲಿ’ ಎಂದು ತಪ್ಪಾಗಿ ತರ್ಜುಮೆ ಮಾಡಿದ್ದಿದೆ.

ವೆಸ್ಟ್‌ಇಂಡೀಸ್‌ನಲ್ಲಿ ಬದನೆಯ ಹೆಸರು ಬ್ರೌನ್ ಜೆಲ್ಲಿ ಎಂದೇ. ಅಲ್ಲಿಗೆ ಮುಗಿಯಲಿಲ್ಲ ಬದನೆಯ ದಂಡಯಾತ್ರೆ. 16ನೆಯ ಶತಮಾನದ ಹೊತ್ತಿಗೆ ಪೋರ್ಚು ಗೀಸರು ಭಾರತದಲ್ಲಿ ತಳವೂರಿದಾಗ ತಮ್ಮ ಜೊತೆಗೆ ಬೆರಿಂಜೆಲಾ ಬದನೆಯನ್ನೂ ತಂದರು. ಅವರ ನಂತರ ಬಂದು ನಮ್ಮನ್ನಾಳಿದ ಇಂಗ್ಲಿಷರು ಅದನ್ನು ಭಾರತದಲ್ಲಿ ‘ಬ್ರಿಂಜಾಲ್’ ಆಗಿಸಿದರು. ಅಂದರೆ, ಶತಮಾನಗಳ ಹಿಂದೆ ಭಾರತದಿಂದ ಹೋಗುವಾಗ ‘ವಾತಿಂಗಣ’ ಆಗಿದ್ದ ಬದನೆ ಮತ್ತೆ ಭಾರತಕ್ಕೆ ಮರಳಿದಾಗ ಹಲವಾರು ರೂಪಾಂತರಗಳಿಂದಾಗಿ ‘ಬ್ರಿಂಜಾಲ್’ ಆಯ್ತು. ಅಬ್ಬಾ! ಎಂತಹ ವಿಶ್ವಪರ್ಯಟನೆ! ಬೇರಾವುದೇ ತರಕಾರಿ, ಹಣ್ಣು, ಅಥವಾ ಹೂವಿಗೆ ಇದೆಯೇ ಈ ಅಗ್ಗಳಿಕೆ? ಇಂತಹ ಕೀರ್ತಿವಂತ ಬದನೆಯನ್ನು ಕನ್ನಡದ ಗಾದೆಗಳಲ್ಲಿ, ನುಡಿಗಟ್ಟುಗಳಲ್ಲಿ ಅದೇಕೆ ಕೀಳಾಗಿ ಕಾಣಲಾಗಿದೆಯೋ.

ಆದರೆ ಪುಣ್ಯವಶಾತ್ ನಮ್ಮ ಕರಾವಳಿ ಪ್ರದೇಶದಲ್ಲಿ ಹಾಗಿಲ್ಲ. ಬದನೆಯದೇ ಒಂದು ವಿಧವಾದ ‘ಗುಳ್ಳ’ ದಿಂದಾಗಿ ಬದನೆಗೆ ಅಲ್ಲಿ ಮಠಮಾನ್ಯತೆ ಮರ್ಯಾದೆ ಸಿಕ್ಕಿವೆ. ಇದಕ್ಕೆ ನಾವು ಶ್ರೀ ವಾದಿರಾಜ ಸ್ವಾಮಿಗಳಿಗೆ ಕೃತಜ್ಞರಾಗಿರಬೇಕು. ಉಡುಪಿಯ ಹತ್ತಿರದ ‘ಮಟ್ಟಿ’ ಎಂಬಲ್ಲಿ ಬೆಳೆಯುವ ಬದನೆಗೆ ‘ವಾದಿರಾಜ ಗುಳ್ಳ’ ಎಂದೇ ಹೆಸರು. ಇದಕ್ಕೊಂದು ಸ್ವಾರಸ್ಯಕರ ಐತಿಹ್ಯವೂ ಇದೆ. ವಾದಿರಾಜರು ಪ್ರತಿದಿನವೂ ಹಯಗ್ರೀವ ರೂಪದ ಶ್ರೀಮನ್ನಾರಾಯಣನಿಗೆ ಒಂದು ಹರಿವಾಣದಲ್ಲಿ ನೈವೇದ್ಯ ಅರ್ಪಿಸುತ್ತಿದ್ದರು. ಆಗ ಗರ್ಭಗುಡಿಯ ಬಾಗಿಲು ಹಾಕಿಕೊಳ್ಳುತ್ತಿದ್ದರು. ಪೂಜೆ ಮುಗಿದು ಬಾಗಿಲು ತೆಗೆದಾಗ ಹೊರಗೆ ನಿಂತಿರುತ್ತಿದ್ದ ಭಕ್ತಾದಿಗಳಿಗೆ, ಬ್ರಾಹ್ಮಣವರ್ಗಕ್ಕೆ ಆಶ್ಚರ್ಯ. ಏಕೆಂದರೆ ಪ್ರತಿದಿನವೂ ಹರಿವಾಣ ಖಾಲಿ ಆಗಿರುತ್ತಿತ್ತು.

ಬಹುಶಃ ವಾದಿರಾಜರೇ ನೈವೇದ್ಯವನ್ನು ತಿಂದುಮುಗಿಸುತ್ತಾರೆ ಎಂದು ಅವರಿಗೆ ಗುಮಾನಿ. ಕೊಂಚಮಟ್ಟಿನ ಅಸೂಯೆ ಕೂಡ. ಆದರೆ ನೇರವಾಗಿ ಅವರನ್ನೇ
ಕೇಳುವ ಧೈರ್ಯವಿಲ್ಲ. ಅದಕ್ಕಾಗಿ ಅವರೆಲ್ಲ ಸೇರಿ ಮಠದ ಅಡುಗೆಯವನ ಮನವೊಲಿಸಿ ಒಂದುದಿನ ನೈವೇದ್ಯದ ಆಹಾರಕ್ಕೆ ವಿಷ ಬೆರೆಸುವಂತೆ ಹೇಳಿದರು. ಆದಿನವೂ ವಾದಿರಾಜರು ಯಥಾಪ್ರಕಾರ ನೈವೇದ್ಯವನ್ನು ಹಯಗ್ರೀವನಿಗೆ ಅರ್ಪಿಸಿದರು. ಹಯಗ್ರೀವ ಅದನ್ನು ಪ್ರೀತಿಯಿಂದ ಸ್ವೀಕರಿಸಿದನು. ಒಂದೊಮ್ಮೆಗೆ ಯಾವುದೇ ಚಲನೆಯಿಲ್ಲದೆ ಸ್ತಂಭೀಭೂತನಾದನು. ಮೈ ಕಡುನೀಲಿ ಬಣ್ಣಕ್ಕೆ ತಿರುಗಿತು.

ವಾದಿರಾಜರು ಹಯಗ್ರೀವನತ್ತ ನೋಡಿದಾಗ ನೈವೇದ್ಯದಲ್ಲಿ ವಿಷ ಬೆರೆಸಲಾಗಿರುವ ಸಂಗತಿಯನ್ನು ಹಯಗ್ರೀವನೇ ವಾದಿರಾಜರಿಗೆ ತಿಳಿಸಿದನು. ತನಗೇನೂ ಆಗದು, ಆದರೆ ತಪ್ಪು ಮಾಡಿದವರಿಗೆ ಶಿಕ್ಷೆ ಆಗಿಯೇ ಆಗುತ್ತದೆ ಎಂದು ಭರವಸೆಯಿತ್ತನು. ಹಾಗೆಯೇ, ‘ಮಟ್ಟಿ’ ಎಂಬ ಹಳ್ಳಿಯಲ್ಲಿರುವ ಕೆಲವು ಬ್ರಾಹ್ಮಣರು ಜಾತಿಭ್ರಷ್ಟರಾಗಿದ್ದು ಅವರನ್ನು ಸಕ್ರಮಗೊಳಿಸಬೇಕಿದೆ, ಅವರಿಗೆ ಈ ಬೀಜಗಳನ್ನು ಕೊಟ್ಟು ಇದರಿಂದ ಅವರು ಗುಳ್ಳ(ಬದನೆ) ಬೆಳೆಸಬೇಕು. ಅದರಿಂದ
ತಯಾರಿಸಿದ ಪದಾರ್ಥವನ್ನು ನನಗೆ ೪೮ ದಿನಗಳ ಕಾಲ ಪ್ರತಿದಿನವೂ ಅರ್ಪಿಸಬೇಕು. ಆಗ ನನ್ನ ಮೈಗೇರಿವ ವಿಷ ಇಳಿಯುವುದು’ ಎನ್ನುತ್ತ ಬೀಜಗಳನ್ನು ವಾದಿರಾಜರಿಗಿತ್ತನು.

ನೈವೇದ್ಯಕ್ಕೆ ವಿಷ ಸೇರಿಸುವಂತೆ ಅಡುಗೆಯವನನ್ನೊಲಿಸಿದ್ದ ಕುಹಕಿಗಳು ಆವತ್ತು ರಾತ್ರಿಯೇ ಅಸುನೀಗಿದರು. ವಾದಿರಾಜರು ಹಯಗ್ರೀವನ ಅಪ್ಪಣೆಯಂತೆ ಮಟ್ಟಿಗೆ ಹೋಗಿ ಅಲ್ಲಿಯ ಜಾತಿಭ್ರಷ್ಟ ಬ್ರಾಹ್ಮಣರಿಗೆ ಗುಳ್ಳದ ಬೀಜಗಳನ್ನು ಕೊಟ್ಟು ಅವುಗಳಿಂದ ಬೆಳೆ ತೆಗೆಯಲು ಹೇಳಿದರು. ಆ ಗುಳ್ಳಗಳಿಂದ ಮಾಡಿದ ಪದಾರ್ಥವನ್ನು ೪೮ ದಿನ ಹಯಗ್ರೀವ ಸ್ವಾಮಿಗೆ ನೈವೇದ್ಯವಾಗಿ ಅರ್ಪಿಸಲಾಯಿತು. ಕಡುನೀಲಿಯಾಗಿದ್ದ ಮೈ ತಿಳಿಯಾಯಿತು. ಆಗಿನಿಂದ ಮಟ್ಟಿ ಗುಳ್ಳ ಪ್ರಸಿದ್ಧವಾಯಿತು. ಅಭೋಜ್ಯವೆಂದು ನಂಬಲಾಗಿದ್ದ ಬದನೆ ವಾದಿರಾಜರ ಮಠದಲ್ಲಿ ನಿತ್ಯದ ನೈವೇದ್ಯವಾಯಿತು.

ದಕ್ಷಿಣಕನ್ನಡದವರೇ ಆದ ಕವಿ ಮುಂಡಾಜೆ ರಾಮಚಂದ್ರ ಭಟ್ಟರು (‘ಅಪ್ಪನು ಮಾಡಿದ ಚೌತಿಯ ಪ್ರತಿಮೆಗೆ ಆನೆಯ ಸೊಂಡಿಲ ಮೊಗವಿತ್ತು…’ ಸೇರಿದಂತೆ ನೂರಾರು ಶಿಶುಗೀತೆಗಳನ್ನು ಬರೆದ ಅಧ್ಯಾಪಕ-ಕವಿ) ಸರ್ವಜ್ಞನ ತ್ರಿಪದಿಗಳನ್ನು ಹೋಲುವ ಸುಮಾರು ೨೦೦ಕ್ಕೂ ಹೆಚ್ಚು ತ್ರಿಪದಿಗಳನ್ನು ಬರೆದಿದ್ದಾರೆ. ನೀತಿಬೋಧೆ, ಸಮಾಜದ ಓರೆಕೋರೆಗಳಿಗೆ ಚಾಟಿ, ಮತ್ತೆ ಅಲ್ಲಲ್ಲಿ ಲಘು ಹಾಸ್ಯ ಇದೆಲ್ಲದರ ಹೂರಣವಾಗಿರುವ ಆ ತ್ರಿಪದಿಗಳಿಗೆ ‘ರಾಮಣ್ಣನ ರಗಳೆಗಳು’
ಎಂದು ಹೆಸರು. ದ್ವಿತೀಯಾಕ್ಷರ ಪ್ರಾಸವೂ ಇದ್ದು ಅವು ಛಂದೋಬದ್ಧ ರಚನೆಗಳು.

ಒಂದೆರಡು ತ್ರಿಪದಿಗಳಲ್ಲಿ ಅವರು ಬದನೆ ಮತ್ತು ಗುಳ್ಳಗಳನ್ನು ಕೊಂಡಾಡಿದ್ದಾರೆ, ಹೀಗೆ: ‘ಮುಳ್ಳು ಬೇಲಿಗೆ ಲೇಸು ಸುಳ್ಳು ಸಚಿವಗೆ ಲೇಸು| ಎಳ್ಳು ಕಜ್ಜಾಯಕ್ಕೆ;
ಊಟಕ್ಕೆ ಉಡುಪಿಯ| ಗುಳ್ಳವೇ ಲೇಸು ರಾಮಣ್ಣ’ ಇದು ಉತ್ಪ್ರೇಕ್ಷೆ ಅಲ್ಲ. ಗುಳ್ಳ ಮಾಮೂಲಿ ಬದನೆಯಂತಲ್ಲ, ಗುಳ್ಳದ ಹುಳಿ ಮಾಡಿದರೆ ವಿಶೇಷವಾದ ಪರಿಮಳ ಘಮ್ಮನೆ ಮೂಗಿಗೆ ಅಡರುತ್ತದೆ.

ಇನ್ನೊಂದು ತ್ರಿಪದಿ ಬದನೆ ಹುಳಿಯನ್ನು ಕುರಿತು: ‘ಮಗ್ಗಿ ಬಂದರೆ ಲೆಕ್ಕ ಸುಗ್ಗಿ ಬೆಳೆದರೆ ಗದ್ದೆ| ನುಗ್ಗೆಕಾಯಿ ಬೆರೆಸಿದ ಬದನೆಯ ಹುಳಿಯು| ಸಗ್ಗದಲು ಸಿಗದು ರಾಮಣ್ಣ’ – ಇದೂ ಅಷ್ಟೇ. ಉತ್ಪ್ರೇಕ್ಷೆಯ ಮಾತಲ್ಲ. ಹಿತ್ತಲಿನಿಂದ ಆಗತಾನೆ  ಯ್ದುತಂದ ಫ್ರೆಷ್ ಬದನೆಕಾಯಿ ಜೊತೆಗೆ ನುಗ್ಗೆಕಾಯಿಯನ್ನೂ ಹಾಕಿ ಹುಳಿ ಮಾಡಿದರೆ ಆಹಾ! ಅದು ರಾಜಮಾನ್ಯವೇ ಆಗಿರುತ್ತದೆ. ಸ್ವರ್ಗದಲ್ಲೂ ಅಂಥ ರಸದೌತಣ ಸಿಗಲಿಕ್ಕಿಲ್ಲ ಎಂಬ ಕವಿವಾಣಿ ಅಕ್ಷರಶಃ ಸತ್ಯ.

ಜೋಳದ ಭಕ್ರಿಯೊಂದಿಗೆ ಎಣ್ಣೆಗಾಯಿ ಪಲ್ಯ ಸವಿಯುವ ಬಯಲುಸೀಮೆಯವರೂ ಬದನೆಯ ಬಗೆಗೆ ಇದೇ ಅಭಿಮಾನ ಇಟ್ಟುಕೊಂಡಿದ್ದಾರೆಂದು ನನ್ನ ಅಂದಾಜು. ಹಾಗಾಗಿ, ಈ ಲೇಖನದ ಆರಂಭದಲ್ಲಿ ಪ್ರಸ್ತಾವಿಸಿದ ಶಿಶುಗೀತೆಯಲ್ಲಿ ‘ಬಂದೋರ್ಗೆಲ್ಲ ವಂದನೆ ಹೇಳುವ’ ಕೆಲಸವನ್ನು ಬದನೆಕಾಯಿ ಮಾಡಿದ್ದಾದರೂ, ನಿಜವಾಗಿ ವಂದನೆ ಸಲ್ಲಿಸಬೇಕಾದ್ದು ನಾವು, ಬದನೆಗೆ!