Friday, 20th September 2024

ತಮ್ಮ ಉಪವಾಸ ಸತ್ಯಾಗ್ರಹ ಕುರಿತು ಆ ಓದುಗನ ಪತ್ರ ಓದಿ ಗಾಂಧೀಜಿ ಕಂಪಿಸಿದ್ದರು !

ನೂರೆಂಟು ಮಾತು

ವಿಶ್ವೇಶ್ವರ ಭಟ್

ಸುಮಾರು ಅರವತ್ತು – ಅರವತ್ತೈದು ವರ್ಷಗಳ ಹಿಂದೆ, ‘ದಿ ಟೈಮ್ಸ್ ಆಫ್ ಇಂಡಿಯಾ’ದಲ್ಲಿ ‘ಸಂಪಾದಕರಿಗೆ ಪತ್ರ’ ಅಂಕಣದಲ್ಲಿ ಒಂದು ಪತ್ರ ಪ್ರಕಟವಾಗಿತ್ತು. ತಿರುಪತಿ ಲಾಡಿನ ಗಾತ್ರ ಕಿರಿದಾಗುತ್ತಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿ, ಬರೆದ ಪತ್ರವದು. ತಿರುಪತಿ ಲಾಡಿನ ಮಹತ್ವ, ಮಹಿಮೆಯ ಜತೆಗೆ, ಅದರ ಗಾತ್ರವನ್ನು ಮೊದಲಿನಂತೆ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ಆ ಪತ್ರದಲ್ಲಿ ವಿವರಿಸಲಾಗಿತ್ತು.

ಖರ್ಚು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದರೆ, ಅದರಂಥ ಮೂರ್ಖತನದ ನಿರ್ಧಾರ ಮತ್ತೊಂದಿಲ್ಲ ಎಂದು ಅದರಲ್ಲಿ ಬರೆಯಲಾಗಿತ್ತು. ಈ ಪತ್ರದಲ್ಲಿ ವ್ಯಕ್ತಪಡಿಸಲಾದ ವಿಷಯಕ್ಕೆ ಬೆಂಬಲ ವ್ಯಕ್ತಪಡಿಸಿ, ಅನೇಕರು ಬರೆದರು. ಅದರ ಬಿಸಿ ದೇವಸ್ಥಾನದ ಆಡಳಿತ ಮಂಡಳಿಗೆ ತಟ್ಟಿತು. ವಿಷಯ ಮನವರಿಕೆಯಾಯಿತು. ಅಲ್ಲಿಗೆ ಲಾಡಿನ ಗಾತ್ರ ಕಿರಿದುಗೊಳಿಸುವ ನಿರ್ಧಾರ ಕೈಬಿಡಲಾಯಿತು. ಅದನ್ನು ತಯಾರಿಸುವವರು ಕಾಲಕಾಲಕ್ಕೆ ಬದಲಾಗಿರಬಹುದು. ಆದರೆ ಲಾಡಿನ ಗಾತ್ರ ಮಾತ್ರ ಅಂದಿನಿಂದ ಇಂದಿನವರೆಗೆ ಬದಲಾಗಿಲ್ಲ. ಪ್ರಾಯಶಃ ಇನ್ನು ಮುಂದೆಯೂ ಇದು ಹೀಗೆ ಮುಂದುವರಿಯಬಹುದು.

ಈ ಪತ್ರವನ್ನು ಬರೆದವರು ಮತ್ಯಾರೂ ಅಲ್ಲ, ಚಕ್ರವರ್ತಿ ರಾಜಗೋಪಾಲಾಚಾರಿ ಅರ್ಥಾತ್ ರಾಜಾಜಿ ! ಆ ಪತ್ರದಲ್ಲಿ ತಿರುಪತಿ ಲಾಡಿನಲ್ಲಿ ಕಸಕಡ್ಡಿ, ಕಬ್ಬಿಣದ ಚೂರು, ಪಿನ್ನು ಮುಂತಾದ ವಸ್ತುಗಳು ಸಿಕ್ಕಿದ್ದನ್ನು ಸಹ ಅವರು ಪ್ರಸ್ತಾಪಿಸಿ, ಅದರ ಗುಣಮಟ್ಟ ಕಡಿಮೆಯಾಗುತ್ತಿರುವುದರ ಬಗ್ಗೆಯೂ ಬರೆದಿದ್ದರು. ಆ ದಿನಗಳಲ್ಲಿ ಆ ಪತ್ರ ಸುಮಾರು ಒಂದು ತಿಂಗಳು ಚರ್ಚೆಯನ್ನು ಹುಟ್ಟುಹಾಕಿತ್ತು. ಇದೇ ವಿಷಯ ಸಂಸತ್ತಿನಲ್ಲೂ ಪ್ರಸ್ತಾಪವಾಯಿತು. ಯಾವ ಕಾರಣಕ್ಕೂ ಲಾಡಿನ ಗಾತ್ರ ಮತ್ತು ರುಚಿಯಲ್ಲಿ ವ್ಯತ್ಯಾಸವಾಗಬಾರದು, ಸ್ವತಃ ತಿರುಪತಿ ವೆಂಕಟೇಶನೇ ಹೇಳಿದರೂ ಇಂಥ ನಿರ್ಧಾರಕ್ಕೆ ಮುಂದಾಗಬಾರದು ಎಂದು ಎಲ್ಲಾ ಪಕ್ಷಗಳ ಸದಸ್ಯರು ಒಕ್ಕೊರಲಿನಿಂದ ಹೇಳಿದರು. ಸಂಸತ್ತಿನ ಈ ನಿರ್ಧಾರಕ್ಕೆ ತನ್ನ ನಿಲುವು ಪ್ರಕಟಿಸಬೇಕೆಂದು ಆಡಳಿತ ಮಂಡಳಿಗೆ ಸೂಚಿಸಲಾಯಿತು.

ಯಥಾಸ್ಥಿತಿ ಕಾಯ್ದುಕೊಳ್ಳುವುದಾಗಿ ಆಡಳಿತ ಮಂಡಳಿ ಪ್ರಕಟಿಸಿತು. ರಾಜಾಜಿ ಬರೆದ ಒಂದು ಪತ್ರ ಇಂಥ ಮಹತ್ವದ ಚರ್ಚೆ ಮತ್ತು ನಿರ್ಧಾರಕ್ಕೆ ಕಾರಣವಾಗಿತ್ತು. 1927ರ ಜನೆವರಿ 13ರ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯಲ್ಲಿ ಪಂಡರಾಪುರದ ಪಿಎವಿ ಸ್ಕೂಲಿನ ಹೆಡ್ ಮಾಸ್ಟರ್ ಎಸ್.ವಿ.ಕುಂಟೆ ಎಂಬುವವರು ಭಾರತದಲ್ಲಿ ನಡೆಯುವ ಮದುವೆ, ಅದಕ್ಕಾಗುವ ಖರ್ಚು, ದುಂದು
ವೆಚ್ಚ, ಅದರಿಂದ ಸಮಾಜದಲ್ಲಿ ಆಗುತ್ತಿರುವ ತಲ್ಲಣ, ಕನ್ಯಾಪಿತೃಗಳು ಅನುಭವಿಸುತ್ತಿರುವ ಸಂಕಷ್ಟ, ಅಂಥ ಮದುವೆಗೆ ಕಡಿವಾಣ ಹಾಕುವ ಅಗತ್ಯದ ಬಗ್ಗೆೆ ಸುದೀರ್ಘ ಪತ್ರ ಬರೆದಿದ್ದರು. ಅದನ್ನು ಓದಿದ ಮಹಾತ್ಮ ಗಾಂಧಿ ತಕ್ಷಣ ಪ್ರತಿಕ್ರಿಯೆ ನೀಡಿ ದ್ದರು. ‘ಕುಂಟೆ ಅವರು ಬರೆದ ವಿಚಾರ ಸಮಯೋಚಿತ ಮತ್ತು ಸಮರ್ಪಕವಾಗಿದೆ. ಈ ಅನಿಷ್ಟ ಪದ್ಧತಿ ನಿಲ್ಲಬೇಕು, ಮದುವೆಗೆ ದುಂದುವೆಚ್ಚ ಮಾಡಬಾರದು. ಅದು ಮೂರ್ಖತನ. ಮದುವೆ ಹಲವು ಸಮಸ್ಯೆಗಳಿಗೆ ಅವಕಾಶವಾಗಬಾರದು. ಅದೊಂದು ತೀರಾ ವೈಯಕ್ತಿಕ ವಿಷಯ. ಈ ಬಗ್ಗೆ ನಮ್ಮ ಜನರಲ್ಲಿ ಹೊಸ ವಿವೇಕ ಮೂಡಬೇಕಾದ ಅಗತ್ಯವಿದೆ. ನಾನೂ ನನ್ನ ಮಕ್ಕಳ ಮದುವೆ ಯನ್ನು ತೀರಾ ಸರಳಾಗಿ ಮಾಡಿದ್ದೇನೆ.

ನಮ್ಮ ಐಶ್ವರ್ಯ, ಸಂಪತ್ತು ತೋರಿಸಲು ಮದುವೆಯನ್ನು ಅವಕಾಶವನ್ನಾಗಿ ಮಾಡಿಕೊಳ್ಳಬಾರದು. ಆಗ ಮದುವೆಯ
ಪವಿತ್ರ ಅರ್ಥ ಹಾಳಾಗುತ್ತದೆ’ ಎಂದು ಅವರು ಅದೇ ಪತ್ರಿಕೆಗೆ ಪತ್ರ ಬರೆದಿದ್ದರು. ನನಗೆ ಬರುವ (Letters To The Editor) ಪತ್ರ ಗಳನ್ನು ಮಾತ್ರ ನಾನೇ ಓದುತ್ತೇನೆ. ಓದುಗರ ಪತ್ರವನ್ನು ಅದರ ಮೂಲಸ್ವರೂಪದಲ್ಲಿಯೇ ಓದಬೇಕು.

ಓದುಗರು ವ್ಯಕ್ತಪಡಿಸುವ ಅಭಿಪ್ರಾಯಗಳು ಬಹಳ ರಸವತ್ತಾಗಿರುತ್ತವೆ. ಅವರಿಗೆ ಯಾರ ಮುಲಾಜೂ ಇರುವುದಿಲ್ಲ. ಹೇಳ ಬೇಕಾ ದುದನ್ನು ನೇರಾನೇರ ಹೇಳುತ್ತಾರೆ. ಭ್ರಷ್ಟನನ್ನು ಭ್ರಷ್ಟ ಎಂದೇ ಹೇಳುತ್ತಾರೆ. ಅಲ್ಲಿ ತಮ್ಮ ಅನಿಸಿಕೆಯನ್ನು soft ಮಾಡಲು ಹೋಗುವುದಿಲ್ಲ. ತಮ್ಮ ಕೋಪ – ತಾಪಗಳನ್ನು ಹಸಿಹಸಿಯಾಗಿಯೇ ವ್ಯಕ್ತಪಡಿಸಿರುತ್ತಾರೆ. ಅವರಿಗೆ ವಿಷಯದ ಬಗೆಗಷ್ಟೇ ಕಾಳಜಿ.
ಅವರು politically correct ಆಗಿ ತಮ್ಮ ಮಾತನ್ನು ಬಾಗಿಸುವುದಿಲ್ಲ. ಬಹಳ ಶಾಣ್ಯಾತನ ಪ್ರದರ್ಶಿಸುವುದಿಲ್ಲ.

ಕೆಟ್ಟವರಾದರೂ ಪರವಾಗಿಲ್ಲ, ಸಮಸ್ಯೆ ಸರಿಯಾದರೆ ಸಾಕು ಎಂಬ ಆಶಯದಿಂದ ಅವರು ಪತ್ರಿಕೆಗಳಿಗೆ ಪತ್ರ  ಬರೆಯುತ್ತಾರೆ. ಯಾರನ್ನೋ ಖುಷಿಪಡಿಸಬೇಕೆಂಬ ಚಪಲ, ವಾಂಛೆ ಅವರಿಗಿರುವುದಿಲ್ಲ. 1922ರ ಫೆಬ್ರವರಿ 20 ರ ‘ಟೈಮ್ಸ್ ಆಫ್ ಇಂಡಿಯಾ’
ಪತ್ರಿಕೆಯಲ್ಲಿ ತುಕಾರಾಮ್ ಎಂಬುವವರು ಬರೆದ ಪತ್ರ ನನಗೆ ನೆನಪಾಗುತ್ತದೆ. ಈ ಪತ್ರವನ್ನು ಸಂಪಾದಕರು ಯಾಥಾವತ್ತಾಗಿ ಪ್ರಕಟಿಸಿದ್ದರು. ಅದಕ್ಕೆ ನೀಡಿದ ಶೀರ್ಷಿಕೆ – “Is Mr.Gandhi a fraud?’  ಈ ಪತ್ರ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ತುಕಾರಾಮ್ ಬರೆದ ಪತ್ರದ ಸಾರಾಂಶವಿದು – ‘ತಮ್ಮ ಬೆಂಬಲಿಗರು ಚೌರಿಚೌರಾದಲ್ಲಿ ನಡೆಸಿದ ಹಿಂಸಾಚಾರಕ್ಕೆ ಪ್ರಾಯಶ್ಚಿತವಾಗಿ ಗಾಂಧೀಜಿ ಐದು ದಿನಗಳಿಂದ ಉಪವಾಸ ಕುಳಿತಿದ್ದಾರೆ. ಈ ಮೂಲಕ ಗಾಂಧೀಜಿ ತಾವೊಬ್ಬ ಸಂತ ಎಂಬ ರೀತಿಯಲ್ಲಿ ಪೋಸು ಕೊಡು ತ್ತಿದ್ದಾರೆ.

ಉತ್ತಮ ಹಿನ್ನೆಲೆ, ಚಾರಿತ್ರ್ಯ ಹೊಂದಿರುವ ನನ್ನ ಸ್ನೇಹಿತರೊಬ್ಬರು ಗಾಂಧೀಜಿಯವರನ್ನು ಈ ಸಂದರ್ಭದಲ್ಲಿ ಭೇಟಿ ಮಾಡಿದ್ದರು. ಉಪವಾಸ ಸತ್ಯಾಗ್ರಹಕ್ಕೆ ಕುಳಿತ ಗಾಂಧೀಜಿಯನ್ನು ಭೇಟಿಯಾದಾಗ ಕಂಡ ದೃಶ್ಯ ನನ್ನ ಸ್ನೇಹಿತರಲ್ಲಿ ಅಚ್ಚರಿ ಮತ್ತು ಆಘಾತ ಮೂಡಿಸಿತು.’ ‘ಹಣ್ಣು – ಹಂಪಲು, ಇನ್ನಿತರ ತಿಂಡಿ – ತಿನಿಸುಗಳನ್ನು ಪೂರೈಸುವಂತೆ ಗಾಂಧೀಜಿ ತಮ್ಮ ಸಹಾಯಕರಿಗೆ ಹೇಳಿ ದ್ದನ್ನು ನನ್ನ ಸ್ನೇಹಿತರು ಕೇಳಿಸಿಕೊಂಡರು. ಆಹಾರ ಸೇವಿಸಿಯೂ ಉಪವಾಸ ಸತ್ಯಾಗ್ರಹ ಕುಳಿತು ಭಾರಿ ಪ್ರಚಾರ ಪಡೆಯುವ ಚಿಲ್ಲರೆ ಪ್ರವೃತ್ತಿ ಗಾಂಧೀಜಿಯವರಿಗೆ ಬೇಕಿದೆಯಾ? ಗಾಂಧೀಜಿಯಂಥ ನಾಯಕರಿಗೆ ಇದರ ಅಗತ್ಯ ಇಲ್ಲ.

ಹಿಂಸಾಚಾರ ದಲ್ಲಿ ಮಡಿದವರ ಕುಟುಂಬಕ್ಕೆ ನಿಜವಾಗಿಯೂ ಏನಾದರೂ ಸಹಾಯ ಮಾಡಬೇಕೆಂಬ ಕಳಕಳಿ ಗಾಂಧೀಜಿಯವರಿಗಿದ್ದರೆ, ತೋರಿಕೆಗೆ ಉಪವಾಸ ಸತ್ಯಾಗ್ರಹದ ನಾಟಕ ಮಾಡುವುದನ್ನು ಬಿಟ್ಟು ಕಾಂಗ್ರೆಸ್ – ಖಿಲಾಫತ್ ನಿಧಿಯಿಂದ ಹಣ ನೀಡಬೇಕು. ಉಪವಾಸ ಸತ್ಯಾಗ್ರಹದಿಂದ ಏನೂ ಪ್ರಯೋಜನವಿಲ್ಲ. ಅದರಲ್ಲೂ ಉಪವಾಸ ಕುಳಿತ ಸ್ಥಳದ ಹಿಂದೆ ಹೋಗಿ ಆಗಾಗ ಹಣ್ಣು ತಿಂದು, ಹಣ್ಣಿನ ರಸ ಕುಡಿದು ಬಂದರೆ ಅದನ್ನು ಉಪವಾಸ ಸತ್ಯಾಗ್ರಹ ಎಂದು ಹೇಳುತ್ತಾರಾ?’ ‘ತಾವು ಗುಂಡೇಟಿನಿಂದ ಸಾಯಲು ಬಯಸುವುದಾಗಿ ಗಾಂಧೀಜಿ ಹೇಳುತ್ತಾರೆ. ಮುಂಬೈ ಗಲಭೆ ಸಂದರ್ಭದಲ್ಲಿ ಹೊರ ಬಂದು ಜನರನ್ನು ನಿಯಂತ್ರಿಸಲು ಪ್ರಯತ್ನಿಸಿದ ವ್ಯಕ್ತಿಗೆ ಇದು ಶೋಭಿಸುವ ಮಾತಲ್ಲ. ಗಲಭೆ ನಡೆಯುತ್ತಿದ್ದಾಗ ಗಾಂಧೀಜಿ ಎಲ್ಲಿದ್ದರು? ಮನೆಯೊಳಗೇ ಅಡಗಿ ಕುಳಿತಿದ್ದರು. ಇದನ್ನೇಕೆ ಅವರು ಹೇಳುವುದಿಲ್ಲ? ತಾವು ಹೇಳದಿದ್ದರೆ ಬೇರೆಯವರಿಗೆ ಗೊತ್ತಾಗುವುದಿಲ್ಲ ಎಂದು ಅವರು ಭಾವಿಸಿದ್ದಾರಾ?’

‘ಗಾಂಧೀಜಿಯವರೇ, ಸಂಕಷ್ಟದಿಂದಲೇ ಸ್ವರಾಜ್ಯ ಪಡೆಯಬೇಕೆಂದು ತಾವು ಪದೇ ಪದೆ ಅಪ್ಪಣೆ ಕೊಡಿಸುತ್ತಿದ್ದೀರಿ. ಆದರೆ ಸಂಕಷ್ಟ ಪಡುವವರೇ ಬೇರೆ ಯವರು. ನೀವು ಸುಖವಾಗಿಯೇ ಇರುತ್ತೀರಿ. ನಿಮಗೆ ಅಬ್ರಹಾಂ ಲಿಂಕನ್ ಹೇಳಿದ ಮಾತು ನೆನಪಿರ ಬಹುದು – ಕೆಲವು ಜನರನ್ನು ಎಲ್ಲಾ ಕಾಲದಲ್ಲೂ ಮೂರ್ಖರನ್ನಾಗಿಸಬಹುದು, ಎಲ್ಲ ಜನರನ್ನು ಕೆಲವು ಕಾಲ ಮೂರ್ಖರನ್ನಾಗಿ ಸಬಹುದು, ಆದರೆ ಎಲ್ಲರನ್ನೂ ಎಲ್ಲಾ ಕಾಲದಲ್ಲೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ನಿಮಗೆ ಇದು ತಿಳಿದಿರಲಿ.

ನಿಮ್ಮ ಉಪವಾಸ ಸತ್ಯಾಗ್ರಹದ ನಾಟಕವನ್ನು ತಕ್ಷಣ ನಿಲ್ಲಿಸಿ. ಅಸಹಾಯಕರಾದಾಗ ಗಾಂಧೀಜಿಯವರು ಉಪವಾಸ ಸತ್ಯಾಗ್ರಹ ಆರಂಭಿಸುತ್ತಾರೆ ಎಂದು ಜನ ಮಾತಾಡಿಕೊಳ್ಳುವಂತಾಗಿದೆ. ಇನ್ನು ಮುಂದೆ ನಿಮ್ಮ ಸತ್ಯಾಗ್ರಹವನ್ನು ಜನ ಸಂದೇಹದಿಂದ ನೋಡದಂತಾಗಲಿ.’ ತುಕಾರಾಂ ಬರೆದ ಪತ್ರ ಅದೆಂಥ ಸಂವಾದ, ವಿವಾದ, ಬಿಸಿಬಿಸಿ ಚರ್ಚೆ ಹುಟ್ಟು ಹಾಕಿತ್ತೆಂದರೆ ಪರ-ವಿರೋಧವಾಗಿ ನೂರಾರು ಪತ್ರಗಳು ಬಂದಿದ್ದವು. ಈ ಪತ್ರದ ಬಗ್ಗೆ ಸ್ವತಃ ಗಾಂಧೀಜಿಯವರು ತಮ್ಮ ಒಂದು ಲೇಖನ ಬರೆದು
ಸಮಜಾಯಿಷಿ ನೀಡಬೇಕಾಯಿತು. ಕಾಂಗ್ರೆಸ್ ಕಾರ್ಯಕರ್ತರು ತುಕಾರಾಮನ ವಿಳಾಸ ಹುಡುಕುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ತುಕಾರಾಮ ಎಂಬ ವ್ಯಕ್ತಿ ಮತ್ಯಾರೂ ಅಲ್ಲ, ಗಾಂಧೀಜಿ ಅವರ ಸಮೀಪವರ್ತಿಯೇ ಇರಬೇಕು ಎಂಬ ಮಾತು ಗಳೂ ಕೇಳಿಬಂದವು.

ಅದೇನೇ ಇರಲಿ, ಒಬ್ಬ ಸಾಮಾನ್ಯ ಓದುಗನೊಬ್ಬನ ಪತ್ರ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿತ್ತು. ಈ ಪತ್ರದಿಂದ ಗಾಂಧೀಜಿ ಖುದ್ದು ಕಲ್ಲವಿಲಗೊಂಡಿದ್ದರು. ಪತ್ರ ಪ್ರಕಟವಾದ ದಿನ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಯಾವ  ಪ್ರತಿಕ್ರಿಯೆ ಯನ್ನೂ ನೀಡಲಿಲ್ಲ. ಇಡೀ ದಿನ ಅವರು ಖಿನ್ನಮನಸ್ಕರಾಗಿದ್ದರು. ತಮ್ಮ ಉಪವಾಸ ಸತ್ಯಾಗ್ರಹವನ್ನು ಜನ ಲಘುವಾಗಿ
ಪರಿಗಣಿಸಬಹುದು ಎಂದು ತುಸು ಅಧೀರರಾಗಿದ್ದರು. ಈ ಬಗ್ಗೆೆ ವಿಸ್ತೃತ ಸ್ಪಷ್ಟನೆ ನೀಡಬೇಕೆಂದು ತೀರ್ಮಾನಿಸಿ, ನಂತರ
ಆ ನಿರ್ಧಾರವನ್ನು ಕೈಬಿಟ್ಟರು.

1975 ರ ಅಕ್ಟೊಬರ್ 15 ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ, ಈ ವರ್ಷವನ್ನು ‘ಮಕ್ಕಳರಹಿತ ವರ್ಷ’ವನ್ನಾಗಿ ಆಚರಿಸ ಬೇಕೆಂದು ಕರೆ ನೀಡಿದಾಗ, ಓದುಗರೊಬ್ಬರು ಪತ್ರ ಬರೆದು, ‘ಸರಕಾರ ಹತ್ತು ತಿಂಗಳು ತಡವಾಗಿ ಕ್ರಮ ಕೈಗೊಂಡಿದೆ. ಈ ವರ್ಷ ಮಕ್ಕಳರಹಿತ ವರ್ಷವನ್ನಾಗಿ ಆಚರಿಸಲು ನಿರ್ಧರಿಸಿದ್ದಾರೆ, ಹಿಂದಿನ ವರ್ಷವೇ ಈ ಕಾರ್ಯಕ್ರಮವನ್ನು ಘೋಷಿಸಬೇಕಿತ್ತು’
ಎಂದು ಛೇಡಿಸಿದಾಗ ಸರಕಾರ ಈ ಯೋಜನೆಯನ್ನು ಮುಂದಿನ ವರ್ಷಕ್ಕೆ ಮುಂದೂಡಿತ್ತು. ಸರಕಾರದ ಈ ಮೂರ್ಖತನದ ನಿಲುವನ್ನು ಖಂಡಿಸಿ, ‘ಇಂಥ ಸಣ್ಣ ಸಣ್ಣ, ಸಾಮಾನ್ಯ ಸಂಗತಿಗಳೂ ಸರಕಾರದಲ್ಲಿರುವವರಿಗೆ ಗೊತ್ತಾಗುವುದಿಲ್ಲವಾ?’ ಎಂದು ಜನ ಟೀಕಿಸಿದ್ದರು.

ಮಕ್ಕಳರಹಿತ ವರ್ಷ ಎಂದು ಘೋಷಿಸಲು ಯಾರಿಗೂ ಅಧಿಕಾರವಿಲ್ಲ. ಇದು ಕುಟುಂಬ ಯೋಜನೆಯ ಅಣಕ ಎಂದು ಇನ್ನು ಕೆಲವರು ಟೀಕಿಸಿದ್ದರು. ಒಟ್ಟಾರೆ ಇದೊಂದು ಪತ್ರದಿಂದ ಉತ್ತರಪ್ರದೇಶ ಸರಕಾರಕ್ಕೆ ಸಾಕಷ್ಟು ಮುಖಭಂಗವಾಯಿತು. ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆ ಸಂಪಾದಕರಾಗಿದ್ದ ಸರ್ ಫ್ರಾನ್ಸಿಸ್ ಲೋವ್ ನಿಧನರಾದಾಗ ‘ಇಂಡಿಯನ್ ಎಕ್ಸ್’ಪ್ರೆಸ್’ ಪತ್ರಿಕೆ ಸಂಪಾದಕ ಫ್ರಾಂಕ್ ಮೊರೇಸ್ ಬರೆದ ಪತ್ರವನ್ನು ‘ಟೈಮ್ಸ್ ಆಫ್ ಇಂಡಿಯಾ’ ಪ್ರಕಟಿಸಿತ್ತು.

ಸಾಮಾನ್ಯವಾಗಿ ಒಂದು ಪತ್ರಿಕೆ ಸಂಪಾದಕರಾದವರು ಮತ್ತೊಂದು ಪತ್ರಿಕೆಗೆ ಬರೆಯುವುದಿಲ್ಲ. ಅದರಲ್ಲೂ ‘ಓದುಗರ ಪತ್ರ ವಿಭಾಗ’ಕ್ಕಂತೂ ಬರೆಯುವುದಿಲ್ಲ. ಬೇರೆ ಪತ್ರಿಕೆ ಸಂಪಾದಕರ ಲೇಖನವನ್ನು ಯಾರೂ ಪ್ರಕಟಿಸುವುದೂ ಇಲ್ಲ. ಆದರೆ ಫ್ರಾಂಕ್ಮೊ ರೇಸ್ ತಮ್ಮೆಲ್ಲ ಬಿಂಕ-ಬಡಿವಾರ ಬಿಟ್ಟು ಲೋವ್ ಬಗ್ಗೆ ಬರೆದಿದ್ದರು.

ಮೊರೇಸ್ ತಮ್ಮ ಸ್ನೇಹಿತನ ಬಗ್ಗೆೆ ಬರೆದ ಲೇಖನವನ್ನು ಅಷ್ಟೇ ಮುಕ್ತ ಭಾವದಿಂದ ‘ಟೈಮ್ಸ್’ ಪ್ರಕಟಿಸಿತ್ತು. ಈ ದಿನಗಳಲ್ಲಿ
ಇಂಥ ‘ದುಸ್ಸಾಹಸ’ವನ್ನು ಯಾರೂ ಮಾಡಲಾರರು. ಯಾವ ಸಂಪಾದಕನೂ ಬೇರೆ ಪತ್ರಿಕೆಗೆ ಬರೆಯುವ ಮತ್ತು ಬೇರೆ ಪತ್ರಿಕೆ ಯವರು ಅದನ್ನು ಪ್ರಕಟಿಸುವ ಹೃದಯ ಶ್ರೀಮಂತಿಕೆಯನ್ನು ತೋರಲಾರರು. ಪತ್ರಿಕೆಯ ಓದುಗರಂತೆ ಪತ್ರಿಕೆಯಿರುತ್ತದೆ. ಪತ್ರಿಕೆ ಓದುಗರನ್ನು ರೂಪಿಸುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಪತ್ರಿಕೆಯನ್ನು ಓದುಗರು ರೂಪಿಸುತ್ತಾರೆ.

ಪತ್ರಿಕೆ ನೀರಸವಾಗಿರಬಹುದು. ಆದರೆ ನೀರಸ ಓದುಗರು ಮಾತ್ರ ಇಲ್ಲವೇ ಇಲ್ಲ. ಜಡ್ಡು ಹಿಡಿದ ಪತ್ರಿಕೆಗೆ ಸಾಣೆ ಹಿಡಿಯುವ
ಕೆಲಸವನ್ನು ಓದುಗರು ಮಾಡುತ್ತಲೇ ಇರುತ್ತಾರೆ. ಪತ್ರಿಕೆ ನೀರಸ ಆದಾಗಲೆಲ್ಲ ಓದುಗರು ಜಾಗೃತರಾಗುತ್ತಾರೆ. ಓದುಗರ ಅಭಿಪ್ರಾಯಗಳನ್ನು ಹತ್ತಿಕ್ಕುವ ಕೆಲಸಕ್ಕೆ ಸಂಪಾದಕನಾದವನು ಮುಂದಾದರೆ, ಆ ಪತ್ರಿಕೆಗೆ ಕಸುವು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ಓದುಗರ ಪತ್ರಕ್ಕೆ ಸೆನ್ಸಾರ್ ಮಾಡಲು ಹೋಗಬಾರದು. ಯಥಾವತ್ತು ಅವರ ಪತ್ರವನ್ನು ಪ್ರಕಟಿಸುವ ರಿಸ್ಕನ್ನು ಸಂಪಾದಕನಾದವನು ಯಾವತ್ತೂ ತೆಗೆದುಕೊಳ್ಳುತ್ತಲೇ ಇರಬೇಕು. ಆಗ ಪತ್ರಕರ್ತರು ಮಾಡದ ಕೆಲಸಕ್ಕೆ ಓದುಗರು ಮುಂದಾಗುತ್ತಾರೆ. ಇದು ಪತ್ರಿಕೆಯ ಗೆಲುವೇ.

ಅಷ್ಟಕ್ಕೂ ಪತ್ರಿಕೆಯೆಂದರೆ ಪರಸ್ಪರ ಸಂವಾದ ಏರ್ಪಡಿಸುವ ವೇದಿಕೆ. ಇಲ್ಲಿ ಸಂವಾದ ನಿರಂತರವಾಗಿ ನಡೆಯುತ್ತಿರುತ್ತದೆ, ನಡೆಯುತ್ತಿರಬೇಕು. ಅದರಲ್ಲೂ ಸಂಪಾದಕ ಮತ್ತು ಓದುಗರ ನಡುವಿನ ಸಂವಾದ ಅಗೋಚರವಾಗಿರಬಹುದು. ಆದರೆ ಅದು ಗುಪ್ತಗಾಮಿನಿ ಯಂತೆ ಜಾಗೃತವಾಗಿರುತ್ತದೆ. ಸಂಪಾದಕನಾದವನು ಓದುಗರ ಅಭಿಪ್ರಾಯ ರೂಪಿಸುತ್ತಾನೋ, ಓದುಗರೇ
ಪತ್ರಿಕೆಯ ಅಭಿಪ್ರಾಯ ರೂಪಿಸುತ್ತಾರೋ ಎಂಬುದು ಚರ್ಚಾಸ್ಪದ. ಆದರೆ ಇಬ್ಬರೂ ಒಂದೇ ಹೋರಾಟ, ಗುರಿ, ಉದ್ದೇಶದ ಸಮಸಮ ಭಾಗೀದಾರರು. ಇಬ್ಬರೂ ಏಕಕಾಲದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು. ಓದುಗರ ಪತ್ರ ಪತ್ರಿಕೆಯ ಶ್ವಾಸಕೋಶ ಇದ್ದಂತೆ. ಅದು ಸದಾ ತಾಜಾ ಗಾಳಿಯನ್ನು ದೇಹಕ್ಕೆ ನೀಡುತ್ತಿರಬೇಕು. ಓದುಗರನ್ನು ತೊಡಗಿಸಿಕೊಳ್ಳದೇ ಪತ್ರಿಕೆಯನ್ನು ಕಟ್ಟುವು ದಾದರೂ ಹೇಗೆ ?