Thursday, 19th September 2024

ಮಾನವೀಯ ಮೌಲ್ಯ ಕಟ್ಟಿಕೊಡಬೇಕಿದೆ

ಕಳೆದ ಮೂರ‍್ನಾಲ್ಕು ದಿನಗಳಲ್ಲಿ ರಾಜ್ಯದಲ್ಲಿ ಮೂರು ಅಮಾನವೀಯ ಘಟನೆಗಳು ನಡೆದಿವೆ. ಪಾರ್ಶ್ವವಾಯುವಿಗೆ ಒಳಗಾಗಿ ಮೃತಪಟ್ಟಿದ್ದ ಮಹಾರಾಷ್ಟ್ರದ ಪುಣೆ ಮೂಲದ ವೃದ್ಧ ಮೂಲಚಂದ್ರ ಶರ್ಮಾ ಎಂಬುವವರ ಅಂತ್ಯಕ್ರಿಯೆಗೆ ವಿದೇಶಗಳಲ್ಲಿ ನೆಲೆಸಿರುವ ಅವರ ಮಕ್ಕಳು ಬರಲು ನಿರಾಕರಿಸಿದ್ದರಿಂದ ಚಿಕ್ಕೋಡಿ ಪೊಲೀಸರು, ಅಧಿಕಾರಿಗಳೇ ಸೇರಿ ಅಂತ್ಯಕ್ರಿಯೆ ನೆರವೇರಿಸುವಂತಾಗಿದೆ. ಇನ್ನೊಂದೆಡೆ ಹಾಸನ ಸಮೀಪದ ಅಕ್ಕಲವಾಡಿ ಎಂಬ ಗ್ರಾಮದಲ್ಲಿ ತನ್ನ ಮನೆ ಕಟ್ಟಲು ತಾಯಿಯ ಹೆಸರಿನಲ್ಲಿ ಸಾಲ ಪಡೆದಿದ್ದ ಮಗ, ತಾಯಿ ಸತ್ತರೆ ಸಾಲ ತೀರಿಸುವಂತಿಲ್ಲ ಎಂದುಕೊಂಡು, ತಂದೆ ತಾಯಿಗೆ ಆಹಾರದಲ್ಲಿ ವಿಷವಿಟ್ಟು ಕೊಂದಿದ್ದಾನೆ. ಮತ್ತೊಂದೆಡೆ ಕೋಲಾರದಲ್ಲಿ ಪರಿಶಿಷ್ಟ ಪಂಗಡದ ಬಾಲಕನನ್ನು ಪ್ರೀತಿಸಿದ್ದ ಒಕ್ಕಲಿಗ ಯುವತಿಯನ್ನು ಆಕೆಯ ತಂದೆಯೇ ಕೊಲೆ ಮಾಡಿ ತಮ್ಮ ಸಹೋದರರ ಸಹಾಯದೊಂದಿಗೆ ತೋಟದಲ್ಲಿ ಹೂತುಹಾಕಿದ್ದ ಪ್ರಕರಣ ವರದಿಯಾಗಿದೆ.
ಈ ಮೂರೂ ಪ್ರಕರಣಗಳನ್ನು ಗಮನಿಸಿದರೆ, ಸ್ವಂತ ತಂದೆ-ತಾಯಿ ಮತ್ತು ಮಕ್ಕಳ ಮೇಲೆ ಯಾರಿಗೂ ಪ್ರೀತಿಯೇ ಇಲ್ಲದಂತಾಯಿತೇ? ಅಷ್ಟು ವರ್ಷ ಹೆತ್ತು, ಹೊತ್ತು ಸಾಕಿದ ತಂದೆಯ ಮನಸ್ಸು, ಮಗಳ ಮದುವೆಗೆ ಸ್ವಾತಂತ್ರ್ಯ ನೀಡದೆ ಆಕೆಯನ್ನೇ ಕೊಲ್ಲುವಷ್ಟು ಕ್ರೂರವಾಯಿತೇ? ಮಕ್ಕಳ ಭವಿಷ್ಯ ಕ್ಕೋಸ್ಕರ ತ್ಯಾಗ ಮಾಡಿದ ಹೆತ್ತವರನ್ನು ಮಕ್ಕಳು ಮರೆತರೇ? ಹರಿಹರೆಯದವರಿಗೂ ತಾಳ್ಮೆ ಇಲ್ಲ, ವಯಸ್ಸಾದವರಿಗೂ ತಾಳ್ಮೆ ಇಲ್ಲದಂತಾಯಿತೆ? ಯಾಕಿಷ್ಟು ಕ್ರೌರ್ಯ? ಎಂಬ ಪ್ರಶ್ನೆಗಳು ನಾಗರಿಕ ಸಮಾಜದ ಪ್ರತಿಯೊಬ್ಬರಲ್ಲೂ ಹುಟ್ಟಿಕೊಂಡಿವೆ. ಜೀವನದ ಮೌಲ್ಯಗಳು ನಶಿಸಿಹೋಗುತ್ತಿರುವುದರಿಂದಲೇ ವಿಕೃತ ಮನಸ್ಥಿತಿ ಹೆಚ್ಚಾಗಿ ಇಂತಹ ಕ್ರೂರ ಕೃತ್ಯಗಳು ನಡೆಯುತ್ತಿವೆ.
ಹೀಗಾಗಿ ಮನುಷ್ಯನಿಗೆ ಮೌಲ್ಯವರ್ಧನೆಯ ಶಿಕ್ಷಣ ಅಗತ್ಯವಿದೆ. ಮನುಷ್ಯನ ವರ್ತನೆಗೆ ನೈತಿಕತೆಗೆ ಸಂಬಂಧಿಸಿದಂತೆ ಯಾವುದು ಸರಿ, ಯಾವುದು ತಪ್ಪು, ಯಾವುದಕ್ಕೆ ಎಷ್ಟು ಪ್ರಾಮುಖ್ಯ ನೀಡಬೇಕು, ಜೀವನದ ಗುರಿ ಏನಾಗಬೇಕು ಎಂಬುದನ್ನು ನಿರ್ಧರಿಸುವುದರಲ್ಲಿ ನಾವು ಒಪ್ಪಿಕೊಂಡಿರುವ ಮೌಲ್ಯಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಆದ್ದರಿಂದ ನೈತಿಕ ಸದ್ಗುಣಗಳಾದ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ, ಸಹನೆ, ಅನುಕಂಪಕ, ಸತ್ಯ, ನ್ಯಾಯ, ಸಚ್ಚಾರಿತ್ರ, ಅಹಿಂಸೆ, ಸಹಕಾರ, ಸಹೋದರತ್ವ, ಸಹಿಷ್ಣುತಾಭಾವಗಳ ಕುರಿತು ತಿಳಿವಳಿಕೆ ಅಗತ್ಯವಿದೆ. ಆಗ ಮಾತ್ರ ಅಪರಾಧ ಜಗತ್ತಿನಿಂದ ಮುಕ್ತವಾಗಿ, ಸ್ವಾಸ್ಥ್ಯ ಸಮಾಜ ನೋಡಲು ಸಾಧ್ಯವಾಗುತ್ತದೆ.

Leave a Reply

Your email address will not be published. Required fields are marked *